Home Cover Story ಭಾರತದ ಅಭಿವೃದ್ಧಿಗೆ ತಾರತಮ್ಯವೇ ಅಡ್ಡಗಾಲು

ಭಾರತದ ಅಭಿವೃದ್ಧಿಗೆ ತಾರತಮ್ಯವೇ ಅಡ್ಡಗಾಲು

SHARE

ಭಾರತೀಯರು ತಮ್ಮ ಧಾರ್ಮಿಕ ನಂಬಿಕೆಗಳು, ಜಾತಿ, ಲಿಂಗ ತಾರತಮ್ಯಗಳನ್ನು ಬದಿಗೊತ್ತಿ ನಿಂತರೆ ಕಳೆದ 60 ವರ್ಷಗಳಲ್ಲಿ ತಲುಪಿರುವ ಆರ್ಥಿಕ ಸಾಧನೆಗೆ ಎರಡು ಪಟ್ಟನ್ನು 30 ವರ್ಷಗಳ ಒಳಗೆಯೇ ತಲುಪಬಹುದು. ಇದು ಸೈನ್ಸ್‌ ಆಡ್ವಾನ್ಸಸ್ ಎಂಬ ಪತ್ರಿಕೆಯಲ್ಲಿ ಪ್ರಕಟವಾಗಿರುವ ‘Religious Change Preceded Economic Change In The 20th Century’ ಅದ್ಯಯನದ ವರದಿ ಹೇಳುವ ಮಾತು.

ಜಾತ್ಯಾತೀಯತೆಯನ್ನು ಪಾಲಿಸುತ್ತಿರುವ 109 ದೇಶಗಳ ಪಟ್ಟಿಯಲ್ಲಿ ಭಾರತ 66ನೇ ಸ್ಥಾನದಲ್ಲಿದೆ. ಚೀನಾ ಮೊದಲನೇ ಸ್ಥಾನಗವನ್ನು ಗಳಿಸಿದ್ದರೆ, ಪಾಕಿಸ್ತಾನ 99ನೇ ಸ್ಥಾದಲ್ಲಿದೆ. ಬಾಂಗ್ಲಾ ದೇಶ 104ನೇ ದೇಶವಾಗಿದ್ದರೆ, ಘಾನಾ ಕೊನೆ ಸ್ಥಾನವನ್ನು ಪಡೆದುಕೊಂಡಿದೆ. ಭಾರತದ ಆರ್ಥಿಕತೆಯನ್ನು ಗಮನಿಸುವುದಾದರೆ 1958ರಲ್ಲಿದ್ದ ಒಟ್ಟು ದೇಶೀಯ ಉತ್ಪನ್ನ(ಜಿಡಿಪಿ) 2018ರ ವೇಳೆಗೆ 26 ಪಟ್ಟು ಹೆಚ್ಚಾಗಿದೆ.

ಭಾರತೀಯರು ತಮ್ಮ ಧಾರ್ಮಿಕ ದೃಷ್ಟಿಕೋನಗಳಲ್ಲಿ ಸ್ವಲ್ಪ ಸಡಿಲತೆಯನ್ನು ಗಳಿಸಿದರೆ ಭಾರತ ಮತ್ತಷ್ಟು ಅಭಿವೃದ್ಧಿ ಸಾಧಿಸಬಹುದು ಎನ್ನುತ್ತಾರೆ ಸಂಶೋಧಕ ಡಾಮಿಯನ್‌ ರುಕ್‌. ಇಂಗ್ಲೆಂಡ್‌ನ ಬ್ರಿಸ್ಟಾಲ್‌ ವಿಶ್ವವಿದ್ಯಾಲಯದ ಬ್ರಿಸ್ಟಾಲ್‌ ಸೆಂಟರ್‌ ಫಾರ್‌ ಕಾಂಪ್ಲೆಕ್ಸಿಟಿ ಸೈನ್ಸಸ್‌ನಲ್ಲಿ ಪೋಸ್ಟ್‌ ಡಾಕ್ಟರಾಲ್‌ ಸಂಶೋಧಕರಾಗಿರುವ ಡಾಮಿಯನ್‌ ರುಕ್‌, ತಮ್ಮ ತಂಡದೊಂದಿಗೆ ಈ ವರದಿಯನ್ನು ಸಿದ್ಧಪಡಿಸಿದ್ದಾರೆ.

ಈ ವರದಿಗೆ ಪೂರಕವಾಗಿ, ಭಾರತದ ಆರ್ಥಿಕ ಅಭಿವೃದ್ಧಿಗೆ ತಡೆ ಒಡ್ಡಿರುವ ಧಾರ್ಮಿಕ ನಂಬಿಕೆಗಳ್ಯಾವುವು ಎನ್ನುವುದರ ಕುರಿತು ‘ಇಂಡಿಯಾ ಸ್ಪೆಂಡ್‌’ ಸುದ್ದಿ ಸಂಸ್ಥೆ ಅಧ್ಯಯನ ನಡೆಸಿದೆ. ಆರ್ಥಿಕ ಹಿಂದುಳಿಯುವಿಕೆಗೆ ಭಾರತೀಯ ಸಮಾಜದ ದುರ್ಬಲ ವರ್ಗಗಳಾಗಿರುವ ಮಹಿಳೆಯರು ಮತ್ತು ಅಂಚಿನಲ್ಲಿರುವ ಜಾತಿಗಳನ್ನು ಕಡೆಗಣಿಸಿರುವುದು ಮುಖ್ಯ ಕಾರಣ ಎನ್ನಲಾಗಿದೆ.

ಈ ವರದಿ ಹೇಳುವಂತೆ ಈ ಎರಡೂ ವರ್ಗಗಳೂ ಕೂಡ ಭಾರತದ ಆರ್ಥಿಕತೆಯ ಮೇಲೆ ಕನಿಷ್ಟವಾದ ಪರಿಣಾಮ ಬೀರಿವೆ. ಜಾತಿಯನ್ನು ಆಧರಿಸಿ ನೋಡುವುದಾದರೆ ಭಾರತದಲ್ಲಿನ ಪರಿಶಿಷ್ಟ ಜಾತಿಯ ವ್ಯಕ್ತಿಗಳು ಕಡಿಮೆ ಆದಾಯ ಪಡೆಯುವ ಗುಂಪಿನಲ್ಲಿ ಕೊನೆಯಲ್ಲಿ ಉಳಿದುಕೊಳ್ಳುತ್ತಾರೆ. 2015-16ನೇ ಸಾಲಿನ ನ್ಯಾಷನಲ್‌ ಫ್ಯಾಮಿಲಿ ಹೆಲ್ತ್ ಸರ್ವೇ ನೀಡಿದ ಅಂಕಿ ಅಂಶಗಳ ಪ್ರಕಾರ ದೇಶದ ಶೇ.26.6ರಷ್ಟು ಮಂದಿ ಕಡಿಮೆ ಆದಾಯ ಹೊಂದಿದ್ದಾರೆ. ಇದರಲ್ಲಿ ಶೇ.9.7ರಷ್ಟು ಜನ ಪರಿಶಿಷ್ಟ ಜಾತಿಯ ವ್ಯಕ್ತಿಗಳು. ಅಂದರೆ ಕಡಿದೆ ಆದಾಯ ಪಡೆಯುವ ವರ್ಗದಲ್ಲಿ ಮೂರನೇ ಒಂದು ಭಾಗ ಪರಿಶಿಷ್ಟ ಜಾತಿಯ ಜನರೇ ಇದ್ದಾರೆ.

ಸಾಮಾಜಿಕ ಮತ್ತು ಸಾಂಸ್ಕೃತಿಕ ಕಟ್ಟುಪಾಡುಗಳು ಭಾರತೀಯ ಮಹಿಳೆಯರನ್ನು ಮನೆಯಿಂದ ಹೊರಗೆ ತೆರಳಿ ದುಡಿಯದಂತೆ ಮಾಡಿವೆ. ಅನಿವಾರ್ಯ ಸಂದರ್ಭಗಳು ಬಂದಾಗ ಮಾತ್ರ ಮಹಿಳೆಯರು ಮನೆಯಿಂದ ಹೊರಗೆ ದುಡಿಯುತ್ತಾರೆ. ಭಾರತದ ಮಹಿಳೆಯರಲ್ಲಿ ಕೇವಲ ಶೇ.27ರಷ್ಟು ಜನ ಮಾತ್ರ ಉದ್ಯೋಗಿಗಳು. ದಕ್ಷಿಣ ಏಷ್ಯಾಕ್ಕೆ ಹೋಲಿಸಿದರೆ ಅತಿ ಹೆಚ್ಚು ಮಹಿಳೆಯರು ಮನೆಯ ಹೊರಗಿನ ದುಡಿಮೆಗೆ ಹೋಗದಿರುವುದು ಭಾರತದಲ್ಲಿಯೇ. 2017ರ ಏಪ್ರಿಲ್‌ ಅವಧಿಯಲ್ಲಿ ದೊರೆತ ವಿಶ್ವ ಬ್ಯಾಂಕ್‌ ವರದಿಯ ಪ್ರಕಾರ 2004-05ರಿಂದ 2011-12ರ ಅವಧಿಯಲ್ಲಿ ಭಾರತದ 1.96 ಕೋಟಿ ಮಹಿಳೆಯರು ತಮ್ಮ ವೃತ್ತಿಯನ್ನು ತೊರೆದಿದ್ದಾರೆ.

ಭಾರತದ ಈಗಿನ ವಾರ್ಷಿಕ ತಲಾ ಆದಾಯ 1,975 ಡಾಲರ್‌ (1.38 ಲಕ್ಷ). ಅಧ್ಯಯನ ತಂಡ ಹೇಳುವಂತೆ ಭಾರತದ ಎಲ್ಲರೂ ಕೂಡ ಸಮಾನ ಅವಕಾಶಗಳನ್ನು ಪಡೆದು ದುಡಿಯುವಂತಾಗಿದ್ದರೆ ಭಾರತದ ವಾರ್ಷಿಕ ತಲಾ ಆದಾಯ ಇಂದು 6,500 ಡಾಲರ್‌ (4.57 ಲಕ್ಷ) ದಾಟಿರುತ್ತಿತ್ತು. “ಆದರೆ ಭಾರತದ ಆರ್ಥಿಕತೆಯನ್ನು ಕೆಲವು ಅಂಶಗಳು ತಡೆಯುತ್ತಿವೆ. ಅವುಗಳಲ್ಲಿ ಧಾರ್ಮಿಕತೆ ಹಾಗೂ ಜಾತಿ ಪ್ರಮುಖವಾದವು,” ಎನ್ನುತ್ತಾರೆ ಡಾಮಿಯನ್‌ ರುಕ್‌.

ಜಿಡಿಪಿಯನ್ನು ಮುಖ್ಯವಾಗಿ ಪರಿಗಣಿಸಿ ನೋಡುವುದಾದರೆ ಎಲ್ಲಾ ಸಾಮಾಜಿಕ ಕಟ್ಟುಪಾಡುಗಳ ನಡುವೆಯೂ ಕೂಡ ಭಾರತದ ಆರ್ಥಿಕ ಅಭಿವೃದ್ಧಿ ಏರುಗತಿಯಲ್ಲೇ ಸಾಗುತ್ತಿದೆ. ಕಳೆದ 60 ವರ್ಷಗಳಲ್ಲಿ ಭಾರತದ ತಲಾ ಆದಾಯ ಶೇ.2,682ರಷ್ಟು ಹೆಚ್ಚಳ ಕಂಡಿದೆ. 1958ರ ಅವಧಿಯಲ್ಲಿ ಭಾರತದ ತಲಾ ಆದಾಯ 4,982 ರೂಪಾಗಳಿಷ್ಟಿತ್ತು (71 ಡಾಲರ್). ಈಗ 2018ಕ್ಕೆ 1,38,595 ರೂಪಾಯಿಗಳಿಗೆ (1975 ಡಾಲರ್‌)ಗಳಿಗೆ ಏರಿಕೆ ಕಂಡಿದೆ.

ಆದರೆ ಪಾಶ್ಚಿಮಾತ್ಯ ದೇಶಗಳಷ್ಟು ಜಾತ್ಯಾತೀತತೆಯನ್ನು ಅನುಸರಿಸಿದರೆ ಇನ್ನು ಹತ್ತು ವರ್ಷಗಳಲ್ಲಿ ಭಾರತದ ಜಿಡಿಪಿ ಈಗಿನದ್ದಕ್ಕಿಂತ 1,000 ಡಾಲರ್‌ನಷ್ಟು ಹೆಚ್ಚಾಗುತ್ತದೆ ಎಂಬ ಅಭಿಪ್ರಾಯವನ್ನು ಅಧ್ಯಯನಕಾರರು ವ್ಯಕ್ತಪಡಿಸುತ್ತಾರೆ. ಅಧ್ಯಯನಕಾರರ ಪ್ರಕಾರ ಭಾರತ ತಾರತಮ್ಯಗಳನ್ನು ತೊಡೆದಿದ್ದೇ ಆದಲ್ಲಿ 2030ರ ವೇಳೆಗೆ ಭಾರತದ ತಲಾದಾಯದಲ್ಲಿ 70,175 ರೂಪಾಯಿಗಳಷ್ಟು ಏರಿಕೆ ಕಾಣಲಿದೆ. ಇಂದಿನಿಂದ ಮುಂದಿನ 20 ವರ್ಷಗಳಲ್ಲಿ 1,96,490 ರೂಪಾಯಿಗಳಷ್ಟು ಏರಿಕೆಯನ್ನು ಕಂಡು, 30 ವರ್ಷಗಳ ನಂತರ, ಅಂದರೆ 2050ರಲ್ಲಿ ಭಾರತದ ತಲಾದಾಯ 3,50,875 ರೂಪಾಯಿಗಳು ಹೆಚ್ಚಾಗುತ್ತದೆ.

“ಭಾರತದಲ್ಲಿ ತಾರತಮ್ಯಗಳು ಇಲ್ಲವಾದರೆ 2050ರಲ್ಲಿ ಭಾರತದ ತಲಾದಾಯ 4.90 ಲಕ್ಷ ರೂಪಾಯಿಗಳನ್ನು ತಲುಪುತ್ತದೆ. ಆರ್ಥಿಕ ಅಭಿವೃದ್ಧಿಯಲ್ಲಿ ಚೀನಾವನ್ನು ಅನುಕರಿಸಲು ಪ್ರಯತ್ನಿಸುತ್ತಿರುವ ಭಾರತ, ಜಾತ್ಯಾತೀತತೆಯ ವಿಷಯದಲ್ಲಿಯೂ ಕೂಡ ಮೊದಲ ಸ್ಥಾನದಲ್ಲಿರುವ ಚೀನಾವನ್ನು ಹಿಂಬಾಲಿಸಬೇಕಿದೆ,” ಎಂದು ಅಧ್ಯಯನಕಾರರು ಅಭಿಪ್ರಾಯ ಪಡುತ್ತಾರೆ.

ಭಾರತದಲ್ಲಿ ಧರ್ಮ ಮತ್ತು ಆರ್ಥಿಕತೆ:

ಭಾರತದ ಸಮಾಜ ಮತ್ತು ಆರ್ಥಿಕತೆಯಲ್ಲಿ ಧರ್ಮ ಇಂದಿಗೂ ಕೂಡ ಪ್ರಮುಖ ಪಾತ್ರವನ್ನೇ ವಹಿಸಿದೆ. ವರ್ಡ್ಲ್‌ ವ್ಯಾಲ್ಯೂಸ್‌ ಸರ್ವೇಯ ವರದಿಯ ಪ್ರಕಾರ ಶೇ.90ರಷ್ಟು ಭಾರತೀಯರು ಧರ್ಮ ಎನ್ನುವುದು ‘ಅತಿ ಮುಖ್ಯವಾದ’ ಮತ್ತು ‘ಮುಖ್ಯವಾದ’ ಅಂಶ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಸಮೀಕ್ಷೆಯ ಪ್ರಕಾರ ಧಾರ್ಮಿಕತೆಯತ್ತ ಒಲವು ಹೆಚ್ಚಾಗುತ್ತಿರುವುದು ಭಾರತ ಮತ್ತು ಕಿರ್ಗಿಸ್ತಾನ್ ದೇಶಗಳಲ್ಲಿ ಮಾತ್ರ. ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ಈ ದೇಶಗಳಲ್ಲಿನ ಶೇ.10ಕ್ಕೂ ಹೆಚ್ಚು ಜನ ಧರ್ಮಕ್ಕೆ ಅತಿಯಾದ ಪಾಶಸ್ತ್ಯ ನೀಡುತ್ತಿದ್ದಾರೆ. ಈ ಮುಂಚೆ ಭಾರತದಲ್ಲಿ ಶೇ.79.2ರಷ್ಟು ಮಂದಿ ಧರ್ಮವನ್ನು ತಮ್ಮ ಜೀವನದ ಅವಿಭಾಜ್ಯ ಅಂಗವೆಂದು ಪರಿಗಣಿಸಿದ್ದರು. 2014ರ ವೇಳೆಗೆ ಈ ಪ್ರಮಾಣ ಶೇ.91.3ಕ್ಕೆ ಏರಿಕೆಯಾಗಿದೆ.

ಧಾರ್ಮಿಕತೆ ಎಂದರೆ ಧರ್ಮ ಧರ್ಮಗಳ ನಡುವಿನ ಪ್ರಶ್ನೆಯಷ್ಟೇ ಅಲ್ಲ. ಧರ್ಮದೊಳಗಿನ ಜಾತಿ ತಾರತಮ್ಯ ಮತ್ತು ಮಹಿಳೆಯರ ಸ್ವಾತಂತ್ರ್ಯಗಳೂ ಕೂಡ ಒಳಗೊಂಡಿರುತ್ತದೆ. ಈ ಅಂಶಗಳೂ ಕೂಡ ಭಾರತ ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿ ಸಾಧಿಸದಿರಲು ಪ್ರಮುಖ ಕಾರಣಗಳಾಗಿ ನಿಲ್ಲುತ್ತವೆ.

ಭಾರತೀಯ ಸಮಾಜದ ಅರ್ಧ ಭಾಗವಾಗಿರುವ ಮಹಿಳೆಯರಲ್ಲಿ ಬಹುಪಾಲು ಜನ ಪುರುಷರಿಗಿಂತ ಕಡಿಮೆ ಕೌಶಲಗಳನ್ನು ಹೊಂದಿದ್ದು, ಕೆಲವು ವಲಯಗಳಲ್ಲಷ್ಟೇ ಹೆಚ್ಚಾಗಿ ದುಡಿಯುತ್ತಿದ್ದಾರೆ. ಗಳಿಕೆಯ ವಿಚಾರದಲ್ಲಿಯೂ ಕೂಡ ಪುರುಷರಿಗಿಂತ ಹಿಂದೆ ಉಳಿದಿದ್ದಾರೆ. ಪುರುಷ ಮತ್ತು ಮಹಿಳೆಯರಿಗೆ ನೀಡುವ ವೇತನಕ್ಕೆ ಸಂಬಂಧಿಸಿದಂತೆ ಭಾರತವು ದಕ್ಷಿಣ ಆಫ್ರಿಕಾ, ಬ್ರೆಜಿಲ್‌ ಮತ್ತು ಚಿಲಿ ದೇಶಗಳಿಗಿಂತಲೂ ಕೂಡ ಹಿಂದುಳಿದಿದೆ.

ಜಾತಿ ಎನ್ನುವುದು ಭಾರತದ ಹಿಂದುಳಿದಿರುವಿಕೆಯ ಮತ್ತೊಂದು ಕಾರಣ. ಜಾತಿಯ ಕಾರಣದಿಂದ ಭಾರತದ ಹಲವರು ಅವಕಾಶ ವಂಚಿತರಾಗಿದ್ದಾರೆ. ಇಂದು ಹಲವಾರು ಸರಕಾರಿ ಸವಲತ್ತುಗಳು ಸಿಕ್ಕರೂ ಕೂಡ ವ್ಯಾಪಕ ಪ್ರಮಾಣದ ಬಳಕೆ ಸಾಧ್ಯವಾಗಿಲ್ಲ. ಜತೆಗೆ ಸರಕಾರ ನೀಡುತ್ತಿರುವ ಸವಲತ್ತುಗಳು ಪೂರ್ಣ ಪ್ರಮಾಣದಲ್ಲಿ ಕಟ್ಟಕಡೆಯ ವ್ಯಕ್ತಿಯನ್ನು ತಲುಪಲು ಇದುವರೆಗೂ ಕೂಡ ಸಾಧ್ಯವಾಗಿಲ್ಲ.

ಭಾರತಕ್ಕೆ ಹೆಚ್ಚಿನ ಆರ್ಥಿಕ ಅಭಿವೃದ್ಧಿ ಸಾಧಿಸುವ ಶಕ್ತಿಯಿದೆ. ಅದರೆ ಧಾರ್ಮಿಕ ಕಟ್ಟುಪಾಡುಗಳಿಗೆ ಸಿಲುಕಿ ಸಮಾಜದ ಪ್ರಮುಖ ವರ್ಗಗಳೆರಡು ಸುಮ್ಮನೆ ಕುಳಿತುಕೊಳ್ಳುವಂತಾಗಿದೆ. ಈ ಕಟ್ಟುಪಾಡುಗಳು ಸಡಿಲಗೊಂಡು, ಶ್ರೇಷ್ಠ-ಕನಿಷ್ಠ ಎಂಬ ಕೀಳು ಮನೋಭಾವ ಭಾರತೀಯರಿಂದ ದೂರವಾಗಬೇಕಿದೆ. ಹಾಗಾದರೆ ಮಾತ್ರ ಭಾರತ ಆರ್ಥಿಕವಾಗಿ ಮತ್ತಷ್ಟು ಸದೃಢಗೊಳ್ಳುವುದರ ಜತೆಗೆ, ಶತಮಾನಗಳ ಕಾಲದಿಂದಲೂ ತುಳಿತಕ್ಕೆ ಒಳಪಟ್ಟ ವರ್ಗಗಳು ತಮ್ಮ ಬದುಕಲ್ಲೂ ಸುಸ್ಥಿರತೆಯನ್ನು ಸಾಧಿಸಬಹುದು.

ಮಾಹಿತಿ ಮೂಲ: ಇಂಡಿಯಾ ಸ್ಪೆಂಡ್‌