Home Feature Story ‘ಪ್ಲಾಸ್ಟಿಕ್ ಬ್ಯಾನ್’: ಹುಲಿ ಹೊಡೆಯುವ ಬದಲು, ಇಲಿ ಹಿಡಿಯುತ್ತಿರುವ ಬಿಬಿಎಂಪಿ!

‘ಪ್ಲಾಸ್ಟಿಕ್ ಬ್ಯಾನ್’: ಹುಲಿ ಹೊಡೆಯುವ ಬದಲು, ಇಲಿ ಹಿಡಿಯುತ್ತಿರುವ ಬಿಬಿಎಂಪಿ!

SHARE

ಕರ್ನಾಟಕದಲ್ಲಿ ಪ್ಲಾಸ್ಟಿಕ್‌ ವಸ್ತುಗಳನ್ನು ನಿಷೇಧಿಸಿ 2 ವರ್ಷಗಳೇ ಕಳೆಯಿತು. ಮೊದಲು ಪ್ಲಾಸ್ಟಿಕ್‌ ವಿರುದ್ಧ ಘರ್ಜಿಸಿದ ಬಿಬಿಎಂಪಿ ನಂತರದ ದಿನಗಳಲ್ಲಿ ತಣ್ಣಗಾಗಿತ್ತು. ಇತ್ತಿಚಿಗಷ್ಟೇ ಮಹಾರಾಷ್ಟ್ರ ಪ್ಲಾಸ್ಟಿಕ್‌ಅನ್ನು ಸಂಪೂರ್ಣವಾಗಿ ನಿಷೇಧಿಸಿದ ನಂತರ ಮತ್ತೆ ಜಾಗೃತವಾಗಿದೆ. ಪ್ಲಾಸ್ಟಿಕ್‌ ಕ್ಯಾರಿ ಬ್ಯಾಗ್‌ ಹಿಡಿದವರನ್ನೆಲ್ಲಾ ಅಲ್ಲಿಯೇ ನಿಲ್ಲಿಸಿ ಬಿಬಿಎಂಪಿ ಅರೋಗ್ಯ ಅಧಿಕಾರಿಗಳು ದಂಡ ವಿಧಿಸುತ್ತಿದ್ದಾರೆ.

ಬುಧವಾರ ಬೆಳಗ್ಗೆ ಜಯನಗರದ ಒಳ ರಸ್ತೆಯಲ್ಲಿದ್ದ ತರಕಾರಿ, ಹಾಲು, ಚಿಕ್ಕ ಪುಟ್ಟ ದಿನಸಿ ಪದಾರ್ಥಗಳನ್ನು ಮಾರುವ ಚಿಲ್ಲರೆ ಅಂಗಡಿಯವನೊಬ್ಬ ನಡು ವಯಸ್ಸು ಮೀರಿದ ಹೆಂಗಸಿನ ಜತೆ ಜಟಾಪಟಿಗೆ ಬಿದ್ದಿದ್ದ. ತಾನು ಕೊಂಡ ವಸ್ತುಗಳನ್ನು ಮನೆಗೊಯ್ಯಲು ಆಕೆಗೆ ಪ್ಲಾಸ್ಟಿಕ್‌ ಕ್ಯಾರಿ ಬ್ಯಾಗ್‌ ಬೇಕಾಗಿತ್ತು. ಅಂಗಡಿಯವನು ಅದೆಷ್ಟು ಬಾರಿ ಹೇಳಿದರೂ ಕೂಡ ಆಕೆ ಕೈಚೀಲ ತರುವ ಅಭ್ಯಾಸವನ್ನೇ ಮಾಡಿಕೊಂಡಿರಲಿಲ್ಲ. ಮನೆಯ ಕಸವನ್ನು ಹೊರಗೆಸೆಯಲು ಪ್ಲಾಸ್ಟಿಕ್‌ ಕವರ್‌ಗಳೇ ಉತ್ತಮ ಎನಿಸಿದ್ದರಿಂದ ಹೇಗಾದರೂ ಮಾಡಿ ಕವರ್‌ ಪಡದೇ ತೀರಬೇಕು ಎಂದು ಹಠಕ್ಕೆ ಬಿದ್ದಿದ್ದಳು. ‘ನಿನ್ನದಲ್ಲದಿದದ್ದರೆ ಮತ್ತೊಂದು ಅಂಗಡಿ’ ಎಂಬ ವಾದ ಅವಳದಾಗಿತ್ತು.

ಸಾಂದರ್ಭಿಕ ಚಿತ್ರ.

ಆದರೆ ಅಂಗಡಿಯವನ ಕತೆಯೇ ಬೇರೆ. ಪ್ಲಾಸ್ಟಿಕ್‌ ಕ್ಯಾರಿ ಬ್ಯಾಗ್‌ಗಳನ್ನು ತಂದು ಉಚಿತವಾಗಿ ನೀಡಬೇಕಲ್ಲದೇ ದಂಡವನ್ನೂ ಕಟ್ಟಬೇಕು ಎಂಬ ಚಿಂತೆ ಅವನದ್ದು. ಒಂದೆಡೆ ದಂಡ ವಿಧಿಸುವ ಪೊಲೀಸರು, ಮತ್ತೊಂದೆಡೆ ಕ್ಯಾರಿ ಬ್ಯಾಗ್‌ ಬೇಕೇಬೇಕೆಂದು ಹಠ ಹಿಡಿಯುವ ಗ್ರಾಹಕರು ಇಬ್ಬರ ಮಧ್ಯೆ ತೊಳಲಾಟದಲ್ಲಿದ್ದ ಅಂಗಡಿಯ ಮಾಲೀಕ ಬೆಳಗ್ಗೆ ತಾನೇ ಬನಶಂಕರಿ ಬಳಿ ಅಂಗಡಿಗೆ ತರಕಾರಿಗಳನ್ನು ಕೊಂಡು ಪ್ಲಾಸ್ಟಿಕ್‌ ಚೀಲದಲ್ಲಿ ತರುತ್ತಿರುವ ವೇಳೆ, ಅಧಿಕಾರಿಗಳಿಗೆ ಸಿಕ್ಕಿಬಿದ್ದು 500 ರೂಪಾಯಿಗಳ ದಂಡವನ್ನೂ ಕೂಡ ತೆತ್ತಿದ್ದ. ಈ ಸನ್ನಿವೇಶ ಆತನನ್ನು ಮಹಿಳೆಯ ಮೇಲೆ ಮತ್ತಷ್ಟು ಕೆರಳುವಂತೆ ಮಾಡಿತ್ತು.

“ಈ ಅಧಿಕಾರಿಗಳು ಪ್ಲಾಸ್ಟಿಕ್‌ ನಿಷೇಧಿಸುವುದಾದರೆ ಯಾರ ಕೈಗೂ ಕೂಡ ಸಿಗದಂತೆ ಮಾಡಬೇಕು. ಇಲ್ಲವಾದರೆ ದಂಡ ವಿಧಿಸಬಾರದು. ಪ್ಲಾಸ್ಟಿಕ್‌ ಕೂಡ ಸಿಗರೇಟಿನಂತೆಯೇ ಆಗಿದೆ. ಅಂಗಡಿಗಳಲ್ಲಿ ಸಿಗರೇಟ್‌ ಕೊಂಡುಕೊಳ್ಳಬಹುದು, ಆದರೆ ಸೇದುವಂತಿಲ್ಲ. ಅದೇ ರೀತಿ ಪ್ಲಾಸ್ಟಿಕ್‌ ಕವರ್‌ಗಳು ದೊರೆಯುತ್ತವೆ, ಆದರೆ ಬಳಸುವಂತಿಲ್ಲ. ಪ್ಲಾಸ್ಟಿಕ್‌ ಬ್ಯಾಗ್‌ ಕೊಡದಿದ್ದರೆ ಗ್ರಾಹಕರು ಕೇಳುವುದಿಲ್ಲ. ಪ್ಲಾಸ್ಟಿಕ್‌ ಬ್ಯಾಗ್‌ ಸಲುವಾಗಿಯೇ ಎಷ್ಟೋ ಜನ ಗ್ರಾಹಕರನ್ನು ಕಳೆದುಕೊಂಡಿದ್ದೇನೆ,” ಎಂಬ ಅಳಲು ಆತನದ್ದು.

ಪ್ಲಾಸ್ಟಿಕ್‌ ಕ್ಯಾರಿ ಬ್ಯಾಗ್ ಬದಲಿಗೆ ಬಟ್ಟೆಯ ಕೈಚೀಲ ಬಳಸಬಹುದಲ್ಲವೇ, ಅದಕ್ಕೂ ಕೂಡ ಹಣ ಪಡೆದರಾಯಿತು ಎಂಬ ಸಲಹೆಗೆ, “ಈಗಲೇ ಬೆಲೆಗಳನ್ನು ಕೇಳಿ ಜನ ಅಗಂಡಿಗೆ ಬರುವುದನ್ನೇ ಕಡಿಮೆ ಮಾಡಿದ್ದಾರೆ. ಇನ್ನು ಕೈಚೀಲಕ್ಕೂ ದುಡ್ಡು ಕೇಳಿದರೆ ಬರುವುದನ್ನೇ ನಿಲ್ಲಿಸುತ್ತಾರೆ. ಈಗ ಸಧ್ಯಕ್ಕೆ ಮಾಡಬೇಕಿರುವುದು ಒಂದೇ, ಯಾವ ಅಂಗಡಿಗಳಲ್ಲೂ ಪ್ಲಾಸ್ಟಿಕ್‌ ಕೈಚೀಲ ಸಿಗದಂತೆ ಮಾಡುವುದು. ಈ ಮಾತುಗಳನ್ನು ವರ್ಷಗಳಿಂದ ಕೇಳುತ್ತಿದ್ದೇನೆ. ಅಧಿಕಾರಿಗಳಿಗೆ ದಂಡ ವಿಧಿಸುವಲ್ಲಿ ಇರುವಷ್ಟು ಕೋಪ, ರೋಷಗಳು ಪ್ಲಾಸ್ಟಿಕ್‌ ಕ್ಯಾರಿ ಬ್ಯಾಗ್‌ಗಳನ್ನು ಸಂಪೂರ್ಣವಾಗಿ ನಿಲ್ಲಿಸುವುದರಲ್ಲಿಲ್ಲ,” ಎಂಬ ಸಮಜಾಯಿಷಿ ಅಂಗಡಿಯವನಿಂದ ದೊರೆಯಿತು.

ಸಾಂದರ್ಭಿಕ ಚಿತ್ರ.

ಅಂಗಡಿಯವನ ಮಾತಿನಲ್ಲಿ ಅವನಿಗೆ ಆಗುತ್ತಿರುವ ನಷ್ಟದ ಬೇಸರದ ಜತೆಗೆ ಸತ್ಯಾಂಶವೂ ಇದೆ. ಪ್ಲಾಸ್ಟಿಕ್‌ ಬ್ಯಾನ್‌ ಎನ್ನುವುದು ನಾಮಕಾವಸ್ಥೆಯಷ್ಟೇ ಎನ್ನುವುದು ಆತನ ವಾದ. ಅದು ನಿಜವೂ ಹೌದು. ಕರ್ನಾಟಕದಲ್ಲಿ ನಿತ್ಯ ಬಳಸಿ ಬಿಸಾಡುವ ಹಲವು ರೀತಿಯ ಪ್ಲಾಸ್ಟಿಕ್‌ ಉತ್ಪನ್ನಗಳನ್ನು ಸರಕಾರ 2 ವರ್ಷಗಳ ಹಿಂದೆಯೇ ನಿಷೇಧಿಸಿದೆ. ಆದರೆ ಇಂದಿಗೂ ಕೂಡ ನಿಷೇಧಿತ ಪ್ಲಾಸ್ಟಿಕ್‌ ಉತ್ಪನ್ನಗಳು ನಿರಾಯಾಸವಾಗಿ ಜನರ ಕೈಸೇರುತ್ತಿವೆ.

ಕರ್ನಾಟಕ ಸರಕಾರ 2015ರಲ್ಲೇ ಪ್ಲಾಸ್ಟಿಕ್‌ ಉತ್ಪನ್ನಗಳನ್ನು ನೀಷೇಧಿಸುವ ಕುರಿತು ಚರ್ಚೆ ನಡೆಸಿತ್ತು. 2016ರ ಮಾರ್ಚ್‌ 11ರಿಂದ ಅಧಿಸೂಚನೆ ಹೊರಡಿಸಿ ಕೆಲವು ಪ್ಲಾಸ್ಟಿಕ್‌ ಉತ್ಪನ್ನಗಳ ನಿಷೇಧವನ್ನು ಕೂಡ ಮಾಡಿತ್ತು. ಪ್ಲಾಸ್ಟಿಕ್‌ನಿಂದ ತಯಾರಿಸಲ್ಪಟ್ಟ ಟೀ ಲೋಟಗಳು, ಊಟದ ತಟ್ಟೆಗಳು, ಊಟದ ಟೇಬಲ್‌ಗಳ ಮೇಲೆ ಹಾಸುವ ಹಾಳೆಗಳು, ತೋರಣ, ಫ್ಲೆಕ್ಸ್, ಬ್ಯಾನರ್‌, ಬಾವುಟ, ಭಿತ್ತಿಪತ್ರಗಳು ಸೇರಿದಂತೆ ಎಲ್ಲಾ ರೀತಿಯ ಪ್ಲಾಸ್ಟಿಕ್‌ ಕ್ಯಾರಿ ಬ್ಯಾಗ್‌ಗಳ ಮೇಲೆ ನಿ‍ಷೇಧ ಹೇರಲಾಗಿತ್ತು. ನಿಷೇಧ ಹೇರಿದ ಮೊದಲ ದಿನಗಳಲ್ಲಿ ಪ್ಲಾಸ್ಟಿಕ್‌ ಮಾರಾಟ ತಹಬದಿಗೆ ಬಂದಿತ್ತು. ಈ ಸಂಧರ್ಭದಲ್ಲಿ ಬೆಂಗಳೂರಿನಲ್ಲಿ ಈ ಪ್ಲಾಸ್ಟಿಕ್‌ ಉತ್ಪನ್ನಗಳನ್ನೇ ನಂಬಿಕೊಂಡಿದ್ದ 750ಕ್ಕೂ ಹೆಚ್ಚು ಸಂಘಟಿತ ಮತ್ತು ಅಸಂಘಟಿತ ಕಾರ್ಖನೆಗಳು ಮುಚ್ಚಲ್ಪಟ್ಟವು. ಈ ಕಾರ್ಖನೆಗಳಲ್ಲಿ ದುಡಿಯುತ್ತಿದ್ದ 75,000ಕ್ಕೂ ಹೆಚ್ಚು ಮಂದಿ ನಿರುದ್ಯೋಗಿಗಳಾದರು.

ಕರ್ನಾಟಕದಲ್ಲೆನೋ ಚಿಕ್ಕ ಪುಟ್ಟ ಪ್ಲಾಸ್ಟಿಕ್‌ ವಸ್ತುಗಳ ಉತ್ಪಾದನೆ ನಿಂತುಹೋಯಿತು. ಆದರೆ ಜನ ಮಾತ್ರ ಈ ವಸ್ತುಗಳಿಗಾಗಿ ನೆರೆ ರಾಜ್ಯಗಳ ಮೊರೆಹೋದರು. ಬೆಂಗಳೂರಿಗೆ ಅತೀ ಸಮೀಪದಲ್ಲಿರುವ ತಮಿಳನಾಡು, ಮತ್ತು ಆಂಧ್ರ ಪ್ರದೇಶದಿಂದ ಕೆಲವು ನಿಷೇಧಿತ ಪ್ಲಾಸ್ಟಿಕ್‌ ಉತ್ಪನ್ನಗಳು ಹರಿದುಬರತೊಡಗಿದವು. ಇಂದಿಗೂ ಕೂಡ ರಾಜ್ಯಕ್ಕೆ ಅಗತ್ಯವಿರುವ ನಿಷೇಧಿತ ಪ್ಲಾಸ್ಟಿಕ್‌ ಉತ್ಪನ್ನಗಳು ಈ ರಾಜ್ಯಗಳಿಂದಲೇ ಬರುತ್ತಿವೆ.

ರಾಜಧಾನಿ ಬೆಂಗಳೂರಿನಿಂದ ಸುಮಾರು 35 ಕಿಲೋ ಮೀಟರ್‌ ದೂರದಲ್ಲಿರುವ, ತಮಿಳುನಾಡಿಗೆ ಸೇರುವ ಹೊಸೂರು ನಗರದಲ್ಲಿ ಇಂತಹ ಪ್ಲಾಸ್ಟಿಕ್‌ ಉತ್ಪನ್ನಗಳನ್ನು ಉತ್ಪಾದಿಸುವ ನೂರಕ್ಕೂ ಹೆಚ್ಚು ಘಟಕಗಳಿವೆ, ಅಲ್ಲಿಂದಲೇ ಬೆಂಗಳೂರಿಗೆ ಪ್ಲಾಸ್ಟಿಕ್‌ ಉತ್ಪನ್ನಗಳು ಹರಿದು ಬರುತ್ತವೆ ಎಂದು ಇದೇ ವರ್ಷದ ಜೂನ್‌ 5ರಂದು ‘ಡೆಕ್ಕನ್‌ ಹೆರಾಲ್ಡ್‌’ ವರದಿ ಮಾಡಿತ್ತು.

ಮತ್ತೆ ಪ್ಲಾಸ್ಟಿಕ್‌ ನಿಷೇಧವನ್ನು ನೆನಪಿಸಿಕೊಂಡ ಬಿಬಿಎಂಪಿ:

ಕೆಲವು ದಿನಗಳ ಹಿಂದೆ ಮಹಾರಾಷ್ಟ್ರ ಸರಕಾರ ಪ್ಲಾಸ್ಟಿಕ್‌ ವಸ್ತುಗಳನ್ನು ಸಂಪೂರ್ಣವಾಗಿ ನಿಷೇಧಿಸಿದ ನಂತರ ಬಿಬಿಎಂಪಿಗೆ ಕರ್ನಾಟಕದಲ್ಲೂ ಪ್ಲಾಸ್ಟಿಕ್‌ ನಿಷೇಧವಾಗಿರುವುದು ನೆನಪಿಗೆ ಬಂದಿದೆ. ಇದ್ದಕ್ಕಿಂದತೆಯೇ ಕಾರ್ಯ ಪ್ರವೃತ್ತರಾಗಿರುವ ಅಧಿಕಾರಿಗಳು ಸಿಕ್ಕಲ್ಲಿ ದಂಡ ವಿಧಿಸುವ ಕ್ರಮಕ್ಕೆ ಮುಂದಾಗಿದ್ದಾರೆ. ಇದಕ್ಕಾಗಿ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಳ್ಳುತ್ತಿದ್ದಾರೆ.

‘ದಿ ಬೆಟರ್ ಇಂಡಿಯಾ’ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿರುವ ಬಿಬಿಎಂಪಿ ಆಯುಕ್ತ ಎನ್‌. ಮಂಜುನಾಥ್‌ ಪ್ರಸಾದ್‌ ದಂಡ ವಿಧಿಸುವ ಕ್ರಮವನ್ನು ವಿವರಿಸಿದ್ದಾರೆ.

“ಬಿಬಿಎಂಪಿ ಅಧಿಕಾರಿಗಳು ಆಧುನಿಕ ಯಂತ್ರದ ಮೂಲ ಪ್ಲಾಸ್ಟಿಕ್‌ ಕ್ಯಾರಿ ಬ್ಯಾಗ್‌ ಮಾರಾಟ ಮಾಡುವ ಅಂಗಡಿಗಳ ಫೋಟೊ ತೆಗೆದುಕೊಳ್ಳುತ್ತಾರೆ. ಬಿಎಂಟಿಸಿ ಬಸ್‌ಗಳಲ್ಲಿ ಟಿಕೆಟ್‌ ನೀಡುವ ಯಂತ್ರದಂತೆಯೇ ಇರುವ ಈ ಯಂತ್ರದಿಂದ ಫೊಟೊ ತೆಗೆದಾಗ ಯಂತ್ರದಲ್ಲಿನ ಜಿಪಿಎಸ್‌ ವ್ಯವಸ್ಥೆ ನಿಖರವಾದ ಸ್ಥಳವನ್ನು ಸಮಯ ಮತ್ತು ದಿನಾಂಕಗಳ ಜತೆಗೆ ರೆಕಾರ್ಡ್‌ ಮಾಡಿಕೊಳ್ಳುತ್ತದೆ. ಸ್ಥಳದಲ್ಲೇ ಆರೋಗ್ಯಾಧಿಕಾರಿಗಳು ಅಂಗಡಿಯ ಮಾಲಿಕರಿಗೆ ದಂಡ ವಿಧಿಸುತ್ತಾರೆ. ನಂತರವೂ ಕೂಡ ಅಂಗಡಿಯಾತ ಪ್ಲಾಸ್ಟಿಕ್‌ ಉತ್ಪನ್ನಗಳನ್ನು ಮಾರಾಟ ಮಾಡುತ್ತಿರುವುದನ್ನು ಅಧಿಕಾರಿಗಳು ಸೆರೆ ಹಿಡಿದರೆ, ಎಷ್ಟು ಬಾರಿ ಅಂಗಡಿಯವ ಆಗಲೇ ದಂಡ ತೆತ್ತಿದ್ದಾನೆ ಎಂಬ ಮಾಹಿತಿ ಲಭ್ಯವಾಗುತ್ತದೆ. ಅದರ ಆಧಾರದ ಮೇಲೆ ದಂಡ ವಿಧಿಸಲಾಗುತ್ತದೆ. ಈ ಯಂತ್ರವನ್ನು ಬಿಬಿಎಂಪಿಯೇ ಅಭಿವೃದ್ಧಿ ಪಡಿಸಿದೆ,” ಎಂದು ಮಂಜುನಾಥ್‌ ಪ್ರಸಾದ್‌ ತಿಳಿಸಿದ್ದಾರೆ.

ಈ ಕುರಿತು ‘ಸಮಾಚಾರ’ದ ಜತೆ ಮಾತನಾಡಿದ ಬಿಬಿಎಂಪಿ ಜಂಟಿ ಆಯುಕ್ತ ಸರ್ಫರಾಜ್‌ ಖಾನ್‌, “ಹಿಂದೆ ನಿಷೇಧಿಕ ಪ್ಲಾಸ್ಟಿಕ್‌ ಮಾರಾಟ ಮಾಡುವವರಿಗೆ ನೋಟಿಸ್‌ ನೀಡಲಾಗುತ್ತಿತ್ತು. ಈಗ ಸ್ಥಳದಲ್ಲಿಯೇ ದಂಡ ವಿಧಿಸುವ ಕಾರ್ಯಕ್ಕೆ ಮುಂದಾಗಲಾಗಿದೆ. ಇದರಿಂದ ಪ್ಲಾಸ್ಟಿಕ್‌ ಮಾರಾಟವನ್ನು ನಿಯಂತ್ರಿಸಬಹುದಾಗಿದೆ,” ಎಂದರು.

ಈ ಮಾತುಗಳ ಕೇಳಿದ ಮೇಲೆ ಜಯನಗರದ ಚಿಲ್ಲರೆ ಅಂಗಡಿಯ ಮಾಲಿಕನ ಅಳಲು ನೆನಪಾಗುತ್ತದೆ. ಅಧಿಕಾರಿಗಳಿಗೆ ದಂಡ ವಿಧಿಸುವ ಸಮಯದಲ್ಲಿ ಇರುವಷ್ಟು ರೋಷ ಪ್ಲಾಸ್ಟಿಕ್‌ ಬ್ಯಾಗ್‌ಗಳನ್ನು ಸಂಪೂರ್ಣವಾಗಿ ನಿಷೇಧಿಸುವುದರಲ್ಲಿಲ್ಲ ಎಂಬ ಅಂಗಡಿಯವನ ಮಾತುಗಳ ಹಿನ್ನೆಲೆಯನ್ನು ಇಲ್ಲಿ ಅರ್ಥಮಾಡಿಕೊಳ್ಳಬಹುದು. ಪ್ಲಾಸ್ಟಿಕ್‌ ಕ್ಯಾರಿ ಬ್ಯಾಗ್‌ಗಳು ಎಲ್ಲಿಂದ ಬರುತ್ತಿವೆ ಎಂಬ ಪ್ರಶ್ನೆಗೆ ಸರ್ಫರಾಜ್‌ ಖಾನ್‌ ಕೂಡ ಹೊರರಾಜ್ಯಗಳಿಂದ ಎಂಬ ಉತ್ತರ ನೀಡುತ್ತಾರೆ. ಜತೆಗೆ ರಾಜ್ಯಕ್ಕೆ ಬರುವ ಪ್ಲಾಸ್ಟಿಕ್‌ಅನ್ನು ತಡೆಗಟ್ಟಲು ಹಲವಾರು ಕ್ರಮಗಳನ್ನೂ ಕೂಡ ಕೈಗೊಂಡಿರುವುದಾಗಿ ತಿಳಿಸುತ್ತಾರೆ.

ಇದು ಪ್ಲಾಸ್ಟಿಕ್‌ ಕ್ಯಾರಿ ಬ್ಯಾಗ್‌ಗಳ ಕತೆಯಾಯಿತು. ಇದರ ಜತೆಗೆ ಫ್ಲೆಕ್ಸ್‌, ಬ್ಯಾನರ್‌, ಭಿತ್ತಿ ಪತ್ರಗಳ ವಿರುದ್ಧವೂ ಕೂಡ ಬಿಬಿಎಂಪಿ ಸಮರ ಹೂಡಿದೆ. ಒಂದು ವರ್ಷಗಳ ಇವೆಲ್ಲವುಗಳನ್ನೂ ನಿಷೇಧಿಸಿರುವ ಬಿಬಿಎಂಪಿ, ಅಕ್ರಮವಾಗಿ ಬ್ಯಾನರ್‌ ಕಟ್ಟಿದರೆ 1 ಲಕ್ಷ ದಂಡದ ಜತೆಗೆ ಕ್ರಿಮಿನಲ್‌ ಕೇಸ್‌ ದಾಖಲಿಸುವುದಾಗಿಯೂ ಎಚ್ಚರಿಸಿದೆ.

ಪರಿಸರಕ್ಕೆ ಮಾರಕವಾಗಿರುವ ಮತ್ತು ಬೆಂಗಳೂರಿನ ಅಂದವನ್ನು ಕೆಡಿಸುತ್ತಿರುವ ಈ ಪ್ಲಾಸ್ಟಿಕ್‌ ವಸ್ತುಗಳ ಮೇಲೆ ನಡೆಸುತ್ತಿರುವ ಸಮರವೇನೋ ಒಳ್ಳೆಯದೇ. ಆದರೆ ಈ ನಿಟ್ಟಿನಲ್ಲಿ ಗುಬ್ಬಿಗಳ ಮೇಲೆ ಬ್ರಹ್ಮಾಸ್ತ್ರ ಹೂಡುವುದಕ್ಕಿಂತ, ರಾಜ್ಯಕ್ಕೆ ಹರಿದು ಬರುವ ಪ್ಲಾಸ್ಟಿಕ್‌ ತಡೆಗಟ್ಟುವುದೇ ಉತ್ತಮ ಕೆಲಸ. ದಂಡ ವಿಧಿಸುವ ಜತೆಗೆ ಬಿಬಿಎಂಪಿಯಿಂದ ಇಂತಹ ಮಾನವೀಯ ನಡೆಯನ್ನು ಅಂಗಡಿ ಮಾಲೀಕರು ಹಾಗೂ ಸಮಾಜ ನಿರೀಕ್ಷೆ ಮಾಡುತ್ತದೆ.