Home Media 2-0 ‘ಬ್ಲಡ್‌ ಮೂನ್ ಸ್ಪೆಷಲ್’: ಮಾಧ್ಯಮಗಳಿಗೆ ‘ಗ್ರಹಣ ಬಿಡಿಸಿದ’ ಶ್ರೀಸಾಮಾನ್ಯರು!

‘ಬ್ಲಡ್‌ ಮೂನ್ ಸ್ಪೆಷಲ್’: ಮಾಧ್ಯಮಗಳಿಗೆ ‘ಗ್ರಹಣ ಬಿಡಿಸಿದ’ ಶ್ರೀಸಾಮಾನ್ಯರು!

SHARE

ಕೊನೆಗೂ ಗ್ರಹಣ ಮುಗಿದಿದೆ. ಶುಕ್ರವಾರ ರಾತ್ರಿಯಿಂದ ಶನಿವಾರ ಮುಂಜಾನೆವರೆಗೆ ಜರುಗಿದ ಅತಿ ದೀರ್ಘ ಚಂದ್ರ ಗ್ರಹಣವನ್ನು ಜಗತ್ತು ಕಣ್ತುಂಬಿಕೊಂಡಿದೆ. ಹೆಚ್ಚುಕಡಿಮೆ ಕಳೆದ 48 ಗಂಟೆಗಳ ಅವಧಿಯಲ್ಲಿ ಸುದ್ದಿಕೇಂದ್ರವನ್ನು ಆವರಿಸಿಕೊಂಡಿದ್ದು ಗ್ರಹಣದ ವಿಚಾರ. ಇದಕ್ಕೆ ಬಂದ ಪ್ರತಿಕ್ರಿಯೆಗಳು ಇವತ್ತು ಸಾಮಾಜಿಕ ಮನಸ್ಥಿತಿಯ ನಾನಾ ಆಯಾಮವನ್ನು ತೆರೆದಿಡುವಂತಿವೆ.

ಸಾಮಾನ್ಯವಾಗಿ ಜನರ ಆಲೋಚನೆಗಳನ್ನು ತಿದ್ದುವುದು, ಅವರ ಪ್ರತಿಕ್ರಿಯಿಸುವ ಆಲೋಚನೆಗಳ ಮೇಲೆ ಪರೋಕ್ಷವಾಗಿ ಪರಿಣಾಮ ಬೀರುವ ಕೆಲಸ ಮಾಡುವುದು ಮಾಧ್ಯಮಗಳು. ಆದರೆ ಈ ಬಾರಿಯ ಗ್ರಹಣ ಹಾಗೂ ಅದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಬಂದ ಬಹುತೇಕ ಪ್ರತಿಕ್ರಿಯೆಗಳು, ಜನ ಮಾಧ್ಯಮಗಳಿಂದ ದೂರ ನಿಂತು ಗ್ರಹಣವನ್ನು ಅರ್ಥೈಸಿಕೊಂಡ ಬಗೆಯನ್ನು ಬಿಂಬಿಸುತ್ತಿವೆ.

ಕೆಲವೇ ವರ್ಷಗಳ ಹಿಂದೆ ಗ್ರಹಣ ಎಂದರೆ ಬೆಂಗಳೂರಿನಂತಹ ಆಧುನಿಕ ಮನಸ್ಥಿತಿಯ ನಗರದ ರಸ್ತೆಗಳು ಖಾಲಿಯಾಗುತ್ತಿದ್ದವು. ದಿನವಿಡೀ ಟಿವಿಗಳಲ್ಲಿ, ಸುದ್ದಿವಾಹಿನಿಗಳಲ್ಲಿ ಜ್ಯೋತಿಷ್ಯದ ಹೆಸರಿನಲ್ಲಿ ಕಾವಿ ಉದ್ಯಮಿಗಳ ದಂಡು ಠಿಕಾಣಿ ಹೂಡುತ್ತಿತ್ತು. ಅವರು ಬಿತ್ತುತ್ತಿದ್ದ, ವಿಜ್ಞಾನಕ್ಕೆ ತದ್ವಿರುದ್ಧವಾಗಿ ಮೌಢ್ಯಗಳು ದೊಡ್ಡ ಮಟ್ಟದಲ್ಲಿ ಸಾಮಾಜಿಕ ಪರಿಣಾಮ ಬೀರುತ್ತಿದ್ದವು.

ಆದರೆ ಈ ಬಾರಿಯ ಚಂದ್ರ ಗ್ರಹಣ ಮತ್ತು ಅದಕ್ಕೆ ವ್ಯಕ್ತವಾಗಿರುವ ಪ್ರತಿಕ್ರಿಯೆಗಳು, ಸಾಮಾಜಿಕ ಮನಸ್ಥಿತಿಯಲ್ಲಿ ಆಗಿರುವ ಬಹುದೊಡ್ಡ ಪ್ರಗತಿಯನ್ನು ಬಿಂಬಿಸುತ್ತಿವೆ. ಇದು ಆಶಾದಾಯಕ ಬೆಳವಣಿಗೆ.

ಸ್ವತಃ ಪತ್ರಕರ್ತರೂ ಆಗಿರುವ ಅವಿನಾಶ್ ಅವರ ಫೇಸ್‌ಬುಕ್ ಪೋಸ್ಟ್‌ ಇದು. ಒಂದು ಕಡೆ ಮಾಧ್ಯಮಗಳು ಬಿತ್ತರಿಸಿದ ಮೌಢ್ಯಗಳನ್ನು ವಿರೋಧಿಸುವ ಅವರ ಸಾಲುಗಳು, ಒಟ್ಟಾರೆ ಗ್ರಹಣದ ಕುರಿತು ಹರಡಲು ಹೊರಟ ವಿಚಾರವನ್ನು ವಿಡಂಬನೆಗೆ ಒಳಪಡಿಸುತ್ತಿವೆ.

ಗ್ರಹಣದ ಸಮಯದಲ್ಲಿ ಊಟ ಮಾಡಬೇಡಿ, ತಿಂಡಿ ತಿನ್ನಬೇಡಿ, ನೀರು ಕುಡಿಯಬೇಡಿ ಎಂಬ ಜ್ಯೋತಿಷಿಗಳಿಗೆ ವೇದಿಕೆ ನೀಡಿದ್ದು ಸುದ್ದಿ ವಾಹಿನಿಗಳು. ವಿಚಾರ ಮಂಥನಕ್ಕೆ ಎಡೆಮಾಡಿಕೊಡಬೇಕಾದ ಪ್ಯಾನಲ್ ಚರ್ಚೆಗಳನ್ನು ಮೌಢ್ಯ ಬಿತ್ತುವ ವೇದಿಕೆಗಳಾಗಿ ಪರಿವರ್ತನೆ ಮಾಡಿಕೊಂಡ ವಾಹಿನಿಗಳಿಗೆ ನೀಡಿದ ತಿರುಗೇಟು ಇದು.

ಇದೇ ಸಾಲಿನಲ್ಲಿ ಇನ್ನೊಂದು ಹೆಚ್ಚೆ ಮುಂದೆ ಹೋದ ಪತ್ರಕರ್ತ ಬಿ. ಎಂ. ಬಷೀರ್ ಟಿವಿ ಚಾನಲ್‌ಗಳ ಪ್ಯಾನಲ್‌ಗಳಿಗೆ ಹೊಸ ವಿಶೇಷಣವನ್ನು ಸೇರಿಸಿದ್ದಾರೆ.

ಹೀಗೆ, ಸ್ವತಃ ಪತ್ರಕರ್ತರೇ ತಮ್ಮ ಓರಿಗೆಯ ಮಾಧ್ಯಮಗಳ ನಡೆಗಳನ್ನು ಟೀಕಿಸಲು ಕಾರಣವಾಗಿದ್ದು ಗ್ರಹಣದ ಕುರಿತು ಅವು ತಳೆದ ಸಂಪಾದಕೀಯ ನಿಲುವುಗಳು. ಇದರ ಜತೆಗೆ, ಕೊಂಚ ಆಕ್ರೋಶ ಭರಿತವಾಗಿ ಟಿವಿ ವಾಹಿನಿಗಳನ್ನು ಟೀಕಿಗೆ ಒಳಪಡಿಸಿದವರು ಸಾಮಾಜಿಕ ಹೋರಾಟಗಾರ್ತಿ, ಎಡಪಂಥೀಯ ನಿಲುವು ಹೊಂದಿರುವ ಜ್ಯೋತಿ ಅನಂತ ಸುಬ್ಬರಾವ್. ಟಿವಿಗಳ ಗ್ರಹಣದ ಕವರೇಜ್ ಸಾಕಷ್ಟು ಜನರಿಗೆ ರೇಜಿಗೆ ಹುಟ್ಟಿಸಿತ್ತು. ಅಂತವರ ಅಭಿಪ್ರಾಯಗಳ ಮೂರ್ತರೂಪವನ್ನು ಜ್ಯೋತಿ ಕೆಲವೇ ಸಾಲುಗಳಲ್ಲಿ ಕಟ್ಟಿಕೊಟ್ಟರು.

ಟಿವಿ ವಾಹಿನಿಗಳು ಸಾಮಾಜಿಕವಾಗಿ ಬೀರುವ ಪರಿಣಾಮಗಳು ಹೇಗಿರುತ್ತವೆ ಎಂಬುದು ಸಾಮಾನ್ಯ ಜ್ಞಾನ ಇರುವವರಿಗೆ ಅರ್ಥವಾಗದ ಸಂಗತಿ ಏನಲ್ಲ. ‘ರಿಮೋಟ್ ನಿಮ್ಮ ಕೈಲೇ ಇದೆಯಲ್ಲ, ನೋಡೋಕೆ ಆಗದೆ ಹೋದರೆ ಚೇಂಜ್ ಮಾಡಿ’ ಎಂಬುದು ಅತ್ಯಂತ ಮೇಲ್ಮಟ್ಟದ ಗ್ರಹಿಕೆ ಮಾತ್ರ. ಟಿವಿ ವಾಹಿನಿಗಳು ಪ್ರಸಾರ ಮಾಡುವ ಮೌಢ್ಯದ ಕಾರ್ಯಕ್ರಮಗಳು ತಳಮಟ್ಟದಲ್ಲಿ ಹೇಗೆಲ್ಲಾ ಪರಿಣಾಮಗಳನ್ನು ಬೀರುತ್ತವೆ ಎಂಬುದನ್ನು ಲೇಖಕ ಹನುಮಂತ ಹಾಲಗೇರಿ ಹಾಕಿದ ಈ ಪೋಸ್ಟ್‌ ಬಿಚ್ಚಿಡುತ್ತದೆ.

ಹೀಗೆ, ಒಂದು ಗ್ರಹಣ ಮತ್ತು ಅದರ ಸುತ್ತು ಎರಡು ದಿನಗಳ ಕಾಲ ಟಿವಿಗಳಲ್ಲಿ ಬಂದ ಜ್ಯೋತಿಷ್ಯ ಕಾರ್ಯಕ್ರಮಗಳು, ಚರ್ಚೆಗಳು ಹುಟ್ಟುಹಾಕಿದ ಅಭಿಪ್ರಾಯಗಳು ನಾನಾ ಆಯಾಮವನ್ನು ಹೊಂದಿವೆ. ಇಷ್ಟೆ ಅಲ್ಲ, ಇನ್ನೂ ಅನೇಕರು ತಮ್ಮ ಅಭಿಪ್ರಾಯವನ್ನು ದಾಖಲಿಸಲು ಸಾಮಾಜಿಕ ಜಾಲತಾಣಗಳು ವೇದಿಕೆಯಾಗಿವೆ. ಅವುಗಳಲ್ಲಿ ಆಯ್ದ ಕೆಲವು ಇಲ್ಲಿವೆ:

ವಿಶೇಷ ಎಂದರೆ, ಇದೇ ವರ್ಷದ ಜನವರಿಯಲ್ಲಿ ದಾಖಲಾದ ಗ್ರಹಣದ ಸಮಯದಲ್ಲಿಯೂ ಜನ ಹೆಚ್ಚು ಕಡಿಮೆ ಇದೇ ಮಾದರಿಯಲ್ಲಿ ಟಿವಿಗಳು ಭಿತ್ತಿದ ಮೌಢ್ಯವನ್ನು ತರಾಟೆಗೆ ತೆಗೆದುಕೊಂಡಿದ್ದರು.

ಆದರೆ ಈ ಬಾರಿ ಇಂತಹ ಅಭಿಪ್ರಾಯಗಳಿಗೆ ಮನ್ನಣೆ ನೀಡದೆ ಮಾಧ್ಯಮಗಳು ಮತ್ತದೇ ಕಾವಿಧಾರಿಗಳ ಮೌಢ್ಯ ಭಿತ್ತನೆಯ ವೇದಿಕೆಗಳಾದವು. ದಿನ ಪತ್ರಿಕೆಗಳು ಇನ್ನೊಂದು ಹೆಜ್ಜೆ ಮುಂದೆ ಹೋಗಿ ಜ್ಯೋತಿಷಿಗಳ ‘ಫೋನ್ ಇನ್’ ಕೂಡ ನಡೆಸಿದವು. ಪರಿಣಾಮ, ಮಾಧ್ಯಮಗಳ ಇಂತಹ ಹೊಣೆಗೇಡಿ ಸಂಪಾದಕೀಯ ನಿಲುವಿಗೆ ಹುಟ್ಟಿದ ಪ್ರತಿರೋಧ ಕಳೆದ ಬಾರಿಗಿಂತ ತೀವ್ರವಾಗಿದೆ.

2019ರಲ್ಲಿ ಎರಡು ಗ್ರಹಣಗಳಿಗೆ ಜಗತ್ತು ಸಾಕ್ಷಿಯಾಗಲಿದೆ. ಜುಲೈ, 2, 2019ರಲ್ಲಿ ದಕ್ಷಿಣ ಫೆಸಿಫಿಕ್, ಚಿಲಿ ಹಾಗೂ ಅರ್ಜೆಂಟೀನಾದಲ್ಲಿ ಪೂರ್ಣ ಸೂರ್ಯಗ್ರಹಣವನ್ನು ವೀಕ್ಷಿಸಬಹುದಾಗಿದೆ. ನಂತರ 2019ರ ಡಿಸೆಂಬರ್ 26ರಂದು ಗ್ರಹಣ ನಡೆಯಲಿದ್ದು, ಸೌಧಿ ಅರೇಬಿಯಾ, ಸುಮಾರ್ತಾ, ಭಾರತಗಳಲ್ಲಿ ಇದು ಕಾಣಿಸಲಿದೆ. ಆ ಸಮಯಕ್ಕಾದರೂ ನಮ್ಮ ಸುದ್ದಿ ವಾಹಿನಿಗಳ ಸಂಪಾದಕೀಯ ನಿಲುವುಗಳಲ್ಲಿ ಪ್ರಗತಿ ಕಾಣಿಸಲಿ ಎಂಬುದು ಹಾರೈಕೆ ಅಷ್ಟೆ.