Home Investigation ‘ಅಂತರ್ಜಲ ಮಾಫಿಯಾ ಆಫ್ ಬೆಂಗಳೂರು’: ನೆಲದಾಳದ ನೀರನ್ನೂ ಬಿಡದ ವ್ಯವಸ್ಥಿತ ಜಾಲ!

‘ಅಂತರ್ಜಲ ಮಾಫಿಯಾ ಆಫ್ ಬೆಂಗಳೂರು’: ನೆಲದಾಳದ ನೀರನ್ನೂ ಬಿಡದ ವ್ಯವಸ್ಥಿತ ಜಾಲ!

SHARE

ಸಿಲಿಕಾನ್ ಸಿಟಿ, ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಕೋಟಿ ಜನರ ಕಣ್ಣೆದುರಿಗೆ ನಿತ್ಯ ನಡೆಯುತ್ತಿರುವ ದರೋಡೆಯ ಕತೆ ಇದು.

ಒಂದು ಕಡೆ ಜಲಕ್ಷಾಮಕ್ಕೆ ಗುರಿಯಾಗುವ ವಿಶ್ವದ ನಗರಗಳ ಪಟ್ಟಿಯಲ್ಲಿ ಬೆಂಗಳೂರು ಸ್ಥಾನವನ್ನು ಪಡೆದುಕೊಂಡಿದೆ. ಮುಂದಿನ ಎರಡು ವರ್ಷಗಳ ಅಂತರದಲ್ಲಿ ಬೆಂಗಳೂರಿನ ನೀರಿನ ಬವಣೆಯನ್ನು ನೀಗಲು ಈಗಾಗಲೇ ಕಸರತ್ತುಗಳನ್ನು ನಡೆಸಲಾಗುತ್ತಿದೆ. ದೂರದ ಸಾಗರದ ಶರಾವತಿ ಹಿನ್ನೀರನ್ನು ಸಿಲಿಕಾನ್ ಸಿಟಿಗೆ ತರುವ ಯೋಜನೆಯನ್ನು ತೇಲಿಬಿಡಲಾಗಿದೆ. ಅದಕ್ಕೆ ಪ್ರತಿರೋಧ ಸ್ಥಳೀಯ ಮಟ್ಟದಲ್ಲಿ ಹುಟ್ಟಿಕೊಂಡಿದೆ. ಹೀಗೆ, ಅಗಾಧ ಪ್ರಮಾಣದಲ್ಲಿ ಬೆಳೆಯುತ್ತಿರುವ ರಾಜಧಾನಿಯ ನೀರಿನ ದಾಹವನ್ನು ತಣಿಸಲು ಅಲೋಚನೆಗಳು ನಡೆಯುತ್ತಿವೆ, ನೀರಿನ ಸುತ್ತ ಆತಂಕವೊಂದು ಮೂಡಿದೆ. ಮಳೆಗಾಲ ಎಲ್ಲವನ್ನೂ ತಾತ್ಕಾಲಿಕವಾಗಿ ಮರೆಯುವಂತೆ ಮಾಡಿದೆ.

ಆದರೆ, ಇಷ್ಟೆಲ್ಲಾ ಬಾಹ್ಯ ಬೆಳವಣಿಗೆಗಳ ನಡುವೆ ಯಾವುದೇ ಆತಂಕ ಇಲ್ಲದೆ ನಡೆಯುತ್ತಿದೆ ‘ವಾಟರ್ ಸಪ್ಲೈ’ ಎಂದು ಫಲಕ ತಗಲಿಸಿಕೊಂಡಿರುವ ಅಂತರ್ಜಲದ ಮುಕ್ತ ಮಾರಾಟ ದಂಧೆ. ವ್ಯವಸ್ಥಿತ ಜಾಲವಾಗಿ, ಇವತ್ತಿಗೆ ಮಾಫಿಯಾ ರೂಪದಲ್ಲಿ ಬದಲಾಗಿರುವ ಈ ನೀರಿನ ಮಾರಾಟವನ್ನು ಬೆನ್ನತ್ತಿದ ‘ಸಮಾಚಾರ’ಕ್ಕೆ ಲಭ್ಯವಾಗಿದ್ದು ಗಾಬರಿ ಹಿಟ್ಟಿಸುವ ಸಂಗತಿ.

ಯಾವುದೇ ಲಗಾಮಿಗೂ ಬಗ್ಗದ, ಎಲ್ಲವೂ ಸಂಬಂಧಪಟ್ಟವರ ನೆರಳಿನಲ್ಲಿ ಹಾಡ ಹಗಲೇ ನಡೆಯುತ್ತಿರುವ ‘ಮುಕ್ತ ಮಾರುಕಟ್ಟೆ’ಯೊಂದರ ತಳಮಟ್ಟದ ಚಿತ್ರಣವನ್ನು ಈ ವರದಿ ನಿಮ್ಮೆದುರಿಗೆ ಬಿಚ್ಚಿಡಲಿದೆ.

ಅಂತರ್ಜಲಕ್ಕೆ ಬಳಕೆ ನಿಯಂತ್ರಣಕ್ಕೆ:

ಬೆಂಗಳೂರು ಮಾತ್ರವಲ್ಲ, ರಾಜ್ಯದ ಯಾವುದೇ ಭಾಗದಲ್ಲಿ ಬೋರ್‌ವೆಲ್‌ ಕೊರೆಸಬೇಕಾದರೆ ನಿಯಮಾವಳಿಗಳಿವೆ. 2012ರಲ್ಲಿಯೇ ರಾಜ್ಯದಲ್ಲಿ ‘ಕರ್ನಾಟಕ ಅಂತರ್ಜಲ ಪ್ರಾಧಿಕಾರ’ವೊಂದು ಅಸ್ಥಿತ್ವಕ್ಕೆ ಬಂದಿದೆ. ಜಲ ಸಂಪನ್ಮೂಲ ಇಲಾಖೆ ರಚಿಸಿರುವ ಈ ಪ್ರಾಧಿಕಾರ ಡಿ. 31, 2012ರಲ್ಲಿಯೇ ಅಧಿಸೂಚನೆಯೊಂದನ್ನು ಹೊರಡಿಸಿದೆ. ರಾಜ್ಯದಲ್ಲಿ ಅಂತರ್ಜಲ ಅಭಿವೃದ್ಧಿ ಹಾಗೂ ಅತಿ ಬಳಕೆಯ ನಿಯಂತ್ರಣಕ್ಕಾಗಿ ಜಾರಿಗೆ ತಂದಿರುವ ಕರ್ನಾಟಕ ಅಂತರ್ಜಲ (ಅಭಿವೃದ್ಧಿ ಮತ್ತು ನಿರ್ವಹಣೆ ವಿನಿಮಯ ಮತ್ತು ನಿಯಂತ್ರಣ) ಕಾಯ್ದೆಯ ಅನುಷ್ಠಾನದ ಹೊಣೆಗಾರಿಕೆ ಈ ಪ್ರಾಧಿಕಾರದ್ದಾಗಿದೆ.

ಆಯಾ ಜಿಲ್ಲೆಗಳಲ್ಲಿ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಇದರ ಅಧ್ಯಕ್ಷರಾಗಿರುತ್ತಾರೆ. ಅವರನ್ನೂ ಒಳಗೊಂಡ 16 ಜನರ ಸದಸ್ಯರನ್ನು ಒಳಗೊಂಡ ಪ್ರಾಧಿಕಾರ ಬೋರ್‌ವೆಲ್ ಕೊರೆಯುದಕ್ಕೆ ಅನುಮತಿ ನೀಡುವುದರಿಂದ ಹಿಡಿದು ಬಳಕೆ ನಿಯಂತ್ರಣದವರೆಗೆ ಮೇಲ್ವಿಚಾರಣೆ ನೋಡಬೇಕಿದೆ.

ಬೆಂಗಳೂರು ಬಿಬಿಎಂಪಿ ವ್ಯಾಪ್ತಿಯಲ್ಲಿ ಪ್ರಾಧಿಕಾರಕ್ಕೆ BWSSB ಪ್ರಧಾನ ಎಂಜಿನಿಯರ್ ಅಧ್ಯಕ್ಷರಾಗಿದ್ದಾರೆ. ಅವರ ಜತೆಗೆ ಒಬ್ಬರು ಸದಸ್ಯ ಕಾರ್ಯದರ್ಶಿ ಸೇರಿದಂತೆ ಇತರೆ 14 ಸದಸ್ಯರು ಪ್ರಾಧಿಕಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಎರಡು ತಿಂಗಳಿಗೊಮ್ಮೆ ಸಭೆ ನಡೆಸುವ ಪ್ರಾಧಿಕಾರ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬೋರ್‌ವೆಲ್‌ಗಳಿಗೆ ಅನುಮತಿ ನೀಡುವುದನ್ನು ಹಾಗೂ ಅಂತರ್ಜಲ ನಿರ್ವಹಣೆ, ಬಳಕೆ ನಿಯಂತ್ರಣಗಳ ಮೇಲ್ವಿಚಾರಣೆ ನೋಡಿಕೊಳ್ಳುವ ಪರಮಾಧಿಕಾರ ಹೊಂದಿದೆ.

ಪ್ರಾಧಿಕಾರದ ರಚನೆ ಹಾಗೂ ಕರ್ತವ್ಯಗಳ ಕುರಿತು ಜಲ ಸಂಪನ್ಮೂಲ ಇಲಾಖೆ ಹೊರಡಿಸಿದ ಅಧಿಸೂಚನೆ ಇಲ್ಲಿದೆ:

ಕಾನೂನು ಇದೆ; ಆದರೆ…:

ಇದು ರಾಜ್ಯದಲ್ಲಿ ಅಂತರ್ಜಲದ ಬಳಕೆ ನಿಯಂತ್ರಣದ ಕುರಿತು ಇರುವ ಕಾನೂನು. ಆದರೆ ವಾಸ್ತವದಲ್ಲಿ ಇದರ ಆಚರಣೆ ಹೇಗಿದೆ ಎಂದು ನೋಡಿದರೆ, ನಿರಾಸೆ ಮೂಡಿಸುತ್ತದೆ.

“ಎಷ್ಟು ಟ್ಯಾಂಕರ್ ಬೇಕು ಹೇಳಿ ಸಪ್ಲೈ ಮಾಡುತ್ತೇವೆ. 4000 ಲೀಟರ್ ಟ್ಯಾಂಕರ್‌ಗೆ 650 ರೂಪಾಯಿ ಹಾಕಿಕೊಡೋಣ,’’ ಎಂದು ಮಾತು ಆರಂಭಿಸಿದರು ಜೆಪಿ ನಗರದ ಶಶಾಂಕ್ ವಾಟರ್‌ ಸಪ್ಲೈನ ರಮೇಶ್. ‘ನಮ್ಮದೊಂದು ಕಟ್ಟಡ ನಿರ್ಮಾಣ ಕಂಪನಿಗೆ ನೀರು ಬೇಕಾಗಿತ್ತು’ ಎಂದು ಕರೆ ಮಾಡಿದ ‘ಸಮಾಚಾರ’ಕ್ಕೆ ಮಾಹಿತಿ ನೀಡಿದ ಅವರು ತಮ್ಮ ಉದ್ಯಮದ ಒಳಮರ್ಮವನ್ನೂ ಬಿಚ್ಚಿಟ್ಟರು.

“ನಾನು ಗುತ್ತಿಗೆ ಪಡೆದುಕೊಂಡಿದ್ದೇನೆ. ಸ್ನೇಹಿತರೊಬ್ಬರ ಬೋರ್‌ ಪಾಯಿಂಟ್ ಖಾಲಿ ಸೈಟ್‌ನಲ್ಲಿದೆ. ಅಲ್ಲಿಂದ ಜೆಪಿ ನಗರ ಸುತ್ತಮುತ್ತ ನೀರು ಸರಬರಾಜು ಮಾಡುತ್ತೇವೆ. ಇದಕ್ಕೆ ಯಾವ ಅನುಮತಿಯೂ ಇದ್ದ ಹಾಗಿಲ್ಲ. ಸುಮಾರು 15 ವರ್ಷಗಳಿಂದ ಇದೇ ಉದ್ಯೋಗ ಮಾಡಿಕೊಂಡಿದ್ದೇನೆ. ನಾನು ಒಂದು ಟ್ಯಾಂಕರ್‌ಗೆ 300 ರೂಪಾಯಿ ನೀಡಬೇಕು. ಅದರ ಮೇಲೆ ಗಾಡಿ ಬಾಡಿಗೆ, ಡ್ರೈವರ್ ಖರ್ಚು ಎಲ್ಲಾ ಸೇರಿಸಿ 700 ರೂಪಾಯಿಗೆ ಮಾರಾಟ ಮಾಡುತ್ತೇನೆ,’’ ಎಂದರು ರಮೇಶ್.

ರಮೇಶ್ ರೀತಿಯಲ್ಲಿ ಸುಮಾರು 10 ಸಾವಿರಕ್ಕೂ ಹೆಚ್ಚು ವಾಟರ್ ಸಪ್ಲೈ ಮಾಡುವವರ ನಂಬರ್‌ಗಳು ಜಸ್ಟ್‌ ಡಯಲ್‌ ಒಂದರಲ್ಲಿಯೇ ಸಿಗುತ್ತವೆ. ವಿಶೇಷ ಅಂದರೆ, ಈ ವಾಟರ್ ಟ್ಯಾಂಕರ್‌ಗಳು ಆಯಾ ಪ್ರದೇಶಗಳಿಗೆ ಸೀಮಿತವಾಗಿ ಕಾರ್ಯನಿರ್ವಹಿಸುತ್ತದೆ. ಉದಾಹರಣೆಗೆ ಪೀಣ್ಯ ಕೈಗಾರಿಕಾ ಪ್ರದೇಶಕ್ಕೆ ನೀರು ಬೇಕು ಎಂದರೆ, ಅಲ್ಲಿಯೇ ಸುತ್ತಮುತ್ತ ವಾಟರ್ ಸಪ್ಲೈ ಮಾಡುವವರನ್ನು ಸಂಪರ್ಕಿಸಬೇಕು. ಜೆಪಿ ನಗರದ ವಾಟರ್ ಸಪ್ಲೈ ಏಜೆನ್ಸಿಗಳು ಅಷ್ಟು ದೂರದವರೆಗೆ ನೀರು ಸರಬರಾಜು ಮಾಡಲು ಬರುವುದಿಲ್ಲ.

“ನೀವು ಎಚ್‌ಎಎಲ್ ಸುತ್ತಮುತ್ತ ಆದರೆ ಹೇಳಿ, ಎಷ್ಟು ಬೇಕಾದರೂ ನೀರು ಕೊಡುತ್ತೇವೆ. ಆದರೆ ದೂರ ಆದರೆ ಕಷ್ಟವಾಗುತ್ತದೆ. ಯಾಕೆಂದರೆ ನಮ್ಮ ಬಳಿ ಯಾವ ಪರವಾನಗಿಯೂ ಇಲ್ಲ. ಇಲ್ಲೇ ಆದರೆ ಸ್ಥಳೀಯ ಕಾರ್ಪೊರೇಟರ್, ಶಾಸಕರ ಬೆಂಬಲ ಇದೆ. ಏನೇ ಸಮಸ್ಯೆ ಆದರೂ ಅವರು ನೋಡಿಕೊಳ್ಳುತ್ತಾರೆ. ಹೊರಗಿನ ಪ್ರದೇಶಗಳಲ್ಲಿ ಸಮಸ್ಯೆಯಾದರೆ ಕಷ್ಟ,’’ ಎಂದರು ಎಚ್‌ಎಎಲ್ ಪ್ರದೇಶದಲ್ಲಿ ವಿಗ್ನೇಶ್ವರ ವಾಟರ್ ಸಪ್ಲೈ ಏಜೆನ್ಸಿ ಇಟ್ಟುಕೊಂಡಿರುವ ಚಂದ್ರು. ಶಾಸಕ ಬೈರತಿ ಬಸವರಾಜ್ ಅವರ ಹೆಸರನ್ನು ಬಳಸಿಕೊಂಡ ಅವರು, “ಇಲ್ಲಿ ನಮಗೆ ಯಾರೂ ಸಮಸ್ಯೆ ಮಾಡಲು ಸಾಧ್ಯವಿಲ್ಲ,’’ ಎಂದರು.

ಜಲ ಉದ್ಯಮ:

ಬೆಳೆದು ನಿಂತ ಬೆಂಗಳೂರು ನೀರಿನ ಅಗತ್ಯಗಳನ್ನು ಪೂರೈಸಲು ಜಲ ಮಂಡಳಿ ವಿಫಲವಾಗಿದೆ. ಅದರ ಪರಿಣಾಮ ವಾಟರ್ ಟ್ಯಾಂಕರ್‌ ಮಾಫಿಯಾ ಕೈತುಂಬಾ ಲಾಭ ತಂದುಕೊಡುವ, ಅದೇ ವೇಳೆಗೆ ಕಡಿಮೆ ಬಂಡವಾಳ ಬೇಡುವ ಉದ್ಯಮದ ರೂಪ ಪಡೆದುಕೊಂಡಿದೆ. ಪೇಯಿಂಗ್ ಗೆಸ್ಟ್‌ಗಳು, ಹೋಟೆಲ್‌ಗಳು, ಹೊರವಲಯದ ನಿವಾಸಗಳು ಇಂತಹ ಟ್ಯಾಂಕರ್‌ಗಳ ನಿತ್ಯ ಗ್ರಾಹಕರು. ಈ ಕಾರಣಕ್ಕೆ ಇವತ್ತು ‘ಹ್ಯಾಂಕಿ ಪ್ಯಾಂಕಿ’ಗಳೂ ಸಿಕ್ಕಾ ಪಟ್ಟೆ ಕಾಂಪಿಟೇಶನ್ ಕೊಡಲು ಅಖಾಡಕ್ಕೆ ಇಳಿದಿದ್ದಾರೆ ಎನ್ನುತ್ತಾರೆ ವಿ. ನಾರಾಯಣ ರೆಡ್ಡಿ.

ವಿ. ನಾರಾಯಣ ರೆಡ್ಡಿ. 

ಬೆಂಗಳೂರಿನ ಅಶೋಕ ಪಿಲ್ಲರ್ ಬಳಿ, ಸಂಸದ ಅನಂತ ಕುಮಾರ್ ಮನೆಯ ಸಮೀಪದಲ್ಲಿಯೇ ವಿಜಯಲಕ್ಷ್ಮಿ ವಾಟರ್ ಸಪ್ಲೈ ಏಜೆನ್ಸಿ ನಡೆಸುತ್ತಿದ್ದಾರೆ ರೆಡ್ಡಿ. ಗಮನಾರ್ಹ ಸಂಗತಿ ಏನೆಂದರೆ, ರೆಡ್ಡಿ ಒಂದು ಕಾಲದಲ್ಲಿ ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಇತಿಹಾಸದ ಪ್ರಾಧ್ಯಾಪಕರಾಗಿದ್ದವರು. “1992ರಲ್ಲಿ ನಾನು ಸ್ವಯಂ ನಿವೃತ್ತಿ ತೆಗೆದುಕೊಂಡು ಬಂದು ವಾಟರ್ ಬಿಜಿನೆಸ್ ಶುರುಮಾಡಿದೆ,’’ ಎಂದು ‘ಸಮಾಚಾರ’ದ ಜತೆ ಮಾತು ಆರಂಭಿಸಿದರು ರೆಡ್ಡಿ.

ದೇಶದ ನದಿ ಜೋಡಣೆ ಯೋಜನೆಗಳ ಸಮಸ್ಯೆ, ನೀರಿನ ರಾಷ್ಟ್ರೀಕರಣ ಮತ್ತಿತರ ಜಲ ಸಂಬಂಧಿತ ವಿಚಾರಗಳ ಕುರಿತು ತಮ್ಮದೇ ಲಹರಿಯಲ್ಲಿ ಮಾತನಾಡುವ ಇವರ ಬಳಿ ತಲಾ 7000 ಸಾವಿರ ಲೀಟರ್‌ನ ನಾಲ್ಕು ಟ್ಯಾಂಕರ್‌ಗಳು ಕಾರ್ಯನಿರ್ವಹಿಸುತ್ತಿವೆ. ನಿತ್ಯ 20ರಿಂದ 25 ಲೋಡ್‌ ನೀರನ್ನು ಹೋಟೆಲ್‌, ಪಿಜಿಗಳಿಗೆ ಸರಬರಾಜು ಮಾಡುತ್ತಾರೆ. ಇದಕ್ಕೆ ಅನುಮತಿಯನ್ನು ಪಡೆದುಕೊಂಡಿದ್ದೇನೆ ಎಂದ ಅವರು, “ಅನುಮತಿ ಪತ್ರ ಎಲ್ಲೋ ಕಳೆದು ಹೋಗಿದೆ,’’ ಎಂದರು.

ರೆಡ್ಡಿ, ನೀರು ಸರಬರಾಜಿನ ಜತೆ ಬೋರ್‌ವೆಲ್‌ಗಳನ್ನು ಕೊರೆಯುವ ಯಂತ್ರವನ್ನೂ ಇಟ್ಟುಕೊಂಡಿದ್ದಾರೆ. “ಹಿಂದೆಲ್ಲ ತಿಂಗಳಿಗೆ 30ಕ್ಕೂ ಹೆಚ್ಚು ಬೋರ್‌ ಪಾಯಿಂಟ್‌ಗಳನ್ನು ಕೊರೆಯಲು ಆರ್ಡರ್ ಸಿಗುತ್ತಿತ್ತು. ಆದರೆ ಈಗ 4-5 ಸಿಕ್ಕರೆ ಹೆಚ್ಚು. ಹ್ಯಾಂಕಿ ಪ್ಯಾಂಕಿಗಳೆಲ್ಲಾ ಬಿಜೆನೆಸ್‌ಗೆ ಎಂಟರ್ ಆಗಿ ಸಿಕ್ಕಾಪಟ್ಟೆ ಬ್ಯಾಡ್‌ ಕಾಂಪಿಟೇಶನ್ ಕ್ರಿಯೇಟ್ ಮಾಡಿದ್ದಾರೆ,’’ ಎಂದು ಅವರು ಬೇಸರ ವ್ಯಕ್ತಪಡಿಸುತ್ತಾರೆ. ಅಷ್ಟೆ ಅಲ್ಲ, ಬೋರ್‌ವೆಲ್ ಕೊರೆಯಲು ಯಾರ ಅನುಮತಿಯೂ ಅಗತ್ಯವಿಲ್ಲ ಎಂದು ಪ್ರತಿಪಾದಿಸುತ್ತಾರೆ. ಅವರ ಪ್ರಕಾರ ಬೆಂಗಳೂರಿನಲ್ಲಿ ಕನಿಷ್ಟ 50 ಸಾವಿರ ಟ್ಯಾಂಕರ್‌ಗಳು ನಿತ್ಯ ನೀರು ಸರಬರಾಜು ಮಾಡುತ್ತಿವೆ.

ಬೆಂಗಳೂರು ಮಾತ್ರವಲ್ಲ, ಭಾರತದಲ್ಲಿರುವ ಅಂತರ್ಜಲದ ಬಳಕೆ ಸರಿಯಾಗಿ ಮಾಡಿದರೆ ನೀರಿನ ಅಭಾವ ಯಾವತ್ತಿಗೂ ತಲೆದೋರುವುದಿಲ್ಲ ಎಂದು ವಾದ ಮಂಡಿಸಿದ ಅವರು, ಒಂದು ಹಂತದಲ್ಲಿ ನೀರಿನ ಸಮಸ್ಯೆಯನ್ನು ಅರ್ಥ ಮಾಡಿಕೊಂಡರು. “ಇವತ್ತಲ್ಲ ನಾಳೆ ಈ ಬಿಜಿನೆಸ್ ಅಂತ್ಯ ಕಾಣುತ್ತದೆ. ಸರಕಾರ ನೀರಿನ ರಾಷ್ಟ್ರೀಕರಣ ಮಾಡಬೇಕು. ಅದೊಂದೆ ನಮ್ಮ ಮುಂದಿರುವ ಪರಿಹಾರ,’’ ಎಂದು ಮೌನಕ್ಕೆ ಶರಣಾದರು.

ಕೇವಲ 500 ರೂಪಾಯಿ ಕಟ್ಟಿ, ಬೋರ್‌ವೆಲ್ ಕೊರೆಯಲು ಅರ್ಜಿ ಸಲ್ಲಿಸುವ ಅವಕಾಶವನ್ನು ಸರಕಾರ ನೀಡಿದೆ. ಅರ್ಜಿ ಸಲ್ಲಿಸಿದ ನಂತರ ಭೂಗರ್ಭ ಶಾಸ್ತ್ರಜ್ಞರೊಬ್ಬರು ಸ್ಥಳ ಪರಿಶೀಲನೆ ನಡೆಸಿ ವರದಿ ನೀಡುತ್ತಾರೆ. ವರದಿ ಮತ್ತು ಅರ್ಜಿಯನ್ನು ಕರ್ನಾಟಕ ಅಂತರ್ಜಲ ಪ್ರಾಧಿಕಾರ ತನ್ನ ಸಭೆಯಲ್ಲಿ ಪರಿಶೀಲನೆ ನಡೆಸಿ ಅನುಮತಿ ನೀಡುತ್ತದೆ. ಜೂನ್ 12ರಂದು ಪಾಲಿಕೆ ವ್ಯಾಪ್ತಿಯ ಸಭೆ ನಡೆದಿದೆ. ಈವರೆಗೆ ಪ್ರಾಧಿಕಾರ ಬೋರ್‌ವೆಲ್‌ಗೆ ಅನುಮತಿ ನಿರಾಕರಿಸಿದ ನಿದರ್ಶನಗಳು ಕಡಿಮೆ.

“ಈ ವಿಚಾರದಲ್ಲಿ ನಿಮಗೆ ಹೇಳುವುದೇನಿದೆ. ಎಲ್ಲಿಯೂ ಅವರವರ ಪಾಲು ಸಲ್ಲಿಸಿದರೇನೇ ಅನುಮತಿ ಸಿಗುವುದು,’’ ಎನ್ನುತ್ತಾರೆ ಬೋರ್‌ವಲ್‌ಗೆ ಪ್ರಾಧಿಕಾರದಿಂದ ಇತ್ತೀಚೆಗಷ್ಟೆ ಅನುಮತಿ ಪಡೆದುಕೊಂಡ ಬೆಂಗಳೂರಿನ ಉದ್ಯಮಿಯೊಬ್ಬರು.

ಒಂದು ಕಡೆ ನೀರಿನ ಅಭಾವ, ಬೆಂಗಳೂರಿಗೆ ನೀರು ತರಲು ಯೋಜನೆಗಳು, ಮಳೆ ಸುರಿದರೂ ವ್ಯರ್ಥವಾಗಿ ಹೋಗುತ್ತಿರುವ ನೀರು, ಮರೆತೇ ಹೋಗಿರುವ ಮಳೆ ಕೋಯ್ಲು, ನೀರಿನ ಸುತ್ತ ಹೆಚ್ಚುತ್ತಿರುವ ಆತಂಕಗಳ ನಡುವೆ ಅಂತರ್ಜಲ ಬರಿದಾಗುತ್ತಿದೆ; ಹಾಡು ಹಗಲೇ, ಯಾವುದೇ ಕಾನೂನಿನ ಭಯವಿಲ್ಲದೆ. ವ್ಯವಸ್ಥೆಯೇ ಎದ್ದು ಮೇಯಲು ಶುರುಮಾಡಿದ ಮೇಲೆ, ಬೆಂಗಳೂರು ಜಲ ಕ್ಷಾಮಕ್ಕೆ ತುತ್ತಾಗುವುದಿಲ್ಲ ಎಂದು ನಿರಾತಂಕವಾಗಿ ಇರುವುದಾದರೂ ಹೇಗೆ ಸಾಧ್ಯ?

ವರದಿಗಾಗಿ ಜಲಮಂಡಳಿ, ಅಂತರ್ಜಲ ಪ್ರಾಧಿಕಾರಿ ಹಾಗೂ ಸಂಬಂಧಿಸಿದ ಅಧಿಕಾರಿಗಳನ್ನು ಸಂಪರ್ಕಿಸಲಾಯಿತಾದರೂ, ಆಫ್‌ ದಿ ರೆಕಾರ್ಡ್‌ ಸಮಸ್ಯೆಯನ್ನು ಒಪ್ಪಿಕೊಂಡರು. ಆದರೆ ಯಾರೂ ಅಧಿಕೃತವಾಗಿ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.