Home news-in-brief ‘ಮೋದಿಜಿ, ನನ್ನನ್ನು ಸುಮ್ಮನಾಗಿಸಲು ಸಾಧ್ಯವಿಲ್ಲ’: ಯೋಗೇಂದ್ರ ಯಾದವ್‌ ಟ್ವೀಟ್‌

‘ಮೋದಿಜಿ, ನನ್ನನ್ನು ಸುಮ್ಮನಾಗಿಸಲು ಸಾಧ್ಯವಿಲ್ಲ’: ಯೋಗೇಂದ್ರ ಯಾದವ್‌ ಟ್ವೀಟ್‌

SHARE

ಸ್ವರಾಜ್‌ ಇಂಡಿಯಾ ಪಕ್ಷದ ಸ್ಥಾಪಕ ಯೋಗೇಂದ್ರ ಯಾದವ್‌ರ ಸಹೋದರಿಯೊಬ್ಬರು ಹರಿಯಾಣದ ರೆವಾರಿಯಲ್ಲಿ ನಡೆಸುತ್ತಿರುವ ಆಸ್ಪತ್ರೆಯ ಮೇಲೆ ಬುಧವಾರ ಬೆಳಗ್ಗೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ಕುರಿತು ಹೇಳಿಕೆ ನೀಡಿರುವ ಯೋಗೇಂದ್ರ ಯಾದವ್‌, ಈ ದಾಳಿಗಳಿಂದ ನನ್ನನ್ನು ಬೆದರಿಸಲು ಸಾಧ್ಯವಿಲ್ಲ ಎಂದಿದ್ದಾರೆ.

ರೈತರ ಬೆಳೆಗೆ ಉತ್ತಮ ಬೆಲೆ ಕಲ್ಪಿಸಲು ನಡೆಸುತ್ತಿರುವ ಅಭಿಯಾನವನ್ನು ನಿಲ್ಲಿಸುವ ಸಲುವಾಗಿ ಈ ದಾಳಿ ನಡೆಸಿರಬಹುದು ಎಂದು ಯೋಗೇಂದ್ರ ಯಾದವ್‌ ಸಂಶಯ ವ್ಯಕ್ತಪಡಿಸಿದ್ದಾರೆ. ಈ ಕುರಿತು ಸರಣಿ ಟ್ವೀಟ್‌ಗಳನ್ನು ಮಾಡಿರುವ ಯೋಗೇಂದ್ರ ಯಾದವ್‌, ದೆಹಲಿಯಿಂದ 100ಕ್ಕೂ ಹೆಚ್ಚು ಜನ ಅಧಿಕಾರಿಗಳು ಬಂದಿದ್ದು ನನ್ನ ಸಂಬಂಧಿಗಳನ್ನು ಬಂಧಿಸುವುದರ ಜತೆಗೆ ಆಸ್ಪತ್ರೆಗೆ ಬೀಗ ಜಡಿದಿದ್ದಾರೆ ಎಂದು ತಿಳಿಸಿದ್ದಾರೆ.

ಯೋಗೇಂದ್ರ ಯಾದವ್‌ ಆರಂಭದಲ್ಲಿ ಆಮ್‌ ಆದ್ಮಿ ಪಕ್ಷದ ಜತೆ ಗುರುತಿಸಿಕೊಂಡಿದ್ದವರು. ನಂತರದಲ್ಲಿ 2015ರಲ್ಲಿ ಸ್ವರಾಜ್‌ ಇಂಡಿಯಾ ಪಕ್ಷವನ್ನು ಸ್ಥಾಪಿಸಿ, ಜೈ ಕಿಸಾನ್‌ ಆಂದೋಲನದ ಮೂಲಕ ದೇಶಾದ್ಯಂತ ರೈತರನ್ನು ಸಂಘಟಿಸುವಲ್ಲಿ ನಿರತರಾಗಿದ್ದಾರೆ. ದೇಶದ ರೈತರನ್ನು ಸಂಘಟಿಸುವ ಸಲುವಾಗಿ ತಾವು ಕೈಗೊಂಡಿರುವ 9 ದಿನಗಳ ಯಾತ್ರೆ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸಹಿಸಲಾಗುತ್ತಿಲ್ಲ ಎಂದು ಯೋಗೇಂದ್ರ ಯಾದವ್‌ ತಿಳಿಸಿದ್ದಾರೆ.

“ಇದು ನನ್ನಲ್ಲಿ ಭಯಹುಟ್ಟಿಸುವ ಸಲುವಾಗಿ ನಡೆಸಿರುವ ಕೃತ್ಯ, ಮೋದಿಜಿ ನೀವು ನನ್ನನ್ನು ಸುಮ್ಮನಾಗಿಸಲು ಸಾಧ್ಯವಿಲ್ಲ,” ಎಂದು ಯೋಗೇಂದ್ರ ಯಾದವ್‌ ಟ್ವೀಟ್‌ ಮಾಡಿದ್ದಾರೆ. ಎನ್‌ಡಿ ಟಿವಿ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿ, “ಆದಾಯ ತೆರಿಗೆ ಇಲಾಖೆ ಅದರ ಕಾರ್ಯವನ್ನು ಮಾಡಿ ಮುಗಿಸಿದೆ. ಆದರೆ ಇದರಿಂದ ನನ್ನ ಯಾತ್ರೆಗೆ ತಡೆಯೊಡ್ಡಲು ಸಾಧ್ಯವಿಲ್ಲ,” ಎಂದು ತಿಳಿಸಿದ್ದಾರೆ.“ಅವರಿಗೆ ದಾಳಿ ಮಾಡಲು ಒಂದು ಜಾಗ ಬೇಕಿತ್ತು. ಆದ್ದರಿಂದ ಆಸ್ಪತ್ರೆಯ ಮೇಲೆ ದಾಳಿ ನಡೆಸಿದ್ದಾರೆ. ತತ್‌ಕ್ಷಣದಲ್ಲಿ ಮಾಡಲು ಸಾಧ್ಯವಿರುವುದು ಇದೊಂದೇ,” ಎಂದಿರುವ ಯೋಗೇಂದ್ರ ಯಾದವ್‌, ರಾಜಕೀಯ ವಿರೋಧಿಗಳನ್ನು ತಡೆಗಟ್ಟಲು ಕೇಂದ್ರ ಸರಕಾರ ಆದಾಯ ತೆರಿಗೆ ಇಲಾಖೆಯನ್ನು ಬಳಸಿಕೊಂಡಿದೆ ಎಂದು ಆರೋಪಿಸಿದ್ದಾರೆ.

“ಪ್ರಧಾನಿ ಮೋದಿ ರೈತರ ಹೋರಾಟಗಳಿಂದ ಹೆಚ್ಚು ಆತಂಕಿತರಾಗಿದ್ದಾರೆ. ಈಗ ನಾವು ರೈತರ ಪರವಾಗಿ ದನಿಯೆತ್ತಲು ಪ್ರಾರಂಭಿಸಿದ್ದೇವೆ. ಅದಕ್ಕಾಗಿ ನಮ್ಮನ್ನು ಗುರಿಯಾಗಿಸಲಾಗುತ್ತಿದೆ,” ಎಂದು ಯೋಗೇಂದ್ರ ಯಾದವ್‌ ಎನ್‌ಡಿ ಟಿವಿಗೆ ತಿಳಿಸಿದ್ದಾರೆ.

ಹರಿಯಾಣದ ಕಾಂಗ್ರೆಸ್‌ ನಾಯಕ ದೀಪೆಂದರ್‌ ಹೂಡಾ ಯೋಗೆಂದ್ರ ಯಾದವ್‌ಗೆ ಬೆಂಬಲ ಸೂಚಿಸಿ ಟ್ವೀಟ್‌ ಮಾಡಿದ್ದಾರೆ. ದೇಶದ ಹಿರಿಯ ವಕೀಲ ಪ್ರಶಾಂತ್‌ ಭೂಷಣ್ ಕೂಡ ಯೋಗೇಂದ್ರ ಯಾದವ್‌ ಪರವಾಗಿ ಟ್ವೀಟ್‌ ಮಾಡಿದ್ದು, ದೇಶದಲ್ಲಿ ಮುಂಚೂಣಿಯಲ್ಲಿ ನಿಂತು ರೈತ ಚಳುವಳಿಯನ್ನು ಕಟ್ಟುತ್ತಿರುವುದಕ್ಕಾಗಿ ಯೋಗೇಂದ್ರ ಯಾದವ್‌ರನ್ನು ಶ್ಲಾಘಿಸಿದ್ದಾರೆ.