Home Investigation ‘ಐಟಿ ಕಾರಿಡಾರ್ ಹಗರಣ’: ಕೃಷಿ ಭೂಮಿಯಲ್ಲಿ ಸಚಿವರ ಟೆಕ್ ಪಾರ್ಕ್!

‘ಐಟಿ ಕಾರಿಡಾರ್ ಹಗರಣ’: ಕೃಷಿ ಭೂಮಿಯಲ್ಲಿ ಸಚಿವರ ಟೆಕ್ ಪಾರ್ಕ್!

SHARE

‘ರಾಜ್ಯದಲ್ಲಿ ಬಂಡವಾಳ ಹೂಡುವವರನ್ನು ಸರಕಾರ ಮುಕ್ತ ಮನಸ್ಸಿನಿಂದ ಅಹ್ವಾನಿಸುತ್ತದೆ. ಮರುಹೂಡಿಕೆ ಮಾಡುವವರು ವಿವಿಧ ಇಲಾಖೆಗಳ ಕದ ತಟ್ಟುವ ಅಗತ್ಯವಿಲ್ಲ. ಹೂಡಿಕೆ ಪ್ರಕ್ರಿಯೆಯನ್ನು ಸರಳಗೊಳಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳ ಕಚೇರಿಯಲ್ಲಿಯೇ ಒಬ್ಬ ಅಧಿಕಾರಿಯನ್ನು ನಿಯೋಜಿಸಲಾಗುವುದು.’

ಇದು ಕಳೆದ ಶನಿವಾರ ರಾಜ್ಯದ ಮುಖ್ಯಮಂತ್ರಿ ಅಧಿಕೃತ ಟ್ವಿಟರ್ ಖಾತೆಯಿಂದ ಹರಿಯಬಿಡಲಾಗಿರುವ ಟ್ವೀಟ್.

ಬಂಡವಾಳ ಹೂಡಿಕೆ, ಮುಕ್ತ ಮನಸ್ಸಿನ ಅಹ್ವಾನ, ಪ್ರಕ್ರಿಯೆ ಸರಳೀಕರಣ, ಅಧಿಕಾರಿ ನಿಯೋಜನೆ ಎಂದು ಬಳಸಿರುವ ಪದಗಳು ಮೇಲ್ನೋಟಕ್ಕೆ ಸಿಎಂ ಕುಮಾರಸ್ವಾಮಿ ಸರಕಾರದ ಉದ್ಯಮಿಸ್ನೇಹಿ ನಡೆ ರೀತಿಯಲ್ಲಿ ಕಾಣಿಸುತ್ತಿವೆ.


ಸರಕಾರದಿಂದ ಹೊರ ಬೀಳುವ ಇಂತಹ ಮಾತುಗಳೇ ಕೊನೆಗೆ ಸಾವಿರಾರು ಕೋಟಿ ರೂಪಾಯಿಗಳ ಹಗರಣಕ್ಕೆ ಎಡೆಮಾಡಿಕೊಡುವ ಸಾಧ್ಯತೆಗಳಿವೆ. ಯಾಕೆಂದರೆ, ಇಂತಹದ್ದೇ ಒಂದು ಘನ ಉದ್ದೇಶದ ನೆಪ ಇಟ್ಟುಕೊಂಡು 20 ವರ್ಷಗಳ ಹಿಂದೆ, ಸರಕಾರ ಬಂಡವಾಳ ಹೂಡಿಕೆ ಹೆಸರಿನಲ್ಲಿ ನಡೆಸಿದ್ದು ಹೆಚ್ಚು ಕಡಿಮೆ 20 ಸಾವಿರ ಕೋಟಿ ರೂಪಾಯಿಗಳ ಭೂ ಹಗರಣ. ಅದೂ ರಾಜಧಾನಿ ಬೆಂಗಳೂರಿನ ಹೊರವಲಯದಲ್ಲಿ.

ಇದು ಉದ್ಯಮ ಸ್ಥಾಪನೆ, ಉದ್ಯೋಗ ಸೃಷ್ಟಿ, ಐಟಿ ಹಬ್ ನಿರ್ಮಾಣದ ಹೆಸರಿನಲ್ಲಿ ನಡೆದ ರಾಜ್ಯ ಕಂಡ ಬಹುದೊಡ್ಡ ಭೂ ಹಗರಣದ ಕತೆ.

ಅದು ಬೆಳ್ಳಂದೂರು:

ಬೆಳ್ಳಂದೂರಿನ ಇವತ್ತಿನ ಚಿತ್ರಣ. ಕೆರೆ ಏರಿಯಾದಲ್ಲಿ ಎದ್ದು ನಿಂತಿರುವ ಅಪಾರ್ಟ್‌ಮೆಂಟ್ ಇಲ್ಲಿ ನಡೆದ ಭೂ ಹಗರಣದ ಸಂಕೇತ. 

‘ನೊರೆ ಕೆರೆ’ಯ ಕಾರಣಕ್ಕೆ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿರುವ ಬೆಂಗಳೂರು ಹೊರವಲಯದ ಪ್ರದೇಶ ಬೆಳ್ಳಂದೂರು. ಕೇವಲ ಎರಡು ದಶಕಗಳ ಹಿಂದೆ ಇಲ್ಲಿ ಫಲವತ್ತಾದ ಭೂಮಿ ಇತ್ತು. ದಿನಕ್ಕೆ ಏನಿಲ್ಲ ಎಂದರೂ ಹತ್ತಾರು ಲೋಡು ತರಕಾರಿ ಕೆ. ಆರ್. ಮಾರುಕಟ್ಟೆಗೆ ಇಲ್ಲಿಂದ ಸರಬರಾಜಾಗುತ್ತಿತ್ತು. ದೊಡ್ಡ ಹಿಡುವಳಿದಾರರಿಂದ ಹಿಡಿದು, ಕೆರೆ ಪ್ರದೇಶದಲ್ಲಿ ತರಕಾರಿ ಬೆಳೆದು ಬದುಕುತ್ತಿದ್ದ ತಿಗಳ ಸಮುದಾಯದವರೆಗೆ ಇಲ್ಲಿ ಜನ ಬದುಕು ಕಟ್ಟಿಕೊಂಡಿದ್ದರು.

ಹೀಗೆ, ರಾಜಧಾನಿಯ ಪಕ್ಕದಲ್ಲಿದ್ದೂ ಫಲವತ್ತಾದ ಕೃಷಿ ಭೂಮಿಯನ್ನು ಉಳಿಸಿಕೊಂಡಿದ್ದ ಇಲ್ಲಿನ ಜನರ ಬದುಕು ಬದಲಾಗಿದ್ದು ವರ್ತುಲ ರಸ್ತೆ ಯೋಜನೆ. ರಿಂಗ್ ರೋಡ್ ಎಂದು ಗುರುತಿಸುವ ಈ ರಸ್ತೆ ಇಲ್ಲಿ ಹಾದು ಹೋದ ನಂತರ ಕೃಷಿ ಭೂಮಿಯ ಮೇಲೆ ಉದ್ಯಮಿಗಳ ಕಣ್ಣು ಬೀಳಲು ಶುರುವಾಯಿತು. ಒಂದಷ್ಟು ಸಣ್ಣ ಹಿಡುವಳಿದಾರರು ಅವತ್ತಿನ ಬಿಡುಗಾಸು ಬೆಲೆಗೆ ಭೂಮಿ ಮಾರಿಕೊಂಡರು.

ಅಂತಹ ಸಮಯದಲ್ಲಿ ಕರ್ನಾಟಕ ಸರಕಾರದಲ್ಲಿ ವಾಣಿಜ್ಯ ಹಾಗೂ ಕೈಗಾರಿಕಾ ಖಾತೆ ಸಚಿವರಾಗಿ ಉತ್ತರ ಕನ್ನಡ ಮೂಲದ, ಅವತ್ತಿಗಿನ್ನೂ ಎಣಿಸಬಹುದಾದಷ್ಟು ಆಸ್ತಿ ಒಡೆಯರಾಗಿದ್ದ ಆರ್‌. ವಿ. ದೇಶಪಾಂಡೆ ಹೊಣೆಗಾರಿಕೆ ವಹಿಸಿಕೊಂಡರು. ಅದು 2000ನೇ ಇಸವಿ. ಅಷ್ಟೊತ್ತಿಗಾಗಲೇ ಐದಾರು ವರ್ಷಗಳ ಅಂತರದಲ್ಲಿ ಬೆಂಗಳೂರು ಐಟಿ ಕ್ಷೇತ್ರದ ಕಾರಣಕ್ಕೆ ಹೆಸರು ಮಾಡಿತ್ತು. ಹೊಸ ತಲೆಮಾರಿನ ಮಧ್ಯಮ ವರ್ಗವೊಂದು ಹಣದ ಹರಿವನ್ನು ಕಾಣಲು ಶುರುಮಾಡಿತ್ತು. ಆ ವರ್ಗವನ್ನು ನೆಪವಾಗಿಟ್ಟುಕೊಂಡು, ಇನ್ನೊಂದಷ್ಟು ಐಟಿ ಉದ್ಯೋಗಗಳನ್ನು ಸೃಷ್ಟಿಸಲು ಸರಕಾರ ಮುಂದಾಯಿತು. ಐಟಿ ಕಾರಿಡಾರ್ ಎಂಬ ಯೋಜನೆ ಸಿದ್ಧವಾಯಿತು.

ಅಭಿವೃದ್ಧಿ ಕಲ್ಪನೆ:

ಅವತ್ತಿಗೆ ಸರಕಾರ ಆಲೋಚನೆ ಮಾಡಿದ ಐಟಿ ಕಾರಿಡಾರ್ ಯೋಜನೆ ಭವ್ಯವಾಗಿರುವ ಭವಿಷ್ಯವನ್ನು ಕಟ್ಟಿಕೊಡುವ ಸಾಧ್ಯತೆಯನ್ನು ಮುಂದು ಮಾಡಿತ್ತು. ವೈಟ್‌ಫೀಲ್ಡ್‌ ಹಾಗೂ ಎಲೆಕ್ಟ್ರಾನಿಕ್ ಸಿಟಿ ನಡುವಿನ ವರ್ತುಲ ರಸ್ತೆಯ ಎರಡೂ ಬದಿಯಲ್ಲಿದ್ದ ಕೃಷಿ ಭೂಮಿಯನ್ನು ವಶಕ್ಕೆ ಪಡೆದು, ಅಲ್ಲಿ ಐಟಿ ಪರಿಣಿತಿ ಹೊಂದಿದ ಕಂಪನಿಗಳಿಗೆ ಅವಕಾಶ ಮಾಡಿಕೊಡುವುದು ಯೋಜನೆಯ ಮೂಲ ಉದ್ದೇಶವಾಗಿತ್ತು.

ಅದಕ್ಕಾಗಿ ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಐಎಡಿಬಿ) ನೇತೃತ್ವದಲ್ಲಿ ಒಟ್ಟು 500 ಎಕರೆ ಜಮೀನನ್ನು ಗುರುತಿಸಲಾಯಿತು. ಅಷ್ಟೊತ್ತಿಗೆ ಇನ್ಫೋಸಿಸ್ ಐಟಿ ಕ್ಷೇತ್ರದಲ್ಲಿ ಹೆಸರು ಮಾಡಿತ್ತು. ಅದನ್ನು ಮುಂದಿಟ್ಟುಕೊಂಡು ಐಟಿ ಕಾರಿಡಾರ್ ಹೆಸರಿನಲ್ಲಿ ಬೆಳ್ಳಂದೂರು, ದೇವರ ಬೀಸನಹಳ್ಳಿ, ಕರಿಯಮ್ಮನ ಅಗ್ರಹಾರದಂತಹ ಹತ್ತಾರು ಹಳ್ಳಿಗಳ ಜಮೀನುಗಳನ್ನು ಕೆಐಎಡಿಬಿ ವಶಕ್ಕೆ ಪಡೆಯಲು ಮುಂದಾಯಿತು. ಸರಕಾರ ಭೂಮಿಯನ್ನು ಡೀ- ನೋಟಿಫೈ ಮಾಡುವ ಕೆಲಸ ಆರಂಭಿಸಿತು.

ಗಮನಾರ್ಹ ಸಂಗತಿ ಏನೆಂದರೆ, ಐಟಿ ಕಾರಿಡಾರ್ ಯೋಜನೆ ಜಾರಿಗೆ ಬರುವ ಮೊದಲೇ ಈ ಭಾಗದ ಜಮೀನುಗಳನ್ನು ರಿಯಲ್ ಎಸ್ಟೇಟ್ ಕುಳಗಳು ಖರೀದಿಸಲು ಆರಂಭಿಸಿದ್ದವು. ಜನರಿಗೆ ಏನು ನಡೆಯುತ್ತಿದೆ ಎಂಬ ಮಾಹಿತಿಯೂ ಇರಲಿಲ್ಲ. ಹೀಗಾಗಿ ಸಿಕ್ಕ ಬಿಡಿಗಾಸು ಹಣವೇ ದೊಡ್ಡ ಮೊತ್ತ ಎಂದು ಭಾವಿಸಿದ ಕೆಲವು ರೈತರು ತಮ್ಮ ಪಾರಂಪರಿಕ ಜಮೀನುಗಳನ್ನು ಮಾರಿಕೊಂಡರು. ಉಳಿದವರಿಗೆ ಸರಕಾರ, ಡಿ- ನೋಟಿಫಿಕೇಶನ್, ಕೆಐಎಡಿಬಿ, ಅಭಿವೃದ್ಧಿ, ಐಟಿ ಕ್ರಾಂತಿ ಹೆಸರಿನಲ್ಲಿ ಹೆದರಿಸಿ, ಬೆದರಿಸಿ ಜಮೀನು ಕಳೆದುಕೊಳ್ಳಬೇಕಾದ ಅನಿವಾರ್ಯತೆಯನ್ನು ಸೃಷ್ಟಿಸಲಾಯಿತು.

ಕಾಗದಕ್ಕೆ ಸೀಮಿತ:

ಹೀಗೆ, ಆರಂಭವಾದ ಐಟಿ ಕ್ರಾಂತಿ ಕಾಗದದ ಮೇಲೆ ಚೆನ್ನಾಗಿಯೇ ಕಾಣಿಸುತ್ತಿತ್ತು. 500 ಎಕರೆ ಭೂಮಿಯನ್ನು ವಶಕ್ಕೆ ಪಡೆಯಲು ಹೊರಟ ಕೆಐಎಡಿಬಿ ಕೊನೆಗೆ 434 ಎಕರೆ ಭೂಮಿಯನ್ನು ವಶಕ್ಕೆ ಪಡೆಯಿತು. ಅದರಲ್ಲಿ ಇನ್ಫೋಸಿಸ್‌ಗೆ 126 ಎಕರೆ, ಸತ್ಯಸಾಯಿ ಆಸ್ಪತ್ರೆಗೆ 5.5 ಎಕರೆಗಳನ್ನು ನೀಡುವುದಾಗಿ ತಿಳಿಸಿತು. ಅದರ ಜತೆಗೆ ವಿಕಾಸ್ ಟೆಲಿಕಾಂ, ರಾಯಲ್ ಫ್ರಾಗ್ನೆನ್ಸ್, ಸುಪ್ರಿಂ ಬಿಲ್ಡ್ ಕ್ಯಾಪ್, ಇಕೋ ಸ್ಪೇಸ್‌ ಹೆಸರಿನ ಐಟಿ ವಿಚಾರದಲ್ಲಿ ಯಾವುದೇ ಪರಿಣಿತಿಯಾಗಲೀ, ಹಿನ್ನೆಲೆಯಾಗಲಿ ಇಲ್ಲದ ಕಂಪನಿಗಳಿಗೆ ಸುಮಾರು 215 ಎಕರೆ ಭೂಮಿಯನ್ನು ಕೆಐಎಡಿಬಿ ನೀಡಿತು.

ಸದರಿ ಕಂಪನಿಗಳಿಗೆ ನೀಡಿದ ಭೂಮಿಯನ್ನು ಅವು ಮಾರಿಕೊಳ್ಳಲು ಆರಂಭಿಸಿದಾಗ ದೂರುಗಳು ದಾಖಲಾದವು. ಈ ಹಿನ್ನೆಲೆಯಲ್ಲಿ 2004ರಲ್ಲಿಯೇ ಕೆಐಎಡಿಬಿ ಈ ಸಂಬಂಧ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಪತ್ರವನ್ನೂ ಬರೆಯಿತು.

ಕೆಐಎಡಿಬಿ 2004ರಲ್ಲಿಯೇ ಬರೆದ ಪತ್ರ. 

ಆದರೆ, ಕೆಐಎಡಿಬಿ ವ್ಯಕ್ತಪಡಿಸಿದ ಸಂದೇಹ, ದಾಖಲಾದ ದೂರುಗಳು ಪತ್ರಕ್ಕಷ್ಟೆ ಸೀಮಿತವಾದವು. ಮುಂದೆ ಬಂದ ಎಲ್ಲಾ ಸರಕಾರಗಳೂ ಭೂ ಹಗರಣದ ಬಗೆಗೆ ಮೌನವಹಿಸಿದವು. ಅಷ್ಟೆ ಅಲ್ಲ, ಒಟ್ಟಾರೆ ಹಗರಣದ ಪಾಲುದಾರರೂ ಆದವು.

ಇಷ್ಟೆಲ್ಲಾ ನಡೆದು ಸುಮಾರು ಎರಡು ದಶಕಗಳು ಕಳೆದಿವೆ. ಐಟಿ ಕಾರಿಡಾರ್ ಯೋಜನೆಯಿಂದ ಇನ್ಫೋಸಿಸ್ ಹೊರನಡೆದು ದಶಕ ಕಳೆದಿದೆ.

“ಇನ್ಫೋಸಿಸ್ ಜನರಿಂದ ನೇರವಾಗಿ ಭೂಮಿ ಖರೀದಿಸುತ್ತೇವೆ ಎಂದರು. ಆದರೆ ಅದಕ್ಕೆ ಕೆಐಎಡಿಬಿಯಾಗಲೀ, ಸರಕಾರ ಆಗಲಿ ಆಸ್ಪದ ನೀಡಲಿಲ್ಲ. ಲಂಚ ನೀಡದೆ ಜನರಿಗೆ ಹೆಚ್ಚು ಹಣ ನೀಡಿದರೆ ರಿಯಲ್ ಎಸ್ಟೇಟ್‌ಗೆ ಸಮಸ್ಯೆಯಾಗುತ್ತದೆ ಎಂಬುದು ಅದರ ಹಿಂದಿದ್ದ ಆಲೋಚನೆ. ಕೊನೆಗೆ, ಅವರ ಮೇಲಾಟದಲ್ಲಿ ಇನ್ಫೋಸಿಸ್ ಸಹವಾಸವೇ ಬೇಡ ಎಂದು ಹೊರನಡೆಯಿತು. ಕೊನೆಗೆ ಉಳಿದವರು ನಕಲಿ ಐಟಿ ಸಂಸ್ಥೆಗಳು ಮಾತ್ರ,’’ ಎನ್ನುತ್ತಾರೆ ಬೆಳ್ಳಂದೂರಿನ ನಿವಾಸಿ ವಾಸುದೇವ ರೆಡ್ಡಿ.

ವಾಸುದೇವ ರೆಡ್ಡಿ ಬೆಳ್ಳಂದೂರಿನ ಜಮೀನುದಾರರು. ಅವರ ಒಂದಷ್ಟು ಜಮೀನು ‘ಐಟಿ ಕ್ರಾಂತಿ’ಗೆ ಆಹುತಿಯಾಗಿದೆ. ಉಳಿದ ಭೂಮಿಗಾಗಿ ಹೋರಾಟ ನಡೆಸಿಕೊಂಡು ಬರುತ್ತಿದ್ದಾರೆ. ರಾಷ್ಟ್ರಪತಿಯಿಂದ ಹಿಡಿದು ಪ್ರಧಾನಿವರೆಗೆ, ಮುಖ್ಯಮಂತ್ರಿಯಿಂದ ಹಿಡಿದು, ಪಾಲಿಕೆವರೆಗೆ ಅವರು ಎರಡು ದಶಕಗಳ ಅಂತರದಲ್ಲಿ ಬರೆದ ಸಾವಿರಾರು ಪತ್ರಗಳು ಅವರ ಮನೆಯಲ್ಲಿವೆ. ನ್ಯಾಯಾಲಯದಲ್ಲಿ ಹತ್ತಾರು ಪ್ರಕರಣಗಳನ್ನು ಅವರು ದಾಖಲಿಸಿದ್ದಾರೆ.

ಐಟಿ ಹಗರಣದ ಸ್ವರೂಪ:

ಸಾಮಾನ್ಯವಾಗಿ ಭೂ ಹಗರಣಗಳು ನಡೆದಾಗ ಸರ್ವೆ ನಂಬರ್‌ಗಳಿಂದ ಆರಂಭವಾಗಿ ಭೂಮಿಯ ಒಡೆತನ ಬದಲಾದ ಬಗೆಯನ್ನು ವಿವರಿಸುವುದು ತನಿಖಾ ವರದಿಗಳ ಸಾರಾಂಶವಾಗಿತ್ತದೆ. ಅದರ ಜತೆಗೆ ಸದರಿ ಭೂಮಿಯ ಸುತ್ತ ನಡೆಯುತ್ತಿರುವ ಕಾನೂನು ಹೋರಾಟ, ಅಧಿಕಾರಿಗಳು ಹಾಗೂ ರಾಜಕಾರಣಿಗಳು ಸೃಷ್ಟಿಸಿದ ನಕಲಿ ದಾಖಲೆಗಳ ವಿವರಗಳು ಇದರ ಒಳಗೆ ಸೇರಿಕೊಳ್ಳುತ್ತವೆ. ಐಟಿ ಕಾರಿಡಾರ್ ಯೋಜನೆಯಲ್ಲಿ ಏನೇನು ನಡೆಯಿತು ಎಂಬುದನ್ನು ಇದೇ ಆಧಾರದ ಮೇಲೆ ವಿವರಿಸಲು ಆರಂಭಿಸಿದರೆ, ಅದಕ್ಕೆ ಪದಮಿತಿ ಸಾಕಾಗುವುದಿಲ್ಲ ಮತ್ತು ಸಾಮಾನ್ಯ ಓದುಗರಿಗೆ ಅದನ್ನು ಅರ್ಥೈಸುವುದು ಕಷ್ಟವಾಗುತ್ತದೆ.

ಹತ್ತಾರು ಸಾವಿರ ಪುಟಗಳ ದಾಖಲೆಗಳು, ನಾನಾ ನ್ಯಾಯಾಲಯಗಳಲ್ಲಿ ನಡೆಯುತ್ತಿರುವ ಕದನಗಳನ್ನು ವಿವರಿಸಲು ಹೊರಟರೆ ತಲೆ ಚಿಟ್ಟುಹಿಡಿದು ಹೋಗುತ್ತದೆ. ಈ ಕಾರಣಕ್ಕೆ, ಇವ್ಯಾವುದನ್ನೂ ವಿವರಿಸಲು ಇಲ್ಲಿ ಹೋಗುವುದಿಲ್ಲ. ಬದಲಿಗೆ, ಐಟಿ ಕಾರಿಡಾರ್ ಯೋಜನೆಯ ಫಲಾನುಭವಿಗಳು ಮತ್ತು ಅವರ ಸಂಪರ್ಕಗಳನ್ನು ವಿವರಿಸಿದರೆ ಸಾಕು, ನಿಜಕ್ಕೂ ಅಲ್ಲಿ ನಡೆದಿದ್ದೇನು ಎಂಬುದು ಅರಿವಿಗೆ ಬರುತ್ತದೆ.

ಇತ್ತೀಚೆಗೆ ಬೆಳ್ಳಂದೂರು, ದೇವರ ಬೀಸನಹಳ್ಳಿ, ಕರಿಯಮ್ಮನ ಅಗ್ರಹಾರದ ಗ್ರಾಮಸ್ಥರು ಪ್ರಧಾನಿ ನರೇಂದ್ರ ಮೋದಿಗೆ ಬರೆದ ಪತ್ರ ಹಾಗೂ ಲಗತ್ತಿಸಿದ ದಾಖಲೆಗಳಲ್ಲಿ ಆರೋಪಿಗಳಾಗಿರುವುದು ರಾಜ್ಯ ಸಚಿವ ಸಂಪುಟದಲ್ಲಿರುವ ಆರ್. ವಿ. ದೇಶಪಾಂಡೆ ಹಾಗೂ ಕೆ. ಜೆ. ಜಾರ್ಜ್‌.

ಮೇಲೆ ಹೇಳಿದ ವಿಕಾಸ್ ಟೆಲಿಕಾಂ, ರಾಯಲ್ ಫ್ರಾಗ್ನೆನ್ಸ್, ಸುಪ್ರಿಂ ಬಿಲ್ಡ್ ಕ್ಯಾಪ್, ಇಕೋ ಸ್ಪೇಸ್‌ ಮತ್ತಿತರ ಕಂಪನಿಗಳು ಕೆಐಎಡಿಬಿಯಿಂದ ಪಡೆದುಕೊಂಡ ಭೂಮಿಯಲ್ಲಿ ಬಹುಭಾಗವನ್ನು ಮಾರಿಕೊಂಡಿವೆ. ಅಲ್ಲೀಗ ತಲೆ ಎತ್ತಿರುವ ಕಟ್ಟಡಗಳ ಮಾಲೀಕತ್ವವನ್ನು ಹುಡುಕಿಕೊಂಡು ಹೋದರೆ ಆರ್. ವಿ. ದೇಶಪಾಂಡೆ, ಕೆ. ಜೆ. ಜಾರ್ಜ್‌ ಹೆಸರುಗಳ ಜತೆಗೆ, ಮುಖ್ಯಮಂತ್ರಿ ಕುಮಾರಸ್ವಾಮಿ ಕುಟುಂಬದ ಹೆಸರುಗಳೂ ಕಾಣಿಸಿಕೊಳ್ಳುತ್ತವೆ. ಎಸ್‌. ಎಂ. ಕೃಷ್ಣರಿಂದ ಹಿಡಿದು ಪಿಜಿಆರ್ ಸಿಂಧ್ಯಾವರೆಗೆ ಆರೋಪಗಳು ಪೇರಿಸಲ್ಪಟ್ಟಿವೆ. ಸಿ. ಎಂ. ಉದಾಸಿ ಪುತ್ರ, ದಿವಂಗತ ಮಾಜಿ ಮುಖ್ಯಮಂತ್ರಿ ಧರ್ಮ ಸಿಂಗ್ ಪುತ್ರ, ಮಾಜಿ ಸಭಾಪತಿ ಕೋಳಿವಾಡ ಪುತ್ರ ಹೀಗೆ ನಾನಾ ರಾಜಕಾರಣಿಗಳ ಕುಟುಂಬಸ್ಥರು ಈ ಭೂಮಿ ಪರಭಾರೆ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂದು ದಾಖಲೆಗಳು ಆರೋಪಿಸುತ್ತವೆ.

ವಿಕಾಸ್ ಟೆಲಿಕಾಂ, ರಾಯಲ್ ಫ್ರಾಗ್ನೆನ್ಸ್, ಸುಪ್ರಿಂ ಬಿಲ್ಡ್ ಕ್ಯಾಪ್, ಇಕೋ ಸ್ಪೇಸ್‌ ಮತ್ತಿತರ ನಕಲಿ ಐಟಿ ಸಂಸ್ಥೆಗಳ ಹೆಸರಿನಲ್ಲಿ ನಡೆದ ಈ ಹಗರಣದ ಒಟ್ಟು ಮೊತ್ತ ಸುಮಾರು 20 ಸಾವಿರ ಕೋಟಿ ರೂಪಾಯಿ ಎಂದು ದೂರುದಾರರು ಅಂದಾಜಿಸಿದ್ದಾರೆ. ಇದರ ಜತೆಗೆ 1999-2000 ಹಾಗೂ 2013-14ರ ನಡುವೆ ಐಟಿ ಹೆಸರಿನಲ್ಲಿ ಬಂದ ಯೋಜನೆಗಳ ಹೆಸರಿನಲ್ಲಿ ನಡೆದ ಒಟ್ಟಾರೆ ಭೂ ಹಗರಣದ ಗಾತ್ರವೇ ಸುಮಾರು 4 ಲಕ್ಷ ಕೋಟಿ ಮುಟ್ಟಬಹುದು ಎಂಬ ಅಂದಾಜಿದೆ.

ಹಗರಣ ನಡೆದಿರುವುದಕ್ಕೆ ದಾಖಲೆಗಳಿವೆ. ಹಗರಣದ ಪ್ರಮುಖ ಆರೋಪಿಗಳು ರಾಜ್ಯವನ್ನು ಆಳುತ್ತಿದ್ದಾರೆ. ಬೆಳ್ಳಂದೂರು ಗ್ರಾಮಸ್ಥರು ದಾಖಲಿಸಿದ ದೂರಿನ ವಿಚಾರಣೆ ಈಗ ಜನಪ್ರತಿನಿಧಿಗಳ ಪ್ರಕರಣಗಳ ವಿಚಾರಣೆಗಾಗಿ ಸ್ಥಾಪಿಸಿದ ವಿಶೇಷ ನ್ಯಾಯಾಲಯದ ಅಂಗಳದಲ್ಲಿದೆ. ಸದ್ಯ ಉಳಿದಿರುವುದು ಅದೊಂದೆ ಭರವಸೆ.

ಈ ಭಾಗದ ರೈತರ ಪ್ರತಿನಿಧಿಯಾಗಿ ಹೋರಾಟದ ಭರವಸೆಯನ್ನು ಜೀವಂತವಾಗಿಟ್ಟುಕೊಂಡಿರುವ ವಾಸುದೇವ ರೆಡ್ಡಿ ಅವರನ್ನು ಬೆಳ್ಳಂದೂರಿನ ಎಕೋ ಸ್ಪೇಸ್ ಕಟ್ಟಡದ ಕೆಫೆಟೇರಿಯಾಕ್ಕೆ ‘ಸಮಾಚಾರ’ ಕರೆದುಕೊಂಡು ಹೋಯಿತು.

ಬೆಳ್ಳಂದೂರಿನ ಎಕೋ ಸ್ಪೇಸ್ ಕೆಫೆಟೇರಿಯಾದಲ್ಲಿ ವಾಸುದೇವ ರೆಡ್ಡಿ. 

ಅದು ಒಂದು ಕಾಲದಲ್ಲಿ ಅವರದ್ದೇ ಜಮೀನಿದ್ದ ಜಾಗ. “ನಿಮಗೆ ಇಲ್ಲಿ ಕುಳಿತಾಗ ಏನನ್ನಿಸುತ್ತೆ?’’ ಎಂಬ ಪ್ರಶ್ನೆಯನ್ನು ರೆಡ್ಡಿ ಮುಂದಿಟ್ಟಾಗ, “ಹೊಟ್ಟೆ ಉರಿಯುತ್ತಿದೆ. ಇವರ ರಿಯಲ್ ಎಸ್ಟೇಟ್ ಅಭಿವೃದ್ಧಿಗಾಗಿ ನಮ್ಮ ಫಲವತ್ತಾದ ಭೂಮಿ ನಾಶವಾಯಿತು. ಇವತ್ತು ಇದೇ ಜಾಗದಲ್ಲಿ ಸಾವಿರಾರು ವಿದ್ಯಾವಂತರು ನಿತ್ಯ ಓಡಾಡುತ್ತಾರೆ. ಐಟಿ ಎಂಜಿನಿಯರ್‌ಗಳು ಎಂಬ ಟ್ಯಾಗ್ ಅವರಿಗಿದೆ. ಅವರೆಲ್ಲಾ ಒಮ್ಮೆ ನಾವು ನಿತ್ಯ ಕೆಲಸ ಮಾಡುವ ಜಾಗ ಹಿಂದೆ ಏನಾಗಿತ್ತು ಎಂದು ಆಲೋಚನೆ ಮಾಡಿದರೆ ಸಾಕು, ಅವರು ಹೇಳುವ ಅಭಿವೃದ್ಧಿಯ ನಿಜವಾದ ನೆಲೆ ಯಾವುದು ಎಂಬುದು ಅರ್ಥವಾಗುತ್ತದೆ. ಆದರೆ ಅವರು ಇಎಂಐಗಳ ಜಂಜಾಟದಲ್ಲಿ ಮುಳುಗಿ ಹೋಗಿದ್ದಾರೆ,’’ ಎಂದು ಕಣ್ಣಲ್ಲಿ ನೀರು ತುಂಬಿಕೊಂಡರು.