Home Investigation ಮೈಸೂರಿನ ‘ಎಲೆ ತೋಟ’ಗಳ ಸಮಾಧಿ ಮೇಲೆ ಎದ್ದು ನಿಂತ ಜೆಎಸ್ಎಸ್ ಹಾಸ್ಪಿಟಲ್

ಮೈಸೂರಿನ ‘ಎಲೆ ತೋಟ’ಗಳ ಸಮಾಧಿ ಮೇಲೆ ಎದ್ದು ನಿಂತ ಜೆಎಸ್ಎಸ್ ಹಾಸ್ಪಿಟಲ್

SHARE

ಇದು ಮೈಸೂರು ನಗರದ ಹೃದಯ ಭಾಗದಲ್ಲಿರುವ ಅಶೋಕಪುರ ಎಂಬ ದಲಿತರು ಹೆಚ್ಚಾಗಿ ವಾಸಿಸುವ ಪ್ರದೇಶದ ನಿವಾಸಿ ವೆಂಕಟೇಶ್ ಅವರ ನೋವಿನ ಮಾತುಗಳು. ತಮ್ಮ ಪುಟ್ಟ ಮನೆ ಜಗಲಿಯ ಫೈಬರ್ ಚೇರಿನಲ್ಲಿ ಕುಳಿತಿದ್ದ ಅವರ ಕೈಲಿ 15 ದಿನಗಳ ಹಿಂದಷ್ಟೆ ಸಿಕ್ಕ ‘ಮೈಸೂರು ತಾಲೂಕು ಭೂನ್ಯಾಯ ಮಂಡಳಿ’ಯ ಆದೇಶ ಪ್ರತಿ ಇತ್ತು. ಅದರ ಎರಡನೇ ಪುಟದಲ್ಲಿ, ‘ವೆಂಕಟೇಶ್ ಬಿನ್ ಯಾಲಕ್ಕಯ್ಯ (ಮೃತರು)’ ಎಂದು ಬರೆದಿದ್ದ ಸಾಲುಗಳ ಮೇಲೆ ಹಿರಿಯ ವಯಸ್ಸಿನ ವೆಂಕಟೇಶ್ ಅವರ ನಡಗುವ ಕೈಗಳು ಸವರುತ್ತಿದ್ದವು.

ಅಶೋಕಪುರದ ವೆಂಕಟೇಶ್. 

ಅದು ವೀಳ್ಯದೆಲೆ ಹಿರಿಮೆ:

ಮೈಸೂರು ಅಂದಾಕ್ಷಣ ನೆನಪಾಗುವುದು ಮೈಸೂರು ಪಾಕ್, ಮೈಸೂರು ಮಲ್ಲಿಗೆ, ಈರನಕೆರೆ ಬದನೆಕಾಯಿ ಪದಾರ್ಥಗಳು. ಅವುಗಳ ಸಾಲಿನಲ್ಲಿ ನಿಲ್ಲುವುದು ಮೈಸೂರು ವೀಳ್ಯದೆಲೆ. ಇವುಗಳನ್ನು ಬೆಳೆಯುತ್ತಿದ್ದ ಪ್ರದೇಶವನ್ನು ಎಲೆ ತೋಟಗಳು ಎಂದು ಸ್ಥಳೀಯವಾಗಿ ಗುರುತಿಸಲಾಗುತ್ತಿದೆ. ರಾಜಾಡಳಿತದಲ್ಲಿ ಅರಮನೆಗೆ ಪೂರೈಕೆಯಾಗುತ್ತಿದ್ದ ವೀಳ್ಯೆದೆಲೆಗಳನ್ನು ಪೂರೈಕೆ ಮಾಡುತ್ತಿದ್ದವರು ಅಶೋಕಪುರದ ದಲಿತರು.

“ಅರಮನೆಗೆ ಬೆಂಕಿ ಬಿದ್ದಾಗ ಅದನ್ನು ನಂದಿಸಿದವರು ಅಶೋಕಪುರದ ಜನ. ಆ ಸಮಯದಲ್ಲಿ ಅರಮನೆಯ ಬೆಲೆಬಾಳುವ ವಸ್ತುಗಳನ್ನು ರಕ್ಷಿಸಿ ಅರಸರ ಮುಂದೆ ಸುರಿದ ದಲಿತರ ಪ್ರಾಮಾಣಿಕತೆ ಮೆಚ್ಚಿ ಅರಸರು ಕಸಬಾ ಹೋಬಳಿಯಲ್ಲಿ ವೀಳ್ಯದೆಲೆ ತೋಟಗಳನ್ನು ದಾನವಾಗಿ ಕೊಟ್ಟಿದ್ದರು. ಬ್ರಿಟಿಷ್ ಅತಿಥಿಗಳು ಬಂದಾಗ ವೀಳ್ಯದೆಲೆಗಳನ್ನು ಇದೇ ತೋಟಗಳಿಂದ ಅರಮನೆಗೆ ಕಳುಹಿಸುತ್ತಿದ್ದೆವು,’’ ಎಂದು ವೀಳ್ಯದೆಲೆ ತೋಟಗಳು ಹಾಗೂ ಅಶೋಕನಗರ ದಲಿತರ ಸಂಬಂಧವನ್ನು ಬಿಚ್ಚಿಡುತ್ತಾರೆ ನಿವಾಸಿ ಅಣ್ಣಯ್ಯ.

“ಹಿಂದೆ ನಗರದಲ್ಲಿ ಒಳಚರಂಡಿ ವ್ಯವಸ್ಥೆ ಇರಲಿಲ್ಲ. ಕೊಳಚೆ ನೀರನ್ನೇ ನಮ್ಮ ತೋಟಗಳಿಗೆ ಹಾಯಿಸಿಕೊಂಡು ವೀಳ್ಯದೆಲೆ ಬೆಳೆಯುತ್ತಿದ್ದೆವು. ಅವುಗಳಿಗೆ ಒಳ್ಳೆಯ ಮಾರಕಟ್ಟೆಯೂ ಇತ್ತು. ಒಂದು ಕುಟುಂಬ ನೆಮ್ಮದಿಯಾಗಿ ಬದುಕಲು ಸಾಕಾಗುವಷ್ಟು ದುಡಿಮೆ ಆಗುತ್ತಿತ್ತು. ಆದರೆ ಜೆಎಸ್‌ಎಸ್‌ ಆಸ್ಪತ್ರೆ ಬಂದ ಮೇಲೆ ಬದುಕು ಬೀದಿಗೆ ಬಂದು ನಿಂತಿದೆ,’’ ಎನ್ನುತ್ತಾರೆ ಅಶೋಕಪುರದ ಯುವಕ ಜೈಶಂಕರ್. ಶಂಕರ್ ತಂದೆ ತುಂಡು ಭೂಮಿಯನ್ನು ಉಳಿಸಿಕೊಳ್ಳಲು ಹೋರಾಟ ನಡೆಸಿಕೊಂಡು ಬಂದವರು. ಇವತ್ತು ಅದೇ ಹೊಣೆ ಮಗನ ಹೆಗಲೇರಿದೆ. ಚಿಕ್ಕವಯಸ್ಸಿನಲ್ಲಿಯೇ ಕೋರ್ಟು, ಕಚೇರಿ ಅಲೆಯಲು ಶುರುಮಾಡಿದ ಜೈಶಂಕರ್, ಅದೇ ಕಾರಣಕ್ಕೆ ಕಾನೂನು ಪದವಿ ಕಲಿಯಲು ಕಾಲೇಜು ಸೇರಿ ಒಂದು ವರ್ಷ ಕಳೆದಿದೆ.

ಜೈಶಂಕರ್; ಕಾನೂನು ಕಲಿಯುತ್ತಿರುವ ಅಶೋಕನಗರದ ಯುವಕ. 

“ನ್ಯಾಯಾಂಗ ಹೋರಾಟ ಬಹಳ ಕಷ್ಟ. ಅದು ಹಣ ಇದ್ದವರಿಗೆ ಸುಲಭ, ನಮ್ಮಂತವರಿಗೆ ಅಲ್ಲ. ಅದಕ್ಕಾಗಿ ನಾನೇ ವಕೀಲಿಕೆ ಕಲಿಯಲು ಹೊರಟಿದ್ದೀನಿ. ಆದರೆ ಅಷ್ಟೊತ್ತಿಗೆ ಈ ಜಮೀನು ಕೂಡ ಉಳಿಯುವುದು ಕಷ್ಟವಾಗಿದೆ. ಭೂನ್ಯಾಯ ಮಂಡಳಿ ಆದೇಶ ನಮ್ಮ ಹೋರಾಟವನ್ನು ನಾಲ್ಕು ಸಾಲುಗಳಲ್ಲಿ ಮುಗಿಸಿ ಹಾಕಿದೆ,’’ ಎನ್ನುತ್ತಾರೆ ಜೈಶಂಕರ್.

ಕೆಲವು ದಿನಗಳ ಹಿಂದೆ ‘ಸಮಾಚಾರ’ದ ಈ ವರದಿಗಾರರನ್ನು ವೀಳ್ಯದೆಲೆ ತೋಟಗಳಿದ್ದ ಜಾಗಗಳಿಗೆ ಕರೆದುಕೊಂಡು ಹೋದ ಜೈಶಂಕರ್ ಅವುಗಳ ಹಿರಿಮೆಯನ್ನೂ ವಿವರಿಸುತ್ತಿದ್ದರು.

ಮೈಸೂರಿನ ಅಸ್ಮಿತೆಯ ಭಾಗವಾಗಿದ್ದ ವೀಳ್ಯದೆಲೆ ತೋಟಗಳು ನಗರ ಬೆಳೆದ ನಂತರವೂ ಹೃದಯ ಭಾಗದಲ್ಲಿ ವಿರಾಜಮಾನವಾಗಿದ್ದವು. ಭೂ ಸುಧಾರಣೆ ಕಾಯ್ದೆ ಜಾರಿಗೆ ಬಂದ ನಂತರ ಕುಂಟೆಗಳ ಲೆಕ್ಕದಲ್ಲಿ ವೀಳ್ಯದೆಲೆ ತೋಟಗಳ ಗೇಣಿದಾರರಾಗಿದ್ದ ಅಶೋಕಪುರ ದಲಿತರು ಸದರಿ ಭೂಮಿಯ ಮಾಲೀಕರಾದರು. ಆದರೆ, ಅದರ ಜತೆಗೆ ಸೃಷ್ಟಿಯಾದ ಕಾನೂನು ಹೋರಾಟ, ಮುಂದಿನ 4 ದಶಕಗಳ ಅಂತರದಲ್ಲಿ ನಡೆದ ಬದಲಾವಣೆಗಳು, ಮೈಸೂರು ತಾಲೂಕಿನ ಕಸಬಾ ಹೋಬಳಿ ವ್ಯಾಪ್ತಿಯಲ್ಲಿರುವ ವೀಳ್ಯದೆಲೆ ತೋಟಗಳನ್ನು ನೆಲಸಮಗೊಳಿಸಿವೆ. ಇದರ ಮಾಲೀಕರಾಗಿದ್ದ ದಲಿತರು ಒತ್ತಡಗಳ ಕಾರಣಕ್ಕೆ, ಕಾನೂನು ಹೋರಾಟದ ಭಾರವನ್ನು ಹೊರಲಾರದೆ, ಸ್ಥಳೀಯ ಮಧ್ಯವರ್ತಿ ಕುತಂತ್ರಿಗಳ ತಂತ್ರಗಾರಿಗಳಿಗೆ ಬಲಿಯಾಗಿ ಇದ್ದ ತುಂಡು ಭೂಮಿಯನ್ನೂ ಮಾರಾಟ ಮಾಡಿದ್ದಾರೆ. ಅಳಿದುಳಿದ ದಲಿತ ತುಂಡು ತೋಟಗಳ ಮಾಲೀಕರೂ ಇತ್ತೀಚಿನ ಭೂನ್ಯಾಯ ಮಂಡಳಿಯ ಆದೇಶದಿಂದಾಗಿ ಅಸ್ಥಿತ್ವ ಕಳೆದುಕೊಂಡಿದ್ದಾರೆ.

ಇದೊಂದು ಆದೇಶ:

ಮೈಸೂರು ತಾಲೂಕು ಭೂನ್ಯಾಯ ಮಂಡಳಿ ಆದೇಶ. 

ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆಗೆ ನೀತಿ ಸಂಹಿತೆ ಜಾರಿಯಾಗುವ ಒಂದು ದಿನ ಮುಂಚೆ ತಾಲೂಕು ಭೂನ್ಯಾಯ ಮಂಡಳಿ ಕಸಬಾ ಹೋಬಳಿಯ ಸರ್ವೆ ನಂಬರ್ 16 (3 ಎಕರೆ 11 ಗುಂಟೆ) ಹಾಗೂ 17 (0.18 ಗುಂಟೆ) ರಲ್ಲಿ ಒಟ್ಟು 3. 29 ಎಕರೆ ಜಮೀನಿನ ಕುರಿತು ಸಲ್ಲಿಸಿ ಉಳಿದಿದ್ದ 48 ಅರ್ಜಿಗಳನ್ನು ವಜಾ ಮಾಡಿದೆ. ಆದೇಶದ ಪ್ರತಿಯಲ್ಲಿ ಬದುಕಿರುವವರನ್ನೂ ಸಾಯಿಸಿರುವ ಭೂನ್ಯಾಯ ಮಂಡಳಿಯ ಅಧ್ಯಕ್ಷೆ ಕುಸುಮಾ ಕುಮಾರಿ ಅವರ ಆದೇಶ, ಅರ್ಜಿದಾರರು ‘ನಿಷ್ಕ್ರಿಯ’ರಾಗಿದ್ದಾರೆ ಎಂದೂ ಹೇಳಿದೆ. ಇದನ್ನು ತೆರೆದ ನ್ಯಾಯಾಲಯದಲ್ಲಿ ಘೋಷಿಸಿದೆ ಎಂದು ಆದೇಶದ ಪ್ರತಿಯಲ್ಲಿ ಹೇಳಲಾಗಿದೆಯಾದರೂ, ‘ಹೀಗೊಂದು ಆದೇಶ ಆಗಿದೆ’ ಎಂದು ಅಶೋಕಪುರದ ದಲಿತ ಅರ್ಜಿದಾರರ ಗಮನಕ್ಕೆ ಬಂದಿದ್ದು 15 ದಿನಗಳ ಹಿಂದೆ ಅಷ್ಟೆ.

“ಕಾನೂನು ವ್ಯಾಜ್ಯ ಆರಂಭವಾಗಿದ್ದು 1979ರಲ್ಲಿ. ಅಲ್ಲಿಂದ ಎರಡು ಬಾರಿ ಭೂನ್ಯಾಯ ಮಂಡಳಿಯಲ್ಲಿ ನಮ್ಮ ಪರವಾಗಿ ಆದೇಶವಾಗಿತ್ತು. ಗೇಣಿದಾರರ ಹಕ್ಕನ್ನು ಎತ್ತಿ ಹಿಡಿದಿತ್ತು. ಆದರೆ, ಜಮೀನಿನ ಮಾಲೀಕತ್ವವನ್ನು ಪ್ರಶ್ನಿಸಿರುವ ಎಂ. ಪಿ. ನಾಗರಾಜ್‌ ಪರವಾಗಿ ಮೂರನೇ ಬಾರಿಗೆ ನ್ಯಾಯ ಮಂಡಳಿ ಆದೇಶ ನೀಡಿದೆ. ಆದರೆ ಅದಕ್ಕೆ ನಾವು ನ್ಯಾಯಾಲಯಕ್ಕೆ ಹಾಜರಾಗಿಲ್ಲ, ಅಗತ್ಯ ದಾಖಲೆಗಳನ್ನು ಸಲ್ಲಿಸಿಲ್ಲ ಎಂದು ಹೇಳಿದೆ. ನಾವು ಪ್ರತಿ ಹಿಯರಿಂಗ್‌ ಟೈಮಲ್ಲೂ ಹಾಜರಿದ್ದು ನಮ್ಮ ವಾದ ಮಂಡಿಸಿದ್ದೇವೆ. ದಾಖಲೆಗಳನ್ನು ನೀಡಿದ್ದೇವೆ. ಇದನ್ನು ನಿಷ್ಕ್ರಿಯ ಎಂದು ಹೇಳಲು ಸಾಧ್ಯವಾ?,’’ ಎಂದು ಪ್ರಶ್ನಿಸುತ್ತಾರೆ ವೆಂಕಟೇಶ್.

ಯಾರದ್ದು ಈ ಜೆಸ್‌ಎಸ್‌ ಆಸ್ಪತ್ರೆ?:

ಸದ್ಯ ವೆಂಕಟೇಶ್ ಭೂನ್ಯಾಯ ಮಂಡಳಿ ಎಸಗಿದ ಆದೇಶದಲ್ಲಿನ ಅಪಚಾರಗಳನ್ನು ಹೇಳುತ್ತಾರೆ. ಅವರ ನೆನಪಿನಾಳದಲ್ಲಿ ಇದನ್ನು ಮೀರಿದ ಭಯಾನಕ ಅನುಭವಗಳೂ ಇವೆ. ಇಷ್ಟಕ್ಕೂ ಈ ಜಾಗದಲ್ಲಿ ನಡೆಯುತ್ತಿರುವುದಾದರೂ ಏನು ಎಂದು ಹುಡುಕಿಕೊಂಡು ಹೊರಟರೆ ಇದೇ ಕಸಬಾ ಹೋಬಳಿಯ ಒಂದು ಕಾಲದ ವೀಳ್ಯದೆಲೆ ತೋಟಗಳ ಜಾಗದಲ್ಲಿ ಇವತ್ತು ಭವ್ಯ ಕಟ್ಟಡವೊಂದು ತಲೆ ಎತ್ತಿ ನಿಂತಿರುವುದು ಕಾಣಿಸುತ್ತದೆ. ಅದರ ಮೇಲೆ ‘ಜೆಎಸ್‌ಎಸ್‌ ಆಸ್ಪತ್ರೆ’ ಎಂಬ ಫಲಕ ರಾರಾಜಿಸುತ್ತಿದೆ.

ಜೆಎಸ್‌ಎಸ್‌ ಆಸ್ಪತ್ರೆಯ ಫಲಕ. 

ಮೇಲ್ನೋಟಕ್ಕೆ ಇದು ಮೈಸೂರು ಭಾಗದಲ್ಲಿ ಪ್ರಭಾವ ಹೊಂದಿರುವ ಜೆಸ್‌ಎಸ್‌ ಮಠದ ಆಸ್ತಿ ಎನ್ನಿಸುತ್ತದೆ. ಸಾಮಾನ್ಯ ಜನ ಕೂಡ ಹಾಗೆ ನಂಬಿಕೊಂಡಿದ್ದಾರೆ. ಇದರ ಭೂ ವ್ಯವಹಾರ ಕೂಡ ಸಂಸ್ಥಾನದಲ್ಲಿ ನಡೆಯುತ್ತದೆ. ಆದರೆ, ‘ಸಮಾಚಾರ’ಕ್ಕೆ ಲಭ್ಯ ಇರುವ ಜೆಎಸ್‌ಎಸ್‌ ಆಸ್ಪತ್ರೆ ಮಾಹಿತಿ ಬೇರೆಯದೇ ಕತೆಗಳನ್ನು ಹೇಳುತ್ತಿವೆ.

ಜೆಎಸ್‌ಎಸ್‌ ಆಸ್ಪತ್ರೆ ಮಾರ್ಚ್‌ 23, 2015ರಲ್ಲಿ ಕೆಪಿಎಂಇಎ ಕಾಯ್ದೆ ಅಡಿಯಲ್ಲಿ ಮೈಸೂರಿನಲ್ಲಿ ‘ಲಾಭ ರಹಿತ’ ಸಂಸ್ಥೆಯಾಗಿ ನೋಂದಣಿಯಾಗಿದೆ. ‘ಆರೋಗ್ಯ ಮತ್ತು ಕುಟುಂಬ ಕಲ್ಯಾಣ’ವನ್ನು ತನ್ನ ಕ್ಷೇತ್ರ ಎಂದು ಹೇಳಿಕೊಂಡಿದೆ. ಭೋಜರಾಜ್ ಪಂಜೂಮಾಲ್ ಸುರೇಶ್ ಎಂಬುವವರು ಇದರ ಅಧ್ಯಕ್ಷರಾಗಿದ್ದರೆ, ನಿವೃತ್ತ ಅಧಿಕಾರಿ ಚಂದ್ರಶೇಖರ್ ಜಿ ಬೆಟ್‌ಸೂರ್ಮಠ್ ಇದರ ಸದಸ್ಯರಾಗಿದ್ದಾರೆ. 2014- 15ರಿಂದ 2018ರವರೆಗೆ ಆರ್ಥಿಕ ವಹಿವಾಟು ನಡೆಸಿರುವ ಈ ಲಾಭ ರಹಿತ ಸಂಸ್ಥೆ, ಬಡವರಿಗೆ ಹಾಗೂ ನಿರ್ಗತಿಕರಿಗೆ ಕೈಗೆಟಕುವ ದರದಲ್ಲಿ ಗುಣಮಟ್ಟದ ಆರೋಗ್ಯ ಸೇವೆ ನೀಡುತ್ತಿರುವುದು ತನ್ನ ಸಾಧನೆ ಎಂದು ನೀತಿ ಆಯೋಗದ ಮುಂದೆ ಹೇಳಿಕೊಂಡಿದೆ. ತನ್ನ ಕಾರ್ಯಾಚರಣೆಗೆ ಖಾಸಗಿ ದೇಣಿಗೆಗಳನ್ನು ಸಂಗ್ರಹಿಸಿದ್ದು, ಸರಕಾರದಿಂದ ಯಾವುದೇ ನೆರವನ್ನು ಪಡೆಯಲಿಲ್ಲ ಎಂದು ಹೇಳಿದೆ.

ಇನ್ನು, ಜೆಎಸ್‌ಎಸ್‌ ಆಸ್ಪತ್ರೆಯ ಸದಸ್ಯ ಸಿ. ಜಿ. ಬೆಟ್‌ಸೂರ್ಮಠ್ ಮೈಸೂರು ನಗರದ ಜನರ ಪಾಲಿಗೆ ಚಿರಪರಿಚಿತ ಅಧಿಕಾರಿಯ ಮುಖ. ಮೂಲತಃ ಕೆಎಎಸ್‌ ಅಧಿಕಾರಿಯಾಗಿರುವ ಬೆಟ್‌ಸೂರ್ಮಠ್ 1985ರಿಂದ 2008ರವರೆಗೆ ನವಲಗುಂದ, ಗದಗ, ದಾವಣಗೆರೆ, ಬಳ್ಳಾರಿಗಳಲ್ಲಿ ನಾನಾ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದವರು. 2009ರಲ್ಲಿ ಅವರು ಮೊದಲ ಬಾರಿಗೆ ಮೈಸೂರಿಗೆ ಹೆಚ್ಚುವರಿ ಜಿಲ್ಲಾಧಿಕಾರಿಯಾಗಿ ಕಾಲಿಟ್ಟರು. ಅಲ್ಲಿಂದ 2016ರವರೆಗೆ ಮೈಸೂರಿನಲ್ಲಿಯೇ ಮೂಡಾ, ಪುರಾತತ್ವ ಇಲಾಖೆಗಳಲ್ಲಿ ಕೆಲಸ ಮಾಡಿದರು. ನಿವೃತ್ತರಾದ ನಂತರ ಜೆಎಸ್‌ಎಸ್‌ ಮಠದಲ್ಲಿ ಆಡಳಿತ ವಿಭಾಗದ ಮುಖ್ಯಸ್ಥರಾಗಿದ್ದಾರೆ.

ಚಂದ್ರಶೇಖರ್ ಜಿ. ಬೆಟ್‌ಸೂರ್ಮಠ್. 

ಮೈಸೂರು ವೀಳ್ಯದೆಲೆಗಳ ಕುರಿತು ವಿಶೇಷ ವರದಿಗೆ ಮಾಹಿತಿ ಬೇಕಿತ್ತು ಎಂದು ‘ಸಮಾಚಾರ’ ಬೆಟ್‌ಸೂರ್ಮಠ್ ಅವರನ್ನು ಸಂಪರ್ಕಿಸಿದ್ದಾಗ, “ಎಂ. ಜಿ. ರಸ್ತೆ ಪಕ್ಕದ ವೀಳ್ಯದೆಲೆ ತೋಟಗಳಿಗಿಂತ ಆನಂದವಾಡಿ ಎಂಬಲ್ಲಿ ಒಳ್ಳೆಯ ತೋಟಗಳಿವೆ. ಅಲ್ಲಿ ಮಾತನಾಡಿಸಿ,’’ ಎಂದು ಸಲಹೆ ನೀಡಿದರು. ಎಂ. ಜಿ. ರಸ್ತೆ ಪಕ್ಕದಲ್ಲಿನ ವೀಳ್ಯದೆಲೆ ತೋಟಗಳಲ್ಲಿ ಆಸ್ಪತ್ರೆ ತಲೆ ಎತ್ತಿದೆ, ಇದಕ್ಕೆ ಸದಸ್ಯರು ನೀವು ಎಂದಾಗ, “ಅದು ದೊಡ್ಡವರ ವಿಚಾರ. ನನ್ನ ಹೆಸರು ಇದೆ ಅಷ್ಟೆ,’’ ಎಂದು ಹಾರಿಕೆ ಉತ್ತರ ನೀಡಿದರು. ಕಾನೂನು ವ್ಯಾಜ್ಯ ಹಾಗೂ ದಲಿತರ ಅಹವಾಲುಗಳನ್ನು ನೇರವಾಗಿ ಪ್ರಸ್ತಾಪಿಸಿದಾಗ, “ನಾವು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿಲ್ಲ,’’ ಎಂದರು.

ಬೆಟ್‌ಸೂರ್ಮಠ್ ಹೇಳಿದ ಹಾಗೆ, ಜೆಎಸ್‌ಎಸ್‌ ಆಸ್ಪತ್ರೆ ನೇರವಾಗಿ ಭೂಮಿಯನ್ನು ಆಕ್ರಮಿಸಿಕೊಳ್ಳುತ್ತಿಲ್ಲ ಎಂಬುದು ಸತ್ಯ. ಎಂ. ಪಿ. ನಾಗರಾಜ್ ಎಂಬ ವ್ಯಕ್ತಿ ಅಶೋಕಪುರ ದಲಿತರ ಜಮೀನುಗಳ ಹಕ್ಕುಗಳನ್ನು ತಮ್ಮವು ಎಂದು ನ್ಯಾಯಾಲಯದಲ್ಲಿ ವಾದಿಸುತ್ತಿದ್ದಾರೆ. ಭೂನ್ಯಾಯ ಮಂಡಳಿ ವಿಚಾರಣೆ ಪ್ರಕ್ರಿಯೆ ನಡುವೆಯೇ ಈ ತುಂಡು ಭೂಮಿಗಳು ಜೆಎಸ್‌ಎಸ್‌ ಆಸ್ಪತ್ರೆಗೆ ಮಾರಾಟವಾಗುತ್ತಿವೆ. ಅಂದರೆ ಕಾನೂನು ವ್ಯಾಜ್ಯ ಏನೇ ಇರಲಿ, ಅಂತಿಮವಾಗಿ ಈ ಭೂಮಿ ಜೆಎಸ್‌ಎಸ್‌ ಆಸ್ಪತ್ರೆಗೇ ಮಾರಾಟವಾಗುತ್ತಿದೆ ಮತ್ತಿದು ಕಾಕತಾಳೀಯ ಖಂಡಿತಾ ಅಲ್ಲ. ಯಾಕಲ್ಲ ಎಂಬುದಕ್ಕೆ ಒಂದಷ್ಟು ಘಟನೆಗಳು ಅಶೋಕಪುರದ ದಲಿತರ ಮನಸ್ಸುಗಳಲ್ಲಿ ಅಚ್ಚಳಿಯದೇ ಕುಳಿತಿವೆ.

ಪ್ರಣವ್ ಮುಖರ್ಜಿ ಆಗಮನ:

2013ರ ಸೆಪ್ಟೆಂಬರ್‌ ತಿಂಗಳಿನಲ್ಲಿ (ಗಮನಿಸಿ ನೋಂದಣಿಯಾಗಿದ್ದು ಮಾರ್ಚ್‌ 23, 2015) ಜೆಎಸ್‌ಎಸ್‌ ಆಸ್ಪತ್ರೆಯನ್ನು ಅಂದಿನ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಉದ್ಘಾಟಿಸಿದರು. ಅಂದರೆ ನೋಂದಾವಣಿಗಿಂತ ಮುಂಚೆಯೇ ದೇಶದ ಪ್ರಥಮ ಪ್ರಜೆ ಖಾಸಗಿ ಆರೋಗ್ಯ ಸೇವೆಗೆ ದೀಪ ಬೆಳಗಿದರು.

ಅವರ ಆಗಮನಕ್ಕೆ ಒಂದು ದಿನ ಮೊದಲು ಆಸ್ಪತ್ರೆ ಎದುರಿಗೆ ಉಳಿದುಕೊಂಡಿದ್ದ ಜಯಮ್ಮ ಎಂಬುವವರಿಗೆ ಸೇರಿದ 8 ಗುಂಟೆ ಎಲೆ ತೋಟ, ವೆಂಕಟೇಶ್ ಎಂಬುವವರ 2 ಗುಂಟೆ ಎಲೆ ತೋಟವನ್ನು ನೆಲಸಮಗೊಳಿಸುವ ಯೋಜನೆ ಜಾರಿಗೆ ಬಂತು. ಈ ಭಾಗದ ಪ್ರಭಾವಿ ದಲಿತ ನಾಯಕ ಶ್ರೀನಿವಾಸ್ ಪ್ರಸಾದ್ ಮನೆಯಲ್ಲಿ ಈ ಕುರಿತು ಮಾತುಕತೆ ಆರಂಭವಾಯಿತು.

“ನಾಳೆ ಉದ್ಘಾಟನೆ ಎಂದರೆ ಇವತ್ತು ರಾತ್ರಿ ಜಯಮ್ಮ ಮತ್ತು ವೆಂಕಟೇಶ್ ಅವರನ್ನು ಶ್ರೀನಿವಾಸ್ ಪ್ರಸಾದ್ ಮನೆಗೆ ಕರೆಸಿಕೊಂಡರು. ಆಸ್ಪತ್ರೆ ಎದುರಿಗೆ ಇರುವ ತೋಟಗಳನ್ನು ಕೊಟ್ಟು ಬಿಡಿ. ರಾಷ್ಟ್ರಪತಿ ಬರುತ್ತಿರುವುದರಿಂದ ಕೇಂದ್ರದ ಪೊಲೀಸರು ಬರುತ್ತಾರೆ. ಅವರ ಎದುರಿಗೆ ನೀವು ಹೋರಾಟ ಮಾಡಿದರೆ ಬಂಧಿಸಿ ಕರೆದುಕೊಂಡು ಹೋಗುತ್ತಾರೆ. ಸೆಂಟ್ರಲ್ ಪೊಲೀಸ್ ಆದ್ದರಿಂದ ನಾನೂ ಕೂಡ ಏನೂ ಮಾಡಲು ಆಗುವುದಿಲ್ಲ. ಒಂದು ಗುಂಟೆಗೆ 12 ಲಕ್ಷ ಕೊಡಿಸುತ್ತೇನೆ. ಬೇಕಾದರೆ ಇಲ್ಲೇ ಓಕೆ ಅಂತ ಹೇಳಿ. ಇಲ್ಲ ಅಂದರೆ ಮುಂದೆ ಏನಾದರೂ ನೀವು ನನ್ನ ಹತ್ತಿರ ಬರುವ ಹಾಗಿಲ್ಲ ಎಂದು ಶ್ರೀನಿವಾಸ್ ಪ್ರಸಾದ್ ಹೆದರಿಸಿದರು. ಕೊನೆಗೆ ಜಯಮ್ಮ ಮತ್ತು ವೆಂಕಟೇಶ್ ಬೇರೆ ದಾರಿ ಕಾಣದೆ ಒಪ್ಪಿಗೆ ಸೂಚಿಸಿದರು. ಅಷ್ಟೆ ನೋಡಿ, ಅಲ್ಲಿ ಅವರು ಓಕೆ ಅನ್ನುತ್ತಿದ್ದಂತೆ ಆಸ್ಪತ್ರೆ ಎದುರಿಗೆ ನಿಂತಿದ್ದ ಜೆಸಿಬಿಗಳು ತೋಟವನ್ನು ನೆಲಸಮ ಮಾಡಿದವು. ನೋಡುನೋಡುತ್ತಲೇ ವೀಳ್ಯದೆಲೆ ತೋಟದ ಮೇಲೆ ರಾಷ್ಟ್ರಪತಿ ಆಗಮನಕ್ಕೆ ದಾರಿ ರೆಡಿಯಾಯಿತು,’’ ಎಂದು ಅಂದಿನ ಘಟನೆಯನ್ನು ನೆನಪಿಸಿಕೊಳ್ಳುತ್ತಾರೆ ಅಣ್ಣಯ್ಯ. ಅವರೊಬ್ಬರೇ ಅಲ್ಲ, ಅಶೋಕಪುರದ ಭೂಮಿ ಕಳೆದುಕೊಂಡ ಯಾವ ದಲಿತ ಯುವಕನನ್ನು ನಿಲ್ಲಿಸಿಕೊಂಡರು ಕೇಳಿದರೂ ಇದೇ ಮಾಹಿತಿಯನ್ನು ಕತೆಯ ರೂಪದಲ್ಲಿ ವಿವರಿಸುತ್ತಾರೆ.

ಮೈಸೂರಿನ ಜನರಿಗೆ ಕೈಗೆಟಕುವ ದರದಲ್ಲಿ ಗುಣಮಟ್ಟದ ಆರೋಗ್ಯ ಸಿಗಬೇಕು. ಪ್ರಜೆಗಳಿಗೆ ಅಗತ್ಯ ಆರೋಗ್ಯ ಸೇವೆಯನ್ನು ನೀಡುವುದು ಸರಕಾರದ ಮೂಲಭೂತ ಕರ್ತವ್ಯಗಳಲ್ಲಿ ಒಂದು. ಆದರೆ ಖಾಸಗಿ ಆರೋಗ್ಯ ಸೇವೆಯನ್ನು ನಿರ್ಮಿಸಲು ಒಂದು ಏರಿಯಾದಲ್ಲಿ ವ್ಯವಸಾಯವನ್ನೂ ಉಳಿಸಿಕೊಂಡು, ನೆಮ್ಮದಿಯಾಗಿ ಕೃಷಿ ಭೂಮಿಯ ಮಾಲೀಕರಾಗಿದ್ದ ಜನರ ಆದಾಯದ ಮೂಲವನ್ನು ಸರಕಾರ, ನ್ಯಾಯಾಂಗ ವ್ಯವಸ್ಥೆ, ಧರ್ಮ ಸಂಸ್ಥಾನಗಳು ಕಿತ್ತುಕೊಳ್ಳಬೇಕಿತ್ತಾ? ಅದೂ ಆದಾಯ ಮೂಲವಾಗಿದ್ದ ವೀಳ್ಯೆದೆಲೆ ತೋಟಗಳು ಮೈಸೂರಿನ ಅಸ್ಮಿತೆಯ ಭಾಗವಾಗಿದ್ದಾಗ? ಪ್ರಶ್ನೆಗಳು, ಆಸ್ಪತ್ರೆಯ ಭವ್ಯ ಕಟ್ಟಡವನ್ನು ದೂರದಲ್ಲೇ ಕುಳಿತು ನೋಡುವವರಿಗೆ ಕಾಡುತ್ತವೆ.

ಜೆಎಸ್‌ಎಸ್‌ ಆಸ್ಪತ್ರೆಯ ಮುಂಭಾಗ. (ಸಾಂದರ್ಭಿಕ ಚಿತ್ರ. 

ಭೂನ್ಯಾಯ ಮಂಡಳಿಯಲ್ಲಿನ ವ್ಯಾಜ್ಯ ಎಂಬುದು ಒಟ್ಟಾರೆ ತಂತ್ರಗಾರಿಕೆ ಒಂದು ಭಾಗ ಅಷ್ಟೆ. ಜೆಎಸ್‌ಎಸ್‌ ಆಸ್ಪತ್ರೆ ಆರಂಭದಿಂದಲೂ ಹೀಗೆ ಅಕ್ಕಪಕ್ಕದ ತುಂಡು ವೀಳ್ಯದೆಲೆ ತೋಟಗಳನ್ನು ಖರೀದಿಸುತ್ತಲೇ ಬರುತ್ತಿದೆ. ಅದಕ್ಕಾಗಿ ರಾಜಕೀಯ ಮಧ್ಯಸ್ಥಿಕೆ, ಸ್ಥಳೀಯ ಮಧ್ಯವರ್ತಿಗಳ ಕಾಟ, ಪೊಲೀಸರ ಭಯ ಹೀಗೆ ಸಿಕ್ಕ ಎಲ್ಲಾ ಅಸ್ತ್ರಗಳನ್ನು ಅಶೋಕಪುರದ ದಲಿತರ ಮೇಲೆ ಪ್ರಯೋಗಿಸಿಕೊಂಡು ಬರಲಾಗುತ್ತಿದೆ. ಹಾಡು ಹಗಲೇ ಅಶೋಕನಗರದ ದಲಿತರು ಭೂಮಿ ಕಳೆದುಕೊಂಡು ಬೀದಿಗೆ ಬಂದು ನಿಂತಿದ್ದಾರೆ.

ಭೂರಹಿತರಿಗೆ ಭೂಮಿ ಹಂಚಲು ತಯಾರಿ ನಡೆಸಿತ್ತು ಸಿದ್ದರಾಮಯ್ಯ ನೇತೃತ್ವದ ಹಿಂದಿನ ಸರಕಾರ. ಆದರೆ ಅವರದ್ದೇ ತವರಿನಲ್ಲಿ ದಲಿತ ಸಮುದಾಯ ಇದ್ದ ಭೂಮಿಯನ್ನು ‘ಕಡಿಮೆ ವೆಚ್ಚದ ಗುಣಮಟ್ಟದ ಆರೋಗ್ಯ ಸೇವೆ’ ನಿರ್ಮಿಸಲು ಕಳೆದುಕೊಳ್ಳುತ್ತಿದೆ.

ಇದರ ನಡುವೆಯೂ ಇವತ್ತಿಗೂ ಜೆಎಸ್‌ಎಸ್‌ ಆಸ್ಪತ್ರೆಯ ಅಕ್ಕಪಕ್ಕದಲ್ಲಿ ವೀಳ್ಯದೆಲೆಯ ತುಂಡು ತೋಟಗಳನ್ನು ಅಶೋಕಪುರದ ದಲಿತರು ಉಳಿಸಿಕೊಂಡಿದ್ದಾರೆ. ಆದರೆ ಅದಕ್ಕೆ ಹೋಗಬೇಕಾದರೆ ಜೆಎಸ್‌ಎಸ್‌ ಗೇಟು ದಾಟಿ ಹೋಗಬೇಕಿದೆ. ಯಾವುದೇ ವ್ಯವಸಾಯಿಕ ಅಭಿವೃದ್ಧಿ ಕೆಲಸಗಳೂ ಈ ಜಮೀನಿನಲ್ಲಿ ನಡೆಯದಂತೆ ನೋಡಿಕೊಳ್ಳಲಾಗುತ್ತಿದೆ. ಒಂದು ತುಂಡು ಭೂಮಿಯನ್ನು ಮಾರಿಕೊಂಡು, ಇನ್ನೊಂದು ತುಂಡನ್ನು ಉಳಿಸಿಕೊಂಡಿರುವ ವೆಂಕಟೇಶ್ ಗುಡಿಸಲು ಕಟ್ಟಲು ನೋಡಿದ್ದರು. ಆದರೆ ಅದನ್ನು ಕೆಲವು ತಿಂಗಳ ಹಿಂದೆ ರಾತ್ರೋರಾತ್ರಿ ಬೆಂಕಿ ಹಾಕಿ ಸುಟ್ಟು ಹಾಕಲಾಯಿತು.

ಜೆಎಸ್‌ಎಸ್‌ ಆಸ್ಪತ್ರೆಯ ಪಕ್ಕದಲ್ಲಿಯೇ ಕಾಣಸಿಗುವ ವೆಂಕಟೇಶ್ ಜಮೀನಿನ ಫಲಕ. 

ಒಳಚರಂಡಿ ಬದಲಾವಣೆ:

ಒಂದು ಕಡೆ ಭೂಮಿ ಕೊಳ್ಳುವ ವಿಚಾರ ಹೀಗೆ ಸಾಗಿದ್ದರೆ, ಸ್ಥಳೀಯ ಪೌರಾಡಳಿತ ಆಸ್ಪತ್ರೆಗಾಗಿಯೇ ಮೈಸೂರು ನಗರದ ಒಳಚರಂಡಿ ವಿನ್ಯಾಸವನ್ನೇ ಬದಲಿಸಲು ಹೊರಟಿದೆ. ಆಸ್ಪತ್ರೆಗಾಗಿ ಒಳಚರಂಡಿಯ ಡಕ್ಟ್‌ನ್ನೂ ಬದಲಾಯಿಸಿದೆ. ಹೊಸತಾಗಿ ನಿರ್ಮಾಣಗೊಂಡ ಒಳಚರಂಡಿ ಆಸ್ಪತ್ರೆಯನ್ನು ಬಳಸಿ ಪಕ್ಕದ ಪುಟ್ಟ ಮನೆಗಳ ಬದಿಯಲ್ಲಿ ಹಾದು ಹೋಗುತ್ತಿದೆ. ಪರಿಸ್ಥಿತಿ ಹೇಗಿದೆ ಎಂದರೆ, ಸ್ವಲ್ಪ ಜೋರು ಮಳೆಯಾದರೂ ಈ ಮನೆಗಳಿಗೆ ಕೊಳಚೆ ಚರಂಡಿ ನೀರು ನುಗ್ಗುತ್ತಿದೆ. ಆದರೆ ಈ ಬಗ್ಗೆ ದನಿ ಎತ್ತಲೂ ಯಾರಿಂದಲೂ ಸಾಧ್ಯವಿಲ್ಲ ಎಂಬ ಸ್ಥಿತಿ ಇದೆ.

ಜೆಎಸ್‌ಎಸ್‌ ಆಸ್ಪತ್ರೆಗಾಗಿ ಬದಲಾದ ಒಳಚರಂಡಿ ಮಾರ್ಗ. ಮಳೆ ಬಂದರೆ ಕೊಳಚೆ ನೀರು ಪಕ್ಕದ ಮನೆಗಳಿಗೆ ಹರಿಯುತ್ತದೆ. 

“ಇದರ ವಿರುದ್ಧ ನಾನು ಹೋರಾಟ ನಡೆಸಿದೆ. ಡಕ್ಟ್‌ ಬದಲಾವಣೆ ಮಾಡಿ ಸಮಸ್ಯೆ ಮಾಡುತ್ತಿದ್ದೀರಿ ಎಂದು ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಡಲು ನೋಡಿದೆ. ಆದರೆ ಅವರು ಪೊಲೀಸರನ್ನು ಕರೆಸಿಕೊಂಡು ಹೆದರಿಸಿ ಕಳುಹಿಸಿದರು,’’ ಎನ್ನುತ್ತಾರೆ ಜೈಶಂಕರ್.

ಒಂದು ಕಡೆ ಕಾನೂನು ಹೋರಾಟ, ಅಲ್ಲಿಯೂ ನಡೆಯದ ಪಾರದರ್ಶಕ ವಿಚಾರಣೆ, ಮತ್ತೊಂದು ಕಡೆಯಲ್ಲಿ ಸ್ಥಳೀಯ ರಾಜಕಾರಣಿಗಳ ಒತ್ತಡ, ಜೆಎಸ್‌ಎಸ್‌ ಆಸ್ಪತ್ರೆ ಹೊಂದಿರುವ ಪ್ರಭಾವಗಳ ನಡುವೆ ಅಶೋಕಪುರ ದಲಿತರು ಭೂಮಿ ವಂಚಿತರಾಗಿದ್ದಾರೆ. ಅಷ್ಟೆ ಅಲ್ಲ, ಮೈಸೂರಿನ ಅಸ್ಮಿತೆ ಎಂದು ಗುರುತಿಸುವ ವೀಳ್ಯದೆಲೆ ತೋಟಗಳು ನೆಲಸಮವಾಗಿವೆ. ಮೈಸೂರು ಪಾಕ್‌ ಉಳಿಸಿಕೊಳ್ಳಬೇಕು ಎನ್ನುವವರಿಗೆ ವೀಳ್ಯದೆಲೆ ತೋಟಗಳು ಕಾಣಿಸದೇ ಹೋಗಿವೆ.

ಹಾಗೆ ನೋಡಿದರೆ, ರಾಜ್ಯಾದ್ಯಂತ ದಲಿತರ ಭೂಮಿಯನ್ನು ಕಬಳಿಸಲು ಇಂತಹದ್ದೇ ‘ಸಿದ್ಧ ಸೂತ್ರ’ಗಳು ಹಲವು ಭಾಗಗಳಲ್ಲಿ ಚಲಾವಣೆಯಲ್ಲಿವೆ. ಅರೆನ್ಯಾಯಿಕ ಸಂಸ್ಥೆಗಳು, ಸ್ಥಳೀಯ ದಲಿತ ನಾಯಕರು, ದಲಿತರ ನಡುವೆಯೇ ಸೃಷ್ಟಿಸುವ ಮಧ್ಯವರ್ತಿ ಚೇಲಾಗಳು, ಒಡೆದು ಆಳುವ ನೀತಿ, ಹಂಚಿಕೆಯಾಗುವ ಹಣದ ಪ್ರಭಾವಗಳಿಂದ ದಲಿತರು ನಿಧಾನವಾಗಿ ಭೂಮಿ ಕಳೆದುಕೊಂಡು ಬೀದಿಗೆ ಬರುತ್ತಿದ್ದಾರೆ. ಜೆಎಸ್‌ಎಸ್‌ ಆಸ್ಪತ್ರೆ ಹೆಸರಿನಲ್ಲಿ ನಡೆಯುತ್ತಿರುವುದು ‘ಟಿಪ್ ಆಫ್‌ ದಿ ಐಸ್‌ ಬರ್ಗ್‌’ ಅಷ್ಟೆ.

ಮೈಸೂರಿನ ಕಸಬಾ ಹೋಬಳಿಯ ವೀಳ್ಯದೆಲೆ ತೋಟಗಳ ಕತೆ ಇದಾದರೆ, ಒಟ್ಟಾರೆ ಅರಮನೆ ನಗರಿಯೇ ಭೂಗಳ್ಳರ, ಅಕ್ರಮವಾಗಿ ಭೂಮಿ ಆಕ್ರಮಿಸಿಕೊಳ್ಳುವವರ ಸ್ವರ್ಗವಾಗಿ ಬದಲಾಗಿದೆ. ಜಗದ್ಗುರುಗಳು, ಭಗವದ್ಪಾದರು, ಜೀವನ ಕಲೆ ಕಲಿಸುವ ಆಧುನಿಕ ಸ್ವಾಮಿಗಳು, ರಾಜಕೀಯ ನಾಯಕರು, ಶಿಕ್ಷಣ ಕ್ಷೇತ್ರದ ತಜ್ಞರು ಚಾಮುಂಡಿ ತಪ್ಪಲನ್ನು ಆವರಿಸಿಕೊಂಡಿದ್ದಾರೆ. ಸದ್ಯ ಇಲ್ಲಿ ನಡೆಯುತ್ತಿರುವ ಭೂ ಅಕ್ರಮದ ಚಟುವಟಿಗಳ ಕುರಿತು ಬೆನ್ನು ಮೂಳೆ ಗಟ್ಟಿ ಇರುವ ಯಾವುದೇ ಸರಕಾರ ನ್ಯಾಯಯುತ ತನಿಖೆ ನಡೆಸಿದ್ದೇ ಆದರೆ ಹೊಸ ತಲೆಮಾರಿನ ಮೈಸೂರಿನ ಭೂಹಗರಣವೊಂದು ಹೊರಬೀಳುವುದರಲ್ಲಿ ಯಾವುದೇ ಅನುಮಾನಗಳಿಲ್ಲ.

ರಾಜ್ಯದಲ್ಲಿ ಮುಖ್ಯ ಕಾರ್ಯದರ್ಶಿ ಹುದ್ದೆಗೆ ಟಿ. ಎಂ. ವಿಜಯ್ ಭಾಸ್ಕರ್ ನೇಮಕವಾಗಿರುವ ಸಮಯ ಇದು. ಅವರು 90ರ ದಶಕದಲ್ಲಿ ಮೈಸೂರಿನ ಮೊದಲ ಭೂಹಗರಣವನ್ನು ಬಯಲಿಗೆಳೆದ ಪ್ರಾಮಾಣಿಕ ಹಿನ್ನೆಲೆ ಇರುವ ಅಧಿಕಾರಿ. ಅವರೀಗ ರಾಜ್ಯದ ಅಧಿಕಾರ ವರ್ಗದ ಅತ್ಯುನ್ನತ ಹುದ್ದೆಗೆ ನೇಮಕವಾಗಿದ್ದಾರೆ.

Also Read: ಮೈಸೂರಿನ ಮೊದಲ ಭೂ ಹಗರಣ ಬಯಲಿಗೆಳೆದಿದ್ದ ವಿಜಯ್ ಭಾಸ್ಕರ್‌ ನೂತನ ಮುಖ್ಯ ಕಾರ್ಯದರ್ಶಿ

ಮೈಸೂರನ್ನು ಚೆನ್ನಾಗಿ ಬಲ್ಲ ಅವರಿಗೆ ವೀಳ್ಯದೆಲೆ ತೋಟಗಳ ಬಗ್ಗೆ ಹಾಗೂ ಚಾಮುಂಡಿ ತಪ್ಪಲಿನ ಕುರಿತು ವಿಶೇಷ ಮಾಹಿತಿ ನೀಡುವ ಅಗತ್ಯವೂ ಇಲ್ಲ. ಪ್ರಶ್ನೆ ಇರುವುದು ತಮ್ಮ ಸ್ಥಾನದ ಒತ್ತಡಗಳನ್ನು ಮೀರಿ ಅವರು ಈ ವಿಚಾರದಲ್ಲಿ ಗಮನ ಹರಿಸಲು ಅವರಿಂದ ಸಾಧ್ಯನಾ? ಎಂಬುದು. ಅಶೋಕಪುರದ ಜನರ ನಿಜವಾದ ಪ್ರತಿನಿಧಿಗಳಾದ ಜನಪ್ರತಿನಿಧಿಗಳೇ ಕಾಲಿಗೆ ಬಿದ್ದೆದ್ದು ಬರುತ್ತಿರುವ ಈ ಸಂದಿಗ್ಧ ಸಮಯದಲ್ಲಿ ಅಧಿಕಾರಿಗಳಿಂದಾದರೂ ನ್ಯಾಯ ಸಿಗಬಹುದು ಎಂಬುದು ದೂರದ ಆಶಯ ಅಷ್ಟೆ.