Home Media 2-0 ದಿನ ಪತ್ರಿಕೆಗಳ ಮುಖಪುಟ ಆವರಿಸಿಕೊಂಡ ‘ಸೂಪರ್ ಜೂನ್’ ಜಾಹೀರಾತಿನ ಹಿನ್ನೆಲೆ ಏನು? 

ದಿನ ಪತ್ರಿಕೆಗಳ ಮುಖಪುಟ ಆವರಿಸಿಕೊಂಡ ‘ಸೂಪರ್ ಜೂನ್’ ಜಾಹೀರಾತಿನ ಹಿನ್ನೆಲೆ ಏನು? 

SHARE

ಸೋಮವಾರ ಮುಂಜಾನೆ ರಾಜ್ಯಮಟ್ಟದ ದಿನ ಪತ್ರಿಕೆಗಳನ್ನು ಓದುವ ಹವ್ಯಾಸ ಇಟ್ಟುಕೊಂಡ ಕನ್ನಡ ಓದುಗರಿಗೆ ಕಂಡಿದ್ದು, ಧಾರಾವಾಹಿಗಳ ಜಾಹೀರಾತುಗಳ ದರ್ಶನ. ಮನೋರಂಜನಾ ವಿಭಾಗದಲ್ಲಿ ಬರುವ ಇವುಗಳು ಕರ್ನಾಟಕದಲ್ಲಿಯೇ ವಾರ್ಷಿಕ 600 ಕೋಟಿ ಮಾರುಕಟ್ಟೆಯನ್ನು ಸೃಷ್ಟಿಸಿಕೊಂಡಿವೆ. ಹದಿನೈದು ಸಾವಿರ ಜನರಿಗೆ ಪ್ರತ್ಯಕ್ಷ ಹಾಗೂ ಪರೋಕ್ಷ ಉದ್ಯೋಗಗಳನ್ನು ನೀಡಿವೆ. ಪ್ರತಿ ದಿನ ಏನಿಲ್ಲ ಅಂದರೂ ಐವತ್ತಕ್ಕೂ ಹೆಚ್ಚು ಧಾರಾವಾಹಿಗಳ ಚಿತ್ರೀಕರಣ ಒಂದಿಲ್ಲೊಂದು ಕಡೆ ನಡೆಯುತ್ತಿರುತ್ತದೆ. ಇವೆಲ್ಲವೂ ಮೆಘಾ ಸೀರಿಯಲ್‌ಗಳು ಎಂದು ಕರೆಸಿಕೊಳ್ಳುತ್ತವೆ.

ಹೀಗೆ, ಕರ್ನಾಟಕದಲ್ಲಿ ‘ಸೀರಿಯಲ್ ಮಾರುಕಟ್ಟೆ’ಯೊಂದು ತನ್ನ ಇರುವಿಕೆಯನ್ನು ಗುರುತಿಸಿಕೊಂಡಿದೆ. ಅದೇ ವೇಳೆಗೆ ಇನ್ನಷ್ಟು ವಿಸ್ತಾರಗೊಳ್ಳಲು ಜಾಹೀರಾತಿನ ಮೊರೆ ಹೋಗುತ್ತಿದೆ. ಅದರ ಭಾಗವಾಗಿಯೇ ವಾರದ ಮೊದಲ ದಿನ ‘ಸೀರಿಯಲ್ ಸಂತೆ’ ದಿನ ಪತ್ರಿಕೆಗಳ ಮುಖಪುಟದಲ್ಲಿ ಹರಡಿಕೊಂಡಿದೆ. ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಬಂದ ಮೊದಲ ಖಾರವಾದ ಪ್ರತಿಕ್ರಿಯೆ ಹೀಗಿತ್ತು:

ಕನ್ನಡದ ಎಲ್ಲಾ ದಿನಪತ್ರಿಕೆಗಳು
ಸಗಣಿ ತಿನ್ನೋದು ಅಲ್ಲದೆ ಓದುಗರಿಗೂ ತಿನ್ನುಸುತ್ತಿದೆ….

Posted by Che Balu on Sunday, June 10, 2018

ಹೀಗೆ, ಒಂದಷ್ಟು ಜನ ಸೀರಿಯಲ್‌ಗಳ ಬಗೆಗೆ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಲೇ ಬಂದಿದ್ದಾರೆ. ಅಂತವುಗಳಲ್ಲಿ ಸೀರಿಯಲ್‌ಗಳ ಕುರಿತು ಆಯ್ದ ಕೆಲವು ಸ್ವಾರಸ್ಯಕರ ಟೀಕೆಗಳು ಇಲ್ಲಿವೆ:

ಏನೇ ಟೀಕೆಗಳಿದ್ದರೂ, ಧಾರವಾಹಿಗಳಿಲ್ಲದೆ ಒಂದು ದೊಡ್ಡ ಸಮುದಾಯ ಮನೋರಂಜನೆ ಸಿಗದೆ ಮಾನಸಿಕವಾಗಿ ನರಳುವ ಸಾಧ್ಯತೆ ಇದೆ. ಟಿವಿಗಳು ಜನಪ್ರಿಯವಾದ ನಂತರ ಜನರನ್ನು ಅದರತ್ತ ಸೆಳೆದಿದ್ದು ಮನೋರಂಜನಾ ಕಾರ್ಯಕ್ರಮಗಳು. ಅವತ್ತಿಗೆ ಡಿಡಿ 1- ಚಂದನ ಹೆಸರಿನಲ್ಲಿ ಸರಕಾರ ನೀಡುತ್ತಿದ್ದ ಮನೋರಂಜನೆಯ ಹೊಣೆಗಾರಿಕೆಯನ್ನು ಖಾಸಗಿ ವಾಹಿನಿಗಳು ಇವತ್ತು ಹೊತ್ತುಕೊಂಡಿವೆ. ಧಾರವಾಹಿಗಳಿಗೆ ಮಾತ್ರವೇ ಸೀಮಿತವಾಗದ ಇವು ರಿಯಾಲಿಟಿ ಶೋ ಹೆಸರಿನಲ್ಲಿಯೂ ದುಬಾರಿ ಮನೋರಂಜನೆಯನ್ನು ಉಚಿತ ರೂಪದಲ್ಲಿ ಜನರಿಗೆ ನೀಡುತ್ತಿವೆ.

ಕರ್ನಾಟಕದ ವಿಚಾರಕ್ಕೆ ಬಂದರೆ, ಅಂಬಾನಿ ಒಡೆತನದ ಕಲರ್ಸ್ ಕನ್ನಡ ಹಾಗೂ ಕಲರ್ಸ್ ಸೂಪರ್ ವಾಹಿನಿಗಳು, ಝೀ ಕನ್ನಡ, ಸ್ಟಾರ್ ಸುವರ್ಣ ಹಾಗೂ ಸ್ಟಾರ್ ಸುವರ್ಣ ಪ್ಲಸ್, ತಮಿಳುನಾಡು ಮೂಲದ ಉದಯ ಟಿವಿ, ಸಿಎಂ ಕುಮಾರಸ್ವಾಮಿ ಕುಟುಂಬದ ಒಡೆತನದಲ್ಲಿರುವ ಕಸ್ತೂರಿ ವಾಹಿನಿ ಸೇರಿದಂತೆ ಒಂದಷ್ಟು ಕೇಬಲ್ ಹಾಗೂ ಸ್ಯಾಟಲೈಟ್ ವಾಹಿನಿಗಳು ಕಾರ್ಯ ನಿರ್ವಹಿಸುತ್ತಿವೆ. ಇದರಲ್ಲಿ ಕಲರ್ಸ್ ಕನ್ನಡ ಹಾಗೂ ಕಲರ್ಸ್ ಸೂಪರ್ ಪಾಲು ಶೇ. 40ರಷ್ಟಿದ್ದರೆ, ಉಳಿದವರು ಉಳಿದ ಶೇ. 60ರಷ್ಟು ಮಾರುಕಟ್ಟೆಗೆ ಪೈಪೋಟಿ ನಡೆಸುತ್ತಿದ್ದಾರೆ.

“ಕರ್ನಾಟಕದಲ್ಲಿ ಇವತ್ತು ಏನಿಲ್ಲ ಅಂದರೂ 70 ಮೆಘಾ ಧಾರವಾಹಿಗಳ ಚಿತ್ರೀಕರಣ ನಡೆಯುತ್ತಿದೆ. ಒಂದೊಂದು ತಂಡದಲ್ಲಿ ಕನಿಷ್ಟ 50- 60 ಜನ ಕೆಲಸ ಮಾಡುತ್ತಾರೆ. ಇವುಗಳ ಜತೆಗೆ ರಿಯಾಲಿಟಿ ಶೋ ಎಂಬ ಪ್ರತ್ಯೇಕ ಘಟಕವೂ ಸಾಕಷ್ಟು ಜನರಿಗೆ ಕೆಲಸ ನೀಡಿದೆ. ಒಟ್ಟಾರೆ, 15,000 ಸಾವಿರ ಜನ ಮನೋರಂಜನಾ ಮಾರುಕಟ್ಟೆ ನಂಬಿಕೊಂಡು ಕೆಲಸ ಮಾಡುತ್ತಿದ್ದಾರೆ. ದೊಡ್ಡ ಮಾರುಕಟ್ಟೆ ಇದು,’’ ಎನ್ನುತ್ತಾರೆ ಬಿ. ಸುರೇಶ್. ಸ್ವತಃ ಧಾರವಾಹಿನಿಗಳನ್ನು ನಿರ್ಮಿಸಿರುವ ಬೀಸು ಬರಹಗಾರರೂ ಹೌದು. ಕನ್ನಡ ಸೀರಿಯಲ್ ಲೋಕದ ಇಂತಹ ಆರ್ಥಿಕ ಒಳಸುಳಿಗಳನ್ನು ಅವರು ಚೆನ್ನಾಗಿ ಅರಿತಿದ್ದಾರೆ. ಒಟ್ಟಾರೆ, ದಕ್ಷಿಣ ಭಾರತದಲ್ಲಿಯೇ ಮೂರನೇ ದೊಡ್ಡ ಮಾರುಕಟ್ಟೆ ಹೊಂದಿರುವ ಕರ್ನಾಟಕದ ಮನೋರಂಜನೆ ದುನಿಯಾ ಯಾಕೆ ದಿನಪತ್ರಿಕೆಗಳ ಜಾಹೀರಾತಿಗೆ ಮೊರೆ ಹೋಯಿತು? ಬದಲಾದ ಕಾಲದಲ್ಲಿ ವೀಕ್ಷಕರ ಕೊರತೆಯನ್ನು ಈ ಮಾರುಕಟ್ಟೆ ಅನುಭವಿಸುತ್ತಿದೆಯಾ?

ಈ ಪ್ರಶ್ನೆಗಳನ್ನು ಇಟ್ಟುಕೊಂಡು ‘ಸಮಾಚಾರ’ ಮನೋರಂಜನಾ ವಾಹಿನಿಗಳಲ್ಲಿ ಕೆಲಸ ಮಾಡುವ ಹಿರಿಯರ ಮುಂದಿಟ್ಟರೆ ಭಿನ್ನ ಉತ್ತರಗಳು ಲಭ್ಯವಾದವು.

“ಈಗಾಗಲೇ ನಮ್ಮ ವಾಹಿನಿಗಳನ್ನು ನೋಡುತ್ತಿರುವ ವೀಕ್ಷಕರಿಗೆ ಇನ್ನೊಮ್ಮೆ ನೆನಪು ಮಾಡಿಕೊಳ್ಳಲು, ಮತ್ತು ಹೊಸ ವೀಕ್ಷಕರನ್ನು ಪಡೆದುಕೊಳ್ಳಲು ಜಾಹೀರಾತುಗಳನ್ನು ನೀಡಲಾಗಿದೆ,’’ ಎನ್ನುತ್ತಾರೆ ಪರಮೇಶ್ವರ ಗುಂಡ್ಕಲ್. ಕಲರ್ಸ್ ಕನ್ನಡ ಹಾಗೂ ಕಲರ್ಸ್‌ ಸೂಪರ್ ವಾಹಿನಿಗಳ ಬಿಜಿನೆಸ್ ಹೆಡ್‌ ಆಗಿರುವ ಗುಂಡ್ಕಲ್ ‘ಬಿಗ್‌ ಬಾಸ್’ ಎಂಬ ದುಬಾರಿ ರಿಯಾಲಿಟಿ ಶೋನ ನಿರ್ದೇಶಕರು ಕೂಡ.

ಈಗಿರುವ ವೀಕ್ಷಕರ ಸಂಖ್ಯೆಯಲ್ಲಿ ಏನೂ ಸಮಸ್ಯೆಯಾಗಿಲ್ಲ ಎನ್ನುವ ಪರಮೇಶ್ವರ ಗುಂಡ್ಕಲ್, “ಪತ್ರಿಕೆ ಓದುವವರಲ್ಲೂ ಹೊಸಬರು ನಮ್ಮ ವಾಹಿನಿಗಳನ್ನು ವೀಕ್ಷಿಸುವಂತಾಗಬೇಕು. ಈಗಿರುವ ಸೀರಿಯಲ್‌ಗಳ ಮೂಲಕ ಒಳಗೆ ಬರುವ ವೀಕ್ಷಕರ ಸಂಖ್ಯೆ ದೊಡ್ಡದೆ ಇದೆ. ಆದರೆ ಅದನ್ನು ಬೆಳೆಸಿಕೊಂಡು ಹೋಗಬೇಕಾದರೆ ಹೊಸ ಸಾಧ್ಯತೆಗಳ ಹುಡುಕಾಟ ಅನಿವಾರ್ಯ. ಅದಕ್ಕಾಗಿ ಸುಮಾರು ಒಂದು ಕೋಟಿ ಜನರಿಗೆ ಏಕಕಾಲಕ್ಕೆ ತಲುಪಲು ಪತ್ರಿಕೆಗಳನ್ನು ಬಳಸಿಕೊಂಡೆವು,’’ ಎನ್ನುತ್ತಾರೆ.

ಕೆಲವು ಆಂತರಿಕ ಮೂಲಗಳ ಪ್ರಕಾರ, “ಇತ್ತೀಚಿನ ದಿನಗಳಲ್ಲಿ ಸೀರಿಯಲ್‌ಗಳ ಬಗೆಗಿನ ಆಸಕ್ತಿ ಕಡಿಮೆಯಾಗಿದೆ ಎನ್ನುವುದಕ್ಕಿಂತ ಹೆಚ್ಚಾಗುತ್ತಿಲ್ಲ. ಆದರೆ ಮಾರುಕಟ್ಟೆ ಹೆಚ್ಚು ಹೆಚ್ಚು ಬಂಡವಾಳ ಹೂಡಲು ತಯಾರಿದೆ. ಹೀಗಾಗಿ, ಹೊಸ ವೀಕ್ಷಕರನ್ನು ಪಡೆಯಬೇಕಾದ ಅನಿವಾರ್ಯತೆ ಇರುವುದರಿಂದ ಪತ್ರಿಕೆಗಳ ಜಾಹೀರಾತು, ಡಿಜಿಟಲ್ ಜಾಹೀರಾತುಗಳ ಮೊರೆ ಹೋಗಲಾಗುತ್ತಿದೆ.’’

ತಮ್ಮ ಹೆಸರನ್ನು ಗೌಪ್ಯವಾಗಿಡಲು ಬಯಸುವ ಮನೋರಂಜನಾ ವಾಹಿನಿಯ ಮಾರುಕಟ್ಟೆ ವಿಭಾಗದ ಹಿರಿಯ ಅಧಿಕಾರಿಯೊಬ್ಬರು ಹೇಳುವ ಈ ಮಾತುಗಳು ಬದಲಾದ ಕಾಲಘಟ್ಟದಲ್ಲಿ ಮನೋರಂಜನಾ ವಾಹಿನಿಗಳೂ ವೀಕ್ಷಕರಿಗಾಗಿ ಪೈಪೋಟಿಗೆ ಇಳಿದಿರುವ ಹಿನ್ನೆಲೆಯನ್ನು ಬಿಚ್ಚಿಡುತ್ತದೆ. ಆದರೆ ಹೊರಗೆ ಸೀರಿಯಲ್‌ಗಳ ಬಗ್ಗೆ ಚರ್ಚಿಸುವ ಜನ ಅವುಗಳ ಹಿಂದಿರುವ ಪ್ರಬಲ ಮಾರುಕಟ್ಟೆಯನ್ನು ಮರೆಯುತ್ತಾರೆ.