Home Media 2-0 ಕೋಬ್ರಾಪೋಸ್ಟ್, ತನಿಖಾ ಪತ್ರಿಕೋದ್ಯಮ ಮತ್ತು ಮರೀಚಿಕೆಯಾದ ಸತ್ಯ

ಕೋಬ್ರಾಪೋಸ್ಟ್, ತನಿಖಾ ಪತ್ರಿಕೋದ್ಯಮ ಮತ್ತು ಮರೀಚಿಕೆಯಾದ ಸತ್ಯ

SHARE

‘ಆಪರೇಶನ್ 136’; ಸೋ ಕಾಲ್ಡ್ ತನಿಖಾ ಪತ್ರಕರ್ತರಿಗೂ ಅಪ್ರಿಯವಾಗುವಂತಹ ಸತ್ಯ ಹೇಳಿದ ಕೋಬ್ರಾಪೋಸ್ಟ್‌ ಜಾಲತಾಣದ ಇತ್ತೀಚಿನ ಕುಟುಕು ಕಾರ್ಯಾಚರಣೆ.

ಕಳೆದ ಎರಡು ದಿನಗಳ ಅಂತರದಲ್ಲಿ ದೇಶದ ಜನರ ಮುಂದೆ ಪ್ರಮುಖ ಮಾಧ್ಯಮ ಸಂಸ್ಥೆಗಳ ಅಂತರಾಳವನ್ನು ಬಿಚ್ಚಿಟ್ಟಿದೆ. ಅದೇ ವೇಳೆ ಕಟು ಸತ್ಯಗಳು ಎದುರಾದರೆ ಮಾಧ್ಯಮಗಳ ‘ಜಾಣ ಮೌನ’ವೊಂದು ಹೇಗಿರುತ್ತದೆ ಎಂಬುದನ್ನು ತೆರೆದಿಟ್ಟಿದೆ.

ಪತ್ರಿಕೋದ್ಯಮದ ಇತಿಹಾಸವನ್ನು ಕೊಂಚ ಕೆದಕಿ ನೋಡಿದರೆ, ಕೋಬ್ರಾಪೋಸ್ಟ್‌ ತರಹದ್ದೇ ತನಿಖಾ ವರದಿಗಳ ದೊಡ್ಡ ಪಟ್ಟಿಯೇ ಸಿಗುತ್ತದೆ. ತನಿಖಾ ಪತ್ರಿಕೋದ್ಯಮವನ್ನು ಕಾಲಕಾಲಕ್ಕೆ ಪುನರುಜ್ಜೀವನಗೊಳಿಸುವ ಪ್ರಕ್ರಿಯೆಗಳು ಜಗತ್ತಿನಾದ್ಯಂತ ನಡೆದುಕೊಂಡು ಬಂದಿರುವುದು ಢಾಳಾಗಿ ಕಾಣಿಸುತ್ತದೆ. ಒಂದಷ್ಟು ತನಿಖಾ ವರದಿಗಳು ಬೀರಬೇಕಾದ ಪರಿಣಾಮಗಳನ್ನು ದೊಡ್ಡ ಮಟ್ಟದಲ್ಲಿ ಬೀರಿವೆ, ಕೆಲವು ಯಾವುದೇ ‘ಇಂಪ್ಯಾಕ್ಟ್‌’ಗಳನ್ನೂ ಮಾಡದೆ ಇತಿಹಾಸದ ಪಟ್ಟಿಯಲ್ಲಿ ಸರಿದು ಹೋಗಿವೆ. ಒಟ್ಟಾರೆ, ಉದ್ಯಮವಾಗಿ, ಲಾಭದಾಯಕ ದೃಷ್ಟಿಯನ್ನಿಟ್ಟುಕೊಂಡೇ ಮುನ್ನಡೆಯುತ್ತಿರುವ ಪತ್ರಿಕೋದ್ಯಮಕ್ಕೆ ಇಂತಹ ವರದಿಗಳು ನುಂಗಲಾರದ ತುತ್ತಾಗುತ್ತಲೇ ಬಂದಿವೆ.

ಏನಿದು ತನಿಖಾ ಪತ್ರಿಕೋದ್ಯಮ? ಸಾಮಾನ್ಯ ವರದಿಗಳಿಗಿಂತ ಹೆಚ್ಚು ಸಮಯ, ಶ್ರಮ ಹಾಗೂ ಆರ್ಥಿಕ ಬಲವನ್ನು ಬೇಡುವ ವರದಿಗಳೇ ತನಿಖಾ ವರದಿಗಳು. ಕುಟುಕು ಕಾರ್ಯಾಚರಣೆ ಸತ್ಯವನ್ನು ಬಯಲಿಗೆಳೆಯಲು ಬಳಸುವ ಒಂದು ತಂತ್ರಗಾರಿಕೆ ಅಷ್ಟೆ. ಅದರ ಜತೆಗೆ ಅಕೆಡೆಮಿಕ್ ಆದ ತನಿಖೆಗಳು (ದಾಖಲೆಗಳ ಅಧ್ಯಯನ, ತಳಮಟ್ಟದ ಪರಿಶೀಲನೆಗಳು) ಕೂಡ ಒಳ್ಳೆಯದೊಂದು ತನಿಖಾ ವರದಿಯನ್ನು ಕಟ್ಟಿಕೊಡಬಲ್ಲವು.

ಅಮೆರಿಕಾದ ಪತ್ರಿಕೋದ್ಯಮ ತನಿಖಾ ವರದಿಗಳ ಆಧಾರದ ಮೇಲೆಯೇ ರೂಪುಗೊಳ್ಳುತ್ತ ಬಂದಿತ್ತು. ಆದರೆ ರೇಗನ್ ತರಹದ ಒಬ್ಬ ಅಧ್ಯಕ್ಷ ತನ್ನ ಚಾಣಾಕ್ಷತನದಿಂದ ತನಿಖಾ ಪತ್ರಿಕೋದ್ಯಮದ ನೆಲೆಗಳನ್ನು ನಾಶಮಾಡತೊಡಗಿದ. ನಂತರದ ದಿನಗಳಲ್ಲಿ ಜಾಹೀರಾತುಗಳ ಆಧಾರದ ಮೇಲಿನ ಪತ್ರಿಕೋದ್ಯಮ ಬೆಳೆದ ಪರಿಣಾಮ ಅನೇಕ ಸಂಸ್ಥೆಗಳಲ್ಲಿ ತನಿಖಾ ಪತ್ರಿಕೋದ್ಯಮದ ವಿಭಾಗ ಬಾಗಿಲು ಹಾಕಿಕೊಂಡಿತು. ಇವತ್ತು ಮುಖ್ಯವಾಹಿನಿಯ ಮಾಧ್ಯಮಗಳಿಗಿಂತ ಪರ್ಯಾಯ ಮಾಧ್ಯಮಗಳ ಮೂಲಕ ತನಿಖಾ ಪತ್ರಿಕೋದ್ಯಮ ಜೀವಂತವಾಗಿದೆ.

ಮಾಜಿ ಮುಖ್ಯಮಂತ್ರಿ ದಿವಂಗತ ರಾಮಕೃಷ್ಣ ಹೆಗಡೆ. 

ಕರ್ನಾಟಕದ ಇತಿಹಾಸವನ್ನೇ ನೋಡಿದರೆ, ರಾಮಕೃಷ್ಣ ಹೆಗಡೆ ಕನ್ನಡ ಮಾಧ್ಯಮಗಳಲ್ಲಿ ಮಾತ್ರವಲ್ಲ ಇಂಗ್ಲಿಷ್ ಮಾಧ್ಯಮಗಳಲ್ಲಿಯೂ ಆದ್ಯತೆಯನ್ನು ಪಡೆದುಕೊಂಡ ಮುಖ್ಯಮಂತ್ರಿಯಾಗಿದ್ದರು. ಅವರನ್ನು ‘ಭವಿಷ್ಯದ ಪ್ರಧಾನಿ’ ಅಂತೆಲ್ಲಾ ರಾಷ್ಟ್ರೀಯ ಮಾಧ್ಯಮಗಳು ಬಿಂಬಿಸುತ್ತಿದ್ದ ಕಾಲ ಅದು. ಅವರ ವಿರುದ್ಧ ಚಿಕ್ಕದೊಂದು ಅಪಸ್ವರಗಳೂ ಕೇಳಿಬರದಿದ್ದ ದಿನಗಳಲ್ಲಿ, ರಾಮಕೃಷ್ಣ ಹೆಗಡೆ ಅವರ ಬಣ್ಣವನ್ನು ಬಯಲು ಮಾಡಿದ್ದು ‘ಲಂಕೇಶ್ ಪತ್ರಿಕೆ’.

“ಇವತ್ತಿನ ಹಾಗೆ ಮಾಹಿತಿ ಹಕ್ಕು ಕಾಯ್ದೆ ಇರಲಿಲ್ಲ. ಪ್ರಾಮಾಣಿಕ ಅಧಿಕಾರಿಗಳು ದಾಖಲೆಗಳನ್ನು ಒದಗಿಸುತ್ತಿದ್ದರು. ಹೆಗಡೆ ವಿರುದ್ಧ ಯಾರೂ ಮಾತನಾಡದಿದ್ದ ಸಮಯದಲ್ಲಿ ನಾವು ಬಾಟ್ಲಿಂಗ್ ಹಗರಣವನ್ನು ಬಯಲಿಗೆಳೆದೆವು. ಒಂದು ರೀತಿಯಲ್ಲಿ ನಾವು ಸತ್ಯದ ಒಂಟಿ ದನಿಯಾಗಿದ್ದೆವು,’’ ಎಂದು ಹಳೆಯ ನೆನಪುಗಳನ್ನು ಕೆದಕುತ್ತಾರೆ ಪತ್ರಕರ್ತರಾಗಿದ್ದ ರವೀಂದ್ರ ರೇಶ್ಮೆ.

ರವೀಂದ್ರ ರೇಶ್ಮೆ ‘ಲಂಕೇಶ್ ಪತ್ರಿಕೆ’ಯಲ್ಲಿ ಬಾಟ್ಲಿಂಗ್ ಹಗರಣವನ್ನೂ ಸೇರಿದಂತೆ ಹಲವು ತನಿಖಾ ವರದಿಗಳನ್ನು ಬರೆದ ಹಿನ್ನೆಲೆ ಉಳ್ಳವರು. ಇವತ್ತು ಕೋಬ್ರಾಪೋಸ್ಟ್ ಹೊರತಂದ ಮಾಧ್ಯಮಗಳ ಹಿಪಾಕ್ರಸಿ ಹಾಗೂ ಅದರೆಡೆಗೆ ವ್ಯಕ್ತವಾಗುತ್ತಿರುವ ದಿವ್ಯ ಮೌನ ಅವರಿಗೆ ಅಚ್ಚರಿ ಮೂಡಿಸುತ್ತಿಲ್ಲ. “ಇಂತಹದ್ದೇ ಸನ್ನಿವೇಶವನ್ನು ಅಂದೂ ನಾವು ಎದುರಿಸಿದ್ದೆವು. ಸತ್ಯದ ಹುಡುಕಾಟದಲ್ಲಿ ಇದು ಸಹಜ ಕೂಡ. ಇವತ್ತು ಮಾಧ್ಯಮ ಸಂಸ್ಥೆಗಳ ಜತೆಗೆ ಪತ್ರಕರ್ತರೂ ಪುಕ್ಕಲರಾಗಿದ್ದಾರೆ. ಲಾಭವನ್ನು ದೃಷ್ಟಿಯಲ್ಲಿ ಇಟ್ಟುಕೊಂಡ ವೃತ್ತಿಪರರಾಗಿದ್ದಾರೆ. ಹೀಗಾಗಿ ಹೊರಬರುತ್ತಿರುವ ವರದಿಗಳಲ್ಲಿ ಸತ್ಯ ಎಂಬುದು ಮರೀಚಿಕೆ ಎನ್ನವಂತಾಗಿದೆ,’’ ಎಂದು ಬೇಸರ ವ್ಯಕ್ತಪಡಿಸುತ್ತಾರೆ ರೇಶ್ಮೆ.

ಹೊಸ ತಂತ್ರಜ್ಞಾನ ಪತ್ರಿಕೋದ್ಯಮವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಬೇಕಿತ್ತು. ಆದರೆ, ಹೊಸ ಸವಾಲುಗಳಿಗೆ ಮುಖಾಮುಖಿಯಾಗಿಸಿದೆ. 

ಕಾಲ ಬದಲಾಗಿದೆ. ತಂತ್ರಜ್ಞಾನ ಹಿಂದೆಂದಿಗಿಂತಲೂ ಪ್ರಬಲವಾಗಿ ಬೆಳೆದಿದೆ. ಆದರೆ ಇದನ್ನು ಆಧುನಿಕ ಪತ್ರಿಕೋದ್ಯಮ ಬಳಸಿಕೊಳ್ಳಲು ವಿಫಲವಾಗಿದೆ ಎಂಬ ಅಭಿಪ್ರಾಯವನ್ನು ಹಿರಿಯ ಪತ್ರಕರ್ತರು ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿಶ್ಲೇಷಣೆಗೆ ಒಳಪಡಿಸುತ್ತಿರುವ ಸಮಯ ಇದು. ಯಾಕೆ ಹೀಗಾಗಿದೆ? ಎಂದು ನೋಡಿದರೆ, ಮತ್ತದೇ ಮಾಧ್ಯಮ ಸಂಸ್ಥೆಗಳ ಹಿತಾಸಕ್ತಿ, ಜಾಹೀರಾತುಗಳಿಗಾಗಿ ವರದಿಗಳ ಜತೆ ಹೊಂದಾಣಿಕೆ ಮಾಡಿಕೊಳ್ಳುವ ಮಾರ್ಕೆಟಿಂಗ್ ಗುಣಗಳು ಎಂಬ ಕಾರಣಗಳು ಸಿಗುತ್ತವೆ.

ಹೀಗಾಗಿ ಪರ್ಯಾಯದ ಹುಡುಕಾಟಗಳಿಗೆ ಇನ್ನಿಲ್ಲದ ವೇಗ ಮತ್ತು ಹೊಸ ಸಾಧ್ಯತೆಗಳು ಸೃಷ್ಟಿಯಾಗುತ್ತಿವೆ. “ನಮ್ಮ ವರದಿಯ ಬಗ್ಗೆ ಮಾಧ್ಯಮಗಳ ಮೌನ ನಿರೀಕ್ಷಿತ. ಈ ಬಗ್ಗೆ ನಾವು ಹೆಚ್ಚು ತಲೆ ಕೆಡಿಸಿಕೊಳ್ಳಬೇಕಿಲ್ಲ. ಕೋಬ್ರಾಪೋಸ್ಟ್‌ ವರದಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿನ ಒಂದು ವರ್ಗ ಸ್ವಯಂ ಪ್ರೇರಣೆಯಿಂದ ಜನರಿಗೆ ತಲುಪಿಸುವ ಕೆಲಸ ಮಾಡುತ್ತಿದೆ. ಇದರ ಜತೆಗೆ ಮುಖ್ಯವಾಹಿನಿಯ ಮಾಧ್ಯಮಗಳ ಬಗೆಗೆ ಎಷ್ಟರ ಮಟ್ಟಿಗೆ ನಂಬಿಕೆ ಇಟ್ಟುಕೊಳ್ಳಬಹುದು ಎಂಬುದೂ ನಮಗೆಲ್ಲಾ ಅರ್ಥವಾಗಿದೆ. ಪರ್ಯಾಯ ಆಲೋಚನೆಗಳನ್ನು ಬೆಳೆಸುವುದು ನಮ್ಮ ಮುಂದಿರುವ ಏಕೈಕ ದಾರಿ,’’ ಎನ್ನುತ್ತಾರೆ ಕೋಬ್ರಾಪೋಸ್ಟ್ ಸಂಪಾದಕ ಅನಿರುದ್ಧ್‌ ಬೆಹಲ್.

ಇವತ್ತು ರಾಜಕೀಯ ಪ್ರೇರಿತ, ಕಾರ್ಪೊರೇಟ್ ಪ್ರೇರಿತ ಪತ್ರಿಕೋದ್ಯಮ ಮತಿಗಳು ಎಷ್ಟು ಎಂಬುದು ಸ್ಪಷ್ಟವಾಗುತ್ತಿದೆ. ಹೊರಗೆ ಏನೇ ತನಿಖಾ ಪತ್ರಿಕೋದ್ಯಮ, ಆಶಯಗಳು ಎಂದು ಮಾತನಾಡಿದರೂ, ಸಂಸ್ಥೆಗಳ ಚೌಕಟ್ಟಿನೊಳಗೆ ಅವುಗಳಿಗೆ ಇರುವ ಮಾನ್ಯತೆ, ಸಾಧ್ಯತೆ ಎಷ್ಟು ಎಂಬುದನ್ನು ಅರ್ಥ ಮಾಡಿಕೊಳ್ಳಲು ‘ಸುವರ್ಣ ನ್ಯೂಸ್’ ಬಗೆಗಿನ ಕೋಬ್ರಾಪೋಸ್ಟ್‌ ವರದಿ ಮತ್ತು ನಂತರ ನಡೆದ ಸ್ಪಷ್ಟೀಕರಣದ ಪ್ರಹಸನಗಳು ಸಾಕ್ಷಿ ಒದಗಿಸುತ್ತಿವೆ.

“ನಮ್ಮಲ್ಲಿ ಪತ್ರಕರ್ತರು ಎಡ- ಬಲ ಎಂದು ವಿಭಾಗವಾಗಿ ಹೋಗಿದ್ದಾರೆ. ವಿಶೇಷ ಅಂದರೆ ಹಿಂದೆ ಯಾವತ್ತೂ ರಾಜಕಾರಣಿಗಳ ಪರವಾಗಿ ಇಷ್ಟು ಬಹಿರಂಗವಾಗಿ ಪತ್ರಕರ್ತರು ವಕಾಲತ್ತು ವಹಿಸುತ್ತಿದ್ದ ಉದಾಹರಣೆಗಳು ಸಿಗುವುದಿಲ್ಲ. ಎಲ್ಲವನ್ನೂ, ಎಲ್ಲರನ್ನೂ ಅನುಮಾನದಿಂದಲೇ ನೋಡುವುದು ಪತ್ರಕರ್ತರಿಗೆ ಇರುವ ಮೂಲಭೂತ ಕರ್ತವ್ಯ ಎಂದು ಭಾವಿಸಿದ್ದ ಕಾಲವೊಂದಿತ್ತು. ಎಷ್ಟೋ ಬಾರಿ ಸತ್ಯ ಹೇಳಲು ಆಗದಿದ್ದರೂ, ಮೌನವಾಗಿ ವಿರೋಧಿಸುತ್ತಿದ್ದ ತಲೆಮಾರು ಪತ್ರಿಕೋದ್ಯಮದಲ್ಲಿತ್ತು. ಆದರೆ ಇವತ್ತು ಸತ್ಯ ಹಾಳಾಗಿ ಹೋಗಲಿ, ಪರ- ವಿರೋಧದ ವಕಾಲತ್ತು ವಹಿಸುವವರು ಪತ್ರಕರ್ತರು ಎಂಬಂತಾಗಿದೆ. ಇದು ಕಾಲದ ದುರಂತ,’’ ಎನ್ನುತ್ತಾರೆ ಹಿರಿಯ ಸಂಪಾದಕರೊಬ್ಬರು.

ಸತ್ಯ ಎಂಬುದು ಸಿದ್ಧಾಂತವನ್ನು ಮೀರಿದ್ದು. ಅದಕ್ಕಾಗಿ ಎಡ- ಬಲಗಳ ಆಚೆಗೆ ಇರುವ ಹೊಳವುಗಳನ್ನು ಹುಡುಕುವ ಮನಸ್ಥಿತಿಯೊಂದರ ಅಗತ್ಯವಿದೆ. ಅದರ ಅಗತ್ಯ ಸಾಮಾನ್ಯ ಜನರಿಗೆ ಇವತ್ತು ಇಲ್ಲವಾಗಿರಬಹುದು. ಆದರೆ ಪತ್ರಕರ್ತರೂ ಅಂತಹ ಮನಸ್ಥಿತಿ ಬೆಳೆಸಿಕೊಂಡರೆ, ಅದು ಅಪಾಯಕಾರಿ. ಇವತ್ತು ಅಂತಹದೊಂದು ಅಪಾಯಕಾರಿ ಕಾಲಘಟ್ಟದಲ್ಲಿ ಇದ್ದೇವೆ. ನಡುವೆಯೇ, ಕೋಬ್ರಾಪೋಸ್ಟ್‌ ತನಿಖಾ ವರದಿ ಹೊರಬಿದ್ದಿದೆ. ಈಗಲೂ ನಿಜವಾದ ಪತ್ರಿಕೋದ್ಯಮದ ಕನಸು ಇಟ್ಟುಕೊಂಡವರ ಆತ್ಮಸಾಕ್ಷಿಗಳು ಕೆಣಕದಿದ್ದರೆ, ಭವಿಷ್ಯ ಇನ್ನಷ್ಟು ಕರಾಳವಾಗುವುದರಲ್ಲಿ ಅನುಮಾನ ಇಲ್ಲ.