Home Media 2-0 ‘ಸಮರ್ಥನೆ’ಯ ಒಂದು ಸುಳ್ಳುಸುದ್ದಿ: ಪತ್ರಕರ್ತ ರವೀಶ್‌ ಕುಮಾರ್‌ಗೆ ‘ಸನಾತನ’ರ ಬೆದರಿಕೆ

‘ಸಮರ್ಥನೆ’ಯ ಒಂದು ಸುಳ್ಳುಸುದ್ದಿ: ಪತ್ರಕರ್ತ ರವೀಶ್‌ ಕುಮಾರ್‌ಗೆ ‘ಸನಾತನ’ರ ಬೆದರಿಕೆ

SHARE

ಒಂದು ಕಡೆ ದೇಶದ ಮಾಧ್ಯಮ ಸಂಸ್ಥೆಗಳ ಬಣ್ಣ ಬಯಲು ಮಾಡುವ ‘ಕೋಬ್ರಾಪೋಸ್ಟ್‌’ ಕುಟುಕು ಕಾರ್ಯಾಚರಣೆ ಸದ್ದು ಮಾಡುತ್ತಿದ್ದರೆ, ಮತ್ತೊಂದೆಡೆ ಹಿರಿಯ ಪತ್ರಕರ್ತ ರವೀಶ್‌ ಕುಮಾರ್‌ ಅವರಿಗೆ ಹಿಂದುತ್ವ ಸಂಘಟನೆಗಳು ಕೊಲೆ ಬೆದರಿಕೆ ಒಡ್ಡಿರುವುದು ಅಭಿವ್ಯಕ್ತಿ ಸ್ವಾತಂತ್ರ್ಯ ಮಾತ್ರವಲ್ಲ, ಪತ್ರಕರ್ತರ ಜೀವಗಳೂ ಅಪಾಯದಲ್ಲಿವೆ ಎಂಬುದನ್ನು ಸಾಬೀತುಪಡಿಸಿದೆ.

ಎನ್‌ಡಿಟಿವಿ ಇಂಡಿಯಾದ ಹಿರಿಯ ಕಾರ್ಯನಿರ್ವಾಹಕ ಸಂಪಾದಕ ರವೀಶ್‌ ಕುಮಾರ್‌ ಮತ್ತು ಅವರ ಕುಟುಂಬದವರಿಗೆ ಹಿಂದುತ್ವ ಸಂಘಟನೆಗಳ ಸದಸ್ಯರು ಜೀವ ಬೆದರಿಕೆ ಒಡ್ಡಿದ್ದಾರೆ. ಘಾಜಿಪುರದಲ್ಲಿ ನಡೆದ 11 ವರ್ಷದ ಬಾಲಕಿ ಮೇಲಿನ ಅತ್ಯಾಚಾರವನ್ನು ರವೀಶ್‌ ಸಮರ್ಥಿಸಿದ್ದಾರೆ ಎಂಬ ಸುಳ್ಳುಸುದ್ದಿ ಫೇಸ್‌ಬುಕ್‌ ಮೂಲಕ ಹಬ್ಬಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿ ರವೀಶ್‌ ಅವರಿಗೆ ಜೀವ ಬೆದರಿಕೆ ಹಾಕುವವರೆಗೆ ಬಂದು ನಿಂತಿದೆ.

ಹಿಂದುತ್ವ ಸಂಘಟನೆಗಳ ಸದಸ್ಯರೆಂದು ಹೇಳಿಕೊಳ್ಳುವ ನೂರಾರು ಮಂದಿ ರವೀಶ್‌ ಕುಮಾರ್‌ ಮತ್ತು ಅವರ ಕುಟುಂಬದವರನ್ನು ಕೊಂದು ಹಾಕುವುದಾಗಿ ಎಚ್ಚರಿಕೆ ನೀಡಿದ್ದಾರೆ. ಹಲವು ದೂರವಾಣಿ ಕರೆ ಮಾಡಿ ಹಾಗೂ ಕೆಲವರು ವಿಡಿಯೊ ರೆಕಾರ್ಡ್‌ ಮಾಡಿ ಕೊಲೆ ಬೆದರಿಕೆ ಹಾಕಿದ್ದಾರೆ. ಹಲವರು ಅಶ್ಲೀಲ ಪದಗಳಿಂದ ರವೀಶ್‌ ಅವರನ್ನು ನಿಂದಿಸಿ ಬೆದರಿಕೆ ಹಾಕಿದ್ದಾರೆ.

ತನ್ನನ್ನು ಭಜರಂಗ ದಳದವನು ಎಂದು ಹೇಳಿಕೊಳ್ಳುವ ವ್ಯಕ್ತಿಯೊಬ್ಬ ರವೀಶ್‌ ಕುಮಾರ್‌ ಅವರಿಗೆ ವಿಡಿಯೊ ಮೂಲಕ ಬೆದರಿಕೆ ಒಡ್ಡಿದ್ದಾನೆ. “ರವೀಶ್‌ ಕುಮಾರ್‌ ಇದೇ ರೀತಿ ನೀವು ಸನಾತನ ಧರ್ಮಕ್ಕೆ ಅಪಮಾನ ಮಾಡುತ್ತಿದ್ದರೆ ನಿನ್ನ ಮನೆ ಇರುವ ಪಾಕಿಸ್ತಾನಕ್ಕೆ ಓಡಿಸುತ್ತೇನೆ. ನಿನ್ನನ್ನು ಕೊಂದು ಹಾಕುತ್ತೇನೆ. ಇದು ಭಜರಂಗ ದಳದ ಎಚ್ಚರಿಕೆ” ಎಂದು ಹೇಳಿರುವ ವಿಡಿಯೊ ಕಳಿಸಿದ್ದಾನೆ.

ಇಷ್ಟಕ್ಕೂ ನಡೆದಿದ್ದೇನು?

ಉತ್ತರ ಪ್ರದೇಶದ ಘಾಜಿಪುರದ ಮದರಸಾದಲ್ಲಿ 11 ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆದ ಘಟನೆಯನ್ನು ರವೀಶ್‌ ಕುಮಾರ ಒಪ್ಪಿತ ಲೈಂಗಿಕ ಸಂಪರ್ಕ ಎಂದು ಕರೆದಿದ್ದಾರೆ ಎಂಬ ಹಿಂದಿ ಭಾಷೆಯ ಒಕ್ಕಣೆ ಇದ್ದ ಪೋಸ್ಟರ್‌ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿತ್ತು.

“11 ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರವನ್ನು ರವೀಶ್‌ ಒಪ್ಪಿತ ಲೈಂಗಿಕ ಸಂಪರ್ಕ ಎಂದಿದ್ದಾರೆ. ಒಂದು ವೇಳೆ ಇವರ ಮಗಳ ಮೇಲೆ ಇಂಥ ಕೃತ್ಯ ನಡೆದರೆ ಅದನ್ನೂ ಇವರು ಸರಿ ಎಂದು ವಾದಿಸುತ್ತಾರೆಯೇ?” ಎಂಬ ಹಿಂದಿ ಭಾಷೆಯ ಒಕ್ಕಣೆಯ ಜತೆಗೆ ರವೀಶ್‌ ಕುಮಾರ್‌ ಚಿತ್ರವಿದ್ದ ಪೋಸ್ಟರ್‌ ಏಪ್ರಿಲ್‌ 29ರಂದು ‘ದೇಶ್‌ ಹಿತ್‌ ಕಿ ಬಾತ್’ ಎಂಬ ಫೇಸ್‌ಬುಕ್‌ ಪೇಜ್‌ನಲ್ಲಿ ಪೋಸ್ಟ್ ಆಗಿತ್ತು.

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದ ಸುಳ್ಳುಸುದ್ದಿಯ ಪೋಸ್ಟರ್‌

ಈ ಸುಳ್ಳು ಸುದ್ದಿಯ ಪೋಸ್ಟರ್‌ ‘ದೇಶ್‌ ಹಿತ್‌ ಕಿ ಬಾತ್’ ಪೇಜ್‌ನಿಂದ 8 ಸಾವಿರಕ್ಕೂ ಹೆಚ್ಚು ಶೇರ್‌ ಆಗಿತ್ತು. ರವೀಶ್‌ ಬಾಲಕಿ ಮೇಲಿನ ಅತ್ಯಾಚಾರವನ್ನು ಒಪ್ಪಿತ ಲೈಂಗಿಕ ಸಂಬಂಧ ಎಂದು ಕರೆದಿದ್ದಾರೆ ಎಂಬ ಕಾರಣಕ್ಕೆ ಹಲವರು ರವೀಶ್‌ ವಿರುದ್ಧ ಕಿಡಿಕಾರಿದ್ದರು.

ಆದರೆ, ಆ ಪೋಸ್ಟರ್‌ ಪೋಸ್ಟ್‌ ಆದ ದಿನವೇ ರವೀಶ್‌ ಕುಮಾರ್‌, “ನಾನು ಹಾಗೆ ಹೇಳಿಲ್ಲ. ಹಾಗೆ ಹೇಳುವುದೂ ಇಲ್ಲ. ನನ್ನ ವಿರುದ್ಧ ವಿನಾ ಕಾರಣ ಅಪಪ್ರಚಾರ ಮಾಡಲಾಗುತ್ತಿದೆ. ನನಗೆ ಬೆದರಿಕೆ ಕರೆಗಳು ಬರುತ್ತಿವೆ. ನರೇಂದ್ರ ಮೋದಿ ಅವರು ರಾಜಕೀಯದಲ್ಲಿ ಇಂಥ ಬೆದರಿಕೆ ಸಂಸ್ಕೃತಿಯನ್ನೇ ತುಂಬಿದ್ದಾರೆ. ಬೆದರಿಕೆ ಹಾಕುತ್ತಿರುವವರು ಕೂಡಾ ನರೇಂದ್ರ ಮೋದಿ ಹಿಂಬಾಲಕರು” ಎಂದು ಫೇಸ್‌ಬುಕ್‌ನಲ್ಲಿ ಬರೆದಿದ್ದರು.

ರವೀಶ್‌ ಕುಮಾರ್‌ ತಾವು ಹಾಗೆ ಹೇಳಿಲ್ಲ ಎಂದು ಸ್ಪಷ್ಟನೆ ನೀಡಿದರೂ ಹಿಂದುತ್ವ ಸಂಘಟನೆಗಳ ಸದಸ್ಯರ ಕೋಪ ಇಳಿಯಲಿಲ್ಲ. ರವೀಶ್‌ ಕುಮಾರ್‌ ಅವರನ್ನು, “ಹಿಂದುತ್ವ ವಿರೋಧಿ, ದೇಶ ವಿರೋಧಿ, ಪಾಕಿಸ್ತಾನಿ” ಎಂದೆಲ್ಲಾ ಜರಿದ ಹಲವರು ರವೀಶ್‌ ವಿರುದ್ಧ ಪರೋಕ್ಷ ದಾಳಿ ಮುಂದುವರಿಸಿದ್ದರು.

ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯಲ್ಲಿ (ಸಿಐಎಸ್‌ಎಫ್‌) ಕಾರ್ಯನಿರ್ವಹಿಸುತ್ತಿದ್ದ ದೇವೇಂದ್ರ ಫೌಜಿ ಎಂಬಾತ ರವೀಶ್‌ ಅವರಿಗೆ ಗುಂಡಿಟ್ಟುಕೊಲ್ಲುವ ಬೆದರಿಕೆ ಹಾಕಿದ್ದ. ಈ ಬಗ್ಗೆ ವಿಚಾರಿಸಲು ಎನ್‌ಡಿಟಿವಿ ಪ್ರತಿನಿಧಿ ದೇವೇಂದ್ರ ಫೌಜಿಗೆ ದೂರವಾಣಿ ಕರೆ ಮಾಡಿದಾಗ ಆತ ಅಶ್ಲೀಲ ಪದಗಳನ್ನು ಬಳಸಿದ್ದಲ್ಲದೆ, ರವೀಶ್‌ ಅವರನ್ನು ದೇಶದ್ರೋಹಿ ಎಂದು ಕರೆದು ಗುಂಡಿಕ್ಕಿ ಕೊಲ್ಲುವ ಬೆದರಿಕೆಯನ್ನು ಪುನರುಚ್ಛರಿಸಿದ್ದ.

ಕಾಲ್‌ ರೆಕಾರ್ಡ್‌ ಆಗುತ್ತಿದ್ದ ಬಗ್ಗೆ ಎನ್‌ಡಿಟಿವಿ ಪ್ರತಿನಿಧಿ ಹೇಳಿದರೂ ಮೊದಲು ಆ ಬಗ್ಗೆ ತಲೆಕೆಡಿಸಿಕೊಳ್ಳದ ದೇವೇಂದ್ರ ಫೌಜಿ ಬಳಿಕ ಕ್ಷಮೆ ಕೋರಿ ವಿಡಿಯೊ ಸಂದೇಶ ಕಳಿಸಿದ್ದ. ಆದರೆ, ರವೀಶ್‌ ಅವರಿಗೆ ಬರುವ ಬೆದರಿಕೆ ಕರೆಗಳು ಮಾತ್ರ ಕಡಿಮೆಯಾಗಲಿಲ್ಲ.

“ಇವು ಅನಾಮಿಕ ಬೆದರಿಕೆಗಳಲ್ಲ. ಜಿಲ್ಲಾ ಮಟ್ಟದಲ್ಲಿ ಸಂಘಟನೆಯ ಹೆಸರಿನಲ್ಲಿ ಇವರಿಗೆ ಹುದ್ದೆಗಳಿವೆ. ಇವರಿಗೆ ರಾಜಕೀಯ ಹಾಗೂ ಸಾಂಸ್ಥಿಕ ಬೆಂಬಲವಿದೆ. ಬೆದರಿಕೆ ಕರೆಗಳ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದೇನೆ. ಭದ್ರತೆ ನೀಡುವ ಬಗ್ಗೆ ಪರಿಶೀಲಿಸುತ್ತೇವೆ ಎಂದು ಪೊಲೀಸರು ಹೇಳಿದ್ದಾರೆ. ಆದರೆ, ನನ್ನ ಭದ್ರತೆಯ ವಿಷಯಕ್ಕಿಂತ ದೇಶದಲ್ಲಿ ಎಂಥ ಅಸಹಿಷ್ಣುತೆಯ ಪರಿಸ್ಥಿತಿ ನಿರ್ಮಾಣವಾಗುತ್ತಿದೆ ಎಂಬ ಬಗ್ಗೆ ಕಳವಳ ಉಂಟಾಗುತ್ತಿದೆ” ಎಂದಿದ್ದಾರೆ ರವೀಶ್‌ ಕುಮಾರ್.

ಸತ್ಯವನ್ನು ನಿಷ್ಠುರವಾಗಿ ಹೇಳುವವರಿಗೆ ಅದನ್ನು ಸಹಿಸಲು ಸಾಧ್ಯವಾಗದ ವಲಯದಿಂದ ಇಂತಹ ಜೀವ ಬೆದರಿಕೆ ಬರುವುದು ಸಾಮಾನ್ಯ. ಆದರೆ, ಇತ್ತೀಚಿನ ಅಸಹಿಷ್ಣುತೆಯ ಪ್ರಮಾಣವನ್ನು ನೋಡಿದರೆ ಇವು ಕೇವಲ ಬೆದರಿಕೆಯ ಮಟ್ಟಕ್ಕೇ ನಿಲ್ಲುತ್ತಿಲ್ಲ.

ಎಂ.ಎಂ. ಕಲಬುರ್ಗಿ, ಪಾನ್ಸಾರೆ, ಗೌರಿ ಲಂಕೇಶ್‌ – ಹೀಗೆ ಅಸಹಿಷ್ಣುತೆಗೆ ಬಲಿಯಾದ ಜೀವಗಳ ಪಟ್ಟಿ ಬೆಳೆಯುತ್ತದೆ. ಅಪ್ರಿಯ ಸತ್ಯವನ್ನು ಒಪ್ಪದ ಹಾಗೂ ಸುಳ್ಳನ್ನೇ ವಿಜೃಂಭಿಸುವ ಇಂದಿನ ಪರಿಸ್ಥಿತಿಗೆ ರವೀಶ್‌ ಕುಮಾರ್‌ ಪ್ರಕರಣ ಮತ್ತೊಂದು ಉದಾಹರಣೆ.