Home ದೇಶ ‘ಸೆಕ್ಸ್ ಇನ್ ಇಂಡಿಯಾ’; ಮದನೋತ್ಸವದಲ್ಲಿ ದಕ್ಷಿಣದವರಿಗಿಂತ ಉತ್ತರದವರೇ ಮುಂದೆ!

‘ಸೆಕ್ಸ್ ಇನ್ ಇಂಡಿಯಾ’; ಮದನೋತ್ಸವದಲ್ಲಿ ದಕ್ಷಿಣದವರಿಗಿಂತ ಉತ್ತರದವರೇ ಮುಂದೆ!

SHARE

ನೀವು 30 ವರ್ಷಗಳ ನಂತರ ಮೊದಲ ಬಾರಿ ಲೈಂಗಿಕ ಕ್ರಿಯೆ ನಡೆಸಿದ್ದೀರಾ? ಹಾಗದರೇ ನೀವು ಈ ವಿಚಾರದಲ್ಲಿ ದೇಶದ ಶೇಕಡ 90ರಷ್ಟು ಜನರಿಗಿಂತ ಹಿಂದುಳಿದಿದ್ದೀರಿ! ಹೀಗೆಂದು ನಾವು ಹೇಳುತ್ತಿಲ್ಲ, ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ ವರದಿಯೇ ಈ ಅಂಶವನ್ನು ಬಹಿರಂಗ ಪಡಿಸಿದೆ. ಭಾರತದಲ್ಲಿ ಮೊದಲ ಬಾರಿ ಲೈಂಗಿಕ ಸುಖ ಅನುಭವಿಸುತ್ತಿರುವ ಶೇ.90ರಷ್ಟು ಮಂದಿಗೆ ಇನ್ನೂ 30 ವರ್ಷ ದಾಟಿಲ್ಲ.

ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ 2015-16ನೇ ಸಾಲಿನಲ್ಲಿ ರಾಷ್ಟ್ರವ್ಯಾಪಿ ಸಮೀಕ್ಷೆಯನ್ನು ಕೈಗೊಂಡಿತ್ತು. ಭಾರತದ ಪ್ರಜೆಗಳು ಯಾವ ವಯಸ್ಸಿನಲ್ಲಿ ಮೊದಲ ಬಾರಿ ಲೈಂಗಿಕ ಕ್ರಿಯೆಯನ್ನು ನಡೆಸಿದ್ದಾರೆ ಎನ್ನುವುದರ ಕುರಿತು ಸಮೀಕ್ಷೆ ನಡೆಸಿತ್ತು. ಸಮೀಕ್ಷೆಯ ವರದಿ ಹೇಳುವ ಪ್ರಕಾರ ಬಹುಪಾಲು ಪುರುಷರು 20ರಿಂದ 24 ವರ್ಷದ ವಯಸ್ಸಿನೊಳಗೆ ಮೊದಲ ಬಾರಿಗೆ ಲೈಂಗಿಕ ಸುಖ ಪಡೆಯುತ್ತಾರೆ. ಬಹುಪಾಲು ಮಹಿಳೆಯರು 15ರಿಂದ 19ರ ವಯಸ್ಸಿನೊಳಗೆ ಮೊದಲ ಲೈಂಗಿಕ ಸುಖವನ್ನು ತಮ್ಮದಾಗಿಸಿಕೊಳ್ಳುತ್ತಾರೆ.

ಭಾರತದಲ್ಲಿ ಪುರುಷರಿಗಿಂತ ಮಹಿಳೆಯರಿಗೆ ಬೇಗ ಮದುವೆ ಮಾಡಲಾಗುತ್ತದೆ. ಬಹುತೇಕ ಸಂಧರ್ಭದಲ್ಲಿ ಮದುವೆಯಾಗುವ ವರನಿಗೆ 21 ವರ್ಷ ವಯಸ್ಸು ದಾಟಿರುತ್ತದೆ. ಬಹುತೇಕ ಯುವತಿಯರಿಗೆ 18-20 ವರ್ಷದೊಳಗೆ ಮದುವೆ ಮಾಡಲಾಗುತ್ತದೆ. ಈ ವಯಸ್ಸಿನ ಅಂತರ ಮಹಿಳೆಯರು ಪುರುಷರಿಂತ ಮೊದಲು ಲೈಂಗಿಕ ಸುಖ ಪಡೆಯಲು ಕಾರಣವಾಗಿದೆ.

ಭಾರತದಲ್ಲಿ ನಡೆಯುವ ಎಷ್ಟೋ ಮೊದಲ ಲೈಂಗಿಕ ಕ್ರಿಯೆಗಳು ಒಮ್ಮುಖವಾಗಿರುತ್ತವೆ. ಬಹುಪಾಲು ಸಮಯದಲ್ಲಿ ಮಹಿಳೆ/ಯುವತಿಯರ ಒಪ್ಪಿಗೆಯಿಲ್ಲದೆ ಲೈಂಗಿಕ ಕ್ರಿಯೆಗೆ ಗಂಡಂದಿರು ಮುಂದಾಗುತ್ತಾರೆ ಎಂದು ವರದಿ ಹೇಳುತ್ತದೆ.

ಶೈಕ್ಷಣಿಕ ಸಾಧನೆಯಲ್ಲಿ ತೊಡಗಿರುವವರು ಬೇಗ ಲೈಂಗಿಕ ಕ್ರಿಯೆಯನ್ನು ನಡೆಸುವುದಿಲ್ಲ. ಕಾಲೇಜುಗಳಲ್ಲಿ ಹಲವಾರು ವರ್ಷಗಳನ್ನು ಕಳೆಯುವ ಇವರಿಗೆ ಮದುವೆಯಾಗುವುದೂ ಕೂಡ ಶಿಕ್ಷಣ ಮುಗಿದ ಮೇಲೆ. ಈ ಕಾರಣಕ್ಕಾಗಿಯೇ ಮೊದಲ ಲೈಂಗಿಕ ಕ್ರಿಯೆ ಕೂಡ ಮುಂದೂಡಲ್ಪಡುತ್ತದೆ. ವಿದ್ಯಾಭ್ಯಾಸದಲ್ಲಿ ನಿರತರಾಗಿರುವ ಯುವತಿರ ಮೊದಲ ಲೈಂಗಿಕ ಕ್ರಿಯೆ ಕೂಡ ಮುಂದೂಡಲ್ಪಡುತ್ತಿದೆ. ಶಿಕ್ಷಣ ಪಡೆಯುತ್ತಿರುವ ಮಹಿಳೆ ಮತ್ತು ಪುರುಷರಿಬ್ಬರೂ ಕೂಡ ಶಿಕ್ಷಣ ಪಡೆಯದವರಿಗಿಂತ ತಡವಾಗಿ ಲೈಂಗಿಕ ಕ್ರಿಯೆ ನಡೆಸುತ್ತಾರೆ. ಈ ಅಂಶವನ್ನು ಕೆಳಗಿನ ಚಾರ್ಟ್‌ ತೋರಿಸುತ್ತದೆ.

ವರದಿಯ ಅಂಕಿಸಂಖ್ಯೆಗಳು ಹೇಳುವಂತೆ ದೇಶದ ಬಹುಪಾಲು ಭಾಗಗಳಲ್ಲಿ ವಿವಾಹಪೂರ್ವ ಲೈಂಗಿಕತೆ ಎನ್ನುವುದು ನಿಷಿದ್ಧ. 15ರಿಂದ 24 ವಯಸ್ಸಿನೊಳಗಿನ ಶೇ.11ರಷ್ಟು ಯುವಕರು ಮತ್ತು ಶೇ.2ರಷ್ಟು ಯುವತಿಯರು ಮಾತ್ರ ವಿವಾಹಪೂರ್ವ ಲೈಂಗಿಕತೆಯನ್ನು ನಡೆಸಿದ್ದಾರೆ. ಯುವಕರ ವಿವಾಹಪೂರ್ವ ಲೈಂಗಿಕತೆಯಲ್ಲಿ ಛತ್ತೀಸ್‌ಗಢ ಮುಂದಿದ್ದು 15ರಿಂದ 24 ವರ್ಷದೊಳಗಿನ ಶೇ.21.1ರಷ್ಟು ಯುವಕರು ಮದುವೆಗೆ ಮುಂಚೆಯೇ ಲೈಂಗಿಕ ಕ್ರಿಯೆಯನ್ನು ನಡೆಸಿದ್ದಾರೆ. ಎರಡನೇ ಸ್ಥಾನದಲ್ಲಿ ಮಧ್ಯ ಪ್ರದೇಶ ರಾಜ್ಯವಿದ್ದು ಶೇ.20.7ರಷ್ಟು ಯುವಕರು ಮದುವೆಗೆ ಮುಂಚೆ ಲೈಂಗಿಕತೆಯಲ್ಲಿ ಭಾಗಿಯಾಗಿದ್ದಾರೆ.

ಉತ್ತರ ಭಾರತದವರೇ ಮುಂದೆ:

ಇನ್ನು ಅತಿಹೆಚ್ಚು ಲೈಂಗಿಕ ಕ್ರಿಯೆಯಲ್ಲಿ ಭಾಗಿಯಾಗುವವರಲ್ಲಿ ದಕ್ಷಿಣಕ್ಕಿಂತ ಉತ್ತರ ಭಾರತದವರೇ ಮುಂದಿದ್ದಾರೆ. ಹರಿಯಾಣ, ಪಂಜಾಬ್‌, ಛತ್ತೀಸ್‌ಗಢ ಮತ್ತು ಪಶ್ಚಿಮ ಬಂಗಾಳದ ಸಮೀಕ್ಷೆಗೊಳಪಟ್ಟ ಶೇ.55ರಷ್ಟು ಜನರು ಸಮೀಕ್ಷೆ ನಡೆಯುವ 1 ತಿಂಗಳ ಮುಂಚೆಯಷ್ಟೇ ಲೈಂಗಿಕ ಸುಖವನ್ನು ಪಡೆದಿದ್ದಾಗಿ ತಿಳಿಸಿದ್ದಾರೆ. ಜೀವಿತಾವಧಿಯಲ್ಲಿ ಅತಿಹೆಚ್ಚು ಲೈಂಗಿಕ ಸುಖ ಪಡೆಯುವವರ ಪಟ್ಟಿಯಲ್ಲಿ ಮಧ್ಯ ಪ್ರದೇಶ ಮತ್ತು ರಾಜಸ್ತಾನದ ಮಂದಿಯಿದ್ದಾರೆ.

ರಾಷ್ಟ್ರಾದ್ಯಂತ ಶೇ. 47ರಷ್ಟು ಪುರುಷರು ಮತ್ತು ಶೇ.48ರಷ್ಟು ಮಹಿಳೆಯರು ಸಮೀಕ್ಷೆಯಲ್ಲಿ ಭಾಗಿಯಾಗುವ 1 ತಿಂಗಳ ಮುಂಚೆ ಲೈಂಗಿಕ ಕ್ರಿಯೆಯಲ್ಲಿ ಭಾಗಿಯಾಗಿದ್ದರು ಎಂದು ವರದಿಯ ದತ್ತಾಂಶಗಳು ತಿಳಿಸುತ್ತವೆ.

ಸಮೀಕ್ಷೆಗೆ ಒಂದು ತಿಂಗಳ ಮುಂಚೆ, ಎಲ್ಲಾ ವಯಸ್ಸಿನ ಪುರುಷರಲ್ಲಿ ಮದುವೆಯಾಗದೇ ಲೈಂಗಿಕ ಕ್ರಿಯೆಯಲ್ಲಿ ತೊಡಗಿರುವವರ ಪ್ರಮಾಣ ಕೇವಲ ಶೇ.3ರಷ್ಟು ಮಾತ್ರ. ಮಹಿಳೆಯರ ಪ್ರಮಾಣ ಶೇ.1%.

ಎಲ್ಲಾ ವಯಸ್ಸಿನ ಶೇ.5ಕ್ಕಿಂತಲೂ ಹೆಚ್ಚು ಜನ ಅವಿವಾಹಿತ ಪುರುಷರು ಲೈಂಗಿಕತೆಯಲ್ಲಿ ತೊಡಗಿರುವ ರಾಜ್ಯಗಳ ಸಾಲಿನಲ್ಲಿ ಪಂಜಾಬ್‌, ಹರಿಯಾಣ, ಚತ್ತೀಸ್‌ಗಢ ಮತ್ತು ಮಧ್ಯ ಪ್ರದೇಶಗಳಿವೆ. ಅವಿವಾಹಿತ ಮಹಿಳೆಯರ ಪೈಕಿ ಶೇ.2ರಷ್ಟು ಕರ್ನಾಟಕದ ಮಹಿಳೆಯರು ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದಾರೆ. ಗುಜರಾತ್‌ನ ಶೇ.1ರಷ್ಟು ಅವಿವಾಹಿತ ಮಹಿಳೆಯರು ಲೈಂಗಿಕ ಕ್ರಿಯೆ ನಡೆಸಿದ್ದಾರೆ.

ದೇಶದಲ್ಲಿ ಮದುವೆಯಾಗದೇ ಉಳಿದಿರುವ ಶೇ.14ರಷ್ಟು ಪುರುಷರು ಮತ್ತು ಶೇ.2ರಷ್ಟು ಮಹಿಳೆಯರು ಲೈಂಗಿಕ ಸಂಪರ್ಕವನ್ನು ಬೆಳೆಸಿಕೊಂಡಿದ್ದಾರೆ. ದೇಶದುದ್ದಗಲಕ್ಕೂ ಸಂಖ್ಯೆಯಲ್ಲಿ ಅಂತಹ ವ್ಯತ್ಯಾಸಗಳೇನಿಲ್ಲ ಎಂದು ವರದಿ ಹೇಳುತ್ತದೆ.

ಮದುವೆಗೆ ಮುಂಚೆ ಲೈಂಗಿಕ ಕ್ರಿಯೆ ನಡೆಸಿದ್ದೇವೆ ಎಂದಿರುವ ಬಹುಪಾಲು ಮಂದಿ ತಮ್ಮ ಪ್ರಿಯತಮೆ ಅಥವಾ ಪ್ರಿಯಕರನೊಂದಿಗೆ ಲೈಂಗಿಕ ಸುಖ ಅನುಭವಿಸಿದ್ದಾರೆ. ಈ ಸಂಖ್ಯೆಯಲ್ಲಿ ಶೇ.10ರಷ್ಟು ಮಂದಿ ಲಿವಿಂಗ್‌ ಟುಗೆದರ್‌ ಸಂಬಂಧವನ್ನು ಹೊಂದಿದ್ದಾರೆ.

ಶೇ.12ರಷ್ಟು ಪುರುಷರು ಪರಿಚಯಸ್ಥ ಮಹಿಳೆಯರಿಗೊಂದಿಗೆ ಲೈಂಗಿಕ ಸಂಬಂಧವನ್ನು ಹೊಂದಿದ್ದು, ಶೇ.6ರಷ್ಟು ಪುರುಷರು ಮಹಿಳಾ ಲೈಂಗಿಕ ಕಾರ್ಮಿಕರ ಜತೆ ಲೈಂಗಿಕ ಕ್ರಿಯೆ ನಡೆಸಿದ್ದಾರೆ. ಇನ್ನು ಕೆಲವರು ತಮ್ಮ ಲೈಂಗಿಕ ಸಂಬಂಧದ ಮೂಲದ ಗುಟ್ಟು ಬಿಟ್ಟುಕೊಟ್ಟಿಲ್ಲ.

ಮಾಹಿತಿ ಮೂಲ: ಲೈವ್‌ ಮಿಂಟ್