Home Inside Story ‘ಎಲೆಕ್ಷನ್ ಸೀಕ್ರೆಟ್’: ಈ ಇಬ್ಬರು ಹಿರಿಯರ ಸೋಲಿನ ಹಿಂದಿದೆ ಬಿಜೆಪಿ ನಡೆಸಿದ ಷಡ್ಯಂತ್ರ!

‘ಎಲೆಕ್ಷನ್ ಸೀಕ್ರೆಟ್’: ಈ ಇಬ್ಬರು ಹಿರಿಯರ ಸೋಲಿನ ಹಿಂದಿದೆ ಬಿಜೆಪಿ ನಡೆಸಿದ ಷಡ್ಯಂತ್ರ!

SHARE

ಕರ್ನಾಟಕದ ವಿಧಾನಸಭೆ ಚುನಾವಣೆ ಮುಗಿದಿದೆ. ಫಲಿತಾಂಶ ಹೊರಬಿದ್ದು ವಾರ ಕಳೆದಿದೆ. ಒಬ್ಬರು ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡಿ, ರಾಜೀನಾಮೆಯನ್ನು ನೀಡಿದ್ದೂ ಆಗಿದೆ. ಈಗ ನಿಯೋಜಿತ ಮುಖ್ಯಮಂತ್ರಿ ದೇವಸ್ಥಾನಗಳಿಂದ ದೇವಸ್ಥಾನಗಳಿಗೆ ತಮ್ಮ ಮೊದಲ ಪತ್ನಿ ಜತೆ ಭೇಟಿ ನೀಡುತ್ತಿದ್ದಾರೆ. ಸಂಪುಟ ರಚನೆ, ರಾಜಕೀಯ ಪರ್ಯಾಯಗಳು ಸುದ್ದಿಕೇಂದ್ರವನ್ನು ಆವರಿಸಿಕೊಂಡಿವೆ. ಇವೆಲ್ಲವೂ ಗೆದ್ದವರ ಕತೆಗಳು.

ಆದರೆ ಈ ಬಾರಿ ಚುನಾವಣೆಯಲ್ಲಿ ಸೋತವರನ್ನು ಹುಡುಕಿಕೊಂಡು ಹೋದರೆ ಅಚ್ಚರಿ ಮೂಡಿಸುವಂತಹ ಕತೆಗಳು ಎಡತಾಕುತ್ತವೆ. ಈ ಬಾರಿ ಕಣದಲ್ಲಿದ್ದ ಕೆಲವೇ ಹಿರಿಯ ಅಭ್ಯರ್ಥಿಗಳ ಪೈಕಿ ಮಡಿಕೇರಿ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ಬಿ. ಎ. ಜೀವಿಜಯ ಹಾಗೂ ಸಾಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕಾಗೋಡು ತಿಮ್ಮಪ್ಪ ಪ್ರಮುಖರು. ಇಬ್ಬರೂ ತಮ್ಮ ಗೆಲ್ಲುವ ಉತ್ಸಾಹದಲ್ಲಿ ಇದ್ದವರು. ಆದರೆ ಫಲಿತಾಂಶ ಹೊರಬಂದಾಗ ಹೀನಾಯ ಸೋಲು ಕಂಡಿದ್ದಾರೆ. ಯಾಕಿರಬಹುದು ಎಂದು ಹುಡುಕಿಕೊಂಡು ಹೋದರೆ, ರಾಜಕೀಯದಲ್ಲಿ ಏನೆಲ್ಲಾ ಷಡ್ಯಂತ್ರಗಳು ನಡೆಯುತ್ತವೆ ಎಂಬುದರ ಮಾಹಿತಿ ಲಭ್ಯವಾಗುತ್ತದೆ.

ಅವರು ಜೀವಿಜಯ:

ತಮ್ಮ ನಿವಾಸದ ಮುಂದೆ ಜೀವಿಜಯ, ಚುನಾವಣೆ ಘೋಷಣೆಗೂ ಮೊದಲು. 

ಮಡಿಕೇರಿಯ ಸೋಮವಾರಪೇಟೆಯ ಜಯಶ್ರೀ ಎಸ್ಟೇಟ್‌ನಲ್ಲಿ ‘ಸಮಾಚಾರ’ದ ಜತೆ ಮಾತಿಗೆ ಸಿಕ್ಕರು ಬಿ. ಎ. ಜೀವಿಜಯ. ಆಗಿನ್ನೂ ಚುನಾವಣೆ ಘೋಷಣೆ ಆಗಿರಲಿಲ್ಲ. ಅಖಾಡ ಸಿದ್ಧವಾಗಿತ್ತು. ಮಡಿಕೇರಿ ಹಾಲಿ ಶಾಸಕ ಅಪ್ಪಚ್ಚು ರಂಜನ್ ಬಗ್ಗೆ ಕ್ಷೇತ್ರದಲ್ಲಿ ಅಮಾಧಾನ ಎದ್ದು ಕಾಣಿಸುತ್ತಿತ್ತು. ಸತತ ಗೆಲುವಿನ ನಂತರವೂ ಅವರು ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡಿಲ್ಲ ಎಂಬುದು ಕುಶಾಲನಗರ ಸೇರಿದಂತೆ ಕ್ಷೇತ್ರದಲ್ಲಿ ಎಲ್ಲಿಗೇ ಭೇಟಿ ನೀಡಿದರೂ ಸಾಮಾನ್ಯವಾಗಿ ಕೇಳಿ ಬರುವ ಆರೋಪವಾಗಿತ್ತು.

ಅಪ್ಪಚ್ಚು ರಂಜನ್‌ಗೆ ಹೋಲಿಸಿದರೆ ಜೀವಿಜಯ ಹಳೆ ಹುಲಿ. ಹಿಂದೆ ಸಚಿವರಾಗಿದ್ದವರು. 70- 80ರ ದಶಕದಲ್ಲಿಯೇ ಮಡಿಕೇರಿಯ ಹಳ್ಳಿ ಹಳ್ಳಿಗೆ ಟಾರು ರಸ್ತೆಯನ್ನು ನಿರ್ಮಿಸಿದವರು. ಸುಬ್ರಮಣ್ಯ ಸಂಪರ್ಕಿಸುವ ಹೆದ್ದಾರಿ ಯೋಜನೆ ಕೈಗೆತ್ತಿಕೊಂಡವರು. ಅಪ್ಪಚ್ಚು ರಂಜನ್ ಆಡಳಿತ ವೈಖರಿಯೇ ಈ ಬಾರಿಯ ಚುನಾವಣೆಯಲ್ಲಿ ಜೀವಿಜಯ ಗೆಲುವಿಗೆ ಸೋಪಾನ ಎನ್ನಲಾಗುತ್ತಿತ್ತು. ಹಾಗಂತ ಜೀವಿಜಯ ನಂಬಿಕೊಂಡಿದ್ದರು.

“ಜನರಿಗೆ ಈ ಬಾರಿ ಅರ್ಥವಾಗಿದೆ. ಯಾರನ್ನು ಗೆಲ್ಲಿಸಿದರೆ ಕ್ಷೇತ್ರಕ್ಕೆ ಒಳಿತಾಗುತ್ತದೆ ಎಂಬುದನ್ನು ಅವರು ತೀರ್ಮಾನ ಮಾಡಿದ್ದಾರೆ. ನನ್ನ ಗೆಲುವು ಅನಾಯಾಸ. ಅದಕ್ಕಾಗಿ ಸಿದ್ಧತೆ ಮಾಡಿಕೊಳ್ಳುತ್ತಿದ್ದೇನೆ,’’ ಎಂದು ಮಾತು ಆರಂಭಿಸಿದರು ಜೀವಿಜಯ.

ಆಗಷ್ಟೆ ಒಂದು ಸುತ್ತಿನ ಸಭೆ ಮುಗಿಸಿದ್ದ ಅವರು ಯಾವ್ಯಾವ ಬೂತ್‌ಗಳಲ್ಲಿ ಏನೇನು ನಡೆಯುತ್ತಿದೆ ಎಂಬ ಮಾಹಿತಿ ಪಡೆದುಕೊಂಡಿದ್ದರು. ಹೀಗೆ, ತಮ್ಮ ಚುನಾವಣೆ ಸಿದ್ಧತೆ ಕುರಿತು ಮಾತನಾಡಿದ ಅವರು, ಮುಂದಿನ ಒಂದು ಗಂಟೆಗೂ ಹೆಚ್ಚು ಕಾಲ ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ರಾಜಕೀಯಗಳ ಕುರಿತು ಮಾತನಾಡಿದರು. ಒಬ್ಬ ಮತ್ಸದ್ಧಿ ರಾಜಕಾರಣಿಯ ನಡವಳಿಕೆ ಅವರಲ್ಲಿ ಕಾಣಿಸುತ್ತಿತ್ತು.

ಸೋಮವಾರಪೇಟೆಯ ‘ಜಯಶ್ರೀ ಎಸ್ಟೇಟ್‌ನಲ್ಲಿ’ ಜೀವಿಜಯ ಜತೆ ‘ಸಮಾಚಾರ’ದ ಪ್ರತಿನಿಧಿ. 

ಈಗ ಫಲಿತಾಂಶ ಹೊರಬಿದ್ದಿದೆ. ಜೀವಿಜಯ ಬಿಜೆಪಿಯ ಅಪ್ಪಚ್ಚು ರಂಜನ್ ವಿರುದ್ಧ 16 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಸೋತಿದ್ದಾರೆ. ಯಾಕೆ? ಎಂದು ಹುಡುಕಿಕೊಂಡು ಹೋದರೆ ಚುನಾವಣೆಗೆ ದಿನಗಣನೆ ಆರಂಭವಾದ ನಂತರ ಬಿಜೆಪಿ ಪಾಳೆಯ ನಡೆಸಿದ ಭಾರಿ ಷಡ್ಯಂತ್ರವೊಂದು ಬಿಚ್ಚಿಕೊಳ್ಳುತ್ತದೆ.

ಮನೆಗೆ ಕಾಲಿಟ್ಟ ವಿರೋಧಿಗಳು:

ಚುನಾವಣೆಗೆ ಇನ್ನೇನು ಕೆಲವೇ ದಿನಗಳಿದ್ದವು. ಆ ಸಮಯದಲ್ಲಿ ಅಪ್ಪಚ್ಚು ರಂಜನ್‌ಗೆ ಕೆಲವು ಬಲಪಂಥೀಯ ಕಾರ್ಯಕರ್ತರು ಮುತ್ತಿಗೆ ಹಾಕಿದರು. ಇದು ಸ್ಥಳೀಯ ಮಾಧ್ಯಮಗಳಲ್ಲಿ ಸುದ್ದಿಯಾಯಿತು. “ಅವತ್ತು ಜೀವಿಜಯ ಗೆಲುವು ಖಂಡಿತಾ ಸಾಧ್ಯ ಎಂದು ಎಲ್ಲರಿಗೂ ಅನ್ನಿಸಿತ್ತು. ಮೊದಲೇ ಆಡಳಿತ ವಿರೋಧಿ ಅಲೆ ಇತ್ತು. ಅದರ ಮೇಲೆ ಅವರದ್ದೇ ಪರಿವಾರ ಕಾರ್ಯಕರ್ತರು ತಿರುಗಿ ಬಿದ್ದಿದ್ದಾರೆ ಎಂದ ಮೇಲೆ ಗೆಲುವಿಗೆ ಇನ್ನೇನು ಬೇಕು ಎಂದು ಮಾತನಾಡಿಕೊಂಡೆವು,’’ ಎನ್ನುತ್ತಾರೆ ಜಿವಿಜಯ ಆಪ್ತರೊಬ್ಬರು.

ಹಾಗೆ, ಅಪ್ಪಚ್ಚುರಂಜನ್ ವಿರುದ್ಧ ತಿರುಗಿ ಬಿದ್ದವರು, ಮಾರನೇ ದಿನವೇ ನೇರವಾಗಿ ಜಯಶ್ರೀ ಎಸ್ಟೇಟ್ ಪ್ರವೇಶಿಸಿದರು. ಅವರನ್ನು ನಂಬದಿರಲು ಕಾರಣಗಳಿರಲಿಲ್ಲ. ಮೊದಲೇ ಬಿಜೆಪಿಯಿಂದ ಬಂದವರು, ಚುನಾವಣೆ ನಡೆಸುವುದು ಅವರಿಗೆ ಕರಗತವಾಗಿದೆ ಎಂಬ ಕಾರಣಕ್ಕೆ ಜೀವಿಜಯ ಪರಿವಾರದ ಕಾರ್ಯಕರ್ತರ ಕೈಗೆ ತಮ್ಮ ಚುನಾವಣೆಯ ತಂತ್ರಗಾರಿಕೆ ರೂಪಿಸುವ ಅವಕಾಶ ಕೊಟ್ಟುಬಿಟ್ಟರು. ಅವರ ಸೋಲಿಗೆ ಮೊದಲ ಮೊಳೆ ಬಿದ್ದಿದ್ದು ಅಲ್ಲಿಂದಲೇ.

“ಮುಂದಿನ ಹದಿನೈದು ದಿನ ನಡೆದಿದ್ದು ಬೆನ್ನಿಗೇ ಚೂರಿ ಹಾಕುವ ಕೆಲಸ. ಮನೆಯಲ್ಲಿದ್ದುಕೊಂಡೇ ಅಪ್ಪಚ್ಚು ರಂಜನ್ ಪಾಳೆಯಕ್ಕೆ ಸುದ್ದಿಗಳನ್ನು ರವಾನಿಸತೊಡಗಿದರು. ಎಲ್ಲಿ ಸಭೆ ನಡೆಯುತ್ತಿದೆ, ಎಷ್ಟರ ಮಟ್ಟಿಗೆ ಜನಾಭಿಪ್ರಾಯ ಸಿಗುತ್ತಿದೆ. ಕೊನೆಯ ಮೂರು ದಿನಗಳಲ್ಲಿ ಜೀವಿಜಯ ಹಾಕಿಕೊಂಡು ಯೋಜನೆಗಳೇನು ಎಂಬುದು ಬಿಜೆಪಿ ತಲುಪತೊಡಗಿತು. ಕೊನೆಯ ದಿನ, ಜೆಡಿಎಸ್‌ ಕಾರ್ಯಕರ್ತರನ್ನು ಅಲುಗಾಡದಂತೆ ಮಾಡಲಾಯಿತು. ಬಿಜೆಪಿ ಮಾತ್ರ ಹಳ್ಳಿ ಹಳ್ಳಿಗೆ ಹೋಗಿ ಹಣ ಹಂಚಿ ಬಂದರು. ಫಲಿತಾಂಶ ಬಂದಾಗ ಅಪ್ಪಚ್ಚು ರಂಜನ್ ಭಾರಿ ಅಂತರದಿಂದ ಗೆದ್ದಿದ್ದರು,’’ ಎನ್ನುತ್ತಾರೆ ಜೀವಿಜಯ ಜತೆಯಲ್ಲಿದ್ದು ಚುನಾವಣೆಯನ್ನು ಹತ್ತಿರದಿಂದ ನೋಡಿದ ವಸಂತ್ ಕೊಡಗು.

ಹಿರಿಯ ರಾಜಕಾರಣಿ ಜೀವಿಜಯ ಇಂತಹದೊಂದು ಷಡ್ಯಂತ್ರಕ್ಕೆ ಬಲಿಯಾಗಿದ್ದು ಅರ್ಥವಾಗುವ ಹೊತ್ತಿಗೆ ಕಾಲ ಮುಂಚಿ ಹೋಗಿತ್ತು. ಜನ ತಮ್ಮ ಆದೇಶವನ್ನು ನೀಡಿಯಾಗಿತ್ತು. ಬಿಜೆಪಿ ತಂತ್ರಗಾರಿಕೆ ‘ಯಶಸ್ವಿ’ಯಾಗಿತ್ತು.

ಅಪ್ಪಚ್ಚು ರಂಜನ್ ವಿರುದ್ಧ ನಡೆದ ಪ್ರತಿಭಟನೆಯೇ ಪೂರ್ವನಿಯೋಜಿತನಾ? ಅ ನಂತರ ನಡೆದ ಬೆಳವಣಿಗಳು ಬಿಜೆಪಿ ಹೆಣೆದ ಚುನಾವಣೆ ತಂತ್ರಗಾರಿಕೆ ಭಾಗನಾ? ಜಯಶ್ರೀ ಎಸ್ಟೇಟ್‌ನಲ್ಲಿ ಆತ್ಮಾವಲೋಕನ ನಡೆಯುತ್ತಿದೆ.

ಕಾಗೋಡಿಗೆ ಖೆಡ್ಡಾ:

ಕಾಗೋಡು ತಿಮ್ಮಪ್ಪ. 

ಇತ್ತ ಸಾಗರ ಕ್ಷೇತ್ರದಿಂದ ಸ್ಪರ್ಧಿಸಿದ್ದ ಕಾಗೋಡು ತಿಮ್ಮಪ್ಪ ಮರು ಆಯ್ಕೆಗೆ ಹೇಳಿಕೊಳ್ಳುವ ಕಾರಣಗಳು ಇರಲಿಲ್ಲ. ಹಾಗಂತ ಸೋಲಿಗೂ ಕಾರಣಗಳು ಇರಲಿಲ್ಲ. ಬಿಜೆಪಿಯಿಂದ ಹರತಾಳು ಹಾಲಪ್ಪಗೆ ಟಿಕೆಟ್ ನೀಡಿದ ನಂತರ ಸಾಗರ ಬಿಜೆಪಿ ಕಚೇರಿಗೆ ಬೀಗ ಬಿದ್ದಿತ್ತು. ಬೇಳೂರು ಗೋಪಾಲಕೃಷ್ಣ ಬಂಡಾಯದ ಬಿಸಿ ಜೋರಾಗಿಯೇ ಇತ್ತು.

ವಿಶೇಷ ಅಂದರೆ, ಸಾಗರದ ವಿಪ್ರ ಸಮಾಜದಿಂದ ಆರಂಭವಾಗಿ ಈಡಿಗ ನಾಯಕರವರೆಗೆ, ಬಿಜೆಪಿ ಕಾರ್ಯಕರ್ತರಿಂದ ಹಿಡಿದು, ಸಂಘಪರಿವಾರ ಕಾರ್ಯಕರ್ತರವರೆಗೆ ಬೇಳೂರು ಗೋಪಾಲಕೃಷ್ಣ ಬಂಡಾಯಕ್ಕೆ ಬೆಂಬಲ ಘೋಷಿಸಿದ್ದರು. ಕೊನೆಗೆ ಬೇಳೂರು ಕಾಂಗ್ರೆಸ್ ಸೇರುವ ಮೂಲಕ ಕಾಗೋಡು ಗೆಲುವು ಇನ್ನಷ್ಟು ಖಾತ್ರಿಯಾಗಿತ್ತು.

ಆದರೆ, ಫಲಿತಾಂಶ ಹೊರಬಂದಾಗ ಅಚ್ಚರಿ ರೀತಿಯಲ್ಲಿ ಹರತಾಳು ಹಾಲಪ್ಪ ವಿಧಾನಸಭೆ ಪ್ರವೇಶಿಸಿದರು. ಯಾಕೆ ಎಂದು ಇಲ್ಲಿಯೂ ಹುಡುಕಿಕೊಂಡು ಹೋದರೆ ಹಿರಿಯ ರಾಜಕಾರಣಿ ಕಾಗೋಡು ತಿಮ್ಮಪ್ಪ ಬಿಜೆಪಿ ಕಾರ್ಯಕರ್ತರನ್ನು ನಂಬಿ ಮೈಮರೆತಿರುವುದು ಎದ್ದು ಕಾಣಿಸುತ್ತದೆ.

“ಬೇಳೂರು ಸಾಹೇಬ್ರು ಬಂದ ನಂತರ ಕಾಂಗ್ರೆಸ್ ನಾಯಕರು ಗೆದ್ದೇ ಗೆಲ್ಲುತ್ತೀವಿ ಎಂದುಕೊಂಡರು. ಹಲವು ಹಳ್ಳಿಗಳಿಗೆ ಒಮ್ಮೆಯೂ ಭೇಟಿ ಕೊಡಲಿಲ್ಲ. ಕಾಂಗ್ರೆಸ್ ನಾಯಕರು ಹಣ ಹಂಚಲೂ ಕಣಕ್ಕೆ ಇಳಿಯಲಿಲ್ಲ. ಅಷ್ಟರ ಮಟ್ಟಿಗೆ ಮೈಮರೆತರು,’’ ಎನ್ನುತ್ತಾರೆ ಬೇಳೂರು ಜತೆಯಲ್ಲಿಯೇ ಬಿಜೆಪಿ ಬಿಟ್ಟು ಹೊರಬಂದ ಯುವ ಕಾರ್ಯಕರ್ತ ಮನೋಜ್ ಕುಗ್ವೆ.

ಬಿಜೆಪಿಯಿಂದ ಬಂದ ಬೇಳೂರು ಅಭಿಮಾನಿಗಳು ಸಾಗರ ಕಾಂಗ್ರೆಸ್‌ ಪ್ರಚಾರದ ಹೊಣೆಯನ್ನು ಹೊತ್ತುಕೊಂಡರು. ಕಾಂಗ್ರೆಸ್ ನಾಯಕರು ಮೈಮರೆತರು. ಪ್ರಚಾರ ನಡೆಸುವುದಕ್ಕಿಂತ ಗೆಲ್ಲುವ ಹುಮ್ಮಸ್ಸಿನಲ್ಲಿಯೇ ಕಾಲ ಕಳೆದುಕೊಂಡರು. ಅತ್ತ ಬಿಜೆಪಿ, ಕಾಂಗ್ರೆಸ್ ನಾಯಕರ ಚಲನವಲಗಳ ಸಂಪೂರ್ಣ ಮಾಹಿತಿ ಪಡೆದುಕೊಳ್ಳುತ್ತಿತ್ತು. ಯಾರು ಹರತಾಳು ಸ್ಪರ್ಧೆಯನ್ನು ಬಹಿರಂಗವಾಗಿ ವಿರೋಧಿಸುತ್ತಿದ್ದರೋ, ಅದೇ ಪರಿವಾರದ ಕಾರ್ಯಕರ್ತರು ಕೊನೆಯ ಹಂತದಲ್ಲಿ ಬಿಜೆಪಿ ಪರವಾಗಿ ಹಣ ಹಂಚಲು ಅಖಾಡಕ್ಕೆ ಇಳಿದರು.

“ಎಸ್‌ಸಿ ಎಸ್‌ಟಿಗಳಿಗೆ ಸಾವಿರ, ಈಡಿಗರ ಮನೆಗಳಿಗೆ ಪ್ರತಿ ಓಟಿಗೆ 500- 600 ರೂಪಾಯಿ ಕೊಟ್ಟುಕೊಂಡು ಬಂದರು. ಆದರೆ ಕಾಂಗ್ರೆಸ್ ನಾಯಕರು ಗೆಲ್ಲುತ್ತೀವಿ ಎಂಬ ಭ್ರಮೆಯಲ್ಲಿ ಹಣವನ್ನು ಹಳ್ಳಿಗಳಿಗೆ ಹಂಚಲೇ ಇಲ್ಲ,’’ ಎನ್ನುತ್ತಾರೆ ಕಾಂಗ್ರೆಸ್‌ನ ಮೂಲ ಕಾರ್ಯಕರ್ತರೊಬ್ಬರು. ಫಲಿತಾಂಶ ಹೊರಬಿದ್ದಾಗ ಬಿಜೆಪಿ ಗೆದ್ದಿತ್ತು. ಕಾಗೋಡು ತಿಮ್ಮಪ್ಪರ ಸೋಲಿಗೆ ನೂರು ಕಾರಣಗಳು ಸೃಷ್ಟಿಯಾಗಿದ್ದವು.

ಒಟ್ಟಾರೆ, ಮಡಿಕೇರಿ ಹಾಗೂ ಸಾಗರದಲ್ಲಿ ಕ್ರಮವಾಗಿ ಜೆಡಿಎಸ್‌ ಹಾಗೂ ಕಾಂಗ್ರೆಸ್‌ ಹಿರಿಯ ಅಭ್ಯರ್ಥಿಗಳು ಸೋಲೊಪ್ಪಿಕೊಂಡಿದ್ದಾರೆ. ಅದಕ್ಕಿರುವ ಕಾರಣಗಳು ಮಾತ್ರ ಚುನಾವಣೆಗಳಲ್ಲಿ ಏನೆಲ್ಲ ನಡೆಯುತ್ತದೆ, ಪ್ರಜಾತಂತ್ರದ ಹಬ್ಬ ಹೇಗೆಲ್ಲಾ ನಡೆಯುತ್ತದೆ ಎಂಬುದನ್ನು ಬಿಚ್ಚಿಟ್ಟಿದೆ.

ರಾಜಕೀಯದಲ್ಲಿ ಯಾರೂ ಖಾಯಂ ಶತ್ರುಗಳು ಅಲ್ಲದಿರಬಹುದು, ಹಾಗಂತ ವಿರೋಧಿ ಪಾಳೆಯದ ವಿರೋಧಿಗಳು ಮಿತ್ರರೇ ಆಗಿರುತ್ತಾರೆ ಎಂಬುದಕ್ಕೆ ಖಾತ್ರಿ ಇಲ್ಲ. ಅದನ್ನು ಈ ಇಬ್ಬರು ಹಿರಿಯ ರಾಜಕೀಯ ನಾಯಕರ ಬದುಕಿನಲ್ಲಿ ನಡೆದ ಘಟನೆಗಳು ಸಾರಿ ಹೇಳುತ್ತಿವೆ.