Home ಕರ್ನಾಟಕ ‘ನೋಟಾ’ದಾಗೆ ನಗೆಯಾ ಮೀಟಿ: ಕೊನೆಯ ಆಯ್ಕೆ ಒತ್ತಿದವರ ಸಂಖ್ಯೆ 3,22,841!

‘ನೋಟಾ’ದಾಗೆ ನಗೆಯಾ ಮೀಟಿ: ಕೊನೆಯ ಆಯ್ಕೆ ಒತ್ತಿದವರ ಸಂಖ್ಯೆ 3,22,841!

SHARE

ಚುನಾವಣಾ ರಾಜಕೀಯದ ಬಗ್ಗೆ ಜನಸಾಮಾನ್ಯರ ನಿರಾಸಕ್ತಿ ಹೆಚ್ಚಾಗುತ್ತಿದೆ ಎಂದು ಹೇಳಲಾಗುತ್ತಿದ್ದರೂ ಈ ಬಾರಿ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ದಾಖಲೆಯ ಮತದಾನವಾಗಿದೆ. ಮೇ 15ರಂದು ಹೊರ ಬಿದ್ದ ಫಲಿತಾಂಶದ ಅಂತಿಮ ಶೇಕಡಾವಾರು ಮತದಾನ ಪ್ರಮಾಣ 72.36%. ಮತದಾನ ಪ್ರಮಾಣ ಹೆಚ್ಚಾಗಿರುವ ಜತೆಗೆ ನೋಟಾ ಒತ್ತಿದವರ ಪ್ರಮಾಣವೂ ಏರಿದೆ.

ಅಂಚೆ ಮತಗಳೂ ಸೇರಿ ಈ ಬಾರಿ ಚಲಾವಣೆಯಾಗಿರುವ ಒಟ್ಟು ಮತಗಳ ಸಂಖ್ಯೆ 3,59,60,219. (3 ಕೋಟಿ 59 ಸಾವಿರ) ಈ ಪೈಕಿ ನೋಟಾ ಚಲಾಯಿಸಿದವರು 3,22,841 ಜನ (3 ಲಕ್ಷ 22 ಸಾವಿರ). ಅಂದರೆ ಇಷ್ಟು ಪ್ರಮಾಣದ ಜನರಿಗೆ ಕಣದಲ್ಲಿರುವ ಅಭ್ಯರ್ಥಿಗಳ ಪೈಕಿ ಸೂಕ್ತವಾದ ಒಬ್ಬರೂ ಆಯ್ಕೆಗೆ ಯೋಗ್ಯವಾಗಿಲ್ಲ ಎನಿಸಿದೆ.

Also Read: ಚುನಾವಣಾ ರಾಜಕೀಯದ ಬಗ್ಗೆ ‘ಪ್ರಜಾಪ್ರಭು’ವಿನ ನಿರಾಸಕ್ತಿ ಏಕೆ?

ಚುನಾವಣಾ ಆಯೋಗದ ಪರಿಷ್ಕೃತ ಮತದಾರರ ಪಟ್ಟಿಯ ಪ್ರಕಾರ ಈ ಬಾರಿಯ ಚುನಾವಣೆಯ ಒಟ್ಟು ಮತದಾರರ ಸಂಖ್ಯೆ 4,96,82,357 (4 ಕೋಟಿ 96 ಸಾವಿರ). ಇದರಲ್ಲಿ ಮೂರು ಲಕ್ಷಕ್ಕೂ ಹೆಚ್ಚು ಮತದಾರರು ಮತಗಟ್ಟೆಗೆ ಬಂದು ‘ಮೇಲಿನ ಯಾರೂ ಸೂಕ್ತರಲ್ಲ’ (NOTA- None Of The Above) ಎಂದು ಅಭ್ಯರ್ಥಿಗಳ ವಿರುದ್ಧ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.

ಬಹುತೇಕ ವಿಧಾನಸಭಾ ಕ್ಷೇತ್ರಗಳಲ್ಲಿ ಒಂದು ಸಾವಿರದಿಂದ ಎರಡು ಸಾವಿರದವರೆಗೆ ಜನರು ನೋಟಾ ಒತ್ತಿದ್ದಾರೆ. ಅತಿ ದೊಡ್ಡ ವಿಧಾನಸಭಾ ಕ್ಷೇತ್ರವಾಗಿರುವ ಬೆಂಗಳೂರು ದಕ್ಷಿಣದಲ್ಲಿ ಈ ಬಾರಿ ಚಲಾವಣೆಯಾಗಿರುವ ಒಟ್ಟು 3,31,348 ಮತಗಳ ಪೈಕಿ 15,829 ಮತಗಳು ನೋಟಾ. ಈ ಪ್ರಮಾಣದ ಮತಗಳು ಒಬ್ಬ ಅಭ್ಯರ್ಥಿಯ ಸೋಲು- ಗೆಲುವನ್ನು ನಿರ್ಧರಿಸುವಂಥ ಮತಗಳು.

ಚುನಾವಣಾ ವ್ಯವಸ್ಥೆ ಅಥವಾ ಪ್ರಸ್ತುತ ರಾಜಕೀಯ ವ್ಯವಸ್ಥೆಯ ಬಗ್ಗೆ ನಂಬಿಕೆ ಇಲ್ಲದವರು ಮತಗಟ್ಟೆಗೆ ಹೋಗುವುದೇ ಇಲ್ಲ. ಆದರೆ, ಮತಗಟ್ಟೆಗೆ ಬಂದು ಪ್ರಸ್ತುತ ವ್ಯವಸ್ಥೆಯ ವಿರುದ್ಧ ತನ್ನ ಅಸಮಾಧಾನವನ್ನು ಹೊರಹಾಕಿರುವವರ ಸಂಖ್ಯೆ ಈ ಬಾರಿಯ ಚುನಾವಣೆಯಲ್ಲಿ ಹೆಚ್ಚಾಗಿಯೇ ಇದೆ.

2013ರ ಪಂಚ ರಾಜ್ಯಗಳ ಚುನಾವಣೆಯಲ್ಲಿ ಭಾರತದಲ್ಲಿ ಮೊದಲ ಬಾರಿಗೆ ನೋಟಾ ಪರಿಚಯಿಸಲಾಯಿತು. ನೋಟಾ ಪರಿಚಯಿಸಿದ ಮೊದಲ ಚುನಾವಣೆಯಲ್ಲಿಯೇ ಒಟ್ಟು ಮತದಾನ ಪ್ರಮಾಣದಲ್ಲಿ ಶೇಕಡ 1.85ರಷ್ಟು ಮತಗಳು ನೋಟಾಗೆ ಬಿದ್ದಿದ್ದವು. 2014ರ ಲೋಕಸಭಾ ಚುನಾವಣೆಯಲ್ಲಿ ಚಲಾವಣೆಯಾದ ನೋಟಾ ಪ್ರಮಾಣ ಶೇಕಡ 1.1. 2015ರ ದೆಹಲಿ ಮತ್ತು ಬಿಹಾರ ವಿಧಾನಸಭಾ ಚುನಾವಣೆ ವೇಳೆಗೆ ನೋಟಾ ಪ್ರಮಾಣ ಶೇಕಡ 2.02ರಷ್ಟು ಹೆಚ್ಚಾಗಿತ್ತು.

Also Read: ‘NOTA’: ಭಾರತೀಯ ಮತದಾರರ ಬಳಿಯಿರುವ ಕೆಲಸಕ್ಕೆ ಬಾರದ ಅಸ್ತ್ರ

ಚುನಾವಣಾ ವ್ಯವಸ್ಥೆಯನ್ನು ಒಪ್ಪುವ ಹಾಗೂ ಕಣದಲ್ಲಿರುವ ಅಭ್ಯರ್ಥಿಗಳ ಪೈಕಿ ತಮಗೆ ಯಾರೂ ಸೂಕ್ತರಲ್ಲ ಎಂದು ದಾಖಲಿಸಲೂ ಜನರಿಗೆ ನೋಟಾ ಆಯ್ಕೆ ಇದೆ. ಈ ಬಾರಿಯ ಚುನಾವಣೆ ಘೋಷಣೆಯಾದ ಬಳಿಕ ನೋಟಾ ವಿರುದ್ಧ ಕೆಲವು ಸಂಘಟನೆಗಳು ಅಭಿಯಾನ ನಡೆಸಿದ್ದವು. ‘ಯಾವ ಪಕ್ಷಕ್ಕಾದರೂ ಮತ ಹಾಕಿ. ಆದರೆ, ನೋಟಾ ಒತ್ತ ಬೇಡಿ’ ಎಂಬ ಸಂದೇಶವನ್ನು ಈ ಅಭಿಯಾನದ ಮೂಲಕ ನೀಡಲಾಗಿತ್ತು.

ನೋಟಾ ಎಂಬುದು ಸದ್ಯಕ್ಕೆ ಮತದಾರ ವ್ಯವಸ್ಥೆಯ ವಿರುದ್ಧ ತನ್ನ ಅಸಮಾಧಾನ ಹೊರ ಹಾಕಲು ಇರುವ ಒಂದು ಆಯ್ಕೆಯಷ್ಟೇ. ಆದರೂ ನೋಟಾ ಪ್ರಮಾಣ ಏರುತ್ತಿರುವುದು ಪ್ರಜ್ಞಾವಂತ ಮತದಾರ ತನ್ನ ಅಸಮಾಧಾನವನ್ನು ಚುನಾವಣಾ ವ್ಯವಸ್ಥೆಯ ಮೂಲಕವೇ ತಿಳಿಸಲು ಯತ್ನಿಸುತ್ತಿದ್ದಾನೆ ಎಂಬುದರ ಕುರುಹು.