Home Inside Story ಸಂಗೀತ ವಿವಿಯಲ್ಲಿ ಜಾತಿ ಗುದ್ದಾಟ: ಗಂಗೂಬಾಯಿ ಹಾನಗಲ್ ಹೆಸರಿನಲ್ಲಿ ಇದೆಂತಾ ಅಪಸವ್ಯ? 

ಸಂಗೀತ ವಿವಿಯಲ್ಲಿ ಜಾತಿ ಗುದ್ದಾಟ: ಗಂಗೂಬಾಯಿ ಹಾನಗಲ್ ಹೆಸರಿನಲ್ಲಿ ಇದೆಂತಾ ಅಪಸವ್ಯ? 

SHARE

ಗಾನಕೋಗಿಲೆ ಗಂಗೂಬಾಯಿ ಅವರ ಹೆಸರಲ್ಲಿ ಆರಂಭವಾದ ಮೈಸೂರಿನ ಸಂಗೀತ ಮತ್ತು ಪ್ರದರ್ಶನ ಕಲೆಗಳ ವಿಶ್ವವಿದ್ಯಾಲಯ ಸದ್ಯ ಜಾತಿ ಮತ್ತು ಅಧಿಕಾರದ ಜಿದ್ದಾಜಿದ್ದಿನ ಕಣವಾಗಿ ರೂಪುಗೊಂಡಿದೆ. ವಿದ್ಯಾರ್ಥಿಗಳು ಮತ್ತು ಪ್ರಜ್ಞಾವಂತರು ತಲೆ ತಗ್ಗಿಸುವಂತಹ ಘಟನೆಗೆ ಈಗ ವಿವಿಯ ಆವರಣ ಸಾಕ್ಷಿಯಾಗಿದೆ.

ವಿವಿ ಆರಂಭವಾಗಿ ಹತ್ತು ವರ್ಷಗಳೇ ಕಳೆದಿವೆ. ಕಳೆದ ಒಂದು ದಶಕದಲ್ಲಿ ಇಲ್ಲಿ ನಡೆದ ಸಂಶೋಧನೆಗಳು ನಾಡಿಗೆ ನೀಡಿರುವ ಕೊಡುಗೆ ಏನು ಎಂಬುದನ್ನು ತಡಕಾಡಬೇಕಾದ ಸ್ಥಿತಿ ಇದೆ. ಕಾರ್ಯಕ್ಷಮತೆ ವಿಚಾರದಲ್ಲಿ ಸಾಧನೆ ಮಾಡದ ವಿವಿ, ಅನುದಾನ ದುರ್ಬಳಕೆ, ಅನಗತ್ಯವಾಗಿ ಹಣ ವ್ಯಯ, ಅಪಪಾತ್ರರಿಗೆ ಗೌರವ ಡಾಕ್ಟರೇಟ್ ನೀಡಿಕೆ, ಸಂಶೋಧನೆಗೆ ತಡೆ, ಸ್ಪಷ್ಟ ಕ್ರಿಯಾಯೋಜನೆ ಕೊರತೆಯ ವಿಚಾರಗಳಿಂದಾಗಿ ಆಗಾಗ ಸುದ್ದಿಯಾಗುತ್ತಲೇ ಇದೆ. ಇಂತಹ ಅನಿಷ್ಟಗಳಿಗೆಲ್ಲ ಕಳಸ ಇಟ್ಟಂತೆ ಈಗ ವಿವಿಯ ಒಳಗೆ ಜಾತಿ ಗುದ್ದಾಟವೊಂದು ಹೊರಬಿದ್ದಿದೆ.

ಸದ್ಯ ಸಮಸ್ಯೆ ಏನು?

ವಿಶ್ವವಿದ್ಯಾಲಯದ ವಿಸಿಯಾಗಿದ್ದ ಡಾ. ಸರ್ವಮಂಗಳ ಶಂಕರ್ ಅವಧಿ ಮುಗಿದ ಹಿನ್ನೆಲೆಯಲ್ಲಿ ಸ್ಥಾನ ತೆರವಾಗಿತ್ತು. ವಿವಿ ನಿಯಮಾವಳಿಯಂತೆ ಅವರು ಹೋಗುವಾಗ ಪ್ರಭಾರ ಕುಲಪತಿ ಸ್ಥಾನವನ್ನು ತಮ್ಮ ನಂತರದ ಅಧಿಕಾರಿ ಹಾಗೂ ವಿವಿಯ ರಿಜಿಸ್ಟಾರ್ ಪ್ರೊ. ವಿ. ನಾಗೇಶ್ ಬೆಟ್ಟಕೋಟೆಯವರಿಗೆ ವಹಿಸಿಕೊಡಬೇಕಿತ್ತು. ಆದರೆ ಸ್ಥಳೀಯ ಆಡಳಿತದ ಅನುಕೂಲಕ್ಕೆ ತಕ್ಕಂತೆ ರೂಪಿಸಿಕೊಂಡಿದ್ದ ಪರೀಕ್ಷಾಂಗ ಕುಲಸಚಿವ ಹುದ್ದೆ ನಿರ್ವಹಣೆ ಮಾಡುತ್ತಿದ್ದ ಡಾ. ಆರ್. ರಾಜೇಶ್ ಅವರಿಗೆ ವಹಿಸಿರುವುದು ಈಗ ಗುದ್ದಾಟ ಕಾರಣವಾಗಿದೆ. ರಾಜ್ಯಪಾಲರು ರಾಜೇಶ್ ಅವರನ್ನೇ ಪ್ರಭಾರಿ ವಿಸಿಯಾಗಿ ನೇಮಕಗೊಳಿಸಿ ಆದೇಶ ಹೊರಡಿಸಿದ್ದಾರೆ. ಆರು ತಿಂಗಳು ಅವರು ಈ ಹುದ್ದೆಯಲ್ಲಿ ಮುಂದುವರೆಯಬಹುದು.

ವಿಶ್ವವಿದ್ಯಾಲಯ ಕಾಯ್ದೆ (ಕೆ.ಎಸ್.ಯು 2000)ದ ನಿಯಮಾವಳಿಗಳಂತೆ ಡಾ. ರಾಜೇಶ್ ಪರೀಕ್ಷಾಂಗ ಅಧಿಕಾರಿ ಆಡಳಿತ ಕಾರ್ಯಭಾರಗಳನ್ನು ಮಾಡುವ ಅಧಿಕಾರ ಹೊಂದಿಲ್ಲ. ಅಲ್ಲದೆ ಅವರು ವಿವಿಯ ಕೆಲ ಪ್ರಮುಖ ನೀತಿ ನಿರ್ಧಾರಗಳ ಕುರಿತು ಚರ್ಚಿಸುವ, ನಿರ್ಧಾರಗಳನ್ನು ಕೈಗೊಳ್ಳುವ ಅಕಾಡೆಮಿಕ್ ಕೌನ್ಸಿಲ್ ಸದಸ್ಯರೂ ಅಲ್ಲ. ರಾಜೇಶ್ ಸಮಾಜಶಾಸ್ತ್ರ ಉಪನ್ಯಾಸಕರಾಗಿದ್ದು ಕೇವಲ 2 ವರ್ಷ ಪಾಠ ಮಾಡಿದ ಅನುಭವ ಹೊಂದಿದ್ದಾರೆ.

ಆದರೆ ಪ್ರದರ್ಶನ ಕಲೆಗಳ ವಿವಿ ಮೈಸೂರು ಸೆಕ್ಷನ್ 12 (4)ರ ಅನ್ವಯ ವಿಸಿ ಅವಧಿ ಮುಗಿದರೆ ಅಥವಾ ಬೇರಾವುದೇ ಕಾರಣದಿಂದ ಅವರು ಹುದ್ದೆಯಲ್ಲಿ ಮುಂದುರೆಯಲು ಆಗದಿದ್ದಲ್ಲಿ ಅಂತಹ ಸಂದರ್ಭದಲ್ಲಿ ವಿಶ್ವವಿದ್ಯಾಲಯದ ಹಿರಿಯ ಪ್ರೊಫೆಸರ್ ಅವರನ್ನು ಪ್ರಭಾರ ವಿಸಿಯಾಗಿ ನೇಮಿಸುವುದು ನಡಾವಳಿಯಾಗಿದೆ. ಈ ಎಲ್ಲ ಅನುಭವಗಳನ್ನೂ ಹೊಂದಿರುವ ನಾಗೇಶ್ ಬೆಟ್ಟಕೋಟೆಯವರನ್ನು ನೇಮಿಸದೆ ಅಧಿಕಾರಿಯಲ್ಲದ, ಅನುಭವ ಇಲ್ಲದವರನ್ನು ನೇಮಿಸಿರೋದು ಎಷ್ಟು ಸರಿ ಎಂಬ ಪ್ರಶ್ನೆ ಎದ್ದಿದೆ. ಪ್ರಭಾರಿ ಕುಲಪತಿ ಸ್ಥಾನವನ್ನು ಹೇಗೆ ಕೊಡಲಾಯಿತು ಮತ್ತು ಯಾರು ಕೊಟ್ಟರು ಎಂಬ ಬಗ್ಗೆ ವಿಶ್ವವಿದ್ಯಾಲಯ ಮತ್ತು ವಿದ್ಯಾರ್ಥಿಗಳ ನಡುವೆ ಸದ್ಯ ಬಿಸಿಬಿಸಿ ಚರ್ಚೆಯ ಸಂಗತಿಯಾಗಿದೆ.

ರಾಜಭವನದಿಂದ ಬಂದ ನೇಮಕಾತಿ ಆದೇಶ. 

ಸಾಮಾನ್ಯವಾಗಿ KSU-2000 ಕಾಯ್ದೆ ನಡಾವಳಿಯಂತೆ ಯಾವುದೇ ವಿವಿಯ ಕುಲಪತಿ ನಿವೃತ್ತರಾಗುವ ಕೆಲ ದಿನಗಳ ಮೊದಲು ತಮ್ಮ ನಿವೃತ್ತಿಯ ರಾಜ್ಯಪಾಲರಿಗೆ ಮನವರಿಕೆ ಮಾಡುತ್ತಾರೆ. ಅಲ್ಲದೆ ತಮ್ಮ ಅಧಿಕಾರವನ್ನು ಯಾರಿಗೆ ವಹಿಸಿಕೊಡಬೇಕು ಎಂದೂ ಅವರ ಮನವಿಯಲ್ಲಿ ಕೇಳುತ್ತಾರೆ. ಈ ವೇಳೆ ರಾಜ್ಯಪಾಲರು ವಿಶ್ವವಿದ್ಯಾಲಯದ ರಿಜಿಸ್ಟಾರ್ ಅವರ ವೈಯಕ್ತಿ ವಿವರಗಳನ್ನ ಪರೀಕ್ಷಿಸಿ ಅವರಿಗೆ ಪ್ರಭಾರಿ ಹುದ್ದೆಯನ್ನುನೀಡುತ್ತಾರೆ.

ಹೊಸ ಕುಲಪತಿಯನ್ನು ಆಯ್ಕೆ ಮಾಡಲು ರಾಜ್ಯಪಾಲರು ಅರ್ಹ ಹೊಸ ವಿಸಿ ಆಯ್ಕೆಗೆ ಸಮಿತಿಯನ್ನು ರಚಿಸುತ್ತಾರೆ. ಆ ಸಮಿತಿ ಮೂರ್ನಾಲ್ಕು ವಿಸಿಗಳ ಹೆಸರನ್ನು ಸೂಚಿಸುತ್ತದೆ. ಅದರಲ್ಲಿ ಒಬ್ಬರನ್ನು ವಿಸಿ ನೇಮಕ ಮಾಡಬಹುದು. ಅಲ್ಲದೆ ಸರ್ಕಾರ ಕೂಡ ಹೊಸ ವಿಸಿಗಳ ಹೆಸರನ್ನು ರಾಜ್ಯಪಾಲರಿಗೆ ಸೂಚಿಸಬಹುದು. ಆದನ್ನು ರಾಜ್ಯಪಾಲರು ಒಪ್ಪಬಹುದು ಅಥವಾ ತಿರಸ್ಕರಿಸಬಹುದು.

ಆದರೆ ಸದ್ಯ ಹೊಸ ವಿಸಿ ನೇಮಕಕ್ಕೆ ಚುನಾವಣೆ ಹಿನ್ನೆಲೆಯಲ್ಲಿ ನಿರ್ಬಂಧ ಇದೆ. ಇಂಥ ವೇಳೆ ರಾಜ್ಯಪಾಲರು ರಿಜಿಸ್ಟಾರ್ ಅವರಿಗೆ ಪ್ರಭಾರಿ ಕುಲಪತಿ ಜವಾಬ್ಧಾರಿ ಕೊಡುವುದು ಈ ವರೆಗೂ ನಡೆದುಕೊಂಡು ಬಂದಿರುವ ನಡಾವಳಿ. ಆದರೆ ರಾಜ್ಯಪಾಲರು ಪ್ರದರ್ಶನ ಕಲೆ ವಿಷಯದಲ್ಲಿ 9 ವರ್ಷ ಬೋಧನೆ ಮಾಡಿರುವ, ಆಡಳಿತ ಅನುಭವ ಹೊಂದಿರುವ ಹಾಗೂ ಡೀನ್ ಆಗಿ ಕಾರ್ಯ ನಿರ್ವಹಿಸಿರುವುದನ್ನೂ ಕಡೆಗಣಿಸಿದ್ದಾರೆ. ಕೇವಲ 2 ವರ್ಷ ಬೋಧನಾ ಅನುಭವ ಹೊಂದಿದ ಪರೀಕ್ಷಾಂಗ ರಿಜಿಸ್ಟಾರ್ ಡಾ.ರಾಜೇಶ್ ಗೆ ಪ್ರಭಾರ ಹುದ್ದೆ ನೀಡಿ ಶಿಫಾರಸು ಮಾಡಿ ಆದೇಶಿಸಿದ್ದಾರೆ. ಹೀಗಾಗಿ ರಾಜ್ಯಪಾಲರೇ ಇದನ್ನು ಆದೇಶಿದ್ದಾರೋ ಅಥವಾ ಅವರ ಅಧೀನ ಕಾರ್ಯದರ್ಶಿ ಈ ಆದೇಶ ಹೊರಡಿಸಿದ್ದಾರೋ ಎಂಬ ಗೊಂದಲವೂ ಮೂಡಿದೆ.

ಡಾ. ರಾಜೇಶ್. 

ವಿಸಿಯವರ ಸ್ವಜಾತಿ ಪ್ರೇಮ:

ವಿಸಿಯಾಗಿದ್ದ ಸರ್ವಮಂಗಳ ಶಂಕರ್ ಅವರು ತಮ್ಮದೇ ಸಮುದಾಯಕ್ಕೆ ಸೇರಿದ ವ್ಯಕ್ತಿಗೆ ಪ್ರಭಾರ ಹುದ್ದೆಯನ್ನು ಕಲ್ಪಿಸುವ ಕಾರಣಕ್ಕಾಗಿಯೇ ರಾಜೇಶ್ ಅವರನ್ನು ಶಿಫಾರಸು ಮಾಡಿ ರಾಜ್ಯಪಾಲರಿಗೆ ಪತ್ರ ಬರೆದಿರುವ ಬಗ್ಗೆ ಆರೋಪಗಳು ಕೇಳಿ ಬಂದಿವೆ. ಹೀಗಾಗಿ ಪ್ರಕರಣದಲ್ಲಿ ಸ್ವಜಾತಿ ಪ್ರಭಾವವೂ ಇದೆ ಎಂಬ ಮಾತುಗಳು ವಿವಿ ಆವರಣದಲ್ಲಿ ಕೇಳಿ ಬರುತ್ತಿವೆ. ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ, ವೈಚಾರಿಕ ಸಂಶೋಧನೆಗಳನ್ನು ಹುಟ್ಟ ಹಾಕಬೇಕಾದ ವಿಶ್ವವಿದ್ಯಾಲಯವೊಂದು ಜಾತಿ ಜಗಳಕ್ಕೆ ಕಾರಣವಾಗಿರೋದು ಇರುಸುಮುರುಸು ಉಂಟುಮಾಡಿದೆ.

ವಿಶ್ವವಿದ್ಯಾಲಯದಲ್ಲಿ ಸಂಗೀತ, ನೃತ್ಯ, ನಾಟಕ ಸೇರಿ ಸುಮಾರು 35 ಕೋರ್ಸ್ ಗಳು ನಡೆಯುತ್ತಿವೆ. ಮೂರೂ ವಿಷಯಗಳಲ್ಲಿ ಬಿ.ಎ, ಎಂ.ಎ. ಡಿಪ್ಲಮೋ ಸೇರಿದಂತೆ ಸುಮಾರು 180 ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ. ಆದರೆ 10 ವರ್ಷಗಳಾದರೂ ವಿವಿಯಲ್ಲಿ ಪರ್ಮನೆಂಟ್ ಫ್ಯಾಕಲ್ಟಿಗಳೇ ಇಲ್ಲ. ಹೀಗಾಗಿ ವಿದ್ಯಾರ್ಥಿಗಳು ಅತಿಥಿ ಉಪನ್ಯಾಸಕರಿಂದ ಪಾಠ ಕೇಳುತ್ತಿದ್ದಾರೆ.

20 ಸಂಶೋಧನಾ ವಿದ್ಯಾರ್ಥಿಗಳು ಸಂಶೋಧನೆಗೆ ದಾಖಲಾಗಿ 9 ವರ್ಷ ಕಳೆದರೂ ಅವರಿಗೆ ಗೈಡ್‌ಶಿಫ್ ನೀಡಲಾಗಿಲ್ಲ. “ವಿವಿ 2009ರಲ್ಲೇ ಸಂಶೋಧನೆಗೆ ನೋಟಿಫಿಕೇಶನ್ ಮಾಡಿದೆ. ಈ ಸಂಬಂಧ ಫೀಸು ಕಟ್ಟಿದ್ದೇವೆ. 2010-11ರಲ್ಲೇ ಎಂಟ್ರೆನ್ಸ್ ಎಕ್ಸಾಂ, ವಿಷಯ ಪರೀಕ್ಷೆ, ಥೀಸಿಸ್ ಚರ್ಚೆ, ಸಂದರ್ಶನಗಳನ್ನೂ ನಡೆಸಿದೆ. ಆದರೆ ವಿಶ್ವ ವಿದ್ಯಾಲಯ ಈ ವರೆಗೂ ಸಂಶೋಧನಾ ವಿದ್ಯಾರ್ಥಿಗಳಿಗೆ ಗೈಡ್ ಗಳನ್ನು ಒದಗಿಸಿಲ್ಲ ಎಂದು ಅಳಲು ವ್ಯಕ್ತಪಡಿಸುತ್ತಾರೆ,” ಸಂಶೋಧನೆ ಆಕಾಂಕ್ಷೆಯ ವಿದ್ಯಾರ್ಥಿಗಳು.

“ಸಂಶೋಧನೆ ಮತ್ತಿತರ ವಿಷಯಗಳ ಬಗ್ಗೆ ವಿಸಿಯಾದ ಸರ್ವ ಮಂಗಳ, ಪರಿಕ್ಷಾಂಗ ರಿಜಿಸ್ಟಾರ್‌ಗೆ ಮಾಹಿತಿಗಳೇ ಗೊತ್ತಿಲ್ಲ. ಎಷ್ಟೋ ಬಾರಿ ಮೀಟಿಂಗ್ ಕರೆದಾಗ ವಿವಿಯ ಅಧಿಕಾರಿಗಳ ನಡುವೆ ಕೋ ಆರ್ಡಿನೇಶನ್ ಇರಲ್ಲ. ಸಂಶೋಧನಾ ಕಾರ್ಯ ಹೆಚ್ಚಿಸಲು ವಿವಿಯು ಹತ್ತು ವರ್ಷಗಳಾದರೂ ಯುಜಿಸಿ ನಿಯಮಾನುಸಾರ ಕೆಲಸ ಮಾಡಿಲ್ಲ. ಸಂಶೋಧನಾ ವಿದ್ಯಾರ್ಥಿಗಳನ್ನು ಈಗ ಬನ್ನಿ, ಆಗ ಬನ್ನಿ ಸಮಸ್ಯೆ ಪರಿಹರಿಸುತ್ತೇವೆ ಎಂದು ಕರೆದು ಕಣ್ಣೊರೆಸುವ ಕೆಲಸಗಳನ್ನಷ್ಟೇ ಮಾಡುತ್ತಿದ್ದಾರೆ. ಆದರೆ ಗೌರವ ಡಾಕ್ಟರೇಟ್ ಗಳನ್ನು ಮಾತ್ರ ಉತ್ಪಾದಿಸುತ್ತಿದೆ,” ಎಂದು ಸಂಶೋಧನಾ ವಿದ್ಯಾರ್ಥಿಗಳು ದೂರುತ್ತಾರೆ.

ಸರ್ಕಾರ ವಿವಿಯ ಕ್ಯಾಂಪಸ್‌ಗೆಂದು ಮೈಸೂರಿನ ಸಾತ್ಕಲ್ ಎಂಬಲ್ಲಿ 8 ಎಕರೆ ಜಮೀನು ನೀಡಿದೆ. ಆದರೆ ಅನುದಾನ ಕೊರತೆ, ಕ್ರಿಯಾ ಯೋಜನೆ ಇಲ್ಲದ ಕಾರಣ ಸರ್ಕಾರ ನೀಡಿರುವ ಸುಮಾರು 27 ಕೋಟಿ ರೂಪಾಯಿ ವಿವಿ ಖಾತೆಗಳಲ್ಲೇ ಇದೆ.

ಸಂಗೀತ ವಿವಿಯಲ್ಲಿ ಹಗರಣ:

ಈ ಮೊದಲು ವಿವಿ ವಿಸಿಯಾಗಿದ್ದ ಹನುಮಣ್ಣ ನಾಯಕ ದೊರೆ ಅವರು ಲಕ್ಷಾಂತರ ರೂಪಾಯಿಗಳನ್ನು ದುರ್ಬಳಕೆ ಮಾಡಿಕೊಂಡ ಬಗ್ಗೆ ಆರೋಪ ಕೇಳಿ ಬಂದಿತ್ತು. ತಮ್ಮ ಖಾಸಗಿ ವಸ್ತುಗಳನ್ನು ಕೊಳ್ಳಲು ವಿಶ್ವವಿದ್ಯಾಲಯದ ಹಣವನ್ನು ದುರ್ಬಳಕೆ ಮಾಡಿದ್ದ ಬಗ್ಗೆ ಈ ವಿಶ್ವವಿದ್ಯಾಲಯ ಲೆಕ್ಕ ಪತ್ರ ಸಮಿತಿ ಹೇಳಿತ್ತು.

ಅಲ್ಲದೆ ಸಂಗೀತ ವಿವಿ ಸಂಶೋಧಕರು ಹಾಗೂ ಹೊಸ ಜ್ಞಾನಗಳತ್ತ ಸೃಷ್ಟಿಸದಿದ್ದರೂ ಪ್ರತಿ ವರ್ಷ ಗೌರವ ಡಾಕ್ಟರೇಟ್ ಗಳನ್ನು ನೀಡಿಕೊಂಡು ಬಂದಿದೆ.

ಹೀಗೆ ಗಂಗೂಬಾಯಿ ಹಾನಗಲ್ ಅವರ ಹೆಸರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ವಿವಿಯೊಂದು ನೈತಿಕ ಅದಃಪತನ ಹಾದಿಯಲ್ಲಿದೆ. ಗಾಯದ ಮೇಲೆ ಬರೆ ಎಳೆದಂತೆ ಈಗ ಹಂಗಾಮಿ ವಿಸಿ ನೇಮಕ ವಿವಾದ ಹೊರಬಿದ್ದಿದೆ. ಚುನಾವಣೆಯ ಹಿನ್ನೆಲೆಯಲ್ಲಿ ಇದನ್ನು ಗಮನಿಸುವ ಪರಿಸ್ಥಿತಿಯಲ್ಲಿ ಯಾರೂ ಇಲ್ಲ. ಕನಿಷ್ಟ ಚುನಾವಣೆ ನಂತರವಾದರೂ ಈ ವಿವಿಗೊಂದು ಸರ್ಜರಿಯನ್ನು ಹೊಸ ಸರಕಾರ ಮಾಡಬೇಕಿದೆ.