Home Inside Story ವಿಜಯ್ ಕುಮಾರ್ ಇಲ್ಲದ ಜಯನಗರ: ಹೊಸ ರಾಜಕೀಯ ಲೆಕ್ಕಾಚಾರಗಳ ಸುತ್ತ

ವಿಜಯ್ ಕುಮಾರ್ ಇಲ್ಲದ ಜಯನಗರ: ಹೊಸ ರಾಜಕೀಯ ಲೆಕ್ಕಾಚಾರಗಳ ಸುತ್ತ

SHARE

ಸಜ್ಜನ ರಾಜಕಾರಣಿ ಅನ್ನಿಸಿಕೊಂಡಿದ್ದ ಜಯನಗರ ವಿಧಾನಸಭಾ ಕ್ಷೇತ್ರದ ಶಾಸಕ ವಿಜಯ್ ಕುಮಾರ್ ಸಾವು, ಇಲ್ಲೀಗ ಹೊಸ ರಾಜಕೀಯ ಲೆಕ್ಕಾಚಾರಗಳಿಗೆ ನಾಂದಿ ಹಾಡಿದೆ.

ಬಿಜೆಪಿ ಗೆಲುವಿನ ಸಾಧ್ಯತೆಗಳಿದ್ದ ಕ್ಷೇತ್ರಗಳಲ್ಲಿ ಜಯನಗರ ಕೂಡ ಒಂದು. ಇಲ್ಲಿ ಶಾಸಕ ಬಿ. ಎನ್. ವಿಜಯ್ ಕುಮಾರ್ ಮೂರನೇ ಬಾರಿ ಆಯ್ಕೆಯಾಗುವ ನಿರೀಕ್ಷೆಯಲ್ಲಿದ್ದರು.

ಗುರುವಾರದ ಸಂಜೆ 6. 30ರ ಸುಮಾರಿಗೆ ಕ್ಷೇತ್ರದಲ್ಲಿ ಪಾದಯಾತ್ರೆ ನಡೆಯುತ್ತಿದ್ದ ಸಮಯದಲ್ಲಿಯೇ ಅವರು ಕುಸಿದು ಬಿದ್ದರು. ತಕ್ಷಣ ಜಯದೇವ ಹೃದ್ರೋಗ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಮಧ್ಯ ರಾತ್ರಿ ಬಿ. ಎನ್. ವಿಜಯ್ ಕುಮಾರ್ ಬದುಕಿನ ಹೋರಾಟ ನಿಲ್ಲಿಸಿದರು. ಶುಕ್ರವಾರ ಸಂಜೆ ಅವರ ಮೃತದೇಹಕ್ಕೆ ಬನಶಂಕರಿ ಸ್ಮಶಾಣದಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ.

ಬಿ. ಎನ್. ವಿಜಯ್ ಕುಮಾರ್ ನಂತರ ಕ್ಷೇತ್ರದಲ್ಲಿ ಬಿಜೆಪಿ ಯಾರಿಗೆ ಟಿಕೆಟ್ ನೀಡಬಹುದು ಎಂಬ ಲೆಕ್ಕಾಚಾರಗಳು ಈಗ ಶುರುವಾಗಿವೆ. ವಿಜಯ್ ಕುಮಾರ್ ಅಂತ್ಯ ಸಂಸ್ಕಾರದ ಬೆನ್ನಿಗೇ ಇಲ್ಲಿ ಆರಂಭವಾಗಿರುವ ರಾಜಕೀಯ ಚಟುವಟಿಕೆ ಮುನ್ನೆಲೆಗೆ ಬರಲಿದೆ. ವಿಧಾನಸಭೆ ಅಭ್ಯರ್ಥಿಗಳಾಗಲು ಸ್ಥಳೀಯ ಬಿಜೆಪಿ ಪಾಲಿಕೆ ಸದಸ್ಯರ ಹೆಸರುಗಳು ಕೇಳಿಬರಲಿವೆ.

“ವಿಜಯ್ ಕುಮಾರ್ ಅವರು ಜನಾನುರಾಗಿಯಾಗಿದ್ದರು. ಜಯನಗರದಲ್ಲಿ ಸುಮಾರು 40 ಸಾವಿರ ಬ್ರಾಹ್ಮಣ ಮತಗಳಿವೆ ಮತ್ತು ಅವೇ ಕಳೆದ ಎರಡು ವಿಧಾನಸಭಾ ಚುನಾವಣೆಯಲ್ಲಿ ನಿರ್ಣಾಯಕ ಪಾತ್ರವಹಿಸಿದ್ದವು,’’ ಎನ್ನುತ್ತಾರೆ ಸ್ಥಳೀಯ ಬಿಜೆಪಿ ಕಾರ್ಯಕರ್ತರೊಬ್ಬರು.

ವಿಜಯ್ ಕುಮಾರ್ ಬ್ರಾಹ್ಮಣ ಸಮುದಾಯಕ್ಕೆ ಸೇರಿದವರು. ಸುಮಾರು 50 ಸಾವಿರ ಮೀರಿದ ಮುಸ್ಲಿಂ ಮತಗಳನ್ನು ಹೊಂದಿರುವ ಕ್ಷೇತ್ರದಲ್ಲಿ ಬಿಜೆಪಿ ಪಕ್ಷವನ್ನು ಕಳೆದ ಎರಡು ಬಾರಿ ಗೆಲ್ಲಿಸುವಲ್ಲಿ ವಿಜಯ್ ಕುಮಾರ್ ಅವರ ಕಾರ್ಯವೈಖರಿಯೂ ದೊಡ್ಡಮಟ್ಟದಲ್ಲಿ ಸಹಾಯ ಮಾಡಿತ್ತು.

ಈಗ ಅವರಿಂದ ತೆರವಾದ ಕ್ಷೇತ್ರಕ್ಕೆ ಸ್ಥಳೀಯ ಪಾಲಿಕೆ ಸದಸ್ಯ ರಾಮಮೂರ್ತಿ ಹಾಗೂ ಹಿಂದೆ ಬಿಬಿಎಂಪಿ ಮೇಯರ್ ಆಗಿದ್ದ, ಬಿಜೆಪಿ ನಾಯಕ ಆರ್‌. ಅಶೋಕ್ ಅವರ ಅನುಯಾಯಿ ಆಗಿರುವ ನಟರಾಜ್ ಹೆಸರುಗಳು ಪಕ್ಷದೊಳಗೆ ಕೇಳಿ ಬರುತ್ತಿವೆ.

ಸಿ. ಕೆ. ರಾಮಮೂರ್ತಿ ಹಾಗೂ ಎಸ್‌. ಕೆ. ನಟರಾಜ್. 

“ವಿಜಯ್ ಕುಮಾರ್ ಅವರ ಜತೆಯಲ್ಲಿ ಹೆಚ್ಚು ಕೆಲಸ ಮಾಡಿದವರು ರಾಮಮೂರ್ತಿ. ರಾಮಮೂರ್ತಿ ಕೂಡ ಬ್ರಾಹ್ಮಣ ಸಮುದಾಯದವರು. ವಿಪ್ರ ಸಮಾಜದ ಉಪಾಧ್ಯಕ್ಷರು ಕೂಡ. ಹೀಗಾಗಿ, ರಾಮಮೂರ್ತಿ ವಿಧಾನಸಭೆಯ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ,’’ ಎನ್ನುತ್ತಾರೆ ರಾಮಮೂರ್ತಿ ಅವರ ಆಪ್ತರೊಬ್ಬರು.

ಆದರೆ, ಆರ್. ಅಶೋಕ್ ಜತೆ ಗುರುತಿಸಿಕೊಂಡಿರುವ ನಟರಾಜ್ ಕೂಡ ಜಯನಗರದಿಂದ ಟಿಕೆಟ್ ಆಕಾಂಕ್ಷಿ ಎಂದು ಪಕ್ಷದ ಮೂಲಗಳು ಹೇಳುತ್ತವೆ. “ಒಂದು ವೇಳೆ ರಾಮಮೂರ್ತಿ ಮತ್ತು ನಟರಾಜ್ ನಡುವೆ ಟಿಕೆಟ್ ವಿಚಾರದಲ್ಲಿ ಗೊಂದಲವಾದರೆ, ಮೂರನೇ ವ್ಯಕ್ತಿಗೆ ಪಕ್ಷ ಟಿಕೆಟ್ ನೀಡಬಹುದು,’’ ಎಂಬ ಲೆಕ್ಕಾಚಾರವನ್ನು ಇಲ್ಲಿನ ಮತ್ತೊಬ್ಬ ಬಿಜೆಪಿ ಕಾರ್ಯಕರ್ತರು ಮುಂದಿಡುತ್ತಾರೆ.

ರಾಜಕೀಯ ಪಕ್ಷದ ಅಭ್ಯರ್ಥಿ ಚುನಾವಣೆ ಸಮಯದಲ್ಲಿ ಸಾವನ್ನಪ್ಪಿದರೆ ಸದರಿ ಪಕ್ಷಕ್ಕೆ ಹೊಸ ಅಭ್ಯರ್ಥಿಯನ್ನು ನಿಲ್ಲಿಸಲು ಪ್ರಜಾಪ್ರತಿನಿಧಿ ಕಾಯ್ದೆ ಅನುವು ಮಾಡಿಕೊಡುತ್ತದೆ. ಈ ಹಿನ್ನೆಲೆಯಲ್ಲಿ ಜಯನಗರ ಕ್ಷೇತ್ರದ ಚುನಾವಣೆ ಮುಂದಕ್ಕೆ ಹೋಗಲಿದೆ. ವಿಧಾನಸಭೆ ಚುನಾವಣೆಯ ನಂತರವೇ ಜಯನಗರ ಕ್ಷೇತ್ರದಲ್ಲಿ ಚುನಾವಣೆ ನಡೆಯಲಿದೆ.

“ಜೂನ್ ಅಥವಾ ಜುಲೈ ತಿಂಗಳಿನಲ್ಲಿ ಇಲ್ಲಿ ಚುನಾವಣೆ ನಡೆಯಬಹುದು. ಅಷ್ಟೊತ್ತಿಗೆ ರಾಜ್ಯದಲ್ಲಿ ಹೊಸ ಸರಕಾರ ಆಯ್ಕೆಯಾಗಿರುತ್ತದೆ. ಒಂದು ವೇಳೆ ಬೆಂಗಳೂರಿನಲ್ಲಿ ಯಾರಾದರೂ ಬಿಜೆಪಿ ಹಿರಿಯ ನಾಯಕರು ಸೋತರೆ ಅವರನ್ನು ಜಯನಗರಕ್ಕೆ ಕರೆತರುವ ಸಾಧ್ಯತೆಯೂ ಇದೆ,’’ ಎಂದು ಪಕ್ಷದ ಮೂಲಗಳು ಹೇಳುತ್ತವೆ. ಹೀಗೆ, ಒಂದು ಕಡೆ ಸ್ಥಳೀಯ ಪಾಲಿಕೆ ಸದಸ್ಯರುಗಳ ಹೆಸರುಗಳ ಜತೆಗೆ, ಹೊಸ ಸಾಧ್ಯತೆಗಳನ್ನು ಪಕ್ಷದ ಕಾರ್ಯಕರ್ತರು ಮುಂದಿಡಲು ಆರಂಭಿಸಿದ್ದಾರೆ.

ದಶಕದ ಹಿಂದೆ:

ಬೆಂಗಳೂರು ದಕ್ಷಿಣದ ಪ್ರಭಾವಿ ನಾಯಕರಾದ ರಾಮಲಿಂಗಾ ರೆಡ್ಡಿ ಹಾಗೂ ಅನಂತ ಕುಮಾರ್. 

ಕ್ಷೇತ್ರ ಪುನರ್‌ ವಿಂಗಡಣೆಗೂ ಮುನ್ನ ಜಯನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿ ವಿಶಾಲವಾಗಿತ್ತು. ಮಾವಳ್ಳಿ, ಹೊಂಬೇಗೌಡನಗರ ಸೇರಿದಂತೆ ಹೆಚ್ಚು ಕೊಳಗೇರಿ ಪ್ರದೇಶಗಳು ಜಯನಗರದ ವ್ಯಾಪ್ತಿಯಲ್ಲಿ ಬರುತ್ತಿದ್ದವು. ಆ ಸಮಯದಲ್ಲಿ ಕ್ಷೇತ್ರವನ್ನು ಪ್ರತಿನಿಧಿಸಿದ್ದವರು ರಾಮಲಿಂಗಾ ರೆಡ್ಡಿ.

“ರಾಮಲಿಂಗಾ ರೆಡ್ಡಿ ಎಂದರೆ ರೌಡಿಸಂ ಎಂಬ ಪ್ರತೀತಿ ಕ್ಷೇತ್ರದಲ್ಲಿತ್ತು. ಕೊಳಗೇರಿಗಳನ್ನು ನೆಚ್ಚಿಕೊಂಡ ಅವರ ರಾಜಕೀಯವನ್ನು ಜಯನಗರದ ಅಫಿಶಿಯಲ್ ಮತದಾರರು ತಿರಸ್ಕಾರದಿಂದ ನೋಡುತ್ತಿದ್ದರು. ಕ್ಷೇತ್ರ ಪುನರ್ ವಿಂಗಡಣೆಯಾದ ನಂತರ ರೆಡ್ಡಿ ಬಿಟಿಎಂ ಕ್ಷೇತ್ರಕ್ಕೆ ವಲಸೆ ಹೋದರು. ಆ ಸಮಯದಲ್ಲಿ ಜಯನಗರದ ಮತದಾರರು ಆಯ್ಕೆ ಮಾಡಿಕೊಂಡಿದ್ದು ವಿಜಯ್ ಕುಮಾರ್ ಅವರನ್ನು. ವಿಜಯ್ ಕುಮಾರ್ ಶಾಸಕರಾದ ನಂತರ ಕ್ಷೇತ್ರದ ಚಹರೆ ಬದಲಾಗಿತ್ತು. ರೌಡಿಸಂಗೆ ಇಲ್ಲಿ ಕೊಂಚ ಬ್ರೇಕ್ ಬಿದ್ದಿತ್ತು,’’ ಎಂದು ನೆನಪಿಸಿಕೊಳ್ಳುತ್ತಾರೆ ಕ್ಷೇತ್ರ ಮತದಾರರೊಬ್ಬರು.

ಈ ಬಾರಿ ರಾಮಲಿಂಗಾ ರೆಡ್ಡಿ ತಮ್ಮ ಪುತ್ರಿ ಸೌಮ್ಯಾ ರೆಡ್ಡಿಯನ್ನು ಜಯನಗರದಲ್ಲಿ ಕಣಕ್ಕಿಳಿಸಿದ್ದಾರೆ.

“ರೆಡ್ಡಿ ಪುತ್ರಿ ಮತ್ತೆ ಜಯನಗರಕ್ಕೆ ಕಾಲಿಡುವ ಮೂಲಕ ಮತ್ತೆ ಹಳೆಯ ದಿನಗಳ ನೆನಪು ಮಾಡಿಸಲಾಗಿತ್ತು. ಪ್ರಚಾರದ ಅಬ್ಬರ ಆರಂಭವಾಗಿತ್ತು. ಕೊಳಗೇರಿಗಳಲ್ಲಿ ಕಾಂಗ್ರೆಸ್ ಪ್ರಚಾರದ ಭರಾಟೆ ಜೋರಾಗಿತ್ತು. ಇದನ್ನು ವಿಜಯ್ ಕುಮಾರ್ ಎದುರಿಸಲು ಸಿದ್ಧತೆ ಮಾಡಿಕೊಂಡಿದ್ದರು. ಇಲ್ಲಿನ ಅಫಿಶಿಯಲ್ ಮತದಾರರು ಬಿಜೆಪಿ ಕಡೆಗೆ ಒಲವು ಹೊಂದಿದ್ದರೆ, ಕೊಳಗೇರಿಗಳಲ್ಲಿ ಕಾಂಗ್ರೆಸ್ ಬಾವುಟಗಳು ಹಾರಾಟ ಆರಂಭಿಸಿದ್ದವು,’’ ಎಂದು ಅವರು ಹೇಳುತ್ತಾರೆ.

ಮೇಲ್ನೋಟಕ್ಕೆ ವಾಣಿಜ್ಯ ಕೇಂದ್ರವಾಗಿ, ಅಫಿಶಿಯಲ್‌ಗಳೇ ವಾಸಿಸುವ ಕ್ಷೇತ್ರವಾಗಿ ಕಾಣುವ ಜಯನಗರದ ಅಂತರಾಳ ಮಾತ್ರ ಭಿನ್ನವಾಗಿದೆ. ಇಲ್ಲಿ ಕ್ಷೇತ್ರ ವಿಂಗಡಣೆ ನಂತರವೂ ಉಳಿದುಕೊಂಡಿರುವ ಕೆಲವು ಕೊಳಗೇರಿಗಳ ಸಮಸ್ಯೆಗಳ ಜತೆಗೆ ಅಪರಾಧ ಚಟುವಟಿಕೆಗಳು ಆಗಾಗೆ ಗಮನ ಸೆಳೆಯುತ್ತವೆ. ಆದರೆ ವಿಜಯ್ ಕುಮಾರ್ ಶಾಸಕರಾದ ನಂತರ ಜಯನಗರ ದೊಡ್ಡ ಮಟ್ಟದಲ್ಲಿ ಬದಲಾಗಿತ್ತು ಎಂಬ ಮಾತುಗಳನ್ನು ಇಲ್ಲಿನ ಜನ ಹೇಳುತ್ತಾರೆ.

ಈಗ ವಿಜಯ್ ಕುಮಾರ್ ಅಗಲಿದ್ದಾರೆ. ಅವರ ನಂತರ ಕ್ಷೇತ್ರವನ್ನು ಯಾರು ಪ್ರತಿನಿಧಿಸುತ್ತಾರೆ ಎಂಬ ಪ್ರಶ್ನೆ ಮೂಡಿದೆ. ಬಿಜೆಪಿ ರಾಮಮೂರ್ತಿಗೆ ಟಿಕೆಟ್ ನೀಡಿದರೆ, ಹಳೆಯ ದಿನಗಳನ್ನು ಜನ ಮತ್ತೆ ನೆನಪಿಸಿಕೊಳ್ಳುವ ಸಾಧ್ಯತೆಯನ್ನು ತಳ್ಳಿಹಾಕುವ ಹಾಗಿಲ್ಲ. ನಟರಾಜ್ ಅಭ್ಯರ್ಥಿಯಾದರೆ ಸ್ಥಳೀಯ ಜನರ ಅಪಾರ ನಿರೀಕ್ಷೆಗಳ ಮೇಲೆ ತಣ್ಣೀರು ಬಟ್ಟೆ ಗ್ಯಾರೆಂಟಿ ಎಂಬ ಸ್ಥಿತಿ ಇದೆ. ಅವರ ಟ್ರ್ಯಾಕ್‌ ರೆಕಾರ್ಡೇ ಅದನ್ನು ನಿರೂಪಿಸುತ್ತಿದೆ . ಅದೇ ವೇಳೆ ರಾಮಲಿಂಗಾ ರೆಡ್ಡಿ ತಮ್ಮ ಪುತ್ರಿಯನ್ನು ಗೆಲ್ಲಿಸಿಕೊಳ್ಳುವ ಮೂಲಕ ಜಯನಗರ ಕ್ಷೇತ್ರವನ್ನು ಮತ್ತೆ ಹತೋಟಿಗೆ ತೆಗೆದುಕೊಂಡರೂ ಜಯನಗರ ಬದಲಾಗಲಿದೆ. ದಶಕದ ಹಿಂದಿನ ರಾಜಕಾರಣದ ಛಾಯೆ ಕಾಣಿಸಿಕೊಳ್ಳಲಿದೆ.

ಒಟ್ಟಾರೆ, ವಿಜಯ್ ಕುಮಾರ್ ಅಕಾಲಿಕ ಸಾವು ಜಯನಗರ ಕ್ಷೇತ್ರದ ರಾಜಕೀಯ ಚಹರೆಯನ್ನು ಎಲ್ಲಾ ಆಯಾಮಗಳಿಂದಲೂ ಬದಲಿಸದೆ ಎಂಬ ಅನುಮಾನ ಈಗ ಇಲ್ಲಿ ಯಾರಿಗೂ ಉಳಿದಿಲ್ಲ.