Home Special Series ಅಡಾಲ್ಫ್ ಹಿಟ್ಲರ್‌- 5: ಕರಾಳ ಅಧ್ಯಾಯದ ಅಂತ್ಯ

ಅಡಾಲ್ಫ್ ಹಿಟ್ಲರ್‌- 5: ಕರಾಳ ಅಧ್ಯಾಯದ ಅಂತ್ಯ

SHARE

ಚಿಕ್ಕ ವಯಸ್ಸಿನಿಂದಲೂ ಯುದ್ಧಾಕಾಂಕ್ಷಿಯಾಗಿದ್ದ ಹಿಟ್ಲರ್‌ಗೆ ಜರ್ಮನ್ ರಕ್ತದ ಜನರಿರುವ ಎಲ್ಲಾ ಭೂಭಾಗವನ್ನು ಒಂದು ಆಡಳಿತದ ತೆಕ್ಕೆಯೊಳಗೆ ತರಬೇಕೆಂಬ ಆಸೆ ಪ್ರಬಲವಾಗಿತ್ತು. ಅದಕ್ಕಾಗಿ ಹಿಟ್ಲರ್‌ ಕಾಯುತ್ತಾ ಕುಳಿತಿದ್ದ.

ಉಗ್ರ ರಾಷ್ಟ್ರೀಯತಾವಾದಿ ಹಿಟ್ಲರ್‌ ಕೈಯಲ್ಲಿ ಜರ್ಮನಿಯ ಸಂಪೂರ್ಣ ಅಧಿಕಾರವಿತ್ತು. ದೇಶದೊಳಗೆ ಪ್ರಬಲ ಶತ್ರುಗಳೇ ಇಲ್ಲದಂತಾದ ಹಿಟ್ಲರ್‌ನ ಗಮನ ಇತರೆ ರಾಷ್ಟ್ರಗಳ ಕಡೆಗೆ ಹರಿದಿತ್ತು. ಅದಾಗಲೇ ಹಿಟ್ಲರ್‌ ಮೊದಲ ಮಹಾಯುದ್ಧದ ನಂತರ ನಡೆದ ವರ್ಸೈಲ್ಸ್‌ ಒಪ್ಪಂದ ಎಲ್ಲಾ ಕರಾರುಗಳನ್ನು ಮುರಿದಾಗಿತ್ತು.

ಅದು 1938ರ ಫೆಬ್ರವರಿ ಸಮಯ. ಚೀನಾ ಜೊತೆಗಿದ್ದ ಸಂಬಂಧವನ್ನು ಕಡಿದುಕೊಂಡ ಹಿಟ್ಲರ್‌, ಅವತ್ತಿಗೆ ಚೀನಾಗಿಂತಲೂ ಪ್ರಬಲವಾಗಿದ್ದ ಜಪಾನ್‌ನ ಸ್ನೇಹ ಗಳಿಸುವಲ್ಲಿ ಸಫಲನಾದ. ಚೀನಾದ ಜೊತೆಗಿನ ಮೈತ್ರಿಗೆ ಅಂತ್ಯ ಬರೆದ ಮೇಲೆ ಅಲ್ಲಿಂದ ಬರುತ್ತಿದ್ದ ಹಲವಾರು ಕಚ್ಚಾ ವಸ್ತುಗಳಿಗಾಗಿ ಹಿಟ್ಲರ್‌ ಬೇರೆ ದೇಶಗಳನ್ನು ಆಶ್ರಯಿಸಬೆಕಾಯಿತು.

ಅದೇ ವೇಳೆ ಹಿಟ್ಲರ್‌ ಆಸ್ಟ್ರಿಯಾ ದೇಶವು ಜರ್ಮನಿಯೊಡನೆ ಏಕೀಕೃತಗೊಳ್ಳಬೇಕೆಂಬ ಒತ್ತಡ ಹೇರತೊಡಗಿದ. ಝೆಕೋಸ್ಲೋವಾಕಿಯಾದ ಕೆಲವು ಜಿಲ್ಲೆಗಳ ಮೇಲೆಯೂ ಇದೇ ರೀತಿಯ ಒತ್ತಡ ಹಿಟ್ಲರ್‌ನಿಂದ ಹೇರಲ್ಪಟ್ಟಿತು. ಇಂಗ್ಲೆಂಡ್ ಮುಂದಿಟ್ಟ ಆಫ್ರಿಕಾ ಮೇಲೆ ಒಟ್ಟಾಗಿ ಆಳುವ ಅಂತಾರಾಷ್ಟ್ರೀಯ ಸಾಂಗತ್ಯವನ್ನು ಹಿಟ್ಲರ್‌ ಖಡಾಖಂಡಿತವಾಗಿ ತಿರಸ್ಕರಿಸಿದ. ನಂತರದಲ್ಲಿ ಹಿಟ್ಲರ್‌ ಸುಡೆಟನ್‌ಲ್ಯಾಂಡ್‌ನ ಹಲವಾರು ಯಹೂದ್ಯೇತರ ಪಕ್ಷಗಳೊಂದಿಗೆ ಗುಪ್ತ ಸಭೆಗಳನ್ನು ನಡೆಸಿದ್ದ.

ಸುಡೇಟನ್‌ಲ್ಯಾಂಡ್‌ ಝೆಕೋಸ್ಲೋವಾಕಿಯಾ ದೇಶದ ಭಾಗವಾಗಿತ್ತು. ಅದನ್ನು ಕಬಳಿಸಲು ಹೊಂಚು ಹಾಕಿದ್ದ ಹಿಟ್ಲರ್‌, ಝೆಕೊಸ್ಲೋವಾಕಿಯ ಗಡಿಯಲ್ಲಿ ದೊಡ್ಡ ಪ್ರಮಾಣದ ಸೇನೆಯನ್ನು ತಂದು ನಿಲ್ಲಿಸಿದ್ದ. ಈ ವಾಸನೆ ಝೆಕೊಸ್ಲೋವಾಕಿಯಾ ಮೂಗಿಗೆ ಬಡಿದು, ಅದು ಸ್ಪಷ್ಟ ಚಿತ್ರಣವನ್ನು ಕಾಣುವ ವೇಳೆಗಾಗಲೇ ಇಂಗ್ಲೆಂಡ್ ಜರ್ಮನಿಯ ವಿರುದ್ಧ ಎರಡು ಬಾರಿ ಎಚ್ಚರಿಕೆಯ ಗಂಟೆ ಬಾರಿಸಿತ್ತು. ಪ್ಯಾರಿಸ್‌ನಿಂದಲೂ ಎಚ್ಚರಿಕೆಯನ್ನು ಪಡೆದ ಹಿಟ್ಲರ್‌, ಇಂಗ್ಲೆಂಡ್‌ಅನ್ನು ಮುಗಿಸದ ಹೊರತು ದಾರಿ ಸುಲಭವಿಲ್ಲ ಎಂದು ತೀರ್ಮಾನಿಸಿದ.

ಜರ್ಮನಿಯ ನೌಕಾ ನಿರ್ಮಾಣ ಕಾರ್ಯಗಳು ಎಲ್ಲಿಲ್ಲದ ವೇಗ ಪಡೆದುಕೊಂಡವು. ಝೆಕೊಸ್ಲೋವಾಕಿಯಾದ ನಿರ್ಣಾಮದ ಜೊತೆಗೆ ಇಂಗ್ಲೆಂಡ್ ಮತ್ತು ಫ್ರಾನ್ಸ್‌ಗಳ ಜೊತೆ ಯುದ್ಧಕ್ಕೆ ನಿಲ್ಲವುದು ದೊಡ್ಡ ದುಷ್ಪರಿಣಾಮವನ್ನು ತಂದೊಡ್ಡಲಿದೆ ಎಂಬ ಇತರರ ಮಾತುಗಳನ್ನು ಹಿಟ್ಲರ್‌ನ ಕಿವಿ ಕೇಳದಾದವು.

ಯುದ್ಧ ಇನ್ನೇನು ನಡೆದೇ ಹೋಗುತ್ತದೆ ಎನ್ನುವಂತ ಹಂತ ತಲುಪಿದಾಗ ಮನಸ್ಸು ಬದಲಿಸಿದ ಹಿಟ್ಲರ್‌, ಇಟಲಿಯ ಸರ್ವಾಧಿಕಾರಿ ಮುಸಲೋನಿಯ ಸ್ನೇಹಕ್ಕಾಗಿ ಮಾತುಕತೆಯಲ್ಲಿ ತೊಡಗಿದನು. ಆಗಲೇ ಏನಾದರೂ ಹಿಟ್ಲರ್‌ ದುಡಿಕಿದ್ದಿದ್ದರೆ ತನ್ನ ಭವಿಷ್ಯದ ಮೈತ್ರಿಕೂಟದ ಸದಸ್ಯರುಗಳಾದ ಇಟಲಿ, ಜಪಾನ್, ಪೋಲ್ಯಾಂಡ್ ಮತ್ತು ಹಂಗೇರಿಗಳು ಸಹಾಯಕ್ಕೆ ಬರುತ್ತಿರಲಿಲ್ಲ. ಜರ್ಮನಿಯೂ ಕೂಡ ಮಹಾಯುದ್ಧಕ್ಕೆ ಅಗತ್ಯವಿದ್ದ ಶಸ್ತ್ರಾಸ್ತ್ರಗಳು ಮತ್ತು ಹಣವನ್ನು ಹೊಂದಿರಲಿಲ್ಲ.

ಕಡಿಮೆ ತೈಲದ ದಾಸ್ತಾನು ಹೊಂದಿದ್ದ ಜರ್ಮನಿಗೆ ಬ್ರಿಟಿಷರಿಂದ ಬರುತ್ತಿದ್ದ ಲೋಹಗಳು ನಿಂತುಹೋಯಿತು. ಯುದ್ಧಕ್ಕೆ ತೈಲದ ಕೊರತೆಯಾಗಿ ಎಲ್ಲಿ ಸೋಲಾಗುವುದೋ ಎಂಬ ಭಯವೇ ಹಿಟ್ಲರ್‌ನನ್ನು ಸಧ್ಯಕ್ಕೆ ಯುದ್ಧದಿಂದ ದೂರ ಉಳಿಯುವಂತೆ ಮಾಡಿತ್ತು ಎಂದು ಕೆಲವು ಇತಿಹಾಸಕಾರರು ಹೇಳುತ್ತಾರೆ.

ಆದರೆ ಮುಂದೆ ನಡೆದ ಮ್ಯೂನಿಕ್ ಒಪ್ಪಂದ ಸುಡೆಟೆನ್‌ಲ್ಯಾಂಡ್‌ಅನ್ನು ಹಿಟ್ಲರ್‌ಗೆ ತಂದುಕೊಟ್ಟಿತಾದರೂ ಹಿಟ್ಲರ್‌ನೊಳಗಿನ ಯುದ್ಧ ನಡೆಸಿಯೇ ತೀರಬೇಕೆಂಬ ಆಸೆ ಸತ್ತಿರಲಿಲ್ಲ.

ಮುಂದೆ ನಡೆದ ಅಂತರರಾಷ್ಟ್ರೀಯ ಸಭೆಯೊಂದರಲ್ಲಿ ಹಿಟ್ಲರ್‌ ತನ್ನ ಭಾಷಣದಲ್ಲಿ ಇಂಗ್ಲೆಂಡ್‌ನ ವಿರುದ್ಧ ವಾಗ್ದಾಳಿ ನಡೆಸಿ, ಜರ್ಮನಿಯ ಆಂತರಿಕ ಆಡಳಿತದೊಳಗೆ ಕೈ ಹಾಕದಂತೆ ಎಚ್ಚರಿಕೆ ನೀಡಿದನು. ಈ ಮಧ್ಯೆಯೇ ಯಾವಾಗ ಬೇಕಾದರೂ ಮಹಾಯುದ್ಧ ಜರುಗಬಹುದೆಂಬ ಮುನ್ಸೂಚನೆಯಲ್ಲಿದ್ದ ಇತರೆ ಪ್ರಬಲ ದೇಶಗಳು ಶಸ್ತ್ರಾಸ್ತ್ರಗಳ ಸಂಗ್ರಹವನ್ನು ಆರಂಭಿಸಿದ್ದವು.

ಕಾಲ ಮುಂದೆ ಸರಿಯುತ್ತಿರುವಾಗಲೇ ಹಿಟ್ಲರ್‌ ಹಲವಾರು ದೇಶಗಳೊಂದಿಗೆ ಸ್ನೇಹ ಗಳಿಸುವ ಪ್ರಯತ್ನವನ್ನು ಮಾಡಿದನಾದರೂ ಕೈಗೂಡಲಿಲ್ಲ. ಪೊಲ್ಯಾಂಡ್‌ ನಿರ್ನಾಮಕ್ಕಾಗಿ ಪಣತೊಟ್ಟ ಹಿಟ್ಲರ್‌ನ ಸಾಮ್ರಾಜ್ಯದ ಸುತ್ತ ಇಂಗ್ಲೆಂಡ್ ಸೈನ್ಯದ ಕೋಟೆ ಕಟ್ಟುತ್ತಿತ್ತು. ಹಲವಾರು ಅಂತರರಾಷ್ಟ್ರೀಯ ವಿದ್ಯಮಾನಗಳು ಜರುಗಿ ಇಂಗ್ಲೆಂಡ್ ಮತ್ತು ಫ್ರಾನ್ಸ್‌ ಜರ್ಮನಿಯ ವಿರುದ್ಧ ಯುದ್ಧ ಘೋಷಿಸಿದವು. ಆದರೆ ಯುದ್ಧವೇನು ಆಗಲೇ ಸಂಭವಿಸಲಿಲ್ಲ.

1940ರ ಏಪ್ರಿಲ್‌ನಲ್ಲಿ ಹಿಟ್ಲರ್‌ ಬೇರೆ ದೇಶಗಳು ಸಮರಕ್ಕೆ ಸಿದ್ಧವಾಗುವ ಮೊದಲೇ ಕಲಹ ಮುನ್ನುಡಿ ಬರೆದನು. ಆತನ ಸೇನೆ ಡೆನ್ಮಾರ್ಕ್, ನಾರ್ವೆ ಸೇರಿದಂತೆ ಫ್ರಾನ್ಸ್ ದೇಶವನ್ನೂ ಸೋಲಿಸಿ ಹಲವಾರು ಭೂಭಾಗಗಳನ್ನು ವಶಪಡಿಸಿಕೊಂಡಿತು. ಇದರಿಂದ ಉತ್ಸಾಹಿತನಾದ ಇಟಲಿಯ ಸರ್ವಾಧಿಕಾರಿ ಮುಸಲೋನಿ, ಹಿಟ್ಲರ್‌ ಜೊತೆ ಕೈಜೋಡಿಸಿದ. ಅದೇ ವೇಳೆ ಬೇರೆ ಕಡೆ ಆರಂಭವಾದ ಯುದ್ಧಗಳು ಹಿಟ್ಲರ್‌ಗೆ ನೆರವಾದವು. ಜಪಾನ್, ಹಂಗೇರಿ, ಇನ್ನೂ ಹಲವಾರು ದೇಶಗಳು ಹಿಟ್ಲರ್‌ ಜೊತೆ ಕೈಜೋಡಿಸಿದವು. ಮುಂದೆ ಈ ಒಕ್ಕೂಟ ‘ಆಕ್ಸಿಸ್ ಪವರ್’ ಎಂಬ ಹೆಸರು ಪಡೆಯಿತು.

ಇಟಲಿಯ ಸರ್ವಾಧಿಕಾರಿ ಮುಸಲೋನಿಯ ಜತೆ ಹಿಟ್ಲರ್‌.

ಯುದ್ಧೋನ್ಮಾದದಲ್ಲಿದ್ದ ಜರ್ಮನ್ ಸೇನೆ ಲಿಬಿಯಾವನ್ನು ಪ್ರವೇಶಿಸಿತು. ನಂತರದಲ್ಲಿ ಯುಗೋಸ್ಲೋವಿಯಾವನ್ನು ಆಕ್ರಮಿಸಿತು. ತರುವಾಯು ಅಲ್ಪಾವಧಿಯಲ್ಲೇ ಗ್ರೀಸ್ ಮೇಲೆ ಆಕ್ರಮಣ, ಬ್ರಿಟಿಷರ ವಿರುದ್ಧ ಹೋರಾಡುತ್ತಿದ್ದ ಇರಾಕ್‌ನ ಬಂಡುಕೋರ ಸೇನೆಗಳಿಗೆ ಬೆಂಬಲ- ಹೀಗೆ ಹಿಟ್ಲರ್‌ ಸತತ ಗೆಲುವು ದಾಖಲಿಸುತ್ತಾ ನಡೆದ. ಹಲವಾರು ಪ್ರದೇಶಗಳು ಹಿಟ್ಲರ್‌ನ ತೆಕ್ಕೆಗೆ ಬಿದ್ದವು. ಆದರೆ ಇವುಲ್ಲವುಗಳ ಮಧ್ಯೆಯೇ ಹಿಟ್ಲರ್‌ ಒಳಗೊಳಗೆಯೇ ಕುಸಿಯುತ್ತಿದ್ದ.

2ನೇ ಮಹಾಯುದ್ಧದಲ್ಲಿ ಹಿಟ್ಲರ್‌ ಸೈನ್ಯ.

ನಂತರದಲ್ಲಿ ಇತಿಹಾಸದಲ್ಲಿ ದೊಡ್ಡ ಚರ್ಚೆಯನ್ನು ಹುಟ್ಟುಹಾಕಿದ ‘ಬಾರ್ಬರೋಸಾ ಆಕ್ರಮಣ’ಕ್ಕೆ ಹಿಟ್ಲರ್‌ ಮುಂದಾಗುತ್ತಾನೆ. ಸೋವಿಯತ್ ಒಕ್ಕೂಟದ ಸೇನೆಯ ವಿರುದ್ಧ ನಡೆಸಿದ ಈ ದಂಡಯಾತ್ರೆಯಿಂದ ಬಾಲ್ಟಿಕ್, ಬೆಲಾರುಸ್, ಉಕ್ರೇನ್‌ಗಳ ಮೇಲೆ ಹಿಟ್ಲರ್‌ ಹಿಡಿತ ಸಾಧಿಸುತ್ತಾನೆ. ಅದು 1941ರ ಡಿಸೆಂಬರ್, ಹಿಟ್ಲರ್‌ ಅಮೆರಿಕಾದ ವಿರುದ್ಧ ಯುದ್ಧ ಘೋಷಿಸುತ್ತಾನೆ. ಇದರ ಪರಿಣಾಮವಾಗಿ ಹಿಟ್ಲರ್‌ ಬ್ರಿಟನ್, ಅಮೆರಿಕಾ ಮತ್ತು ಸೋವಿಯತ್‌ ದೇಶಗಳ ಒಕ್ಕೂಟದ ಎದುರು ನಿಲ್ಲಬೇಕಾಯಿತು. ಇಲ್ಲಿಂದ ಮುಂದಕ್ಕೆ ಹಿಟ್ಲರ್‌ನ ಸೋಲಿನ ಪರ್ವ ಆರಂಭವಾಗುತ್ತದೆ.

ಬಾರ್ಬರೋಸಾ ಆಕ್ರಮಣದ ವೇಳೆಯಲ್ಲಿ ಹಿಟ್ಲರ್‌ ಸೈನ್ಯ.

ಹಿಟ್ಲರ್‌ ಆರೋಗ್ಯ, ಸೇನೆ, ಆರ್ಥಿಕ ಪರಿಸ್ಥಿತಿ ಎಲ್ಲವೂ ಹದಗೆಡುತ್ತಿದ್ದವು. ಈ ನಡುವೆಯೇ ಮುಸಲೋನಿ ಪದಚ್ಯುತನಾದ. ಅದರ ಬೆನ್ನಲ್ಲೆ ಜರ್ಮನಿಯ ಸೋಲು ಖಚಿತ ಎನಿಸಿದ ಜರ್ಮನ್ ಸೇನೆಯಲ್ಲಿದ್ದವರು ಹಿಟ್ಲರ್‌ನನ್ನು ಅಧಿಕಾರದಿಂದ ಕೆಳಗಿಳಿಸುವ ಪ್ರಯತ್ನಕ್ಕೂ ಕೈಹಾಕಿದರು. ಆದರೆ ಹಿಟ್ಲರ್‌ ಜಗ್ಗಲಿಲ್ಲ.

1944ರ ಕೊನೆಯ ವೇಳೆಗೆ ಪಾಶ್ಚಾತ್ಯ ರಾಷ್ಟ್ರಗಳ ಮಿತ್ರಕೂಟ ಹಿಟ್ಲರ್‌ನ ಸೈನ್ಯಕ್ಕೆ ನೇರ ಮುಖಾಮುಖಿಯಾಯಿತು. ಹಿಟ್ಲರ್‌ನ ಪ್ರಾಬಲ್ಯ ಕುಸಿಯತೊಡಗಿತು. ಆಗ ಹಿಟ್ಲರ್‌ಗೆ 56 ವರ್ಷಗಳ ಪ್ರಾಯ. ಜರ್ಮನಿಯ ಒಂದೊಂದೇ ಭಾಗಗಳು ಮಿತ್ರಕೂಟಗಳ ವಶವಾಗತೊಡಗಿದವು. ಸರಕಾರ ಸೇನೆಯ ನಡುವೆ ಭಿನ್ನಾಭಿಪ್ರಾಯಗಳು ಉಂಟಾಗಿ ಹೊಸ ಸೈನ್ಯಾಧಿಕಾರಿ ಅಸ್ತಿತ್ವಕ್ಕೆ ಬಂದ. ಸತತ ಸೋಲುಗಳು ಹಿಟ್ಲರ್‌ನನ್ನು ಮಾನಸಿಕ ವ್ಯಗ್ರನನ್ನಾಗಿಸಿದ್ದವು.

ಅದು1945ರ ಎಪ್ರಿಲ್‌ 30ನೇ ತಾರೀಖು, ಗೆಳೆಯ ಮುಸಲೋನಿಯ ಹಿಂಸಾತ್ಮಕ ಸಾವಿನ ಸುದ್ದಿ ಹಿಟ್ಲರ್‌ನನ್ನು ತಲುಪಿತ್ತು. ಆ ವೇಳೆಗೆ ಬರ್ಲಿನ್‌ ನಗರದ ಬೀದಿ ಬೀದಿಗಳಲ್ಲಿ ಜರ್ಮನ್ ಸೈನಿಕರ ಮಾರಣಹೋಮ ನಡೆಸಿದ್ದ ಸೋವಿಯತ್ ಸೈನಿಕರು, ಹಿಟ್ಲರ್‌ ಇದ್ದ ಜಾಗದಿಂದ ಕೂಗಳತೆಯ ದೂರದಲ್ಲೇ ಧಾವಿಸಿ ಬರುತ್ತಿದ್ದರು. ಶತ್ರು ಸೈನ್ಯಕ್ಕೆ ಸಿಕ್ಕಿ ದಾರುಣವಾಗಿ ಸಾಯಬೇಕಾದದ್ದನ್ನು ಮನಗಂಡ ಹಿಟ್ಲರ್ ತನ್ನ ಹಣೆ ಮತ್ತು ಕಿವಿಯ ನಡುಭಾಗಕ್ಕೆ ತಾನೇ ಗುಂಡು ಹೊಡೆದುಕೊಂಡ, ಜೊತೆಗೆ ಬಾಯಲ್ಲಿ ಸೈನೆಡ್‌ ಗುಳಿಗೆಯಿತ್ತು.

ಎರಡನೇ ಮಹಾಯುದ್ಧಕ್ಕೆ ಮುನ್ನುಡಿ ಬರೆದ ಹಿಟ್ಲರ್‌, ಕೊನೆಗೆ ಸಾವಿನ ಬೀತಿಯಲ್ಲಿ ತನ್ನನ್ನು ತಾನೇ ಅಂತ್ಯಗೊಳಿಸಿಕೊಂಡ. ಅಲ್ಲಿಗೆ 2ನೇ ಮಹಾಯುದ್ಧದ ಬಹುದೊಡ್ಡ ಕಂಟಕವೊಂದು ಕಳಚಿ ಬಿದ್ದಂತಾಯಿತು.

ತನ್ನ ಉಗ್ರ ರಾಷ್ಟ್ರೀಯತೆ, ಜನಾಂಗೀಯತೆ, ಯುದ್ಧಪಿಪಾಸುತನಗಳಿಂದ ದೊಡ್ಡ ದುರಂತವೊಂದನ್ನು ಸೃಷ್ಟಿಸಿದ್ದ ಹಿಟ್ಲರ್‌ನ ಸಾವು ಹೀನಾಯವಾಗಿತ್ತು. ಸರ್ವಾಧಿಕಾರಿಯಾಗಿ ಮೆರೆದು ಕೊನೆಗೊಂದು ದಿನ ಭಯದಿಂದ ಆತ್ಮಹತ್ಯೆ ಮಾಡಿಕೊಳ್ಳುವ ಹಂತ ತಲುಪಿದ್ದ ಹಿಟ್ಲರ್. ಹಿಟ್ಲರ್ ಹುಟ್ಟು ಮತ್ತು ಸಾವು, ಉಗ್ರ ರಾಷ್ಟ್ರೀಯತೆಯ ಅಪಾಯಗಳನ್ನು ಜಗತ್ತಿಗೆ ಇಂದಿಗೂ ಸಾರಿ ಹೇಳುತ್ತಿವೆ. ಅರ್ಥಮಾಡಿಕೊಳ್ಳವ ವ್ಯವಧಾನ ನಮಲ್ಲಿರಬೇಕು, ಅಷ್ಟೆ.