Home Inside Story ‘ಬ್ಯೂಟಿ ಆಫ್ ಡೆಮಾಕ್ರಸಿ’: ರಾಜಧಾನಿಯಿಂದ ನಿಮ್ಮೂರಿಗೆ ಹೊರಟಿದೆ ‘ಭ್ರಷ್ಟರ ಬಸ್‌’!

‘ಬ್ಯೂಟಿ ಆಫ್ ಡೆಮಾಕ್ರಸಿ’: ರಾಜಧಾನಿಯಿಂದ ನಿಮ್ಮೂರಿಗೆ ಹೊರಟಿದೆ ‘ಭ್ರಷ್ಟರ ಬಸ್‌’!

SHARE

ಇದು ಕೊನೆಯ ಹಂತದ ಪ್ರಯತ್ನ. ಕರ್ನಾಟಕದ 15ನೇ ವಿಧಾನಸಭೆಗೆ ಜನಪ್ರತಿನಿಧಿಗಳ ಆಯ್ಕೆಗೆ ಇನ್ನು ಬಾಕಿ ಉಳಿದಿರುವುದು 10 ದಿನ, ಸುಮಾರು 240 ಗಂಟೆಗಳು. ಎಲ್ಲಾ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಬಹಿರಂಗ ಪ್ರಚಾರದ ಮೂಲಕ ಜನರ ಗಮನ ಸೆಳೆಯಲು ಪ್ರಯತ್ನ ನಡೆಯುತ್ತಿವೆ. ಅಂತರಾಳದಲ್ಲಿ ಮತಗಳನ್ನು ಖಾತ್ರಿಪಡಿಸಿಕೊಳ್ಳುವ ಯೋಜನೆಗೂ ಇಳಿದಿದ್ದಾರೆ.

‘ಸಮಾಚಾರ’ಕ್ಕೆ ಲಭ್ಯವಾಗಿರುವ ಕೆಲವು ಮಾಹಿತಿ, ರಾಜಕೀಯ ಪಕ್ಷಗಳು ಮತದಾನದ ದಿನಕ್ಕಾಗಿ ನಡೆಸುತ್ತಿರುವ ಕಸರತ್ತುಗಳನ್ನು ಬಿಚ್ಚಿಟ್ಟಿದೆ.

ರಾಜಧಾನಿ ಬೆಂಗಳೂರಿನಲ್ಲಿ ಸುಮಾರು ಒಂದು ಕೋಟಿ ಮೀರಿದ ಜನಸಂಖ್ಯೆ ಇದೆ. ರಾಜ್ಯದ ಎಲ್ಲಾ ಜಿಲ್ಲೆ, ತಾಲೂಕುಗಳ ಜನ ಇಲ್ಲಿದ್ದಾರೆ. ಬಹುತೇಕರ ಹೆಸರುಗಳು ಸ್ಥಳೀಯ ಕ್ಷೇತ್ರಗಳ ಮತಪಟ್ಟಿಯಲ್ಲಿದೆ. ಹೀಗಾಗಿ, ಮತದಾರರನ್ನು ಮೇ. 12ನೇ ತಾರೀಖು ತಮ್ಮೂರಿಗೆ ಕರೆಸಿಕೊಳ್ಳುವ ಪ್ರಯತ್ನವನ್ನು ಅಭ್ಯರ್ಥಿಗಳು ಆರಂಭಿಸಿದ್ದಾರೆ.

ಅದರ ಭಾಗವಾಗಿ ರಾಜಧಾನಿಯಿಂದ ಆಯಾ ಊರುಗಳಿಗೆ ಬಸ್‌ ವ್ಯವಸ್ಥೆಯನ್ನು ಪಕ್ಷಗಳು ಹಾಗೂ ಅಭ್ಯರ್ಥಿಗಳು ಸ್ವಂತ ಖರ್ಚಿನಲ್ಲಿ ಮಾಡುತ್ತಿದ್ದಾರೆ.

ಮೇಲಿನ ವಾಟ್ಸಾಪ್‌ ಸಂದೇಶ ಪ್ರತಿಷ್ಠಿತ ಎಸ್‌ಡಿಎಂ ಕಾಲೇಜಿನ ಹಳೇ ವಿದ್ಯಾರ್ಥಿಗಳ ಗುಂಪಿನಲ್ಲಿ ಲಭ್ಯವಾಗುತ್ತದೆ. ಮತದಾನದ ಹಿಂದಿನ ದಿನ ಬೆಳಗ್ಗೆ, ಮೇ. 11ರಂದು ಬೆಳಗ್ಗೆ ಬೆಂಗಳೂರಿನಿಂದ ಬೆಳ್ತಂಗಡಿಗೆ ಹಾಗೂ ಮತದಾನ ಮುಗಿಯುವ ದಿನ ಮೇ. 12ರ ರಾತ್ರಿ ಬೆಳ್ತಂಗಡಿಯಿಂದ ಬೆಂಗಳೂರಿಗೆ ಬಸ್‌ ವ್ಯವಸ್ಥೆ ಮಾಡಿರುವ ಕುರಿತು ಮಾಹಿತಿ ನೀಡುತ್ತದೆ. ಪಕ್ಷ ಯಾವುದು ಎಂಬುದನ್ನು ಸಂದೇಶವೇ ಹೇಳುತ್ತಿದೆ.

ಇದಕ್ಕಾಗಿ ಮತದಾರರ ಪಟ್ಟಿಯಲ್ಲಿರುವವರು ಹಾಗೂ ಕುಟುಂಬದ ಸದಸ್ಯರು ತಮ್ಮ ಸೀಟುಗಳನ್ನು ಕಾಯ್ದಿರಿಸಿಕೊಳ್ಳಲು ಕೋರಲಾಗಿದೆ.

ಇದು ಬೆಳ್ತಂಗಡಿಗೆ ಮಾತ್ರವೇ ಸೀಮಿತವಾದ ಬೆಳವಣಿಗೆ ಅಲ್ಲ. ರಾಜ್ಯ ಎಲ್ಲಾ ಭಾಗಗಳಿಗೂ ಮೇ. 11ರಂದು ಬಸ್‌ ವ್ಯವಸ್ಥೆಯನ್ನು ಮಾಡಲಾಗುತ್ತಿದೆ. “ತೀರ್ಥಹಳ್ಳಿಗೆ ಬಸ್‌ ವ್ಯವಸ್ಥೆ ಮಾಡಲಾಗಿದೆ ಎಂದು ಕರೆಯೊಂದು ಬಂದಿತ್ತು. ಕೆಂಪ್‌ ಬಸ್‌ ಅಥವಾ ಪುಶ್‌ ಬ್ಯಾಕ್‌ ಸೀಟ್ ಇರುವ ಎರಡು ಪ್ರತ್ಯೇಕ ಬಸ್‌ಗಳ ವ್ಯವಸ್ಥೆ ಇದೆ ಎಂಬ ಮಾಹಿತಿ ನೀಡಿದರು,’’ ಎನ್ನುತ್ತಾರೆ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ಬೆಂಗಳೂರಿನಲ್ಲಿ ನೆಲೆಸಿರುವ ಮತದಾರರೊಬ್ಬರು.

ಇವು ಕೊನೆಯ ಹಂತದ ಪ್ರಯತ್ನಗಳು. ಬಹಿರಂಗ ಪ್ರಚಾರ, ಭಾ‍ಷಣಗಳು ಏನೇ ನಡೆದರೂ ಅಂತಿಮವಾಗಿ ಮತಯಂತ್ರಗಳ ಮುಂದೆ ಮತದಾರರು ಹೋಗಿ ನಿಲ್ಲುವುದು ಅನಿವಾರ್ಯ. ಹೀಗಾಗಿಯೇ, ಕೊನೆಯ ಪ್ರಯತ್ನವಾಗಿ ಮತದಾರರನ್ನು ಕರೆಸಿಕೊಂಡು ಮತ ಹಾಕಿಸಿಕೊಳ್ಳುವ ಪ್ರಯತ್ನದಲ್ಲಿ ರಾಜಕೀಯ ಪಕ್ಷಗಳು ನಿರತವಾಗಿವೆ.

ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಸರಾಸರಿ ಮತದಾರರ ಸಂಖ್ಯೆ 2. 21 ಲಕ್ಷ ಇದೆ. 2013 ರಲ್ಲಿ 1. 83 ಲಕ್ಷ ಇತ್ತು. ಮತದಾರರ ಪಟ್ಟಿಗೆ ಮಹಿಳೆಯರ ದಾಖಲಾತಿ ಪ್ರಮಾಣ 2013 ಕ್ಕೆ ಹೋಲಿಸಿದರೆ ಶೇ 13 ರಷ್ಟು ಹೆಚ್ಚಳವಾಗಿದೆ. ಇವರಲ್ಲಿ ಶೇ. 25ರಷ್ಟು ಮತದಾರರು ಕ್ಷೇತ್ರಗಳಿಂದ ಹೊರಗಿದ್ದಾರೆ ಎಂಬ ಅಂದಾಜಿದೆ.

ಇವರನ್ನು ಮೇ. 12ಕ್ಕೆ ಕ್ಷೇತ್ರಕ್ಕೆ ಕರೆಸಿಕೊಳ್ಳಬೇಕಿದೆ ಮತ್ತು ಅವು ನಿರ್ಣಾಯಕ ಮತಗಳಾಗುವ ಸಾಧ್ಯತೆಯೂ ಇದೆ. ಹೀಗಾಗಿ, ಬೆಂಗಳೂರು ಮತ್ತು ನಾನಾ ಭಾಗಗಳಿಂದ ಬಸ್‌ ವ್ಯವಸ್ಥೆಗಳನ್ನು ಮಾಡುವ ಮೂಲಕ ಪ್ರಭಾವ ಬೀರುವ ಕೆಲಸ ಬಿರುಸಿನಿಂದ ನಡೆಯುತ್ತಿದೆ.

“ಬೆಂಗಳೂರಿನಿಂದ ಊರಿಗೆ ಕರೆದುಕೊಂಡು ಹೋಗಲು ನಾಲ್ಕು ಬಸ್‌ಗಳನ್ನು ಬುಕ್ ಮಾಡಲಾಗಿದೆ. ಪ್ರತಿ ಬಸ್‌ನಲ್ಲಿ ಕನಿಷ್ಟ 55 ಜನರನ್ನು ಕರೆದುಕೊಂಡು ಬರುವ ಹೊಣೆಗಾರಿಕೆ ನೀಡಲಾಗಿದೆ. ಹೀಗಾಗಿ ರಾಜಧಾನಿಯಲ್ಲಿರುವ ನಮ್ಮೂರಿನವರನ್ನು ಸಂಪರ್ಕ ಮಾಡಲಾಗುತ್ತಿದೆ,’’ ಎನ್ನುತ್ತಾರೆ ಧಾರವಾಡ ಮೂಲದ ವ್ಯಕ್ತಿಯೊಬ್ಬರು.

ಇದರ ಜತೆಗೆ, ಮತದಾರರನ್ನು ಸೆಳೆಯಲು ಸಾಂಪ್ರದಾಯಿಕ ಆಮಿಷಗಳು ಈ ಬಾರಿಯೂ ಚಲಾವಣೆಯಲ್ಲಿವೆ. ಕುಕ್ಕರ್‌, ಸೀರೆ ಸೇರಿದಂತೆ ಗೃಹ ಬಳಕೆ ವಸ್ತುಗಳನ್ನು ನೀಡಲಾಗುತ್ತಿದೆ. ಕೆಲವು ಕ್ಷೇತ್ರಗಳಲ್ಲಿ ಫಾರಂ ಕೋಳಿಗಳನ್ನು, ಮಸಾಲೆ ಪ್ಯಾಕೆಟ್‌ಗಳನ್ನು ನೀಡಲಾಗುತ್ತಿದೆ. ಪ್ರಮುಖ ರಾಜಕೀಯ ಪಕ್ಷಗಳು ಇಂತಹ ಆಮಿಷಗಳನ್ನು ಮುಂದಿಡುತ್ತಿವೆ.

ಇದೇ ವೇಳೆಯಲ್ಲಿ ಕಣದಲ್ಲಿರುವ ಪಕ್ಷೇತರ ಅಭ್ಯರ್ಥಿಗಳು ಹಾಗೂ ಪರ್ಯಾಯ ರಾಜಕೀಯ ಬಯಸುವ ಎಎಪಿಯಂತಹ ಪಕ್ಷಗಳು ಕೊನೆಯ ಹಂತದಲ್ಲಿ ಇಂತಹ ಆಮಿಷಗಳನ್ನು ತಡೆಯುವ ಪ್ರಯತ್ನದಲ್ಲಿ ನಿರತವಾಗಿವೆ.

ಈ ವಿಚಾರದಲ್ಲಿ ಜಯನಗರ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ರವಿಕೃಷ್ಣಾ ರೆಡ್ಡಿ ಕ್ರೀಯಾಶೀಲ ಯೋಜನೆಯನ್ನು ಮುಂದಿಟ್ಟಿದ್ದಾರೆ. “#RKR4Jayanagar #WhistleBlower #FightCorruption #₹50000Prize “ಗಂಡಸರಿಗೆ ಲಿಕ್ಕರ್ ಹೆಂಗಸರಿಗೆ ಕುಕ್ಕರ್” ಹಂಚುತ್ತಿರುವ ಸ್ಟಿಂಗ್ ವಿಡಿಯೋ ತಂದುಕೊಟ್ಟವರಿಗೆ ₹50,000 ಬಹುಮಾನ!‌ಜಯನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಯಾವುದೇ ಪಕ್ಷ ಅಥವಾ ಅಭ್ಯರ್ಥಿಗಳು ಮತದಾರರಿಗೆ ಓಟಿಗಾಗಿ ಹಣ-ಹೆಂಡ-ಸೀರೆ-ಕುಕ್ಕರ್-ಟೋಕನ್ ಆಮಿಷ ಒಡ್ಡುತ್ತಿರುವ ಅಥವ ಹಂಚುತ್ತಿರುವ ವಿಶ್ವಾಸನೀಯ ಸ್ಟಿಂಗ್ ವಿಡಿಯೋವನ್ನು ನಮಗೆ ತಲುಪಿಸಿದಲ್ಲಿ ಅಂತಹ ದೇಶಪ್ರೇಮಿಗಳಿಗೆ 50 ಸಾವಿರ ರೂಪಾಯಿ ಬಹುಮಾನ ನೀಡಲಾಗುವುದು.‌ ಸ್ಟಿಂಗ್ ಮಾಡಿದ ವಿಡಿಯೋ ಸಿಕ್ಕ ತಕ್ಷಣ ಸಂಪರ್ಕಿಸಿ : 9449559451/ 7975625575,” ಎಂಬ ಸಂದೇಶವನ್ನು ಅವರು ಹರಿಯಬಿಟ್ಟಿದ್ದಾರೆ.

ಒಂದು ಕಡೆ ರಾಜ್ಯದಲ್ಲಿ ಪ್ರಮುಖ ರಾಜಕೀಯ ಪಕ್ಷಗಳು ಹಣಾಹಣಿಗೆ ಇಳಿದಿವೆ. ವಿಚಾರವಂತರು ಎಂದು ಹೇಳಿಕೊಳ್ಳುವ ವರ್ಗ, ಬಿಜೆಪಿ ಗೆಲ್ಲಬಾರದು ಎಂದು ಪ್ರಚಾರಕ್ಕೆ ಸೀಮಿತರಾಗಿದ್ದಾರೆ. ಪ್ರತ್ಯಕ್ಷವಾಗಿಯೇ ಕಾಂಗ್ರೆಸ್‌ ಪಕ್ಷದ ಪರವಾಗಿ ನಿಂತಿದ್ದಾರೆ. ಆದರೆ ಇವರನ್ನು ಮೀರಿದ ಪ್ರಜ್ಞಾವಂತ ವರ್ಗವೊಂದು ಚುನಾವಣೆಯ ಸೋಲು ಗೆಲುವುಗಳ ಆಚೆಗೆ, ಪಾರದರ್ಶಕ ಮತದಾನ ನಡೆಯಬೇಕು ಎಂಬ ಪ್ರಯತ್ನದಲ್ಲಿ ತೊಡಗಿವೆ.

ಪ್ರಜಾಪ್ರಭುತ್ವದ ಜಾತ್ರೆ ಎಂದು ಕರೆಸಿಕೊಳ್ಳುವ ಚುನಾವಣೆಗಳು ಹೇಗೆ ನಡೆಯುತ್ತವೆ ಎಂಬುದು ಗುಟ್ಟಿನ ವಿಚಾರ ಏನಲ್ಲ. ಪ್ರತಿ ಚುನಾವಣೆಯೂ ಹಣ, ಹೆಂಡ, ಆಮಿಷಗಳ ನೆರಳಿನಲ್ಲಿಯೇ ನಡೆಯುತ್ತವೆ. ಜನಪ್ರತಿನಿಧಿಗಳ ಗೆಲುವನ್ನು ಇವೇ ಅಂಶಗಳು ತೀರ್ಮಾನ ಮಾಡುತ್ತವೆ. ಇದಕ್ಕೆ ತಡೆಯೊಡ್ಡುವ ಪ್ರಯತ್ನಗಳು ಸಣ್ಣ ಮಟ್ಟದಲ್ಲಿ ನಡೆಯುತ್ತವಾದರೂ, ಕೊನೆಯಲ್ಲಿ ಮತದಾರರು ಭ್ರಷ್ಟರ ಬಸ್‌ ವ್ಯವಸ್ಥೆಗೆ ಮಣಿಯುತ್ತಾರೆ. ಇದಕ್ಕೆ ಈ ಬಾರಿಯ ಚುನಾವಣೆಯೂ ಹೊರತಾಗಿರುವುದಿಲ್ಲ ಎಂಬುದಕ್ಕೆ ಒಂದಷ್ಟು ಸಾಕ್ಷಿಗಳು ಈಗ ಸಿಕ್ಕಿವೆ, ಅಷ್ಟೆ.