Home Special Series ಅಡಾಲ್ಫ್ ಹಿಟ್ಲರ್- 4: ಹೆಣಗಳ ಮಟ್ಟಿಲ ಮೇಲೆ ಸರ್ವಾಧಿಕಾರಿಯ ಏಳಿಗೆ

ಅಡಾಲ್ಫ್ ಹಿಟ್ಲರ್- 4: ಹೆಣಗಳ ಮಟ್ಟಿಲ ಮೇಲೆ ಸರ್ವಾಧಿಕಾರಿಯ ಏಳಿಗೆ

SHARE

ಅದು 1923ರ ನವೆಂಬರ್ ತಿಂಗಳು, ಹಿಟ್ಲರ್‌ನ ಹೆಸರು ಇಡೀ ಜರ್ಮನಿಯಲ್ಲಿ ಪ್ರತಿಧ್ವನಿಸಿತು. ಹಿಟ್ಲರ್ ಅಸ್ತಿತ್ವದಲ್ಲಿದ್ದ ಸರಕಾರವನ್ನು ಕಿತ್ತೊಗೆದು ಕ್ರಾಂತಿ ಘೋಷಿಸಿ ಹೊಸಾ ಸರಕಾರದ ರಚನೆಗೆ ಮುಂದಾಗಿದ್ದ. ಆದರೆ ಅದೃಷ್ಟ ಕೈಕೊಟ್ಟಿತ್ತು.

ಸೆರೆಮನೆ ಸೇರಿದ ಹಿಟ್ಲರ್ ಅಲ್ಲಿ ತನ್ನ ಅನುಯಾಯಿಯೊಬ್ಬನ ಕೈಯಲ್ಲಿ ಆತ್ಮ ಚರಿತ್ರೆ ‘ಮೈನ್ ಕೆಂಪ್’ ಬರೆಸಿದ. ಕೆಲವೇ ವರ್ಷಗಳಲ್ಲಿ ಲಕ್ಷಾಂತರ ಕೃತಿಗಳು ಮಾರಾಟಗೊಂಡವು. ಹೊರಬಂದ ಹಿಟ್ಲರ್ ನಾಝಿ ಪಕ್ಷವನ್ನು ಪುನರ್‌ರಚಿಸಿದ. ಅಲ್ಲಿಂದ ಹಿಟ್ಲರ್ ಬದುಕು ಮತ್ತೊಂದು ಹೊಸ ತಿರುವನ್ನು ಪಡೆದಿತ್ತು.

‘ಮೈನ್ ಕ್ಯಾಂಫ್’ ಹಿಟ್ಲರ್‌ನ ಆಲೋಚನೆಗಳನ್ನು ಜರ್ಮನ್ ಜಗತ್ತಿನ ಮುಂದೆ ತೆರೆದಿಟ್ಟಿತ್ತು. ಸಮಾಜವಾದಿಯಂತೆ ಕಂಡ ಹಿಟ್ಲರ್, ತನ್ನ ಕೃತಿಯಲ್ಲಿ ಯಹೂದ್ಯರನ್ನು ಹೀನಾಯವಾಗಿ ಚಿತ್ರಿಸಿದ್ದ. ಯಹೂದ್ಯರಲ್ಲದವರು ಅವನ ಜತೆ ಬರುವಂತೆ ಪುಸ್ತಕದ ಸಾಲುಗಳು ಪ್ರೇರೇಪಿಸಿದವು.

ಅದಾಗಲೇ ಮಾತಿನಲ್ಲಿ ಚಾಣಾಕ್ಷನಾಗಿದ್ದ ಹಿಟ್ಲರ್‌ ಅಧಿಕಾರಕ್ಕೇರುವಲ್ಲಿ ಮಾತುಗಳನ್ನೇ ಮೊದಲ ಅಸ್ತ್ರವನ್ನಾಗಿ ಬಳಸಿದ. ಅವನ ಸಾರ್ವಜನಿಕ ಭಾಷಣಗಳಲ್ಲಿ ಯಹೂದಿಗಳು ಮತ್ತ ಕಮ್ಯುನಿಸ್ಟರು ನಿರಂತರವಾಗಿ ತುಳಿಯಲ್ಪಟ್ಟರು. ಪರಿಣಾಮವಾಗಿ ನಾಝಿ ಪಕ್ಷ ಜನರ ಮನಸಿನಲ್ಲಿ ಮನೆ ಮಾಡತೊಡಗಿತು.

ಆರ್ಥಿಕ ಮುಗ್ಗಟ್ಟಿನ ಸಂದರ್ಭದಿಂದ ನಷ್ಟಕ್ಕೊಳಪಟ್ಟ ಜರ್ಮನಿಯ ಉದ್ಯಮಿ ಮತ್ತು ಶ್ರೀಮಂತ ವರ್ಗಗಳು ಹಿಟ್ಲರ್‌ನ ಬೆನ್ನಿಗೆ ನಿಂತವು. ಎರಾರ್ಡ್ ಮಿಲ್ಚ್ ಎಂಬ ಶ್ರೀಮಂತನೊಬ್ಬ ಪಕ್ಷದ ಪ್ರಚಾರ ಕಾರ್ಯಕ್ಕಾಗಿ ವಿಮಾನವೊಂದನ್ನು ನೀಡಿದ. ಹಿಟ್ಲರ್‌ ಜರ್ಮನಿಯ ಬೇರೆ ಬೇರೆ ಭಾಗಗಳನ್ನು ಕೆಲವೇ ಗಂಟೆಗಳಲ್ಲಿ ತಲುಪುವಂತಾಯಿತು.

ಇಷ್ಟೆಲ್ಲಾ ಪ್ರಯತ್ನದ ನಡುವೆಯೂ ಸಹ ಹಿಟ್ಲರ್‌ ಸಂಪೂರ್ಣವಾಗಿ ಜನರ ಮನಸ್ಸನ್ನು ಗೆಲ್ಲಲು ಸಾಧ್ಯವಾಗಿರಲಿಲ್ಲ. ಜರ್ಮನಿಯಲ್ಲಿ 1928ರಲ್ಲಿ ನಡೆದ ಚುನಾವಣೆಯಲ್ಲಿ ಹಿಟ್ಲರ್‌ ಗಳಿಸಲು ಶಕ್ತನಾಗಿದ್ದು ಕೇವಲ ಶೇ. 2.6% ಓಟುಗಳನ್ನು ಮಾತ್ರ. ಈ ಫಲಿತಾಂಶ ಹಿಟ್ಲರ್‌ನನ್ನು ನಿರಂತರವಾಗಿ ಜನರ ಮಧ್ಯೆ ನಿಲ್ಲುವಂತೆ ಮಾಡಿತು.

ತನ್ನ ಯೋಚನೆಗಳನ್ನು ಜನರ ಮುಂದಿಡುವ ಸಲುವಾಗಿ ಹಿಟ್ಲರ್ ಮತ್ತೊಂದು ಪುಸ್ತಕವನ್ನು ಬರೆದ. ಆದರೆ ಅದು ಪ್ರಕಟವಾಗಿದ್ದು ಹಿಟ್ಲರ್‌ನ ಮರಣದ ನಂತರ. ಅದೇ ವೇಳೆಗೆ ಹಿಟ್ಲರ್‌ನ ಅನುಯಾಯಿಗಳು ಬೀದಿಗಳಲ್ಲಿ ಮೆರವಣಿಗೆಯನ್ನು ಆರಂಭಿಸಿ ಕಮ್ಯುನಿಸ್ಟ್ ಪ್ರಾಬಲ್ಯವಿದ್ದೆಡೆಯೆಲ್ಲಾ ಹಿಂಸಾತ್ಮಕ ಜಗಳಕ್ಕೆ ನಿಂತರು.

ಇದೆಲ್ಲದರ ಪರಿಣಾಮವಾಗಿ ಪಕ್ಷ ಬೆಳೆದು 1929ರ ಅಧ್ಯಕ್ಷೀಯ ಚುನಾವಣೆಯಲ್ಲಿ ನಾಝೀ ಪಕ್ಷದಿಂದ ಚುನಾವಣೆಗೆ ನಿಂತಿದ್ದ ಎರಿಚ್‌ಗೆ 2.8 ಲಕ್ಷ ಮತಗಳು ದೊರೆತಿದ್ದವು. ಜರ್ಮನಿಯ ಇತಿಹಾಸದಲ್ಲಿ ಅಷ್ಟು ಮತ ಪಡೆದ ಮೊದಲ ವ್ಯಕ್ತಿಯಾಗಿ ಎರಿಚ್ ಕಾಣಿಸಿಕೊಂಡ. ನಾಝಿ ಪಕ್ಷ ಪ್ರಾಬಲ್ಯವನ್ನು ಗಳಿಸಿಕೊಳ್ಳುತ್ತಿದ್ದ ಬೆನ್ನಲ್ಲೇ ಹಿಂಸಾಪರ್ವವೂ ಆರಂಭವಾಗಿತ್ತು. ಬೀದಿ ಬೀದಿಗಳಲ್ಲಿ ಹಿಟ್ಲರ್ ಹಿಂಬಾಲಕರದ್ದೇ ಅಟ್ಟಹಾಸ.

ಆಧಿಕಾರದಾಸೆಯಲ್ಲಿ ರಾಷ್ಟ್ರೀಯವಾದಿಗಳು ಹಿಟ್ಲರ್‌ನನ್ನು ವಿರೋಧಿಸಿದವರನ್ನು ಬಹಿರಂಗವಾಗಿಯೇ ಕೊಲ್ಲಲಾರಂಭಿಸಿದರು. ಮದ್ದು ಗುಂಡುಗಳು ಸದ್ದು ಮಾಡತೊಡಗಿದವು. 1930ರಲ್ಲಿ ನಾಝಿ ಪಕ್ಷಕ್ಕಾಗಿಯೇ ಹಾಡೊಂದು ರಚನೆಯಾಯಿತು. ಇದರ ಬೆನ್ನಹಿಂದೆಯೇ ಬೆಂಬಲಿಗರು ಮಹಿಳೆಯೋರ್ವಳ ಕೊಲೆ ನಡೆಸಿದ್ದರು. ಸತ್ತ ಮಹಿಳೆ ಕಮ್ಯುನಿಸ್ಟ್ ಎಂದು ಬಿಂಬಿಸಿ, ಅವಳ ಸಾವನ್ನು ಹಾಡಿನ ಪ್ರಚಾರಕ್ಕಾಗಿ ಬಳಸಿಕೊಳ್ಳಲಾಯಿತು.

ಒಂದೇ ವರ್ಷದಲ್ಲಿ ಹಿಟ್ಲರ್‌ ಪ್ರಭಾವ ಹತ್ತಾರು ಪಟ್ಟು ಹೆಚ್ಚಳವಾಗಿತ್ತು. ಈ ಸಾಧನೆಗಾಗಿ ಎಸ್‌ಎ ಎಂದು ಕರೆಯಲ್ಪಡುತ್ತಿದ್ದ ಹಿಂಸೆಯನ್ನೇ ಪ್ರಚಾರದ ಮಾಧ್ಯಮವಾಗಿಸಿಕೊಂಡಿದ್ದ ಹಿಟ್ಲರ್‌ ಹಿಂಬಾಲಕರ ಗುಂಪು ಸಾಕಷ್ಟು ಜನರ ರಕ್ತ ಹರಿಸಿ, ಹೆಣಗಳನ್ನು ಸಾಧನೆಯ ಮೆಟ್ಟಿಲಾಗಿಸಿತ್ತು. ಈ ಗೆಲುವಿಗಾಗಿ ಹಣದ ಹೊಳೆಯೇ ಹರಿದಿತ್ತು. ಮಿಲಿಯನ್‌ಗಟ್ಟಲೆ ಕರಪತ್ರಗಳು ಹಂಚಲ್ಪಟ್ಟಿದ್ದವು. ದೇಶದಲ್ಲಿ ತಲೆದೋರಿದ್ದ ಅರ್ಥಿಕ ಮುಗ್ಗಟ್ಟು ಸಹ ಹಿಟ್ಲರ್‌ನ ಪರವಾಗಿ ಕೆಲಸ ನಿರ್ವಹಿಸಿತ್ತು. ಹಿಟ್ಲರ್‌ನ ಗೆಲುವಿನ ಆಚರಣೆಯಲ್ಲಿ ಪಟಾಕಿಗಳ ಬದಲು ಯಹೂದಿ ಒಡೆತನದಲ್ಲಿದ್ದ ಹಲವಾರು ಅಂಗಡಿ ಮುಂಗಟ್ಟುಗಳು ಧ್ವಂಸವಾಗಿದ್ದವು.

ಎಸ್‌ಎ ಹೆಸರಿನ ಹಿಟ್ಲರ್‌ ಹಿಂಬಾಲಕರ ಗುಂಪು.

ಹಿಟ್ಲರ್‌ ಮುನ್ನೆಲೆಗೆ ಬರುತ್ತಿದ್ದನಾದರೂ ಕಮ್ಯುನಿಸ್ಟರ ಪ್ರಭಾವವೇನು ತಗ್ಗಿರಲಿಲ್ಲ. ಶೇ. 40ರಷ್ಟು ಓಟುಗಳನ್ನು ನಾಝಿ ಮತ್ತು ಕಮ್ಯುನಿಸ್ಟ್ ಇಬ್ಬರೂ ಸೇರಿ ಪಡೆದಿದ್ದರು. ಆಧಿಕಾರದಲ್ಲಿದ ವೀಮರ್ ಪಾರ್ಟಿಗೆ ನಾಝಿಗಳ ಬೆಳವಣಿಗೆಯನ್ನು ತಗ್ಗಿಸಲು ಸಾಧ್ಯವೇ ಆಗಲಿಲ್ಲ. ಈ ಪಕ್ಷದ ಅಸಮರ್ಥತೆ ನಾಝೀ ಬೆಳವಣಿಗೆಗೆ ಪೂರಕ ಅಂಶವಾಗಿಯೇ ನಿಂತಿತು. ಅಸ್ತಿತ್ವದಲ್ಲಿದ್ದ ಹಲವಾರು ಪಕ್ಷಗಳೂ ಕೂಡ ಇದ್ದೂ ಇಲ್ಲದಂತಿದ್ದವು. ಕಮ್ಯುನಿಸ್ಟ್‌ ಪಕ್ಷದ ಕಾರ್ಯಕರ್ತರು ಬೀದಿಯಲ್ಲಿ ಎಸ್‌ಎ ಜೊತೆ ಕಾದಾಡುವುದರಲ್ಲೇ ಕಾಲ ನೂಕುತ್ತಿದ್ದರು.

ಸೆಂಟರ್‌ ಪಾರ್ಟಿಯ ಹೆನ್ರಿಕ್ ಬ್ರೂನಿಂಗ್ 1930ರಿಂದ 1932ರವರೆಗೂ ಕೌನ್ಸಿಲರ್‌ ಆಗಿದ್ದ. ಹಿಟ್ಲರ್‌ ಮತ್ತು ಬ್ರೂನಿಂಗ್ ಇಬ್ಬರೂ ಸೇರಿ ಅಧಿಕಾರ ನಡೆಸುವಂತೆ ಒಪ್ಪಂದವಾಗಿದ್ದರೂ ಸಹ ಬ್ರೂನಿಂಗ್ ಎಲ್ಲಾ ಅಧಿಕಾರವನ್ನು ತನ್ನ ಕೈಯಲ್ಲಿಯೇ ಹಿಡಿದಿದ್ದ. ನಾಝಿ ವಿರೋಧಿಯಾಗಿದ್ದ ಜರ್ಮನಿ ಅಧ್ಯಕ್ಷ ಹಿಂಡರ್‌ಬರ್ಗ್‌ ಬೆಂಬಲವೂ ಬ್ರೂನಿಂಗ್ ಪರವಾಗಿತ್ತು.

ಸೈನ್ಯಧಿಕಾರಿಗಳ ಬೆಂಬಲವನ್ನು ಗಳಿಸಿದ ಹಿಟ್ಲರ್‌ ಚಾನ್ಸೆಲರ್‌ ಆಗುವ ಪ್ರಯತ್ನ ಮಾಡುತ್ತಾನಾದರೂ ಗೆಲ್ಲಲಾಗುವುದಿಲ್ಲ. ವೈಸ್‌ ಚಾನ್ಸಲರ್‌ ಹುದ್ದೆ ನೀಡುವುದಾಗಿ ಅಂದಿನ ಜರ್ಮನ್ ಅಧ್ಯಕ್ಷ ಹಿಂಡರ್‌ಬರ್ಗ್‌ ತಿಳಿಸುತ್ತಾರಾದರೂ ಚಾನ್ಸಲರ್‌ಗಿಂಗಲೂ ಕಡಿಮೆ ಅಧಿಕಾರದ ಹುದ್ದೆ ಬೇಕಿಲ್ಲವೆಂದು ಹಿಟ್ಲರ್‌ ತಿರಸ್ಕರಿಸುತ್ತಾನೆ. ನಂತರ ಪೇಪನ್‌ ಮತ್ತು ಸೀಚ್ಲೆನ್‌ ಎಂಬ ವ್ಯಕ್ತಿಗಳು ಚಾನ್ಸಲರ್‌ ಪಟ್ಟ ಪಡೆಯುತ್ತಾರಾದರೂ ಹೆಚ್ಚು ಕಾಲ ಅಧಿಕಾರದಲ್ಲಿ ಉಳಿಯಲಾಗುವುದಿಲ್ಲ. 1933ರಲ್ಲಿ ಮತ್ತೆ ಚುನಾವಣೆಯ ಘೋಷಣೆಯಾಗುತ್ತದೆ.

ಅದಾಗಲೇ ಸುಮಾರಷ್ಟು ಜರ್ಮನ್ನರು ಹಿಟ್ಲರ್‌ನ ಬೆನ್ನಿಗಿದ್ಗರು. ಮೊದಲು 12 ಸೀಟುಗಳನ್ನು ಗೆದ್ದಿದ್ದ ನಾಝಿ ಪಕ್ಷ ಕೆಲವೇ ದಿನಗಳಲ್ಲಿ 230 ಸೀಟುಗಳನ್ನು ತನ್ನದಾಗಿಸಿಕೊಂಡಿತ್ತು. ಆದರೂ ಸ್ಪಷ್ಟ ಬಹುಮತ ದೊರೆಯದ ಕಾರಣ ಮತ್ತೊಂದು ಪಕ್ಷದೊಟ್ಟಿಗೆ ಸಮ್ಮಿಶ್ರ ಸರಕಾರವನ್ನು ರಚಿಸಬೇಕಾಯಿತು. ಹಿಟ್ಲರ್ ಚಾನ್ಸೆಲರ್‌ ಆಗಿ ನೇಮಕಗೊಂಡನಾದರೂ ಸಹ ಅಧಿಕಾರವಿಲ್ಲದಂತಾಗಿದ್ದ. ಚಾನ್ಸೆಲರ್‌ ಆಗಿ ತನ್ನ ಮೊದಲ ಭಾಷಣವನ್ನು ಮಾಡಿದ್ದು 1933ರ ಫೆಬ್ರವರಿ 10ರಂದು.

ಹಿಟ್ಲರ್‌ ಚಾನ್ಸಲರ್‌ ಆಗಿ ನೇಮಕಗೊಂಡ ಅವಧಿಯಲ್ಲಿ.

ಚಾನ್ಸೆಲರ್‌ ಅದ ಹಿಟ್ಲರ್ ಮೊದಲು ಮಾಡಿದ್ದೆಂದರೆ ವಿರೋಧಿಗಳ ದಮನ. ಯಾವ ಪಕ್ಷಕ್ಕೂ ಬಹುಮತ ದೊರೆಯದ ಕಾರಣ ಮತ್ತೆ ಹಿಟ್ಲರ್‌ ಚುನಾವಣೆಗಾಗಿ ದುಂಬಾಲು ಬಿದ್ದ. ಮಾರ್ಚ್ ತಿಂಗಳಿನಲ್ಲಿ ಚುನಾವಣೆ ನಿಗಧಿಯಾಯಿತು.ಅದೇ ಸಮಯಕ್ಕೆ ರೀಚ್‌ಸ್ಟ್ಯಾಗ್ ಎಂಬ ಸರಕಾರಿ ಕಟ್ಟಡಕ್ಕೆ ಬೆಂಕಿ ಬಿದ್ದು, ಅದರ ಹೊಣೆಗಾರಿಕೆಯನ್ನು ಕಮ್ಯುನಿಸ್ಟರ ಮೇಲೆ ಹೊರಿಸಲಾಯಿತು.

ನಾಝಿಗಳ ಕೈ ನೂರಾರು ಜನ ಕಮ್ಯುನಿಸ್ಟರ ರಕ್ತದಲ್ಲಿ ತೊಯ್ದವು. ದೊಡ್ಡ ಮಟ್ಟದ ಪ್ರಚಾರ ನಡೆಯಿತಾದರೂ ಹಿಟ್ಲರ್‌ ಬಹುಮತ ಸಾಧಿಸಲಿಲ್ಲ.ಅದರೆ ಮುಂದೆ ಅಚಾನಕ್ಕಾಗಿ ನಡೆದ ಹಲವು ಕಾಯ್ದೆಗಳ ಬದಲಾವಣೆಯು ಹಿಟ್ಲರ್‌ಗೆ ಸರ್ವಾಧಿಕಾರವನ್ನು ಒದಗಿಸಿಕೊಟ್ಟವು. ಅಲ್ಲಿಗೆ ಹಿಟ್ಲರ್‌ನ ಸಮಾಜವಾದಿ ಮುಖವಾಡ ಕಳಚಿ, ಕ್ರೂರ ಸರ್ವಾಧಿಕಾರಿ ಹೊರ ಬಂದಿದ್ದ.

ಜರ್ಮನಿಯ ಬೀದಿಗಳಲ್ಲೆಲ್ಲಾ ರಕ್ತ. ಕೊಲೆಯಾದ ವಿರೋಧಿಗಳಿಗೆ ಲೆಕ್ಕವೇ ಇಲ್ಲ. ಮಾಜಿ ಚಾನ್ಸಲರ್‌ ಶ್ಲೀಚೆರ್‌ನ ಹತ್ಯೆಯಾಯಿತು. ಮಂತ್ರಿಮಂಡಲವೇ ಕೊನೆಗೊಂಡು ಚುನಾವಣೆಗಳು ನಿಂತವು. ಹಿಟ್ಲರ್‌ ಲೀಡರ್ ಮತ್ತು ಚಾನ್ಸೆಲರ್‌ ಎರಡೂ ಆದ. ಸಶಸ್ತ್ರಪಡೆಗಳ ಸಂಪೂರ್ಣ ಪರಮಾಧಿಕಾರ ಅವನದ್ದೇ ಆಯಿತು. ಮುಂದೆ ಬಂದ ಕಾನೂನುಗಳು ಹಿಟ್ಲರ್‌ನನ್ನು ಮುಟ್ಟದಾದವು.

ತನ್ನ ಕ್ರೌರ್ಯದ ನಡುವೆಯೂ ಹಿಟ್ಲರ್‌ ಜರ್ಮನಿಯ ರೂಪುರೇಶೆಯನ್ನೇ ಬದಲಾಯಿಸಿದ. ಮಹಿಳೆಯರು ಮನೆಯಿಂದ ಹೊರಬಾರದಂತಾಯಿತು. ನಾಲ್ಕು ಮಕ್ಕಳನ್ನು ಹೆತ್ತರೆ ‘ಜರ್ಮನಿ ತಾಯಿ’ ಎಂದು ಬಿರುದು ನೀಡುವ ಪರಿಪಾಠ ಆರಂಭವಾಯಿತು. ಹೆಂಗಸೆರಲ್ಲಾ ಕೆಲಸ ಬಿಟ್ಟಿದ್ದರಿಂದ ಗಂಡಸರಿಗೆ ಕೆಲಸ ದೊರೆತು, ಅದನ್ನು ಹಿಟ್ಲರ್‌ ನಿರುದ್ಯೋಗದ ನಿರ್ಮೂಲನೆ ಎಂದ.

ಮೂಲಸೌಕರ್ಯದ ವಿಷಯದಲ್ಲಿ ಜರ್ಮನಿ ಎಂದೂ ಕಂಡರಿಯದ ಬೆಳವಣಿಗೆ ಕಂಡಿತು. ಎಲ್ಲಾ ಕಡೆ ಅಣೆಕಟ್ಟುಗಳು, ಕಾರ್ಖಾನೆಗಳು,ರೈಲು ಮಾರ್ಗಗಳು ನಿರ್ಮಾಣಗೊಂಡವು. ಲೋಕೋಪಯೋಗಿ ಕಾಮುಗಾರಿಗಳ ಪರ್ವ ಆರಂಭವಾಯಿತು. ‘ಆಧುನಿಕತೆ’ಯ ಸುತ್ತ ಹಿಟ್ಲರ್‌ನ ಅಭಿವೃದ್ಧಿಯ ಯೋಜನೆಗಳು ರೂಪುಗೊಂಡವು. ಸಾಮಾಜಿಕ ಅಭಿವೃದ್ಧಿಯ ಜೊತೆಗೆ ಸಶಸ್ತ್ರ ಸೇನೆಯ ಅಭಿವೃದ್ಧಿಯೂ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿತ್ತು.

ಮಾರಣಹೋಮದ ಕೆಲವು ಹೆಣಗಳು.

ಹಿಟ್ಲರ್‌ನ ಎಲ್ಲಾ ಸಾಧನೆಗಳನ್ನು ಹೀಗೆಳೆಯುವಂತೆ ಮಾಡಿದ್ದು ‘ಹೊಲೋಕಾಸ್ಟ್’- ಅಂದರೆ ಸರ್ವನಾಶ. ಇದರ ಮುಖ್ಯ ರುವಾರಿ ಹಿಟ್ಲರ್‌ನ ಜೊತೆಗೆ ಅವನ ಮಿತ್ರರಾಷ್ಟ್ರಗಳ ಪಾಲೂ ಸಹ ಇತ್ತು. 1940-45ರ ಅವಧಿಯಲ್ಲಿ ಯುರೋಪಿನಲ್ಲಿದ್ದ ಸುಮಾರು 60 ಲಕ್ಷದಷ್ಟು ಯಹೂದಿಗಳ ಮಾರಣ ಹೋಮ ನಡೆದಿತ್ತು. ಲಕ್ಷಗಳಟ್ಟಲೆ ರಾಶಿ ರಾಶಿ ಹೆಣಗಳಲ್ಲಿ ಸುಮಾರು 15 ಲಕ್ಷ ಹೆಣಗಳು ಚಿಕ್ಕ ಮಕ್ಕಳದ್ದು. ಇಷ್ಟಕ್ಕೆ ನಿಲ್ಲದೇ ಮತ್ತೆ ಹೆಣವಾದ ವಿದೇಶಿಗರು, ಖೈದಿಗಳು, ಸಲಿಂಗ ಕಾಮಿಗಳು, ಕಪ್ಪು ಜನಾಂಗದವರು ಇತ್ಯಾದಿ ಕೋಟಿಗಟ್ಟಲೆ ಜನರ ನೆತ್ತರಿನಲ್ಲಿ ಯುರೋಪ್ ತೊಯ್ಯುತ್ತದೆ.

ಇಷ್ಟೆಲ್ಲಾ ಕೊಲೆಗಳ ಜೊತೆಗೆಯೇ ರಕ್ತದಾಹ ತಣಿಯದ, ಕ್ರೌರ್ಯದ ಪ್ರತಿರೂಪದಂತಿದ್ದ ಹಿಟ್ಲರ್‌, ಕೈಹಾಕಿದ್ದು 2ನೇ ಮಹಾಯುದ್ಧವೆಂಬ ಕರ್ಮಕಾಂಡಕ್ಕೆ. ಇಲ್ಲೂ ಸಹ ಕೋಟಿ ಕೋಟಿ ಹೆಣಗಳು. ರಣಭೂಮಿಯಲ್ಲಿ ಲೆಕ್ಕವಿಲ್ಲದಷ್ಟು ಜನರ ರಕ್ತ ನೆಲದುದ್ದಕ್ಕೂ ಹರಿದು ಸೂರ್ಯನ ಬಿಸಿಲಿಗೆ ಆವಿಯಾದರೆ, ಯುದ್ಧದಿಂದ ಅನ್ನ ಕಳೆದುಕೊಂಡು ಹಸಿವಿನಿಂದ ಸತ್ತ ಅಸಂಖ್ಯಾತ ಜನರ ರಕ್ತ ಬದುಕಿದ್ದಾಗಲೇ ಇಂಗಿಹೋಗಿತ್ತು. 2ನೇ ಮಹಾಯುದ್ಧ ನಡೆಸಿದ ಹಿಟ್ಲರ್‌ ಮಾನವ ಜನಾಂಗಕ್ಕೆ ಮುಳ್ಳಾಗಿ ಪರಿಣಮಿಸಿದ.

(ನಾಳೆಗೆ)

Also Read: ಅಡಾಲ್ಫ್ ಹಿಟ್ಲರ್- 1: ಬಾಲಕನೊಳಗೆ ಹುಟ್ಟಿದ ಪ್ರಶ್ನೆಗಳು; ಬೆಚ್ಚಗೆ ಮಲಗಿದ್ದ ರಾಷ್ಟ್ರೀಯತೆಯ ಬೀಜ