Home Special Series ಅಡಾಲ್ಫ್ ಹಿಟ್ಲರ್- 3: ಸಮಾಜವಾದಿ ಮುಖವಾಡದ ಹಿಂದಿದ್ದ ಸರ್ವಾಧಿಕಾರಿ

ಅಡಾಲ್ಫ್ ಹಿಟ್ಲರ್- 3: ಸಮಾಜವಾದಿ ಮುಖವಾಡದ ಹಿಂದಿದ್ದ ಸರ್ವಾಧಿಕಾರಿ

SHARE

ಜಗತ್ತಿನ ಕಡುಕ್ರೂರಿ ಹಿಟ್ಲರ್‌ನ ರಾಜಕೀಯ ಪ್ರವೇಶಕ್ಕೆ ನಾಂದಿ ಹಾಡಿದ್ದು ವರ್ಸೈಲ್ಸ್ ಒಪ್ಪಂದ. ಜರ್ಮನಿಯನ್ನು ಹಲ್ಲಿಲ್ಲದ ಹಾವನ್ನಾಗಿ ಮಾಡಿದ ಈ ಒಪ್ಪಂದ, ಹಿಟ್ಲರ್‌ನಲ್ಲಿನ ರಾಷ್ಟ್ರೀಯತೆಯನ್ನು ಅತೀವ್ರವಾಗಿ ಕೆರಳಿಸಿತು. ಮೊದಲ ಮಹಾಯುದ್ಧದಲ್ಲಿ ಸಾಮಾನ್ಯ ಸೈನಿಕನಾಗಿದ್ದ ಹಿಟ್ಲರ್‌ನನ್ನು ಎರಡನೇ ಮಹಾಯುದ್ಧಕ್ಕೆ ಭಾಷ್ಯ ಬರೆಯುವಂತೆ ಮಾಡಿತು.

ಅದಾಗ ತಾನೇ ಮೊದಲನೇ ಮಾಹಾಯುದ್ಧ ಮುಕ್ತಾಯಗೊಂಡಿತ್ತು. ಎಲ್ಲರಿಂದಲೂ ಗುದ್ದಿಸಿಕೊಂಡ ಜರ್ಮನಿ, ಇನ್ನು ಮೇಲೇಳಲು ಸಾಧ್ಯವೇ ಇಲ್ಲ ಎಂಬಂತೆ ನೆಲಕ್ಕೆ ಬಿದ್ದಿತ್ತು. ತನ್ನ ತಾಯಿ ನೆಲದ ಈ ಧಾರುಣಾವಸ್ಥೆಯನ್ನು ಸಹಿಸಿದ ಹಿಟ್ಲರ್ ಕ್ರೋಧದಲ್ಲಿ ಬೆಂದು ಹೋಗಿದ್ದ. ದೇಶದ ಇತಿಹಾಸವನ್ನು ಬದಲಾಯಿಸುವ ಪಣ ತೊಟ್ಟಿದ್ದ. ಅದಕ್ಕಾಗಿ ಆತನಿಗೆ ರಾಷ್ಟ್ರದ ರಾಜಕಾರಣದ ಮೇಲೆ ಪ್ರಭಾವ ಬೀರಬೇಕಾದ ಅಗತ್ಯವಿತ್ತು.

ಜಾಗತಿಕ ಸಮರ ಸಮಾಪ್ತಿಯಾಗಿ, ಹಿಟ್ಲರ್‌ ಮತ್ತೆ ತನ್ನ ಯುವತ್ವವನ್ನು ರೂಪಿಸಿದ ನಗರ ಮ್ಯೂನಿಚ್ ತಲುಪುವ ವೇಳೆಗೆ 1918ರ ನವೆಂಬರ್ ಮುಗಿಯುತ್ತಿತ್ತು. ಅದಾಗ ಹಿಟ್ಲರ್ 29ರ ಯುವಕ. ಅಲ್ಲಿನ ಮೀಸಲು ಪಡೆ ಕಛೇರಿಯಲ್ಲಿದ ಹಿಟ್ಲರ್‌ಗೆ ಇಲ್ಲಿಯೇ ಮುಂದುವರೆಯುವುದು ಅಸಹ್ಯ ಎನಿಸತೊಡಗಿತ್ತು.

ಜರ್ಮನಿಯಲ್ಲಿ ರಾಜಕೀಯ ಅಸ್ಥಿರತೆ ತಲೆದೋರಿ, 1919ರ ಫೆಬ್ರವರಿಯಲ್ಲಿ ಜರ್ಮನಿಯ ಸಮಾಜವಾದಿ ರಾಜಕಾರಣಿ ಹಾಗೂ ಪತ್ರಕರ್ತನಾಗಿದ್ದ ಕರ್ಟ್‌ ಈಸ್ನರ್‌ ಸಾವಿನ ನಂತರ ರಾಜಕೀಯದಲ್ಲಿ ಸರ್ವಾಧಿಕಾರ ಕಾಣಿಸಿಕೊಂಡಿತ್ತು. ಕ್ರಾಂತಿ ನಡೆಯಬಹುದಾದ ಸೂಚನೆಗಳಿದ್ದವು. ಸಂದರ್ಭಾನುಸಾರ, ಹಿಟ್ಲರ್‌ನ ತಲೆಯಲ್ಲಿ ದೇಶದಲ್ಲಿ ಹೊಸ ಬದಲಾವಣೆ ತರಲು ಬೇಕಾದ ಯೋಚನೆಗಳು ಜನ್ಮ ತಾಳುತ್ತಿದ್ದವು. ಆದರೆ ಅಧಿಕಾರವಿಲ್ಲದ, ಯಾವುದೇ ಪ್ರಾಮುಖ್ಯತೆಯನ್ನು ಹೊಂದಿರದ ಸಾಮಾನ್ಯ ಹಿಟ್ಲರ್‌ನ ಮಾತು ಯಾರು ಕೇಳಿಯಾರು? ಮಾತುಗಳಿಗೆ ಮಾನ್ಯತೆ ದೊರಕಿಸಿಕೊಳ್ಳಲು ಬೇಕಾದ ಚಿಂತನೆಗಳತ್ತ ಹಿಟ್ಲರ್ ಮನಸ್ಸು ಗಮನ ಹರಿಸಿತು.

ಅದೇ ವೇಳೆಗೆ ನಡೆದ ಅಧಿಕಾರಶಾಹಿ ಕೌನ್ಸಿಲ್‌ಗಳು ಜರ್ಮನಿಯಲ್ಲಿ ಕ್ರಾಂತಿ ನಡೆಸುವ ನಿಟ್ಟಿನಲ್ಲಿ ಮುಂದುವರೆಯುತ್ತಿದ್ದದ್ದು ಹಿಟ್ಲರ್‌ ದೃಷ್ಟಿಯಲ್ಲಿ ಜನತೆಗೆ ತೊಂದರೆ ನೀಡುತ್ತಿದ್ದಂತೆ ಕಾಣುತ್ತಿತ್ತು. ಯಹೂದ್ಯರೇ ಮುನ್ನಲೆಯಲ್ಲಿದ್ದ ಈ ಚಳುವಳಿಯಲ್ಲಿ ಯಾವುದೇ ಸಹಮತವನ್ನು ಹೊಂದಿರದಿದ್ದರೂ ಸಹ ಹಿಟ್ಲರ್ ತಾನೊಬ್ಬ ಕ್ರಾಂತಿಕಾರಿ ಎಂಬಂತೆ ವರ್ತಿಸಿ ಬಂಧಿತನಾದ. ಈ ಬೆಳವಣಿಗೆಯು ರಾಷ್ಟ್ರಿಯತಾವಾದಿ ಹಿಟ್ಲರ್‌ಗೆ ತನ್ನದೇ ರೀತಿಯ ರಾಷ್ಟ್ರೀಯತಾವಾದಿಗಳನ್ನು ಭೇಟಿಯಾಗುವ ಅವಕಾಶ ತಂದುಕೊಟ್ಟಿತು.

ನಾಝೀ ಪಕ್ಷ:

ಜರ್ಮನ್ನರಲ್ಲಿ ರಾಷ್ಟ್ರೀಯತೆಯನ್ನು ಹುಟ್ಟು ಹಾಕಲು ಬೇಕಾದ ಸಲಕರಣೆಗಳ ಕುರಿತಾಗಿ ಈ ಚಿಕ್ಕ ಗುಂಪು ಚರ್ಚಿಸುತ್ತಿತ್ತು. ಚರ್ಚೆಗಳ ಮಧ್ಯೆ ಬಂದ ಹೊಸ ಪಕ್ಷವೊಂದನ್ನು ಸ್ಥಾಪಿಸುವ ಯೋಚನೆ ಈ ಗುಂಪಿನ ಕಾರ್ಯ ಚಟುವಟಿಕೆಯನ್ನು ಹೆಚ್ಚಿನದಾಗಿ ಪ್ರಭಾವಿಸಿತು. ಆಗ ಜನ್ಮ ತಳೆದದ್ದು ‘ಜರ್ಮನ್ ವರ್ಕರ್ಸ್ ಪಾರ್ಟಿ’. ಇದು ನಾಝಿ ಪಕ್ಷದ ಮೊದಲ ಮುನ್ಸೂಚನೆ. ಅದಾಗಲೇ ಸಮರದಲ್ಲಿನ ಸೋಲು, ರಾಜಕೀಯ ಏರಿಳಿತ, ಬಡತನ, ನಿರುದ್ಯೋಗಗಳ ಮಧ್ಯೆ ಹೈರಾಣಾಗಿದ್ದ ಜರ್ಮನ್ ಪ್ರಜೆಗಳಿಗೆ ಈ ಪಕ್ಷ ಹೊಸದೊಂದು ಭರವಸೆಯನ್ನು ಮೂಡಿಸಿತು.

ಅದಾಗಲೇ ಅಧಿಕಾರದಲ್ಲಿದ್ದ ‘ಸೋಷಿಯಲ್ ರೆವೊಲ್ಯೂಷನರಿ ಪಾರ್ಟಿ’ಯನ್ನು ಮತ್ತೆ ಮತ್ತೆ ವಿಡಂಬನೆ ಮಾಡುವುದರ ಮೂಲಕವೇ ಹಿಟ್ಲರ್‌ ಮತ್ತು ಸಂಗಾತಿಗಳ ಹೊಸ ಪಕ್ಷ ಬಾರಿ ಜನಮನ್ನಣೆ ಪಡೆಯಿತು. ಜರ್ಮನ್ ಕಿವಿಗಳಿಗೆ ಹಿಟ್ಲರ್‌ ಹೆಸರು ಮತ್ತೆ ಮತ್ತೆ ಕೇಳತೊಡಗಿತು. ಇದರ ನಡುವೆಯೇ ಹಿಟ್ಲರ್ ಮೇಲೆ ಗೊಟ್‌ಫ್ರೈಡ್‌ ಫೆಡರ್ ಎಂಬ ಆರ್ಥಿಕ ತಜ್ಞನೊಬ್ಬನ ಮಾತುಗಳು ದೊಡ್ಡ ಪ್ರಭಾವವನ್ನು ಬೀರುತ್ತವೆ. ನಾಝಿ ಪಕ್ಷದ ಮೊದಲ ಹೊಳಹು ಹಿಟ್ಲರ್‌ ತಲೆಗೆ ಬಂದಿದ್ದು ಈ ಭಾಷಣವನ್ನು ಕೇಳಿದ ಸಂಧರ್ಭದಲ್ಲಿಯೇ.

ನಾಝೀ ಪಕ್ಷದ ಪ್ರಮುಖ ನಾಯಕರು

ಸೈನ್ಯದಲ್ಲಿದ್ದಷ್ಟು ದಿನ ಹಿಟ್ಲರ್, ಜೊತೆಗಿದ್ದ ಸಮಾನ ಮನಸ್ಕ ಸೈನಿಕರನ್ನು ತಮ್ಮ ಪಾರ್ಟಿಗೆ ಸೇರಿಸಿಕೊಳ್ಳುವ ಕಾರ್ಯ ನಡೆಸುತ್ತಿದ್ದ. ಅದೇ ವೇಳೆಯಲ್ಲಿ ಹಿಟ್ಲರ್‌ಗೆ ಪರಿಚಿತರಾದ ಆಂಟನ್ ಡ್ರೆಕ್ಸಲರ್‌ ಎಂಬುವವರ ರಾಷ್ಟ್ರೀಯವಾದಿ, ಯಹೂದ್ಯರ ವಿರೋಧಿ, ಕಮ್ಯುನಿಸ್ಟ್ ವಿರೋಧಿ ಧೋರಣೆಗಳು ಹಿಟ್ಲರ್‌ನಲ್ಲಿ ಇನ್ನಷ್ಟು ಹೊಸಾ ವಿಚಾರಗಳನ್ನು ತುಂಬಿದ್ದವು. ನಂತರದಲ್ಲಿ ಪರಿಚಯಕ್ಕೆ ಬಂದ ಡೈಟ್ರಿಚ್ ಎಕಾರ್ಟ್ ಎಂಬಾತನನ್ನು ಹಿಟ್ಲರ್‌ ಗುರುವೆಂದು ಪರಿಗಣಿಸಿದ.

ಮುಂದೆ ನಾಝಿ ಪಾರ್ಟಿಯ ಕಟ್ಟುವ ಸಮಯದಲ್ಲಿ ಸ್ಥಾಪಕರಲ್ಲಿ ಒಬ್ಬನಾಗಿ ಕೆಲಸ ನಿರ್ವಹಿಸಿದ ಎಕಾರ್ಟ್, ತನ್ನೆಲ್ಲಾ ಯೋಚನೆಗಳನ್ನು ಹಿಟ್ಲರ್‌ಗೆ ಧಾರೆ ಎರೆದಿದ್ದ. ದೊಡ್ಡ ಜನಸಮುದಾಯದೆದುರು ಮಾತನಾಡುವಾಗ ಹೇಗೆ ಬಟ್ಟೆ ತೊಟ್ಟಿರಬೇಕು, ಹೇಗೆ ಸಂಭಾಷಿಸಬೇಕು, ತನ್ನನ್ನು ತಾನು ಹೇಗೆ ಪರಿಚಯಿಸಿಕೊಳ್ಳಬೇಕು ಇತ್ಯಾದಿ ಜನರನ್ನು ಸೆಳೆಯುವ ಮಾರ್ಗಗಳನ್ನು ಹಿಟ್ಲರ್‌ ಈತನಿಂದ ಕಲಿತಿದ್ದ.

1920ರ ಅವಧಿಯಲ್ಲಿ ಸೇನೆಯಲ್ಲಿನ ವೃತ್ತಿ ತೊರೆದ ಹಿಟ್ಲರ್, ತಮ್ಮ ಪಕ್ಷದ ಪೂರ್ಣಕಾಲಿಕ ಸದಸ್ಯನಾಗಿ ಕೆಲಸ ಮಾಡತೊಡಗಿದ. 1921ರಲ್ಲಾಗಲೇ ವಾಗ್ಮಿಯಾಗಿ ರೂಪುತಳೆದಿದ್ದ ಹಿಟ್ಲರ್, ಮೊದಲ ಬಾರಿ ಮ್ಯೂನಿಚ್ ನಗರದಲ್ಲಿ ಸುಮಾರು 6000 ಜನರ ಮುಂದೆ ಬಹಿರಂಗ ಭಾಷಣ ಮಾಡಿದ್ದ. ಈ ಬಹಿರಂಗ ಸಭೆಯ ಪ್ರಚಾರಕ್ಕಾಗಿ ನೂರಾರು ಜನ ಪಕ್ಷದ ಕಾರ್ಯಕರ್ತರನ್ನು ಬಳಸಿಕೊಂಡು ನಗರದ ಎಲ್ಲೆಡೆಯಲ್ಲಿ ದೊಡ್ಡ ಗದ್ದಲ ಉಂಟುಮಾಡಿ, ಕರಪತ್ರಗಳನ್ನು ವಿತರಿಸಿದ್ದ. ಪ್ರಚುರತೆ ಪಡೆಯುವ ಸಲುವಾಗಿ ಹಿಟ್ಲರ್ ಬಳಿಸಿಕೊಂಡ ಮೊದಲ ತಂತ್ರಗಾರಿಕೆಗಳಿವು.

ಭಾಷಣದುದ್ದಕ್ಕೂ ಹಿಟ್ಲರ್ ತನ್ನ ಪ್ರತಿಸ್ಪರ್ಧಿ ರಾಜಕಾರಣಿಗಳನ್ನು, ವರ್ಸೈಲ್ಸ್ ಒಪ್ಪಂದವನ್ನು ವಿರೋಧಿಸಿ ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಿದ್ದ. ಹಿಟ್ಲರ್‌ನ ವಾಗ್ದಾಳಿಗೆ ಪ್ರತಿಯೊಂದು ಸಮಯದಲ್ಲಿಯೂ ಬಲಿಪಶುಗಳಾಗುತ್ತಿದ್ದು ಮಾರ್ಕ್ಸ್‌ವಾದಿಗಳು ಮತ್ತು ಯಹೂದಿಗಳು.

ಮ್ಯೂನಿಚ್ ನಗರದಲ್ಲಿ ತನ್ನ ಕೇಂದ್ರ ಕಚೇರಿಯನ್ನು ಹೊಂದಿದ್ದ ಜರ್ಮನ್ ವರ್ಕರ್ಸ್ ಪಾರ್ಟಿ ಅಧಿಕಾರಶಾಹಿಗಳಿಗೆ ದೊಡ್ಡ ಪ್ರತಿಗಾಮಿ ಶಕ್ತಿಯಾಗಿ ರೂಪುಗೊಳ್ಳುತ್ತಿತ್ತು. ದೇಶದೊಳಗಿನ ಮಾರ್ಕ್ಸ್‌ವಾದಿಗಳ ಮೂತಿಗೆ ಗುದ್ದಿ, ಜರ್ಮನ್ ಜನರ ಮನಸುಗಳಿಂದ ಮಾರ್ಕ್ಸಿಸಮ್‌ಅನ್ನು ಕಿತ್ತೆಸೆಯಲು ಹಿಟ್ಲರ್ ನೇತೃತ್ವ ಈ ಪಾರ್ಟಿ ಉತ್ಸುಕವಾಗಿತ್ತು. ತಮ್ಮ ಪಕ್ಷವನ್ನು ದೇಶದೆಲ್ಲೆಡೆ ಪಸರಿಸಿ, ಪ್ರಭಾವವನ್ನು ಬೆಳೆಸುವ ಸಲುವಾಗಿ ಹಿಟ್ಲರ್ ಬರ್ಲಿನ್ ಕಡೆಗೆ ಪ್ರಯಾಣ ಆರಂಭಿಸಿದ್ದ. ಅದೇ ವೇಳೆ ಮ್ಯೂನಿಚ್‌ನಲ್ಲಿ ಪಕ್ಷದೊಳಗೆ ಅಧಿಕಾರ ಸಂಬಂಧಿತ ದಂಗೆ ಆರಂಭವಾಗಿತ್ತು.

ಆ ಸಂದರ್ಭದಲ್ಲಿ ಹಿಟ್ಲರ್ ಭಾಷಣವನ್ನು ಕೇಳಿದ ಪ್ರತಿಯೊಬ್ಬರು ಅವನನ್ನು ಸಮಾಜವಾದಿ ನಾಯಕನೆಂದೇ ಭಾವಿಸುತ್ತಿದ್ದರು. ಹೊರಗೆ ಬಹಿರಂಗ ಭಾಷಣಗಳಲ್ಲಿ ರಾಷ್ಟ್ರೀಯತೆ, ಜನರ ಸಮಸ್ಯೆಗಳನ್ನು ಕುರಿತು ಮಾತನಾಡುತ್ತಿದ್ದ ಹಿಟ್ಲರ್, ಪಕ್ಷದೊಳಗೆ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದ್ದ. ಪಕ್ಷದ ಕಾರ್ಯಕಾರಿ ಸಮಿತಿಯೊಳಗೆ ಹಿಟ್ಲರ್‌ನ ಪ್ರಭಾವವನ್ನು ಕುಗ್ಗಿಸುವ ನಿಟ್ಟಿನಲ್ಲಿ ಇತರೆ ನಾಯಕರು ನಿರತರಾಗಿದ್ದರು. ಮ್ಯೂನಿಚ್‌ಗೆ ಧಾವಿಸಿ ಬಂದ ಹಿಟ್ಲರ್ ಅದೇ ದಿನವೇ ಪಕ್ಷಕ್ಕೆ ರಾಜಿನಾಮೆ ಕೊಟ್ಟ. ಹಿಟ್ಲರ್ ಇಲ್ಲದೇ ಪಕ್ಷಕ್ಕೆ ಉಳಿಗಾಲವೇ ಇಲ್ಲ ಎಂಬುದನ್ನು ಅರಿತಿದ್ದ ಇತರೆ ಸದಸ್ಯರು, ಹಿಟ್ಲರ್‌ಗೆ ಪಕ್ಷದ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಟ್ಟು, ಸರ್ವಾಧಿಕಾರವನ್ನು ಆತನಿಗೇ ಬಿಟ್ಟುಕೊಟ್ಟರು.

1921ರ ಜುಲೈ 29ರಂದು ಮೊದಲ ಬಾರಿ ಹಿಟ್ಲರ್ ‘ನಾಝಿ’ ಪದವನ್ನು ಬಳಕೆ ಮಾಡಿದ. ಆ ಪದವು ಜನರ ರಾಷ್ಟ್ರೀಯವಾದಿ ಜರ್ಮನ್ನರ ಎದೆಯಲ್ಲಿ ಅನುರಣಿಸಿತು. ಜರ್ಮನ್ ವರ್ಕರ್ಸ್ ಪಾರ್ಟಿ ಎಂಬ ಹೆಸರನ್ನು ಬದಲಿಸಿದ ಹಿಟ್ಲರ್, ನ್ಯಾಷನಲ್ ಸೋಷಿಯಲಿಸ್ಟ್ ಜರ್ಮನ್ ವರ್ಕರ್ಸ್ ಪಾರ್ಟಿ’ ಎಂದು ನಾಮಕರಣ ಮಾಡಿದ.

ಬಿಯರ್‌ ಹಾಲ್‌ ಭಾ‍ಷಣಗಳು:

ಬಿಯರ್‌ ಹಾಲ್‌ಗಳಲ್ಲಿ ಹಿಟ್ಲರ್‌ ಭಾಷಣದ ವೇಳೆ ಸೇರುತ್ತಿದ್ದ ಜನ.

ಪ್ರತಿದಿನ ಸಂಜೆ ಸಾವಿರಾರು ಜನ ಬಂದು ಸೇರುತ್ತಿದ್ದ ಬಿಯರ್‌ ಹಾಲ್‌ಗಳಲ್ಲಿ ಭಾಷಣ ಹಿಟ್ಲರ್‌ನ ಪಕ್ಷಕ್ಕೆ ಹೆಚ್ಚಿನ ಬೆಂಬಲ ತಂದುಕೊಟ್ಟಿತು. ಇಟಲಿಯ ಮುಸಲೋನಿ ಅನುಸರಿಸುತ್ತಿದ್ದ ಹಲವಾರು ಕ್ರಮಗಳನ್ನೇ ತನ್ನ ಬೆಳವಣಿಗೆಗೆಂದು ಬಳಸಿಕೊಂಡ ಹಿಟ್ಲರ್, ಬರ್ಲಿನ್ ಅಭಿಯಾನವನ್ನು ಆರಂಭಿಸುತ್ತಾನೆ. 1923ರ ನವೆಂಬರ್ 8 ಜರ್ಮನಿಯ ಇತಿಹಾಸದಲ್ಲಿ ದೊಡ್ಡ ಮೈಲಿಗಲ್ಲಾಗುತ್ತದೆ. ಬ್ರವೇರಿಯಾದ ಮಿಲಿಟರಿ ಮತ್ತು ಪೊಲೀಸ್ ಮುಖಂಡರ ಸಹಾಯ ಪಡೆದ ಹಿಟ್ಲರ್‌ ಆಡಳಿತದಲ್ಲಿದ್ದ ಸರಕಾರವನ್ನು ಉರುಳಿಸಿ, ಹೊಸ ಸರಕಾರ ರಚನೆಗೆ ಮುಂದಾಗುತ್ತಾನೆ. ಆದರೆ ಬೆಂಬಲಿಸುತ್ತೇವೆಂದ ಅಧಿಕಾರಿಗಳು ರಾತ್ರೋರಾತ್ರಿ ಹಿಟ್ಲರ್‌ನ ವಿರೋಧಿ ಪಕ್ಷಗಳ ಜೊತೆ ಕೈಕುಲುಕುತ್ತಾರೆ.

ಈ ಸಂದರ್ಭ ಹಿಟ್ಲರ್ ತನ್ನ ಬೆಂಬಲಿಗರೊಂದಿಗೆ ಮಿಲಿಟರಿ ಮಂತ್ರಾಲಯದ ಕಡೆಗೆ ಮೆರವಣಿಗೆ ಹೊರಡುತ್ತಾನೆ. ಈ ವೇಳೆ ಪೊಲೀಸರು ಹಾರಿಸಿದ ಗುಂಡು ಹಲವಾರು ನಾಝಿ ಪಕ್ಷದ ಸದಸ್ಯರ ದೇಹ ಸೇರುತ್ತವೆ. ಹೆದರಿದ ಹಿಟ್ಲರ್ ಅಲ್ಲಿಂದ ಪಲಾಯನಗೊಂಡು, ಸ್ನೇಹಿತನೊಬ್ಬನ ಮನೆ ಸೇರುತ್ತಾನೆ. ಗುಂಡು ಹಾರಿಸಿಕೊಂಡು ಅತ್ಮಹತ್ಯೆಗೆ ಪ್ರಯತ್ನಿಸುತ್ತಿದ್ದ ವೇಳೆಗೆ ಬಂದ ಪೊಲಿಸರು, ಹಿಟ್ಲರ್‌ನನ್ನು ಬಂಧಿಸುತ್ತಾರೆ. ಈ ಘಟನೆಯನ್ನು ಇತಿಹಾಸ ‘ಬಿಯರ್ ಹಾಲ್ ವಿಪ್ಲವ’ ಎಂದೇ ಬಣ್ಣಿಸುತ್ತದೆ. ಸುಮಾರು ತಿಂಗಳುಗಳ ಕಾಲ ಹಿಟ್ಲರ್‌ ಸೆರೆವಾಸ ಅನುಭವಿಸುತ್ತಾನೆ.

ಜರ್ಮನಿಯ ಯಾವುದೋ ಮೂಲೆಯಲ್ಲಿದ್ದ ಹಿಟ್ಲರ್‌ನನ್ನು ಈ ಘಟನೆ ಇಡೀ ಜರ್ಮನಿಗೆ ಪರಿಚಯಿಸುತ್ತದೆ. ಮೊದಲ ಬಾರಿ ಹಿಟ್ಲರ್‌ನೊಳಗಿದ್ದ ಕ್ರೌರ್ಯ ಹೊರಜಗತ್ತಿಗೆ ಪರಿಚಯವಾಗುತ್ತದೆ. ಅದರೊಟ್ಟಿಗೆ ಹಿಟ್ಲರ್‌ನ ಬೆಂಬಲಿಗರ ಸಂಖ್ಯೆಯನ್ನೂ ವೃದ್ಧಿಸುತ್ತದೆ. ಸೆರೆವಾಸ ಮುಗಿಸಿ ಹೊರಬಂದ ಹಿಟ್ಲರ್ ಕರಾಳ ಅಧ್ಯಾಯಕ್ಕೆ ಮುನ್ನುಡಿ ಬರೆಯುತ್ತಾನೆ.

(ನಾಳೆಗೆ)

Also Read: ಅಡಾಲ್ಫ್ ಹಿಟ್ಲರ್- 1: ಬಾಲಕನೊಳಗೆ ಹುಟ್ಟಿದ ಪ್ರಶ್ನೆಗಳು; ಬೆಚ್ಚಗೆ ಮಲಗಿದ್ದ ರಾಷ್ಟ್ರೀಯತೆಯ ಬೀಜ

Also Read: ಅಡಾಲ್ಫ್ ಹಿಟ್ಲರ್ -2: ‘ಉಗ್ರ ರಾಷ್ಟ್ರೀಯತೆ’ಯ ಹೊಸ ಧ್ವನಿ; ಯುಂಗ್ ಹಿಟ್ಲರ್ ವಾಯ್ಸ್