Home Special Series ಅಡಾಲ್ಫ್ ಹಿಟ್ಲರ್ -2: ‘ಉಗ್ರ ರಾಷ್ಟ್ರೀಯತೆ’ಯ ಹೊಸ ಧ್ವನಿ; ಯುಂಗ್ ಹಿಟ್ಲರ್ ವಾಯ್ಸ್

ಅಡಾಲ್ಫ್ ಹಿಟ್ಲರ್ -2: ‘ಉಗ್ರ ರಾಷ್ಟ್ರೀಯತೆ’ಯ ಹೊಸ ಧ್ವನಿ; ಯುಂಗ್ ಹಿಟ್ಲರ್ ವಾಯ್ಸ್

SHARE

ಮಹತ್ವಾಂಕಾಂಕ್ಷಿ ಹಿಟ್ಲರ್ ಬಾಲ್ಯದ ಜೀವನ ಅಷ್ಟೇನೂ ಕಷ್ಟವಿಲ್ಲದೆ ಸುಗಮವಾಗಿ ಸಾಗಿದರೆ, ಯುವಕನಾಗಿದ್ದ ದಿನಗಳಲ್ಲಿ ತುತ್ತು ಅನ್ನಕ್ಕಾಗಿ ಅಲೆದಾಡುವ ಪರಿಸ್ಥಿತಿಯನ್ನು ಹಿಟ್ಲರ್ ಅನುಭವಿಸಿದ್ದ. ಈ ವೇಳೆಯಲ್ಲಿಯೇ ಅವನಲ್ಲಿನ ರಾಷ್ಟ್ರೀಯತೆಯ ಸಾಮ್ರಾಜ್ಯ ನಿರ್ಮಾಣದ ಕಲ್ಪನೆಗಳು ಸ್ಪಷ್ಟಗೊಂಡಿದ್ದವು. ರಾಷ್ಟ್ರದ ಚುಕ್ಕಾಣಿ ಹಿಡಿಯಲು ಬೇಕಾದ ಕಸರತ್ತುಗಳನ್ನು ಯುವತ್ವವೆಂಬ ಗರಡಿಮನೆ ಹಿಟ್ಲರ್‌ಗೆ ಕಲಿಸಿಕೊಟ್ಟಿತ್ತು . ಅಷ್ಟೇ ಕ್ರೂರತೆಯನ್ನು ಅವನೊಳಗೆ ಬಿತ್ತಿತ್ತು ಕೂಡ.

ಕನಸನ್ನೊತ್ತ ಹಿಟ್ಲರ್ ಕಣ್ಣುಗಳು ವಿಯೆನ್ನಾದ ಚಿತ್ರಕಲಾ ಅಕಾಡೆಮಿಯಲ್ಲಿ ತಾನು ಬರೆದ ಪ್ರವೇಶ ಪರೀಕ್ಷೆಯ ಫಲಿತಾಂಶಕ್ಕಾಗಿ ಕಾಯುತ್ತಾ ಕುಳಿತಿದ್ದವು . ಪರೀಕ್ಷೆಯಲ್ಲಿ ಉತ್ತೀರ್ಣವಾಗದ ಹಿಟ್ಲರ್, ಅನುತ್ತೀರ್ಣತೆಯ ಕಾರಣವನ್ನು ತಿಳಿಯಲು ಅಕಾಡೆಮಿ ಮುಖ್ಯಸ್ಥರ ಹಿಂದೆ ಬಿದ್ದಾಗ, ನೀನು ಚಿತ್ರಗಾರನಿಗಿಂತ ವಾಸ್ತುಶಿಲ್ಪಿಯಾಗಲು ಸೂಕ್ತವೆಂಬ ಉತ್ತರ ಬಂತು.

ಏನೋ ಯೋಚಿಸಿಕೊಂಡು ಬಂದ ಹಿಟ್ಲರ್ ಮತ್ತೊಮ್ಮೆ ಗೊಂದಲದಲ್ಲಿ ಬಿದ್ದ. ಗುರಿ ಬದಲಾಯಿತು, ಹಿಟ್ಲರ್ ಮನಸ್ಸಿನೊಳಗೆ ವಾಸ್ತುಶಿಲ್ಪಿಯೊಬ್ಬ ಉದಯಿಸಿದ. ವಿಯೆನ್ನಾ ನಗರದ ಮ್ಯೂಸಿಯಂಗಳು, ಕಟ್ಟಡಗಳು, ಅವುಗಳ ಶೈಲಿಯನ್ನು ನೋಡುವುದೇ ಆತನ ದಿನನಿತ್ಯದ ಕೆಲಸವಾಯಿತು. ಆ ಸಮಯಕ್ಕೆ ಹಿಟ್ಲರ್ 16 ವರ್ಷದ ಯುವಕ.

ಅಚಾನಕ್ಕಾಗಿ ಉದ್ಭವಗೊಂಡ ವಾಸ್ತುಶಿಲ್ಪಿ ಹೆಚ್ಚಿನ ಕಾಲವೇನು ಉಳಿಯಲಿಲ್ಲ. ಹೊಸ ಕನಸು ಕ್ರಮೇಣ ನಶಿಸುತ್ತಾ ಬಂದಂತೆ, ಹಿಂದಿದ್ದ ಯುದ್ಧದ ಹುಚ್ಚು ಮತ್ತೆ ಅಸ್ತಿತ್ವವನ್ನು ಗಳಿಸಿತು. ಮಾಡಲು ಕೆಲಸವಿಲ್ಲದ ಹಿಟ್ಲರ್ ಗೆ ಅವು ಸಂಕಷ್ಟದ ದಿನಗಳು.

ಚಿಕ್ಕ ಪುಟ್ಟ ಪೈಂಟಿಂಗ್ ಕೆಲಸಗಳನ್ನು ಮಾಡಿ ಗಳಿಸುತ್ತಿದ್ದ ದುಡ್ಡು ಅವನ ಹೊಟ್ಟೆಯನ್ನೂ ಸಹ ಪೂರ್ತಿಯಾಗಿ ತುಂಬಿಸುತ್ತಿರಲಿಲ್ಲ . ಅಂದಿನ ದಿನಗಳಲ್ಲಿ ಹಿಟ್ಲರ್‌ನ ಹಿಂಬಾಲಕ, ನಿಷ್ಟಾವಂತ ಗೆಳೆಯನೆಂದರೆ ಹಸಿವು ಮಾತ್ರ.

ಬಡ ಮಧ್ಯಮ ವರ್ಗದಲ್ಲಿ ತನ್ನ ಯುವತ್ವವನ್ನು ದೂಡುತ್ತಿದ್ದ ಹಿಟ್ಲರ್, ಮನಸ್ಸಿನಲ್ಲಿ ನಮ್ಮಂತವರ ಈ ದುಸ್ಥಿತಿಗೆ ಕಾರಣವೇನು ಎಂದು ಹುಡುಕುತ್ತಿದ್ದ . ಆಗ ಆತನಿಗೆ ಕಂಡಿದ್ದು ಕಮ್ಯುನಿಸಂ ಮತ್ತು ಯೆಹೂದಿ ಸಮುದಾಯ. ಹಿಟ್ಲರ್ ನಲ್ಲಿ ಹಸಿವಿನಷ್ಟೇ ತೀಕ್ಷ್ಣವಾಗಿ ವೈಷಮ್ಯವೂ ಮೈದೆಳೆಯಲು ಆರಂಭಿಸಿತು.

ಆ ಕಾಲಕ್ಕೆ ವಿಯೆನ್ನಾ ನಗರ ಅಲ್ಲಿನ ಆರ್ಥಿಕ ರಾಜಧಾನಿಯಾಗಿತ್ತು. ಹಲವಾರು ಸಂಸ್ಕೃತಿ, ಜನಾಂಗ, ಧರ್ಮಗಳ ಜನರ ನೆಲೆಯಾಗಿತ್ತು. ಅದರ ಜೊತೆಗೆ ಭಿನ್ನ ನೆಲೆಗಟ್ಟಿನ ತಾರತಮ್ಯಗಳಿಗೂ ಕೊರತೆಯಿರಲಿಲ್ಲ. ಸಮಾಜದೊಳಗಿನ ಈ ಓರೆಕೋರೆಗಳೂ ಸಹ ಯುವಕ ಹಿಟ್ಲರ್ನ ಮನಸ್ಸಿನಲ್ಲಿ ತಳಮಳವನ್ನು ಸೃಷ್ಟಿಸಿದ್ದವು . ತೀವ್ರತರವಾಗಿದ್ದ ನಿರುದ್ಯೋಗ ಎಲ್ಲೆಡೆ ತಾಂಡವವಾಡುತ್ತಿತ್ತು. ಸ್ವತಃ ನಿರುದ್ಯೋಗಿಯ ಬದುಕು ಸವೆಸಿದ್ದ ಹಿಟ್ಲರ್ ನಲ್ಲಿ ವ್ಯವಸ್ಥೆಯ ವಿರುದ್ಧ ಸಿಡಿದೇಳುವ ಮನಸ್ಥಿತಿ ರೂಪುತಳೆಯುತ್ತಿತ್ತು.

ಜೊತೆ ಜೊತೆಯಲ್ಲೇ ತನ್ನಿಚ್ಚೆಯ ಹೊಸ ಸಾಮ್ರಾಜ್ಯವನ್ನು ಸೃಷ್ಟಿಸುವ ಆಸೆಯೂ ಮೈದೆಳಿದಿತ್ತು. ಈ ಸಾಮ್ರಾಜ್ಯದ ನಿರ್ಮಾಣಕ್ಕಾಗಿ ಕ್ರೂರ ಆಯುಧಗಳನ್ನು ಬಳಸುವಂತೆ ಒಳಮನಸ್ಸು ಪ್ರೇರೇಪಿಸುತ್ತಿತ್ತು.

ನೆಲಕಚ್ಚಿದ ರಾಷ್ಟ್ರ ಪ್ರೇಮ, ಪಿತೃಭೂಮಿಯ ಕಲೆ ಸಂಸ್ಕೃತಿಯ ಅರಿವಿಲ್ಲದಿರುವುದು, ಜರ್ಮನ್ ಜನ ಸ್ವಾಭಿಮಾನ ಮರೆತಿರುವುದೇ ಈ ದುರಂತಕ್ಕೆ ಕಾರಣ. ಜರ್ಮನ್ನರನ್ನು ಎಚ್ಚರಿಸದಿದ್ದರೆ ಜರ್ಮನಿ ಸಂಸ್ಕೃತಿ ಉಳಿಯುವುದಿಲ್ಲ ಎಂಬ ಭಾವ ಬಲಿತೊಡನೆ ಹಿಟ್ಲರ್ ಉದ್ರಿಕ್ತನಾಗತೊಡಗಿದ . ರಾಷ್ಟ್ರ ಪ್ರೇಮವನ್ನು ಪ್ರೇರೇಪಿಸಲು ಅಗತ್ಯವಾದ ಮಾರ್ಗಗಳಿಗಾಗಿ ಒಳಗೆಯೇ ಶೋಧಿಸತೊಡಗಿದ. ತನ್ನೊಳಗಿನ ತುಮುಲವನ್ನು ಹೊರಹಾಕಲು ಬೇಕಾದ ಅವಕಾಶಕ್ಕಾಗಿ ಕಾಯತೊಡಗಿದ.

ಚಿಕ್ಕ ಮಕ್ಕಳಿರುವಾಗಲೇ ನಮ್ಮ ಹಿಂದಿನ ಪರಂಪರೆಯ ಮಹತ್ವವನ್ನು ತಿಳಿಸಿ ಹೇಳುವ ಅಗತ್ಯವಿದೆ ಎಂಬುದು ಹಿಟ್ಲರ್ ನ ಭಾವವಾಗಿತ್ತು . ಜರ್ಮನಿಯ ಅಭೂತಪೂರ್ವ ಇತಿಹಾಸವನ್ನು,ಸಂಸ್ಕೃತಿಯನ್ನು ಕಮ್ಯುನಿಸ್ಟರು ಹಾಗೂ ಯಹೂದಿಗಳು ನಾಶಪಡಿಸುತ್ತಿದ್ದಾರೆ ಎಂದು ಹಿಟ್ಲರ್ ಬಲವಾಗಿ ನಂಬಿದ . ಹೊಸ ಸಾಮ್ರಾಜ್ಯದ ಸ್ಥಾಪನೆಗೆ ಬೇಕಿರುವ ಸಲಕರಣೆಗಳಿಗಾಗಿ ಹುಡುಕಾಟ ನಡೆಸಿದ್ದ ಹಿಟ್ಲರ್ ತಲೆಯಲ್ಲಿ ಅದಾಗಲೇ ‘ಸಮೂಹ ಭಾಷಣ, ಮಾಧ್ಯಮಗಳ ಬಳಕೆ ಇತ್ಯಾದಿ ಪ್ರಮುಖ ಅಂಶಗಳು ಮನೆ ಮಾಡಿದ್ದವು.

ಈ ಮಧ್ಯೆಯೇ ಹಿಟ್ಲರ್ ಮನಸ್ಸು ವಿಯೆನ್ನಾ ತೊರೆದು ಮ್ಯೂನಿಚ್ ನಗರದ ಕಡೆಗೆ ಹೊರಳಿತ್ತು . ಆಗ ಹಿಟ್ಲರ್‌ಗೆ ಸುಮಾರು 22 ರ ಪ್ರಾಯ, 1992ರ ಅವಧಿ. ಅಲ್ಲಿಯೂ ಸಹ ಪೈಂಟಿಂಗ್ ಕೆಲಸವೇ ಹಿಟ್ಲರ್‌ನ ಕೈಹಿಡಿದಿತ್ತು. ಹೊಟ್ಟೆ ತುಂಬಲು ಅಗತ್ಯವಿದ್ದಷ್ಟು ಹಣ ದೊರೆಯುತ್ತಿತ್ತು. ಕಲಾವಿದ, ವಾಸ್ತು ಶಿಲ್ಪಿಯಾಗಬೇಕೆಂಬ ಕನಸುಗಳು ಕಮರಿ, ಯುದ್ಧದ ಜೊತೆ ಹೊಸ ಸಾಮ್ರಾಜ್ಯದ ನಿರ್ಮಾಣವೇ ಹಿಟ್ಲರ್‌ನ ಮಹೋನ್ನತ ಗುರಿಯಾಗಿ ನಿಂತಿತ್ತು . ಈ ಗುರಿಯ ಮುಂದೆ ನಿತ್ಯ ಬದುಕಿನ ಹೋಯ್ದಾಟಗಳೇನು ಹೆಚ್ಚಾಗಿ ಬಾಧಿಸಲಿಲ್ಲ.

ಪೈಂಟಿಂಗ್ ವೃತ್ತಿಯ ಜೊತೆಗೆ ಬಿಡುವು ಮಾಡಿಕೊಂಡು ರಾಜಕೀಯ ಚರ್ಚೆ, ಸಮ್ಮೇಳನಗಳಲ್ಲಿ ಭಾಗವಾಗುವ ಹವ್ಯಾಸ ಹಿಟ್ಲರ್‌ನಲ್ಲಿ ಬೆಳೆಯಿತು. ಜರ್ಮನಿಯ ವಿದೇಶಿ ನೀತಿಗಳು, ಒಕ್ಕೂಟ ನೀತಿಗಳು ಇತ್ಯಾದಿ ಚರ್ಚೆಗಳು ಹಿಟ್ಲರ್‌ನ ಯೋಚನೆಗಳನ್ನು ಮತ್ತಷ್ಟು ಸ್ಪಷ್ಟಗೊಳಿಸುವಲ್ಲಿ ಸಹಕಾರಿಯಾದವು .

ಆ ವೇಳೆಗಾಗಲೇ ರಾಷ್ಟ್ರಗಳ ನಡುವಿನ ಅಂತರರಾಷ್ಟ್ರೀಯ ಸಂಬಂಧ ಹದಗೆಟ್ಟಿತ್ತು. ಮಹಾಯುದ್ಧ ನಡೆಯಬಹುದಾದ ಸೂಚನೆಗಳು ದಿನದಿಂದ ದಿನಕ್ಕೆ ಸ್ಪಷ್ಟವಾಗುತ್ತಿದ್ದವು. ಅದಾಗಲೇ ಇಟಲಿ, ಆಸ್ಟ್ರಿಯಾ ಮತ್ತು ಜರ್ಮನಿಗಳ ಒಕ್ಕೂಟ ಒಡೆದು ಬೇರೆ ಬೇರೆಯಾಗಿದ್ದವು. ಆಸ್ಟ್ರಿಯಾ ಮತ್ತು ಇಟಲಿಯ ನಡುವೆ ಯುದ್ದದ ಪರಿಸ್ಥಿತಿ ನಿರ್ಮಾಣವಾಗಿತ್ತು. ಮಹಾಯುದ್ಧ ನಡೆದದ್ದೇ ಆದಲ್ಲಿ ತುತ್ತು ಅನ್ನಕ್ಕೂ ಪರದಾಡುವ ಪರಿಸ್ಥಿತಿ ಬರಬಹುದು ಎಂಬ ಮುನ್ಸೂಚನೆ ದೊರೆತಿತ್ತು .

ಮೊದಲಿನಿಂದಲೂ ಯುದ್ಧಪಿಪಾಸುವಾಗಿದ್ದ ಹಿಟ್ಲರ್ 1914 ರ ಆಗಸ್ಟ್ 3 ರಂದು ಬವೇರಿಯನ್ ರೆಜಿಮೆಂಟ್ ಸೇರಲು ಅವಕಾಶ ನೀಡುವಂತೆ ಅರ್ಜಿ ಸಲ್ಲಿಸಿದ್ದ. ಮಾರನೆ ದಿನವೇ ಬಂದು ದಾಖಲಾಗುವಂತೆ ಸೂಚನೆಯೂ ದೊರೆಯಿತು. ಆಗ ಹಿಟ್ಲರ್‌ಗೆ ಆದ ಆನಂದಕ್ಕೆ ಪಾರವೇ ಇಲ್ಲ. ಕೆಲವೇ ದಿನಗಳಲ್ಲಿ ಹಿಟ್ಲರ್ ಮಿಲಿಟರಿ ಸಮವಸ್ತ್ರ ಧರಿಸಿ ಮ್ಯೂನಿಚ್ನಿಂದ ಹೊರಟ. ಅವನೊಟ್ಟಿಗೆ ಹಲವಾರು ಹೊಸ ಯೋಧರೂ ಪ್ರಯಾಣ ಆರಂಭಿಸಿದರು.

ಯುಧ್ಧಭೂಮಿಯನ್ನು ತಲುಪಿ, ಎದೆಯೇರಿಸಿ ನಿಂತಾಗ ಹಿಟ್ಲರ್‌ನ ಎದೆ ರಾಷ್ಟ್ರೀಯತೆಯಿಂದ ತುಂಬಿ ಇನ್ನೇನು ಬಿರಿಯುವಂತಿತ್ತು. ಅದಾದ ಕೆಲವೇ ಕ್ಷಣಗಳಲ್ಲಿ ಹಿಟ್ಲರ್ ಮನುಷ್ಯ ಮನುಷ್ಯರ ನಡುವಿನ ಹೊಡೆದಾಟದಲ್ಲಿ ರಕ್ತದಿಂದ ತೊಯ್ದ ಯುದ್ಧಭೂಮಿಗೆ ಮೊದಲ ಬಾರಿ ಸಾಕ್ಷಿಯಾದ. ಸಾವಿನ ಆಟಕ್ಕೆ ಕೊನೆಯೇ ಇರಲಿಲ್ಲ. ಸತತ ಸಾವುಗಳನ್ನು ಕಂಡು, ಹಲವಾರು ಜನರ ನೆತ್ತರು ಚೆಲ್ಲಿದ ಹಿಟ್ಲರ್ ನಾಲ್ಕು ದಿನದ ನಂತರ ಕ್ಯಾಂಪ್ಗೆ ಮರಳಿದ . ಎಲ್ಲರಂತೆ ಹಿಟ್ಲರ್‌ಗೂ ಸಹ ದಿನ ಕಳೆದಂತೆ ಯುದ್ಧದ ಉತ್ಸಾಹ ಕಡಿಮೆಯಾಗಿ ಸಾವಿನ ಭೀತಿ ಎದುರಾಗಿತ್ತು . ಹೊರಗಿನ ಯುದ್ಧಕ್ಕಿಂತ ಒಳಗಿನ ಯುದ್ಧದ ಸೋಲು ಗೆಲುವಿನ ನಡುವೆ ಹಿಟ್ಲರ್ ಕೆಲವ ದಿನಕ್ಕೆ ಹೈರಾಣಾದ . ಆದರ ಒಳಗಿದ್ದ ಹುಚ್ಚು ದೇಶಪ್ರೇಮ ಮತ್ತೆ ಮತ್ತೆ ಬಡಿದೆಬ್ಬಿಸುತ್ತಿತ್ತು. ಆದರೆ ಶ್ರಮಕ್ಕೆ ತಕ್ಕ ಗೌರವ ದೊರೆಯದಿದ್ದಾಗ ಹಿಟ್ಲರ್ ಕುದಿದಿದ್ದ.

ಮೊದಲಾನೇ ಮಹಾಯುದ್ಧದ ವೇಳೆಯಲ್ಲಿ ಹಿಟ್ಲರ್‌.

ಸೈನ್ಯದ ಮುಖ್ಯಕಛೇರಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾಗ ಸೇನಾ ಸುದ್ಧಿಪತ್ರಿಕೆಗೆ ಕಾರ್ಟೂನ್ಗಳ, ಚಿತ್ರಗಳ ಕುರಿತಾದ ಸೂಚನೆಗಳನ್ನು ನಿಡುವ ಜವಾಬ್ದಾರಿ ಆತನದ್ದೇ ಆಗಿತ್ತು. 1916 ರಲ್ಲಿ ನಡೆದ ಸೊಮ್ಮೆ ಯುದ್ಧದಲ್ಲಿ ಗಾಯಗೊಂಡ ಹಿಟ್ಲರ್ ಸುಮಾರು ದಿನಗಳ ಆಸ್ಪತ್ರೆಯಲ್ಲೇ ಕಳೆಯಬೇಕಾಯಿತು. ಗುಣಮುಖನಾಗಿ 1917 ರ ಸೈನ್ಯಕ್ಕೆ ಮರಳಿದ. 1918 ರಲ್ಲಿ ಮತ್ತೆ ಯುದ್ಧದಲ್ಲಿ ಗಾಯಾಳುವಾಗಿ, ವಿಷಾನಿಲಗಳ ಕಾರಣದಿಂದಾಗಿ ತಾತ್ಕಾಲಿಕ ಕುರುಡುತನ ಅನುಭವಿಸಿದ. ಆ ವೇಳೆಯಲ್ಲಿ ಜರ್ಮನಿ ಯುದ್ಧದಲ್ಲಿ ಸೋಲು ಕಂಡ ವಿಷಯ ಹಿಟ್ಲರ್‌ನ ಕಿವಿ ತಲುಪಿತು . ವಿಲವಿಲನೆ ಒದ್ದಾಡಿದ ಹಿಟ್ಲರ್‌ಗೆ ಕಣ್ಣಿನ ಗಾಯಕ್ಕಿಂತಲೂ ದೇಶದ ಸೋಲು ಹೆಚ್ಚಿನ ನೋವು ನೀಡಿತ್ತು .

ತನ್ನ ಜೀವನದಲ್ಲಿ ಅತಿ ಹೆಚ್ಚು ಅನುಭವಗಳನ್ನು ಪಡೆದದ್ದೆಂದರೆ ಮಹಾಯುದ್ಧದ ಸಂದರ್ಭದಲ್ಲಿ ಎಂದು ಹಿಟ್ಲರ್ ವಿವರಿಸುತ್ತಾನೆ . ಯುದ್ಧದ ಅನುಭವಗಳು ಹಿಟ್ಲರ್‌ನ ಜರ್ಮನ್ ಮೇಲಿನ ರಾಷ್ಟ್ರಭಕ್ತಿಯನ್ನು ಮತ್ತಷ್ಟು ಬಲಗೊಳಿಸಿತು. ಆದರೆ ಜರ್ಮನಿ ಶರಾಣಾಗತಿ ಹೊಂದಿದ್ದು ಹಿಟ್ಲರ್ನನ್ನು ಆಘಾತಕ್ಕೆ ಒಳಪಡಿಸಿತ್ತು. ಸೋಲಿನ ಕಹಿ ಸತ್ಯವನ್ನು ಸಹಿಸಲಾಗದ ಹಿಟ್ಲರ್‌ನಲ್ಲಿ ರಾಜಕೀಯವನ್ನು ಪ್ರವೇಶಿಸಲೇಬೇಕೆಂಬ ಅಬೀಷ್ಟೆ ಪ್ರಬಲವಾಯಿತು.

ಮೊದಲ ಮಹಾಯುದ್ಧದ ಕೊನೆಯಲ್ಲಿ ನಡೆದ ‘ವರ್ಸೈಲ್ಸ್ ಒಪ್ಪಂದ’ ಜರ್ಮನಿಯನ್ನು ಹಲ್ಲಿಲ್ಲದ ಹಾವನ್ನಾಗಿಸಿತು. ಒಪ್ಪಂದದ ಪ್ರಕಾರ ಜರ್ಮನಿ ತನ್ನ ಕೆಲವು ಭಾಗಗಳನ್ನು ಕಳೆದುಕೊಳ್ಳಬೇಕಾಯಿತು. ಜರ್ಮನಿಯ ಸೈನ್ಯದ ಮೇಲೆ ಹಲವಾರು ಷರತ್ತುಗಳನ್ನು ವಿಧಿಸಲಾಯಿತು. ಜರ್ಮನಿಯ ಶಕ್ತಿಯನ್ನು ಮೊಟಕುಗೊಳಿಸಿದ ವರ್ಸೈಲ್ಸ್ ಒಪ್ಪಂದ ಜಗತ್ತು ಕಂಡ ಕಡುಕ್ರೂರಿ ಸರ್ವಾಧಿಕಾರಿ ಬೆಳವಣಿಗೆಗೆ ಮೊದಲ ಮೆಟ್ಟಿಲಾಗಿ ಪರಿಣಮಿಸಿತ್ತು .

(ನಾಳೆಗೆ)

Also Read: ಅಡಾಲ್ಫ್ ಹಿಟ್ಲರ್- 1: ಬಾಲಕನೊಳಗೆ ಹುಟ್ಟಿದ ಪ್ರಶ್ನೆಗಳು; ಬೆಚ್ಚಗೆ ಮಲಗಿದ್ದ ರಾಷ್ಟ್ರೀಯತೆಯ ಬೀಜ