Home Special Series ಅಡಾಲ್ಫ್ ಹಿಟ್ಲರ್- 1: ಬಾಲಕನೊಳಗೆ ಹುಟ್ಟಿದ ಪ್ರಶ್ನೆಗಳು; ಬೆಚ್ಚಗೆ ಮಲಗಿದ್ದ ರಾಷ್ಟ್ರೀಯತೆಯ ಬೀಜ

ಅಡಾಲ್ಫ್ ಹಿಟ್ಲರ್- 1: ಬಾಲಕನೊಳಗೆ ಹುಟ್ಟಿದ ಪ್ರಶ್ನೆಗಳು; ಬೆಚ್ಚಗೆ ಮಲಗಿದ್ದ ರಾಷ್ಟ್ರೀಯತೆಯ ಬೀಜ

SHARE

“ಒಂದು ಜಾತಿಯ ರಕ್ತ ಒಂದೇ ಸಾಮ್ರಾಜ್ಯವನ್ನು ಬೇಡುತ್ತದೆ. ಬೇರೆ ದೇಶಗಳಲ್ಲಿ ಹರಿದು ಹಂಚಿರುವ ತನ್ನ ಮಕ್ಕಳನ್ನು ಜರ್ಮನಿಯ ತಾಯಿ ಒಂದೇ ಸಾಮ್ರಾಜ್ಯದೊಳಗೆ ಅಪ್ಪಿಕೊಳ್ಳುವವರೆಗೆ ಜರ್ಮನ್ನರಿಗೆ ವಸಹಾತುಶಾಹಿ ರಾಜಕೀಯ ನಡೆಸುವ ನೈತಿಕ ಹಕ್ಕಿಲ್ಲ. ಅನ್ನವಿಲ್ಲದಿದ್ದರೂ ಪರವಾಗಿಲ್ಲ, ನೈತಿಕ ಸ್ಥೈರ್ಯದ ಮೇಲೆ ಜರ್ಮನ್ ರಕ್ತದ ಕಟ್ಟಕಡೆಯ ವ್ಯಕ್ತಿ ಜರ್ಮನಿ ಸಾಮ್ರಾಜ್ಯದ ಗಡಿಯೊಳಗೆ ಜೀವಿಸುವಂತಾಗಬೇಕು. ಕತ್ತಿಗಳೇ ನೇಗಿಲುಗಳಾಗಬೇಕು. ಯುದ್ಧದಲ್ಲಿ ಹರಿಯುವ ಕಣ್ಣೀರನ್ನು ಬಳಸಿ ಮುಂದಿನ ಜನಾಂಗ ತಮ್ಮ ಅನ್ನವನ್ನು ಬೆಳೆದುಕೊಳ್ಳಬೇಕು. ಜರ್ಮನಿ ಸಾಮ್ರಾಜ್ಯ ಮತ್ತೆ ತಲೆಯೆತ್ತಬೇಕು,”

ಇವು ಜರ್ಮನ್‌ನ ಸರ್ವಾಧಿಕಾರಿ ಅಡಾಲ್ಫ್ ಹಿಟ್ಲರ್‌ನ ಆತ್ಮಕೃತಿ ‘ಮೈನ್ ಕೆಂಪ್’ – ನನ್ನ ಹೋರಾಟ, ಪುಸ್ತಕದಲ್ಲಿನ ಮೊದಲ ಭಾಗದ ಸಾಲುಗಳು.

ಮನುಜ ಕುಲದ ಇತಿಹಾಸದಲ್ಲಿ ಕರಾಳ ಅಧ್ಯಾಯವೊಂದನ್ನು ಸೃಷ್ಟಿಸಿದ ಹಿಟ್ಲರ್ ಕೆಲವರಿಗೆ ಉತ್ತಮ ನಾಯಕ ಎನಿಸಬಲ್ಲ. ಆದರೆ ಬಹುತೇಕ ಜನರ ದೃಷ್ಟಿಯಲ್ಲಿ ಕಡುಕ್ರೂರಿ. ಉಗ್ರ ರಾಷ್ಟ್ರೀಯತೆಯ ಕಡೆಗೆ ನಡೆದ ಹಿಟ್ಲರ್ ಎರಡನೇ ಮಹಾಯುದ್ಧಕ್ಕೆ ಮುನ್ನುಡಿ ಬರೆದು, ಭೂಮಿಯ ಉದ್ದಗಲಕ್ಕೂ ರಕ್ತ ಹರಿಸಿದ್ದು ಇತಿಹಾಸ.

ತನ್ನ ವಾಕ್ಚಾತುರ್ಯದಿಂದ ಅಧಿಕಾರಕ್ಕೇರಿದ ಹಿಟ್ಲರ್ ಜರ್ಮನಿಯಲ್ಲಷ್ಟೇ ಅಲ್ಲದೇ ಇಡೀ ಜಗತ್ತಿನ ತುಂಬಾ ರಕ್ತಸಿಕ್ತ ಅಧ್ಯಾಯವನ್ನು ಬರೆದ. ಧರ್ಮದ ಹುಚ್ಚತ್ತಿ ದಾಷ್ಟ್ಯನಾಗಿ ಮೆರೆದು ಲಕ್ಷಾಂತರ ಯಹೂದಿಗಳ ರಕ್ತ ಹರಿಸಿದ ಹಿಟ್ಲರ್, ತನ್ನ ರಕ್ತವನ್ನೂ ತಾನೇ ನೆಲಕ್ಕೆ ಚೆಲ್ಲಿ ತನ್ನ ಬದುಕನ್ನು ಕೊನೆಗೊಳಿಸಿಕೊಳ್ಳುವುದರ ಜೊತೆಗೆ ಕರಾಳ ಅಧ್ಯಾಯವನ್ನು ಸಹ ಮುಕ್ತಾಯಗೊಳಿಸಿದ.

ಅಧಮ್ಯ ಛಲವಾದಿ ಅಡಾಲ್ಫ್ ಹಿಟ್ಲರ್ ಹುಟ್ಟಿದ್ದು ಇಂದಿನ ಆಸ್ಟ್ರಿಯಾ ಗಣರಾಜ್ಯದಲ್ಲಿರುವ ಬ್ರೌನಾ ಆಮ್ ಇನ್ ಎಂಬ ಪಟ್ಟಣದಲ್ಲಿ. 1889ರ ಏಪ್ರಿಲ್ 20 ಆತನ ಜನ್ಮದಿನ. ಆಲೋಹಿಸ್ ಮತ್ತು ಕ್ಲಾರಾ ಹಿಟ್ಲರ್‌ ದಂಪತಿಗಳ 6 ಜನ ಮಕ್ಕಳಲ್ಲಿ 4ನೇ ಮಗುವಾದ ಅಡಾಲ್ಫ್ ಹಿಟ್ಲರ್, ಮೂರು ವರ್ಷದವನಿದ್ದಾಗಲೇ ಪೋಷಕರ ಜೊತೆ ಜರ್ಮನಿಯ ‘ಪಸ್ಸೌ’ ಪ್ರದೇಶಕ್ಕೆ ಬಂದ. ನಂತರ ಅವನ ಕುಟುಂಬ ‘ಲಿಂಜ್‌’ಗೆ ಸ್ಥಳಾಂತರವಾಯಿತು.

ತಂದೆ ಅಲ್ಲೇ ಭೂಮಿಯನ್ನು ಕೊಂಡು ಕೃಷಿ ಮತ್ತು ಜೇನು ಸಾಕಣೆ ಆರಂಭಿಸಿದರು. ಬಾಲಕ ಹಿಟ್ಲರ್, ಹತ್ತಿರದಲ್ಲಿದ್ದ ಫಿಸ್ಟ್ ಹ್ಯಾಮ್ ಶಾಲೆಯಲ್ಲಿ ವಿದ್ಯಾರಂಭ ಮಾಡಿದ. ‘ಕೌಬಾಯ್ಸ್ ಅಂಡ್ ಇಂಡಿಯನ್ಸ್’ ಎಂಬ ಆಟವಾಡುತ್ತ ಕಾಲ ಕಳೆಯುತ್ತಿದ್ದ. ಅವು ಹಿಟ್ಲರ್‌ನ ಸಂತುಷ್ಟಿಯ ದಿನಗಳಗಾಗಿದ್ದವು.

ಬಾಲಕ ಅಡಾಲ್ಫ್‌ ಹಿಟ್ಲರ್‌

ತಂದೆಯ ಕಸುಬನ್ನೇ ಮುಂದವರೆಸುವಲ್ಲಿ ಆಸಕ್ತಿಯಿಲ್ಲದ ಹಿಟ್ಲರ್, ಓರಗೆಯ ಹುಡುಗರೊಂದಿಗೆ ಪರ-ವಿರೋಧದ ವಾದ ಮಾಡುತ್ತಲೇ ತನ್ನ ಭಾಷಣ ಕಲೆಗೆ ಬೇಕಾದ ಅಡಿಪಾಯ ಹಾಕಿಕೊಂಡಿದ್ದ. ತರಗತಿಯ ನಾಯಕನಾಗಿದ್ದ ಈ ಪುಟ್ಟ ಹುಡುಗನಿಗೆ ಓದು ಸುಲಭವಾಗಿ ಸಿದ್ಧಿಸಿತ್ತು. ಬಿಡುವು ಇದ್ದಾಗಲೆಲ್ಲಾ ಹತ್ತಿರದಲ್ಲೇ ಇದ್ದ ಸನ್ಯಾಸಾಶ್ರಮದಲ್ಲಿ ಸಂಗೀತಾಭ್ಯಾಸ ಮಾಡುತ್ತಿದ್ದ ಹಿಟ್ಲರ್‌ಗೆ ಹಬ್ಬಗಳಲ್ಲಿ ಹಾಡುವ ಅವಕಾಶವೂ ದೊರೆಯುತ್ತಿತ್ತು. ಆದರೆ ತೀಕ್ಷ್ಣ ಬುದ್ದಿಯ ಹಿಟ್ಲರ್‌ನಲ್ಲಿದ್ದ ಕಲೆಗಳ ಬಗ್ಗೆ ಆಸಕ್ತಿಯಿಲ್ಲದ ಅವನ ತಂದೆ, ತಾನೇ ಹಿಟ್ಲರ್ ಭವಿಷ್ಯವನ್ನು ನಿರ್ಧರಿಸಲು ಮುಂದಾಗಿದ್ದ. ಚಿಕ್ಕ ಹುಡುಗನಾಗಿದ್ದ ಹಿಟ್ಲರ್‌ಗೆ ಆಗಿನ್ನು ಇದ್ಯಾವುದರ ಬಗ್ಗೆಯೂ ಗಮನವಿರಲಿಲ್ಲ.

ತನ್ನ ತಂದೆಯ ಗುಜರಿ ವಸ್ತುಗಳ ನಡುವೆ ಸಿಕ್ಕ ಫ್ರೆಂಚ್ ಜರ್ಮನ್ ಯುದ್ಧದ ಕುರಿತಾದ ಪುಸ್ತಕ, ಹಿಟ್ಲರ್‌ನ ಮನಸ್ಸನ್ನು ಯುದ್ಧದ ಕಡೆಗೆ ತಿರುಗಿಸಿತ್ತು. ಅಂದಿನಿಂದ ವಿರೋಚಿತ ಘಟನೆಗಳ ಪುಸ್ತಕಗಳನ್ನು ಓದುವ ಹವ್ಯಾಸ ಬೆಳಸಿಕೊಂಡ ಹಿಟ್ಲರ್‌ಗೆ ಸಮರದ ವಿಷಯಗಳು ಉತ್ಸಾಹವನ್ನು ತುಂಬತೊಡಗಿದ್ದವು.

ಇದರ ಜೊತೆಗೆ ಹುಡುಗ ಹಿಟ್ಲರ್‌ನ ಮನಸ್ಸಿನಲ್ಲಿ ಪ್ರಶ್ನೆಗಳು ಹುಟ್ಟತೊಡಗಿದ್ದವು. ಜರ್ಮನ್ ಜನಾಂಗದೊಳಗೆ ಏನಾದರೂ ವ್ಯತ್ಯಾಸಗಳಿವೆಯೇ? ಪ್ರೆಂಚರ ವಿರುದ್ಧದ ಯುದ್ಧದಲ್ಲಿ ಆಸ್ಟ್ರಿಯಾ ದೇಶದವರೇಕೆ ಭಾಗವಹಿಸಲಿಲ್ಲ? ನನ್ನ ತಂದೆಯೇಕೆ ಈ ಯುದ್ಧದಲ್ಲಿ ಜರ್ಮನಿಯನ್ನು ಪ್ರೋತ್ಸಾಹಿಸಲಿಲ್ಲ? ಜರ್ಮನ್ನರೆಲ್ಲರೂ ಒಂದೇ ಅಲ್ಲವೇ? ಇತ್ಯಾದಿ ಪ್ರಶ್ನೆಗಳು ಮೊದಲ ಬಾರಿಗೆ ಹಿಟ್ಲರ್‌ನ ಮೆದುಳು ಮತ್ತು ಮನಸ್ಸುಗಳಲ್ಲಿ ಗಟ್ಟಿಯಾಗಿ ಉಳಿದುಕೊಂಡವು. ಅವನ ಪ್ರಶ್ನೆಗಳಿಗೆ ಇತರರಿಂದ ಸಿಕ್ಕ ಉತ್ತರವೆಂದರೆ ‘ಎಲ್ಲಾ ಜರ್ಮನ್ನರಿಗೂ ಬಿಸ್‌ಮಾರ್ಕ್‌ ಸಾಮ್ರಾಜ್ಯದ ಭಾಗವಾಗುವ ಅದೃಷ್ಟವಿಲ್ಲ’ ಎಂಬುದು.

ಇದರಿಂದ ಸಮಾಧಾನ ಹೊಂದದ ಹಿಟ್ಲರ್‌ನಲ್ಲಿ ಹೆಚ್ಚಿನ ಜ್ಞಾನಕ್ಕಾಗಿ ಉನ್ನತ ವಿದ್ಯಾಭ್ಯಾಸವನ್ನು ಪಡೆಯುವ ಆಸೆ ಚಿಗುರೊಡೆಯಿತು.

ಹಿಂದೊಮ್ಮೆ ಸರಕಾರಿ ನೌಕರನಾಗಿದ್ದ ಹಿಟ್ಲರ್‌ನ ತಂದೆಗೆ ಮಗನೂ ಕೂಡ ಅದೇ ವೃತ್ತಿ ಹಿಡಿಯಬೇಕೆಂಬ ಆಸೆಯಿತ್ತು. ಅದುವರೆಗೂ ಮರು ಉತ್ತರ ನೀಡದಿದ್ದ ಹಿಟ್ಲರ್, ಅಂದು ತಂದೆಗೆ ಎದುರಾಡಿ ಅಪ್ಪನ ಆಸೆಗೆ ತೀಕ್ಷ್ಣವಾಗಿ ವಿರೋಧ ವ್ಯಕ್ತಪಡಿಸಿದ್ದ. ಹಿಟ್ಲರ್‌ನ ಮನವೊಲಿಸಲು ತಂದೆ ನಡೆಸಿದ ಪ್ರಯತ್ನಗಳೆಲ್ಲವೂ ವಿಫಲವಾದವು. ಹಿಟ್ಲರ್‌ ಮನಸ್ಸಿನೊಳಗೆ ತಾನೊಬ್ಬ ಚಿತ್ರ ಕಲಾವಿದನಾಗಬೇಕೆಂಬ ಆಕಾಂಕ್ಷೆಯಿತ್ತು. ತಂದೆ ಇದಕ್ಕೆ ಅವಕಾಶ ನೀಡಲಿಲ್ಲ. ‘ತಾನು ಬದುಕಿರುವವರೆಗೂ ಅದು ಸಾಧ್ಯವಿಲ್ಲ’ ಎಂದು ತಂದೆ ಹಠ ಹಿಡಿದರು. ತಂದೆ ಮಗನ ನಡುವೆ ಶೀತಲ ಸಮರ ಆರಂಭವಾಗಿತ್ತು. ಈ ಮಧ್ಯೆ ಶಾಲೆಯಲ್ಲಿ ಹಿಟ್ಲರ್‌ನ ಏಕಾಗ್ರತೆ ಕಡಿಮೆಯಾಗುತ್ತಾ ಬಂದಿತ್ತು. ಅದು ಫಲಿತಾಂಶಗಳಲ್ಲಿ ಎದ್ದು ಕಾಣಲಾರಂಭಿಸಿತು.

ಹುಡುಗನಾಗಿದ್ದ ಹಿಟ್ಲರ್ ಮನಸ್ಸಿನೊಳಗೆ ತನ್ನ ಭವಿಷ್ಯದ ಬಗೆಗಿನ ಚಿಂತೆಯ ಹೊರತಾಗಿಯೂ ರಾಷ್ಟ್ರೀಯತೆಯ ಚಿಗುರು ಮೊಳೆಯುತ್ತಲೇ ಇತ್ತು. ಇದಕ್ಕೆ ಇಂಬು ತುಂಬುವಂತೆ ಹಿಟ್ಲರ್ ಯುವಕನಾಗುವ ಹೊತ್ತಿಗೆ ಆಸ್ಟ್ರಿಯಾದಲ್ಲಿನ ರಾಷ್ಟ್ರೀಯತಾ ಸಂಘರ್ಷದಲ್ಲಿ ಭಾಗಿಯಾಗುವ ಅವಕಾಶ ಒದಗಿ ಬಂತು. ಸಾಮ್ರಾಜ್ಯಶಾಹಿ ರಾಷ್ಟ್ರಗೀತೆಯ ಬದಲು, ಸ್ಥಳೀಯ ಗೀತೆಯೊಂದನ್ನು ಪ್ರಾಚಾರಕ್ಕೆ ತರುವ ಆ ಚಳುವಳಿಯಲ್ಲಿ ಹಿಟ್ಲರ್ ಧುಮುಕಿದ. ಆಡಳಿತಶಾಹಿಗಳ ಎಚ್ಚರಿಕೆ, ಶಿಕ್ಷೆಗಳ ನಡುವೆಯೂ ಹೆದರದೆ ಮುನ್ನುಗ್ಗಿ ರಾಜಕೀಯ ತರಬೇತಿ ಪಡೆದ. ಕೆಲದಿನಗಳಲ್ಲಿಯೇ ಉಗ್ರ ಜರ್ಮನ್ ರಾಷ್ಟ್ರೀಯತಾವಾದಿಯಾಗಿ ರೂಪುತಳೆದ.

ಚೂರು ಚೂರಾದ ಜರ್ಮನಿಯ ಇತಿಹಾಸದ ಆಳವನ್ನು ಹೊಕ್ಕಿನೋಡುವ ಕೌತುಕ ಹಿಟ್ಲರ್‌ನಲ್ಲಿ ಬೆಳೆಯತೊಡಗಿತ್ತು. ಇತಿಹಾಸದಲ್ಲಿ ತನಗೆ ಅಗತ್ಯವೆನಿಸಿದ್ದನ್ನು ಮನನ ಮಾಡಿಕೊಳ್ಳುತ್ತಾ ಹೋದ. ಅ ಘಟನೆಗಳು ಅವನ ಮೇಲೆ ಪ್ರಭಾವ ಬೀರುತ್ತಾ ಸಾಗಿದ್ದವು.

ಅವನದೇ ಮನಸ್ಥಿತಿಯ ಇತಿಹಾಸ ಶಿಕ್ಷಕರೊಬ್ಬರು ದೊರೆತದ್ದು ರಾಷ್ಟ್ರೀಯತೆಯ ಪ್ರಭಾವವನ್ನು ಇಮ್ಮಡಿಗೊಳಿಸಿತ್ತು. ಅವರ ನಿರೂಪಣಾ ತಂತ್ರ ಹಿಟ್ಲರ್‌ನಿಗೆ ವಾಸ್ತವವನ್ನು ಮರೆಸಿ, ಭಾವನಾ ಲೋಕದಲ್ಲಿ ತೇಲುವಂತೆ ಮಾಡುತ್ತಿತ್ತು. ಆದಾಗಲೇ ದೊಡ್ಡ ರಾಷ್ಟ್ರಪ್ರೇಮಿಯಾಗಿದ್ದ ಅಡಾಲ್ಫ್ ಹಿಟ್ಲರ್, ಮತ್ತಷ್ಟು ಗಟ್ಟಿಯಾಗುತ್ತಾ ಹೋದ.

ಅಂದಿನ ಸರಕಾರ, ಕಾನೂನು, ವ್ಯವಸ್ಥೆಗಳು ರಾಷ್ಟ್ರವಿರೋಧಿಯಾಗಿ ಕಾಣಿಸತೊಡಗಿದವು. ಜರ್ಮನ್ ರಕ್ತವನ್ನೇ ತುಂಬಿಕೊಂಡಿರುವ ಆಸ್ಟ್ರಿಯಾದವರಿಗೇಕೆ ಜರ್ಮನಿಯ ಮೇಲೆ ಪ್ರೀತಿಯಿಲ್ಲ ಎಂಬ ಪ್ರಶ್ನೆ ಹಿಟ್ಲರ್‌ನಲ್ಲಿ ಕಾಡಲಾರಂಭಿಸಿತು.

ಆ ವೇಳೆಗೆ ಹಿಟ್ಲರ್‌ನಲ್ಲಿ ಜರ್ಮನ್‌ ರಕ್ತ ಹೊಂದಿರುವ ಎಲ್ಲರಲ್ಲಿ ರಾಷ್ಟ್ರಭಕ್ತಿಯನ್ನು ಹೇಗೆ ತುಂಬಬೇಕೆಂಬ ಯೋಚನೆಗಳು ಮೂಡಹತ್ತಿದ್ದವು. ಜರ್ಮನೀಯತೆಯನ್ನು ಉತ್ತೇಜಿಸುವ ಏಕೈಕ ದಾರಿಯೆಂದರೆ, ಆಸ್ಟ್ರೀಯಾದ ಅಸ್ತಿತ್ವವನ್ನು ಕೊನೆಗೊಳಿಸಬೇಕು. ರಾಷ್ಟ್ರೀಯತೆಯೆಂದರೆ ರಾಜವಂಶಗಳನ್ನು ಪ್ರೀತಿಸುವುದಲ್ಲ. ಈ ತೆರನಾದ ರಾಷ್ಟ್ರಪ್ರೇಮ ಜರ್ಮನಿಯನ್ನು ದೌರ್ಭಾಗ್ಯದತ್ತ ದೂಡುತ್ತದೆ ಎಂದು ಹಿಟ್ಲರ್‌ ಬಲವಾಗಿ ನಂಬಿದ.

ಈ ನಂಬಿಕೆ ಆತನನ್ನು ಒಂದುಗೂಡಿದ ಜರ್ಮನಿ-ಆಸ್ಟ್ರಿಯಾ ಸಾಮ್ರಾಜ್ಯದ ಕನಸನ್ನು ಭದ್ರವಾಗಿಸಿತು. ಮುಂದಿನ ದಿನಗಳಲ್ಲೂ ಸಹ ಇತಿಹಾಸದ ವಿವಿಧ ಮಜಲುಗಳನ್ನು ಇಣಕಿ ನೋಡುವ ಹವ್ಯಾಸ ಆತನಿಂದ ದೂರವಾಗಲಿಲ್ಲ. ಮನಸಿನ ಬದಲಾಗಿ ಮೆದುಳು ಹಿಟ್ಲರ್‌ನನ್ನು ನಡೆಸತೊಡಗಿತು.

ಈ ಎಲ್ಲಾ ಯೋಚನೆಗಳು ಅಡಾಲ್ಫ್ ಹಿಟ್ಲರ್‌ನನ್ನು ಇತರರಿಗಿಂತ ವಿಭಿನ್ನವಾಗಿಸತೊಡಗಿತು. ತಂದೆಯ ವೃತ್ತಿಯನ್ನು ಮುನ್ನಡೆಸಲು ಹಿಟ್ಲರ್‌ಗೆ ಸಾಧ್ಯವಾಗದಂತೆ ಮಾಡಿತು. ವ್ಯವಸ್ಥೆಯ ವಿರೋಧಿಯಾದ ಹಿಟ್ಲರ್ ಸರಕಾರಿ ಸೇವೆಯನ್ನು ನಿರ್ವಹಿಸಲು ಅಸಮರ್ಥನಾದ. ತನ್ನೊಳಗೆ ಈ ಯೋಚನೆಗಳು ಮೂಡಿದ್ದು ತನ್ನ ಭಾಗ್ಯವೆಂದೇ ಹಿಟ್ಲರ್ ಪರಿಗಣಿಸಿದ್ದ.

ತಂದೆ ಇಚ್ಚಿಸಿದ ಕೆಲಸವನ್ನು ಮಾಡಲು ಮನಸ್ಸಿಲ್ಲದಿದ್ದರೂ, ಹಿಟ್ಲರ್ ತಂದೆ ಆಸೆಯಂತೆ ಶಿಕ್ಷಣ ಮುಂದುವರೆಸಿದ್ದ. ಆದರೆ ಹಠಾತ್ತನೆ ಒದಗಿಬಂದ ಅನಾರೋಗ್ಯ ಹಿಟ್ಲರ್‌ನ ಜೀವನದ ದಿಕ್ಕನ್ನು ಬದಲಿಸಿತು. ಶಾಲೆಗೆ ಹೋಗುವುದನ್ನು ತಪ್ಪಿಸಿತು. ಆದರೆ ತಾಯಿಯ ಮರಣ ಹಿಟ್ಲರ್‌ನ ಮಹಾತ್ವಾಕಾಂಕ್ಷೆಗಳಿಗೆ ತೊಡಕಾಗಿ ಪರಿಣಮಿಸಿತಾದರೂ, ಹಿಟ್ಲರ್ ಬೇರೆಡೆಗೆ ತೆರಳಲು ಅಡ್ಡಿಪಡಿಸಲಿಲ್ಲ. ಸೂಟ್‌ಕೇಸ್‌ ತುಂಬಾ ಬಟ್ಟೆಗಳನ್ನು ತುಂಬಿಕೊಂಡ ಹಿಟ್ಲರ್ ಆಸ್ಟ್ರಿಯಾದ ರಾಜಧಾನಿ ವಿಯೆನ್ನಾ ಕಡೆಗೆ ಪಯಣ ಆರಂಭಿಸಿದ.

ಕಣ್ಣುಗಳೊಳಗೆ ಹೊಸ ಭವಿಷ್ಯದ ಕನಸು ತುಂಬಿತ್ತು. ಚಿತ್ರ ಕಲಾವಿದನಾಗಬೇಕೆಂಬ ಇಚ್ಚೆ ಹೊತ್ತು ಹೊರಟ ಹಿಟ್ಲರ್‌ ಮನಸ್ಸಿನಲ್ಲಿ ಉಗ್ರ ರಾಷ್ಟ್ರೀಯತೆಯ ಬೀಜಗಳು ಬೆಚ್ಚಗೆ ಮಲಗಿದ್ದವು.

(ನಾಳೆಗೆ)