Home news-in-brief ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ; ತಿದ್ದುಪಡಿಗೆ ರಾಷ್ಟ್ರಪತಿಗಳ ಅಂಕಿತ

ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ; ತಿದ್ದುಪಡಿಗೆ ರಾಷ್ಟ್ರಪತಿಗಳ ಅಂಕಿತ

SHARE

ಶನಿವಾರ ಸಂಸತ್ತು ಪೊಕ್ಸೋ ಕಾಯ್ದೆಗೆ ತಿದ್ದುಪಡಿ ತಂದು ಹೊರಡಿಸಿರುವ ಸುಗ್ರೀವಾಜ್ಞೆಗೆ ಭಾನುವಾರ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಸಹಿ ಹಾಕಿದ್ದಾರೆ. ಇನ್ನು ಮುಂದೆ 12 ವರ್ಷದೊಳಗಿನ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗುವವರಿಗೆ ನ್ಯಾಯಾಲಯಗಳು ಗಲ್ಲು ಶಿಕ್ಷೆ ವಿಧಿಸಲಿವೆ.

ಕ್ರಿಮಿನಲ್‌ ಕಾನೂನಿನ ತಿದ್ದುಪಡಿ ಆದೇಶವು ಭಾರತೀಯ ದಂಡ ಸಂಹಿತೆ(ಐಸಿಪಿ), ಎವಿಡೆನ್ಸ್ ಆಕ್ಟ್‌, ಕೋಡ್‌ ಆಫ್‌ ಕ್ರಿಮಿನಲ್‌ ಪ್ರೋಸಿಜರ್‌, ಪೋಕ್ಸೊ ಕಾಯಿದೆಗಳಿಗೆ ತಿದ್ದುಪಡಿ ತಂದು, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ನಡೆಸುವವರಿಗೆ ಮರಣ ದಂಡನೆಯನ್ನು ವಿಧಿಸುವಂತೆ ಕಾಯ್ದೆಗಳನ್ನು ಬದಲಾಯಿಸಲಾಗಿದೆ.

ಈ ಆದೇಶವು ಮಹಿಳೆಯರ ಮೇಲೆ ಅತ್ಯಾಚಾರ ನಡೆಸಿದವರಿಗೆ ವಿಧಿಸಲಾಗುತ್ತಿದ್ದ 7 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಯನ್ನು 10 ವರ್ಷಕ್ಕೆ ಏರಿಸಿದೆ. 16 ವರ್ಷದ ಒಳಗಿನ ಬಾಲಕಿಯರ ಮೇಲೆ ಅತ್ಯಾಚಾರ ನಡೆಸುವವರಿಗೆ ವಿಧಿಸುತ್ತಿದ್ದ 10 ವರ್ಷಗಳ ಶಿಕ್ಷೆಯನ್ನು 20 ವರ್ಷಗಳಿಗಿಂತಲೂ ಹೆಚ್ಚಿನ ಶಿಕ್ಷೆ ವಿಧಿಸಲು ಅನುವು ಮಾಡಿಕೊಟ್ಟಿದೆ. ಈ ಶಿಕ್ಷೆಯನ್ನು ಪಡೆದ ಅಪರಾಧಿಯು ನೈಸರ್ಗಿಕವಾಗಿ ಸಾವನ್ನಪ್ಪುವವರಗೂ ಕಾರಾಗೃಹದಲ್ಲೇ ಇರಬೇಕಾಗಬಹುದು (ಜೀವಿತಾವಧಿ).

ದೆಹಲಿಯಲ್ಲಿ 2012ರ ಡಿಸೆಂಬರ್‌ನಲ್ಲಿ ಅತ್ಯಾಚಾರಕ್ಕೆ ಒಳಪಟ್ಟು ಸಾವನ್ನಪ್ಪಿದ್ದ ನಿರ್ಭಯಾರ ತಾಯಿ ಆಶಾ ದೇವಿ ಸರಕಾರದ ಈ ಆದೇಶವನ್ನು ಸ್ವಾಗತಿಸಿದ್ದಾರೆ. ಆದರೆ ಪ್ರತಿಯೊಬ್ಬ ಅತ್ಯಾಚಾರಿಗೂ ಕೂಡ ಗಲ್ಲು ಶಿಕ್ಷೆಯನ್ನೇ ನೀಡಬೇಕು ಎಂಬ ಆಶಯವನ್ನು ವ್ಯಕ್ತ ಪಡಿಸಿದ್ದಾರೆ. ಸರಕಾರದ ಈ ನಡೆ ಸರಿಯಾಗಿದೆ, ಆದರೆ 12 ವರ್ಷವನ್ನು ದಾಟಿದವರ ಕತೆಯೇನು ಎಂದು ಆಶಾ ದೇವಿ ಪ್ರಶ್ನಿಸಿದ್ದಾರೆ. ಅತ್ಯಾಚಾರಕ್ಕಿಂತಲೂ ಘೋರವಾದದ್ದು ಮತ್ತೊಂದಿಲ್ಲ ಎಂದಿರುವ ಆಶಾದೇವಿ, ಎಲ್ಲ ಅತ್ಯಾಚಾರಿಗಳಿಗೂ ಮರಣದಂಡನೆಯನ್ನೇ ವಿಧಿಸಬೇಕಿತ್ತು ಎಂದಿದ್ದಾರೆ ಎಂದು ಎಎನ್‌ಐ ಸುದ್ದಿ ಸಂಸ್ಥೆ ತಿಳಿಸಿದೆ.

ಕೆಲವು ಅಪರಾಧಗಳನ್ನು ಮರಣ ದಂಡನೆ ವಿಧಿಸುವುದರ ಮೂಲಕ ತಡೆಯಲು ಸಾಧ್ಯವಿಲ್ಲ. ಅತ್ಯಾಚಾರ ಮತ್ತು ಕೊಲೆ ಎರಡಕ್ಕೂ ಕೂಡ ಒಂದೇ ಶಿಕ್ಷೆ ಎಂದಾದರೆ ಅತ್ಯಾಚಾರ ನಡೆಸಿದವನು ಕೊಲ್ಲಲೂ ಹೇಸುವುದಿಲ್ಲ. ಈ ಬದಲಾವಣೆ ಅತ್ಯಾಚಾರ ನಡೆಸಿದ ನಂತರ ಕೊಲೆ ಮಾಡುವ ಪ್ರಕರಣಗಳ ಸಂಖ್ಯೆ ಹೆಚ್ಚಾಗಲು ದಾರಿಯಾಗಬಹುದು ಎಂಬ ವಾದವೂ ಕೇಳಿ ಬರುತ್ತಿದೆ.

ನ್ಯಾಷನಲ್‌ ಕ್ರೈಮ್‌ ರೆಕಾರ್ಡ್ಸ್ ಬ್ಯೂರೋ(ಎನ್‌ಸಿಆರ್‌ಬಿ)ಯ ಇತ್ತೀಚಿನ ಅಂಕಿ ಅಂಶಗಳ ಪ್ರಕಾರ 2016ರಲ್ಲಿ ಪೊಸ್ಕೋ ಕಾಯ್ದೆಯಡಿಯಲ್ಲಿ 64,138 ಪ್ರಕರಣಗಳು ದಾಖಲಾಗಿದ್ದವು. ಅವುಗಳಲ್ಲಿ ಶಿಕ್ಷೆ ದೊರೆತಿರುವುದು ಕೇವಲ 1,869 ಪ್ರಕರಣಗಳಿಗಷ್ಟೇ. ಶೇ. 94ರಷ್ಟು ಪ್ರಕರಣಗಳಲ್ಲಿ ಅತ್ಯಾಚಾರ ನಡೆಸಿದ ವ್ಯಕ್ತಿ ಸಂತ್ರಸ್ತೆಗೆ ಗೊತ್ತಿರುವವನೇ ಆಗಿರುತ್ತಾನೆ. ಕುಟುಂಬಕ್ಕೆ ಹತ್ತಿರದ ವ್ಯಕ್ತಿಯೋ, ನೆರೆ ಮನೆಯವನೋ ಅಥವಾ ಪರಿಚಿತ ವ್ಯಕ್ತಿಯಾಗಿರುತ್ತಾನೆ. ದಾಖಲಾಗಿರುವ ಮೊಖದ್ದಮೆಗಳಲ್ಲಿ ಶೇ.86ರಷ್ಟು ಮೊಖದ್ದಮೆಗಳು ಹಾಗೇ ಕೂತಿವೆ. ಪರಿಸ್ಥಿತಿ ಹೀಗಿರುವಾಗ ಕಾಯ್ದೆಗೆ ತಂದ ತಿದ್ದುಪಡಿಗಳು ಅತ್ಯಾಚಾರಗಳನ್ನು ಕಡಿಮೆ ಮಾಡುತ್ತವೆಯೇ ಎಂಬ ಪ್ರಶ್ನೆ ಸಾಮಾಜಿಕ ವಲಯದಲ್ಲಿ ಉದ್ಭವಿಸಿದೆ.

ಇವು ಕೇವಲ ದಾಖಲಾಗುವ ಪ್ರಕರಣಗಳ ವಿಷಯವಷ್ಟೇ. ಭಾರತದಲ್ಲಿ ಅದೆಷ್ಟೋ ಅತ್ಯಾಚಾರ, ಲೈಂಗಿಕ ದೌರ್ಜನ್ಯದ ಪ್ರಕರಣಗಳು ಮನೆ ಬಾಗಿಲಿನಿಂದ ಆಚೆ ಬರುವುದಿಲ್ಲ. ಈ ಸಂಧರ್ಭದಲ್ಲಿ ಮಹಿಳೆಯರಿಗೆ ಕಾನೂನು ಯಾವ ರೀತಿಯ ನ್ಯಾಯವನ್ನು ಒದಗಿಸುತ್ತದೆ ಎನ್ನುವುದೂ ಕೂಡ ಸ್ಪಷ್ಟಗೊಳ್ಳಬೇಕಿದೆ.

ವರದಿಗಳ ಪ್ರಕಾರ ಭಾರತದಲ್ಲಿ ಮರಣ ದಂಡನೆ ಶಿಕ್ಷೆಯನ್ನು ಪಡೆದಿರುವವರಲ್ಲಿ ಶೇ.23ರಷ್ಟು ಅಪರಾಧಿಗಳು ಶಾಲೆಗಳ ಮುಖವನ್ನೇ ಕಂಡಿಲ್ಲ. ಶೇ.9.6ರಷ್ಟು ಜನ ಪ್ರಾರ್ಥಮಿಕ ಶಿಕ್ಷಣವನ್ನು ಪಡೆದಿಲ್ಲ. ಶೇ.61.6ರಷ್ಟು ಮಂದಿ ಮಾಧ್ಯಮಿಕ ಶಿಕ್ಷಣವನ್ನು ಪೂರ್ಣಗೊಳಿಸಿಲ್ಲ. ಇದಷ್ಟೇ ಅಲ್ಲದೇ ಗಲ್ಲು ಶಿಕ್ಷೆಗೆ ಗುರಿಯಾದವರಲ್ಲಿ ಶೇ.76ರಷ್ಟು ಜನ ಹಿಂದುಳಿದ ಸಮುದಾಯಗಳು ಮತ್ತು ಅಲ್ಪಸಂಖ್ಯಾಂತ ವರ್ಗಕ್ಕೆ ಸೇರಿದವರು ಮತ್ತು ಶೇ.74ರಷ್ಟು ಜನ ಆರ್ಥಿಕವಾಗಿ ದುರ್ಬಲರು ಎಂದು ವರದಿಗಳು ತಿಳಿಸುತ್ತವೆ.

ಅಪರಾಧಗಳ ಹಿನ್ನೆಲೆಯಲ್ಲಿ ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿಗತಿಗಳೂ ಕೂಡ ಗುರುತರ ಪರಿಣಾಮವನ್ನು ಬೀರುತ್ತವೆ. ಹೀಗಿರುವಾಗ ಬರೀ ಮರಣ ದಂಡನೆಯನ್ನು ವಿಧಿಸುತ್ತಾ ಸಾಗುವುದರ ಬದಲು ಆರ್ಥಿಕ ಹಾಗೂ ಸಾಮಾಜಿಕ ಸಭಲತೆಗಳ ಕಡೆಗೆ ವ್ಯವಸ್ಥೆ ಗಮನ ಹರಿಸಬೇಕಿರುವ ತುರ್ತು ಕೂಡ ನಮ್ಮ ಮುಂದಿದೆ.