Home news-for-4-1-display ‘ಆಪರೇಷನ್‌ 136’: ಮಾಧ್ಯಮಗಳನ್ನೇ ಬೆತ್ತಲಾಗಿಸಿದ ಕೋಬ್ರಾಪೋಸ್ಟ್ ಹೊಸ ಕುಟುಕು ಕಾರ್ಯಾಚರಣೆ

‘ಆಪರೇಷನ್‌ 136’: ಮಾಧ್ಯಮಗಳನ್ನೇ ಬೆತ್ತಲಾಗಿಸಿದ ಕೋಬ್ರಾಪೋಸ್ಟ್ ಹೊಸ ಕುಟುಕು ಕಾರ್ಯಾಚರಣೆ

SHARE

‘ಭಾರತದ ಮಾಧ್ಯಮಗಳು ಹಿಂದುತ್ವಾ ಅಜೆಂಡಾವನ್ನು ಮುನ್ನೆಲೆಗೆ ತರುವ ಸುದ್ದಿಗಳನ್ನು ನೀಡಿ, ಜನರ ಮನಸ್ಸನ್ನು ಒಂದು ಕಡೆಗೆ ಕೇಂದ್ರೀಕರಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುವ ನಿಟ್ಟಿನಲ್ಲಿ ಯಾವ ಮಟ್ಟಕ್ಕೆ ಬೇಕಾದರೂ ಇಳಿಯಲು ತಯಾರಿವೆ..’, ಹೀಗೊಂದು ಆಘಾತಕಾರಿ ಸುದ್ದಿಯನ್ನು ಕೋಬ್ರಾಪೋಸ್ಟ್‌ ಜಾಲತಾಣ  ತನ್ನ ಹೊಸ ಕುಟುಕು ಕಾರ್ಯಾಚರಣೆಯಲ್ಲಿ ಬಿಚ್ಚಿಟ್ಟಿದೆ.

ದೇಶದ ಮಾಧ್ಯಮಗಳು ಹಿಂದುತ್ವ ಎಂಬ ಸಿದ್ಧಾಂತವನ್ನಿಡಿದು, ಮತದಾರನ ಮನಸ್ಸನ್ನು ಆಧ್ಯಾತ್ಮದ ಕಡೆಗೆ ಸೆಳೆಯುತ್ತಿವೆ. ಈ ಮೂಲಕ ಚುನಾವಣೆಯಲ್ಲಿ ನಿರ್ದಿಷ್ಟ ಪಕ್ಷವೊಂದನ್ನು ಅಧಿಕಾರಕ್ಕೆ ತರುವಲ್ಲಿ ನಿರತವಾಗಿವೆ ಎಂಬ ಆಂಶವನ್ನು ಕೋಬ್ರಾಪೋಸ್ಟ್‌ ಬಯಲು ಮಾಡಿದೆ.

ಹಿರಿಯ ಪತ್ರಕರ್ತ ಪುಷ್ಪ ಶರ್ಮಾ ಇಂತದ್ದೊಂದು ಕುಟುಕು ಕಾರ್ಯಯಾಚರಣೆಯನ್ನು ನಡೆಸಿದ್ದು, ಹೇಗೆ ಮಾಧ್ಯಮಗಳು ಪಕ್ಷವೊಂದರ ಹಿತಾಸಕ್ತಿಗಾಗಿ ದುಡಿಯುತ್ತಿದೆ ಎಂಬುದನ್ನು ಬಯಲಿಗೆಳೆದಿದ್ದಾರೆ. ಕೋಬ್ರಾಪೋಸ್ಟ್‌ ಸರಣಿಗಳ ರೂಪದಲ್ಲಿ ತನಿಖಾ ವರದಿಯನ್ನು ಬಿಡುಗಡೆ ಮಾಡಲಿದೆ. ಸದ್ಯ ಸರಣಿ ವರದಿಗಳ ಮೊದಲನೆಯ ಭಾಗ ಸೋಮವಾರ ಬಿಡುಗಡೆಗೊಂಡಿದೆ.

ಪತ್ರಿಕೆ, ಸುದ್ದಿವಾಹಿನಿ ಜತೆಗೆ ಆನ್‌ಲೈನ್‌ ಮಾಧ್ಯಮಗಳೂ ಕೂಡ ಇಂತಹದ್ದೊಂದು ಕಾರ್ಯಕ್ಕೆ ಕೈಹಾಕಿವೆ. ಕೋಮು ವಿಚಾರಗಳನ್ನು ಜನರಲ್ಲಿ ಬಿತ್ತು ರಾಜಕೀಯ ಬೇಳೆ ಬೇಯಿಸುವ ಕೆಲಸವನ್ನು ಈ ಸುದ್ದಿ ಮಾಧ್ಯಮಗಳು ಮಾಡುತ್ತಿವೆ ಎಂದು ಕೋಬ್ರಾ ಪೋಸ್ಟ್‌ ಹೇಳಿದೆ.

ಈ ತನಿಖೆಯ ಭಾಗವಾಗಿ ಪುಷ್ಪ ಶರ್ಮಾ ಹಲವಾರು ಮಾಧ್ಯಮಗಳ ಮಾಲೀಕರು, ನಿರ್ಧಾರ ಕೈಗೊಳ್ಳಬಲ್ಲ ಹುದ್ದೆಗಳಲ್ಲಿರುವ ಹೆಸರಾಂತ ಪತ್ರಕರ್ತರನ್ನು ಭೇಟಿಯಾಗಿದ್ದಾರೆ. ನಿರ್ದಿಷ್ಟ ಹಿತಾಸಕ್ತಿಗಳನ್ನು ಹೇರುವ ಸಲುವಾಗಿ 6 ಕೋಟಿಯಿಂದ 60 ಕೋಟಿಗಳವರೆಗೆ ಮಾಧ್ಯಮಗಳ ವೇದಿಕೆಗಳು ಬೀಕರಿಯಾಗುತ್ತಿವೆ ಎಂಬ ಮಾಹಿತಿಯನ್ನು ಶರ್ಮ ಕಲೆ ಹಾಕಿದ್ದಾರೆ.

ಪ್ಲಾಟ್‌ಫಾರ್ಮ್‌ಗಳು ಮಾರಾಟಗೊಂಡ ನಂತರ ಮೊದಲ ಮೂರು ತಿಂಗಳ ಕಾಲ ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಪಕ್ಷದ ಸಿದ್ಧಾಂತಕ್ಕೆ ಸರಿ ಹೊಂದುವ ವಾತಾವರಣವನ್ನು ನಿರ್ಮಿಸಲಾಗುತ್ತದೆ. ನಂತರ ವಿನಯ್‌ ಕಾಟಿಯಾರ್‌, ಉಮಾ ಭಾರತಿ, ಮೋಹನ್‌ ಭಾಗವತ್‌ರಂತಹ ಹಿಂದೂ ನಾಯಕರನ್ನು ಹೆಚ್ಚಾಗಿ ಪ್ರಚಾರಕ್ಕೆ ತರಲಾಗುತ್ತದೆ. ವಿರೋಧ ನಾಯಕರಾದ ರಾಹುಲ್‌ ಗಾಂಧಿ, ಅಖಿಲೇಶ್ ಯಾದವ್‌, ಮಾಯಾವತಿ ಇತ್ಯಾದಿ ನಾಯಕರನ್ನು ‘ಪಪ್ಪು’, ‘ಬುವಾ ಅಂಡ್‌ ಬಬುವಾ’ ಇತ್ಯಾದಿ ಹಾಸ್ಯಾಸ್ಪದ ಪದಗಳಿಂದ ಸಂಭೋಧಿಸಿ ಅವರ ಮೇಲಿನ ಅಭಿಮಾನವನ್ನು ಮೊಟುಕುಗೊಳಿಸಲಾಗುತ್ತದೆ. ಮಾಧ್ಯಮಗಳಷ್ಟೇ ಅಲ್ಲ ಸಾಮಾಜಿಕ ಜಾಲತಾಣಗಳಲ್ಲೂ ಇಂತಹ ಪದಗಳನ್ನು ಬಳಸಿ ಅವರ ಪ್ರತಿಷ್ಠೆಯನ್ನು ಕುಗ್ಗಿಸಲಾಗುತ್ತದೆ.

ಕೋಬ್ರಾ ಪೋಸ್ಟ್‌ ತನಿಖೆಯ ಪ್ರಕಾರ, ನಾಲ್ಕನೇ ಅಂಗ ಎನಿಸಿಕೊಂಡಿರುವ ಮಾಧ್ಯಮ ವರ್ಗ ಭಾರತದ ಮಟ್ಟಿಗೆ ಮಾರಾಟಕ್ಕೆ ಇಡಲ್ಪಟ್ಟಿದೆ. ಕುಟುಕು ಕಾರ್ಯಾಚರಣೆಯನ್ನು ನಡೆಸಿರುವ ಪುಷ್ಪ ಶರ್ಮಾ ತಮ್ಮ ಒಟ್ಟಾರೆ ತನಿಖೆಯಲ್ಲಿ ಕಂಡುಕೊಂಡಿರುವ ವಿಷಯಗಳ ಸಾರಾಂಶ ಇಲ್ಲಿದೆ.

  • ಮೀಡಿಯಾಗಳು ಹಿಂದುತ್ವದ ಅಜೆಂಡಾವನ್ನು ಮುನ್ನೆಲೆ ತರಲು ಒಪ್ಪಿಕೊಂಡಿವೆ.
  • ಕೋಮು ಧ್ರುವೀಕರಣವನ್ನು ಮಾಡುವಂತಹ ಸುದ್ದಿಗಳನ್ನು ಪ್ರಕಟಿಸಲು ಮಾಧ್ಯಮಗಳು ಸಿದ್ಧವಾಗಿವೆ.
  • ಅಧಿಕಾರದಲ್ಲಿರುವ ಪಕ್ಷದ ವಿರೋಧಿಗಳ ಪ್ರಭಾವವನ್ನು ತಗ್ಗಿಸಲು ಮಾನನಷ್ಟಕರ ಸುದ್ದಿಗಳನ್ನು ಹಂಚುವಲ್ಲಿ ನಿರತವಾಗಿದೆ.
  • ಕಾಳ ಧನವನ್ನು ಸ್ವೀಕರಿಸಿ, ತಮಗೆ ವಹಿಸಲಾಗಿರುವ ಜವಾಬ್ದಾರಿಯನ್ನು ನಿರ್ಭೀತಿಯಿಂದ ಮಾಡುತ್ತಿವೆ.

ಹಲವು ಮಾಧ್ಯಮಗಳ ಮಾಲೀಕರು, ನಿರ್ಧಾರಯುತ ಹುದ್ದೆಯಲ್ಲಿರುವವರು ಆರ್‌ಎಸ್‌ಎಸ್‌ನ ಜತೆಗಾರರಾಗಿದ್ದು ಅಥವಾ ಹಿಂದುತ್ವದ ಪರ ಮನಸ್ಥಿತಿಯನ್ನು ಹೊಂದಿದ್ದು, ಪತ್ರಿಕೋದ್ಯಮದ ನೀತಿಗಳನ್ನು ಮರೆತಿದ್ದಾರೆ. ಅಧಿಕಾರದಲ್ಲಿರುವ ಪಕ್ಷದ ಪರವಾಗಿ ಸುದ್ದಿ ನೀಡಲು ಕಾತುರರಾಗಿದ್ದಾರೆ. ಜಾಹಿರಾತುಗಳನ್ನು ಪ್ರಕಟಿಸುತ್ತಿದ್ದಾರೆ. ತಮ್ಮ ಜಾಲತಾಣಗಳು, ಇ-ಪೇಪರ್‌, ಫೇಸ್‌ಬುಕ್‌, ಟ್ವಿಟ್ಟರ್‌ ಖಾತೆ ಇತ್ಯಾದಿಗಳನ್ನು ಹಿಂದುತ್ವವನ್ನು ಹೇರುವುದಕ್ಕಾಗಿಯೇ ಬಳಸಿಕೊಳ್ಳುತ್ತಿದ್ದಾರೆ.

ಕಾಂಗ್ರೆಸ್‌, ಜೆಡಿ, ಎಸ್‌ಪಿ ಮತ್ತು ಬಿಎಸ್‌ಪಿಗಳನ್ನು ಗುರಿಯನ್ನಾಗಿಸಿಕೊಂಡು ವರದಿಗಳು ಸಿದ್ಧವಾಗುತ್ತಿವೆ.

ಈ ತನಿಖೆಗೆ ಕೋಬ್ರಾಪೋಸ್ಟ್‌ ‘ಆಪರೇಷನ್‌ 136’ ಎನ್ನುವ ಹೆಸರನ್ನು ಕೊಟ್ಟಿದೆ. ಇದಕ್ಕೆ ಕಾರಣ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಪತ್ರಿಕಾ ಸ್ವಾತಂತ್ರ್ಯ ಹೊಂದಿರುವ ಆಧಾರದ ಮೇಲೆ ತಯಾರಾದ ಪಟ್ಟಿಯಲ್ಲಿ ಭಾರತ 136ನೇ ಸ್ಥಾನದಲ್ಲಿದೆ.

ಕುಟುಕು ಕಾರ್ಯಾಚರಣೆಯ ಮೊದಲ ಭಾಗದಲ್ಲಿ, ಇಂಡಿಯಾ ಟಿವಿ, ದೈನಿಕ್‌ ಜಾಗ್ರನ್‌, ಹಿಂದಿ ಖಬರ್‌, ಎಸ್‌ಎಬಿ ಟಿವಿ, ಡಿಎನ್‌ಎ, ಅಮರ್ ಉಜಾಲ, ಯುಎನ್‌ಐ, ನೈನ್‌ಎಕ್ಸ್‌ ಟಶನ್‌, ಸಮಾಚಾರ್‌ ಪ್ಲಸ್‌, ಎಚ್‌ಎನ್‌ಎನ್‌ 24*7, ಪಂಜಾಬ್ ಕೇಸರಿ, ಸ್ಡತಂತ್ರ ಭಾರತ್, ಸ್ಕೂಪ್‌ವೂಪ್‌, ರೆಡಿಫ್.ಕಾಂ, ಇಂಡಿಯಾ ವಾಚ್‌, ಆಜ್‌ ಮತ್ತು ಸಾಧ್ನಾ ಪ್ರೈಮ್‌ ನ್ಯೂಸ್ ಮಾಧ್ಯಮ ಸಂಸ್ಥೆಗಳ ಬಣ್ಣ ಬಯಲಾಗಿದೆ.