Home Inside Story ನಾಯಕತ್ವದ ಮೊಟ್ಟೆ, ಸಿದ್ದರಾಮಯ್ಯ ಬುಟ್ಟಿಗೆ: ರಾಹುಲ್ ಗಾಂಧಿ ಹೈಕ ಪ್ರವಾಸ ಮತ್ತು ಪರಿಣಾಮ

ನಾಯಕತ್ವದ ಮೊಟ್ಟೆ, ಸಿದ್ದರಾಮಯ್ಯ ಬುಟ್ಟಿಗೆ: ರಾಹುಲ್ ಗಾಂಧಿ ಹೈಕ ಪ್ರವಾಸ ಮತ್ತು ಪರಿಣಾಮ

SHARE

ಕಾಂಗ್ರೆಸ್ ಪಕ್ಷದ ಕೇಂದ್ರ ನಾಯಕತ್ವ ಬುದ್ಧಿವಂತಿಕೆ ಪ್ರದರ್ಶಿಸುತ್ತಿದೆ. ಕರ್ನಾಟಕದಲ್ಲಿ ಮತ್ತೆ ಅಧಿಕಾರಕ್ಕೆ ಮರಳಲು ಇದ್ದ ನಾಯಕತ್ವದ ಗೊಂದಲವನ್ನು ಅರಾಮಾಗಿಯೇ ನಿವಾರಿಸಿಕೊಂಡಿದೆ. ಅದಕ್ಕೆ ಕಾರಣವಾದವರು ಮತ್ಯಾರು ಅಲ್ಲ, ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ.

ಮೇ ತಿಂಗಳಿನಲ್ಲಿ ನಡೆಯಲಿರುವ ಕರ್ನಾಟಕ ವಿಧಾನಸಭೆ ಚುನಾವಣೆಗಾಗಿ ಪ್ರಚಾರವನ್ನು ಆರಂಭಿಸಿರುವ ರಾಹುಲ್ ಗಾಂಧಿ, ಶಾಸಕಾಂಗ ಪಕ್ಷವನ್ನು ಸಿದ್ದರಾಮಯ್ಯ ಅವರೇ ಮುನ್ನಡೆಸಲಿದ್ದಾರೆ ಎಂದು ನೇರವಾಗಿಯೇ ಹೇಳಿಕೆ ನೀಡಿದ್ದಾರೆ. ಅದು ಒಮ್ಮೆ ಅಲ್ಲ, ಬದಲಿಗೆ ಕಾಂಗ್ರೆಸ್ ಭದ್ರಕೋಟೆ ಉತ್ತರ ಕರ್ನಾಟಕದ ಪ್ರದೇಶದಲ್ಲಿ ಹಲವು ಬಾರಿ ರಾಹುಲ್ ಇದೇ ಮಾತನ್ನು ಪುನರಾರ್ವತನೆ ಮಾಡಿದ್ದಾರೆ.

ರಾಹುಲ್ ಗಾಂಧಿ ಹೇಳಿದ್ದಿಷ್ಟು, “ನಾನು ಜನರಿಗೆ ವಿಶೇಷವಾಗಿ ಯುವಕರಿಗೆ ಹೇಳಲು ಬಯಸುತ್ತೇನೆ. ಕಳೆದ 60 ವರ್ಷಗಳಲ್ಲಿ ಕೇಂದ್ರದಲ್ಲಿ ನಾವು ಅಧಿಕಾರ ನಡೆಸಿದ ಸಮಯದಲ್ಲಿ ಸಮುದಾಯಗಳ ನಡುವೆ ಭೇದಭಾವ ಇಲ್ಲದೆ ಅಧಿಕಾರ ನಡೆಸಿದ್ದೇವೆ. ಇದೇ ಹಾದಿಯಲ್ಲಿ ಮುಂದುವರಿಯಲಿದ್ದೇವೆ. ಹಾಗೆಯೇ, ಕರ್ನಾಟಕದಲ್ಲಿಯೂ ಉತ್ತಮ ಕೆಲಸಗಳನ್ನು ಮಾಡಿದ್ದಾರೆ. ಸಿದ್ದರಾಮಯ್ಯ ಮತ್ತವರ ತಂಡ ಭವಿಷ್ಯದಲ್ಲಿಯೂ ಇದೇ ಹಾದಿಯಲ್ಲಿ ನಡೆಯಲಿದೆ.”

ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಮರಳಿದರೆ, ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಅಭ್ಯರ್ಥಿಯಾಗಲಿದ್ದಾರೆ, ಅದು ಪಕ್ಷದ ಮುಂದಿರುವ ಸಹಜ ಆಯ್ಕೆ ಎಂದು ಹಲವರು ಹೇಳುತ್ತ ಬಂದಿದ್ದಾರೆ. ಸದ್ಯ ಸಿದ್ದರಾಮಯ್ಯ, ಕಾಂಗ್ರೆಸ್ ಪಾಲಿಗೆ ಶುಭ ಸುದ್ದಿಯನ್ನು ತರುವ ನಾಯಕ, ಶಾಸಕಾಂಗ ಪಕ್ಷದ ನಾಯಕನನ್ನಾಗಿ ಬೇರೆ ಯಾರನ್ನೂ ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ವಾದಿಸುವವರಿದ್ದಾರೆ.

ಈ ಎರಡೂ ಅಂಶಗಳು ಪಕ್ಷದ ನಾಯಕರಿಗೆ ಹಾಗೂ ಕಾರ್ಯಕರ್ತರಿಗೆ ಬಹಳ ಚೆನ್ನಾಗಿಯೇ ಅರ್ಥವಾಗಿದೆ. ಆದರೂ, ಕೆಲವು ತಿಂಗಳ ಹಿಂದೆ, ಪಕ್ಷದ ಉಸ್ತುವಾರಿ ನೋಡಿಕೊಳ್ಳುತ್ತಿರುವ ಎಐಸಿಸಿ ಕಾರ್ಯದರ್ಶಿ ಕೆ. ಸಿ. ವೇಣುಗೋಪಾಲ್, ಒಂದು ವೇಳೆ ಪಕ್ಷ ಅಧಿಕಾರಕ್ಕೆ ಮರಳಿದರೆ ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎಂಬುದು ಇನ್ನೂ ನಿರ್ಧಾರ ಮಾಡಿಲ್ಲ ಎಂದು ಬಹಿರಂಗ ಹೇಳಿಕೆ ನೀಡದಂತೆ ಅಧ್ಯಕ್ಷ ಡಾ. ಜಿ. ಪರಮೇಶ್ವರ್‌ಗೆ ಸಲಹೆ ನೀಡಿದ್ದರು. ಸಿದ್ದರಾಮಯ್ಯ ಕೂಡ ಶಾಸಕಾಂಗ ಪಕ್ಷ ಮುಂದಿನ ಮುಖ್ಯಮಂತ್ರಿಯನ್ನು ಆಯ್ಕೆ ಮಾಡುತ್ತದೆ ಎಂಬ ತಮ್ಮ ಹೇಳಿಕೆಯನ್ನು ಬದಲಾಯಿಸಿಕೊಂಡಿದ್ದರು.

“ಒಂದು ವೇಳೆ ಪಕ್ಷ ಅಧಿಕಾರಕ್ಕೆ ಮರಳಿದರೆ ಅದಕ್ಕೆ ಸಿದ್ದರಾಮಯ್ಯ ಅವರೇ ಕಾರಣ ಎಂಬುದು ಎಲ್ಲರಿಗೂ ಗೊತ್ತಿದೆ. ಅವರು ಜನ ನಾಯಕ ಎಂಬುದರ ಬಗ್ಗೆ ಹೆಚ್ಚಿನ ಸಂದೇಹ ಇಲ್ಲ. ಆದರೆ ಕೆಲವರಿಗೆ ಪಕ್ಷ ಸೀಟು ಹಂಚಿಕೆಯ ಎಲ್ಲಾ ಅಧಿಕಾರವನ್ನು ಸಿದ್ದರಾಮಯ್ಯ ಒಬ್ಬರಿಗೇ ನೀಡುವ ಬಗ್ಗೆ ಅಸಮಾಧಾನ ಇದೆ,” ಎನ್ನುತ್ತಾರೆ ಹಿರಿಯ ನಾಯಕರೊಬ್ಬರು. ಅವರನ್ನು ಗೌಪ್ಯವಾಗಿಡುವಂತೆ ವಿನಂತಿಸಿಕೊಂಡರು.

ಈ ಹಿನ್ನೆಲೆಯಲ್ಲಿ, ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ ಹಾಗೂ ಬಳ್ಳಾರಿ ಜಿಲ್ಲೆಗಳ ನಾಲ್ಕು ದಿನಗಳ ಪ್ರವಾಸದ ಸಮಯದಲ್ಲಿ ರಾಹುಲ್ ಗಾಂಧಿ ಹೇಳಿಕೆಗಳು ಮಹತ್ವ ಪಡೆದುಕೊಳ್ಳುತ್ತವೆ. ಈ ಸಮಯದಲ್ಲಿ ಪಕ್ಷದ ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಜಿ. ಪರಮೇಶ್ವರ ಸಮ್ಮುಖದಲ್ಲಿಯೇ ರಾಹುಲ್ ಸಿದ್ದರಾಮಯ್ಯ ಅವದೇ ಭವಿಷ್ಯದಲ್ಲಿ ಪಕ್ಷವನ್ನು ಮುನ್ನಡೆಸಲಿದ್ದಾರೆ ಎಂಬ ಅಂಶವನ್ನೂ ಪ್ರಸ್ತಾಪಿಸಿದರು. ತನ್ನ ಮೊಟ್ಟೆಗಳನ್ನು ಯಾರ ಬುಟ್ಟಿಯಲ್ಲಿ ಹಾಕಬೇಕು ಎಂಬುದರ ಕುರಿತು ಕಾಂಗ್ರೆಸ್ ಕೇಂದ್ರ ನಾಯಕತ್ವ ಖಂಡಿತವಾಗಿಯೂ ಇಷ್ಟರೊಳಗಾಗಿ ನಿರ್ಧಾರ ಮಾಡಿರುತ್ತದೆ. ಒಂದು ವೇಳೆ, ನಿರ್ಧಾರ ಮಾಡದೆ ಹೋಗಿದ್ದರೂ, ಪ್ರವಾಸದ ವೇಳೆಯಲ್ಲಿ ರಾಹುಲ್ ಗಾಂಧಿಗೆ ಜನರಿಂದಲೇ ನೇರ ಸಂದೇಶ ಸಿಕ್ಕಿರುತ್ತದೆ.

ಈ ಸಮಯದಲ್ಲಿ ಸಿದ್ದರಾಮಯ್ಯ ಜನರಿಂದ ಪಡೆದುಕೊಂಡ ಚಪ್ಪಾಳೆಗಳು ಗಮನ ಸೆಳೆಯುತ್ತಿದ್ದವು. ಸಾಮಾನ್ಯ ಜನರಿಗೂ, ರಾಹುಲ್‌ ಗಾಂಧಿ ಅವರಿಗೂ ಅರ್ಥವಾಗುವ ಅಂಶ ಏನು ಅಂದರೆ, ಬಿಜೆಪಿ ಅಷ್ಟು ಸುಲಭವಾಗಿ ಎದುರಿಸಲು ಸಾಧ್ಯವಾಗುವ ಅನನುಭವಿ ಸಿದ್ದರಾಮಯ್ಯ ಅಲ್ಲ ಎಂಬುದು. ಹೀಗಾಗಿಯೇ, ರಾಹುಲ್ ಗಾಂಧಿ ಪ್ರಧಾನಿ ಮೋದಿ ಮೇಲೆ ಪ್ರತಿ ಸಭೆಯಲ್ಲೂ ದಾಳಿ ನಡೆಸಿದರು. ಇದನ್ನೇ ರಾಹುಲ್ ಇತ್ತಿಚಿನ ಗುಜರಾತ್ ಚುನಾವಣೆ ವೇಳೆಯಲ್ಲೂ ಮಾಡಿದ್ದರು.

ಆದರೆ, ಇಲ್ಲಿ ಕೊಂಚ ವ್ಯತ್ಯಾಸ ಕಾಣಿಸುತ್ತಿತ್ತು. ಇಲ್ಲಿ ರಾಹುಲ್ ಬಿಜೆಪಿ ವಿರುದ್ಧ ದಾಳಿ ನಡೆಸಿದರಾದರೂ, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಪಕ್ಷದ ಆಡಳಿತ ವೈಖರಿ ಜತೆ ಹೋಲಿಕೆ ಮಾಡಿದರು. ಒಂದಾದ ಮೇಲೆ ಮೇಲೆ ಒಂದರಂತೆ ಘಟನಾವಳಿಗಳನ್ನು ಜನರ ಮುಂದಿಟ್ಟ ರಾಹುಲ್ ಕಾಂಗ್ರೆಸ್ ಮುಖ್ಯಮಂತ್ರಿಯಿಂದ ಮೋದಿ ಕಲಿಯಬೇಕಿದೆ ಎಂದರು.
ಸಾಲ ಮನ್ನಾ ಸಂಬಂಧಪಟ್ಟ ಹಾಗೆ ಮೋದಿ ಜತೆ ಮಾತುಕತೆ ಹೋದ ಘಟನೆಯೊಂದನ್ನು ರಾಹುಲ್ ಗಾಂಧಿ ನೆನಪಿಸಿಕೊಂಡರು. “ಆದರೆ, ಮೋದಿಜಿ ಒಂದೇ ಒಂದು ಪದವನ್ನೂ ಆಡಲಿಲ್ಲ. ನಾನು ಅದೇ ವಿಚಾರವನ್ನು ಸಿದ್ದರಾಮಯ್ಯ ಬಳಿ ಪ್ರಸ್ತಾಪಿಸಿದೆ. ಅವರು 8,500 ಕೋಟಿ ರೈತರ ಸಾಲ ಮನ್ನಾ ಮಾಡಿದರು. ನಾನು ಅಮರಿಂದರ್ ಸಿಂಗ್ (ಪಂಜಾಬ್ ಮುಖ್ಯಮಂತ್ರಿ) ಬಳಿ ಪ್ರಸ್ತಾಪ ಮಾಡಿದೆ. ಅವರೂ ರೈತರ ಸಾಲ ಮನ್ನಾ ಮಾಡಿದರು,” ಎಂದರು ರಾಹುಲ್.

ಪರಿಶಿಷ್ಟ ಜಾತಿ ಮತ್ತು ಗಿರಿಜನ ಉಪಯೋಜನೆ ಅಡಿಯಲ್ಲಿ ರಾಜ್ಯ ಸರಕಾರ ತಳಸಮುದಾಯಗಳ ಅಭಿವೃದ್ಧಿಗೆ ಜಾರಿಗೆ ತಂದ 27,700 ಕೋಟಿ ಯೋಜನೆಯನ್ನು ನೆನಪಿಸಿಕೊಂಡ ರಾಹುಲ್, ‘ಸಿದ್ಗರಾಮಯ್ಯ ನೇತೃತ್ವದ’ಕಾಂಗ್ರೆಸ್ ಸರಕಾರ ಸಾಧನೆ ಎನ್ನುವ ಮೂಲಕ ಉದಾಹರಣೆಯೊಂದನ್ನು ಮುಂದಿಟ್ಟರು. ದಲಿತರು ಮತ್ತು ಆದಿವಾಸಿಗಳ ಕಲ್ಯಾಣಕ್ಕಾಗಿ ಮೋದಿಜಿ ನೀಡಿರುವ 55,000 ಕೋಟಿ ರೂಪಾಯಿಗಳು ಇಡೀ ದೇಶಕ್ಕೆ ಹಂಚಲಾಗಿದೆ. ಆದರೆ ಕರ್ನಾಟಕ ಒಂದರಲ್ಲೇ ಅದರ ಅರ್ಥ ಭಾಗವನ್ನು ಮೀಸಲಿಡಲಾಗಿದೆ ಎಂದರು.

ರಾಹುಲ್ ತಮ್ಮ ರಾಜ್ಯ ಪ್ರವಾಸದ ಮೊದಲ ದಿನವೇ ಮೋದಿ ವಿರುದ್ಧ ವಾಗ್ದಾಳಿ ಆರಂಭಿಸಿದ್ದರು. ಹೊಸಪೇಟೆಯಲ್ಲಿ ನಡೆದ ಮೊದಲ ಸಮಾವೇಶದಲ್ಲಿ ಮಾತನಾಡಿದ್ದ ರಾಹುಲ್, “ಮೋದಿ 10-15 ಕಾರ್ಪೊರೇಟ್ ಕಂಪೆನಿಗಳಿಗೆ ಅನುಕೂಲ ಮಾಡಿಕೊಡಲು ಉದ್ಯಮಿಗಳ ರೂ. 1,50,000 ಕೋಟಿ ಸಾಲ ಮನ್ನಾ ಮಾಡಿದ್ದಾರೆ. ಆದರೆ, ರೈತರ ಸಾಲ ಮನ್ನಾ ಮಾಡಲು ಮೋದಿ ಹಿಂದೇಟು ಹಾಕುತ್ತಿದ್ದಾರೆ. ಯುಪಿಎ ಸರಕಾರ ಅಧಿಕಾರದಲ್ಲಿದ್ದಾಗ ರೈತರ ಆದಾಯ ಹೆಚ್ಚಿಸಲು ಪ್ರಯತ್ನಿಸಲಾಗಿತ್ತು. ಆದರೆ, ಮೋದಿ ಸರಕಾರ ರೈತರಿಗೆ ರಕ್ಷಣೆ ನೀಡದೆ ನೋಟು ರದ್ದು ಮತ್ತು ಗಬ್ಬರ್ ಸಿಂಗ್‌ ಟಾಕ್ಸ್‌ (ಜಿಎಸ್‌ಟಿ) ಹೇರುತ್ತಿದೆ” ಎಂದು ರಾಹುಲ್‌ ಟೀಕಿಸಿದ್ದರು.

ಸಿಂಧನೂರಿನಲ್ಲಿ ರೈತರೊಂದಿಗೆ ಮತ್ತು ಕಲಬುರಗಿಯಲ್ಲಿ ವೃತ್ತಿಪರರೊಂದಿಗೆ ಸಂವಾದ ನಡೆಸಿದ ರಾಹುಲ್ ತಮ್ಮ ಪ್ರಭಾವ ಬೀರಿದ್ದಾರೆ. ರೈತರೊಂದಿಗಿನ ಒಡನಾಟದ ಮೂಲಕ ಜನಪ್ರಿಯತೆ ಗಳಿಸಿಕೊಂಡಿರುವ ಸಿದ್ದರಾಮಯ್ಯ ಅವರಂತೆ ರಾಹುಲ್ ಈ ಸಂವಾದದ ಮೂಲಕ ಜನರಿಗೆ ಹತ್ತಿರಾಗುವ ಪ್ರಯತ್ನ ಮಾಡಿದ್ದಾರೆ. ಕೆಲ ಭಾಗಗಳಲ್ಲಿ ಲೋಕಸಭೆಯ ಕಾಂಗ್ರೆಸ್‌ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಇರುವ ಜನಪ್ರಿಯತೆಯನ್ನು ಬಿಟ್ಟರೆ ರಾಜ್ಯದ ಬೇರಾವ ನಾಯಕರಿಗೂ ಸಿದ್ದರಾಮಯ್ಯ ಅವರಿಗೆ ಇರುವಂತಹ ಜನರನ್ನು ಹಿಡಿದಿಟ್ಟುಕೊಳ್ಳುವ ಜನಪ್ರಿಯತೆ ಇಲ್ಲ. ಇದು ರಾಹುಲ್‌ ಅವರಿಗೆ ಅರ್ಥವಾಗಿದೆ.

ಹಾಗಾದರೆ ಜನ ರಾಹುಲ್‌ ಗಾಂಧಿ ಅವರನ್ನು ನೋಡಿ ಕಾಂಗ್ರೆಸ್‌ಗೆ ಮತಹಾಕುತ್ತಾರೋ ಅಥವಾ ಸಿದ್ದರಾಮಯ್ಯ ಅವರನ್ನು ನೋಡಿ ಮತಹಾಕುತ್ತಾರೋ? ಕಾಂಗ್ರೆಸ್‌ನ ಭದ್ರಕೋಟೆಯಾಗಿರುವ ಹೈದ್ರಾಬಾದ್‌ – ಕರ್ನಾಟಕ ಭಾಗದಲ್ಲಿ ಇಂತಹ ಪ್ರಶ್ನೆಗೆ ಮಿಶ್ರಪ್ರತಿಕ್ರಿಯೆ ವ್ಯಕ್ತವಾಯಿತು. 2013ರ ವಿಧಾನಸಭಾ ಚುನಾವಣೆಯಲ್ಲಿ ಹೈದ್ರಾಬಾದ್- ಕರ್ನಾಟಕ ಭಾಗದ 40 ಸ್ಥಾನಗಳಲ್ಲಿ ಕಾಂಗ್ರೆಸ್‌ 23ರಲ್ಲಿ ಗೆಲುವು ಸಾಧಿಸಿದೆ. ಆಗ ಬಿ.ಎಸ್‌. ಯಡಿಯೂರಪ್ಪ ಇದ್ದ ಕೆಜೆಪಿ ಮತ್ತು ಬಿ. ಶ್ರೀರಾಮುಲು ನೇತೃತ್ವದ ಬಿಎಸ್‌ಆರ್‌ ಪಕ್ಷಗಳನ್ನೂ ಒಳಗೊಂಡಂತೆ ಬಿಜೆಪಿ ಒಟ್ಟು 10 ಸ್ಥಾನಗಳಲ್ಲಿ ಹಾಗೂ ಜೆಡಿಎಸ್‌ 4 ಸ್ಥಾನಗಳಲ್ಲಿ ಜಯಗಳಿಸಿತ್ತು. ಉಳಿದ 3 ಸ್ಥಾನಗಳಲ್ಲಿ ಪಕ್ಷೇತರರು ಗೆದ್ದಿದ್ದರು.

“ಸಿದ್ದರಾಮಯ್ಯ ಒಳ್ಳೆಯ ಮನುಷ್ಯ. ಸಿದ್ದರಾಮಯ್ಯ ಅವರಿಂದಲೇ ಕಾಂಗ್ರೆಸ್‌ಗೆ ಮತಗಳು ಸಿಗುತ್ತವೆ. ರಾಹುಲ್‌ ಗಾಂಧಿ ಅವರ ಪರಿಣಾಮ ಏನಾಗುತ್ತದೆಯೋ ಸದ್ಯಕ್ಕಂತೂ ಗೊತ್ತಿಲ್ಲ. ಬಿಜೆಪಿ ಮತಗಳನ್ನು ಪಡೆಯಲು ಮೋದಿ ಪರಿಣಾಮ ಬೀರಬಹುದು. ಆದರೆ, ಯಡಿಯೂರಪ್ಪ ಅವರಿಂದ ಬಿಜೆಪಿಗೆ ಮತಗಳು ಬರುವುದು ಸುಳ್ಳು” ಎನ್ನುವ ಮೂಲಕ ಗಂಗಾವತಿ ವಿಧಾನಸಭಾ ಕ್ಷೇತ್ರದ ಅರಹಾಳ ಗ್ರಾಮದ ನಿವಾಸಿ ರಾಜಾ ಸಾಬ್ ಕೆಸರಾಟಿ ನೀಡಿದ ಪ್ರತಿಕ್ರಿಯೆ ಒಟ್ಟಾರೆ ಪ್ರಶ್ನೆಗಳಿಗೆ ಉತ್ತರ ನೀಡಿದಂತಿತ್ತು.