Home Inside Story ‘ರೈಫಲ್‌ ಕಿತ್ತು ಖಾಕಿ ಕೆಣಕಿದ ಕಳ್ಳರು’ ಮತ್ತು ಬೆಂಗಳೂರು ಪೊಲೀಸರ ‘ಭಿಲ್‌ ಗ್ಯಾಂಗ್‌’ ಇನ್ವೆಸ್ಟಿಗೇಶನ್!

‘ರೈಫಲ್‌ ಕಿತ್ತು ಖಾಕಿ ಕೆಣಕಿದ ಕಳ್ಳರು’ ಮತ್ತು ಬೆಂಗಳೂರು ಪೊಲೀಸರ ‘ಭಿಲ್‌ ಗ್ಯಾಂಗ್‌’ ಇನ್ವೆಸ್ಟಿಗೇಶನ್!

SHARE

ಇದು ಆದಿವಾಸಿ ಸಮುದಾಯ ಹಾಗೂ ಭಾರತದ ಕಾನೂನಿನ ನಡುವೆ ನಡೆದ ಆಧುನಿಕ ಸಮರದ ಕತೆ. ಇಲ್ಲಿ ಗುಂಡುಗಳು ಸಿಡಿದಿವೆ, ರಕ್ತ ಹರಿದಿದೆ, ಆತ್ಮ ರಕ್ಷಣೆಯ ಪ್ರಯತ್ನ ನಡೆದಿದೆ, ಅದೆಲ್ಲಕ್ಕಿಂತ ಹೆಚ್ಚಾಗಿ ಇದೇ ಮೊದಲ ಬಾರಿಗೆ ದೇಶದ ಅಪರಾಧ ಲೋಕದ ಪದಕೋಶಕ್ಕೆ ‘ಭಿಲ್ ಗ್ಯಾಂಗ್‌’ ಎಂಬ ಆದಿವಾಸಿ ಸಮುದಾಯದ ಹೆಸರೊಂದು ಸೇರ್ಪಡೆಯಾಗಿದೆ. 

ಈ ಕುರಿತು, ಗುರುವಾರ ಬೆಂಗಳೂರಿನ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಮಾಹಿತಿ ನೀಡಿದ ಆಯುಕ್ತ ಟಿ. ಸುನೀಲ್ ಕುಮಾರ್ ಮಾದ್ಯಮಗಳಿಗೆ ಮಾಹಿತಿ ನೀಡಿದರು. ರಾಜಧಾನಿಯ ಪೊಲೀಸರ ತಂಡ ಅಪರಾಧ ಪ್ರಕರಣದ ಜಾಲವೊಂದನ್ನು ಭೇದಿಸಿದ ಬಗೆಯನ್ನು ವಿವರಿಸಿದರು. ಇದು ಹೆಚ್ಚು ಕಡಿಮೆ, ಇತ್ತೀಚೆಗೆ ನೈಜ ಘಟನೆಯನ್ನಾಧರಿಸಿದ ತಮಿಳು ಸಿನೆಮಾ ‘ಧೀರನ್‌’ ನೆನಪಿಸುವಂತಿತ್ತು. ಧೀರನ್ ಸಿನೆಮಾ ಪೊಲೀಸ್‌ ತನಿಖೆಯೊಂದರ ರೋಚಕತೆಯನ್ನು, ಅದರ ಹಿನ್ನೆಲೆಯ ಆಳವನ್ನು ಕಣ್ಣಿಗೆ ಕಟ್ಟುವಂತೆ ತೋರಿಸಿತ್ತು. ದಕ್ಷಿಣ ಭಾರತದ ಬೆಳ್ಳಿತೆರೆಯಲ್ಲಿ ಭಾರಿ ಸದ್ದು ಮಾಡಿದ್ದ ಸಿನೆಮಾ ಅದು.

ಈಗ ಬೆಂಗಳೂರು ನಗರ ಪೊಲೀಸರು ಈಗ ಅಂಥದ್ದೇ ಒಂದು ಅಪರಾಧ ಜಾಲವೊಂದರ ಜತೆ ಕಾದಾಡಿ, ಆರೋಪಿಗಳನ್ನು ಕಾನೂನಿನ ಅಡಿಗೆ ತಂದಿದ್ದಾರೆ. ಮಧ್ಯ ಪ್ರದೇಶದ ಧಾರ್ ಜಿಲ್ಲೆಯ ಭಗೋಲಿಯಲ್ಲಿ ವಾಸುಸುತ್ತಿದ್ದ ಆದಿವಾಸಿ ಸಮುದಾಯದ ಹಾಡಿಗೆ ನುಗ್ಗಿ ಓರ್ವ ಆರೋಪಿಯನ್ನು ಕರೆತಂದಿದ್ದಾರೆ. ಆತ ನೀಡಿದ ಮಾಹಿತಿ ಮೇಲೆ ಬೆಂಗಳೂರಿನ ಹೊರವಲಯದಲ್ಲಿ ನಾಲ್ವರನ್ನು ವಶಕ್ಕೆ ಪಡೆದಿದ್ದಾರೆ. ಈ ಸಮಯದಲ್ಲಿ ಯಲಹಂಕ ನವನಗರದ ಸಮೀಪ ಮೂವರ ಮೊಣಕಾಲಿಗೆ ಗುಂಡು ನುಗ್ಗಿಸಿದ್ದಾರೆ. ಈ ಹಿಂದೆ ಕೊಡಿಗೇಹಳ್ಳಿಯಲ್ಲಿ ಪೊಲೀಸರಿಂದಲೇ ರೈಫಲ್ ಕಿತ್ತುಕೊಂಡು ಹೋದ ಪ್ರಕರಣ ಸೇರಿದಂತೆ ಒಟ್ಟು ಆರು ಪ್ರಕರಣಗಳನ್ನು ಭೇದಿಸಿದ್ದಾರೆ.

ಪ್ರಕರಣದ ಹಿನ್ನೆಲೆ:

ಇದೇ ವರ್ಷದ ಜನವರಿ 18ರಂದು 4 ಜನ ಅಪರಿಚಿತರು ಬೆಂಗಳೂರಿನ ಕೊಡಿಗೇಹಳ್ಳಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಇಬ್ಬರು ಪೊಲೀಸ್‌ ಸಿಬ್ಬಂದಿಯ ಮೇಲೆ ಹಲ್ಲೆ ಮಾಡಿ, ಅವರ ಬಳಿಯಿದ್ದ .303 ರೈಫಲ್‌ ತೆಗೆದುಕೊಂಡು ಹೋಗಿದ್ದರು. ಪೊಲೀಸರ ಗೌರವಕ್ಕೆ ಈ ಘಟನೆಯಿಂದ ಧಕ್ಕೆಯಾಗಿತ್ತು. ಸಹಜವಾಗಿಯೇ ಇಲಾಖೆ ಘಟನೆಯನ್ನು ಗಂಭೀರವಾಗಿ ಪರಿಗಣಿಸಿತ್ತು. ಇದಕ್ಕೂ ಮೊದಲೇ ಒಂದು ಮನೆಗಳ್ಳತನ ಇದೇ ಭಾಗದಲ್ಲಿ ನಡೆದಿತ್ತು. ಎರಡೂ ಪ್ರಕರಣಗಳಲ್ಲಿ ಆರೋಪಿಗಳು ಒಬ್ಬರೇ ಆಗಿದ್ದರು. ಈ ಪ್ರಕರಣಗಳ ತನಿಖೆಗಾಗಿ 4 ವಿಶೇಷ ತಂಡಗಳನ್ನು ನಗರ ಪೊಲೀಸ್‌ ಆಯುಕ್ತ ಟಿ. ಸುನೀಲ್‌ ಕುಮಾರ್‌ ರಚಿಸಿದ್ದರು. ಪ್ರಕರಣದ ತನಿಖೆ ಆರಂಭಿಸಿದ ಪೊಲೀಸರು ರಾಜ್ಯದ ತುಂಬೆಲ್ಲಾ ಈ ತೆರನಾದ ‘ಅಪರಾಧ ಕ್ರಮ’ವನ್ನು ಪಾಲಿಸಿದ ಕೃತ್ಯಗಳು ಎಲ್ಲಿ ನಡೆದಿವೆ ಎಂದು ಹುಡುಕುಕಾಟ ಆರಂಭಿಸಿದ್ದರು. ಮೈಸೂರಿನಲ್ಲೂ ಇದೇ ಮಾದರಿಯ ಘಟನೆ ಕೆಲ ದಿನಗಳ ಹಿಂದೆ ನಡೆದಿರುವುದು ಪತ್ತೆಯಾಗಿತ್ತು. ಅಲ್ಲಿ ನಡೆದ ಮನೆಗಳ್ಳತನದ ಘಟನೆಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಸಿಕ್ಕಿತ್ತು.

ಅಲ್ಲಿಂದ ಸಿಗುವ ಚಿಕ್ಕ ಸುಳಿವು ಹಿಡಿದ ಪೊಲೀಸರು, ಮಧ್ಯ ಪ್ರದೇಶ ಅಥವಾ ರಾಜಸ್ಥಾನ ಮೂಲದ ಆರೋಪಿಗಳಿರಬಹುದು ಎಂದು ಶಂಕಿಸುತ್ತಾರೆ. ನಂತರ ಇಂತಹದ್ದೇ ಒಂದು ಮನೆಗಳ್ಳತನದ ಪ್ರಕರಣದಲ್ಲಿ ನೆರೆಯ ಆಂಧ್ರ ಪ್ರದೇಶದ ಕಡಪಾದಲ್ಲಿ ಮೂವರು ಮಧ್ಯಪ್ರದೇಶದ ಕಳ್ಳರನ್ನು ಈ ಹಿಂದೆ ಬಂಧಿಸಿರುವ ಪ್ರಕರಣದ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಗುತ್ತದೆ. ವಿಶೇಷ ತನಿಖಾ ತಂಡ ಸೀದಾ ಕಡಪಾಗೆ ಹೋಗಿದೆ. ಅಲ್ಲಿ ಆರೋಪಿಗಳ ಬೆರಳಚ್ಚು ಮತ್ತಿತರ ಸಾಕ್ಷಿಗಳೂ ಇಲ್ಲದಷ್ಟು ಪೇಲವವಾದ ತನಿಖೆ ನಡೆದಿತ್ತು. ಕಳ್ಳತನದ ಆರೋಪಿಗಳನ್ನು ಬಂಧಿಸಿದ ನಂತರ, ಕದ್ದ ಮಾಲು ಜಪ್ತಿಯಾಗಿರುತ್ತದೆ. ಆ ನಂತರ ಜಾಮೀನಿನ ಮೇಲೆ ಆರೋಪಿಗಳು ಆಚೆ ಹೋಗಿರುತ್ತಾರೆ. ಕಡಪಾ ಪೊಲೀಸರು ಆರೋಪಿಗಳನ್ನು ಗಂಭೀರವಾಗಿ ಪರಿಗಣಿಸಿಯೇ ಇರುವುದಿಲ್ಲ. ಆದರೆ ಅದೇ ಗ್ಯಾಂಗ್‌ ಇಡೀ ದೇಶದ ತುಂಬೆಲ್ಲಾ ತನ್ನ ‘ರಕ್ತಚರಿತ್ರೆ’ಯನ್ನು ಹೊಂದಿದೆ ಎಂಬ ವಿಷಯ ಬೆಂಗಳೂರು ಪೊಲೀಸರ ಕಾರ್ಯಾಚರಣೆಯಿಂದ ಹೊರಬಿದ್ದಿದೆ.

ಮೊದಲ ಸುಳಿವು:

ಕಡಪಾ ಪೊಲೀಸರ ದಾಖಲೆಗಳಲ್ಲಿ ಆರೋಪಿಗಳ ವಿಳಾಸವಿರುತ್ತದೆ. ಆ ಮೂಲಕ ಆರೋಪಿಗಳು ಮಧ್ಯಪ್ರದೇಶದ ಧಾರ್‌ ಜಿಲ್ಲೆಯ, ಭಗೋಲಿ ಎಂಬ ಗ್ರಾಮದವರು ಎಂಬ ಮಾಹಿತಿ ಸಿಗುತ್ತದೆ. ಆ ಊರಿನಿಂದ ಕರ್ನಾಟಕಕ್ಕೆ ಮತ್ತು ದಕ್ಷಿಣದ ಇನ್ನುಳಿದ ರಾಜ್ಯಗಳಿಗೆ ಎಷ್ಟು ಮಂದಿ ಆಗಾಗ್ಗೆ ಬಂದಿದ್ದಾರೆ ಎಂಬುದನ್ನು ತಿಳಿದುಕೊಳ್ಳಲು ಯತ್ನಿಸುವ ಪೊಲೀಸರು, ಆ ಪ್ರದೇಶದಲ್ಲಿ ಕೊಂಡ ಮೊಬೈಲ್‌ ಸಂಖ್ಯೆಗಳನ್ನು ಟ್ರಾಕ್‌ ಮಾಡುತ್ತಾರೆ. ಬರೋಬ್ಬರಿ 125 ಮಂದಿ ಭಗೋಲಿ ಗ್ರಾಮದಿಂದ ಪದೇ ಪದೇ ಮೆಟ್ರೊಪಾಲಿಟನ್‌ ಸಿಟಿಗೆ ಬಂದು ಹೋದ ಮಾಹಿತಿ ನೆಟ್‌ವರ್ಕ್‌ ಹಿಸ್ಟರಿಯಿಂದ ಪತ್ತೆಯಾಗುತ್ತದೆ. ಪೊಲೀಸರ ಶಂಕೆ ಇನ್ನಷ್ಟು ಗಟ್ಟಿಗೊಳ್ಳುತ್ತದೆ. ತಕ್ಷಣ ಮಧ್ಯಪ್ರದೇಶಕ್ಕೆ ಹೋಗಲು ತಂಡ ಸಜ್ಜಾಗುತ್ತದೆ. ಆದರೆ ಅಲ್ಲಿನ ಸ್ಥಿತಿಗತಿಗಳ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲದ ಕಾರಣ, ಬೆಂಗಳೂರು ಪೊಲೀಸರು ಮಧ್ಯಪ್ರದೇಶ ಪೊಲೀಸರ ಸಹಾಯ ಕೋರುತ್ತಾರೆ. ಅದಕ್ಕೆ ಒಪ್ಪುವ ಮಧ್ಯಪ್ರದೇಶ ಪೊಲೀಸ್‌ ಇಲಾಖೆ, ಸ್ಥಳೀಯವಾಗಿ ನೆರವು ನೀಡಲು ಒಪ್ಪಿಕೊಳ್ಳುತ್ತದೆ. ಹಾಗೆ ಬೆಂಗಳೂರಿನಿಂದ ವಿಶೇಷ ತನಿಖಾ ತಂಡ ಮಧ್ಯಪ್ರದೇಶದ ಕಡೆಗೆ ಪ್ರಯಾಣ ಬೆಳೆಸಿತು.

ಮಧ್ಯಪ್ರದೇಶ ತಲುಪಿದ ತಂಡಕ್ಕೆ ಭಗೋಲಿ ಗ್ರಾಮ, ಅಲ್ಲಿನ ತಾಂಡಾಗಳು ಮತ್ತು ‘ಭಿಲ್‌’ ಆದಿವಾಸಿ ಜನಾಂಗದ ಪರಿಚಯವಾಗುತ್ತದೆ. ಅಲ್ಲಿನ ರಕ್ತಸಿಕ್ತ ಇತಿಹಾಸಗಳು, ಸಾವಿರಾರು ವರ್ಷಗಳಿಂದ ಅಪರಾಧವನ್ನೇ ಮಾಡಿಕೊಂಡು ಬಂದ ಒಂದಿಡೀ ಸಮೂಹದ ಕಥೆಗಳು ಒಂದೊಂದಾಗಿ ಅನಾವರಣವಾಗುತ್ತದೆ. ತನಿಖೆಯ ಭಾಗವಾದ ಹಿರಿಯ ಅಧಿಕಾರಿಯೊಬ್ಬರು, “ಈ ಗ್ಯಾಂಗ್‌ ಇಡೀ ದೇಶದ ತುಂಬೆಲ್ಲಾ ರಕ್ತವನ್ನು ಹರಿಸಿದೆ. ಒಂದಷ್ಟು ಕಾಲ ಡಕಾಯಿತಿ ಮಾಡುತ್ತಿದ್ದ ಈ ಜನಾಂಗ, ಇತ್ತೀಚೆಗೆ ಅದನ್ನು ನಿಲ್ಲಿಸಿದೆ. ಕಳ್ಳತನವನ್ನು ಮುಂದುವರೆಸಿರುವ ಈ ಜನರಿಗೆ ಅದೇ ವೃತ್ತಿ. ಹಿಂಸಾಚಾರಕ್ಕಿಳಿದು ಕಳ್ಳತನ ಮಾಡಿದರೆ, ಸಿಕ್ಕಿಹಾಕಿಕೊಳ್ಳುವ ಸಾಧ್ಯತೆ ಹೆಚ್ಚು. ಅದಕ್ಕಾಗಿ ಖಾಲಿ ಮನೆಗಳನ್ನು ಗುರುತಿಸಿ ಕಳ್ಳತನ ಮಾಡಿ ಪರಾರಿಯಾಗುತ್ತಿದ್ದರು,” ಎನ್ನುತ್ತಾರೆ.

ಇವರನ್ನು ‘ಭಿಲ್ ಜನ’, ‘ಭೀಲ್ ಜನ’ ಎಂದು ಗುರುತಿಸಲಾಗುತ್ತದೆ. ಇದೊಂದು ಕೃಷಿ ಆಧಾರಿತ ಬುಡಕಟ್ಟು ಸಮಯದಾಯ. ಪಕ್ಕದ ಪಾಕಿಸ್ತಾನವೂ ಸೇರಿದಂತೆ ಭಾರತದ ಆಗ್ನೇಯ ಭಾಗದ ರಾಜ್ಯಗಳಲ್ಲಿ ಇವರ ಸಾಂಧ್ರತೆ ಹೆಚ್ಚಿದೆ. ಇವತ್ತಿಗೆ ಹೆಚ್ಚಿನವರು ಭೂ ರಹಿತ ಬಡವರು. ಕೃಷಿ ಕೂಲಿಯಾಳುಗಳಾಗಿ ದುಡಿಯುತ್ತಿದ್ದಾರೆ ಎಂದು ವಿಕಿಪೀಡಿಯಾ

ಮಾಹಿತಿ

ಹೇಳುತ್ತದೆ.

“ಈ ಜನಾಂಗವನ್ನು ರಾಜರ ಕಾಲದಿಂದಲೂ ನಾಗರೀಕತೆಯಿಂದ ಮತ್ತು ಸಮಾಜದಿಂದ ದೂರವೇ ಇರಿಸಲಾಗಿತ್ತು. ಬ್ರಿಟೀಶರ ಆಳ್ವಿಕೆಯ ವೇಳೆ, ಇವರನ್ನು ಅಪರಾಧ ಸಮೂಹವೆಂದು ಗುರುತಿಸಿ ಊರಿನಿಂದ ಹೊರಹಾಕಲಾಗಿತ್ತು. ಮುಂಚೆಯಿಂದಲೂ ಬೇಟೆ ಮಾಡಿಕೊಂಡು ಬದುಕು ಸಾಗಿಸುತ್ತಿದ್ದ ‘ಭಿಲ್‌’ ಜನಾಂಗ ನಾಗರೀಕತೆಗೆ ಮನುಕುಲ ತೆರೆದುಕೊಂಡ ನಂತರವೂ ಅದೇ ರೀತಿಯ ವ್ಯಕ್ತಿತ್ವ ಬೆಳೆಸಿಕೊಂಡು ಬಂದಿದೆ. ಭಿಲ್ಲರ ತಾಂಡಾದ ಬಳಿಯೇ ಇರುವ ಇನ್ನೊಂದು ಗ್ಯಾಂಗ್‌ ‘ಭವಾರಿಯಾ’. ಈ ಭವಾರಿಯಾ ಗ್ಯಾಂಗ್‌ ತಮಿಳುನಾಡಿನ ಶಾಸಕರೊಬ್ಬರನ್ನು 1998ರಲ್ಲಿ ಹತ್ಯೆ ಮಾಡಿ ಮನೆಗಳ್ಳತನ ಮಾಡಿತ್ತು. ಆಗ ಅಂದಿನ ಮುಖ್ಯಮಂತ್ರಿ ಜಯಲಲಿತಾ ವಿಶೇಷ ತಂಡ ರಚಿಸಿ ತನಿಖೆಗೆ ಆದೇಶಿಸುತ್ತಾರೆ. ಸುಮಾರು 10 ವರ್ಷಗಳ ಸುದೀರ್ಘ ತನಿಖೆಯ ನಂತರ ಭವಾರಿಯಾ ಗ್ಯಾಂಗನ್ನು ತಮಿಳುನಾಡು ಪೊಲೀಸರು ಬಂಧಿಸಿದ್ದರು,” ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳುತ್ತಾರೆ. ಇದೇ ಪ್ರಕರಣದ ತನಿಖೆಯ ನೈಜ ಕತೆಯನ್ನು ಆಧರಿಸಿ ‘ಧೀರನ್‌’ ತೆರೆಗೆ ಬಂದಿತ್ತು.

ಬಿಲ್ಲು-ಭಾಣಗಳ ಕಾದಾಟ:

ಬಂಧಿಸಲು ಹೋದ ಪೊಲೀಸರ ಮೇಲೆ ಕಲ್ಲು ತೂರಾಟ ಮಾಡಿದಾಗ ಒಡೆದ ಜೀಪಿನ ಗಾಜು

ಇಂತಹದೊಂದು ಹಿನ್ನೆಲೆ ಹೊಂದಿರುವ ಆದಿವಾಸಿ ಸಮುದಾಯ ವಾಸಿಸುವ ಮಧ್ಯಪ್ರದೇಶದ ಭಗೋಲಿ ಗ್ರಾಮಕ್ಕೆ ಕಾಲಿಡುವ ಪೊಲೀಸರಿಗೆ ಅಕ್ಷರಶಃ ಅಲ್ಲಿನ ಕ್ರೂರತೆಯ ಅನಾವರಣವಾಗುತ್ತದೆ. ಇವತ್ತಿಗೂ ಬಿಲ್ಲು ಬಾಣಗಳನ್ನು ಬಳಸುತ್ತಿರುವ ಭಿಲ್‌ ಜನಾಂಗ, ಪೊಲೀಸರ ಮೇಲೆ ಕಲ್ಲು ಮತ್ತು ಬಾಣಗಳಿಂದ ದಾಳಿ ಮಾಡುತ್ತಾರೆ. ಮೊದಲೇ ಅದು ಕರ್ನಾಟಕವಲ್ಲ. ಬೆಂಗಳೂರು ಪೊಲೀಸರು ಪಿಸ್ತೂಲು ಉಪಯೋಗಿಸುವ ಪರವಾನಗಿ ಹೊಂದಿಲ್ಲ. ಇಡೀ ತಾಂಡಾವೇ ಪೊಲೀಸರ ಮೇಲೆರಗುತ್ತದೆ. ಏನು ಮಾಡಲು ಸಾಧ್ಯವಾಗದ ಪೊಲೀಸರು ವಾಪಸಾಗುತ್ತಾರೆ. ನಂತರ ಮಧ್ಯಪ್ರದೇಶ ಪೊಲೀಸರ ಸಹಾಯ ಪಡೆದು, ಮತ್ತೆ ತಾಂಡಾಗೆ ವಾಪಸಾಗುತ್ತಾರೆ. ಆಗಲೂ ಹಳ್ಳಿಯ ಜನ ಪೊಲೀಸರನ್ನು ಹಿಮ್ಮೆಟ್ಟಿಸಲು ಯತ್ನಿಸುತ್ತಾರಾದರೂ, ಅಲ್ಲಿನ ಎಸಿಪಿ ವಿಜಯ್‌ ಎಂಬುವವರು ಗುಂಡಿನ ದಾಳಿಗೆ ಆದೇಶಿಸುತ್ತಾರೆ. ಯಾವಾಗ ಪೊಲೀಸರ ಬಂದೂಕು ಘರ್ಜಿಸಲು ಆರಂಭವಾಯಿತೋ ಆಗ ಭಿಲ್ ಜನ ಸುಮ್ಮನಾಗುತ್ತಾರೆ. ಬೆಂಗಳೂರು ಪೊಲೀಸರು ಹುಡುಕುತ್ತಿದ್ದ ಪ್ರಮುಖ ಮತ್ತು ಕುಖ್ಯಾತ ಆರೋಪಿ ರಾಯ್‌ ಸಿಂಗ್‌ನನ್ನು ಬಂಧಿಸುತ್ತಾರೆ.

ಈತ ಅದೆಷ್ಟೋ ಕೊಲೆ, ದರೋಡೆ, ಕಳ್ಳತನಗಳನ್ನು ಮಾಡಿ ಇಂದಿಗೂ ಒಮ್ಮೆಯೂ ಬಂಧನಕ್ಕೊಳಗಾಗಿರಲಿಲ್ಲ. ಆದರೆ ಮೊದಲ ಬಾರಿಗೆ ಭಿಲ್‌ ಜನರೊಳಗಿನ ಕ್ರಿಮಿನಲ್‌ ಹಿನ್ನೆಲೆ ಮತ್ತು ರಾಯ್‌ ಸಿಂಗ್‌ನ ಅಪರಾಧಗಳನ್ನು ಬೆಂಗಳೂರು ಪೊಲೀಸರ ತನಿಖೆ ಹೊರಗೆಳೆದಂತಾಗಿದೆ. ರಾಯ್‌ ಸಿಂಗ್‌ ಬಂಧಿಸಿದ ಮರುಕ್ಷಣವೇ ಮಧ್ಯಪ್ರದೇಶದಿಂದ ವಿಶೇಷ ತಂಡ ಬೆಂಗಳೂರಿಗೆ ಹೊರಡುತ್ತದೆ. ಬೆಂಗಳೂರಿಗೆ ಕರೆತಂದು ಆರೋಪಿ ರಾಯ್‌ ಸಿಂಗ್‌ನನ್ನು ವಿಚಾರಣೆ ಮಾಡಿದಾಗ ಆತ ಬೆಂಗಳೂರಿನಲ್ಲಿಯೇ ಇದ್ದ ಆತನ ತಂಡದ ನಾಲ್ಕು ಸದಸ್ಯರ ವಿಳಾಸ ನೀಡುತ್ತಾನೆ. ಮತ್ತು ಕದ್ದ ರೈಫಲ್‌ ಎಲ್ಲಿದೆ ಎಂಬುದನ್ನೂ ಹೇಳುತ್ತಾನೆ.

“ಉಳಿದ ನಾಲ್ವರನ್ನು ಬಂಧಿಸಲು ಹೋಗುವ ಪೊಲೀಸರ ಮೇಲೆ ಮಧ್ಯಪ್ರದೇಶದಲ್ಲಿ ಆದಂತೆ ಇಲ್ಲಿಯೂ ಹಲ್ಲೆಯಾಗುತ್ತದೆ. ವಿದ್ಯಾರಣ್ಯಪುರಂ ಪೊಲೀಸ್‌ ಇನ್ಸ್‌ಪೆಕ್ಟರ್‌ ರಾಮಮೂರ್ತಿ, ಸಬ್‌ ಇನ್ಸ್‌ಪೆಕ್ಟರ್‌ ಅಣ್ಣಯ್ಯ ಅವರ ಮೇಲೆ ಹಲ್ಲೆ ಮಾಡಿದಾಗ, ಪೊಲೀಸರು ಗುಂಡಿನ ದಾಳಿ ಮಾಡುತ್ತಾರೆ. ಈ ಸಮಯದಲ್ಲಿ ಮೂವರು ಆರೋಪಿಗಳ ಮೊಣಕಾಲಿಗೆ ಗುಂಡು ನುಗ್ಗಿಸಲಾಗಿದೆ. ಅಜಂಬಾಯ್‌ ಸಿಂಗ್‌, ಜಿತೇನ್‌ ರೇಮಸಿಂಗ್‌, ಸುರೇಶ್‌ ಕೋದ್ರಿಯಾ ಮತ್ತು ಅಬುಬಾಯ್‌ ಸಿಂಗ್‌ ಸದ್ಯ ಗುಂಡೇಟು ತಿಂದು ಆಸ್ಪತ್ರೆಯಲ್ಲಿ ಮಲಗಿದ್ದಾರೆ.

ಭಿಲ್‌ ಜನರ ಮನೆ ದರೋಡೆ:

ಭಿಲ್‌ ಜನರ ತಂಡಗಳು ತಾವು ವಾಸವಿರುವ ಮಧ್ಯಪ್ರದೇಶದಲ್ಲಿ ಯಾವುದೇ ಅಪರಾಧ ಕೃತ್ಯಗಳನ್ನು ಎಸಗಿದ ಬಗ್ಗೆ ವರದಿಗಳಾಗಿಲ್ಲ. ಬೆಂಗಳೂರು ಪೊಲೀಸರು ನೀಡುವ ಮಾಹಿತಿ ಪ್ರಕಾರ, “ಇವರಿಗೆ ಚಂಬಲ್‌ ಕಣಿವೆಯ ಹಂತಕರ ಸಂಪರ್ಕವೂ ಇದೆ. ಇವರು ಮುಖ್ಯವಾಗಿ ಮೆಟ್ರೋಪಾಲಿಟನ್‌ ಸಿಟಿಗಳಿಗೆ ತಂಡವನ್ನು ಕಟ್ಟಿಕೊಂಡು ನಗರಗಳಿಗೆ ಬಸ್‌ ಅಥವಾ ರೈಲಿನ ಮುಖಾಂತರ ಹೋಗುತ್ತಾರೆ. ಇವರ ಟಾರ್ಗೆಟ್‌ ನಗರದ ಹೊರವಲಯದ ಒಂಟಿ ಮನೆಗಳು. ನಗರದ ಹೊರವಲಯದ ನಿರ್ಜನ ಪ್ರದೇಶ ಹೆಚ್ಚಾಗಿರುವುದರಿಂದ ಕಳ್ಳತನ ಮಾಡಲು ಕಷ್ಟವಾಗುವುದಿಲ್ಲ. ಅದಕ್ಕಾಗಿಯೇ ಈ ಗ್ಯಾಂಗ್‌ ನಗರದ ಹೊರವಲಯದಲ್ಲಿ ಮಾತ್ರ ಕಾರ್ಯಾಚರಣೆ ಮಾಡುತ್ತದೆ. ಬೆಳಗ್ಗೆಯಿಡೀ ಏರಿಯಾಗಳಲ್ಲಿ ತಿರುಗಾಡಿ ಮಾಲೀಕರಿಲ್ಲದ ಮನೆಯನ್ನು ಪತ್ತೆ ಮಾಡಿ, ರಾತ್ರಿ ಕಳ್ಳತನ ಮಾಡಿ ಪರಾರಿಯಾಗುತ್ತಿತ್ತು.”

ಯಾವಾಗ 1998ರಲ್ಲಿ ತಮಿಳುನಾಡು ಶಾಸಕರೊಬ್ಬರನ್ನು ಕೊಲೆ ಮಾಡಿ ಇಡೀ ಸರಕಾರವನ್ನು ಎದುರು ಹಾಕಿಕೊಂಡು ನಂತರ ಆ ಕಾರಣದಿಂದಲೇ ಭವಾರಿಯಾ ಗ್ಯಾಂಗ್‌ ಸಿಕ್ಕಿಹಾಕಿಕೊಂಡಿತೋ, ಅಂದಿನಿಂದ ಡಕಾಯತಿಯನ್ನು ಮಧ್ಯಪ್ರದೇಶದ ಎಲ್ಲಾ ಬುಡಕಟ್ಟು ಗ್ಯಾಂಗ್‌ಗಳು ನಿಲ್ಲಿಸಿವೆ. ಸಾಮಾನ್ಯವಾಗಿ ಬುಡಕಟ್ಟು ಸಮುದಾಯದಲ್ಲಿ ಆಚರಣೆಗಳು ಸಮೂಹ ಸನ್ನಿಯಂತೆ ಹುಟ್ಟಿಕೊಳ್ಳುತ್ತವೆ ಮತ್ತು ಅದೇ ರೀತಿಯಲ್ಲಿ ಅವಸಾನವೂ ಆಗುತ್ತಿವೆ. ಹೀಗಾಗಿಯೇ, ಭಿಲ್ ಜನ ಡಕಾಯಿತಿ ತೊರೆದು ಕೇವಲ ಮನೆಗಳ್ಳತನಕ್ಕೆ ಸೀಮಿತರಾಗಿದ್ದರು ಎನ್ನುತ್ತಾರೆ ಪೊಲೀಸರು. ಆದರೆ ಈ ವರ್ಷದ ಆರಂಭದಲ್ಲಿಯೇ ಬೆಂಗಳೂರು ಪೊಲೀಸರ ರೈಫಲ್ ಕಸಿದುಕೊಳ್ಳುವ ಮೂಲಕ ದೊಡ್ಡ ಪ್ರಮಾದವನ್ನು ಮೇಮೇಲೆ ಎಳೆದುಕೊಂಡವರು, ತಿಂಗಳು ಕಳೆಯುವ ಮೊದಲೇ ಕಂಬಿ ಹಿಂದಿನ ಕತೆಯಾಗಿದ್ದಾರೆ.

ಶುಕ್ರವಾರ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಪೊಲೀಸ್‌ ಆಯುಕ್ತ ಟಿ. ಸುನೀಲ್‌ ಕುಮಾರ್‌, ಪೊಲೀಸರು ಪ್ರಕರಣ ಭೇದಿಸಿದ ಬಗೆಯನ್ನು ವಿವರಿಸುವುದರ ಜತೆಗೆ ತನಿಖಾ ತಂಡಕ್ಕೆ ಎರಡು ಲಕ್ಷ ರೂ. ಬಹುಮಾನ ಘೋಷಿಸಿದರು. “ತನಿಖೆ ಮುಂದುವರೆದಿದೆ. ಎಸಿಪಿ ಪ್ರಭಾಕರ ಬಿ ಬಾರ್ಕಿ ಮತ್ತವರ ತಂಡ ಮಧ್ಯಪ್ರದೇಶದಲ್ಲಿಯೇ ಇದ್ದು, ಇನ್ನಿಬ್ಬರು ಆರೋಪಿಗಳಿಗಾಗಿ ಶೋಧ ಕಾರ್ಯ ನಡೆಸುತ್ತಿದೆ. ಪ್ರಕರಣಕ್ಕೆ ಬಹುಬೇಗ ತಾರ್ಕಿಕ ಅಂತ್ಯ ಸಿಗಲಿದೆ. ಮಧ್ಯಪ್ರದೇಶ ಪೊಲೀಸ್‌ ಇಲಾಖೆಗೂ ಕೂಡ ನಮ್ಮಲ್ಲಿರುವ ಎಲ್ಲಾ ಮಾಹಿತಿ ನೀಡಿದ್ದೇವೆ. ಬುಡಕಟ್ಟು ಜನಾಂಗದ ಇನ್ನುಳಿದ ಆರೋಪಿಗಳ ಮೇಲೆ ಕ್ರಮ ಕೈಗೊಳ್ಳುವ ಭರವಸೆ ಸಿಕ್ಕಿದೆ,” ಎಂದರು.