Home news-in-brief ‘ಕ್ರೈಂ ಇನ್ ಜಪಾನ್’: ಪುಟ್ಟ ದೇಶಕ್ಕೆ ಶಾಕ್ ನೀಡಿದ ಹೊಸ ಅಪರಾಧ ಪ್ರಕರಣ!

‘ಕ್ರೈಂ ಇನ್ ಜಪಾನ್’: ಪುಟ್ಟ ದೇಶಕ್ಕೆ ಶಾಕ್ ನೀಡಿದ ಹೊಸ ಅಪರಾಧ ಪ್ರಕರಣ!

SHARE

ಜಪಾನ್;

ಇತರೆ ಅಭಿವೃದ್ಧಿ ಹೊಂದಿದ ದೇಶಗಳೊಂದಿಗೆ ಹೋಲಿಸಿದಾಗ ಅತೀ ಕಡಿಮೆ ಅಪರಾಧ ಪ್ರಕರಣಗಳನ್ನು ಹೊಂದಿರುವ ದೇಶ. ಆದರೆ ಮಂಗಳವಾರ ಮಾನವೀಯತೆಯೇ ತಲೆ ತಗ್ಗಿಸುವಂತ ಘಟನೆಯೊಂದು ಉತ್ತರ ಜಪಾನಿನ ಒಸಾಕಾ ಪ್ರದೇಶದಿಂದ ವರದಿಯಾಗಿದೆ. ಸಾಮಾನ್ಯವಾಗಿ ಅಪರಾಧ ಸುದ್ದಿಗಳಿಗೆ ಆದ್ಯತೆ ನೀಡದ ಇಲ್ಲಿನ ಮಾಧ್ಯಮಗಳಲ್ಲೀಗ ಮಗಳನ್ನು 15 ವರ್ಷಗಳ ಕಾಲ ಬಂಧನದಲ್ಲಿಟ್ಟು, ಕೊಲೆ ಮಾಡಿದ ದಂಪತಿಯ ಸುದ್ದಿ ಪ್ರಾಮುಖ್ಯತೆ ಪಡೆದುಕೊಂಡಿದೆ.

33 ವರ್ಷ ಪ್ರಾಯದ ಮಗಳನ್ನು ಚಿಕ್ಕ ಕೊಠಡಿಯೊಂದರಲ್ಲಿ ಸುಮಾರು 15 ವರ್ಷಗಳಷ್ಟು ಹಿಂದೆಯೇ ಕೂಡಿ ಹಾಕಿದ ತಂದೆ ತಾಯಿಯರನ್ನು ನೆಯಾಗಾವಾದ ಪೋಲಿಸ್ ಅಧಿಕಾರಿಗಳು ಬಂಧಿಸಿದ್ದಾರೆ. ಸೋಮವಾರ ಅರಿಸಾಟೊ(33) ಚಿಕ್ಕ ಕೋಣೆಯಲ್ಲಿ ಶವವಾಗಿ ಪತ್ತೆಯಾಗಿದ್ದು, ಡಿಸೆಂಬರ್ 18ರ ವೇಳೆಗೆ ಸತ್ತಿರಬಹುದೆಂದು ಶವ ಪರೀಕ್ಷೆಯ ವರದಿ ತಿಳಿಸುತ್ತದೆ. ಕೇವಲ 19 ಕೆಜಿಯಷ್ಟು ತೂಗುತ್ತಿರುವ ಅರಿಸಾಟೋಳ ದೇಹ ಸುಮಾರು 145 ಇಂಚಿಗೆ ಕುಗ್ಗಿ ಹೋಗಿತ್ತು. ದೇಹದ ಮೇಲಿನ ಕುರುಹುಗಳು ಆಕೆ ಹಾಸಿಗೆ ಹಿಡಿದಿದ್ದಳು ಎಂಬುದನ್ನು ಸ್ಪಷ್ಟಪಡಿಸಿವೆ.

ಅರಿಸಾಟೊಳನ್ನು ಅವಳ ತಂದೆ ಯಸುಕಾಕಾ ಕಾಕಿಮೊಟೊ (55), ತಾಯಿ ಯುಕರಿ (53) ಸುಮಾರು 15 ವರ್ಷಗಳಷ್ಟು ಹಿಂದೆಯೇ ಮನೆಯಲ್ಲಿ ಚಿಕ್ಕ ಕೋಣೆಯೊಂದನ್ನು ನಿರ್ಮಿಸಿದ್ದರು. ಅದರಲ್ಲಿ ಮಗಳನ್ನು ಕೂಡಿ ಹಾಕಿದ್ದರು ಎಂದು ಪೋಲಿಸರು ತಿಳಿಸಿದ್ದಾರೆ.

ಪೋಲಿಸರ ಪ್ರಕಾರ, ತಂದೆ ಕಾಕಿಮೊಟೊ ಮನೆಯನ್ನು ವಿಭಾಗಿಸಿ, 3 ಚದರ ಮೀಟರ್‌ಗಳಷ್ಟು ಚಿಕ್ಕದಾದ ಕೋಣೆಯನ್ನು ನಿರ್ಮಿಸಿದ್ದ. ಆ ಕೋಣೆಗೆ ಎರಡು ಬಾಗಿಲುಗಳಿದ್ದು, ಹೊರಗಿಂದ ಮಾತ್ರವೇ ಬೀಗ ಹಾಕಲು ಸಾಧ್ಯವಿತ್ತು. ಕೋಣೆಯೊಳಗೆ ಚಿಕ್ಕದೊಂದು ಶೌಚಾಲಯವನ್ನು ಬಿಟ್ಟರೆ ಬೇರೇನೂ ಇರಲಿಲ್ಲ. ಹೊರಗಿದ್ದ ನೀರಿನ ಟ್ಯಾಂಕಿಗೆ ಕೊಳವೆಯೊಂದನ್ನು ಜೋಡಿಸಿ, ನೀರು ಕೊಣೆಯೊಳಗೆ ಬರುವಂತೆ ಮಾಡಿದ್ದ. ದಿನಕ್ಕೆ ಒಂದು ಬಾರಿ ಮಾತ್ರವೇ ಆಹಾರವನ್ನು ಕೊಡುತ್ತಿದ್ದವೆಂದು ತಂದೆ ತಾಯಿಯರಿಬ್ಬರೂ ಈಗ ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾರೆ.

“ಮಗಳು ಮಾನಸಿಕವಾಗಿ ಅಸ್ವಸ್ಥಳಾಗಿದ್ದಳು, ಅವಳ ಅತಿರೇಕದ ವರ್ತನೆಗಳನ್ನು ತಡೆಯುವ ಸಲುವಾಗಿ ಅವಳನ್ನು ಕೂಡಿಹಾಕಿದ್ದೆವು,” ಎಂದು ಕಾಕಿಮೊಟೊ ಪೋಲಿಸ್ ತನಿಖೆಯ ವೇಳೆ ಹೇಳಿಕೆ ನೀಡಿದ್ದಾನೆ.

ಜಪಾನ್ ತನ್ನ ವಿಭಿನ್ನ ಸಂಸ್ಕೃತಿ, ಆರ್ಥಿಕ ಸಾಧನೆ ಹಾಗೂ ಶಿಸ್ತಿನ ಕಾರಣದಿಂದಾಗಿ ಗಮನ ಸೆಳೆದ ದೇಶ. ಹಾಗೂ, ಅತೀ ಕಡಿಮೆ ಅಪರಾಧಗಳು ದಾಖಲಾಗುವ ಕೆಲವು ದೇಶಗಳಲ್ಲಿ ಜಪಾನ್ ಕೂಡ ಒಂದು. ಅಲ್ಲಿ ಕೋಪ ಹಾಗೂ ಆಕ್ರಮಣಶೀಲ ಪ್ರವೃತ್ತಿಯು ಅವಮಾನಕರವೆಂದು ಪರಿಗಣಿಸಲಾಗಿದೆ. ಇತ್ತೀಚಿಗೆ ನಡೆದ ಕ್ರೂರ ಘಟನೆಯೆಂದರೆ 2016ರಲ್ಲಿ ರೈತನೊಬ್ಬ 19 ಕೊಲೆಗಳನ್ನು ಮಾಡಿದ್ದು ಹಾಗೂ ಅದೇ ಜಪಾನಿನ ಅತಿದೊಡ್ಡ ಅಮಾನುಷ ಕೃತ್ಯ ಎನ್ನಿಸಿಕೊಂಡಿದೆ. 127 ಮಿಲಿಯನ್ ಜನರನ್ನು ಹೊಂದಿರುವ ಜಪಾನ್‌ನಲ್ಲಿ ಇದುವರಿಗೂ 2.85 ಮಿಲಿಯನ್ ಅಪರಾಧ ಪ್ರಕರಣಗಳು ದಾಖಲಾಗಿದ್ದು, ಅತಿ ಕಡಿಮೆ ಅಪರಾಧಗಳು ನಡೆದಿರುವ ದೇಶಗಳ ಪೈಕಿ 6ನೇ ಸ್ಥಾನವನ್ನು ಪಡೆದಿದೆ. ಅಪರಾಧಗಳ ದರವು ಶೇ. 16.79 ಆಗಿದ್ದರೆ, ಸುರಕ್ಷತೆಯ ದರವು ಶೇ. 83.21 ಆಗಿದೆ. ಹಗಲು ಸಮಯದಲ್ಲಿ  ಶೇ.87.55ರಷ್ಟು ಭದ್ರತೆಯಿದ್ದರೆ, ಈ ಪ್ರಮಾಣ ರಾತ್ರಿಯ ವೇಳೆಯೂ 84.24ರಷ್ಟಿರುತ್ತದೆ. 100 ಜನರಲ್ಲಿ 0.6 ಜನ ಮಾತ್ರವೇ ಗನ್ನುಗಳನ್ನು ಹೊಂದಿದ್ದಾರೆ. ಬಹುಪಾಲು ಜನ ಮೃದು ಸ್ವಭಾವದವರು.

ಆದರೆ ಈಗ ನಡೆದಿರುವ ಅಮಾನುಷ ಕೃತ್ಯವು ಜಪಾನಿನ ಘನತೆಗೆ ದಕ್ಕೆ ತಂದಿದೆ.  ಈ ಕೃತ್ಯ ಜಪಾನಿನ ಪೈಶಾಚಿಕ ಅಪರಾಧದ ದಾಖಲೆಯನ್ನು ಮುರಿಯದಿದ್ದರೂ ಒಮ್ಮೆ ಅದರತ್ತ ತಿರುಗಿ ನೋಡುವಂತೆ ಮಾಡಿದೆ.