Home news-for-4-1-display ಟ್ರಿನಿಟಿ ಕಾಲೇಜಿನಿಂದ ಅಮೇಥಿಗೆ ರಾಹುಲ್ ಪಯಣ: ಕಾಂಗ್ರೆಸ್‌ ಹೊಸ ಸಾರಥಿ ರಾಹುಲ್ ಗಾಂಧಿಯ ಹೆಜ್ಜೆ ಗುರುತುಗಳು…

ಟ್ರಿನಿಟಿ ಕಾಲೇಜಿನಿಂದ ಅಮೇಥಿಗೆ ರಾಹುಲ್ ಪಯಣ: ಕಾಂಗ್ರೆಸ್‌ ಹೊಸ ಸಾರಥಿ ರಾಹುಲ್ ಗಾಂಧಿಯ ಹೆಜ್ಜೆ ಗುರುತುಗಳು…

SHARE
  • ರಾಹುಲ್ ಗಾಂಧಿ ಕಾಂಗ್ರೆಸ್‌ನ ರಾಷ್ಟ್ರೀಯ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ
  • 1998ರಿಂದ ಪಕ್ಷವನ್ನು ಮುನ್ನಡೆಸಿಕೊಂಡು ಬಂದವರು ಸೋನಿಯಾ ಗಾಂಧಿ
  • ರಾಹುಲ್ ಗಾಂಧಿ ಕುರಿತು ಅಪರೂಪದ ಮಾಹಿತಿಯನ್ನು ಒಳಗೊಂಡ ಈ ಪರಿಚಯ

ರಾಹುಲ್ ಗಾಂಧಿ ದೇಶದ ಪುರಾತನ ಪಕ್ಷ ಕಾಂಗ್ರೆಸ್‌ನ ರಾಷ್ಟ್ರೀಯ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸೋಮವಾರ ಅವರಿಗೆ ಹೊಸ ಹೊಣೆಗಾರಿಕೆ ನೀಡುವುದು ಖಾತ್ರಿಯಾಗಿದೆ. 1998ರಿಂದ ಪಕ್ಷವನ್ನು ಮುನ್ನಡೆಸಿಕೊಂಡು ಬಂದವರು ಸೋನಿಯಾ ಗಾಂಧಿ. ಡಿಸೆಂಬರ್ 16ರಂದು ಬೆಳಿಗ್ಗೆ 11 ಗಂಟೆಗೆ ದೆಹಲಿಯಲ್ಲಿನ ಎಐಸಿಸಿ ಕಚೇರಿಯಲ್ಲಿ ತಮ್ಮ ಪುತ್ರನಿಗೆ ಅಧಿಕಾರ ಹಸ್ತಾಂತರಿಸಲಿದ್ದಾರೆ.

ದೇಶದ ಸ್ವಾತಂತ್ರ್ಯ ಹೋರಾಟದ ಜತೆಗೆ ತಳುಕು ಹಾಕಿಕೊಂಡಿರುವ ರಾಜಕೀಯ ಪಕ್ಷ ಕಾಂಗ್ರೆಸ್. ಬ್ರಿಟಿಷರು ಹೋದ ನಂತರ ಸುದೀರ್ಘ ಕಾಲ ಪ್ರಪಂಚ ಅತಿ ದೊಡ್ಡ ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಅಧಿಕಾರವನ್ನು ಅನುಭವಿಸಿದ ಪಕ್ಷವಿದು. ಅದರ ಚುಕ್ಕಾಣಿ ಈಗ ಅವಿವಾಹಿತ, 47 ವರ್ಷದ ನೆಹರೂ ಕುಟುಂಬದ ಕುಡಿಯ ಕೈಗೆ ಬರುತ್ತಿದೆ. ಈ ಹಿನ್ನೆಲೆಯಲ್ಲಿ, ರಾಹುಲ್ ಗಾಂಧಿ ಕುರಿತು ಅಪರೂಪದ ಮಾಹಿತಿಯನ್ನು ಒಳಗೊಂಡ ಈ ಪರಿಚಯ ವರದಿ ಇಲ್ಲಿದೆ.

ರಾಹುಲ್ ಗಾಂಧಿ ಮೂವರು ಪ್ರಭಾವಿ ಪ್ರಧಾನಿಗಳನ್ನು ಈ ದೇಶಕ್ಕೆ ನೀಡಿದ ನೆಹರೂ-ಗಾಂಧಿ ಕುಟುಂಬದ ನಾಲ್ಕನೇ ತಲೆಮಾರಿನ ಯುವಕ. ಜವಾಹರಲಾಲ್ ನೆಹರೂ, ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ ನಂತರ ಪ್ರಧಾನಿ ಪಟ್ಟಕ್ಕೆ ಉಮೇದುರಾರರು ರಾಹುಲ್.

ಬಾಲ್ಯ ಮತ್ತು ಶಿಕ್ಷಣ:

19 ಜೂನ್ 1970 ರಂದು ರಾಹುಲ್ ಜನಿಸಿದರು. ತಂದೆ ರಾಜೀವ್ ಗಾಂಧಿ, ತಾಯಿ ಸೋನಿಯಾ ಗಾಂಧಿ. ರಾಹುಲ್ ಸಹೋದರಿ ಹೆಸರು ಪ್ರಿಯಾಂಕಾ ಗಾಂಧಿ; ವಿವಾದಿತ ಉದ್ಯಮಿ ರಾಬರ್ಟ್ ವಾದ್ರಾ ಪತ್ನಿ. ರಾಹುಲ್ ಗಾಂಧಿ ಭಾರತದ ಪ್ರತಿಷ್ಠಿತ ಶಾಲೆಗಳಲ್ಲಿ ತಮ್ಮ ಪ್ರಾಥಮಿಕ ಶಿಕ್ಷಣ ಪೂರೈಸಿದರು. ಬಾಲ್ಯದ ಚಿತ್ರಗಳನ್ನು ಗಮನಿಸಿದಾಗ ರಾಹುಲ್ ಗಾಂಧಿ ಸ್ವಲ್ಪ ನಾಚಿಕೆ ಸ್ವಭಾವ ಹೊಂದಿರುವುದು ಎದ್ದು ಕಾಣಿಸುತ್ತದೆ.

ಆದರೆ ಅವರೀಗ ತಮ್ಮ 47 ನೇ ವಯಸ್ಸಿನಲ್ಲಿ ರಾಷ್ಟ್ರೀಯ ಪಕ್ಷವನ್ನು ಮುನ್ನಡೆಸುವ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ.1989ರಲ್ಲಿ ಪದವಿ ಶಿಕ್ಷಣಕ್ಕಾಗಿ ರಾಹುಲ್ ಗಾಂಧಿ, ಸೇಂಟ್ ಸ್ಟೀಫನ್ಸ್  ಕಾಲೇಜ್ ಸೇರಿದ್ದರು. 1991ರಲ್ಲಿ ಯುಎಸ್‌ನ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರ ಅಧ್ಯಯನ ಮಾಡಿದರು. 1995 ರಲ್ಲಿ ಕೆಂಬ್ರಿಡ್ಜ್ ವಿಶ್ವವಿದ್ಯಾಲಯದ ಟ್ರಿನಿಟಿ ಕಾಲೇಜಿನಿಂದ ಎಂ.ಫಿಲ್ ಪಡೆದುಕೊಂಡರು. 2002ರಲ್ಲಿ ಅವರು ಮುಂಬೈಗೆ ಬರುವ ಮುನ್ನವೇ ಲಂಡನ್ನಲ್ಲಿ ಕೆಲವು ಸಮಯದವರೆಗೆ ಕೆಲಸ ಮಾಡಿದ ಅನುಭವವನ್ನು ಪಡೆಕೊಂಡಿದ್ದರು ಎನ್ನುತ್ತವೆ ದಾಖಲೆಗಳು.

ರಾಜಕೀಯಕ್ಕೆ ಎಂಟ್ರಿ:

ರಾಹುಲ್ ಗಾಂಧಿಗೆ ರಾಜಕೀಯ ಜೀವನಕ್ಕಿಂತ ಕ್ರಿಕೆಟ್ ಮತ್ತು ಹೊರಾಂಗಣ ಕ್ರೀಡೆಗಳಲ್ಲಿ ಹೆಚ್ಚಿನ ಆಸಕ್ತಿ ಇತ್ತೆಂದು ಹೇಳಲಾಗುತ್ತಿತ್ತು. ಹಾಗಾಗಿ ರಾಹುಲ್ ಸಹೋದರಿ ಪ್ರಿಯಾಂಕಾ, ಗಾಂಧಿ ಮನೆತನದ ರಾಜಕೀಯ ಹೊಣೆಗಾರಿಕೆಯನ್ನು ಮುನ್ನಡೆಸುತ್ತಾರೆ ಎಂದೇ ಭಾವಿಸಲಾಗಿತ್ತು. ಆದರೆ 2004ರ ಸಾರ್ವತ್ರಿಕ ಚುನಾವಣೆ ಹೊತ್ತಿಗೆ ರಾಜಕೀಯಕ್ಕೆ ಬರುವ ರಾಹುಲ್ ಅವರ ನಿರ್ಧಾರ ಅನೇಕರಿಗೆ ಆಶ್ಚರ್ಯ ಉಂಟು ಮಾಡಿತ್ತು. ಅವರು ಶಿಕ್ಷಕರಲ್ಲಿ ಕೆಲವರಿಗೆ ಅಸಮಾಧಾನವೂ ಉಂಟು ಮಾಡಿತ್ತು.

ಕೃಪೆ: ಟ್ವಿಟರ್

2004ರ ಲೋಕಸಭಾ ಚುನಾವಣೆ ರಾಹುಲ್ ಎದುರಿಸಿದ ಮೊದಲ ರಾಜಕೀಯ ಅಗ್ನಿ ಪರೀಕ್ಷೆ. ಅದಕ್ಕಾಗಿ ಅವರು ಆಯ್ಕೆ ಮಾಡಿಕೊಂಡಿದ್ದು 1980ರಿಂದಲೇ ಗಾಂಧಿ-ನೆಹರೂ ಕುಟುಂಬದ ತವರು ಕ್ಷೇತ್ರವೆಂದೇ ಕರೆಯಲ್ಪಡುವ ಉತ್ತರ ಪ್ರದೇಶದ ಅಮೇಥಿ. ಅಲ್ಲಿ ಮೊದಲು ಸ್ಪರ್ಧಿಸಿದ ರಾಹುಲ್, ಗೆಲ್ಲುವ ಮೂಲಕ ಲೋಕಸಭೆಯನ್ನು ಪ್ರವೇಶಿಸಿದರು. ಇದೇ ಕ್ಷೇತ್ರದಿಂದ ರಾಜೀವ್ ಗಾಂಧಿ ಕೂಡ ಸಂಸತ್ತಿಗೆ ಆಯ್ಕೆಯಾಗಿದ್ದರು.

ಇದಾದ ನಂತರ, ಸೆಪ್ಟೆಂಬರ್ 2007ರಲ್ಲಿ ರಾಹುಲ್ ಅವರನ್ನು ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ ಮಾಡಲಾಯಿತು. 2013 ರಲ್ಲಿ ಅವರು ಪಕ್ಷದ ಉಪಾಧ್ಯಕ್ಷರಾಗಿ ನೇಮಕಗೊಂಡಿದ್ದರು. ಈಗ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ನೆಹರೂ-ಗಾಂಧಿ ವಂಶದ ನಾಲ್ಕನೇ ಪೀಳಿಗೆಯನ್ನು ರಾಹುಲ್ ಪ್ರತಿನಿಧಿಸುತ್ತಿದ್ದಾರೆ. ಈ ಮೂಲಕ ವಂಶಾಡಳಿತವನ್ನು ಮುಂದುವರೆಸಿಕೊಂಡು ಹೋಗುತ್ತಿರುವ ಟೀಕೆಗಳೂ ಅವರ ಬೆನ್ನಗೆ ಕಟ್ಟಿಕೊಂಡಿದ್ದಾರೆ.

ಉತ್ತರ ಪ್ರದೇಶದ ಅಮೇಥಿಯಿಂದ ಸತತ ಮೂರು ಬಾರಿ ಲೋಕಸಭೆಗೆ ಆಯ್ಕೆಯಾಗುವ ಮೂಲಕ ರಾಹುಲ್ ತಮ್ಮ ವೈಯಕ್ತಿಕ ರಾಜಕೀಯ ಜೀವನದಲ್ಲಿ ಉತ್ತಮ ‘ಟ್ರ್ಯಾಕ್ ರೆಕಾರ್ಡ್’ ನಿರ್ಮಿಸಿದ್ದಾರೆ. ಆದಾಗ್ಯೂ, 2014 ರ ಸಾರ್ವತ್ರಿಕ ಚುನಾವಣೆ ಸೇರಿದಂತೆ ಕೆಲವು ವಿಧಾನಸಭೆ ಚುನಾವಣೆಗಳಲ್ಲಿ ಒಟ್ಟಾರೆಯಾಗಿ ಕಾಂಗ್ರೆಸ್ ತನ್ನ ಮೊದಲಿನ ಪ್ರಭಾವವನ್ನು ಹಾಗೂ ವರ್ಚಸ್ಸನ್ನು ಕಳೆದುಕೊಂಡಿದೆ. ಇವೆಲ್ಲಕ್ಕೂ ರಾಹುಲ್ ಗಾಂಧಿಯನ್ನೇ ಪ್ರತಿಪಕ್ಷಗಳು ಹೊಣೆಗಾರರನ್ನಾಗಿ ಮಾಡಿವೆ ಎಂಬುದನ್ನೂ ಮರೆಯುವ ಹಾಗಿಲ್ಲ.

ಉತ್ತರ ಪ್ರದೇಶದಲ್ಲಿ 2012ರ ಚುನಾವಣೆಯಲ್ಲಿ ರಾಹುಲ್ ಗಾಂಧಿ 20ಕ್ಕೂ ಅಧಿಕ ಬಹಿರಂಗ ಸಭೆಗಳಲ್ಲಿ ಪಾಲ್ಗೊಂಡಿದ್ದರು. ಹಳ್ಳಿಗಳ ಗುಡಿಸಲುಗಳಲ್ಲಿ ಉಳಿದುಕೊಂಡು ಅವರೊಟ್ಟಿಗೆ ಬೆರೆಯುವ ಪ್ರಯತ್ನ ಮಾಡಿ ಗಮನ ಸೆಳೆದಿದ್ದರು.

ಕೃಪೆ: ಬಿಬಿಸಿ

ಸ್ವಾತಂತ್ರ್ಯ ನಂತರ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿದ್ದವರು ಭಾರತದ ರಾಜಕೀಯ ಇತಿಹಾಸದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. 132 ವರ್ಷದ ಕಾಂಗ್ರೆಸ್ ಪ್ರಯಾಣದ ಹಾದಿಯಲ್ಲಿ ನೆಹರೂ-ಗಾಂಧಿ ಮನೆತನದ ಐವರು ಪಕ್ಷದ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ್ದರು. ಜವಾಹರಲಾಲ್‌ ನೆಹರೂ 3 ವರ್ಷ, ಇಂದಿರಾ ಗಾಂಧಿ ಮತ್ತು ರಾಜೀವ್‌ ಗಾಂಧಿ ತಲಾ 8 ವರ್ಷಗಳು ಹಾಗೂ ಸೋನಿಯಾ ಗಾಂಧಿ 19 ವರ್ಷಗಳ ಕಾಲ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಅಧಿಕಾರದಲ್ಲಿದ್ದರು. ಈಗ ರಾಹುಲ್ ಗಾಂಧಿ ಸರದಿ. ಅವರ ಭವಿಷ್ಯ, ಕಾಂಗ್ರೆಸ್ ಭವಿಷ್ಯವೂ ಆಗಿರುವುದರಿಂದ ಸಹಜವಾಗಿಯೇ ಕುತೂಹಲವೂ ಮೂಡಿಸುತ್ತಿದೆ.