Home news-for-4-1-display ಪರಪ್ಪನ ಅಗ್ರಹಾರಕ್ಕೆ ‘ಹೆಲೋ’ ಹೇಳಿದ ರವಿ ಬೆಳಗೆರೆ: ಬದಲಾದ ಕಾಲ ಹಾಗೂ ಉತ್ತರ ಸಿಗದ ಪ್ರಶ್ನೆಗಳು

ಪರಪ್ಪನ ಅಗ್ರಹಾರಕ್ಕೆ ‘ಹೆಲೋ’ ಹೇಳಿದ ರವಿ ಬೆಳಗೆರೆ: ಬದಲಾದ ಕಾಲ ಹಾಗೂ ಉತ್ತರ ಸಿಗದ ಪ್ರಶ್ನೆಗಳು

SHARE

ಸುಪಾರಿ

ಸಂಚಿನ ಆರೋಪ ಹೊತ್ತಿದ್ದ ಪತ್ರಕರ್ತ ರವಿ ಬೆಳಗೆರೆ ಕೊನೆಗೂ ಜೈಲು ಪಾಲಾಗಿದ್ದಾರೆ; ಅವರೀಗ ಪರಪ್ಪನ ಅಗ್ರಹಾರದಲ್ಲಿ ವಿಚಾರಣಾಧೀನ ಖೈದಿ 12785!

ಸಹೋದ್ಯೋಗಿ ಸುನೀಲ್ ಹೆಗ್ಗರವಳ್ಳಿ ಹತ್ಯೆಗೆ ಸುಪಾರಿ ನೀಡಿದ ಆರೋಪದ ಮೇಲೆ ಸಿಸಿಬಿ ಪೊಲೀಸರಿಂದ ಶುಕ್ರವಾರ ಬಂಧನಕ್ಕೆ ಒಳಗಾಗಿದ್ದರು. ನ್ಯಾಯಾಲಯ ತನಿಖಾಧಿಕಾರಿಗಳ ಕೋರಿಕೆ ಮೇರೆಗೆ 4 ದಿನಗಳ ಕಸ್ಟಡಿಗೂ ನೀಡಿತ್ತು. ಸಿಸಿಬಿ ಪೊಲೀಸರು ಪಡೆದುಕೊಂಡಿದ್ದ ವಿಚಾರಣಾ ಅವಧಿ ಸೋಮವಾರ ಮುಗಿಯುತ್ತಿದ್ದ ಹಿನ್ನೆಲೆಯಲ್ಲಿ ನ್ಯಾಯಾಲಯದ ಮುಂದೆ ಬೆಳಗೆರೆಯನ್ನು ಹಾಜರುಪಡಿಸಿದರು. ಈ ಸಮಯದಲ್ಲಿ ವಿಚಾರಣೆ ನಡೆಸಿದ ನ್ಯಾಯಾಲಯ, ಆರೋಪಿಯನ್ನು ಪರಪ್ಪನ ಅಗ್ರಹಾರ ಕಾರಾಗೃಹಕ್ಕೆ ಕಳುಹಿಸಿದೆ. ಹೀಗಾಗಿ, ಮುಂದಿನ 14 ದಿನಗಳ ನ್ಯಾಯಾಂಗ ಬಂಧನವನ್ನು ರವಿ ಬೆಳರೆಗೆ ಕೇಂದ್ರ ಕಾರಾಗೃಹದಲ್ಲಿ ಕಳೆಯಬೇಕಿದೆ.

ಬಳ್ಳಾರಿ ಮೂಲದ ರವಿ ಬೆಳಗೆರೆ ಓದಿದ್ದು ಇತಿಹಾಸದಲ್ಲಿ ಸ್ನಾತ್ತಕೋತ್ತರ ಪದವಿ. ಆರಿಸಿಕೊಂಡಿದ್ದು ಪತ್ರಿಕೋದ್ಯಮವನ್ನು ವೃತ್ತಿಯಾಗಿ. ಕರ್ಮವೀರದಲ್ಲಿ ಚಿಕ್ಕ ವಯಸ್ಸಿನಲ್ಲಿಯೇ ಸಂಪಾದಕ ಹುದ್ದೆಯನ್ನು ವಹಿಸಿಕೊಂಡಿದ್ದವರು. ‘ಪಾಪಿಗಳ ಲೋಕದಲ್ಲಿ’ ಬರೆಯುವ ಮೂಲಕ ಅಪರಾಧ ವರದಿಗಾರಿಕೆಯಲ್ಲಿ ಗುರುತಿಸಿಕೊಂಡವರು. 90ರ ದಶಕದಲ್ಲಿ ‘ಹಾಯ್‌ ಬೆಂಗಳೂರು!’ ಹೆಸರಿನ ಟ್ಯಾಬ್ಲಾಯ್ಡ್‌ ಪತ್ರಿಕೆಯನ್ನು ಆರಂಭಿಸುವ ಮೂಲಕ ಹಣ ಮತ್ತು ಯಶಸ್ಸಿನ ಶಿಖರವನ್ನು ಮುಟ್ಟಿದವರು. ಇದೀಗ, ಅವರೇ ಬರೆಯುತ್ತಿದ್ದ ಅಪರಾಧ ಲೋಕದ ವರದಿಗಳಲ್ಲಿ ಬರುತ್ತಿದ್ದ ಜೈಲು ಎಂಬ ಕಂಬಿ ಹಿಂದಿನ ಲೋಕಕ್ಕೆ ಅಧಿಕೃತವಾಗಿ ಕಾಲಿಟ್ಟಿದ್ದಾರೆ; ಬಹುಶಃ ಮೊದಲ ಬಾರಿಗೆ.

“ಇನ್ನೇನು ಕೆಲವೇ ತಿಂಗಳುಗಳಲ್ಲಿ 60ರ ವಯಸ್ಸನ್ನು ಮುಟ್ಟಲಿರುವ ರವಿ ಬೆಳಗೆರೆ ಬದುಕಿನಲ್ಲಿ ಇಂತಹದೊಂದು ತಿರುವು ಬರಬಹುದು ಎಂದು ನಿರೀಕ್ಷೆ ಕೂಡ ಮಾಡಿರಲಿಲ್ಲ. ಆತ ಶ್ರಮಜೀವಿ, ಶ್ರದ್ಧೆಯಿಂದ ಬೆಳೆದ. ಕೆಲವು ದಿನಗಳಲ್ಲಿ ಪತ್ರಿಕೆಯ ಬರವಣಿಗೆಗೆ ಪೂರ್ಣ ವಿರಾಮ ಇಡುವ ಮನಸ್ಸು ಮಾಡಿದ್ದ. ಅದಾದ ಮೇಲೆ ವಿಶ್ರಾಂತ ಜೀವನ ಎನ್ನುತ್ತಿದ್ದ. ಆದರೆ ಇದೀಗ ಅವನು ಜೈಲು ಸೇರಿದ್ದಾನೆ. ತಪ್ಪು ಮಾಡಿದ್ದಾನೋ ಇಲ್ಲವೋ ಗೊತ್ತಿಲ್ಲ, ಆದರೆ ಈ ವಯಸ್ಸಿನಲ್ಲಿ, ಕೆಟ್ಟ ಆರೋಗ್ಯ ಹೊಂದಿರುವ ಅವನಿಗೆ ಇವನ್ನೆಲ್ಲಾ ಭರಿಸುವ ಶಕ್ತಿ ಇಲ್ಲ,” ಎನ್ನುತ್ತಾರೆ ಬೆಳಗೆರೆ ಕುಟುಂಬದ ಆಪ್ತರೊಬ್ಬರು.

ಘಟನೆ ಆಚೆಗೆ: 

ಕನ್ನಡ ಪತ್ರಿಕೋದ್ಯಮದ ಇತಿಹಾಸದಲ್ಲಿ ವ್ಯಕ್ತಿ ನೆಲೆಯಲ್ಲಿ ವೃತ್ತಿಗೊಂದು ಘನತೆ, ಜನಪ್ರಿಯೆತಗಳನ್ನು ತಂದುಕೊಟ್ಟವರು ಕೆಲವೇ ಜನ. ಅದರಲ್ಲಿ ಬೆಳಗೆರೆ ಕೂಡ ಒಬ್ಬರು. 90ರ ದಶಕದ ಮಧ್ಯಭಾಗದಿಂದ ಹೆಚ್ಚು ಕಡಿಮೆ 2010ರವರೆಗೆ ರವಿ ಬೆಳಗೆರೆ ಟ್ಯಾಬ್ಲಾಯ್ಡ್‌ ಪತ್ರಿಕೆಯ ಮೂಲಕ ಜನಾಭಿಪ್ರಾಯ ರೂಪಿಸುತ್ತಿದ್ದ ಪ್ರಭಾವಿ ಪತ್ರಕರ್ತರಾಗಿದ್ದರು. ಕೇವಲ ವಾರ ಪತ್ರಿಕೆಗೆ ಸೀಮಿತರಾಗದ ಅವರು ದೂರದರ್ಶನ, ರೇಡಿಯೋ, ಪ್ರಕಾಶನ ಹೀಗೆ ನಾನಾ ಅಭಿವ್ಯಕ್ತಿ ಮಾಧ್ಯಮಗಳ ಮೂಲಕವೂ ಜನರನ್ನು ತಲುಪಲು ದಾರಿಗಳನ್ನು ಕಂಡುಕೊಂಡಿದ್ದರು. ಒಬ್ಬ ಪತ್ರಕರ್ತ ಜನಪ್ರಿಯತೆಯ ಉತ್ತುಂಗವನ್ನು ಎಷ್ಟರ ಮಟ್ಟಿಗೆ ಅನುಭವಿಸಬಹುದು ಎಂಬುದಕ್ಕೆ ಜೀವಂತ ಸಾಕ್ಷಿಯಾಗಿದ್ದವರು ಬೆಳಗೆರೆ.

ಇಂತಹ ಕೆಲವು ಅಂಶಗಳ ಜತೆ ಜತೆಗೇ, ಬೆಳಗೆರೆ ಸಾಕಷ್ಟು ಟೀಕೆಗಳಿಗೂ ಗುರಿಯಾಗಿದ್ದರು. ಅವರ ಬರವಣಿಗೆಯಲ್ಲಿ ಸಿಗದ ವಸ್ತುನಿಷ್ಟತೆ, ಅಕ್ಷರಗಳನ್ನು ಮಾರಾಟ ಮಾಡಲು ಬಳಸುತ್ತಿದ್ದ ಅತಿರಂಜಕವಾದ ಭಾಷೆ, ಕೆಲವೊಮ್ಮೆ ಕಾರಣಗಳೇ ಇಲ್ಲದೆ ನಡೆಯುತ್ತಿದ್ದ ವೈಯಕ್ತಿಕ ತೇಜೋವಧೆಗಳು ಕರ್ನಾಟಕದ ‘ಪೀತ ಪತ್ರಿಕೋದ್ಯಮ’ದ ಆಯಾಮಗಳನ್ನು ಪರಿಚಯ ಮಾಡಿಸಿದ್ದವು. ಮಾತು ಮತ್ತು ಕೃತಿ, ಬರವಣಿಗೆ ಮತ್ತು ಬದುಕುಗಳ ನಡುವೆ ಸಂಬಂಧವಿಲ್ಲದೆ ಬದುಕುವವರು ಹೇಗಿರಬಲ್ಲರು ಎಂಬುದಕ್ಕೆ ಸಾಕಷ್ಟು ಉದಾಹರಣೆಗಳಿವೆ. ಅವುಗಳ ಮುಂಚೂಣಿಯಲ್ಲಿದ್ದವರು ರವಿ ಬೆಳಗೆರೆ.

ಕಾಲ ಬದಲಾಗಿತ್ತು:

ಹೀಗಿದ್ದಾಗಲೇ, ರವಿ ಬೆಳಗೆರೆ ಕಟ್ಟಿಕೊಂಡಿದ್ದ ಕೋಟೆ ಆಚೆಗೆ ಬೆಳವಣಿಗೆಗಳು ಘಟಿಸಲು ಶುರುವಾದವು. ಒಂದು ಕಡೆ ಅವರ ಆರೋಗ್ಯ ಕೈಕೊಡುತ್ತಿದ್ದ ಸಮಯದಲ್ಲಿಯೇ ಅಂತರ್ಜಾಲದ ಕ್ರಾಂತಿ ನಿಧಾನವಾಗಿ ಪರಿಣಾಮಗಳನ್ನು ಬೀರತೊಡಗಿತು. ಕರ್ನಾಟಕದಲ್ಲಿ ವಾರ ಪತ್ರಿಕೆ ಅಥವಾ ಟ್ಯಾಬ್ಲಾಲ್ಡ್‌ ಎಂಬ ಪರಿಕಲ್ಪನೆ ಹಿಂದೆಕ್ಕೆ ಹೋಗತೊಡಗಿತು. ಒಂದು ಕಾಲದಲ್ಲಿ ರವಿ ಬೆಳಗೆರೆ ವಾರಕ್ಕೊಮ್ಮೆ ನೀಡುತ್ತಿದ್ದ ರೋಚಕ ಸುದ್ದಿಗಳನ್ನೇ 24/7 ನೀಡಲು ಟಿವಿ ವಾಹಿನಿಗಳು ಪೈಪೋಟಿ ನಡೆಸತೊಡಗಿದ್ದವು. ಜನರ ಅಭಿರುಚಿ, ಆಸಕ್ತಿ ಕೂಡ ‘ಕಪ್ಪು ಸುಂದರಿ’ಯಿಂದ ಕಲರ್‌ಫುಲ್‌ ಸುದ್ದಿ ಜಗತ್ತಿನ ಕಡೆಗೆ ವಾಲತೊಡಗಿತು. ಪರಿಣಾಮ, ಹಾಯ್ ಬೆಂಗಳೂರು ಮಾರಾಟ ಸಂಖ್ಯೆ ಗಣನೀಯ ಪ್ರಮಾಣಕ್ಕೆ ಕುಸಿಯಿತು. ಬೆಳಗೆರೆ ಉಳಿದ ಅಭಿವ್ಯಕ್ತಿ ಪ್ರಯೋಗಗಳೂ ಕೂಡ ಕಂಟಿನ್ಯುಟಿ ಕಳೆದುಕೊಂಡವು.

ಹಾಗೆ ನೋಡಿದರೆ, 2017ರ ಹೊತ್ತಿಗೆ ರವಿ ಬೆಳಗೆರೆ ಕನ್ನಡ ಪತ್ರಿಕೋದ್ಯಮದ ಪಾಲಿಗೆ ‘ಜೀವಮಾನದ ಸಾಧನೆ’ ಮಾಡಿದ ಹಿರಿಯ ಪತ್ರಕರ್ತರಾಗಿ ಜಾಗ ಪಡೆದುಕೊಂಡಿದ್ದರು. ಅವರು ಕಾಲದ ಜತೆಗೆ ತೊಡರಿಕೊಂಡು ಐದಾರು ವರ್ಷಗಳ ಹಿಂದೆಯೇ ಉಳಿದುಕೊಂಡು ಬಿಟ್ಟಿದ್ದರು. ಸಾಮಾಜಿಕ ಜಾಲತಾಣಗಳ ಯುಗದಲ್ಲಿ ಅವರ ಪ್ರಭಾವ ಕಡಿಮೆಯಾಗಿತ್ತು. ಅಭಿಪ್ರಾಯ ರೂಪಿಸುವ ಮಾತು ದೂರವೇ ಉಳಿದಿತ್ತು.

ಯಾಕೀ ಸಂಚು?: 

ತನ್ನ ನ್ಯೂನತೆಗಳನ್ನೂ ಬರವಣಿಗೆಯ ಮೂಲಕ ಬಂಡವಾಳ ಮಾಡಿಕೊಂಡ ಪತ್ರಕರ್ತ ರವಿ ಬೆಳಗೆರೆ. ಹೆಚ್ಚು ಕಡಿಮೆ ಅದೇ ಕಾರಣಗಳಿಗಾಗಿಯೇ ಬದಲಾದ ಕಾಲದಲ್ಲಿ ಬರವಣಿಗೆಯ ಕನ್ಸಿಸ್ಟೆಸ್ಟಿಯನ್ನು ಉಳಿಸಿಕೊಳ್ಳಲು ಅವರಿಂದ ಆಗಲಿಲ್ಲ. ಇನ್ನೇನು ವಿಶ್ರಾಂತ ಜೀವನಕ್ಕೆ ಹೋಗುವ ಮನಸ್ಸು ಮಾಡಿದ್ದಾಗಲೇ, ಸಹೋದ್ಯೋಗಿ ಹತ್ಯೆಗೆ ಸುಪಾರಿ ನೀಡಿದ ಆರೋಪ ಹೊತ್ತುಕೊಂಡಿದ್ದಾರೆ. ಕಳೆದ ನಾಲ್ಕು ದಿನಗಳ ಅಂತರದಲ್ಲಿ ಬೆಳಗೆರೆ ಮತ್ತೆ ಕರ್ನಾಟಕದ ಸುದ್ದಿ ಕೇಂದ್ರವನ್ನು ಆವರಿಸಿಕೊಂಡಿದ್ದಾರೆ. ಜನರ ಗಮನವನ್ನು ಸೆಳೆದಿದ್ದಾರೆ. ಕೊನೆಗಾಲದಲ್ಲಿ ಕೆಟ್ಟ ನೆನಪೊಂದನ್ನು, ಕಪ್ಪು ಚುಕ್ಕಿಯೊಂದನ್ನು ಅಂಟಿಸಿಕೊಂಡಿದ್ದಾರೆ.

ರವಿ ಬೆಳಗೆರೆ ವ್ಯಕ್ತಿಗತ ಟೀಕೆ ಟಿಪ್ಪಣಿಗಳ ಆಚೆಗೆ, ಪ್ರಕರಣವನ್ನು ಕೇಂದ್ರವಾಗಿಟ್ಟುಕೊಂಡು ನೋಡಿದರೆ, ಒಂದಷ್ಟು ಪ್ರಶ್ನೆಗಳು ಕಾಡುತ್ತವೆ.

ಒಬ್ಬ ಸುಪಾರಿ ಹಂತಕ ನೀಡಿದ ಹೇಳಿಕೆ ಕಾರಣಕ್ಕೆ ಪತ್ರಕರ್ತ ಬೆಳಗೆರೆ ಜೈಲು ಪಾಲಾದರಾ? ಸುಪಾರಿ ಹಂತಕನಿಗೇ ಬೆಳಗೆರೆ ಪಿಸ್ತೂಲು ಹಾಗೂ ಜೀವಂತ ಗುಂಡುಗಳನ್ನು ಕೊಟ್ಟು ಕಳಿಸಿದರು ಎಂದು ಎಫ್‌ಐಆರ್‌ ಹೇಳುತ್ತಿದೆ. ಕಳಿಸಿದ್ದರೆ ಅದೀಗ ಎಲ್ಲಿದೆ?

ಒಂದು ವೇಳೆ, ಕೋಳಿವಾಡ ಪ್ರಕರಣದಲ್ಲಿ ಸೋತ ಶಾಸನಸಭೆ ಸರಕಾರದ ಮೂಲಕ ಒತ್ತಡ ಹೇರಿ ಹೀಗೊಂದು ಪ್ರಕರಣವನ್ನು ಬೆಳಗೆರೆ ವಿರುದ್ಧ ಬಳಸಿಕೊಂಡಿತಾ? ಬಳಸಿಕೊಂಡಿದ್ದೇ ಆದರೆ ಅದರಿಂದ ಯಾರಿಗಾದರೂ ಆದ ಲಾಭ ಏನು?

ಗೌರಿ ತನಿಖೆಗೆ ಹೊರಟ ಎಸ್‌ಐಟಿಗೆ ಸಾಕಷ್ಟು ಹಲವು ಹಳೆಯ ಸುಪಾರಿ ಸಂಚುಗಳು ಕಾಲಿಗೆ ತೊಡರಿಕೊಂಡಿವೆ ಎಂದು ವರದಿಗಳು ಹೇಳಿದ್ದವು. ಅದು ನಿಜನಾ ಅಥವಾ ಬರೀ ಓಳಾ?. ಈ ಪ್ರಶ್ನೆಗಳಿಗೆ ಉತ್ತರವನ್ನು ಸರಕಾರ ನೀಡಬೇಕಿದೆ. ಇಲ್ಲವಾದರೆ ಕಾಲ ಕಳೆಯುತ್ತಿದ್ದಂತೆ ಒಂದಷ್ಟು ನಿಚ್ಚಳವಾಗುತ್ತವೆ.

ಕೊನೆಯದಾಗಿ; ಹೇಗೂ, ಗಣೇಶನ ಮಾಡಿ ಎಂದು ಕಳುಹಿಸಿದ ಎಸ್‌ಐಟಿ ಈಗಾಗಲೇ ಗಣೇಶನ ಅಪ್ಪನ ವಿಗ್ರಹ ಕೆತ್ತಿಕೊಂಡು ಕುಳಿತಿದೆ. ರವಿ ಬೆಳಗೆರೆ ಪ್ರಕರಣಕ್ಕೂ ಗೌರಿ ಹತ್ಯೆಗೂ ಸಂಬಂಧವೇ ಇಲ್ಲ ಎಂದು ಸ್ವತಃ ಗೃಹ ಸಚಿವರು ಹೇಳುತ್ತಿದ್ದಾರೆ. ಹೇಗೂ, ಸುಪಾರಿ ಸಂಚು ನೀಡಿದ ಆರೋಪದ ಮೇಲೆ ರವಿ ಬೆಳಗೆರೆ ಜೈಲು ಪಾಲಾಗಿದ್ದೂ ಆಯಿತು. ಅಂದಹಾಗೆ, ಗೌರಿ ಲಂಕೇಶ್ ಹಂತಕರು ಯಾವಾಗ ಸಿಗುತ್ತಾರೆ?