Home Investigation ಗೌರಿ ಸಾವಿನ ಸುತ್ತ…: ‘ಲಂಕೇಶ್ ಪತ್ರಿಕೆ’ಯ ಮತ್ತೊಬ್ಬ ಪತ್ರಕರ್ತನ ಹತ್ಯೆ ಪ್ರಕರಣಕ್ಕೆ 25 ವರ್ಷ

ಗೌರಿ ಸಾವಿನ ಸುತ್ತ…: ‘ಲಂಕೇಶ್ ಪತ್ರಿಕೆ’ಯ ಮತ್ತೊಬ್ಬ ಪತ್ರಕರ್ತನ ಹತ್ಯೆ ಪ್ರಕರಣಕ್ಕೆ 25 ವರ್ಷ

SHARE

ಹುಟ್ಟು ಮತ್ತು ಸಾವು ಸಹಜವೇ ಆದರೂ, ಮನುಷ್ಯನೂ ಒಳಗೊಂಡಂತೆ ಎಲ್ಲಾ ಜೀವ ಪ್ರಬೇಧಗಳು ಹುಟ್ಟಿಗೆ ಸಂಭ್ರಮ ಪಡುತ್ತವೆ; ಸಾವಿಗೆ ಮರುಗುತ್ತವೆ. ಅದೇ ಸಾವು ಅಸಹಜವಾದರೆ ಸಹಜ ಆಕ್ರೋಶವೂ ಹುಟ್ಟುತ್ತದೆ.

ಬೆಂಗಳೂರು ಮೂಲದ ಪತ್ರಕರ್ತೆ, ಹೋರಾಟಗಾರ್ತಿ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿಯೂ ಇದೇ ಆಗಿದೆ. ಹತ್ಯೆ ನಡೆದ ನಾಲ್ಕು ದಿನಗಳು ಕಳೆಯುತ್ತಿರುವ ಈ ವೇಳೆಯಲ್ಲಿ, ಗೌರಿ ಲಂಕೇಶ್ ಸಾವಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರತಿರೋಧವೊಂದು ವ್ಯಕ್ತವಾಗಿದೆ. ಸೆ. 7ರಂದು ಪ್ರಕಟಗೊಂಡ ‘ಮರ್ಡರ್‌ ಆಫ್‌ ಆನ್ ಇಂಡಿಯನ್ ಜರ್ನಲಿಸ್ಟ್’ ಎಂಬ ‘ದಿ ನ್ಯೂ ಯಾರ್ಕ್‌ ಟೈಮ್ಸ್’ ಸಂಪಾದಕೀಯ, ಗಟ್ಟಿ ದನಿಯಲ್ಲಿ ‘ಪ್ರಧಾನಿ ಮೋದಿ ಗೌರಿ ಸಾವಿಗೆ ಸಂತಾಪ ಸೂಚಿಸದಿದ್ದರೆ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕರಾಳ ದಿನಗಳಿಗೆ ನಾಂದಿ ಹಾಡಿದಂತೆ ಆಗುತ್ತದೆ’ ಎಂದು ಹೇಳಿದೆ.

ಥ್ಯಾಯ್‌ಲ್ಯಾಂಡ್‌ನಲ್ಲಿ ‘ಐ ಆಮ್ ಗೌರಿ’ ಭಿತ್ತಿ ಚಿತ್ರ ಪ್ರದರ್ಶನ ನಡೆದಿದೆ. ದೇಶದ ನಾನಾ ಭಾಗಗಳು ಹಾಗೂ ರಾಜ್ಯದ ಹಲವು ಜಿಲ್ಲೆಗಳಿಂದ ಗೌರಿ ಹತ್ಯೆ ಖಂಡಿಸಿ ಪ್ರತಿಭಟನೆಗಳು ನಡೆಯುತ್ತಿದೆ. ಸೆ. 12ಕ್ಕೆ ಬೆಂಗಳೂರಿನಲ್ಲಿ ಬೃಹತ್ ‘ಪ್ರತಿರೋಧಗಳ ಸಮಾವೇಶ’ ನಡೆಯಲಿದೆ. ಅದಕ್ಕಾಗಿ ಸಿದ್ಧತೆಗಳು ಭರದಿಂದ ಸಾಗಿವೆ.

“ಇದು ಗೌರಿ ಲಂಕೇಶ್ ಸಾವಿಗೆ ಬಂದ ಪ್ರತಿಕ್ರಿಯೆ ಎಂಬುದಕ್ಕಿಂತ ಅವರು ಪ್ರನಿಧಿಸುತ್ತಿದ್ದ ವಿಚಾರಗಳಿಗೆ, ಅಭಿವ್ಯಕ್ತಿ ಸ್ವಾತಂತ್ರ್ಯದ ರಕ್ಷಣೆಗೆ ಕೇಳಿ ಬರುತ್ತಿರುವ ಕೂಗು,” ಎನ್ನುತ್ತಾರೆ ಕಂಚನಹಳ್ಳಿ ಬಾಲು. ಹೆಚ್ಚು ಕಡಿಮೆ ಗೌರಿ ಲಂಕೇಶ್ ವಯಸ್ಸಿನವರೇ ಆದ ಬಾಲು, ಸುಮಾರು 25 ವರ್ಷಗಳ ಹಿಂದೆ ರಾಜ್ಯದಲ್ಲಿ ನಡೆದ ‘ಲಂಕೇಶ್ ಪತ್ರಿಕೆ’ಯ ಇನ್ನೊಬ್ಬ ಪತ್ರಕರ್ತರ ಹತ್ಯೆ ಸಮಯದಲ್ಲಿ ಬಂದಿದ್ದ ಪ್ರತಿರೋಧಕ್ಕೆ ಸಾಕ್ಷಿಯಾದವರು.

ಫ್ಲಾಶ್ ಬ್ಯಾಕ್:

ಇದು ರಾಜಧಾನಿಯಿಂದ 119 ಕಿ.ಮೀ ದೂರದಲ್ಲಿರುವ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನಲ್ಲಿ ಸರಿಯಾಗಿ 25 ವರ್ಷಗಳ ಹಿಂದೆ ನಡೆದ ಪತ್ರಕರ್ತರೊಬ್ಬರ ಹತ್ಯೆಯ ಕತೆ; ಅವತ್ತು ಸೆ. 23, 1992. ನಾಗಮಂಗಲದ ಪಕ್ಕದ ಕಂಚನಹಳ್ಳಿಯಿಂದ ವಕೀಲ, ಅವತ್ತಿನ ‘ಲಂಕೇಶ್ ಪತ್ರಿಕೆ’ಗೆ ಅರೆಕಾಲಿಕ ಪತ್ರಕರ್ತರಾಗಿ ವರದಿಗಳನ್ನು ಬರೆಯುತ್ತಿದ್ದ ಗಂಗಾಧರಮೂರ್ತಿ ಮನೆಯಿಂದ ತಾಲೂಕು ಕೇಂದ್ರದ ಕಡೆಗೆ ಹೊರಟಿದ್ದರು. ಆಗ ಸಮಯ 8.45. ಮನೆಯಿಂದ ತರಾತುರಿಯಲ್ಲಿ ಹೊರಟ ಗಂಗಾಧರಮೂರ್ತಿ ಅವರನ್ನು ಬಜಾಜ್‌ ಸ್ಟೂಟರ್‌ನಲ್ಲಿ ಲೋಕೇಶ್ ಮತ್ತು ಇತರರು ಹಿಂಬಾಲಿಸುವುದನ್ನು ಪತ್ನಿ ನಾಗಮ್ಮ ನೋಡಿದ್ದಾರೆ. ಸ್ವಲ್ಪ ಹೊತ್ತಿನ ನಂತರ ಗಂಗಾಧರಮೂರ್ತಿ ಕೊಲೆ ನಡೆದಿದೆ ಎಂಬ ಮಾಹಿತಿ ವಾಪಾಸ್ ಬಂದಿದೆ. ಹೀಗೆ, ಕರ್ನಾಟಕದಲ್ಲಿ 90ರ ದಶಕದಲ್ಲಿ ಭಾರಿ ಸುದ್ದು ಮಾಡಿದ್ದ ಪತ್ರಕರ್ತರೊಬ್ಬರ ಹತ್ಯೆ ಪ್ರಕರಣ ನಡೆದು ಹೋಗಿತ್ತು. ಅವತ್ತು ಮುಖ್ಯಮಂತ್ರಿಯಾಗಿದ್ದವರು ಸಾರೇಕೊಪ್ಪ ಬಂಗಾರಪ್ಪ.

“ಗಂಗಾಧರಮೂರ್ತಿ ವಕೀಲರಾಗಿದ್ದರೂ, ಪಿ. ಲಂಕೇಶ್ (ಗೌರಿ ಲಂಕೇಶ್ ತಂದೆ) ಅವರ ಜತೆಗೆ ಚೆನ್ನಾಗಿದ್ದರು. ಅವರ ಪತ್ರಿಕೆಗಳಲ್ಲಿ ಕ್ಷೇತ್ರದ ಶಾಸಕ ಎಲ್‌. ಆರ್. ಶಿವರಾಮೇಗೌಡ ಅವರ ವಿರುದ್ಧ ವರದಿಗಳನ್ನು ಬರೆಯುತ್ತಿದ್ದರು. ಲಂಕೇಶರ ಪ್ರಗತಿ ರಂಗದ ರಾಜಕೀಯ ಪ್ರಯೋಗದಲ್ಲಿಯೂ ಪಾಲ್ಗೊಂಡಿದ್ದರು. ಹೀಗಾಗಿ ಗಂಗಾಧರಮೂರ್ತಿ ಕೊಲೆ ಪ್ರಕರಣದ ತನಿಖೆಗೆ ರಾಜ್ಯಮಟ್ಟದ ಪ್ರತಿರೋಧಗಳು ಬಂದಿದ್ದವು. ಸ್ಥಳೀಯಮಟ್ಟದಲ್ಲಿ ಕಾಂಗ್ರೆಸ್, ಬಿಜೆಪಿ ಕೂಡ ಕೊಲೆಗಾರರ ಬಂಧನಕ್ಕೆ ಆಗ್ರಹಿಸಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದವು. ಎಲ್‌. ಆರ್. ಶಿವರಾಮೇಗೌಡ ಸ್ವತಂತ್ರ ಅಭ್ಯರ್ಥಿಯಾಗಿ ಚುನಾಯಿತರಾಗಿದ್ದು ಇದಕ್ಕೆ ಕಾರಣ ಇರಬಹುದು. ನಾನಾ ಸಂಘಟನೆಗಳು, ರಾಜಕೀಯ ಪಕ್ಷಗಳ ಮುಖಂಡರು ಕಂಚನಹಳ್ಳಿಯಿಂದ ನಾಗಮಂಗಲಕ್ಕೆ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ನಾಗಮಂಗಲದ ಪ್ರವಾಸಿ ಮಂದಿರದಿಂದ ಸಮಾವೇಶದ ಜಾಗಕ್ಕೆ ಮಾಜಿ ಪ್ರಧಾನಿ ದೇವೇಗೌಡರು ಬರಿಗಾಲಿನಲ್ಲಿ ಪಾದಯಾತ್ರೆ ನಡೆಸಿದ್ದರು. ಈ ಸಮಯದಲ್ಲಿ ತಲೆಯ ಮೇಲೆ ಕಂಚನಹಳ್ಳಿ ಗಂಗಾಧರಮೂರ್ತಿ ಅವರ ಭಾವಚಿತ್ರವನ್ನು ಹಿಡಿದು ಹೆಜ್ಜೆಹಾಕಿದ ಚಿತ್ರ ಪತ್ರಿಕೆಗಳಲ್ಲಿ ಪ್ರಕಟವಾಗಿತ್ತು. ಅವತ್ತು ‘ಪ್ರಜಾವಾಣಿ’ಗೆ ಕುಸುಮಾ ಶಾನುಭಾಗ್ ಎಂಬ ಪತ್ರಕರ್ತೆ ಸಾಕಷ್ಟು ವರದಿಗಳನ್ನು ಬರೆದಿದ್ದರು,” ಎಂದು 25 ವರ್ಷಗಳ ಹಿಂದೆ ನಡೆದ ಘಟನೆಗಳನ್ನು ಕಣ್ಣಿಗೆ ಕಟ್ಟಿದಂತೆ ವಿವರಿಸುತ್ತಾರೆ ಬಾಲು.

ಕೊಲೆಯಾಗಿದ್ದ ಪತ್ರಕರ್ತ ಕಂಚನಹಳ್ಳಿ ಗಂಗಾಧರಮೂರ್ತಿ ವಕೀಲರೂ ಆಗಿದ್ದರಿಂದ ಅವರ ಕೊಲೆ ಪ್ರಕರಣದ ಆರೋಪಿಗಳಾದ ಶಿವರಾಮೇಗೌಡರ ಪರವಾಗಿ ವಕಾಲತ್ತು ವಹಿಸದಂತೆ ವಕೀಲರ ಸಂಘ ತೀರ್ಮಾನ ತೆಗೆದುಕೊಂಡಿತ್ತು. ಇದನ್ನು ಮೀರಿ ಹಿರಿಯ ವಕೀಲ ಸಿ. ಎಚ್. ಹನುಂತರಾಯಪ್ಪ ಕೇಸು ನಡೆಸಿದರು. ಇದರ ಅನುಭವಗಳನ್ನು ಹನುಮಂತರಾಯರೇ ‘ಟಾಕ್ ಮ್ಯಾಗ್ಸೀನ್‌’ ಗೆ ಬರೆದ ‘ಡೆತ್ ಆಫ್‌ ಎ ಜರ್ನಲಿಸ್ಟ್’ ಲೇಖನದಲ್ಲಿ ಬಿಡಿಸಿಟ್ಟಿದ್ದಾರೆ.

ಕಂಚನಹಳ್ಳಿ ಗಂಗಾಧರಮೂರ್ತಿ ಕೊಲೆ ಪ್ರಕರಣದಲ್ಲಿ ಒಟ್ಟು 17 ಜನ ಆರೋಪಿಗಳಾಗಿದ್ದರು. ಘಟನೆ ನಡೆದು 5-6 ತಿಂಗಳ ನಂತರ ಕರ್ನಾಟಕದಲ್ಲಿ ಮುಖ್ಯಮಂತ್ರಿ ಬದಲಾಯಿತು. ವೀರಪ್ಪ ಮೋಯ್ಲಿ ಮುಖ್ಯಮಂತ್ರಿಯಾಗಿ ಬಂಗಾರಪ್ಪರಿಂದ ಅಧಿಕಾರವಹಿಸಿಕೊಂಡರು. ನಾಗಮಂಗಲ ಶಾಸಕ, ಕೊಲೆ ಪ್ರಕರಣದ ಪ್ರಮುಖ ಆರೋಪಿಯಾಗಿದ್ದ ಎಲ್‌. ಆರ್‌. ಶಿವರಾಮೇಗೌಡ ಬಂದನಕ್ಕೊಳಗಾದರು. ಕೊನೆಗೆ, ನ್ಯಾಯಾಲಯದಲ್ಲಿ ವಾದ ವಿವಾಗಳು ಹಲವು ವರ್ಷಗಳ ಕಾಲ ನಡೆದು 17 ಜನರಲ್ಲಿ 3 ಜನರಿಗೆ ಜೀವಾವಧಿ ಶಿಕ್ಷೆಯಾಯಿತು. ಅದರಲ್ಲಿ ಇಬ್ಬರು ಬಾಲು ಅವರ ಸಂಬಂಧಿಗಳು, ಮತ್ತೊಬ್ಬರು ಶಿವರಾಮೇಗೌಡರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿ; ಅವರೀಗ ಸಾವನ್ನಪ್ಪಿದ್ದಾರೆ.

ಕಾಂಗ್ರೆಸ್ ನಾಯಕಿ ರಮ್ಯಾ ಜತೆ ಎಲ್‌. ಆರ್. ಶಿವರಾಮೇಗೌಡ,

ಎಲ್‌. ಆರ್‌. ಶಿವರಾಮೇಗೌಡ ಪ್ರಕರಣದಲ್ಲಿ ಖುಲಾಸೆಗೊಂಡರು. 1994ರಲ್ಲಿ ನಡೆದ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಜಯಗಳಿಸಿದರು. ನಂತರ ದೇವೇಗೌಡರು ಅವರನ್ನು ಪಕ್ಷಕ್ಕೆ ಕರೆಸಿಕೊಂಡರು.

ಪಾಠಗಳು:

ಅವತ್ತು ಗಂಗಾಧರಮೂರ್ತಿ ಅವರ ಕೊಲೆ ನಡೆದ ಸಮಯದಲ್ಲಿ ಬೆಂಗಳೂರಿನಲ್ಲಿ ಸಿವಿಲ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದವರು ಕಂಚನಹಳ್ಳಿ ಬಾಲು. ಸ್ನೇಹಿತನ ಕೊಲೆ ನಡೆದ ತಕ್ಷಣ ಕೆಲಸ ಬಿಟ್ಟು ಊರಿಗೆ ಹೋಗಿ ಹೋರಾಟಕ್ಕೆ ಇಳಿದರು. ಮುಂದೆ, ರಾಜಕೀಯಕ್ಕೂ ಸೇರಿ ಜಿಲ್ಲಾ ಪಂಚಾಯ್ತಿ ಸದಸ್ಯರೂ ಆದರು. ಇವತ್ತು ಕಂಚನಹಳ್ಳಿಯಲ್ಲೇ ಕೃಷಿ ಮಾಡಿಕೊಂಡಿದ್ದಾರೆ.

“ಗಂಗಾಧರಮೂರ್ತಿ ಕೊಲೆ ನಡೆದಾಗ ಪಿ. ಲಂಕೇಶ್ ಹೋರಾಟಕ್ಕೆ ಬಂದರು. ತಮ್ಮ ಪತ್ರಿಕೆ ಮೂಲಕ 1.5 ಲಕ್ಷದಷ್ಟು ಚಂದಾ ಎತ್ತಿ ಗಂಗಾಧರಮೂರ್ತಿ ಕುಟುಂಬದವರಿಗೆ ನೀಡಿದರು. ಇವತ್ತು ಗಂಗಾಧರಮೂರ್ತಿ ಅವರ ಇಬ್ಬರು ಗಂಡು ಮಕ್ಕಳು ಸ್ವತಂತ್ರವಾಗಿ ಬದುಕು ಕಟ್ಟಿಕೊಂಡಿದ್ದಾರೆ,” ಎನ್ನುತ್ತಾರೆ ಬಾಲು.

ಗಂಗಾಧರಮೂರ್ತಿ ಅವರ ಪ್ರಕರಣದ ತನಿಖೆ ಹಂತದಲ್ಲಿ ಜಾತಿ ರಾಜಕೀಯ ಜೋರಾಗಿ ಬೀಸಲಾರಂಭಿಸಿತು. ಕಂಚನಹಳ್ಳಿ ಸಮೀಪದಲ್ಲಿಯೇ ಇರುವ ಆದಿಚುಂಚನಗಿರಿ ಮಠದ ಅಂದಿನ ಮುಖ್ಯಸ್ಥರಾಗಿದ್ದ ಬಾಲಗಂಗಾಧರನಾಥ ಸ್ವಾಮಿಜಿ ಆರೋಪಿ ಎಲ್‌. ಆರ್‌. ಶಿವರಾಮೇಗೌಡದ ಪರವಾಗಿ ನಿಂತರು ಎಂಬ ಆರೋಪಗಳೂ ಇವೆ.

ಇದೀಗ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ತನಿಖೆಯನ್ನು ದಿಕ್ಕು ತಪ್ಪಿಸುವ ಹಲವು ಸಾಧ್ಯತೆಗಳಿವೆ. ಒಂದು ಕಡೆ ಸೈದ್ಧಾಂತಿಕ ಹಿನ್ನೆಲೆಯಲ್ಲಿ ನಡೆದ ಹತ್ಯೆ ಇದು ಎಂದು ಈಗಾಗಲೇ ಹಣೆಪಟ್ಟಿ ಕಟ್ಟುವ ಕೆಲಸ ನಡೆಯುತ್ತಿದೆ. ನಕ್ಸಲೀಯರನ್ನು ಎಳೆದು ತರುವ ಮೂಲಕ ಕೊಲೆಗೆ ಎಂದೂ ಬಗೆಹರಿಯದ ಆಯಾಮ ನೀಡುವ ಸಂಚು ಜಾರಿಯಲ್ಲಿದೆ. ಇದೇ ವೇಳೆಯಲ್ಲಿ, ರಾಜ್ಯ ಸರಕಾರ ಸದ್ಯ ಪ್ರಚಲಿತದಲ್ಲಿರುವ ಪ್ರತ್ಯೇಕ ಲಿಂಗಾಯತ ಧರ್ಮದ ಹಿನ್ನೆಲೆಯಲ್ಲಿ ಹೋರಾಟಕ್ಕಿಳಿದವರನ್ನು ಮುಂದಿಟ್ಟುಕೊಂಡು, ಒಂದಷ್ಟು ಪ್ರಗತಿಪರರಿಗೆ ಶಸಸ್ತ್ರ ಅಂಗರಕ್ಷಕರನ್ನು ನೀಡಿದೆ. ಗೌರಿ ಲಂಕೇಶ್ ಹತ್ಯೆ ಕೂಡ, ಕಲ್ಬುರ್ಗಿ ಅವರ ಹಾದಿಯಲ್ಲಿಯೇ ನಡೆದ ಮತ್ತೊಂದು ಕೊಲೆ ಎಂಬ ಸಂದೇಶವನ್ನು ಪರೋಕ್ಷವಾಗಿ ಸರಕಾರ ಒಪ್ಪಿಕೊಂಡಂತಾಗಿದೆ. ನೀರಾವರಿ ಸಚಿವ ಎಂ. ಬಿ. ಪಾಟೀಲ್ ಗೌರಿ ಲಂಕೇಶ್ ಕೂಡ ಪ್ರತ್ಯೇಕ ಲಿಂಗಾಯತ ಧರ್ಮದ ಪರವಾಗಿದ್ದರು ಎಂದು ನೆನಪಿಸಿದ್ದಾರೆ. ಇಲ್ಲಿಯೂ ಕೂಡ ಅಂತಿಮವಾಗಿ ಜಾತಿ ಮತ್ತು ಧರ್ಮದ ಸುತ್ತಲೇ ಈ ಕೊಲೆಗೆ ನ್ಯಾಯ ಒದಗಿಸುವ ವೇದಿಕೆ ಸಿದ್ಧ ಆಗುವ ಅಪಾಯ ಕಾಣಿಸುತ್ತಿದೆ.

ಆದರೆ, ಅಂತರಾಷ್ಟ್ರೀಯ ಮಟ್ಟದಿಂದ ಹಿಡಿದು ಸ್ಥಳೀಯ ಮಟ್ಟದವರೆಗೆ ಪ್ರಕಟಗೊಳ್ಳುತ್ತಿರುವ ಪ್ರತಿರೋಧಗಳು ಗೌರಿ ಲಂಕೇಶ್ ಹತ್ಯೆಯ ಹಿಂದಿರುವ ವ್ಯಕ್ತಿಗತ ನೆಲೆಯ ತನಿಖೆ ಆಚೆಗೂ ಅಭಿವ್ಯಕ್ತಿ ಸ್ವಾತಂತ್ರ್ಯದ ರಕ್ಷಣೆಗೆ ಇಡುತ್ತಿರುವ ಮೊರೆಯಂತೆ ಕಾಣಿಸುತ್ತಿದೆ. ಹಾಗಾಗಿಯೇ, ‘ಅಭಿವ್ಯಕ್ತಿ ಹಕ್ಕಿ’ನ ನೆಲೆಯಲ್ಲಿ ನಿಂತವರಿಂದ ಸಹಜ, ನಿರೀಕ್ಷಿತ ಆಯಾಮಗಳ ವಿರೋಧವೂ ಬರುತ್ತಿದೆ.

ಈ ಕಾರಣಕ್ಕಾಗಿ, ಗೌರಿ ಲಂಕೇಶ್ ಹತ್ಯೆ ಕೇವಲ ಮರುಕನ್ನು, ಆಕ್ರೋಶವನ್ನು ಮತ್ತು ಆತಂಕವನ್ನು ಮಾತ್ರವೇ ಸೃಷ್ಟಿಸಿಲ್ಲ. ಬದಲಿಗೆ, ಸಾವಿನ್ನು- ನಿಂದಿಸುವ, ಸಾವನ್ನು- ಸಂಭ್ರಮಿಸುವ, ಸಾವಿನ್ನು- ಅಪಹಾಸ್ಯ ಮಾಡುವ, ಸಾವಿಗೆ- ತರ್ಕಗಳನ್ನು ಹುಡುಕುವ, ಸಾವಿಗೆ- ಬಲವಾಗಿ ಕೇಕೆಹಾಕುವ ಮನಸ್ಥಿತಿಗಳನ್ನೂ ಅನಾವರಣ ಮಾಡುತ್ತಿದೆ. ಈ ಸಮಯದಲ್ಲಿ 25 ವರ್ಷಗಳ ಹಿಂದೆ ನಮ್ಮದೇ ನೆಲದಲ್ಲಿ ನಡೆದ ಪತ್ರಕರ್ತರೊಬ್ಬರ ಹತ್ಯೆ ಪ್ರಕರಣದಿಂದ ಪಾಠಗಳನ್ನು ಹೆಕ್ಕಿಕೊಳ್ಳುವ ಅಗತ್ಯವಿದೆ.