Home Investigation ‘ಪ್ರತಿರೋಧಗಳ ಪ್ರಖರತೆ’; ಗೌರಿ ಸಾವಿನ ಸಂಚು ಭೇದಿಸಲು ತನಿಖೆಗೆ ಇಳಿದವರ ‘ಶಂಕೆ’ಗಳು!

‘ಪ್ರತಿರೋಧಗಳ ಪ್ರಖರತೆ’; ಗೌರಿ ಸಾವಿನ ಸಂಚು ಭೇದಿಸಲು ತನಿಖೆಗೆ ಇಳಿದವರ ‘ಶಂಕೆ’ಗಳು!

SHARE

ಸಾವಿನಲ್ಲಿ

‘ತಂದೆಯನ್ನು ಮೀರಿಸಿದ ಮಗಳ’ ಹತ್ಯೆ ನಡೆದು ಇವತ್ತಿಗೆ ಮೂರು ದಿನದ ಮುಕ್ತಾಯವಾಗುತ್ತಿದೆ.

ತಮ್ಮ 56ನೇ ವಯಸ್ಸಿನಲ್ಲಿ ಪತ್ರಕರ್ತೆ, ಹೋರಾಟಗಾರ್ತಿ, ಒಂಟಿ ಮಹಿಳೆಯಾಗಿ ಬೆಂಗಳೂರಿನಲ್ಲಿ ವಾಸಿಸುತ್ತಿದ್ದ ಗೌರಿ ಲಂಕೇಶ್ ಗುಂಡೇಟಿಗೆ ಬಲಿಯಾಗಿದ್ದು ಮಂಗಳವಾರ ರಾತ್ರಿ. ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ನಡೆದ ‘ಪತ್ರಕರ್ತರ ಮೊಟ್ಟ ಮೊದಲ ಹತ್ಯೆ ಪ್ರಕರಣ’ ಇದು. ಸ್ವಾತಂತ್ರ್ಯ ನಂತರದ ಸುದೀರ್ಘ ಅವಧಿಯ ನಾನಾ ಪಕ್ಷಗಳ ಆಳ್ವಿಕೆಯಲ್ಲಿ ಇಂತಹದೊಂದು ಘಟನೆಗೆ ಕರ್ನಾಟಕದ ರಾಜಧಾನಿ ಸಾಕ್ಷಿಯಾಗಿರಲಿಲ್ಲ. ನಾನಾ ಕಾರಣಗಳಿಗಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಹತ್ವ ಪಡೆದುಕೊಂಡಿರುವ ಈ ಪ್ರಕರಣದ ತನಿಖೆಗೆ ಕಾಂಗ್ರೆಸ್ ನೇತೃತ್ವದ ಸರಕಾರ ಎಸ್‌ಐಟಿ ರಚಿಸಿದೆ. ಜತೆಗೆ, ಮೂರು ತನಿಖಾ ತಂಡಗಳನ್ನು ರಚಿಸಿದೆ ಎಂಬ ಮಾಹಿತಿ ಇದೆ.

ಒಂದೆಡೆ ತನಿಖೆ ಸಾಗುತ್ತಿರುವ ಹಾದಿಯ ಪಕ್ಕದಲ್ಲಿ ಗೌರಿ ಹತ್ಯೆಯನ್ನು ವಿರೋಧಿಸಿ ಪ್ರತಿಭಟನೆಯ ಕಾವು ನಿಧಾನವಾಗಿ ಏರುತ್ತಿದೆ.

ಇದೇ ಸೆ. 12ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ ಹಿಂಭಾಗದ ಸೆಂಟ್ರಲ್ ಕಾಲೇಜು ಮೈದಾನದಲ್ಲಿ ‘ಪ್ರತಿರೋಧಗಳ ಸಮಾವೇಷ’ ಆಯೋಜನೆಯೊಂದಿದೆ. ಅಂದು ಬೆಳಗ್ಗೆ 10 ಗಂಟೆಗೆ ಮೆಜೆಸ್ಟಿಕ್‌ನ ರೈಲ್ವೆ ನಿಲ್ದಾಣದಿಂದ ಮೆರವಣಿಗೆ ಹೊರಡಲಿದೆ. ಈ ಹಿನ್ನೆಲೆಯಲ್ಲಿ ‘ಗೌರಿ ಲಂಕೇಶ್ ಹತ್ಯಾ ವಿರೋಧಿ ವೇದಿಕೆ ಅಸ್ಥಿತ್ವಕ್ಕೆ ಬಂದಿದೆ. ಸಾಮಾಜಿಕ ಹೋರಾಟಗಾರ್ತಿ ಕೆ. ನೀಲಾ, ಸ್ವರಾಜ್ ಅಭಿಯಾನದ ದೊಡ್ಡಿಪಾಳ್ಯ ನರಸಿಂಹಮೂರ್ತಿ, ಜನಶಕ್ತಿ ಸಂಘಟನೆಯ ಡಾ. ವಾಸು ಎಚ್‌. ವಿ., ರೈತ ಸಂಘಟನೆಯ ವೀರ ಸಂಗಯ್ಯ, ದಲಿತ ಸಂಘಟನೆಯ ಮುನಿಸ್ವಾಮಿ, ವಕೀಲ ಅನಂತ ನಾಯ್ಕ ಎನ್., ಕೆ. ವೈ. ನಾರಾಯಣ ಸ್ವಾಮಿ, ಶ್ರೀಪಾದ ಭಟ್, ಬರಹಗಾರ್ತಿ ಕೆ. ಷರೀಫಾ, ದಲಿತ ಮುಖಂಡ ಮಾವಳ್ಳಿ ಶಂಕರ್, ಕೋಮು ಸೌಹಾರ್ದ ವೇದಿಕೆಯ ಕೆ. ಎಲ್. ಅಶೋಕ್, ಲಕ್ಷ್ಮಿ ನಾರಾಯಣ ನಾಗವಾರ, ಸಲ್ಮಾ ಎನ್‌., ಮುಖ್ಯಮಂತ್ರಿ ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ. ಅದರ ಪ್ರತಿ ಇಲ್ಲಿದೆ.

ಇನ್ನೊಂದಡೆ, ಗೌರಿ ಸಾವಿಗೆ ಸಂತಾಪಗಳು ದೇಶದ ಗಡಿಗಳನ್ನು ಮೀರಿ ಹರಿದು ಬರುತ್ತಿದೆ. ಗೌರಿ ಪ್ರತಿನಿಧಿಸುತ್ತಿದ್ದ ವಿಚಾರಗಳ ಕುರಿತು ಮಂಥನವೊಂದು ಆರಂಭವಾಗಿದೆ. ದೇಶದ ಪ್ರಧಾನಿ ಗೌರಿ ಸಾವಿಗೆ ಟ್ವಿಟರ್‌ ಮೂಲಕ ಪರೋಕ್ಷ ಸಮ್ಮತಿ ಸೂಚಿಸಿದವರನ್ನು ‘ಹಿಂಬಾಲಿಸುತ್ತಿದ್ದಾರೆ’ ಎಂಬ ಕಾರಣಕ್ಕೆ ಟೀಕೆಗೆ ಗುರಿಯಾಗಿದ್ದಾರೆ. ಕಳೆದ ಎರಡು ದಿನಗಳ ಕಾಲ ಜನಪ್ರಿಯ ಸಾಮಾಜಿಕ ಜಾಲತಾಣ ಟ್ವಿಟರ್‌ನಲ್ಲಿ #BlockNarendraModi ಹ್ಯಾಶ್ ಟ್ಯಾಗ್‌ ಟ್ರೆಂಡಿಂಗ್ ಆಗಿತ್ತು.

ಕರ್ನಾಟಕದಲ್ಲಿ ಸಿಎಂ ಸಿದ್ದರಾಮಯ್ಯ ಪ್ರಗತಿಪರರಿಗೆ ಪೊಲೀಸ್ ರಕ್ಷಣೆ ನೀಡಲಾಗುವುದು ಎಂದು ಪ್ರಕಟಿಸಿದ್ದರು. ಗದಗದ ತೋಂಟದಾರ್ಯ ಮಠದ ಮಂಡರಗಿ ಶಾಖೆಯ ನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿಗೆ ಸರಕಾರ ಶಸ್ತ್ರಸಜ್ಜಿತ ಅಂಗರಕ್ಷಕರನ್ನು ಒದಗಿಸಿದೆ ಎಂದು ವರದಿಯಾಗಿದೆ.

ನಕ್ಸಲ್ ಸಂಚು:

ಬೆಳವಣಿಗೆಗಳ ನಡುವೆಯೇ, ಗೌರಿ ಲಂಕೇಶ್ ಹತ್ಯೆ ಪ್ರಕರಣದ ತನಿಖೆ ಮುಂದುವರಿದಿದೆ. ಗುರುವಾರದ ವೇಳೆಗೆ ನಕಲಿ ಸಿಸಿಟಿವಿ ದೃಶ್ಯಾವಳಿಗಳು ಮಾಧ್ಯಮಗಳಲ್ಲಿ ಭಿತ್ತರಗೊಳ್ಳುತ್ತಿವೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. “ಇದು ಒತ್ತಡವನ್ನು ತಡೆಯಲು ಸಾಧ್ಯವಾಗದೇ ಪೊಲೀಸರೇ ಕೊಟ್ಟು ಕಳುಹಿಸುತ್ತಿರುವ ತನಿಖೆಗೆ ಅಗತ್ಯವಿಲ್ಲದ ಸಿಸಿಟಿವಿ ದೃಶ್ಯಾವಳಿಗಳು,” ಎಂಬ ಅಭಿಪ್ರಾಯ ಇದೆ. ಇದೇ ಮಾದರಿಯಲ್ಲಿ ಹತ್ಯೆಗೆ ನಕ್ಸಲ್‌ ಟ್ವಿಸ್ಟ್ ನೀಡುವ ವ್ಯವಸ್ಥಿತ ಷಡ್ಯಂತ್ರಕ್ಕೂ ಪೊಲೀಸರು ಮೌನವಾಗಿದ್ದಾರೆ. “ಪೊಲೀಸರಿಗೆ ನಕ್ಸಲ್‌ ಕಡೆಯಿಂದಲೂ ಪ್ರಕಟಣೆಯೊಂದು ಬರಲಿ ಎಂಬ ನಿರೀಕ್ಷೆ ಇದ್ದ ಹಾಗಿದೆ,” ಎನ್ನುತ್ತಾರೆ ಬೆಂಗಳೂರಿನ ಕ್ರೈಂ ವರದಿಗಾರರೊಬ್ಬರು.

ಆತಂಕಕಾರಿ ಮಾಹಿತಿ ಏನೆಂದರೆ, ಎಲ್ಲಿಯೋ ನಡೆದ ಮಹಿಳೆಯೊಬ್ಬರ ಹತ್ಯೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಗೌರಿ ಲಂಕೇಶ್ ಹತ್ಯೆಯ ಸಿಸಿಟಿವಿ ದೃಶ್ಯಾವಳಿಗಳು ಎಂದು ‘ಸುವರ್ಣ ನ್ಯೂಸ್ 24/7’ ತೋರಿಸಿದೆ. ಅದೀಗ ವಾಟ್ಸಾಪ್‌ಗಳಲ್ಲಿ ಹರಿದಾಡುತ್ತಿದೆ. ಇದನ್ನು ‘ಸಮಾಚಾರ’ ಸ್ವತಂತ್ರವಾಗಿ ಪರಿಶೀಲನೆ ನಡೆಸಿದಾಗ, ಗೌರಿ ಮನೆಯ ಮುಂದಿನ ಸಿಟಿಟಿವಿ ಆಗಿರಲು ಸಾಧ್ಯವೇ ಇಲ್ಲ ಎಂಬುದು ಕಂಡು ಬಂತು.

ಹೀಗಿರುವಾಗಲೇ, ಗುರುವಾರ ಮಧ್ಯಾಹ್ನ 3.22 ಸುಮಾರಿಗೆ ‘ಪಬ್ಲಿಕ್ ಟಿವಿ’ ಗೌರಿ ಹತ್ಯೆ ಪ್ರಕರಣದಲ್ಲಿ ಆಂಧ್ರ ಪೊಲೀಸರು ಪಾಲ್ಗೊಂಡಿದ್ದಾರೆ ಎಂಬ ‘ಬ್ರೇಕಿಂಗ್ ನ್ಯೂಸ್’ ನೀಡಿತು. ಆಂಧ್ರದಿಂದ ಬಂದ ಪೊಲೀಸರು ಗೌರಿ ಹತ್ಯೆಯಲ್ಲಿ ನಕ್ಸಲ್‌ ಚಳುವಳಿ ಜತೆ ಗುರುತಿಸಿಕೊಂಡಿರುವ ವಿಕ್ರಮ್ ಗೌಡ ಎಂಬಾತನ ಕೈವಾಡ ಬಗ್ಗೆ ಮಾಹಿತಿ ನೀಡಿದ್ದಾರೆ ಎಂದು ಭಾವಚಿತ್ರ ಸಮೇತ ಕೆಲವು ನಿಮಿಷಗಳ ಸುದ್ದಿ ಭಿತ್ತರಿಸಿತು.

ಇದಕ್ಕೂ ಮುಂಚೆ, ಆಂಧ್ರ ಪೊಲೀಸರು ನೀಡುವ ಮಾಹಿತಿ ಪ್ರಕಾರ ಕರ್ನಾಟಕದಲ್ಲಿ ನಕ್ಸಲ್‌ ಚಳುವಳಿಯಲ್ಲಿರುವ ವಿಕ್ರಂ ಗೌಡ ಎಂಬಾತ ಗೌರಿ ಲಂಕೇಶ್ ವಿರುದ್ಧ ಕರಪತ್ರಗಳನ್ನು ಹಂಚಿದ್ದ ಎಂದು ವರದಿ ಹೇಳಿತ್ತು.

ನಂತರ, ಆಂಧ್ರ ಅಧಿಕಾರಿಗಳು ಎಂದು ಕರ್ನಾಟಕ ವಿಧಿ ವಿಜ್ಞಾನ ಪ್ರಯೋಗಾಯಲದ ನಿವೃತ್ತ ಹಿರಿಯ ಅಧಿಕಾರಿಯೊಬ್ಬರನ್ನು ವೀಕ್ಷಕರಿಗೆ ತೋರಿಸಿತು.

ಇದಾದ ಕೆಲವು ನಿಮಿಷಗಳ ಅಂತರದಲ್ಲಿ ಸುದ್ದಿ ಟಿವಿಯಲ್ಲಿ ‘ಅಸಲಿ ಬ್ರೇಕಿಂಗ್ ನ್ಯೂಸ್’ ಹೊರಬಿತ್ತು. “ವಿಧಿ ವಿಜ್ಞಾನ ಪ್ರಯೋಗಾಲಯ ನಿವೃತ್ತ ಅಧಿಕಾರಿಗಳನ್ನು ತನಿಖೆಗಾಗಿ ಕೆರೆಸಿಕೊಂಡಿದೆ. ಅಧಿಕಾರಿ ರವೀಂದ್ರ ನಾಡ ಬಂದೂಕುಗಳ ಕಾಡತೂಸುಗಳ ಪರೀಕ್ಷೆಯಲ್ಲಿ ನಿಪುಣರು ಎಂದು,” ವರದಿಗಾರರು ಮಾಹಿತಿ ನೀಡಿದರು.

ಯಾರು ಈ ರವೀಂದ್ರ?: 

ಮಡಿವಾಳದ ವಿಧಿ ವಿಜ್ಞಾನ ಪ್ರಯೋಗಾಲಯದಲ್ಲಿ ಅತ್ಯಂತ ಹಿರಿಯ ವಯಸ್ಸಿನ ಅಧಿಕಾರಿಗಳಲ್ಲಿ ಒಬ್ಬರಾಗಿದ್ದವರು ರವೀಂದ್ರ. ಅಲ್ಲಿನ ಸಹಾಯಕ ನಿರ್ದೇಶಕ ಹುದ್ದೆಯಿಂದ ನಿವೃತ್ತರಾಗಿ ಒಂದು ವರ್ಷ ಕಳೆದಿದ್ದಾರೆ. ಅದಕ್ಕೂ ಮುಂಚೆ ಬೆಂಗಳೂರಿನಲ್ಲಿ ನಡೆದ ಬಹುತೇಕ ‘ಕ್ರೈಂ ಸೀನ್‌’ಗಳನ್ನು ನೋಡಿದ್ದಾರೆ. ಯುವಕನೊಬ್ಬ ತನ್ನ ಕಾರಿನಲ್ಲಿ ಕೊಲೆಯಾದ ರೀತಿಯನ್ನು ಸೃಷ್ಟಿಸಿ ಆತ್ಮಹತ್ಯೆ ಮಾಡಿಕೊಂಡಂತಹ ಪ್ರಕರಣಗಳನ್ನು ಭೇದಿಸುವ ಎಫ್‌ಎಸ್ಎಲ್‌ ತಂಡದಲ್ಲಿ ಕೆಲಸ ಮಾಡಿದ್ದಾರೆ. ವೃತ್ತಿ ಜೀವನದ ಕೊನೆಕೊನೆಯಲ್ಲಿ ವಿಧಿ ವಿಜ್ಞಾನ ಪ್ರಯೋಗಾಲಯದ ಸಕಲ ವಿಭಾಗಗಳಲ್ಲಿಯೂ ಕೆಲಸ ಮಾಡಿದ ಅನುಭವ ಇತ್ತು. ವಿಶೇಷವಾಗಿ ಕಾಡತೂಸುಗಳ ಬಗ್ಗೆ ಅಪರೂಪದ ಮಾಹಿತಿ ಇತ್ತು. ಇವರನ್ನು ಬೆಂಗಳೂರಿನಲ್ಲಿ ನಡೆದ ಚಿನ್ನಸ್ವಾಮಿ ಸ್ಟೇಡಿಯಂ ಸರಣಿ ಬಾಂಬ್ ಸ್ಫೋಟದಲ್ಲಿ ‘ಬಾಂಬ್‌ ಪರಿಣಿತ’ ಎಂದು ಹೆಸರಿಲಾಗಿತ್ತು.

ಗೌರಿ ಲಂಕೇಶ್ ಹತ್ಯೆ ನಡೆದು ಬೆಳಗಾಗುವ ಹೊತ್ತಿಗೆ ಪೊಲೀಸರಿಗೆ ಸ್ಥಳದಲ್ಲಿ ಕಾಡತೂಸುಗಳು ಸಿಕ್ಕಿವೆ. ಅವುಗಳ ಪರೀಕ್ಷೆಗಾಗಿ ರವೀಂದ್ರ ಅವರಿಗೆ ಕರೆ ಹೋಗಿದೆ. ಮಂಗಳೂರಿನಲ್ಲಿ ನಿವೃತ್ತ ಜೀವನ ನಡೆಸುತ್ತಿರುವ ರವೀಂದ್ರ ಅವರನ್ನು ‘ಸಮಾಚಾರ’ ಸಂಪರ್ಕಿಸಿದಾಗ, “ನಾನೀನ ನಿವೃತ್ತ ಜೀವನ ನಡೆಸುತ್ತಿದ್ದೇನೆ,” ಎಂದರು. ಯಾವುದೇ ಮಾಹಿತಿ ನೀಡಲು ನಿರಾಕರಿಸಿದರು. ಅಷ್ಟೊತ್ತಿಗಾಗಲೇ ಹತ್ಯೆಯ ಮಾಹಿತಿ ಲಭ್ಯವಾಗಿತ್ತು. ಇಲಾಖೆಯ ಮೂಲಗಳ ಪ್ರಕಾರ, ರವೀಂದ್ರ ಸೇರಿದಂತೆ ಕೆಲವು ನಿವೃತ್ತ ವಿಧಿ ವಿಜ್ಞಾನ ಪ್ರಯೋಗಾಲಯದ ಹಿರಿಯ ಅಧಿಕಾರಿಗಳಿಗೆ ಕರೆ ಹೋಗಿದೆ. ಅವರಲ್ಲಿ ರವೀಂದ್ರ ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಅವರನ್ನು ಆಂಧ್ರ ಪೊಲೀಸರು ಎಂದು ಕನ್ನಡದ ಕೆಲವು ಮಾಧ್ಯಮಗಳು ತಪ್ಪಾಗಿ ಭಾವಿಸಿ, ‘ನಕ್ಸಲ್‌ ಲಿಂಕ್’ ಸಂಚಿನ ಸಾಧ್ಯತೆಯನ್ನು ಜನರ ಮುಂದಿಟ್ಟಿವೆ.

ಸಂಜೆ ಹೊತ್ತಿಗೆ ಕನ್ನಡ ಸುದ್ದಿವಾಹಿನಿಗಳ ‘ನಕ್ಸಲ್‌ ಲಿಂಕ್’ ಸುದ್ದಿಯನ್ನು ಎಸ್‌ಐಟಿ ಮೇಲ್ವಿಚಾರಣೆ ನೋಡಿಕೊಳ್ಳುತ್ತಿರುವ ಐಪಿಎಸ್ ಅಧಿಕಾರಿ ಬಿಜಯ್ ಕುಮಾರ್ ಸಿಂಗ್‌ ತಳ್ಳಿ ಹಾಕಿದ್ದಾರೆ. ಕೆಲ ಮಾಧ್ಯಮಗಳ ವರದಿಗಳ ‘ಸುದ್ದಿ ಮೂಲ’ಗಳ ಬಗ್ಗೆ ಅನುಮಾನವನ್ನು ಎಸ್‌ಐಟಿಯ ಕೆಲವು ಅಧಿಕಾರಿಗಳು ಖಾಸಗಿಯಾಗಿ ಬೇಸರವಾಗಿ ವ್ಯಕ್ತಪಡಿಸಿದ್ದಾರೆ.

ಆದರೆ ಆಳದಲ್ಲಿ ”ನಕ್ಸಲೀಯರ ಕಡೆಯಿಂದ ಅಧಿಕೃತ ಹೇಳಿಕೆ ಬರಬಹುದು ಎಂಬ ನಿರೀಕ್ಷೆ ಅವರಿಗೆ  (ಪೊಲೀಸರಿಗೆ) ಇರುವ ಹಾಗಿದೆ,” ಎನ್ನುತ್ತಾರೆ ಹಿರಿಯ ಪತ್ರಕರ್ತರೊಬ್ಬರು.

ಕುಮಾರಸ್ವಾಮಿ ಹೇಳಿಕೆ: 

ಗೌರಿ ಲಂಕೇಶ್ ಹತ್ಯೆ ಪ್ರಕರಣದ ಕುರಿತು ಪ್ರತಿಕ್ರಿಯೆ ನೀಡಿರುವ ಜೆಡಿಎಸ್‌ ರಾಜ್ಯಾಧ್ಯಕ್ಷ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, “ಹಿಂದೆ ಏಳೂವರೆ ಕೆ. ಜಿ ಚಿನ್ನ ಸೀಝ್ ಮಾಡಿ, ಅದನ್ನು ದರೋಡೆ ಮಾಡಿ ಮಾರಿಕೊಂಡು ಬಾಣಸವಾಡಿ ಸಮೀಪ ಮನೆ ಕಟ್ಟಿಸಿದ ಅಧಿಕಾರಿ ಕೈಗೆ ತನಿಖೆಯ ಹೊಣೆಯನ್ನು ನೀಡಿದೆ ರಾಜ್ಯ ಸರಕಾರ,” ಎಂದು ಕಟು ಮಾತುಗಳಲ್ಲಿ ಎಸ್‌ಐಟಿಯ ರಚನೆಯನ್ನು ಪ್ರಶ್ನಿಸಿದ್ದಾರೆ. ಕೇಂದ್ರ ಸರಕಾರ ಯಾವ ಮೂಲಗಳ ಆಧಾರವೂ ಇಲ್ಲದೆ ಮಾತನಾಡುವುದಿಲ್ಲ ಎಂದು ‘ನಕ್ಸಲ್‌ ಲಿಂಕ್‌’ ಸಾಧ್ಯತೆಯ ಕುರಿತು ಬಿಜೆಪಿ ವಾದವನ್ನು ಪರೋಕ್ಷವಾಗಿ ಸಮರ್ಥಿಸಿಕೊಂಡರು.

ಈ ನಡುವೆ, ಸರಕಾರ ಗೌರಿ ಹತ್ಯಾ ಪ್ರಕರಣದಲ್ಲಿ ಸುಳಿವು ನೀಡಿದವರಿಗೆ 10 ಲಕ್ಷ ರೂಪಾಯಿಗಳ ಬಹುಮಾನ ಘೋಷಿಸಿದೆ. ಗೌರಿ ಹತ್ಯೆ ನಡೆದ ಒಂದು ವಾರಕ್ಕೆ (ಸೆ.12ಕ್ಕೆ) ದೇಶಾದ್ಯಂತ ಮತ್ತೊಮ್ಮೆ #ನಾನೂ_ಗೌರಿ ಮೊಳಗುವ ಸಾಧ್ಯತೆ ಇದೆ. ಅದಕ್ಕೂ ಮುಂಚೆಯೇ ಶಂಕೆಗೆ ಎಡೆಮಾಡಿಕೊಡದಂತೆ ಸಾವಿನ ಹಿಂದಿರುವ ಸಂಚನ್ನು ಭೇದಿಸುವ ಕೆಲಸವನ್ನು ಸಿಎಂ ಸಿದ್ದರಾಮಯ್ಯ ಸರಕಾರ ಮಾಡಬೇಕಿದೆ. ಯಾವುದೇ ಕಾರಣಕ್ಕೂ ಸಿಬಿಐಗೆ ನೀಡದಂತೆ ಗೌರಿ ಸಂಗಾತಿಗಳು ಪತ್ರ ಸಲ್ಲಿಸಿದ್ದಾರೆ.