Home Investigation ಬಿಜೆಪಿ ಬೈಕ್ ರ‍್ಯಾಲಿ ಮತ್ತು ಬೆಂಗಳೂರಿನ ‘ಕುಬೇರ ಮೂಲೆ’: ಗೌರಿ ಲಂಕೇಶ್ ಹತ್ಯೆಗೆ ಸಾಕ್ಷಿಯಾದ ಆ...

ಬಿಜೆಪಿ ಬೈಕ್ ರ‍್ಯಾಲಿ ಮತ್ತು ಬೆಂಗಳೂರಿನ ‘ಕುಬೇರ ಮೂಲೆ’: ಗೌರಿ ಲಂಕೇಶ್ ಹತ್ಯೆಗೆ ಸಾಕ್ಷಿಯಾದ ಆ ಕರಾಳ ರಾತ್ರಿ…

SHARE

ಅವತ್ತು

ಮಂಗಳವಾರ. ರಾಜಧಾನಿ ಬೆಂಗಳೂರು ಮುಂಜಾನೆಯಿಂದ ನಡೆದ ಬಿಜೆಪಿ ‘ಬೈಕ್ ರ‍್ಯಾಲಿ’ ಅಬ್ಬರ ಮುಗಿಸಿ ರಾತ್ರಿಗೆ ಹೊರಳಿಕೊಳ್ಳುತ್ತಿತ್ತು. ಪೊಲೀಸರು ತಮ್ಮ ಕೆಲಸ ಮುಗಿಸಿ ಮನೆಗಳಿಗೆ ತೆರಳಲು ಆರಂಭಿಸಿದ್ದರು. ಆಗ ಸಮಯ ಸುಮಾರು 7.45.

ಅದೇ ಸಮಯಕ್ಕೆ ರಾಜ್ಯದ ಶಕ್ತಿಕೇಂದ್ರ ವಿಧಾನಸೌಧದಿಂದ ಸುಮಾರು 12 ಕಿ.ಮೀ ದೂರದಲ್ಲಿರುವ ರಾಜರಾಜೇಶ್ವರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಐಡಿಯಲ್‌ಹೋಮ್ ಟೌನ್‌ಶಿಪ್‌ನ ಮನೆ ನಂಬರ್ 476 A ಮುಂಭಾಗ ಗುಂಡಿನ ದಾಳಿ ನಡೆಯಿತು.

ಈ ಪ್ರದೇಶ ಬೆಂಗಳೂರಿನ ಪಾಲಿಗೆ ಹೊಸ ತಲೆಮಾರಿನ ‘ಕುಬೇರ ಮೂಲೆ’ ಎಂದು ಕರೆಸಿಕೊಳ್ಳುತ್ತಿದೆ. ವಿಶೇಷವಾಗಿ, ಗಾಂಧಿ ನಗರದ ಸಿನೆಮಾ ಮಂದಿಗೆ ಇಲ್ಲೊಂದು ಮನೆ ಕಟ್ಟಬೇಕು ಎಂಬುದು ಹೊಸ ಕನಸು. ಅಂತಹ ಪ್ರದೇಶದಲ್ಲಿ ಗೌರಿ ಲಂಕೇಶ್ ಮನೆ 15ನೇ ತಿರುವಿನಲ್ಲಿ ಬರುತ್ತದೆ. ಎದುರಿಗೆ ಹೊಸತಾಗಿ ನಿರ್ಮಾಣವಾಗಿರುವ ಅಪಾರ್ಟ್‌ಮೆಂಟ್ ಇದೆ. ಪಕ್ಕದಲ್ಲಿ ಪಾಳು ಬಿದ್ದ ಖಾಲಿ ಸೈಟ್‌ ಇದೆ. ಇವರ ಮನೆಯ ಮುಂದೆಯೇ ಅಂಗಳದ ರೂಪದಲ್ಲಿ ಒಂದಷ್ಟು ಜಾಗವಿದೆ. ಅದರ ಅಂಚಿಗೆ ಗೇಟಿದ್ದು, ಪಕ್ಕದಲ್ಲಿ ದೊಡ್ಡ ಮರಗಳು ಬೆಳೆದು ನಿಂತು ಒಂದು ರೀತಿಯ ನಿರ್ಜನತೆಯನ್ನು ಸೃಷ್ಟಿಸಿವೆ.

ಮೂಲಗಳ ಪ್ರಕಾರ, ಇಲ್ಲಿ ಸರಗಳ್ಳತನ ಹೆಚ್ಚು ನಡೆಯುತ್ತದೆ. ಹೀಗಾಗಿಯೇ ರಾಜರಾಜೇಶ್ವರಿನಗರ ಪೊಲೀಸ್‌ ಠಾಣೆಯಿಂದ ಕನಿಷ್ಟ ಒಬ್ಬ ಸಿಬ್ಬಂದಿಯನ್ನು, ಬ್ಯಾರಿಕೇಡ್‌ಗಳನ್ನು ಇಲ್ಲಿ ನಿತ್ಯ ಹಾಕಿಯೇ ಇರಲಾಗುತ್ತಿತ್ತು. ಆದರೆ ಅವತ್ತು ನಗರದಲ್ಲಿ ಬಿಜೆಪಿ ಬೈಕ್ ರ‍್ಯಾಲಿ ಹಿನ್ನೆಲೆಯಲ್ಲಿ ಪೊಲೀಸರ ನಿಯೋಜನೆ ಸಾಧ್ಯವಾಗಿರಲಿಲ್ಲ. ಅಷ್ಟೆ ಅಲ್ಲ, ಹಾಕಿದ್ದ ಬ್ಯಾರಿಕೇಡ್‌ಗಳನ್ನು ತಂದು ಫ್ರೀಡಂ ಪಾರ್ಕ್‌ ಸುತ್ತ ಹಾಕಲಾಗಿತ್ತು.

‘ಅವತ್ತು ಸಂಜೆ ಗೌರಿ ಲಂಕೇಶ್ ಕೆಲಸ ಮುಗಿಸಿ ಮನೆಗೆ ತೆರಳಿದ್ದು ಸಮಯ 7.45ರ ಸುಮಾರಿಗೆ ಮನೆಯ ಮುಂದೆ ಕಾರು ನಿಲ್ಲಿಸಿ, ಗೇಟನ್ನು ತೆಗೆದು, ಅಲ್ಲಿಂದ ಸುಮಾರು 100 ಅಡಿ ದೂರದ ಮನೆಯ ಬಾಗಿಲು ತೆಗೆಯಲು ನಡೆದುಕೊಂಡು ಹೋಗಿದ್ದಾರೆ. ಆ ಸಮಯದಲ್ಲಿ ತಲೆಗೆ ಹೆಲ್ಮೆಟ್ ಧರಿಸಿದ ವ್ಯಕ್ತಿಯೊಬ್ಬ ಗೇಟ್ ಬಳಿ ಬಂದು ನಿಂತಿದ್ದಾನೆ. ಇದನ್ನು ಬಾಗಿಲ ಕೀ ತೆಗೆಯುತ್ತಿದ್ದ ಗೌರಿ ನೋಡಿದ್ದಾರೆ. ಆತನನ್ನು ವಿಚಾರಿಸಲು ಗೇಟಿನ ಬಳಿ ನಡೆದು ಬಂದಿದ್ದಾರೆ. ಈ ಸಮಯದಲ್ಲಿ ಬ್ಯಾಗಿನಿಂದ ನಾಡ ಬಂದೂಕು ತೆಗೆದ ವ್ಯಕ್ತಿ ಯರ್ರಾಬಿರ್ರಿ ಗುಂಡು ಹಾರಿಸಿದ್ದಾನೆ. ಈ ಸಮಯದಲ್ಲಿ ಭಯಗೊಂಡ ಗೌರಿ ಅಲ್ಲಿಯೇ ಕುಸಿದು ಕುಳಿತಿದ್ದಾರೆ. ಗುಂಡಿನ ದಾಳಿ ನಿಂತ ಹಾಗಾಗಿ ಮತ್ತೆ ಎದ್ದು ಮನೆಯ ಕಡೆ ಓಡಲು ಅಣಿಯಾಗಿದ್ದಾರೆ. ಈ ಸಮಯದಲ್ಲಿ ಬಿದ್ದ ಎರಡು ಗುಂಡುಗಳ ಅವರ ಎದೆಯನ್ನು ಹೊಕ್ಕಿವೆ. ಅವರು ಬಿದ್ದ ಮೇಲೆ ಇನ್ನೊಂದು ಗುಂಡು ಹಣೆಯ ಭಾಗಕ್ಕೆ ಹೊಕ್ಕಿದೆ.’

“ಅದರಿಂದಲೇ ಸಾವನ್ನಪ್ಪಿದ್ದಾರೆ,” ಎಂದು ಮರಣೋತ್ತರ ಪರೀಕ್ಷೆ ನಂತರ ಅವರ ತಮ್ಮ ಇಂದ್ರಜಿತ್ ಲಂಕೇಶ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಮತ್ತು ಇದಿಷ್ಟು ಘಟನೆ ನಡೆದು ಹೋಗಿದ್ದು ಕೇವಲ 30 ಸೆಕೆಂಡುಗಳ ಅಂತರದಲ್ಲಿ.

ಈ ಕುರಿತು ‘ಪ್ರಜಾವಾಣಿ’ ಸಮಗ್ರ

ವರದಿ

ಮಾಡಿದೆ.

ಘಟನೆ ನಂತರ: 

ಪೊಲೀಸರು ದಾಖಲಿಸಿಕೊಂಡಿರುವ ಪ್ರಕಾರ, ಘಟನೆ ರಾಜರಾಜೇಶ್ವರಿ ನಗರ ಪೊಲೀಸ್‌ ಠಾಣೆಗೆ ವರದಿಯಾಗಿರುವುದು ರಾತ್ರಿ 8. 26ರಿಂದ 8. 27ರ ನಡುವೆ ದೂರು ದಾಖಲಾಗಿದ್ದು ರಾತ್ರಿ 10. 27ಕ್ಕೆ. ಸುಮಾರು ಎರಡು ಗಂಟೆ ತಡವಾಗಿ ದಾಖಲಾದ ಎಫ್‌ಐಆರ್‌ಗೆ ಕಾರಣಗಳನ್ನು ನೀಡಲಾಗಿಲ್ಲ. ‘ಮೃತರಾಗಿರುವ ಗೌರಿ ಲಂಕೇಶ್ ಪತ್ರಕರ್ತರಾಗಿ ಪ್ರಗತಿಪರರಾಗಿ ಕೆಲಸ ಮಾಡಿಕೊಂಡು ಠಾಣಾ ಸರಹದ್ದಿನಲ್ಲಿ ಒಬ್ಬರೇ ವಾಸವಾಗಿದ್ದರು. ಮಂಗಳವಾರ ರಾತ್ರಿ 8. 26ರ ಸುಮಾರಿಗೆ ಅವರ ತಾಯಿ ಇಂದಿರಾ ಲಂಕೇಶ್ ಅವರಿಗೆ ಕರೆ ಬಂದು ಗೌರಿಯವರಿಗೆ

ಯಾರೋ ಏನೋ ಆಗಿದೆ

ನೋಡಿ ಎಂದು ತಿಳಿಸಿದರು. ನಂತರ ಸ್ಥಳಕ್ಕೆ ಕವಿತಾ ಬಂದು ದೇಹ ರಕ್ತದ ಮಡುವಿನಲ್ಲಿ ಬಿದ್ದಿದ್ದ ಗೌರಿ ದೇಹವನ್ನು ನೋಡಿದರು. ಜತೆಗೆ ಸ್ಥಳದಲ್ಲಿ ಕಾಟ್ರಿಡ್ಜ್‌ ಪೀಸುಗಳು ಸಿಕ್ಕಿವೆ’ ಎಂದು ಕವಿತಾ ನೀಡಿರುವ ದೂರಿನ ಸಾರದಲ್ಲಿ ಹೇಳಲಾಗಿದೆ.

“ಘಟನೆ ನನಗೆ ಗೊತ್ತಾದಾಗ ಗೃಹ ಸಚಿವ ರಾಮಲಿಂಗಾರೆಡ್ಡಿ ಅವರ ಕ್ಷೇತ್ರದಲ್ಲಿದ್ದೆ. ಅಲ್ಲಿನ ಪೊಲೀಸ್‌ ಠಾಣೆಯ ಪಕ್ಕದಲ್ಲೇ ಇದ್ದುದರಿಂದ ಒಳಗೆ ಕಾಲಿಟ್ಟೆ. ಅಷ್ಟೊತ್ತಿಗಾಗಲೇ ಟಿವಿಯಲ್ಲಿ ಗೌರಿ ಲಂಕೇಶ್ ಹತ್ಯೆ ವರದಿಗಳು ಬರಲಾರಂಭಿಸಿದ್ದವು. ಆಗ ಸಮಯ ಸುಮಾರು 8. 35-40 ಇರಬಹುದು. ಆದರೆ ಬಹುತೇಕ ಪೊಲೀಸರು ಡ್ಯೂಟಿ ಮುಗಿಸಿ ಮನೆಗೆ ತೆರಳುತ್ತಿದ್ದರು. ಅದಾದ ಮೇಲೆ ಗೌರಿ ಅವರ ಮನೆಗೆ ಬಂದೆ. ಅಲ್ಲಿ ಅಷ್ಟೊತ್ತಿಗಾಗಲೇ ಮಾಧ್ಯಮಗಳು, ಪೊಲೀಸರು, ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳು ಬಂದು ಸೇರಿದ್ದರು. ಕ್ರೈಂ ಸೀನ್ ಯಾವುದು ಎಂದು ಗೊತ್ತೇ ಆಗುತ್ತಿರಲಿಲ್ಲ,” ಎನ್ನುತ್ತಾರೆ ಪತ್ರಕರ್ತರೊಬ್ಬರು.

ಇದಾದ ಮೇಲೆ ಸ್ಥಳದಲ್ಲಿ ಜೋರು ಮಳೆ ಸುರಿಯಿತು. “ಒಂದು ವೇಳೆ ಮಳೆ ಒಂದೆರಡು ಗಂಟೆ ಮುಂಚೆ ಬಂದಿದ್ದರೆ ಸಾಕಷ್ಟು ಸಾಕ್ಷಿಗಳ ನಾಶವಾಗುತ್ತಿತ್ತು,” ಎಂಬ ಅನುಮಾನ ವ್ಯಕ್ತಸಪಡಿಸುತ್ತಾರೆ ಟಿವಿ ಪತ್ರಕರ್ತರೊಬ್ಬರು.

ಮೀಡಿಯಾ ಡಾರ್ಲಿಂಗ್ ಎಸ್‌ಐಟಿ: 

ಸದ್ಯ, ಗೌರಿ ಹತ್ಯೆ ಕುರಿತು ‘ವಿಶೇ‍ಷ ತನಿಖಾ ತಂಡ’ ವಿಚಾರಣೆ ಆರಂಭಿಸಿದೆ. ಬೆಂಗಳೂರಿನ ಸಿಐಡಿ ಕಚೇರಿಯ ಆವರಣದಲ್ಲಿಯೇ ಹೊಸ ಕಚೇರಿಯ ವ್ಯವಸ್ಥೆ ಮಾಡಲಾಗಿದೆ. ಗುರುವಾರ ಬೆಳಗ್ಗೆಯಿಂದ ಗೌರಿ ಅವರ ಕಚೇರಿ ಮತ್ತು ಮನೆಗಳಿಗೆ ಹೋಗಿ ಭೇಟಿ ಮಾಡಿದೆ. ಇವೆಲ್ಲವೂ ಮಾಧ್ಯಮಗಳಲ್ಲಿ ವರದಿಯಾಗುತ್ತಲೇ ಇದೆ. ಎಸ್‌ಐಟಿಯ ಪ್ರತಿ ಓಡಾಟದ ಮಾಹಿತಿ ಸಾರ್ವಜನಿಕವಾಗಿ ಲಭ್ಯವಾಗುತ್ತಿದೆ. “ಗುರುವಾರ ಎಸ್‌ಐಟಿ ಗೌರಿ ಕಚೇರಿಗೆ ಭೇಟಿ ನೀಡಿದೆ. ಅವರು ಮಂಗಳವಾರ ರಾತ್ರಿ 7 ಗಂಟೆ ಸುಮಾರಿಗೆ ಬಿಟ್ಟಿದ್ದಾರೆ. ನಂತರ ತಾಯಿ ಇಂದಿರಾ ಲಂಕೇಶ್ ಹಾಗೂ ಕಚೇರಿಯ ಸಿಬ್ಬಂದಿ ಸತೀಶ್ ಎಂಬುವವರ ಜತೆ ದೂರವಾಣಿಯಲ್ಲಿ ಮಾತನಾಡಿದ್ದಾರೆ. ಇವೆಲ್ಲವೂ ಎಸ್‌ಐಟಿಗೆ ಗೊತ್ತಾಗಿದೆ,” ಎಂದು ತನಿಖಾ ತಂಡದ ನಡೆಯನ್ನು ಗಮನಿಸಿದ ಪತ್ರಕರ್ತರೊಬ್ಬರು ಹೇಳುತ್ತಾರೆ.

ಎಸ್‌ಐಟಿ ಬುಧವಾರ ರಾತ್ರಿಯೇ ಸಭೆ ನಡೆಸಿದೆ ಎಂಬ ಮಾಹಿತಿ ಇದೆ. ಇದಕ್ಕೂ ಮುಂಚೆಯೇ ಗೌರಿ ಹತ್ಯಾ ಪ್ರಕರಣಕ್ಕೆ ಸಂಬಂಧಪಟ್ಟ ಪೊಲೀಸ್ ವಶದಲ್ಲಿದ್ದ ಕೆಲವು ಸಿಸಿಟಿವಿ ದೃಶ್ಯಾವಳಿಗಳು ಸಾರ್ವಜನಿಕವಾಗಿ ಲಭ್ಯವಾಗಿವೆ. ಆದರೆ, ಗೌರಿ ಲಂಕೇಶ್ ಮನೆಯ ಮುಂದೆ, ಘಟನೆಗೆ ಸಾಕ್ಷಿಯಾಗಿರುವ ದೃಶ್ಯಾವಳಿಗಳಿನ್ನೂ ಬಹಿರಂಗವಾಗಿಲ್ಲ. “ಎಸ್‌ಐಟಿ ತನಿಖೆಯ ಮೊದಲ ದಿನವೇ ಮಾಧ್ಯಮಗಳಲ್ಲಿ ಬಂದ ವರದಿಗಳನ್ನು  ನೋಡಿದರೆ, ತನಿಖೆ ಮೀಡಿಯಾ ಫ್ರೆಂಡ್ಲಿ ಆಗುವ ಅಪಾಯಗಳಿವೆ,” ಎನ್ನುತ್ತಾರೆ ಹಿರಿಯ ಪತ್ರಕರ್ತರೊಬ್ಬರು.

“ಘಟನೆ ನಡೆದ ದಿನ ಬೆಂಗಳೂರಿನಿಂದ ಹೊರಹೋಗುವ ರಸ್ತೆಗಳಲ್ಲಿ ಬಿಗಿಯಾದ ನಾಕಾಬಂಧಿ ಹಾಕಲಾಗಿತ್ತು. ಯಾವುದೇ ಕಾರಣಕ್ಕೂ ಹಂತಕರು ನಗರ ಬಿಟ್ಟು ಹೋಗದಂತೆ ಕ್ರಮ ಕೈಗೊಳ್ಳಲಾಗಿತ್ತು. ನಗರದ ಒಳ ರಸ್ತೆಗಳಲ್ಲಿ ನಾಕಾಬಂಧಿ ಹಾಕುವಲ್ಲಿ ಇಲಾಖೆ ವಿಫಲವಾಗಿದೆ,” ಎನ್ನುತ್ತವೆ ಪೊಲೀಸ್ ಮೂಲಗಳು.

ಒಟ್ಟಾರೆ, ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತರೂ ಆಗಿದ್ದ ಗೌರಿ ಲಂಕೇಶ್ ಹತ್ಯೆ ಪ್ರಕರಣದ ತನಿಖೆ ಚುರುಕು ಪಡೆದುಕೊಂಡಿದೆ. ಕುಟುಂಬದವರು ಒತ್ತಾಯಿಸಿದರೆ ಸಿಬಿಐ ತನಿಖೆಗೆ ನೀಡಲು ಸಿದ್ಧ ಎಂದು ಸ್ವತಃ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

ವಿಧಿ ವಿಜ್ಞಾನ ವರದಿ: 

ಘಟನಾ ಸ್ಥಳದಲ್ಲಿ ಸಿಕ್ಕಿರುವ ಕಾಟ್ರಿಡ್ಜ್‌ಗಳನ್ನು ಮಡಿವಾಳದ ವಿಧಿ ವಿಜ್ಞಾನ ಪ್ರಯೋಗಾಲಯ (ಎಫ್‌ಎಸ್ಎಲ್)ದಲ್ಲಿ ಪರೀಕ್ಷೆಗೆ ಒಳಪಡಿಸಲಾಗಿದೆ. ಸದ್ಯ ಎಸ್‌ಐಟಿ ಬಳಿ ಇರುವ ಸಿಸಿಟಿವಿಯಲ್ಲಿ ಇಬ್ಬರು ಹಂತಕರು ಬಂದಿದ್ದಾರೆ ಎಂಬುದು ಹಾಗೂ ಅವರು ದ್ವಿಚಕ್ರ ವಾಹನ ಬಳಸಿ ಪರಾರಿಯಾಗಿದ್ದಾರೆ ಎಂಬುದು ತಿಳಿದು ಬಂದಿದೆ. ಆದರೆ, ಎಷ್ಟು ಪಿಸ್ತೂಲುಗಳನ್ನು ಬಳಸಿದ್ದಾರೆ ಎಂಬ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ‘ಸಮಾಚಾರ’ಕ್ಕೆ ಲಭ್ಯವಾಗಿರುವ ಫೊಟೋ ಒಂದರಲ್ಲಿ, ಗೌರಿ ಅವರು ಕೊನೆಯಲ್ಲಿ ಬಳಸಿದ ಕಾರು ಹಾಗೂ ಮನೆಯ ಗೋಡೆಗೆ ಸಿಡಿದ ಗುಂಡಿನ ಸಂಖ್ಯೆ 13 ಎಂದು ಸ್ಪಷ್ಟವಾಗಿ ಕಾಣಿಸುತ್ತಿದೆ.

ಈ ಕಾಡತೂಸುಗಳ ಪರೀಕ್ಷೆ ನಡೆಯುತ್ತಿದೆ. ಇದರಿಂದ ಹತ್ಯೆಗೆ ಒಂದು ಪಿಸ್ತೂಲು ಬಳಸಲಾಗಿತ್ತಾ? ಇಲ್ಲಾ ಎರಡು ಪ್ರತ್ಯೇಕ ಆಯುಧಗಳಲ್ಲಿ 14 ಗುಂಡು ಹಾರಿದವಾ ಎಂಬ ಕುರಿತು ಸತ್ಯ ಬೆಳಕಿಗೆ ಬರಬೇಕಿದೆ.

#ನಾನೂ_ಗೌರಿ:

ಗೌರಿ ಲಂಕೇಶ್ ಹತ್ಯೆ ಖಂಡಿಸಿ ನಡೆಯುತ್ತಿರುವ ಚಟುವಟಿಕೆಗಳು ಗುರುವಾರ ಬಿರುಸು ಪಡೆದುಕೊಂಡಿವೆ. ರವೀಂದ್ರ ಕಲಾ ಕ್ಷೇತ್ರದಲ್ಲಿ ನಡೆದ ಸಮಾನ ಮನಸ್ಕರ ಸಭೆಯಲ್ಲಿ ಇದೇ ತಿಂಗಳ 12ನೇ ತಾರೀಖು ಬೃಹತ್ ಪ್ರತಿಭಟನೆ ಆಯೋಜನೆಗೆ ತೀರ್ಮಾನ ತೆಗೆದುಕೊಳ್ಳಲಾಗಿದೆ. ಗೌರಿ ಸಹೋದರ ಇಂದ್ರಜಿತ್ ಲಂಕೇಶ್, “ಪ್ರಕರಣದ ತನಿಖೆ ಮಾವೋವಾದಿಗಳು ಹಾಗೂ ಬಲಪಂಥೀಯ ಸಂಘಟನೆಗಳ ಕೈವಾಡದ ಸಾಧ್ಯತೆ ಬಗ್ಗೆ ಗಮನ ಹರಿಸಬೇಕು,” ಎಂದು ಪತ್ರಿಕಾಗೋ‍‍ಷ್ಠಿಯಲ್ಲಿ ತಿಳಿಸಿದರು. ಕವಿತಾ ಲಂಕೇಶ್ ಕೂಡ ಪಾಲ್ಗೊಂಡಿದ್ದರು.