Home Investigation ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣ: ನಕ್ಸಲೀಯರ ಸುತ್ತ ಅನುಮಾನದ ಹುತ್ತ ಬೆಳೀತಾ ಇರೋದು ಯಾಕೆ?

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣ: ನಕ್ಸಲೀಯರ ಸುತ್ತ ಅನುಮಾನದ ಹುತ್ತ ಬೆಳೀತಾ ಇರೋದು ಯಾಕೆ?

SHARE

ಪತ್ರಕರ್ತೆ,

ಹೋರಾಟಗಾರ್ತಿ ಗೌರಿ ಲಂಕೇಶ್ ಕೊಲೆ ಪ್ರಕರಣದ ತನಿಖೆ ಮುಂದುವರಿದಿದೆ.ಗೌರಿ ದೇಹ ಬೆಂಗಳೂರಿನ ಚಾಮರಾಜಪೇಟೆಯ ಸ್ಮಶಾನದಲ್ಲಿ ಮಣ್ಣಲ್ಲಿ ಮಣ್ಣಾಗಿ ಹೋಗುತ್ತಿರುವ ಹೊತ್ತಿಗೇ, ಹತ್ಯೆ ಸುತ್ತ ಹಲವು ಅನುಮಾನಗಳ ಮುಳ್ಳು ನೆಟ್ಟಿದೆ. ಒಂದು ಕಡೆ ಗೌರಿ ಲಂಕೇಶ್ ಸಾವಿಗೆ ನ್ಯಾಯ ಒದಗಿಸುವಂತೆ ಕೋರಿ ರಾಷ್ಟ್ರ ಮಟ್ಟದ ಬೃಹತ್ ಹೋರಾಟದ ರೂಪುರೇಷೆ ಸಿದ್ಧವಾಗುತ್ತಿದೆ. ಮತ್ತೊಂದು ಕಡೆ, ರಾಜ್ಯ ಸರಕಾರ ಹಿರಿಯ ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ ‘ವಿಶೇಷ ತನಿಖಾ ತಂಡ'(ಎಸ್‌ಐಟಿ) ವನ್ನು ರಚಿಸಿದೆ. ಎಸ್‌ಐಟಿ ತನಿಖೆಯ ಜಾಡನ್ನು ನಿರ್ಧಾರ ಮಾಡಬೇಕಿದೆ.ವರದಿಗಳ ಪ್ರಕಾರ, ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ‘ಪೊಲೀಸರು ಬಲಪಂಥೀಯ ವಿಚಾರಧಾರೆಗಳನ್ನು ಪ್ರತಿನಿಧಿಸುವ ಸಂಘಟನೆಗಳ ಕೃತ್ಯ ಇಲ್ಲವೇ ಕರ್ನಾಟಕದ ಮಾವೋವಾದಿ ಚಳುವಳಿಯ ಹಿನ್ನೆಲೆಯಿಂದ ಬಂದ ಸಂಘಟನೆಗಳ ಕೃತ್ಯ ಇರಬಹುದು ಎಂಬ ಅನುಮಾನ ವ್ಯಕ್ತಪಡಿಸಿದ್ದಾರೆ’.ಬಲಪಂಥೀಯ ಸಂಘಟನೆಗಳಿಂದ ಈಗಾಗಲೇ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂತಾಪ ಅಧಿಕೃತವಾಗಿ ವ್ಯಕ್ತವಾಗಿದೆ. ಅದರಲ್ಲೂ ವಿಶೇಷವಾಗಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಅಥವಾ ಜನಪ್ರಿಯ ಭಾಷೆಯಲ್ಲಿ ಸಂಘ, ತೀವ್ರ ಸಂತಾಪ ವ್ಯಕ್ತಪಡಿಸಿ ಪ್ರಕಟಣೆ ನೀಡಿದೆ. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಕೂಡ ಸಂತಾಪ ಸೂಚಕ ಪ್ರಕರಣೆ ನೀಡಿದೆ. ಇನ್ನು, ಸನಾತನ ಸಂಸ್ಥೆಗಳಂತಹ ಆರ್‌ಎಸ್‌ಎಸ್‌ ಚೌಕಟ್ಟಿನಿಂದ ಹೊರಗಿರುವ ಹಿಂದುತ್ವದ ಪ್ರತಿಪಾದಕ ಸಂಘಟನೆಗಳ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಲಭ್ಯವಾಗುತ್ತಿಲ್ಲ.

ನಕ್ಸಲೀಯರ ಕೈವಾಡ?:

ಕರ್ನಾಟಕದಲ್ಲಿ ಗೌರಿ ಅವರನ್ನು ಹತ್ಯೆ ಮಾಡುವ ಉದ್ದೇಶ ಇದೆ ಎಂಬ ಆರೋಪಕ್ಕೆ ಗುರಿಯಾಗಿರುವವರಲ್ಲಿ ನಕ್ಸಲೀಯರಿದ್ದಾರೆ. ಕಮ್ಯುನಿಸ್ಟ್ ಪಾರ್ಟಿ ಆಫ್‌ ಇಂಡಿಯಾ (ಮಾವೋವಾದಿ) ಪಕ್ಷದ ಕೃತ್ಯ ಇದು ಎಂದು ಕೆಲವು ವರದಿಗಳು ಹೇಳುತ್ತಿದೆ. ಗೌರಿ ಗುಂಡು ತಿಂದ ಸಾವನ್ನಪ್ಪಿದ ದಿನ ರಾತ್ರಿಯೇ ಬಿಜೆಪಿಯ ಐಟಿ ಘಟಕ ಇಂತಹದೊಂದು ಸಾಧ್ಯತೆಯನ್ನು ಗೌರಿ ಟ್ವಿಟರ್ ಖಾತೆಯನ್ನೇ ಬಳಸಿಕೊಂಡು ರಾಷ್ಟ್ರಮಟ್ಟದಲ್ಲಿ ತೇಲಿ ಬಿಡುವ ಪ್ರಯತ್ನ ಮಾಡಿತ್ತು.ಈ ಹಿನ್ನೆಲೆಯಲ್ಲಿ ಕರ್ನಾಟಕದ ಮಾವೋವಾದಿ ಚಳುವಳಿಯ ಹಿನ್ನೆಲೆಯಲ್ಲಿ ಆರೋಪಕ್ಕೆ ಗುರಿಯಾಗಿ ಜೈಲು ಸೇರಿದ್ದ, ಈಗ ಸಾಮಾನ್ಯ ಬದುಕಿಗೆ ಮರಳಿ ಬದುಕಿಗಾಗಿ ಪ್ರಯೋಗಳನ್ನು ನಡೆಸುತ್ತಿರುವ ಇಬ್ಬರು ಹಿರಿಯ ನಾಯಕರ ಅಭಿಪ್ರಾಯಗಳನ್ನು ‘ಸಮಾಚಾರ’ ಇಲ್ಲಿ ದಾಖಲಿಸುತ್ತಿದೆ.

ಹಿನ್ನೆಲೆ:

ಅದು 1987-88ರ ಇಸವಿ. ಮೈಸೂರಿನ ಸಮೀಪದ ರಟ್ಟಹಳ್ಳಿ ಮತ್ತು ಚಾಮಲಾಪುರಗಳಲ್ಲಿ ಕೇಂದ್ರ ಸರಕಾರ ಅಣು ವಿದ್ಯುತ್ ಸ್ಥಾವರವೊಂದನ್ನು ಸ್ಥಾಪಿಸಲು ಹೊರಟಿತ್ತು. ಅಣು ವಿದ್ಯುತ್ ಸ್ಥಾವರ ಸ್ಥಾಪನೆಗೊಂಡರೆ ಮೈಸೂರಿನ ಪ್ರಖ್ಯಾತ ಕುಕ್ಕರಹಳ್ಳಿ ಕೆರೆ ನಾಶವಾಗುತ್ತದೆ ಎಂದು ಒಂದಷ್ಟು ಪರಸರವಾದಿ ಹೋರಾಟಗಳು ಹುಟ್ಟಿಕೊಂಡವು. ಒಂದಷ್ಟು ಜನ ಸರಕಾರದ ವಿರುದ್ಧ ಪ್ರತಿಭಟನೆಗಳನ್ನು ಸಂಘಟಿಸತೊಡಗಿದರು. ಇದರಿಂದ ಸ್ಫೂರ್ತಿ ಪಡೆದವರು ಇವತ್ತಿಗೆ ಎನ್‌ಕೌಂಟರ್‌ಗೆ ಬಲಿಯಾಗಿರುವ ಮಾಜಿ ನಕ್ಸಲ್ ನಾಯಕ ಸಾಕೇತ್ ರಾಜನ್. ನಂತರ 1988ರ ಸುಮಾರಿಗೆ ಜೆಎನ್‌ಯೂಗೆ ಸ್ನಾತ್ತಕೋತ್ತರ ಪದವಿ ಪಡೆದ ಸಾಕೇತ್ ಮತ್ತೆ 1990ರ ಸುಮಾರಿಗೆ ಕರ್ನಾಟಕಕ್ಕೆ ವಾಪಾಸ್ ಬಂದರು. “ಈ ಸಮಯದಲ್ಲಿ ಸಾಕೇತ್, ಪೋಲಂಕಿ ಮತ್ತಿತರರು ಮೈಸೂರಿನಲ್ಲಿ ಕ್ರಾಂತಿಕಾರಿ ಹೋರಾಟದ ಮುಖ್ಯ ಭೂಮಿಕೆಯಲ್ಲಿದ್ದರು. ಯಾವುದೋ ಒಂದು ಮನೆಯ ಕೊಟ್ಟಿಗೆಯಲ್ಲಿ ಹುಲ್ಲಿನ ರಾಶಿಗಳ ನಡುವೆ ಪ್ರಿಂಟಿಂಗ್ ಮಷೀನ್ ಇಟ್ಟುಕೊಂಡು ಪತ್ರಿಕೆಗಳನ್ನು ನಡೆಸುತ್ತಿದ್ದರು. ಪಾಂಪ್ಲೆಂಟ್‌ಗಳನ್ನು ಅಚ್ಚಾಗಿ ಹಂಚುತ್ತಿದ್ದರು,” ಎಂದು ನೆನಪಿಸಿಕೊಳ್ಳುತ್ತಾರೆ ಮೈಸೂರಿನ ಹಿರಿಯ ಪತ್ರಕರ್ತರೊಬ್ಬರು.

ಅವತ್ತು ಸಾಕೇತ್ ಮತ್ತು ಸಂಗಾತಿಗಳು ಅಚ್ಚಾಕುತ್ತಿದ್ದ ಪತ್ರಿಕೆಯ ಹೆಸರು ‘ವಿಮುಕ್ತಿ’ ಮತ್ತು ಅದು ನಕ್ಸಲ್‌ ಚಳವಳಿಯ ಪರಂಪರೆಯ ನ್ನು ಮುಂದುವರಿಸಿಕೊಂಡು ಬಂದಿದ್ದ ಕಮ್ಯುನಿಸ್ಟ್ ಪಾರ್ಟಿ ಆಫ್‌ ಇಂಡಿಯಾ (ಎಂ- ಎಲ್) – ನಂತರದ ದಿನಗಳಲ್ಲಿ ಇದೇ ಮಧ್ಯ ಭಾರತದಲ್ಲಿ ಸಕ್ರಿಯಾಗಿರುವ ಮತ್ತೊಂದು ಶಸಸ್ತ್ರ ಹೋರಾಟದ ಕಮ್ಯುನಿಸ್ಟ್ ಪಕ್ಷ ಎಂಸಿಸಿಎಲ್‌ ಜತೆ ಒಂದಾಗಿ ಸಿಪಿಐ (ಮಾವೋವಾದಿ) ಎಂದು ಮರು ನಾಮಕರಣಗೊಂಡಿತು- ದ ಮುಖವಾಣಿಯಾಗಿತ್ತು. ಈ ಸಮಯದಲ್ಲಿ ಸಾಕೇತ್ ‘ಪ್ರಗತಿ ಪರ ವಿದ್ಯಾರ್ಥಿ ಕೇಂದ್ರ’ ಎಂಬ ವಿದ್ಯಾರ್ಥಿ ಸಂಘಟನೆಯನ್ನು ಹುಟ್ಟು ಹಾಕಿದರು. ಕೊನೆಗೆ ಅದು ಕರ್ನಾಟಕದ ರಾಯಚೂರು ಭಾಗದಲ್ಲಿ ಶಸ್ತ್ರ ಕೈ ಕೈಗೆತ್ತಿಕೊಂಡಿತು. ಭೂ ಮಾಲೀಕರ ವಿರುದ್ಧ ಹೋರಾಟ ಎಂಬ ಘೋಷಣೆಗಳು ಮೊಳಗಿದವು. ರಾಯಚೂರಿನಲ್ಲಿ ಕರ್ನಾಟಕದ ಮೊದಲ ನಕ್ಸಲ್‌ ಎನ್‌ಕೌಂಟರ್ ನಡೆಯಿತು. ನಕ್ಸಲ್ ಚಳುವಳಿ ಮಲೆನಾಡಿನ ಭಾಗಗಳಿಗೆ ವಿಸ್ತರಣೆಗೊಂಡಿತು. ಹಲವರು ಎನ್‌ಕೌಂಟರ್‌ಗಳು, ನಕ್ಸಲೀಯರೇ ಕೊಂದ ಪ್ರಕರಣಗಳು ನಡೆದವು.

ಚಳವಳಿಯ ಹೊಣೆಗಾರಿಕೆ:

“ಈ ಸಮಯದಲ್ಲಿ ನಡೆದ ಪ್ರತಿ ನಕ್ಸಲ್ ಘಟನಾವಳಿಗಳಲ್ಲಿ ಸಿಪಿಐ ಮಾವೋವಾದಿ ಪಕ್ಷ ಹೇಳಿಕೆ ನೀಡಿದೆ. ಅವರಿಂದಲೇ ಹತ್ಯೆ ನಡೆದಾಗಲೂ ಒಪ್ಪಿಕೊಂಡಿದ್ದಾರೆ. ಅವುಗಳ ಹೊಣೆ ಹೊತ್ತುಕೊಂಡಿದ್ದಾರೆ. ಎಲ್ಲಿಯೂ ಸೈದ್ಧಾಂತಿಕ ವಿರೋಧಿಗಳನ್ನು ಕೊಲ್ಲುವ ನೀಚ ಮಟ್ಟಕ್ಕೆ ಅವರು ಇಳಿದಿಲ್ಲ. ಹೀಗಾಗಿ ಗೌರಿ ಲಂಕೇಶ್‌ ಪ್ರಕರಣದಲ್ಲಿ ಅಂತಹ ಸಾಧ್ಯತೆಯನ್ನು ಮುಂದಿಡುವುದು ತನಿಖೆಯನ್ನು ದಿಕ್ಕು ತಪ್ಪಿಸುವ ಪ್ರಯತ್ನ ಅಷ್ಟೆ,” ಎನ್ನುತ್ತಾರೆ ಹಿಂದೆ ಸಾಮಾಜಿಕ ಹೋರಾಟಗಳಲ್ಲಿ ಪೊಲ್ಗೊಂಡು, ನಕ್ಸಲ್‌ ಚಟುವಟಿಕೆಯ ಆರೋಪದ ಮೇಲೆ ಜೈಲು ಸೇರಿ, ಸದ್ಯ ಹೊರಬಂದಿರುವ ಶಿವಮೊಗ್ಗ ಮೂಲದ ದೇವೇಂದ್ರಪ್ಪ.ಗೌರಿ ಲಂಕೇಶ್ ಹತ್ಯೆ ಖಂಡಿಸಿ ಟೌನ್‌ಹಾಲ್‌ ಮುಂದೆ ಸೇರಿದ್ದ ಸಾವಿರಾರು ಜನರ ನಡುವೆ ದೇವೇಂದ್ರಪ್ಪ ಕೂಡ ಒಬ್ಬರಾಗಿದ್ದರು. ಅವರಿಗೆ ಪತ್ರಕರ್ತೆ ಗೌರಿ ಹತ್ಯೆಯ ಆಘಾತ ಮೂಡಿಸಿದೆ ಎಂದು ಹೇಳಿದರು. ಜತೆಗೆ, ನಾನು ಕರ್ನಾಟಕ ನಕ್ಸಲ್ ಚಳವಳಿಯ ವಕ್ತಾರನಲ್ಲ ಎಂದು ಅವರು ಸ್ಪಷ್ಟಪಡಿಸಿದರು.”ನಕ್ಸಲೀಯರು ವರ್ಗ ಶತ್ರುಗಳನ್ನು ಕೊಲ್ಲುತ್ತಾರೆ. ಕೊಂದ ಮೇಲೆ ಕ್ಲೈಮ್ ಮಾಡಿಕೊಳ್ಳುತ್ತಾರೆ. ಅರಾಜಕತೆ ಸೃಷ್ಟಿ ಮಾಡಿ ಓಡಿ ಹೋಗುವುದಿಲ್ಲ. ಮಲೆನಾಡಿನ ವಿಚಾರದಲ್ಲಿ ಅವರು ಕ್ಲೈಮ್ ಮಾಡಿದ್ದಾರೆ. ಇದನ್ನು ನಾನು ಆ ಸಮಯದಲ್ಲಿ ಟಿವಿ ಮತ್ತು ಪತ್ರಿಕೆಗಳ ವರದಿಗಳನ್ನು ಆಧರಿಸಿ ಹೇಳುತ್ತಿದ್ದೇವೆ,” ಎಂದು ದೇವೇಂದ್ರಪ್ಪ ತಿಳಿಸಿದರು.ಕರ್ನಾಟಕ ನಕ್ಸಲ್‌ ಚಳವಳಿಯ ಹಿನ್ನೆಲೆಯಲ್ಲಿ ಸಾಕಷ್ಟು ಜನ ಆರೋಪ ಹೊತ್ತು ಜೈಲು ಪಾಲಾಗಿದ್ದರು. ಕೆಲವು ತಮ್ಮ ಪ್ರಕರಣಗಳನ್ನು ಇತ್ಯರ್ಥ ಮಾಡಿಕೊಂಡು ಈಗ ಸಾಮಾನ್ಯ ಜೀವನಕ್ಕೆ ಮರಳಿದ್ದಾರೆ. ಅದರಲ್ಲಿ ಒಬ್ಬರು ಉಜ್ಜನಿ ಗೌಡ. ಮಂಡ್ಯ ಮೂಲದ ಮಳವಳ್ಳಿಯ ಗುಳಗಟ್ಟದಲ್ಲಿ ಉಜ್ಜಿನಿ ಗೌಡ ಸಹಜ ಕೃಷಿ ಮಾಡುತ್ತಿದ್ದಾರೆ. “ನಮಗೊಂದು ತುಂಡು ಭೂಮಿ ಇದೆ. ಅದರಲ್ಲಿಯೇ ವ್ಯವಸಾಯ ಮಾಡುತ್ತಿದ್ದೇನೆ. ಅದರ ನಡುವೆ ಕೋರ್ಟ್, ಕೇಸು ಅಂತ ಓಡಾಡಬೇಕು. ನನಗೆ ಗೌರಿ ಲಂಕೇಶ್ ಹತ್ಯೆ ಸುದ್ದಿ ಕೇಳಿ ಅಚ್ಚರಿ ಆಯಿತು. ತೀರಾ ಕೊಲ್ಲುವ ಮಟ್ಟಕ್ಕೆ ಬಂದರಲ್ಲ ಎಂಬ ಬೇಸರವೂ ಆಯಿತು,” ಎಂದರು ಉಜ್ಜಿನಿ ಗೌಡ. ‘ಸಮಾಚಾರ’ ಜತೆ ದೂರವಾಣಿಯಲ್ಲಿ ಮಾತನಾಡಿದ ಅವರು, “ಜನರ ಪರವಾಗಿ ಇರುವವರು, ಸತ್ಯ ಹೇಳುವವರು ದೇಶ ದ್ರೋಹಿಗಳಾಗಿರುವ ಕಾಲ ಇದು. ಧ್ವನಿ ಮಾಡುವವರ ದನಿಯನ್ನೇ ಮುಗಿಸಲು ಹೊರಟಿರುವುದು ಆತಂಕಕಾರಿ ಬೆಳವಣಿಗೆ. ಈ ಕುರಿತು ಸೂಕ್ತ ತನಿಖೆ ನಡೆದು, ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು,” ಎಂದು ಆಗ್ರಹಿಸಿದರು.ಗೌರಿ ಲಂಕೇಶ್ ಪ್ರಕರಣದ ಕುರಿತು ಆರಂಭವಾಗಿರುವ ಎಸ್‌ಐಟಿ ತನಿಖೆಗೆ ನಿಮ್ಮ ಸಹಕಾರ ಇರಲಿದೆಯಾ? ಎಂಬ ಪ್ರಶ್ನೆಗೆ ದೇವೇಂದ್ರಪ್ಪ, “ನಮ್ಮ ಮೇಲೆ ಹಾಕಿರುವ ಸುಳ್ಳು ಕೇಸುಗಳಿಂದ ನಮ್ಮನ್ನು ನಾವು ರಕ್ಷಣೆ ಮಾಡಿಕೊಳ್ಳುತ್ತಿದ್ದೇವೆ. ಸಮಾಜದ ಮುಂದೆ ಕೆಟ್ಟವರನ್ನಾಗಿ ನಿಲ್ಲಿಸಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾವು ಉತ್ತಮ ಸಮಾಜದ ಕನಸು ಕಂಡವರು. ಆ ದೃಷ್ಟಿಯಲ್ಲಿ ಏನೇ ತನಿಖೆ ನಡೆದರೂ ನಮ್ಮ ಸಹಕಾರ ಇರುತ್ತದೆ,” ಎಂದರು.

ಒಡಕಿನ ಕಾರಣಗಳು:

ಗೌರಿ ಲಂಕೇಶ್ ಹತ್ಯೆಗೆ ಕರ್ನಾಟಕದಲ್ಲಿ 2006ರಲ್ಲಿ ನಕ್ಸಲ್ ಚಳುವಳಿಯಲ್ಲಿ ಮೂಡಿದ ಒಡಕು ಕಾರಣ ಎಂದು ಸುದ್ದಿ ಬರುತ್ತಿದೆ. “ರಾಜಕೀಯ ಸಂಘಟನೆಗಳಲ್ಲಿ, ಪಕ್ಷಗಳಲ್ಲಿ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳ ಕಾರಣಕ್ಕೆ ಒಡಕು ಬರುವುದು ಹೊಸತೇನಲ್ಲ. ಅದರಲ್ಲೂ ಕಮ್ಯುನಿಸ್ಟ್ ಚಳವಳಿಯಲ್ಲಿ ಅಂತಹದ್ದೇ ಒಂದು ಪರಂಪರೆ ಇದೆ. ಕರ್ನಾಟಕದಲ್ಲಿಯೂ ನಕ್ಸಲ್ ಚಳವಳಿ ಒಡೆದು ಹೋಯಿತು,” ಎನ್ನುತ್ತಾರೆ ದೇವೇಂದ್ರಪ್ಪ. ನಕ್ಸಲ್ ಚಳವಳಿ ಒಡೆದ ನಂತರ ಗೌರಿ ಸರಕಾರದ ಪ್ಯಾಕೇಜ್ ಸಂಸ್ಕೃತಿಯನ್ನು ಬೆಂಬಲಿಸಿದರು ಎಂಬುದು ಅವರ ಮೇಲಿರುವ ಆರೋಪ.2006ರಲ್ಲಿ ಮಲೆನಾಡಿನ ಕಾಡೊಳಗೆ ನಡೆದ ಸಿಪಿಐ(ಮಾವೋವಾದಿ) ಪಕ್ಷದ ವಾರ್ಷಿಕ ಸಭೆಯೊಂದರಲ್ಲಿ ಪಕ್ಷ ಎರಡು ಹೋಳಾಗುವ ತೀರ್ಮಾನಕ್ಕೆ ಬರಲಾಗುತ್ತಿತ್ತು ಎಂದು ಅಂದಿನ ವರದಿಗಳು ಹೇಳುತ್ತವೆ. ಈ ಸಮಯದಲ್ಲಿ ಒಂದಷ್ಟು ಜನ ‘ಶಸಸ್ತ್ರ ಹೋರಾಟಕ್ಕೆ ಇದು ಸಕಾಲ ಅಲ್ಲ. ಪ್ರಜಾತಾಂತ್ರಿಕ ನೆಲೆಯಲ್ಲಿ ಜನರ ಹೋರಾಟಗಳನ್ನು ಸಂಘಟಿಸಬೇಕು ಎಂದು ಹೊರಗೆ ಬಂದರು. ಮತ್ತು, ‘ಕ್ರಾಂತಿಕಾರಿ ಕಮ್ಯುನಿಸ್ಟ್ ಪಕ್ಷ'( ಆರ್‌ಸಿಪಿ)ಯನ್ನು ರಚಿಸಿಕೊಂಡರು. ಹೀಗೆ, ಶಸಸ್ತ್ರ ಹೋರಾಟದಿಂದ ದೂರವಾಗಿ ಒಂದಷ್ಟು ಕಾಲ ಭೂಗತರಾಗಿಯೇ ಇದ್ದ ನೂರ್ ಶ್ರೀಧರ್ ಮತ್ತು ಸಿರಿಮನೆ ನಾಗರಾಜ್ ನಂತರ ಗೌರಿ ಲಂಕೇಶ್ ಮತ್ತು ಸಂಗಾತಿಗಳ ಪ್ರಯತ್ನದಿಂದ ಮುಖ್ಯವಾಹಿನಿಗೆ ಮರಳಿದರು. ಅವರ ವಲಯದಲ್ಲಿ ರಕ್ತ ಪಾತದ ಸಂಘರ್ಷವನ್ನು ಕೊನೆಗಾಣಿಸಿದ ಹಿನ್ನೆಲೆಯಲ್ಲಿ ಗೌರಿ ಬಗ್ಗೆ ಅಪಾರ ಅಭಿಮಾನ ಇದೆ. ಅವರೂ ಈಗ ಗೌರಿ ಲಂಕೇಶ್ ಸಾವಿಗೆ ನ್ಯಾಯಕ್ಕಾಗಿ ಆಗ್ರಹಿಸುತ್ತಿರುವವರ ಸಾಲಿನಲ್ಲಿ ಮುಂದಿದ್ದಾರೆ.ಈ ವರದಿಗಾಗಿ ನೂರ್ ಶ್ರೀಧರ್ ಹಾಗೂ ಸಿರಿಮನೆ ನಾಗರಾಜ್‌ ಅವರುಗಳನ್ನು ಸಂಪರ್ಕಿಸಲು ಪ್ರಯತ್ನಿಸಲಾಯಿತಾದರೂ, ಪ್ರತಿಕ್ರಿಯೆ ಪಡೆದುಕೊಳ್ಳಲು ಸಾಧ್ಯವಾಗಲಿಲ್ಲ.