Home Investigation ‘Killers of ಗೌರಿ ಲಂಕೇಶ್’: ಈ ಬಾರಿ ಸುಳಿವು ಬಿಟ್ಟು ಕೊಡಲಿದೆಯಾ ಸಿಸಿಟಿವಿ?

‘Killers of ಗೌರಿ ಲಂಕೇಶ್’: ಈ ಬಾರಿ ಸುಳಿವು ಬಿಟ್ಟು ಕೊಡಲಿದೆಯಾ ಸಿಸಿಟಿವಿ?

SHARE

ಕರ್ನಾಟಕದಲ್ಲಿ

ಮತ್ತೊಬ್ಬ ‘ಬುದ್ಧಿಜೀವಿ’ಯ ಹತ್ಯೆ ನಡೆದು ಹೋಗಿದೆ.

ವಿದ್ವಾಂಸ ಎಂ. ಎಂ. ಕಲ್ಬುರ್ಗಿ ಹತ್ಯೆ ನಡೆದು 2 ವರ್ಷ ಒಂದು ವಾರದ ಅಂತರದಲ್ಲಿ ಪತ್ರಕರ್ತೆ, ಹೋರಾಟಗಾರ್ತಿ, ಬಲಪಂಥೀಯ ವಿಚಾರಗಳ ವಿಮರ್ಶಕಿ, ರಾಜ್ಯದಲ್ಲಿ ನಕ್ಸಲ್ ಹೋರಾಟಗಾರರನ್ನು ಮುಖ್ಯವಾಹಿನಿಗೆ ತರುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಗೌರಿ ಲಂಕೇಶ್ ತಮ್ಮ ಮನೆಯ ಮುಂದೆಯೇ ಗುಂಡೇಟಿಗೆ ಬಲಿಯಾಗಿದ್ದಾರೆ.

ಮಂಗಳವಾರ ರಾತ್ರಿ 8 ಗಂಟೆ ಸುಮಾರಿಗೆ ಕಚೇರಿಯಿಂದ ಮನೆಗೆ ಮರಳಿದ ಗೌರಿ ಕಾರು ನಿಲ್ಲಿಸಿ ಗೇಟು ದಾಟಿ ಒಳ ಪ್ರವೇಶಿದ ನಂತರ ಅವರ ಮೇಲೆ ದಾಳಿ ನಡೆದಿದೆ. ಮೊಟಾರು ಬೈಕ್‌ನಲ್ಲಿ ಬಂದ ಮೂವರು ಯುವಕರ ತಂಡವೊಂದು ನಾಡಬಂದೂಕಿನಿಂದ ಗುಂಡು ಹಾರಿಸಿವೆ. ಒಟ್ಟು ಏಳು ಸುತ್ತ ಗುಂಡು ಹಾರಿದ್ದು, ಇದರಲ್ಲಿ ಎರಡು ಗುಂಡು ಗೌರಿ ಎದೆ ಭಾಗವನ್ನು ಹೊಕ್ಕಿದ್ದ, ಇನ್ನೊಂದು ಗುಂಡನ್ನು ಹತ್ತಿರದಿಂದ ತಲೆಗೆ ನುಗ್ಗಿಸಲಾಗಿದೆ. ಉಳಿದ ಗುಂಡುಗಳು ಗೋಡೆಗೆ ತಗುಲಿದೆ ಎಂದು ಪ್ರಾರ್ಥಮಿಕ ಮಾಹಿತಿ ಹೇಳುತ್ತಿದೆ. ಈ ಕುರಿತು ಇನ್ನಷ್ಟು ಸ್ಪಷ್ಟತೆಯ ಅಗತ್ಯವಿದೆ.

ಮನೆಯ ಮುಂಭಾಗದಲ್ಲಿ ಅಳವಡಿಸಿದ್ದ ಎರಡು ಸಿಸಿಟಿವಿ ಕ್ಯಾಮೆರಾಗಳಲ್ಲಿ ಈ ದೃಶ್ಯಾವಳಿಗಳು ಸೆರೆಯಾಗಿರುವ ಸಾಧ್ಯತೆ ಹೆಚ್ಚಿದೆ. ಇವುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದು ತನಿಖೆ ನಡೆಸುತ್ತಿದ್ದಾರೆ.

ಕೊಂದವರು ಯಾರು?:

ಮಂಗಳವಾರ ಸಂಜೆ ಗೌರಿ ಲಂಕೇಶ್ ತಮ್ಮ ಟ್ವಿಟರ್ ಖಾತೆಯಿಂದ ಎರಡು ಪ್ರತ್ಯೇಕ ಟ್ವೀಟ್‌ಗಳನ್ನು ಮಾಡಿದ್ದರು. ಇವುಗಳಲ್ಲಿ ಕರ್ನಾಟಕದ ಜಾಲತಾಣಗಳಲ್ಲಿ ಇತ್ತೀಚೆಗೆ ನಡೆಯುತ್ತಿದ್ದ ಅಂಬೇಡ್ಕರ್‌ವಾದಿಗಳು ಮತ್ತು ಕಮ್ಯುನಿಸ್ಟರ ನಡುವಿನ ಸೈದ್ಧಾಂತಿಕ ಸಂಘರ್ಷಗಳ ಹಿನ್ನೆಲೆಯಲ್ಲಿ ‘ಎಲ್ಲರೂ ಒಟ್ಟಾಗಿರಬೇಕು’ ಎಂಬರ್ಥದಲ್ಲಿ ಟ್ವೀಟ್ ಮಾಡಿದ್ದರು. ಜತೆಗೆ, ‘ನಮ್ಮ ಶತ್ರು ಯಾರು ಎಂಬುದು ಸ್ಪಷ್ಟವಿದೆ’ ಎಂದು ಅವರ ಎಂದಿನ ಬಲಪಂಥೀಯರ ವಿರುದ್ಧದ ಹೋರಾಟದ ನಿಲುವುಗಳನ್ನು ವ್ಯಕ್ತಪಡಿಸಿದ್ದರು.

ಗೌರಿ ಹತ್ಯೆ ವಿಚಾರ ಹೊರಬೀಳುತ್ತಿದ್ದಂತೆ ರಾಷ್ಟ್ರೀಯ ಬಿಜೆಪಿ ಐಟಿ ಸೆಲ್‌ನ ಕೆಲವರು ಇದು ‘ಅವರ (ನಕ್ಸಲ್‌) ನಡುವಿನ ಸಂಘರ್ಷದಲ್ಲಿ ನಡೆದ ಕೊಲೆ’ ಎಂದು ಬಿಂಬಿಸುವ ಕೆಲಸ ಆರಂಭಿಸಿತು.

ವಾಸ್ತವದಲ್ಲಿ ಕರ್ನಾಟದ ಬೌದ್ಧಿಕ ಹೋರಾಟ ವಲಯದಲ್ಲಿ ಸದ್ಯ ನಡೆಯುತ್ತಿರುವ ಅಂಬೇಡ್ಕರ್‌ವಾದಿಗಳು ವರ್ಸಸ್ ಕಮ್ಯುನಿಸ್ಟ್ ಸಂಘರ್ಷ ಒಂದಷ್ಟು ಜನರಿಗೆ ಸೀಮಿತವಾಗಿದ್ದ ಚರ್ಚೆಯಾಗಿತ್ತು. ಇದು ಹೋರಾಟಗಳಲ್ಲಿ ಒಟ್ಟಿಗೆ ಹೆಜ್ಜೆ ಹಾಕುತ್ತಿದ್ದ ದಲಿತ ಸಂಘಟನೆಗಳು ಹಾಗೂ ಕಮ್ಯುನಿಸ್ಟ್ ಹೋರಾಟಗಾರರ ನಡುವೆ ಬಂದಿದ್ದ ಸೈದ್ಧಾಂತಿಕ ಕಿತ್ತಾಟ ಅಷ್ಟೆ. ಈ ವಿಚಾರದಲ್ಲಿ ಗೌರ ಪಾತ್ರ ಮಧ್ಯಸ್ಥಿಕೆ ವಹಿಸುವ ರೀತಿಯಲ್ಲಿತ್ತು. ಮಂಗಳವಾರ ಅವರು ಕೊಲೆಯಾಗುವ ಮುಂಚೆ ಮಾಡಿ ಮಾಡಿರುವ ಎರಡು ಪ್ರತ್ಯೇಕ ಕರೆಗಳೇ ಸಾಕ್ಷಿ.

ಇದರ ಜತೆಗೆ, ಗೌರಿ ಅವರ ಕುಟುಂಬದ ಹಿನ್ನೆಲೆಯಲ್ಲಾಗಲೀ, ಇತರೆ ಆಯಾಮಗಳಿಂದಾಗಲೀ ಅವರ ಮೇಲೆ ಹತ್ಯೆ ಸಾಧ್ಯತೆಗಳೇ ಇರಲಿಲ್ಲ ಎಂಬುದು ಅವರ ಒಡನಾಡಿಗಳ ಮಾತು.

ಈ ಹಿನ್ನೆಲೆಯಲ್ಲಿ ಸದ್ಯ ಉಳಿದಿರುವ ಸಾಧ್ಯತೆ, ಪನ್ಸಾರೆ, ಕಲ್ಬುರ್ಗಿ ಹಾದಿಯಲ್ಲಿಯೇ ಗೌರಿ ಹತರಾದರಾ? ಎಂಬುದು.

ಗೌರಿ ಹಾದಿ:

ಗೌರಿ ಲಂಕೇಶ್ ಪತ್ರಿಕೋದ್ಯಮದ ಕಲಿತರು. ಒಂದಷ್ಟು ಕಾಲ ‘ಏಜೆನ್ಸಿ ಫ್ರಾನ್ಸ್ ಫ್ರೆಸೆ’ (ಎಎಫ್‌ಪಿ) ಎಂಬ ಸುದ್ದಿ ಸಂಸ್ಥೆಯಲ್ಲಿ ಕೆಲಸ ಮಾಡಿದವರು. ನಂತರ ದಿಲ್ಲಿಯ ಟೈಮ್ಸ್ ಆಫ್‌ ಇಂಡಿಯಾ ಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದವರು. ತಂದೆ ಲಂಕೇಶರ ನಿಧನ ನಂತರ ಅವರ ‘ಲಂಕೇಶ್ ಪತ್ರಿಕೆ’ಯ ಸಂಪಾದಕಿಯಾಗಿ 2000ರಲ್ಲಿ ಕರ್ನಾಟಕದಲ್ಲಿ ಕನ್ನಡ ಪತ್ರಿಕೋದ್ಯಮ ಶುರುಮಾಡಿದರು. ಇಂಗ್ಲಿಷ್ ಪತ್ರಕರ್ತೆ ಕನ್ನಡವನ್ನೂ ಸ್ಫುಟವಾಗಿ ಬರೆಯುವುದನ್ನೂ ರೂಢಿಸಿಕೊಂಡರು.

2002-03ರ ಸುಮಾರಿಗೆ ಚಿಕ್ಕಮಗಳೂರಿನಲ್ಲಿ ನಡೆದ ಬಾಬಾಬುಡನ್‌ ಗಿರಿ ಉಳಿಸಿ ಹೋರಾಟದ ಅವರನ್ನು ಮುಖ್ಯವಾಹಿನಿಯ ಹೋರಾಟಕ್ಕೆ ಎಳೆದು ತಂತು. ಆ ಸಮಯದಲ್ಲಿ ಅವರು ವೇದಿಕೆಯಲ್ಲಿ ಕಾಣಿಸಿಕೊಂಡರು. ಅಲ್ಲಿಂದ ಮುಂದೆ ಕೋಮು ಸೌಹಾರ್ದ ವೇದಿಕೆಯಲ್ಲಿದ್ದ ಹಲವರು ಸೈದ್ಧಾಂತಿಕ ಕಾರಣಗಳಿಗಾಗಿ ದೂರವಾದರೂ, ಗೌರಿ ತಮ್ಮ ನಿಲುವುಗಳಿಗೆ ಗಟ್ಟಿಯಾಗಿ ಅಂಟಿಕೊಂಡಿದ್ದರು.

ಹೀಗಿರುವಾಗಲೇ, ಕರ್ನಾಟಕದ ನಕ್ಸಲ್ ಚಳವಳಿ ರಾಯಚೂರಿನಿಂದ ಪಶ್ಚಿಮ ಘಟ್ಟ ಪ್ರದೇಶಗಳಿಗೆ ಸ್ಥಳಾಂತರಗೊಂಡಿತು. ಮಲೆನಾಡು ಭಾಗದಲ್ಲಿ ಯುವಕ ಯುವತಿಯರು ಬಂದೂಕು ಹಿಡಿದು ಓಡಾಡಲಾರಂಭಿಸಿದರು. ಈ ಸಮಯದಲ್ಲಿ ನಕ್ಸಲ್‌ ಚಳವಳಿಯ ಕರ್ನಾಟಕದ ಪ್ರಮುಖ ನಾಯಕ ಸಾಕೇತ್ ರಾಜನ್‌ ಆಯ್ದ ಕೆಲವು ಪತ್ರಕರ್ತರಿಗೆ ಕಾಡಿನೊಳಗೆ ಸಂದರ್ಶನ ನೀಡಿದರು. ಅದರಲ್ಲಿ ಗೌರಿ ಲಂಕೇಶ್ ಕೂಡ ಒಬ್ಬರಾಗಿದ್ದರು. ಈ ಸಮಯದಲ್ಲಿ ಸಾಕೇತ್‌ ರಾಜನ್‌ರ ಅಪರೂಪದ ಫೊಟೋವನ್ನು ಸೆರೆ ಹಿಡಿದಿದ್ದರು. ‘ಮಲೆನಾಡಿನಲ್ಲಿ ನಕ್ಸಲ್ ಘರ್ಜನೆ’ ಹೆಸರಿನಲ್ಲಿ ಸುದೀರ್ಘ ಲೇಖನವೊಂದನ್ನು ಬರೆದಿದ್ದರು. 2005ರಲ್ಲಿ ಸಾಕೇತ್ ರಾಜನ್ ಹತ್ಯೆ ನಡೆದಾಗ ಅವರ ಅಸ್ಥಿಯನ್ನು ಹಿಡಿದು ಅಂದಿನ ಗೃಹ ಸಚಿವ ಎಂ. ಪಿ. ಪ್ರಕಾಶ್ ಅವರಿಗೆ ಮುತ್ತಿಗೆ ಹಾಕಿದವರಲ್ಲಿ ಗೌರಿ ಪ್ರಮುಖರಾಗಿದ್ದರು. ‘ಶಾಂತಿಗಾಗಿ ನಾಗರಿಕ ವೇದಿಕೆ’ ಅಡಿಯಲ್ಲಿ ಶಸಸ್ತ್ರ ಹೋರಾಟಗಾರರು ಮತ್ತು ಸರಕಾರದ ನಡುವೆ ಮಾತುಕತೆಗೆ ವೇದಿಕೆ ಸಿದ್ಧಪಡಿಸುವ ಕೆಲಸ ಮಾಡಲು ಶುರುಮಾಡಿದರು.

ಕರ್ನಾಟಕದಲ್ಲಿ 2006ರಲ್ಲಿ ನಕ್ಸಲ್ ಚಳವಳಿ ಎರಡು ಹೋಳಾಯಿತು. ನೂರ್ ಶ್ರೀಧರ್, ಸಿರಿಮನೆ ನಾಗರಾಜ್‌ ಮತ್ತಿತರರು ಶಸ್ತ್ರ ಹೋರಾಟ ಪಕ್ಕಕ್ಕಿಟ್ಟು ಮತ್ತೆ ಮುಖ್ಯವಾಹಿನಿಗೆ ಬರುವ ತಯಾರಿ ಶುರು ಮಾಡಿದರು. ಈ ಬೆಳವಳಿಗೆಗಳ ಕುರಿತು ಸ್ಪಷ್ಟ ಅರಿವಿದ್ದ ಗೌರಿ ಲಂಕೇಶ್ 2014ರಲ್ಲಿ ಸಿದ್ದರಾಮಯ್ಯ ನೇತೃತ್ವದ ಸರಕಾರದ ಅಧಿಕಾರಕ್ಕೆ ಬಂದ ನಂತರ ಶಸ್ತ್ರ ತ್ಯಜಿಸಿದ ನಕ್ಸಲ್ ನಾಯಕರನ್ನು ಮುಖ್ಯವಾಹಿನಿಗೆ ಕರೆತರುವಲ್ಲಿ ಪ್ರಮುಖ ಪಾತ್ರ ವಹಿಸಿದರು.

ಗಂಜೀ ಗಿರಾಕಿ?: 

ಸಾಮಾಜಿಕ ಹೋರಾಟ, ಕೋಮುವಾದದ ವಿರುದ್ಧ ಗಟ್ಟಿ ನಿಲುವುಗಳ ನಡುವೆ ಆರ್ಥಿಕವಾಗಿ ಸಂಕಷ್ಟದಲ್ಲಿದ್ದರು ಗೌರಿ. “ಅವರ ಪತ್ರಿಕೆ ಪ್ರತಿ ವಾರ ಮಾರುಕಟ್ಟೆಗೆ ಬರುವುದೇ ಒಂಧು ಅಚ್ಚರಿ. ಅದಕ್ಕಾಗಿ ಅವರು ಇಂಗ್ಲಿಷ್ ಪತ್ರಿಕೆಗಳಿಗೆ ಲೇಖನಗಳನ್ನು ಬರೆಯುತ್ತಿದ್ದರು. ಅಲ್ಲಿಂದ ಬಂದ ಹಣದಲ್ಲಿ ಲಂಕೇಶ್ ಪತ್ರಿಕೆ ಹೊರತರುತ್ತಿದ್ದರು. ಇತ್ತೀಚೆಗೆ ಲಂಕೇಶ್ ಪುಸ್ತಕಗಳ ಮಾರಾಟವೂ ಕಡಿಮೆಯಾಗಿತ್ತು. ಇಷ್ಟೆಲ್ಲಾ ಇದ್ದರೂ ಅವರು ಎಂದಿಗೂ ಯಾರ ಬಳಿಯೂ ಕೈಚಾಚಲು ಹೋಗಿರಲಿಲ್ಲ,” ಎನ್ನುತ್ತಾರೆ ಗೌರಿ ಒಡನಾಡಿ ಶಿವಸುಂದರ್.

ಸಿಎಂ ಸಿದ್ದರಾಮಯ್ಯ ಅವರ ಕಡು ಸಮರ್ಥಕರಾಗಿದ್ದರು. “ಇವತ್ತಿನ ಸನ್ನಿವೇಶದಲ್ಲಿ ಕೋಮುವಾದವನ್ನು ಸೋಲಿಸಲು ಸಿದ್ದರಾಮಯ್ಯ ತರಹದ ನಾಯಕರಿಗೆ ಬೆಂಬಲ ನೀಡಬೇಕು,” ಎಂಬುದು ಅವರ ನಿಲುವಾಗಿತ್ತು. ಹಾಗಂತ ಅವರು ಸರಕಾರ ಅಥವಾ ಸಿದ್ದರಾಮಯ್ಯ ಅವರ ಬಳಿ ವೈಯಕ್ತಿಕ ಸಹಾಯ ಕೋರಿ ಹೋದವರಲ್ಲ ಎಂದು ಹತ್ತಿರದಿಂದ ಬಲ್ಲವರು ಹೇಳುತ್ತಾರೆ.

ಸಾಧ್ಯತೆಗಳು:

ರಾಜರಾಜೇಶ್ವರಿ ನಗರದ ಐಡಿಯಲ್ ವುಡ್ ಹೋಮ್ ಲೇಔಟ್‌ನಲ್ಲಿ ಗೌರಿ ಅವರ ಮನೆ ಇದೆ. ಅದು ತಂದೆ ಲಂಕೇಶರು ನೀಡಿದ ಮನೆ. ಅಲ್ಲಿ ಒಬ್ಬರೇ ವಾಸವಾಗಿದ್ದರು. ಮನೆಯ ಪಕ್ಕದಲ್ಲಿ ಒಂದು ಖಾಲಿ ಸೈಟ್ ಇದೆ. ಎದುರಿಗೆ ಹೊಸದೊಂದು ಅಪಾರ್ಟ್‌ಮೆಂಟ್ ಆಗಿದೆ. ಒಂದಷ್ಟು ಮರಗಳು ರಸ್ತೆಯನ್ನು ಆವರಿಸಿವೆ. ”ಒಂದು ಕಾಲದಲ್ಲಿ ಇಲ್ಲಿ ಪೂರ್ತಿ ಕಾಡಿತ್ತು,” ಎಂದು ನೆನಪಿಸಿಕೊಳ್ಳುತ್ತಾರೆ ಗೌರಿ ಅವರ ಒಡನಾಡಿ ಮಲ್ಲಿಗೆ.

ಅವರ ಗಾಂಧಿ ಬಜಾರಿನ ಈಸ್ಟ್‌ ಆಂಜುನೇಯ ಟೆಂಪಲ್‌ ರಸ್ತೆಯಲ್ಲಿರುವ ‘ಲಂಕೇಶ್ ಪತ್ರಿಕೆ’ ಕಚೇರಿಯಿಂದ ಇಲ್ಲಿಗೆ ಸುಮಾರು 40 ನಿಮಿಷಗಳ ಹಾದಿ. ಮಂಗಳವಾರ ಪತ್ರಿಕೆ ಕೆಲಸ ಮುಗಿಸಿ ಮನೆಗೆ ಬಂದು ಕಾರು ನಿಲ್ಲಿಸಿದವರು ಗೇಟು ತೆಗೆದು ಒಳಹೋಗಿದ್ದಾರೆ. ಈ ಸಮಯದಲ್ಲಿ ಹಿಂದಿನಿಂದ ಬಂದವರು ಗುಂಡಿನ ದಾಳಿ ನಡೆಸಿದ್ದಾರೆ. ಗುಂಡುಗಳು ಗೌರಿ ದೇಹವನ್ನು ಹೊಕ್ಕಿರುವ ರೀತಿಯನ್ನು ನೋಡಿದರೆ, ಸ್ಪಷ್ಟವಾಗಿ ಕೊಲೆಯ ಉದ್ದೇಶವೇ ಇರುವ ಹಾಗಿದೆ. ಅಷ್ಟು ಮಾತ್ರವಲ್ಲ, ಅದಕ್ಕೊಂದು ಸಿದ್ಧತೆಯೂ ನಡೆದಿದೆ.

ದೇಶಕ್ಕೆ ವಿಚಾರವಾದಿಗಳ ಹತ್ಯೆ ಹೊಸತಲ್ಲವಾದರೂ, ರಾಜಧಾನಿ ಬೆಂಗಳೂರಿನಲ್ಲಿ ನಡೆದ ಮೊದಲ ಹತ್ಯೆ ಇದು. ಪನ್ಸಾರೆ, ದಾಬೋಲ್ಕರ್ ಹಾಗೂ ಕಲ್ಬುರ್ಗಿ ಹತ್ಯೆಗಳಲ್ಲಿ ಹಂತಕರ ನಡೆಗಳು ಬರೀ ಊಹೆಯಲ್ಲಿ ಮಾತ್ರವೇ ಸಿಕ್ಕಿದ್ದವು. ಆದರೆ ಈ ಪ್ರಕರಣದಲ್ಲಿ ಸಿಸಿಟಿವಿ ದೃಶ್ಯಾವಳಿಗಳು ಸಿಕ್ಕಿರುವುದು ತನಿಖೆಗೆ ಹೊಸ ಸಾಧ್ಯತೆಗಳನ್ನು ನೀಡಬಲ್ಲದು ಎಂದು ಪೊಲೀಸ್ ಅಧಿಕಾರಿಗಳು ಹೇಳುತ್ತಾರೆ. “ಹಂತಕರು ಕೊಲೆಗೂ ಮುಂಚೆ ರೆಕ್ಕಿ ಕೆಲಸ ಮಾಡಿದ್ದರೆ ಸಿಸಿಟಿವಿಗಳನ್ನೂ ಗಮನಿಸಿರುತ್ತಾರೆ. ಹೀಗಾಗಿ ಅವರು ಮುನ್ನೆಚ್ಚರಿಕೆ ತೆಗೆದುಕೊಂಡಿರುತ್ತಾರೆ. ಆದರೂ ಒಂದಿಲ್ಲೊಂದು ಸುಳಿವು ಸಿಗಬಹುದು,” ಎನ್ನುತ್ತಾರೆ ಪೊಲೀಸ್ ಅಧಿಕಾರಿಯೊಬ್ಬರು.

ಶೋಕ ಸಂದೇಶ:

ಗೌರಿ ಹತ್ಯೆಯ ಸುದ್ದಿ ಹೊರಬೀಳುತ್ತಿದ್ದಂತೆ ರಾಜ್ಯಾದ್ಯಂತ ಪ್ರತಿಭಟನೆಗಳು ರಾತ್ರಿಯೇ ಆರಂಭವಾಗಿವೆ. ಬುಧವಾರ ದಿಲ್ಲಿ ಸೇರಿದಂತೆ ರಾಜ್ಯದ ಬೆಂಗಳೂರು, ಮೈಸೂರು, ಮಂಡ್ಯ, ಚಿಕ್ಕನಾಯಕನಹಳ್ಳಿ, ಹರಪ್ಪನಹಳ್ಳಿ, ಸಿಂದನೂರು, ರಾಯಚೂರು, ಬಳ್ಳಾರಿ, ಮಾನ್ವಿ, ಮಂಗಳೂರು, ಉಡುಪಿ, ಕಲಬುರ್ಗಿ, ಧಾರವಾಡ, ಹುಬ್ಬಳ್ಳಿ, ಗದಗ ಮತ್ತು ಅಣ್ಣಿಗೇರಿಗಳಲ್ಲಿ ಪ್ರತಿಭಟನೆ ಆರಂಭವಾಗಿದೆ. ಪ್ರಕರಣದ ತನಿಖೆಯಲ್ಲಿ ಗೌರಿ ತಮ್ಮ ಇಂದ್ರಜಿತ್ ಲಂಕೇಶ್ ಸಿಬಿಐಗೆ ವಹಿಸಬೇಕು ಎಂದು ಒತ್ತಾಯಿಸಿದ್ದಾರೆ. ಗೌರಿ ಒಡನಾಡಿನಗಳು ನ್ಯಾಯಾಂಗದ ಮೇಲ್ವಿಚಾರಣೆಯಲ್ಲಿ ವಿಶೇಷ ತನಿಖಾ ತಂಡದಿಂದ ತನಿಖೆಗೆ ಆಗ್ರಹಿಸುತ್ತಿದ್ದಾರೆ.

ಗೌರಿ ಹತ್ಯೆಯನ್ನು ಖಂಡಿಸಿ ದೇಶದ ಮಟ್ಟದಲ್ಲಿ ಖಂಡನೆ ವ್ಯಕ್ತವಾಗಿದೆ. ಅವರು ದತ್ತು ಮಕ್ಕಳು ಎಂದು ಕರೆಯುತ್ತಿದ್ದ ಕನ್ನಯ್ಯ ಕುಮಾರ್, ಜಿಗ್ನೇಶ್ ಮೆವಾನಿ ಸೇರಿದಂತೆ ಹಲವು ರಾಷ್ಟ್ರಮಟ್ಟದ ಪತ್ರಕರ್ತರು, ರಾಜಕಾರಣಿಗಳು ಗೌರಿ ಹತ್ಯೆಗೆ ಖಂಡನೆ ವ್ಯಕ್ತಪಡಿಸಿದ್ದಾರೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘ ಕೂಡ ಅವರ ಆತ್ಮಕ್ಕೆ ಶ್ರದ್ಧಾಂಜಲಿ ಸಲ್ಲಿದೆ.

ಸದ್ಯ, ಗೌರಿ ಅವರ ಮೃತದೇಹದ ಶವಪರೀಕ್ಷೆಯನ್ನು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ನಡೆಸಿ, ರವೀಂದ್ರ ಕಲಾ ಕ್ಷೇತ್ರಕ್ಕೆ ತರಲಾಗಿದೆ. ಪಕ್ಕದ ಸಂಸಾ ಬಯಲು ರಂಗಮಂದಿರದಲ್ಲಿ ಸಾರ್ವಜನಿಕ ಪ್ರದರ್ಶನಕ್ಕೆ ಇಡಲಾಗುತ್ತದೆ.