Home Investigation ಮಣ್ಣಲ್ಲಿ ಮಣ್ಣಾದ ಗೌರಿ ದೇಹ: ‘ಹತ್ಯೆ ಮಾಡಿದವರು ತರಬೇತಿ ಹೊಂದಿದವರೇ ಆಗಿರಬೇಕಿಲ್ಲ’; ಎಫ್‌ಎಸ್ಎಲ್ ಮಾಹಿತಿ

ಮಣ್ಣಲ್ಲಿ ಮಣ್ಣಾದ ಗೌರಿ ದೇಹ: ‘ಹತ್ಯೆ ಮಾಡಿದವರು ತರಬೇತಿ ಹೊಂದಿದವರೇ ಆಗಿರಬೇಕಿಲ್ಲ’; ಎಫ್‌ಎಸ್ಎಲ್ ಮಾಹಿತಿ

SHARE

ಗೌರಿ ಲಂಕೇಶ್

ಹತ್ಯೆ ಪ್ರಕರಣದಲ್ಲಿ ಘಟನಾ ಸ್ಥಳದಲ್ಲಿ ಸಿಕ್ಕಿರುವ ‘ನಾಲ್ಕು ಕಾಟ್ರಿಡ್ಜ್‌’ಗಳು ಪ್ರಮುಖ ಸುಳಿವು ನೀಡುವ ಸಾಧ್ಯತೆ ಇದೆ ಎಂದು ವಿಧಿ ವಿಜ್ಞಾನ ಪ್ರಯೋಗಾಲಯ (ಎಫ್‌ಎಸ್ಎಲ್)ದ ಮೂಲಗಳು ‘ಸಮಾಚಾರ’ಕ್ಕೆ ತಿಳಿಸಿವೆ.

ಮಂಗಳವಾರ ಬೆಂಗಳೂರಿನ ರಾಜರಾಜೇಶ್ವರಿನಗರದ ಮನೆಯ ಮುಂದೆಯೇ ಗೌರಿ ಲಂಕೇಶರನ್ನು ದುಷ್ಕರ್ಮಿಗಳು ಗುಂಡಿಟ್ಟು ಹತ್ಯೆ ಮಾಡಿದ್ದರು. 24 ಗಂಟೆಗಳ ಅವಧಿಯಲ್ಲಿ ಇದು ರಾಷ್ಟ್ರ ಮಟ್ಟದಲ್ಲಿ ಸಂಚಲನ ಮೂಡಿಸಿದೆ. ಗೌರಿ ಹತ್ಯೆ ಖಂಡಿಸಿ ವ್ಯಕ್ತವಾಗುತ್ತಿರುವ ಅಭಿಪ್ರಾಯಗಳು ರಾಜಕೀಯ ಚರ್ಚೆಗೆ ನಾಂದಿ ಹಾಡಿವೆ. ಆದರೆ, ಅದನ್ನೂ ಮೀರಿ ಈ ಪ್ರಕರಣದಲ್ಲಿ ತನಿಖೆಯೇ ನಿರ್ಣಾಯಕವಾಗಲಿದೆ. ಇದೊಂದು ಹೀನ ಅಪರಾಧ ಪ್ರಕರಣವಾಗಿರುವುದರಿಂದ, “ಕೊಲೆಗಾರರನ್ನು ಬಂಧಿಸಬೇಕಿರುವುದು ತುರ್ತು ಅಗತ್ಯ,” ಎಂದು ಅನೇಕರು ಆಗ್ರಹಿಸುತ್ತಿದ್ದಾರೆ.

ಘಟನಾ ಸ್ಥಳದಲ್ಲಿ ಸಿಸಿಟಿವಿ ದೃಶ್ಯಾವಳಿಗಳ ತುಣಕೊಂದು ‘ಸಮಾಚಾರ’ಕ್ಕೆ ಲಭ್ಯವಾಗಿದೆ. ಹತ್ಯೆಗೂ ಮುನ್ನ ಗೌರಿ ಲಂಕೇಶ್ ಕಾರಿನಲ್ಲಿ ರಸ್ತೆಯೊಂದನ್ನು ಹಾದು ಮನೆಯ ಕಡೆಗೆ ಹೋದ ದೃಶ್ಯಾವಳಿಗಳು ಇವು ಎಂದು ನಂಬಲಾಗಿದೆ. ವಿಡಿಯೋದ 1. 28ನೇ ನಿಮಿಷದಲ್ಲಿ ಬಿಳಿ ಬಣ್ಣದ ಕಾರೊಂದು ಹಾದು ಹೋಗಿದೆ. ಅದು ಗೌರಿ ಅವರ ಕಾರು ಎಂದು ಹೇಳಲಾಗುತ್ತಿದೆ. ಅದಾದ ಬಳಿಕ  1. 48ನೇ ನಿಮಿಷಕ್ಕೆ ಬಿಳಿ ಬಣ್ಣದ ಹೋಂಡಾದಲ್ಲಿ ಯುವಕರಿಬ್ಬರು ಹಿಂಬಾಲಿಸುತ್ತಾರೆ. ಸದ್ಯಕ್ಕೆ ಈ ಕುರಿತು ಹೆಚ್ಚಿನ ಕ್ಲಾರಿಟಿ ಇಲ್ಲ.

https://www.youtube.com/watch?v=Lwt380_zKPU

ಇನ್ನೂ ತಮಾಷೆಯ ಸಂಗತಿ ಏನೆಂದರೆ, ಈ ವಿಡಿಯೋದಲ್ಲಿರುವ ಹಿನ್ನೆಲೆಯಲ್ಲಿ ಆಡುವ ಮಾತುಗಳನ್ನು ಕೇಳಿಸಿಕೊಳ್ಳಬೇಕು. ಬೆಂಗಳೂರು ಪೊಲೀಸರು ಪ್ರಕರಣದ ಕುರಿತು ಎಷ್ಟರ ಮಟ್ಟಿಗೆ ಗಂಭೀರವಾಗಿದ್ದಾರೆ ಎಂಬುದರ ಚಿತ್ರಣ ಲಭ್ಯವಾಗುತ್ತದೆ. ಇದರ ಜತೆಗೆ ಗೌರಿ ಮನೆಯಲ್ಲಿ ಸಿಕ್ಕಿರುವ ಸಿಟಿಟಿವಿ ದೃಶ್ಯಾವಳಿಗಳ ತನಿಖೆ ಮುಂದುವರಿದಿದೆ ಎಂಬ ಮಾಹಿತಿಯೂ ಇದೆ.

ರಾಜ್ಯ ಸರಕಾರ ಗೌರಿ ಹತ್ಯೆ ಪ್ರಕರಣದ ತನಿಖೆಗೆ ಐಜಿಪಿ ಮಟ್ಟದ ಅಧಿಕಾರಿಯ ಮೇಲ್ವಿಚಾರಣೆಯಲ್ಲಿ ‘ವಿಶೇ‍ಷ ತನಿಖಾ ತಂಡ’ವನ್ನು ರಚಿಸಿದೆ. ಇದಕ್ಕೆ ಮುಖ್ಯಸ್ಥರು ಯಾರಾಗಲಿದ್ದಾರೆ ಎಂಬುದು ಕೆಲವೇ ಹೊತ್ತಿನಲ್ಲಿ ಹೊರ ಬೀಳಲಿದೆ.

ಸುಳಿವಿನ ಸಾಧ್ಯತೆ: 

ಸದ್ಯ, ಎಫ್‌ಎಸ್‌ಎಲ್ ಮೂಲಗಳಿಂದ ಲಭ್ಯವಾಗಿರುವ ಮಾಹಿತಿ ಪ್ರಕಾರ, “ಗೌರಿ ಹತ್ಯೆ ನಡೆದ ಘಟನಾ ಸ್ಥಳಗಳಲ್ಲಿ ನಾಲ್ಕು ಕಾಡತೂಸುಗಳು ಸಿಕ್ಕಿವೆ. ಇವುಗಳನ್ನು ಬಳಸುವುದು 7.65 ಎಂಎಂ ಪಿಸ್ತೂಲುಗಳಲ್ಲಿ ಮಾತ್ರ. ಇದೊಂದು ರೀತಿಯಲ್ಲಿ ನಾಡ ಬಂದೂಕು. ಆದರೆ, ಸಿಕ್ಕಿರುವ ಕಾಟ್ರಿಡ್ಜ್‌ಗಳನ್ನು ಇನ್ನಷ್ಟು ಅಧ್ಯಯನಕ್ಕೆ ಒಳಪಡಿಸಬೇಕಿದೆ. ಆ ನಂತರವೇ, ಘಟನೆಯಲ್ಲಿ ಎಷ್ಟು ಪಿಸ್ತೂಲುಗಳು ಬಳಕೆಯಾಗಿವೆ ಎಂಬುದು ತಿಳಿದು ಬರಲಿದೆ. ಮೇಲ್ನೋಟಕ್ಕೆ ಬಳಕೆಯಾಗಿರುವ ಆಯುಧವನ್ನು ನೋಡಿದರೆ, “ಕೊಲೆಗಾರರು ತರಭೇತಿ ಪಡೆದವರೇ ಆಗಬೇಕು ಅಂತೇನಿಲ್ಲ,” ಎನ್ನುತ್ತಾರೆ ವಿಧಿ ವಿಜ್ಞಾನ ಪ್ರಯೋಗಾಲಯದ ತಜ್ಞರೊಬ್ಬರು.

ಗೌರಿ ಮೇಲೆ ನಡೆದ ದಾಳಿ ವೇಳೆ ದೇಹಕ್ಕೆ ಹೊಕ್ಕ ಅಷ್ಟೂ ಗುಂಡುಗಳು ಹೊರಬಂದಿವೆ. ಹೀಗಾಗಿ ಕೊಲೆಗಾರರು ಎರಡು ಅಡಿಗಿಂತ ಹೆಚ್ಚು ದೂರದಿಂದ ಫೈರ್ ಮಾಡಿದ್ದಾರೆ ಎಂಬ ಅನುಮಾನಗಳಿವೆ. ಇದರ ಜತೆಗೆ, ಗೌರಿ ದೇಹ ಹಾಗೂ ಧರಿಸಿರುವ ಬಟ್ಟೆಗಳ ಮೇಲೂ ಪರಿಶೀಲನೆ ನಡೆಸಬೇಕಿದೆ. ಸದ್ಯ ಲಭ್ಯವಾಗಿರುವ ಮಾಹಿತಿ ಪ್ರಕಾರ, ಮುಂದಿನ ಒಂದೆರಡು ದಿನಗಳಲ್ಲಿ ಎಫ್‌ಎಸ್ಎಲ್‌ ವರದಿ ಸಲ್ಲಿಕೆಯಾಗಲಿದೆ.

ಕಂಬನಿ ಮಿಡಿದ ಸಾಗರ:

ಬುಧವಾರ ಮುಂಜಾನೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಶವ ಪರೀಕ್ಷೆ ಮುಗಿಸ ನಂತರ ಗೌರಿ ಲಂಕೇಶ್ ದೇಹವನ್ನು ಟೌನ್ ಹಾಲ್ ಪಕ್ಕದ ರವೀಂದ್ರ ಕಲಾಕ್ಷೇತ್ರದ ಆವರಣಕ್ಕೆ ತರಲಾಯಿತು. ಅಲ್ಲಿ ಸಾವಿರಾರು ಜನ, ಮುಖ್ಯಮಂತ್ರಿ ಸಿದ್ದರಾಮಯ್ಯ, ಸಂಪುಟ ಸಚಿವರುಗಳು, ಚಿತ್ರರಂಗದ ಗಣ್ಯರು, ನಾನಾ ಸಂಘಟನೆಗಳ ಕಾರ್ಯಕರ್ತರು ಗೌರಿ ಮೃತ ದೇಹಕ್ಕೆ ಅಂತಿಮ ನಮನ ಸಲ್ಲಿಸಿದರು.

ಇದಕ್ಕೂ ಮುನ್ನ ಟೌನ್ ಹಾಲ್ ಮುಂಭಾಗ ಸೇರಿದ್ದ ಸಾವಿರಾರು ಜನ ‘ನಾನೂ ಗೌರಿ’ ಎಂಬ ಘೋಷಣೆ ಮೊಳಗಿಸಿದರು. ಕರ್ನಾಟಕದ ನಾನಾ ಕಡೆ, ಚೆನ್ನೈ, ದಿಲ್ಲಿಯಂತಹ ಮಹಾನಗರಗಳಲ್ಲಿ ಗೌರಿ ಹತ್ಯೆ ಖಂಡಿಸಿ ಪ್ರತಿಭಟನೆಗಳು, ಸಂತಾಪ ಸಭೆಗಳು ನಡೆದವು. ದಿಲ್ಲಿಯಲ್ಲಿ ನಡೆದ ಸಭೆಯಲ್ಲಿ ಆಝಾದಿ ಹೋರಾಟಗಾರ ಕನ್ನಯ್ಯ ಕುಮಾರ್ ಮತ್ತಿತರು ಪಾಲ್ಗೊಂಡಿದ್ದರು. ಬಿಜೆಪಿಯನ್ನು ಹೊರತುಪಡಿಸಿ ಬಹುತೇಕ ರಾಜಕೀಯ ಪಕ್ಷಗಳ ಮುಖಂಡರು, ನಾನಾ ರಾಜ್ಯಗಳ ಮುಖ್ಯಮಂತ್ರಿಗಳು ಗೌರಿ ಸಾವಿಗೆ ಸಂತಾಪ ಸೂಚಿಸಿದರು.

ಸಂಜೆ ಮಳೆಯ ನಡುವೆಯೇ ಅಂತಿಮ ದರ್ಶನ ಮುಗಿಸಿದ ನಂತರ ಶವವನ್ನು ಚಾಮರಾಜಪೇಟೆಯ ರುಧ್ರ ಭೂಮಿಗೆ ತರಲಾಯಿತು. ಅಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಸಂಪುಟ ಸದಸ್ಯರ ಸಮ್ಮುಖದಲ್ಲಿ ಸರಕಾರಿ ಸಕಲ ಗೌರವಗಳನ್ನು ನೀಡಲಾಯಿತು. ನಂತರ ಗೌರಿ ಲಂಕೇಶ್ ದೇಹವನ್ನು ಮಣ್ಣಿನಲ್ಲಿ ಹುಗಿಯುವ ಮೂಲಕ ಅಂತಿಮ ವಿಧಿ ವಿಧಾನಗಳನ್ನು ನೆರವೇರಿಸಲಾಯಿತು.

ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಒಬ್ಬ ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ‘ಟೈಮ್ಸ್ ನೌ’ ವರದಿ ಮಾಡಿದೆ. ಜತೆಗೆ, ಶಂಕಿತನೊಬ್ಬನ ಚಿತ್ರವನ್ನು ಭಿತ್ತರಿಸಿದೆ. ಈ ಕುರಿತು ಇನ್ನಷ್ಟು ಹೆಚ್ಚಿನ ಮಾಹಿತಿ ಸಿಗಬೇಕಿದೆ.

ಚಿತ್ರ ಕೃಪೆ: 

ನಾವು ಮೇಲೆ ಬಳಸಿರುವ ಚಿತ್ರ ಗೌರಿ ಅವರ ಅಪರೂಪದ ಚಿತ್ರ. ಇದನ್ನು ಅವರ ಪತಿ, ಹಿರಿಯ ಪತ್ರಕರ್ತ ಚಿದಾನಂದ ರಾಜ್‌ಘಟ್ಟ ತನ್ನ ಫೇಸ್‌ಬುಕ್ ಖಾತೆಯ ಮೂಲಕ ಹಂಚಿಕೊಂಡಿದ್ದಾರೆ. ಚಿತ್ರ ವಿವರವನ್ನು, ‘1983ರಲ್ಲಿ ಗೌರಿ. ನಮ್ಮ ಮದುವೆಗೆ ಸ್ವಲ್ಪ ಮುಂಚೆ. ಆಗ ಅವಳು 21. ಇದನ್ನು ನಾನು ನಮ್ಮ ಬನಶಂಕರಿಯ ಮನೆಯ ಮಹಡಿ ಮೇಲೆ ಸೆರೆ ಹಿಡಿದಿದ್ದೆ,’ ಎಂದು ತಿಳಿಸಿದ್ದಾರೆ.

ಚಿದಾನಂದ್ ರಾಜ್‌ಘಟ್ಟ ಫೇಸ್‌ಬುಕ್ ಸ್ಕ್ರೀನ್ ಗ್ರಾಬ್.