Home news-for-4-1-display ‘ಯೂ- ಟ್ಯೂಬ್ ಚಾನಲ್’ಗಳಲ್ಲಿ ನಡೆಯುತ್ತಿರುವ ಈ ಹೊಸ ದಂಧೆಯ ಬಗ್ಗೆ ಓದಿದರೆ ನೀವು ‘ಶಾಕ್’ ಆಗ್ತೀರಾ;...

‘ಯೂ- ಟ್ಯೂಬ್ ಚಾನಲ್’ಗಳಲ್ಲಿ ನಡೆಯುತ್ತಿರುವ ಈ ಹೊಸ ದಂಧೆಯ ಬಗ್ಗೆ ಓದಿದರೆ ನೀವು ‘ಶಾಕ್’ ಆಗ್ತೀರಾ; ಯಾಕೆ ಗೊತ್ತಾ?

SHARE

ಹೀಗೆ, ಅಗತ್ಯವೇ ಇಲ್ಲದ, ದಿಕ್ಕು ತಪ್ಪಿಸುವಂತಹ, ಆ ಕ್ಷಣಕ್ಕೆ ಓದುಗರ ಅಥವಾ ನೋಡುಗರ ಭಾವನೆ ಕೆರಳಿಸುವಂತಹ ‘ತಲೆ ಬರಹ’ದಿಂದಾಗಿ ಅಂತರ್ಜಾಲದಲ್ಲಿ ನಿಮ್ಮ ಅಭಿರುಚಿ ಹಾಳಾಗುತ್ತಿದೆ. ಉದಾಹರಣೆಗೆ; ನಾವಿಲ್ಲಿ ನೀಡಿರುವ ತಲೆ ಬರಹವನ್ನು ನೀವು ಕ್ಲಿಕ್ ಮಾಡಿ, ಈ ಸ್ಟೋರಿಯನ್ನು ಓದಲು ಆರಂಭಿಸಿರೋದು!

ಆದರೆ, ನಮ್ಮ ಉದ್ದೇಶ ದಿಕ್ಕಿ ತಪ್ಪಿಸುವ ತಲೆ ಬರಹ ನೀಡಿ, ನಿಮ್ಮ ಕ್ಲಿಕ್ ಸಂಪಾದನೆ ಮಾಡುವುದಲ್ಲ. ಬದಲಿಗೆ, ಅಂತರ್ಜಾಲದ ಸೇವೆಗಳನ್ನು ಇವತ್ತಿಗೆ ಅಪಾಯಕಾರಿ ಮನಸ್ಥಿತಿಗಳು ಹೇಗೆ ಆವರಿಸಿಕೊಳ್ಳುತ್ತಿವೆ ಎಂಬ ಕುರಿತು ನಿಮ್ಮನ್ನು ಎಚ್ಚರಿಸುವುದು. ನೀವೂ ಕೂಡ ಅದರ ಒಂದು ಭಾಗ ಹೇಗಾಗಿದ್ದೀರಾ ಎಂಬುದನ್ನು ನಿರೂಪಿಸುವುದು.

‘ಫೇಕ್ ನ್ಯೂಸ್’ ಹಾಗೂ ಅವುಗಳನ್ನು ಉತ್ಪಾದನೆ ಮಾಡುತ್ತಿರುವ ಪೋರ್ಟಲ್’ಗಳ ಕುರತು ಈ ಹಿಂದೆ ‘ಸಮಾಚಾರ’ ವರದಿಯೊಂದನ್ನು ಪ್ರಕಟಿಸಿತ್ತು.

RECAP:ಗುರ್‌ಮೆಹರ್ ವಿರುದ್ಧ ಅಪಪ್ರಚಾರಕ್ಕಿಳಿದ ‘ನಮೋ ಬ್ರಾಂಡ್’ ನ್ಯೂಸ್‌ ಮೇಕರ್ಸ್; ಯಾರಿವರು?

ಈಗ ‘ಫೇಕ್ ನ್ಯೂಸ್’ಗಳಷ್ಟೆ ಅಪಾಯಕಾರಿಯಾದ, ಯೂ-ಟ್ಯೂಬ್ ಚಾನಲ್ಗಳ ಹೆಸರಿನಲ್ಲಿ, ಕನ್ನಡದಲ್ಲಿ ನಡೆಯುತ್ತಿರುವ ಹೊಸ ಮಾದರಿಯ ಅನೈತಿಕ ಬಿಜೆನೆಸ್ ಒಂದನ್ನು ಇಲ್ಲಿ ಅನಾವರಣ ಮಾಡುತ್ತಿದ್ದೇವೆ.

ಇದ ಯೂ-ಟ್ಯೂಬ್:

ಗೂಗಲ್ ಸಂಸ್ಥೆಯ ವಿಡಿಯೋ ಸೇವೆಗಳನ್ನು ನೀಡುವ ಅಂತರ್ಜಾಲದ ಜನಪ್ರಿಯ ತಾಣ ಯೂ- ಟ್ಯೂಬ್. ಅದೇ ಹೇಳಿಕೊಳ್ಳುವ ಪ್ರಕಾರ, ಪ್ರತಿ ದಿನ ಜಗತ್ತಿನಾದ್ಯಂತ ಇದನ್ನು ಬಳಸುತ್ತಿರುವವರ ಸಂಖ್ಯೆ 100 ಕೋಟಿ. 88 ದೇಶಗಳಲ್ಲಿ 76 ಭಾಷೆಗಳಲ್ಲಿ ಯೂ-ಟ್ಯೂಬ್ ತನ್ನ ಸೇವೆಗಳನ್ನು ನೀಡುತ್ತಿದೆ. ಪ್ರತಿ ದಿನ ಯೂ-ಟ್ಯೂಬ್ ಒಂದರಲ್ಲಿಯೇ ಸುಮಾರು 100 ಕೋಟಿ ಗಂಟೆಗಳ ವಿಡಿಯೋವನ್ನು ಜನ ವೀಕ್ಷಿಸುತ್ತಿದ್ದಾರೆ. ಒಂದು ಅಂದಾಜಿನ ಪ್ರಕಾರ ಇವತ್ತು ಜಗತ್ತಿನ ಸುಮಾರು 300 ಕೋಟಿ ಜನ ಪ್ರತಿದಿನ ಅಂತರ್ಜಾಲವನ್ನು ಬಳಕೆ ಮಾಡುತ್ತಿದ್ದಾರೆ. ಇದರಲ್ಲಿ ಮೂರನೇ ಒಂದು ಭಾಗದಷ್ಟು ಜನ ಯೂ- ಟ್ಯೂಬ್ ಆಶ್ರಯಿಸಿದ್ದಾರೆ.

2007ರ ಸುಮಾರಿಗೆ ಯೂ-ಟ್ಯೂಬ್ ತನ್ನ ಮಾರುಕಟ್ಟೆ ಕಾರ್ಯತಂತ್ರದಲ್ಲಿ ದೊಡ್ಡದೊಂದು ಬದಲಾವಣೆಯನ್ನು ಮಾಡಿಕೊಂಡಿತು. ಇದರೊಳಗೆ ಚಾನಲ್ ರೂಪದಲ್ಲಿ ಸ್ವಂತ ವಿಡಿಯೋ ಅಪ್ಲೋಡ್ ಮಾಡುವವರಿಗೆ ಹಣ ನೀಡಲು ಸಂಸ್ಥೆ ಆರಂಭಿಸಿತು. ಅಲ್ಲಿಂದಾಚೆಗೆ, ಯೂ-ಟ್ಯೂಬ್ ಕೂಡ ಹಣ ಗಳಿಸುವ ಸಶಕ್ತ ವೇದಿಕೆಯಾಗಿ ಬದಲಾಯಿತು. 2016ರ ಜುಲೈ ಅಂತ್ಯಕ್ಕೆ ಯೂ-ಟ್ಯೂಬ್ ಹೀಗೆ ಸ್ವಂತ ವಿಡಿಯೋ ಕಂಟೆಂಟ್ ನೀಡಿವರಿಗೆ ಸಂದಾಯ ಮಾಡಿದ ಮೊತ್ತವೇ ಸುಮಾರು 200 ಕೋಟಿ ಡಾಲರ್ ಎಂದ ಅದರ ಪ್ರಕಟಣೆಯೊಂದು ಹೇಳುತ್ತದೆ. ಇವತ್ತಿಗೆ ಅದರ ಪ್ರಮಾಣ ಇನ್ನಷ್ಟು ಹೆಚ್ಚಿರಬಹುದು.

ಅಡ್ಡ ಕಸುಬಿಗಳು:

ಯಾವಾಗ ಯೂ-ಟ್ಯೂಬ್ ಕಡೆಯಿಂದ ವಿಡಿಯೋ ತಯಾರಿಕರಿಗೆ ಹಣ ನೀಡುವ ಪರಿಪಾಠ ಆರಂಭವಾಯಿತೋ, ಜಗತ್ತಿನಾದ್ಯಂತ ‘ನಿಧಿ ಶೋಧಕ’ರ ಸಂಖ್ಯೆಯೂ ಹೆಚ್ಚಿತು. ಇದಕ್ಕೆ ಕನ್ನಡದವರೂ ಹೊರತಾಗಲಿಲ್ಲ. ಇವತ್ತು ಯೂ- ಟ್ಯೂಬ್ ನೆಚ್ಚಿಕೊಂಡು ಮೊದಲ ಪೂರ್ಣ ಪ್ರಮಾಣದ, ವೃತ್ತಿಪರವಾದ ಕನ್ನಡದ ‘ವೆಬ್ ಸಿರೀಸ್ ಹೊರಬಂದಿದೆ.

ಸಕತ್ ಸ್ಟುಡಿಯೋ ಚಾನಲ್

, ‘ಲೂಸ್ ಕನೆಕ್ಷನ್’ ಹೆಸರಿನ ಮೊದಲ ಸರಣಿ ಈಗಾಗಲೇ ಜನಪ್ರಿಯತೆ ಗಳಿಸಿದೆ. ಈ ಹಿಂದೆ, ಹಿಂದಿಯಲ್ಲಿ ‘ಪರ್ಮನೆಂಟ್ ರೂಮ್’ಮೇಟ್ಸ್’, ‘ಟಿವಿಎಸ್ ಟ್ಲಿಪ್ಲಿಂಗ್’ ಹೆಸರಿನ ವೆಬ್ ಸೀರಿಸ್ಗಳು ಬಂದಿದ್ದವು. ಇವು, ವೃತ್ತಿಪರವಾಗಿ, ಹೊಸ ಮಾಧ್ಯಮಗಳನ್ನು ಬಳಸುವವರ ಅಭಿರುಚಿಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ನಡೆದ ಪ್ರಯೋಗಗಳು. ಇವುಗಳ ಸಾಧ್ಯತೆಳನ್ನು ನೋಡುವ ಮುಂಚೆ, ಇವುಗಳ ನೆರಳಿನಲ್ಲಿಯೇ, ಅತ್ಯಂತ ಅಸಹ್ಯಕರವಾದ, ಅನೈತಿಕವಾದ, ವೃತ್ತಿಪರತೆಯಿಂದ ಹೊರತಾದ ಚಟುವಟಿಕೆಗಳು ಕನ್ನಡದ ಯೂ- ಟ್ಯೂಬ್ ಚಾನಲ್ಗಳಲ್ಲಿ ಆರಂಭವಾಗಿದೆ.

ಮೇಲೆ, ಚಿತ್ರದಲ್ಲಿ ಸ್ಪಷ್ಟವಾಗಿ ಕಾಣಿಸುತ್ತಿರುವಂತೆ,  ಚಂದನ ವನ ಹೆಸರಿನ ಯೂ- ಟ್ಯೂಬ್ ಚಾನಲ್ ತನ್ನ ಪ್ರತಿ ವಿಡಿಯೋವನ್ನು ಜನರಿಗೆ ತಲುಪಿಸಲು ‘ಪ್ರಶ್ನಾರ್ತಕ’ ತಲೆಬರಹವನ್ನೇ ಆಶ್ರಯಿಸಿದೆ. ಇಂತಹದೊಂದು ಟ್ರೆಂಡ್ ಇದೊಂದು ಚಾನಲ್ ಮಾತ್ರವಲ್ಲ, ಕನ್ನಡ ಬಹುತೇಕ ಯೂ- ಟ್ಯೂಬ್ ಚಾನಲ್ಗಳಲ್ಲಿ ಕಾಣಸಿಗುತ್ತದೆ. ‘ಆ ನಟಿಯ ಮೂರನೇ ಗಂಡ ಯಾರು ಗೊತ್ತಾ?’, ‘ಈ ಡಾನ್ಸ್ ನೋಡಿದರೆ ಶಾಕ್ ಆಗ್ತೀರಾ!’ ‘ಅದೇನು ಗೊತ್ತಾ?’, ‘ಇವರ್ಯಾರು ಗೊತ್ತಾ?’ ಎಂಬ ತಲೆಬರಹಗಳೇ ಇವುಗಳ ಬಂಡವಾಳ. ಒಮ್ಮೆ ನೀವು ವಿಡಿಯೋ ಕ್ಲಿಕ್ ಮಾಡಿ ಒಳಹೋದರೆ, ಅಲ್ಲಿ ಒಂದಷ್ಟು ಚಿತ್ರಗಳು ಹಾಗೂ ಕಾಪಿರೈಟ್ ಇಲ್ಲದ ಮ್ಯೂಸಿಕ್ ಬಟ್ಟರೆ ಬೇರೇನೂ ಸಿಗವುದೂ ಇಲ್ಲ.

ಇದು ನೋಡುಗರನ್ನು ದಿಕ್ಕು ತಪ್ಪಿಸುವ ಆರಂಭದ ನಡೆಗಳು ಅಷ್ಟೆ. ಆದರೆ, ಇವುಗಳಿಗಿಂತ ಅಪಾಯಕಾರಿಯಾದ, ಅಶ್ಲೀಲತೆಯನ್ನು ಮರೆಯಲ್ಲಿಟ್ಟುಕೊಂಡ, ಜನರ ಲೈಂಗಿಕ ಆಸಕ್ತಿಯನ್ನೇ ಬಂಡವಾಳ ಮಾಡಿಕೊಂಡ ಇನ್ನೊಂದಿಷ್ಟು ಯೂ- ಟ್ಯೂಬ್ ಚಾನಲ್ಗಳು ನಮಗೆ ಇಲ್ಲಿ ಕಾಣಸಿಗುತ್ತವೆ. 

ಮೇಲಿನ ಚಿತ್ರ, ‘Lifestyle Kannada Tips’ ಹೆಸರಿನ ಯೂ-ಟ್ಯೂಬ್ ಚಾನಲ್ ಒಂದರ ಸ್ಕ್ರೀನ್ ಶಾಟ್. ಇದರ ಕಾರ್ಯತಂತ್ರ ಕೊಂಚ ಭಿನ್ನವಾಗಿದೆ. ಯೂ-ಟ್ಯೂಬ್ ನಿಯಮಗಳ ಪ್ರಕಾರ, ಅಶ್ಲೀಲತೆಯನ್ನು ಮಾರಾಟ ಮಾಡುವ ಹಾಗಿಲ್ಲ. ಆ ಕಾರಣಕ್ಕಾಗಿಯೇ ಸಾಕಷ್ಟು ಹಾಲಿವುಡ್ ಸಿನೆಮಾಗಳಿಗೆ ಇಲ್ಲಿ ನಿಷೇಧ ಹೇರಲಾಗಿದೆ. ಹೀಗಿದ್ದೂ, ಇಂಗ್ಲಿಷ್ ಭಾಷೆಯಲ್ಲಿ ಲೈಫ್ ಸ್ಟೈಲ್ ಟಿಪ್ಸ್ ಎಂದು ನಾಮಕರಣ ಮಾಡಿರುವ ಈ ಚಾನಲ್, ಕನ್ನಡದಲ್ಲಿ ನೀಡಿದ ತಲೆ ಬರಹಗಳನ್ನು ಗಮನಿಸಿ. ಉದ್ರೇಕಕಾರಿ ಚಿತ್ರಗಳು ಹಾಗೂ ಬರಹಗಳ ಮೂಲಕ ಹಿಟ್ಸ್ ಪಡೆಯು ತಂತ್ರಗಾರಿಕೆ ಎದ್ದು ಕಾಣಿುತ್ತದೆ. ಇನ್ನು, ಇಂತಹ ವಿಡಿಯೋಗಳನ್ನು ಕ್ಲಿಕ್ ಮಾಡಿ ಒಳಹೋದರೆ, ಅಲ್ಲಿ ‘ರತಿ ವಿಜ್ಞಾನ’ದ ಕತೆಗಳನ್ನು ಕಾಪಿರೈಟ್ ಇಲ್ಲದ ಮ್ಯೂಸಿಕ್ ಹಿನ್ನೆಲೆಯಲ್ಲಿ ನೋಡುಗರಿಗೆ ಓದಿಸಲಾಗುತ್ತದೆ!

ಇದು, ‘kannada health and lifestyle tips’ ಹೆಸರಿನಲ್ಲಿ ಮತ್ತದೇ ಉದ್ರೇಕಕಾರಿ ಕಂಟೆಂಟ್ ಮಾರುವ ಕಾರ್ಯಚರಣೆಯ ಇನ್ನೊಂದು ಆಯಾಮ. ಕನ್ನಡ ಟಿಪ್ಸ್ ಹೆಸರಿನ ಈ ಯೂ- ಟ್ಯೂಬ್ ಚಾನಲ್ ‘ಉತ್ತಮ ಆರೋಗ್ಯಕ್ಕಾಗಿ’ ಎಂಬ ಟ್ಯಾಗ್ ಲೈನ್ ಬೇರೆ ಹಾಕಿಕೊಂಡಿದೆ. ಇದಕ್ಕೆ ಸುಮಾರು 90 ಸಾವಿರ ಜನ ಗ್ರಾಹಕರಾಗಿದ್ದಾರೆ. ಇದು ನೀಡುವ ‘ಆರೋಗ್ಯ ಮಾಹಿತಿ’ ಹೇಗಿದೆ ಎಂಬುದನ್ನು ಮೇಲಿನ ಸ್ಕ್ರೀನ್ ಶಾಟ್ ಸ್ಪಷ್ಟಪಡಿಸುತ್ತಿದೆ.

ಇದೇ ಮಾದರಿಯಲ್ಲಿ, ಅಂಗಡಿ ಹೊರಗೆ ಒಂದು ‘ಬೋರ್ಡ್’, ಒಳಗೆ ಬೇರೆಯದೇ ಪದಾರ್ಥ ಮಾರುವ ಇನ್ನೊಂದಿಷ್ಟು ಯೂ- ಟ್ಯೂಬ್ ಚಾನಲ್ಗಳ ಸ್ಕ್ರೀನ್ ಶಾಟ್ ಹೀಗಿವೆ ನೋಡಿ:

‘ನಿಧಿ ಶೋಧನೆ’ ಕೆಲಸ:

ರಾಜ್ಯದಲ್ಲಿ ನಡೆದ ಬಹುದೊಡ್ಡ ಗಣಿ ಹಗರಣದ ಸಮಯದಲ್ಲಿ ಬಳ್ಳಾರಿಯ ಸಣ್ಣ ಪುಟ್ಟ ಹಳ್ಳಿಗಳಲ್ಲಿ ಸಾಮಾನ್ಯ ಜನ ಕೂಡ ತಮ್ಮ ಮನೆ ಮುಂದಿನ ಮಣ್ಣು ಮಾರುವ ಮಟ್ಟಕ್ಕೆ ಇಳಿದ ಉದಾಹರಣೆ ನಮ್ಮ ಮುಂದಿದೆ. ಇದೊಂತರ, ‘ಹುಚ್ಚು… ಮದುವೆಯಲ್ಲಿ ಉಂಡೋರೆ ಜಾಣ’ರ ಕತೆ. ಯೂ- ಟ್ಯೂಬ್ ಚಾನಲ್ಗಳ ಮೂಲಕ ಹಣ ಮಾಡಬಹುದು ಎಂಬುದು ಗೊತ್ತಾಗುತ್ತಿದ್ದಂತೆ ಅಖಾಡಕ್ಕೆ ಇಳಿದವರ ಸ್ಯಾಂಪಲ್ಗಳಿವು.

ವಿಡಿಯೋ ಯಾವುದಾದರೆ ಏನು? ಯೂ- ಟ್ಯೂಬ್ ಅದು ಗಳಿಸುವ ‘ಹಿಟ್ಸ್’ಗಳ ಆಧಾರದ ಮೇಲೆ ಹಣ ನೀಡುತ್ತದೆ. ಅದಕ್ಕಾಗಿ ಜನ ಎಲ್ಲಾ ಕಾಲಕ್ಕೂ ಮುಗಿಬಿದ್ದು ನೋಡವ ವಿಚಾರಗಳನ್ನು ಹಿಡಿದುಕೊಂಡು ಮಾರಾಟಕ್ಕೆ ಇಳಿಯುತ್ತಿರುವವರು ದೊಡ್ಡ ಪಡೆಯೇ ಈಗ ಯೂ-ಟ್ಯೂಬ್ ಅಖಾಡಕ್ಕೆ ಲಗ್ಗೆ ಇಡುತ್ತಿದೆ. ಒಂದ ಕಾಲದಲ್ಲಿ ‘ಪೋಲಿಸ್ ನ್ಯೂಸ್’ ತರಹದ ವಾರಪತ್ರಿಕೆಗಳು ಕನ್ನಡದಲ್ಲಿ ಇಂತಹ ವಿಚಾರಗಳನ್ನು ಮಾರಾಟ ಮಾಡುತ್ತಿದ್ದವು. ಈ ಕಾಲಘಟ್ಟದ ಬೆಳವಣಿಗೆಯ ಹಿನ್ನೆಲೆಯಲ್ಲಿ ಯೂ- ಟ್ಯೂಬ್ ವೇದಿಕೆಯನ್ನು ಅಂತಹದ್ದೇ ಮನಸ್ಥಿತಿಗಳು ಬಳಸಿಕೊಳ್ಳುತ್ತಿವೆ. ಅದರಲ್ಲೂ, ಜಿಯೋ ಸೇವೆ ಬಂದ ಮೇಲೆ ವಿಡಿಯೋ ನೋಡುವವರ ಸಂಖ್ಯೆಯಲ್ಲಿ ದೊಡ್ಡ ಮಟ್ಟದ ಏರಿಕೆಯಾಗಿದೆ. ಅದು ಕೂಡ ಇಂತವರಿಗೆ ವರದಾನವಾಗಿ ಮಾರ್ಪಾಡಾಗಿದೆ. ಅಪಾಯಕಾರಿ ಬೆಳವಣಿಗೆ ಏನೆಂದರೆ, ಇಂತಹ ಅಡ್ಡ ಕಸುಬಿಗಳ ನಡುವೆ, ಸಕತ್ ಸ್ಟುಡಿಯೋ ತರಹದ ವೃತ್ತಿಪರರು ಜನರ ಅಭಿರುಚಿಗಳನ್ನು ಉಳಿಸಲು ಹರಸಾಹಸ ಪಡಬೇಕಾಗಿ ಬಂದಿದೆ.

“ಲೂಸ್ ಕನೆಕ್ಷನ್ ವೆಬ್ ಸೀರಿಸ್ ಜನರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಪ್ರಾಮಾಣಿಕವಾಗಿ ಹೇಳುವುದಾದರೆ, ತಿಂಗಳಿಗೆ ಸುಮಾರು 12 ಸಾವಿರ ರೂಪಾಯಿ ಯೂ- ಟ್ಯೂಬ್ ಕಡೆಯಿಂದ ಬರುತ್ತಿದೆ. ಅದ ನಮ್ಮ ಕ್ಯಾಮೆರಾ ಖರ್ಚಿಗೂ ಸಾಕಾಗುವುದಿಲ್ಲ. ಆದರೆ ಇಂತಹ ಪ್ರಯೋಗಗಳನ್ನು ಜನ ಬೆಂಬಲಿಸಿದರೆ ಮುಂದಿನ ದಿನಗಳಲ್ಲಿ ಖಂಡಿತಾ ಯಶಸ್ಸು ಗಳಿಸಲು ಸಾಧ್ಯ. ಆದರೆ ಅನೇಕರು ಅಂತರ್ಜಾಲದ ನೋಡುಗರ ಅಭಿರುಚಿಗಳನ್ನೇ ಹಾಳು ಮಾಡುತ್ತಿದ್ದಾರೆ. ಅಂತವರು ಹಾಕುವ ವಿಡಿಯೋಗಳಿಗೆ ಸಿಗುತ್ತಿರುವ ವೀಕ್ಷಣೆ ನೋಡಿದರೆ, ನಿಜಕ್ಕೂ ಜನರಿಗೆ ಏನು ಬೇಕು ಎಂಬ ಬಗ್ಗೆ ಸಂದೇಹ ಮೂಡಿಸುತ್ತದೆ,” ಎನ್ನುತ್ತಾರೆ ಸಕತ್ ಸ್ಟುಡಿಯೋ ನಿರ್ಮಾಪಕ ಆರ್ಜೆ ಪ್ರದೀಪ್.

ಒಂದು ಕಡೆ ‘ಬ್ಯೂ ವೇಲ್’ ನಂತಹ ಮಕ್ಕಳನ್ನು ಸಾವಿನಂಚಿಗೆ ದೂಡುತ್ತಿರುವ ಆಟಗಳು ಅಂತರ್ಜಾಲವನ್ನು ಆವರಿಸಿಕೊಳ್ಳುತ್ತಿವೆ. ಇನ್ನೊಂದು ಕಡೆ ಅಡ್ಡ ಕಸುಬಿಗಳು ಆತುರಕ್ಕೆ ಬಿದ್ದು ‘ನಿಧಿ ಶೋಧನೆ’ಗೆ ಇಳಿದಿದ್ದಾರೆ; ಜನರ ಅಭಿರುಚಿಗಳನ್ನು ಕೆಡಿಸುತ್ತಿದ್ದಾರೆ. ತಂತ್ರಜ್ಞಾನದ ಬೆಳವಣಿಗೆಯನ್ನು ಜನರಿಗೆ ಮಾರಕವಾಗಿ ಬಳಸುವ ಅಪಾಯಕಾರಿ ಬೆಳವಣಿಗಗಳು ಇವು.

ಇತ್ತೀಚೆಗೆ ಸಿಎಂ ಸಿದ್ದರಾಮಯ್ಯ ತಮ್ಮ ಸ್ವಂತ ಹೆಸರಿನಲ್ಲಿ ಟ್ವಿಟರ್ ಖಾತೆ ಆರಂಭಿಸಿದ್ದಾರೆ. ಆ ಮೂಲಕ ಅವರೂ ಕೂಡ ಈ ಬೆಳೆಯುತ್ತಿರುವ ತಂತ್ರಜ್ಞಾನದ ಸಾಧ್ಯತೆಗಳನ್ನು ಗುರುತಿಸಿದ್ದಾರೆ. ಅವರ ಸಂಪುಟದಲ್ಲಿ ಮಾಹಿತಿ ತಂತ್ರಜ್ಞಾನಕ್ಕಾಗಿಯೇ ಒಂದು ಖಾತೆಯೂ ಇದೆ. ಅದನ್ನು ಅಂತರ್ಜಾಲದಲ್ಲಿ ನಡೆಯುತ್ತಿರುವ ಇಂತಹ ಅಪಾಯಕಾರಿ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಪರಿಣಾಮಕಾರಿಯಾಗಿ ಬಳಸುವ ಅಗತ್ಯವಿದೆ. ಜತೆಗೆ, ಅಂತರ್ಜಾಲ ಬಳಸುವ ಜನರೂ ಕೂಡ ಜಾಗೃತರಾಗಬೇಕಿದೆ. ಪ್ರಶ್ನಾರ್ಥಕ ಚಿನ್ಹೆಗಳ ತಲೆಬರಹ, ಉದ್ರೇಕಕಾರಿ ವಿಡಿಯೋಗಳಿಗೆ ಪ್ರೋತ್ಸಾಹ ನೀಡದ ನಿಟ್ಟಿನಲ್ಲಿ ಆತ್ಮವಿಮರ್ಶೆಗೆ ಇಳಿಯಬೇಕಿದೆ. ಹಾಗಾದರೆ ಮಾತ್ರವೇ, ಈ ತಂತ್ರಜ್ಞಾನದ ಬೆಳವಣಿಗೆ ಆರೋಗ್ಯಪೂರ್ಣ ಬಳಕೆಗೆ ಪೂರಕವಾಗುತ್ತದೆ; ಇಲ್ಲದೇ ಹೋದರೆ, ಅಭಿರುಚಿ ಸತ್ತ ಸಮಾಜ ಸೃಷ್ಟಿಗೆ ನಾಂದಿ ಹಾಡಲು ಎಲ್ಲರ ಸಮ್ಮತಿಯೂ ಸಿಕ್ಕಂತಾಗುತ್ತದೆ.

ಮುಗಿಸುವ ಮುನ್ನ, ಈಗ ನಾವು ಈ ಸ್ಟೋರಿಗೆ ನೀಡದ ತಲೆಬರಹವನ್ನು ಮತ್ತೊಮ್ಮೆ ಓದಿ. ಮತ್ತು, ಅದು ನಿಮ್ಮ ಮೇಲೆ ಬೀರಿದ ಪರಿಣಾಮ ಏನು ಎಂಬುದನ್ನು ಆಲೋಚನೆ ಮಾಡಿ ನೋಡಿ.