Home news-in-brief ಪ್ಯಾರೀಸ್ ಒಪ್ಪಂದದಿಂದ ಅಮೆರಿಕಾ ಹೊರಕ್ಕೆ: ಟ್ರಂಪ್ ಘೋಷಣೆ ಹಿನ್ನೆಲೆಯಲ್ಲಿ ಕಲ್ಲಿದ್ದಲ ಲಾಬಿ?

ಪ್ಯಾರೀಸ್ ಒಪ್ಪಂದದಿಂದ ಅಮೆರಿಕಾ ಹೊರಕ್ಕೆ: ಟ್ರಂಪ್ ಘೋಷಣೆ ಹಿನ್ನೆಲೆಯಲ್ಲಿ ಕಲ್ಲಿದ್ದಲ ಲಾಬಿ?

SHARE

ಅಮೆರಿಕಾ

ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ‘ಪ್ಯಾರೀಸ್ ಒಪ್ಪಂದ’ದಿಂದ ಅಮೆರಿಕಾ ಹೊರಬರಲಿದೆ ಎಂದು ಘೋಷಿಸಿದ್ದಾರೆ.

ವರ್ಷದ ಹಿಂದಷ್ಟೆ ಕಪ್ಪೆಗಳನ್ನು ಹಿಡಿದು ಕೊಳಗ ತುಂಬಿದಂತೆ ವಿಶ್ವದ 195 ದೇಶಗಳನ್ನು ಒಟ್ಟುಹಾಕಿ, ಹವಾಮಾನ ಬದಲಾವಣೆಯ ಪರಿಣಾಮಗಳಿಗೆ ಹಕ್ಕುಬಾಧ್ಯಸ್ಥರನ್ನಾಗಿ ಮಾಡಿದ್ದ ಒಪ್ಪಂದ ಇದು. “ಇದು ಅಮೆರಿಕಾ ಜನರಿಗೆ ಆರ್ಥಿಕವಾಗಿ ಹೊರೆಯಾಗುತ್ತಿದೆ. ಹೀಗಾಗಿ ಅದರಿಂದ ಹೊರಬರುತ್ತೇವೆ,” ಎಂದು ಚುನಾವಣಾ ವೇಳೆಯಲ್ಲಿ ಅಮೆರಿಕಾ ಜನರಿಗೆ ಟ್ರಂಪ್ ನೀಡುತ್ತ ಬಂದ ಆಶ್ವಾಸನೆಯಂತೆ ಈಗ ಒಪ್ಪಂದದಿಂದಲೇ ಅಮೆರಿಕಾ ಹೊರಬಂದಿದೆ.

“ಅಮೆರಿಕಾ ಮತ್ತು ಅದರ ಪ್ರಜೆಗಳ ಹಿತಾಸಕ್ತಿಯ ಕಾರಣಕ್ಕೆ ಪ್ಯಾರೀಸ್ ಒಪ್ಪಂದದಿಂದ ಹೊರಬರುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಅಮೆರಿಕಾಗೆ ಪೂರಕವಾದ ಷರತ್ತುಗಳನ್ನು ಮುಂದಿಟ್ಟು ಮತ್ತೆ ಒಪ್ಪಂದ ಮಾಡಿಕೊಳ್ಳಲು ಮಾತುಕತೆ ನಡೆಸುತ್ತೇವೆ,” ಎಂದು ಈ ವೇಳೆ ಟ್ರಂಪ್ ಪ್ರಕಟಿಸಿದ್ದಾರೆ.

ಪ್ರಪಂಚ ದಿನದಿಂದ ದಿನಕ್ಕೆ ಮಾಲಿನ್ಯಗೊಳ್ಳುತ್ತಿದೆ. ಹವಾಮಾನದಲ್ಲಿ ಏರಿಳಿತಗಳಾಗುತ್ತಿವೆ. ಭೂಮಿಯ ತಾಪಮಾನ ಏರಿಕೆಯಾಗುತ್ತಿದೆ ಎಂಬ ಆತಂಕಗಳು ವ್ಯಕ್ತವಾಗುತ್ತಲೇ ಬಂದಿವೆ. ಕಳೆದ ಒಂದು ದಶಕದ ಅಂತರದಲ್ಲಿ ‘ಗ್ಲೋಬಲ್ ವಾರ್ಮಿಂಗ್’ ಎಂಬುದು ಪರಿಸರವಾದಿಗಳು ಗಂಭೀರವಾಗಿ ತೆಗೆದುಕೊಂಡ ವಿಚಾರವಾಗಿತ್ತು. ಹಲವು ವರ್ಷಗಳ ವಿಫಲ ಮಾತುಕತೆ, ಸಭೆಗಳ ನಂತರ 2015ರಲ್ಲಿ ಪ್ಯಾರೀಸ್‌ನಲ್ಲಿ ಸೇರಿದ್ದ 195 ದೇಶಗಳು, ಜಾಗತಿಕ ಹವಾಮಾನ ಬದಲಾವಣೆಗೆ ತಾವು ನೀಡುತ್ತಿರುವ ಇಂಗಾಲಾಮ್ಲದ ಕೊಡುಗೆಯನ್ನು ಕಡಿಮೆ ಮಾಡಲು ಒಪ್ಪಿಕೊಂಡಿದ್ದವು.

ಜತೆಗೆ, ಅಮೆರಿಕಾ 3 ಬಿಲಿಯನ್ ಡಾಲರ್‌ ಹಣವನ್ನು ಚಿಕ್ಕ ಪುಟ್ಟ ದೇಶಗಳಲ್ಲಿ ಪರಿಸರ ಮಾಲಿನ್ಯ ತಡೆಯಲು ನೀಡುವುದಾಗಿ ಹೇಳಿಕೊಂಡಿತ್ತು. ಅಂದು ಅಧ್ಯಕ್ಷರಾಗಿದ್ದ ಬರಾಕ್ ಒಬಾಮ ಮೊಲದ ಕಂತಿನಲ್ಲಿ ಒಂದು ಬಿಲಿಯನ್ ಡಾಲರ್ ಹಣವನ್ನೂ ನೀಡಿದ್ದರು. ಆದರೆ ಟ್ರಂಪ್ ಆಯ್ಕೆಯಾದ ನಂತರ ಉಳಿದ ಹಣವನ್ನು ನೀಡಲು ನಿರಾಕರಿಸಿದ್ದರು. ಇದೀಗ, ಒಪ್ಪಂದದಿಂದಲೇ ಹೊರಬಂದಿದ್ದಾರೆ.

ಏನಿದು ಪ್ಯಾರೀಸ್ ಒಪ್ಪಂದ?:

‘ಪ್ಯಾರೀಸ್ ಒಪ್ಪಂದ’ ಎನ್ನುವುದು ಹವಾಮಾನ ಬದಲಾವಣೆಯ ಪರಿಣಾಮವನ್ನು ತಡೆಗಟ್ಟಲು ಮಾಡಿಕೊಂಡ ಒಪ್ಪಂದವಾಗಿತ್ತು. ವಿಶ್ವಸಂಸ್ಥೆಯ ಚೌಕಟ್ಟಿನಲ್ಲಿ ನಡೆದ ಸಂಧಾನ ಮಾತುಕತೆ ನಂತರ ಪ್ಯಾರೀಸ್‌ನಲ್ಲಿ 175 ದೇಶಗಳು ಇದಕ್ಕೆ ಸಹಿಮಾಡಿದ್ದವು.  2015ರ ಡಿಸೆಂಬರ್ 21ರಂದು ಈ ಒಪ್ಪಂದಕ್ಕೆ ಬರಲಾಗಿದ್ದು, ವಿಶ್ವ ಭೂ ದಿನವಾದ 2016ರ ಏಪ್ರಿಲ್ 22ರಂದು ಇದನ್ನು ಬಿಡುಗಡೆ ಮಾಡಲಾಯಿತು.

ಈ ಒಪ್ಪಂದದ ಅನ್ವಯ, ಎಲ್ಲ ದೇಶಗಳು ಜಾಗತಿಕ ತಾಪಮಾನ ಏರಿಕೆಯನ್ನು 2 ಡಿಗ್ರಿ ಸೆಲ್ಷಿಯಸ್‍ನ ಒಳಗೆ ಮಿತಿಗೊಳಿಸಲು ಒಪ್ಪಿಕೊಂಡವು. ಇದನ್ನು 1.5 ಡಿಗ್ರಿ ಸೆಲ್ಷಿಯಸ್‍ಗೆ ಮಿತಿಗೊಳಿಸಲು ಶ್ರಮ ವಹಿಸಲು ಕ್ರಮ ಕೈಗೊಳ್ಳುವ ಭರವಸೆ ನೀಡಿದವು. ಹವಾಮಾನ ಬದಲಾವಣೆಯ ವ್ಯತಿರಿಕ್ತ ಪರಿಣಾಮಗಳನ್ನು ತಡೆಯುವ ಸಾಮರ್ಥ್ಯ ವೃದ್ಧಿಸಿಕೊಳ್ಳುವುದು ಕೂಡಾ ಈ ಒಪ್ಪಂದದ ಉದ್ದೇಶವಾಗಿದೆ.

ಒಪ್ಪಂದಲ್ಲಿ ಭಾರತ ಒಪ್ಪಿಕೊಂಡ ಕೆಲವು ವಿಚಾರಗಳು ಹೀಗಿದ್ದವು:

  • ಭಾರತ ಅನಿಲ ಸೂಸುವಿಕೆಯ ಜಿಡಿಪಿ ತೀವ್ರತೆ (ಅನಿಲ ಸೂಸುವಿಕೆಯನ್ನು ಜಿಡಿಪಿಯಿಂದ ಭಾಗಿಸಿದರೆ ಬರುವ ಸಂಖ್ಯೆ)ಯನ್ನು 2005ರ ಮಟ್ಟದಿಂದ ಶೇ. 35ರಷ್ಟು ಕಡಿತಗೊಳಿಸುವುದು.

  • 2030ರ ಹೊತ್ತಿಗೆ ಕಾರ್ಬನ್-ಆಧಾರಿತವಲ್ಲದ ವಿದ್ಯುತ್ ಉತ್ಪಾದನೆ (ಸೌರ, ಪವನ, ಇತ್ಯಾದಿ) ಯನ್ನು ಶೇ. 40 ಕ್ಕೆ ಏರಿಸುವುದು. ಸೌರ, ಪವನ ಮೂಲಗಳಿಂದ 1.75 ಲಕ್ಷ, ಜಲ ಮತ್ತು ಅಣುಶಕ್ತಿಗಳಿಂದ 63 ಸಾವಿರ ಮೆಗಾವಾಟ್ ವಿದ್ಯುತ್ ಉತ್ಪಾದನೆಗೆ ಬದ್ಧ.

  • ಶೇ. 33 ಅರಣ್ಯ ವಿಸ್ತಾರದ ಗುರಿ.

  • ಬಸ್/ರೈಲು ಮುಂತಾದ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಮೇಲೆ ಹೂಡಿಕೆ.

ಹೀಗೆ ಒಂದಷ್ಟು ಷರತ್ತುಗಳಿಗೆ ಭಾರತ ಸೇರಿದಂತೆ ಹಲವು ದೇಶಗಳು ಒಪ್ಪಿಗೆ ಸೂಚಿಸಿದವು. ಆದರೆ ಆಳದಲ್ಲಿ ಇಡೀ ಪ್ಯಾರೀಸ್ ಒಪ್ಪಂದವೇ ಉಪಯೋಗಕ್ಕೆ ಬರುವುದು ಕಷ್ಟ ಎಂಬ ವಿಶ್ಲೇಷಣೆಗಳು ಆಗಲೇ ಕೇಳಿಬಂದಿದ್ದವು. ಅದಕ್ಕಿರುವ ಪ್ರಮುಖ ಕಾರಣ, ಪರಿಸರ ಹಾನಿ ತಡೆಯುವ ನಿಟ್ಟಿನಲ್ಲಿ ಬದ್ಧತೆಯ ಕೊರತೆ.

ಹಿನ್ನೆಲೆಯಲ್ಲಿ ಕಲ್ಲಿದ್ದಲ ಲಾಬಿ:

ಬೆಳೆಯುತ್ತಿರುವ ನಾಗರಿಕತೆಯ ವೇಗ ನಿಂತಿರುವುದೇ ಇಂಧನ ಮೂಲಗಳ ಮೇಲೆ. ಯಾವ ದೇಶ ಹೆಚ್ಚು ಇಂಧನ ಮೂಲಗಳನ್ನು ಹೊಂದಿದೆಯೋ, ಅದು ಹೆಚ್ಚು ಆಧುನಿಕ ಅಭಿವೃದ್ಧಿಹೊಂದುತ್ತದೆ. ಇವತ್ತಿಗೆ ಪೆಟ್ರೋಲಿಯಂ ನಂತರ ಸ್ಥಾನದಲ್ಲಿ ಇಂಧನದ ಮೂಲವಾಗಿ ಬಳಕೆಯಾಗುತ್ತಿರುವುದು ಕಲ್ಲಿದ್ದಲು. ಆದರೆ ಇದು ಪರಿಸರಕ್ಕೆ ಮಾಡುತ್ತಿರುವ ಹಾನಿ ದೊಡ್ಡದಿದೆ. ಟ್ರಂಪ್ ಪ್ಯಾರೀಸ್ ಒಪ್ಪಂದದಿಂದ ಹೊರಬರಲು ಕಾರಣವಾಗುವುದು ಕೂಡ ಇದೇ ಕಲ್ಲಿದ್ದಲ ಲಾಬಿಗಳು ಎನ್ನುತ್ತಿವೆ ವರದಿಗಳು.

ಒಪ್ಪಂದದ ಪ್ರಕಾರ ಕಲ್ಲಿದ್ದಲ ಬಳಕೆಯನ್ನು ಕಡಿಮೆ ಮಾಡಬೇಕಾಗುತ್ತದೆ. ಸೌರ, ಪವನ ವಿದ್ಯುತ್ ಉತ್ಪಾದನೆಗೆ ಒತ್ತು ನೀಡಬೇಕಾಗುತ್ತದೆ. ಆದರೆ ಇದಕ್ಕೆ ಕಲ್ಲಿದ್ದಲ ಲಾಬಿ ತಡೆಯಾಗಿದೆ.  ಇದೇ ಹಿನ್ನೆಲೆಯಲ್ಲಿ ಪ್ಯಾರೀಸ್ ಒಪ್ಪಂದದಿಂದ ಮೊದಲು ಅಮೆರಿಕಾವನ್ನು, ನಂತರ ಇತರೆ ದೇಶಗಳನ್ನು ಹೊರತರುವ ಕೆಲಸ ನಡೆಯಲಿದೆ.

ಸದ್ಯ ಟ್ರಂಪ್ ಪ್ಯಾರೀಸ್ ಒಪ್ಪಂದದಿಂದ ಹೊರಬರುವುದಾಗಿ ಪ್ರಕಟಿಸಿದ್ದಾರೆ. ಇದರ ಪರಿಣಾಮಗಳನ್ನು ಜಗತ್ತು ಎದುರಿಸಬೇಕಿದೆ. ಟ್ರಂಪ್ ಆಡಳಿತವನ್ನು ಹತ್ತಿರದಿಂದ ಗಮನಿಸುತ್ತ ಬಂದವರಿಗೆ ಪರಿಸರ ನಾಶಕ್ಕೆ ಅಮೆರಿಕಾದ ಹೊಸ ನೀತಿಗಳ ಕೊಡುಗೆ ಇನ್ನಷ್ಟು ಹೆಚ್ಚಲಿದೆ ಎಂಬುದು ಅಚ್ಚರಿ ಏನಲ್ಲ.

More Insights:

ಟ್ರಂಪ್ ಆಳ್ವಿಕೆಗೆ 100 ನೂರು ದಿನ: ಪರಿಸರಕ್ಕೆ ಮಾರಕವಾದ ವೈಟ್‌ ಹೌಸ್ ತೀರ್ಮಾನಗಳು

ಚಿತ್ರ:

ಸಿಎನ್‌ಎನ್‌.