Home samachara ‘ಗಡಿ ಎಂಬ ಬೇಲಿ’ಯೊಳಗೆ ಬಂಧಿಯಾದವನು 5 ದಶಕಗಳ ನಂತರ ತಾಯ್ನಾಡಿಗೆ ಕಾಲಿಟ್ಟ ಕತೆ!

‘ಗಡಿ ಎಂಬ ಬೇಲಿ’ಯೊಳಗೆ ಬಂಧಿಯಾದವನು 5 ದಶಕಗಳ ನಂತರ ತಾಯ್ನಾಡಿಗೆ ಕಾಲಿಟ್ಟ ಕತೆ!

SHARE

ಕಳೆದ ಶನಿವಾರ ಚೈನಾದ ಕ್ಸಿಯಾನ್ಯಾಂಗ್ ನಗರ ಒಬ್ಬ ವಿಶೇಷ ಅತಿಥಿಯ ಆಗಮನಕ್ಕೆ ಕಾದಿತ್ತು. ‘ತವರಿಗೆ ಸ್ವಾಗತ, ಇದೊಂದು ಕಠಿಣ ಪ್ರಯಾಣವಾಗಿತ್ತು’. ಅನ್ನುವ ಫಲಕಗಳನ್ನು ಹಿಡಿದಿದ್ದ ಜನ ತಮ್ಮ ಮನೆ ಮಗನನ್ನ ಸ್ವಾಗತಿಸಿದರು. ಆ ವ್ಯಕ್ತಿ ಬರೊಬ್ಬರಿ 54ವರ್ಷಗಳ ಬಳಿಕ ತನ್ನೂರಿಗೆ, ತನ್ನ ದೇಶಕ್ಕೆ ಮರಳಿದ್ದ. ಅದಕ್ಕೂ ಮುನ್ನ ಭಾರತದ ನಾನಾ ಜೈಲುಗಳಲ್ಲಿ ನಂತರ ಇಲ್ಲಿಯೇ ಸಂಸಾರಿಗನಾಗಿ ಬದುಕು ಸವೆಸಿದ್ದ. 

ಈ ಸುದೀರ್ಘ ಅವಧಿಯಲ್ಲಿ ಆತನ ಮಕ್ಕಳು ಮುದುಕರಾಗಿದ್ದರು, ಸಣ್ಣ ಹಳ್ಳಿಗಳು ಬೆಳೆದು ದೊಡ್ಡ ದೊಡ್ಡ ನಗರಗಳಾಗಿದ್ದವು. ಆ ಊರಿನ ರಸ್ತೆಅಂಗಡಿ, ಪರಿಸರ ಎಲ್ಲವೂ ಬದಲಾಗಿತ್ತು. ಹೌದು, 1963ರಲ್ಲಿ ಚೀನಾಭಾರತ ಯುದ್ಧದ ಕೆಲ ದಿನಗಳ ನಂತರ ಭಾರತೀಯ ಸೇನೆ ಕೈಗೆ ಸಿಕ್ಕಿ ಬಿದ್ದಿದ್ದ ವಾಂಗ್ ಕಿ ತನ್ನ ‘ಕೆಂಪುನಾಡಿ’ಗೆ ಮರಳುವ ನಡುವಿನ ಸುದೀರ್ಘ ಐದು ದಶಕಗಳಲ್ಲಿ ಸಾಕಷ್ಟು ಬದಲಾಗಣೆಗಳಾಗಿದ್ದವು. ಜತೆಗೆ, ವಾಂಗ್‌ ಕಿಗೂ ಹರೆಯ ಮಾಸಿ ಮುಪ್ಪು ಆವರಿಸಿತ್ತು.

ನಾಲ್ಕು ಜನ ಗಂಡು ಮಕ್ಕಳಲ್ಲಿ ಒಬ್ಬನಾಗಿದ್ದ ವಾಂಗ್ ಕಿ ಓದಿದ್ದು, ಭೂಮಾಪನ ಶಾಸ್ತ್ರ. ತನ್ನ ಓದಿಗೆ ತಕ್ಕಂತೆ ವಾಂಗ್ ಕಿ, ಚೀನಾ ಪೀಪಲ್ಸ್ ಲಿಬರೇಷನ್ ಆರ್ಮಿಯಲ್ಲಿ ಸರ್ವೇಯರ್ ಆಗಿ ಕೆಲಸಕ್ಕೆ ಸೇರಿಕೊಂಡಿದ್ದ. ಭಾರತಚೀನಾ ಯುದ್ಧದಲ್ಲಿ, ಚೀನಾ ಸೇನೆಗೆ ರಸ್ತೆ ನಿರ್ಮಿಸುವ ಕೆಲಸಕ್ಕೆ ವಾಂಗ್ ನಿಯೋಜನೆಗೊಂಡಿದ್ದ. ಒಂದು ದಿನ ಕೆಲಸಕ್ಕೆ ರಜೆಯಿದ್ದ ಕಾರಣ ವಾಂಗ್ ಕಿ, ಹಾಗೆ ಸುತ್ತಾಡಲು ಅಂತಾ ಕ್ಯಾಂಪ್ನಿಂದ ಹೊರಟು ಅಚಾನಕ್ಕಾಗಿ ಭಾರತದ ಗಡಿಯೊಳಗೆ ಪ್ರವೇಶಿಸಿಬಿಟ್ಟ. ಬಳಿಕ ಮರಳಿ ತನ್ನ ಕ್ಯಾಂಪ್ಗೆ ತೆರಳುವ ದಾರಿ ಮರೆತ ವಾಂಗ್ ಕಿ, ಅಲೆದು ಅಲೆದು ನಿತ್ರಾಣಗೊಂಡ. ಆ ಕ್ಷಣ ಕಣ್ಣಿಗೆ ಬಿದ್ದ ಕೆಂಪು ಬಣ್ಣದ ವಾಹನಕ್ಕೆ ಕೈ ಮಾಡಿ ಅನ್ನ ನೀರು ಕೊಡುವಂತೆ ಕೇಳಿಕೊಂಡು. ಆ ಗಾಡಿಯಲ್ಲಿದ್ದ ಜನ ವಾಂಗ್ನನ್ನ ಭಾರತೀಯ ಸೇನೆಗೆ ಒಪ್ಪಿಸಿದ್ದರು. ಅಲ್ಲಿಂದಲೇ ಶುರುವಾಗಿದ್ದು, ಭಾರತದ ಜೈಲಿನಲ್ಲಿ ವಾಂಗ್‌ ವನವಾಸ.

ಅಲ್ಲಿಂದ ವಾಂಗ್ ಏಳು ವರ್ಷಗಳ ಕಾಲ ಯುದ್ಧ ಕೈದಿಯಾಗಿ ದೇಶದ ನಾನಾ ಜೈಲುಗಳಲ್ಲಿ ಶಿಕ್ಷೆ ಅನುಭವಿಸಿದೆ. 1969ರಲ್ಲಿ ಬಿಡುಗಡೆಯಾದ ವಾಂಗ್ನನ್ನ ಮಧ್ಯಪ್ರದೇಶದ ತಿರೋಡಿ ಗ್ರಾಮದಕ್ಕೆ ತಂದು ಬಿಡಲಾಯಿತು. ಅವನ ಬಳಿ ಸೂಕ್ತ ದಾಖಲೆ ಇಲ್ಲವಾಗಿದ್ದರಿಂದ ಚೀನಾ ದೇಶಕ್ಕೆ ಮರಳಲು ಸರ್ಕಾರ ಆತನಿಗೆ ಅವಕಾಶ ನೀಡಲಿಲ್ಲ. ಏನು ಗೊತ್ತಿಲ್ಲದ ವಿಚಿತ್ರ ನಾಡಿನಲ್ಲಿ ಬದುಕುವುದು ವಾಂಗ್ಗೆ ಅನಿರ್ವಾಯವಾಯಿತು. ಉತ್ತಮ ಚಾರಿತ್ರ್ಯದ ವ್ಯಕ್ತಿಯಾದ ವಾಂಗ್, ಸ್ಥಳೀಯರ ದೌರ್ಜನ್ಯದ ಮಧ್ಯೆಯೇ ಹೊಸ ಬದುಕು ಕಟ್ಟಿಕೊಳ್ಳಲು ಹೆಣಗಿದ. ವ್ಯಾಪಾರ ಮಾಡಬೇಕು, ಸರ್ಕಾರದ ಯೋಜನೆಗಳ ಸಹಾಯ ಪಡೆಯಬೇಕು ಅಂದ್ರೆ, ವಾಂಗ್ಗೆ ಭಾರತದ ನಾಗರೀಕತೆ ದೊರೆಯಲಿಲ್ಲ. ಸ್ಥಳೀಯ ಹಿಂದಿ ಭಾಷೆ ಬರದ ವಾಂಗ್ ಜನರ ಜೊತೆ ವ್ಯವಹರಿಸಲು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಒಂದೆಡೆ ತಂದೆ ತಾಯಿಯಿಂದ ದೂರವಾದ ವಾಂಗ್, ಅಪರಿಚಿತ ಊರಲ್ಲಿ ಅನ್ನ ಗಿಟ್ಟಿಸಲು ಸಾಕಷ್ಟು ಕಷ್ಟಪಟ್ಟ. ಬೀದಿ ಬದಿ ವ್ಯಾಪಾರ ಮಾಡಬೇಕಾದಾಗ, ಲಂಚ ನೀಡದ್ದಕ್ಕೆ ಪೊಲೀಸರ ದೌರ್ಜನ್ಯಕ್ಕೂ ತುತ್ತಾದ. ತನ್ನ ಸದ್ಗುಣದಿಂದ ಸ್ಥಳೀಯರ ಪ್ರೀತಿ, ವಿಶ್ವಾಸ ಸಂಪಾದಿಸಿದ ವಾಂಗ್ಗೆ ಸುಶೀಲಾ ಎಂಬ ಹಿಂದಿ ಹುಡುಗಿಯ ಜೊತೆ ಮದುವೆಯೂ ಆಯಿತು. ಭಾಷೆ ತಿಳಿಯದ ಹುಡುಗನ ಕೈಹಿಡಿದ ಸುಶೀಲಾ, ಪರದೇಶಿಯನಿಗೆ ತನ್ನನ್ನ ಮದುವೆ ಮಾಡಿಕೊಟ್ಟ ತಂದೆಯನ್ನ ಶಪಿಸಿದ್ರೂ, ಕಾಲಾ ನಂತರ ಹೊಂದಾಣಿಕೆಯಿಂದ ಜೀವನ ನಡೆಸಿದ್ರು. ವಾಂಗ್ಗೆ ಮೂರು ಮಕ್ಕಳಿದ್ದು, ಮೊಮ್ಮಕ್ಕಳು ಸೇರಿದಂತೆ ವಾಂಗ್ ಅಜ್ಜನ ಸಂಸಾರ ಬೆಟ್ಟದಂತೆ ಬೆಳೆದಿದೆ.

ಭಾರತದಲ್ಲಿ ವಾಂಗ್ ಕಿ ಕುಟುಂಬ.

ವಾಂಗ್ಗೆ ಚೀನಾದಲ್ಲಿರುವ ತನ್ನ ಕುಟುಂಬದೊಂದಿಗೆ ಸಂಪರ್ಕ ಸಾಧಿಸಲು ಸಾಧ್ಯವಾಗಿದ್ದು 1980ರಲ್ಲಿ. ಮೊದಲ ಬಾರಿಗೆ ವಾಂಗ್ ಬರೆದ ಪತ್ರ ಚೀನಾದಲ್ಲಿರುವ ತನ್ನ ಸಹೋದರರಿಗೆ ತಲುಪಿ ಉತ್ತರವೂ ಬಂದಿತ್ತು. ಬಳಿಕ ಭಾರತ ಹಾಗೂ ಚೀನಾ ದೇಶಗಳ ನಡುವೆ ಎರಡು ಕುಟುಂಬಗಳ ಭಾವಚಿತ್ರಗಳು ವಿನಿಮಯವಾದವು. ತಮ್ಮನನ್ನ ಕಂಡ ಅಣ್ಣಂದಿರ ಹಾಗೂ ತವರು ಮನೆಯ ಬಂಧುಗಳನ್ನ ನೋಡಿದ ವಾಂಗ್ ಅವರ ಆನಂದ ಭಾಷ್ಪಗಳು ಫೋಟೋಗಳನ್ನ ತೇವ ಮಾಡಿದವು. ವಾಂಗ್ ತೀರ ಇಕ್ಕಟ್ಟಿನ ಸ್ಥಿತಿಯಲ್ಲಿ ಸಿಲುಕೊಂಡಿದ್ದು 2003ರಲ್ಲಿ. ಆನಾರೋಗ್ಯಕ್ಕೆ ತುತ್ತಾದ ತಾಯಿ, ಮೊದಲ ಬಾರಿಗೆ ಮಗನೊಂದಿಗೆ ಮಾತನಾಡಿ ‘ಮಗ ಉಸಿರು ನಿಲ್ಲುವ ಮುನ್ನ ನಿನ್ನ ಒಮ್ಮೆ ನೋಡಬೇಕು’ ಅಂತಾ ಕೇಳಿಕೊಂಡಳು. ಆದರೆ, 2006ರಲ್ಲಿ ವಾಂಗ್ನ ಹೆತ್ತ ಅಮ್ಮ ಕೊನೆಯುಸಿರೆಳೆದಳು. ತಾಯಿಯ ಮುಖವನ್ನ ಕೊನೆಗೂ ನೋಡಲು ಆಗಲೇ ಇಲ್ಲ.

ವಿಚಿತ್ರ ಅಂದ್ರೆ, ವಾಂಗ್ ಯುದ್ಧ ಕೈದಿ ಹೌದು,ಅಲ್ಲವೋ ಎಂಬುದು ಇನ್ನೂ ನಿರ್ಧಾರವಾಗಿಲ್ಲ. ಪಾಸ್ಪೋರ್ಟ್ ಪಡೆದು ಚೀನಾಕ್ಕೆ ಹೋಗಬೇಕು ಎಂಬ ವಾಂಗ್ ಕನಸಿಗೆ ಭಾರತೀಯ ಅಧಿಕಾರಿಗಳು ತಣ್ಣೀರು ಎರಚುತ್ತಲೇ ಇದ್ದರು. ಆದರೆ, 2009ರಲ್ಲಿ ಭಾರತಕ್ಕೆ ಪ್ರವಾಸಿಗನಾಗಿ ಆಗಮಿಸಿದ್ದ ವಾಂಗ್ನ ದೂರದ ಸಂಬಂಧಿ ಸಹಾಯ ಮಾಡಿದ. ಚೀನಾ ರಾಯಭಾರಿ ಕಚೇರಿಯನ್ನ ಸಂಪರ್ಕಿಸಿದ ಆತ, 2013ರಲ್ಲಿ ವಾಂಗ್ಗೆ ಪಾಸ್ಪೋರ್ಟ್ ಸಿಗುವಂತೆ ಮಾಡಿದೆ. ಆದ್ರೂ, ಸಹ ದೇಶದಿಂದ ಹೊರಹೊಗಲು ಭಾರತ ಸರ್ಕಾರ, ವಾಂಗ್ಗೆ ಅವಕಾಶ ನೀಡಿರಲಿಲ್ಲ.

ಸದ್ಯ ಚೀನಾ ಅಧಿಕಾರಿಗಳ ಸಹಾಯದಿಂದ ವಾಂಗ್ ತನ್ನ ಕುಟುಂಬ ಸೇರಿದ್ದಾನೆ. ಮೂರು ಮಕ್ಕಳೂ ಸಹ ತಂದೆಯೊಂದಿಗೆ ಚೀನಾಕ್ಕೆ ತೆರಳಿದ್ದಾರೆ. ಅನಾರೋಗ್ಯದಿಂದ ನರಳುತ್ತಿರೋ ಪತ್ನಿ ಸುಶೀಲಾ ಮಾತ್ರ ತಿರೋಡಿಯಲ್ಲೇ ಉಳಿದ್ದಾಳೆ. ಕುತೂಹಲಕಾರಿ ವಿಷಯ ಅಂದರೆ, ಭಾರತದಲ್ಲಿ ಬೇರುಗಳನ್ನ ಬಿಟ್ಟಿರೋ 80ವರ್ಷದ ವಾಂಗ್ ಮರಳಿ ಭಾರತಕ್ಕೆ ಬರುತ್ತಾನೋ ಅಥವಾ 82 ವರ್ಷದ ಅಣ್ಣನ ಜೊತೆ ಅಲ್ಲಿಯೇ ಮುಪ್ಪನ್ನ ಕಳೆಯುತ್ತಾನೋ ಗೊತ್ತಿಲ್ಲ. ಅಪ್ಪನ ಜೊತೆ ಮಕ್ಕಳಿಗೂ ಸಹ ಕೆಂಪು ಮಣ್ಣಿನಲ್ಲಿ ವಾಸಿಸಲು ಅವಕಾಶ ಕಲ್ಪಿಸಲಾಗಿದೆ. ಒಟ್ನಲ್ಲಿ, ಅಪರಿಚಿತ ದೇಶವೊಂದರಲ್ಲಿ ಅರ್ಧ ಶತಮಾನ ಜೀವಿಸಿರುವ ವಾಂಗ್ ಇದೀಗ ಮತ್ತೆ ಗೂಡು ಸೇರಿದ್ದಾನೆ. ವಾಂಗ್ ಕಿ ಅಜ್ಜ ಭಾರತ ಮತ್ತು ಚೀನಾ ನಡುವಿನ ರಾಯಭಾರಿ ಸಂಬಂಧದ ಸಂಕೇತದಂತೆ ಕಾಣಿಸುತ್ತಿದ್ದಾನೆ.

*ಮಾಹಿತಿ & ಚಿತ್ರ ಕೃಪೆ:ಬಿಬಿಸಿ