Home news-for-4-1-display ‘ಪ್ರಕಟಣೆ’: ಸಿದ್ದು ಸರಕಾರದಲ್ಲಿ ಸಾಹಿತಿ, ಬುದ್ದಿಜೀವಿ, ದಲಿತ ಹೋರಾಟಗಾರರನ್ನು ಹುಡುಕಿಕೊಡಿ!

‘ಪ್ರಕಟಣೆ’: ಸಿದ್ದು ಸರಕಾರದಲ್ಲಿ ಸಾಹಿತಿ, ಬುದ್ದಿಜೀವಿ, ದಲಿತ ಹೋರಾಟಗಾರರನ್ನು ಹುಡುಕಿಕೊಡಿ!

SHARE

ತುಮಕೂರು

ಜಿಲ್ಲೆ ಗುಬ್ಬಿ ತಾಲೂಕಿನ ದಲಿತ ಯುವಕ ಅಭಿಷೇಕ್ ಮೇಲಿನ ಅಮಾನುಷ ಹಲ್ಲೆ ಪ್ರಕರಣ ಹೋರಾಟದ ತಿರುವು ಪಡೆದುಕೊಳ್ಳುತ್ತಿರುವ ವೇಳೆಯಲ್ಲಿಯೇ, ರಾಜ್ಯದ ನಾನಾ ಕಡೆಗಳಲ್ಲಿ ದಲಿತ ಹಾಗೂ ಹಿಂದುಳಿದ ವರ್ಗಗಳ ಮೇಲೆ ‘ಜಾತಿ ದೌರ್ಜನ್ಯ’ಗಳಾಗುತ್ತಿರುವ ವರದಿಗಳು ಬರುತ್ತಿವೆ.

ಮಂಡ್ಯ ಜಿಲ್ಲೆಯ ಕರಗೋಡು ಹೋಬಳಿಯ ಕೆ ಗೌಡನಕೆರೆ ಗ್ರಾಮದಲ್ಲಿ ಡಿ. 21ರಂದು ಕ್ಷೌರಿಕ ಸಮಾಜ ಕುಟುಂಬವೊಂದರ ಮೇಲೆ ಹಲ್ಲೆ ನಡೆಸಲಾಗಿದೆ. ಅವ್ಯಾವ್ಯ ಶಬ್ಧಗಳಿಂದ ನಿಂಧಿಸಿರುವ ಮೇಲ್ಜಾತಿಯವರು, ಕೊನೆಗೆ ಅವರ ಗುಡಿಸಲು ಮನೆಯನ್ನೇ ಸುಟ್ಟು ಹಾಕಿರುವುದು ಬೆಳಕಿಗೆ ಬಂದಿದೆ. ಈ ಕುರಿತು ಕರಗೋಡು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಇತ್ತ, ಜನವರಿ 25ರಂದು ರಾತ್ರಿ ಬೆಂಗಳೂರು ಹೊರವಲಯದ ಸರ್ಜಾಪುರದ ಕೋದಂಡರಾಮ ದೇವಸ್ಥಾನದಲ್ಲಿ ದಲಿತ ಮಹಿಳೆ ಜಯಂತಿ ಎಂಬುವವರು ಮಂಗಳಾರತಿ ತಟ್ಟೆ ಮುಟ್ಟಿದ್ದಕ್ಕೆ, ಸರಪಳಿಯಿಂದ ಹಲ್ಲೆ ನಡೆಸಲಾಗಿದೆ. ದೇವಸ್ಥಾನದ ಅರ್ಚಕರಾದ ಕೇಶವಮೂರ್ತಿ ಮಹಿಳೆಯ ಮೇಲೆ ಹಲ್ಲೆ ನಡೆಸಿದ ಆರೋಪಕ್ಕೆ ಗುರಿಯಾಗಿದ್ದಾರೆ.

“ಅರ್ಚಕರ ಬಗ್ಗೆ ಹಿಂದಿನಿಂದಲೂ ವಿರೋಧಗಳಿದ್ದವು. ಅವರು ಎಲ್ಲರನ್ನೂ ಒಂದೇ ರೀತಿಯಲ್ಲಿ ನೋಡುತ್ತಿರಲಿಲ್ಲ. ಮೊನ್ನೆ ಕೂಡ ಆರತಿ ಕೇಳಲು ಜಯಂತಿ ಹೋದಾಗ ಮೊದಲು ತಟ್ಟೆಯನ್ನು ಕೆಳಗಿಟ್ಟಿದ್ದಾರೆ. ಒತ್ತಾಯ ಮಾಡಿದ ನಂತರ ಆರತಿ ನೀಡಲು ಮುಂದೆ ಒಡ್ಡಿದ್ದಾರೆ. ಆಗ ಅಕಸ್ಮಾತ್ ಆಗಿ ಕೈ ತಗಲಿದ್ದರಿಂದ ಅಪವಿತ್ರವಾಯಿತು ಎಂದು ಕೇಶವಮೂರ್ತಿ ನಿಂದಿಸಿದ್ದಾರೆ. ಗರ್ಭಗುಡಿಯಲ್ಲಿದ್ದ ಚೈನಿನಲ್ಲಿ ಹೊಡೆದಿದ್ದಾರೆ. ನಂತರ ಗ್ರಾಮಸ್ಥರು ಪೊಲೀಸರಿಗೆ ದೂರು ನೀಡಿದರು,” ಎಂದು ಬಹುಜನ ದಲಿತ ಸಂಘರ್ಷ ಸಮಿತಿಯ ರೇವತಿ ರಾಜ್ ‘ಸಮಾಚಾರ’ಕ್ಕೆ ಮಾಹಿತಿ ನೀಡಿದರು.

ಹೀಗೆ, ಸಾಲು ಸಾಲು ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳು ದಾಖಲಾಗುತ್ತಿದ್ದರು, ರಾಜ್ಯದ ಮುಖ್ಯವಾಹಿನಿಯಲ್ಲಿರುವ ಬುದ್ದಿಜೀವಿಗಳು, ಸಾಹಿತಿಗಳು ಹಾಗೂ ದಲಿತ ಹೋರಾಟಗಾರರು ದೊಡ್ಡಮಟ್ಟದಲ್ಲಿ ದನಿ ಎತ್ತುತ್ತಿಲ್ಲ. ದಲಿತ ಸಮುದಾಯಕ್ಕೆ ಸೇರಿದ ಗೃಹ ಸಚಿವರು, ಹಿಂದುಳಿದ ವರ್ಗದಿಂದ ಬಂದ ಮುಖ್ಯಮಂತ್ರಿ ಆಡಳಿತ ನಡೆಸುತ್ತಿರುವ ರಾಜ್ಯದಲ್ಲಿ ದಲಿತ ಮೇಲಿನ ಹಲ್ಲೆಯನ್ನು ತಡೆಯಲು ಕಠಿಣ ಕ್ರಮ ಕೈಗೊಳ್ಳುವಂತೆ ಸರಕಾರವನ್ನು ಒತ್ತಾಯಿಸುತ್ತಿಲ್ಲ ಎಂಬ ಆರೋಪಗಳು ಕೇಳಿಬಂದಿವೆ. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯೂ ಆರಂಭವಾಗಿದೆ. ಜತೆಗೆ, ಅಮಾನುಷವಾಗಿ ಹಲ್ಲೆಗೊಳಗಾದ ದಲಿತ ಯುವಕ ಅಭಿಷೇಕನ ಮೇಲೆಯೇ ಪೋಕ್ಸೋ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿರುವುದು ಹೋರಾಟಕ್ಕೆ ಮತ್ತು ಆಕ್ರೋಶಕ್ಕೆ ಮೂಲ ಕಾರಣವಾಗಿದೆ.

ತುಮಕೂರು ಚಲೋ:

ಈ ಹಿನ್ನೆಲೆಯಲ್ಲಿ ಗಣರಾಜ್ಯೋತ್ಸವದ ದಿನವೇ ತುಮಕೂರಿನ ಅಂಬೇಡ್ಕರ್ ಭವನದಲ್ಲಿ ಹೋರಾಟದ ಕುರಿತು ಸಮಾಲೋಚನಾ ಸಭೆಯನ್ನು ನಡೆಸಲಾಗಿದೆ. ಸುಮಾರು 250ಕ್ಕೂ ಹೆಚ್ಚು ಜನ ಸೇರಿದ್ದ ಸಭೆಯಲ್ಲಿ ಗುಬ್ಬಿ ಯುವಕನ ಮೇಲೆ ನಡೆದ ದೌರ್ಜನ್ಯ ಹಾಗೂ ಆತನ ಮೇಲೆಯೇ ದೂರು ದಾಖಲಿಸಿರುವ ಪೊಲೀಸರ ವಿರುದ್ಧ ಹಾಗೂ ಸರಕಾರಕ್ಕೆ ಎಚ್ಚರಿಕೆ ನೀಡುವ ಹಿನ್ನೆಲೆಯಲ್ಲಿ ‘ಚಲೋ’ ಹೋರಾಟವನ್ನು ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ. ಈ ವಾರದ ಕೊನೆಯಲ್ಲಿ ಸ್ಥಳೀಯರ ಅಭಿಪ್ರಾಯ ಪಡೆದು ಹೋರಾಟದ ರೂಪುರೇಷೆಗಳನ್ನು ಸಿದ್ಧಪಡಿಸುವ ಕುರಿತು ಚರ್ಚೆ ನಡೆದಿದೆ. ಶುಕ್ರವಾರ ಗೃಹ ಸಚಿವ ಜಿ. ಪರಮೇಶ್ವರ್ ಅವರನ್ನು ನಿಯೋಗವೊಂದು ಭೇಟಿ ಮಾಡಲಿದೆ.

“ಒಂದೂವರೆ ವರ್ಷದ ಹಿಂದೆ ಚಾಮರಾಜನಗರದಲ್ಲಿ ದಲಿತರ ತಲೆ ಕತ್ತರಿಸಿದ ಪ್ರಕರಣದಿಂದ ಹಿಡಿದು, ದಿಡ್ಡಳ್ಳಿ- ಅಭಿಷೇಕ್ ಪ್ರಕರಣದವರೆಗೆ ಸಾಲು ಸಾಲು ದಲಿತರ ಮೇಲಿನ ದೌರ್ಜನ್ಯಗಳು ದಾಖಲಾಗುತ್ತಲೇ ಇವೆ. ಪ್ರತಿ ವರ್ಷ ದಲಿತ ಮೇಲಿನ ದೌರ್ಜನ್ಯದ ಕುರಿತು ಜಾಗೃತಿ ಮೂಡಿಸಲು 7- 8 ಕೋಟಿ ರೂಪಾಯಿ ಖರ್ಚು ಮಾಡುತ್ತದೆ ಸರಕಾರ. ಅದರ ಬದಲು, ಒಂದು ಪ್ರಕರಣದಲ್ಲಿ ಕಠಿಣ ಕ್ರಮ ತೆಗೆದುಕೊಂಡು ಸಂಬಂಧಪಟ್ಟ ಜಿಲ್ಲಾಧಿಕಾರಿ, ತಹಶೀಲ್ದಾರ್ ಅವರುಗಳನ್ನು ಹೊಣೆ ಮಾಡುವ ಮೂಲಕ ಸಂದೇಶವನ್ನು ಕಳುಹಿಸಿದ್ದರೆ ಸಾಕಿತ್ತು. ಆದರೆ, ದಲಿತ ಗೃಹಸಚಿವ, ಹಿಂದುಳಿದ ವರ್ಗಗಳ ಮುಖ್ಯಮಂತ್ರಿ ಇರುವ ಸರಕಾರದಲ್ಲಿ ಅಂತಹದೊಂದು ಇಚ್ಚಾಶಕ್ತಿ ಈವರೆಗೆ ಪ್ರದರ್ಶನವಾಗಿಲ್ಲ. ಮೇಲಾಗಿ ಹಲ್ಲೆಗೊಳಗಾದವರ ಮೇಲೆಯೇ ಕೇಸು ದಾಖಲಿಸಲಾಗುತ್ತಿದೆ,” ಎಂದು ಅಸಮಾಧಾನವನ್ನು ಹೊರಹಾಕುತ್ತಾರೆ ದಲಿತ- ದಮನಿತರ ಸ್ವಾಭಿಮಾನಿ ಸಮಿತಿಯ ಬಿ. ಆರ್. ಭಾಸ್ಕರ್ ಪ್ರಸಾದ್.

ರಾಜ್ಯದಲ್ಲಿ ಇತ್ತೀಚೆಗೆ ನಡೆದ ದಲಿತದ ಮೇಲಿನ ದೌರ್ಜನ್ಯ ಪ್ರಕರಣಗಳು, ಅವರಿಗಾದ ಅನ್ಯಾಯಗಳ ಪಟ್ಟಿ ಅವರ ಬೆರಳ ತುದಿಯಲ್ಲಿದೆ.

“ಇಂತಹದ್ದೇ ಘಟನೆಗಳೇನಾದರೂ ಬಿಜೆಪಿ ಸರಕಾರದ ಸಮಯದಲ್ಲಿ ನಡೆದಿದ್ದರೆ ಇಷ್ಟೊತ್ತಿಗೆ ಟೌನ್ ಹಾಲ್ ತುಂಬಿ ಹೋಗಿರುತ್ತಿತ್ತು. ದಲಿತ ಪರ ಹೋರಾಟಗಾರರು, ಸಾಹಿತಿಗಳು, ಬುದ್ಧಿಜೀವಿಗಳು ಪ್ರತಿಭಟನೆಗೆ ಇಳಿಯುತ್ತಿದ್ದರು. ಆದರೆ, ಈಗ ಅವರಲ್ಲಿ ಒಂದು ಕಪಟ ಮೌನ ಆವರಿಸಿದೆ,” ಎಂದವರು ಹೇಳುತ್ತಾರೆ. ಇತ್ತೀಚೆಗೆ ನಡೆದ ಕೆಲವು ಪ್ರತಿಭಟನೆಗಳನ್ನು ಸೂಕ್ಷ್ಮವಾಗಿಯೇ ಮುಂದಿಡುವ ಅವರು, “ಹೋರಾಟಗಾರರೂ ರಾಜಕೀಯದ ಲಾಭ ನಷ್ಟಗಳನ್ನು ಲೆಕ್ಕಹಾಕಿ ಹೋರಾಟಗಳನ್ನು ಮಾಡುತ್ತಿರುವುದೇ ಸಮಸ್ಯೆ,” ಎನ್ನುತ್ತಾರೆ.

ಬೇಡಿಕೆಗಳ ಆತ್ಮಾವಲೋಕನ:

ಈ ಕುರಿತು ದಲಿತ ಹೋರಾಟಗಾರ ಮಾವಳ್ಳಿ ಶಂಕರ್ ಅವರ ಗಮನಸೆಳೆದರೆ, “ಖಂಡಿತಾ ಚಳುವಳಿ ನಿಂತಿಲ್ಲ. ಯಾವ ಸರಕಾರ ಬಂದರೂ ನಮ್ಮ ಹೋರಾಟಗಳು ನಡೆಯುತ್ತಲೇ ಇವೆ. ವಿಚಾರಗಳು ಬಂದಾಗ ಬೀದಿಗೆ ಇಳಿಯಬೇಕಾಗುತ್ತದೆ. ಮುಂಚೆ ರಾಜ್ಯದ ಎಲ್ಲೇ ಇಂತಹ ಘಟನೆಗಳು ನಡೆದರೆ ನಾವೆಲ್ಲಾ ಒಟ್ಟಾಗಿ ಹೋರಾಟ ಮಾಡುತ್ತಿದ್ದೆವು. ಈಗ ಅಲ್ಲಿಯೇ ಸ್ಥಳೀಯ ಮಟ್ಟದಲ್ಲಿ ಹೋರಾಟಗಳು ಹುಟ್ಟಿಕೊಳ್ಳುತ್ತಿವೆ. ಹೀಗಾಗಿ ಮೊದಲಿನ ಕಾವು ಕಾಣಿಸದೇ ಹೋಗಿರಬಹುದು. ಹಾಗಂತ ಸರಕಾರ ಬದಲಾದ ತಕ್ಷಣ ಹೋರಾಟಗಾರರು ಬದಲಾದರು ಎನ್ನುವುದು ತಪ್ಪು,” ಎನ್ನುತ್ತಾರೆ.

ದಲಿತ ಕವಿ, ಹಿಂದಿನ ಸರಕಾರದ ಅವಧಿಯಲ್ಲಿ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರೂ ಆಗಿದ್ದ ಸಿದ್ದಲಿಂಗಯ್ಯ ಆತ್ಮಾವಲೋಕನ ನೆಲೆಯಲ್ಲಿ ಇದಕ್ಕೆ ಪ್ರತಿಕ್ರಿಯೆ ನೀಡಿದರು, “ಮೊದಲು ನಾವು ಪ್ರತಿ ಹೋಬಳಿಗೊಂಡು ವಸತಿ ಶಾಲೆ ನೀಡಿ ಎಂದು ಹೋರಾಟ ಮಾಡಿದ್ದೆವು. ಸರಕಾರ ಈಗ ಪ್ರತಿ ಹೋಬಳಿಗೊಂದು ಶಾಲೆ ನೀಡಿದೆ. ಹೀಗಾಗಿ ಹೋರಾಟಕ್ಕೆ ಅಸ್ತ್ರಗಳೇ ಇಲ್ಲವಾಗಿವೆ. ಅದು ಹೆಗಡೆ, ಪಟೇಲ್ ಸರಕಾರದಿಂದ ಹಿಡಿದು ಸಿದ್ದರಾಮಯ್ಯ ಸರಕಾರದವರೆಗೆ, ಹೋರಾಟಗಾರರ ಬೇಡಿಕೆಗಳನ್ನು ಈಡೇರಿಸುವ ಮೂಲಕ ಅವರನ್ನು ನಿಶಸ್ತ್ರೀಕರಣ ಮಾಡುವ ಪ್ರಕ್ರಿಯೆ ನಡೆದುಕೊಂಡು ಬಂದಿದೆ. ಈ ಸಮಯದಲ್ಲಿ ಅದು ಸ್ವಲ್ಪ ಹೆಚ್ಚಿಗೇ ಇರಬಹುದು. ಸಮಸ್ಯೆ ಇರುವುದು ನಾವು ಇಡುವ ಬೇಡಿಕೆಗಳಲ್ಲಿ. ಸುಧಾರಣಾ ಕ್ರಮಗಳಿಗೆ ಬೇಡಿಕೆ ಇಡುವ ಬದಲು, ಮೂಲಭೂತ ಬದಲಾವಣೆಗೆ ಬೇಡಿಕೆ ಇಡಬೇಕು. ಈ ಕುರಿತು ನಾವೆಲ್ಲಾ ಆತ್ಮಾವಲೋಕನ ಮಾಡಿಕೊಳ್ಳಬೇಕು,” ಎನ್ನುತ್ತಾರೆ ಸಿದ್ದಲಿಂಗಯ್ಯ.

ದಲಿತರಿಗೆ ಭೂಮಿ ನೀಡುವ ಹಕ್ಕೊತ್ತಾಯದಂತಹ ವಿಚಾರಗಳು ಹೋರಾಟದ ಮೂಲ ಬೇಡಿಕೆಗಳಾಗಬೇಕು ಎಂದವರು ಅಭಿಪ್ರಾಯ ವ್ಯಕ್ತಪಡಿಸಿದರು.

ಹೀಗೆ, ಚರ್ಚೆಗಳು ನಡೆಯುತ್ತಿರುವ ಹೊತ್ತಿಗೇ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಲಕ್ಕವಳ್ಳಿಯಲ್ಲಿ ಅಲೆಮಾರಿ ಸಮುದಾಯದ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ಯತ್ನ ಪ್ರಕರಣ ಬೆಳಕಿಗೆ ಬರುತ್ತದೆ. ಘಟನೆ ನಡೆದು 24 ದಿನ ಕಳೆದರೂ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ವಿಫಲರಾಗಿದ್ದಾರೆ. ಅದೇ ವೇಳೆ ಜಿಲ್ಲೆಗೆ ಭೇಟಿ ನೀಡಿದ ಗೃಹ ಸಚಿವ ಜಿ. ಪರಮೇಶ್ವರ್ ಆದಿವಾಸಿಗಳ ಗಿರಿಜನೋತ್ಸವ ಕಾರ್ಯಕ್ರವನ್ನು ಡೋಲು ಬಡಿದು ಉದ್ಘಾಟಿಸಿ ಬಂದಿದ್ದಾರೆ.

“ಇಂತಹ ಘಟನೆಗಳು ನಡೆದಾಗ ಸರಕಾರ ಏನು ಮಾಡಬೇಕು ಎಂಬುದು ಒಂದು ವಿಚಾರ. ಆದರೆ, ಸಮಾನತೆಯ ಬಗ್ಗೆ ಮಾತನಾಡುವವರು, ಮಾನವೀಯತೆಯ ಬಗ್ಗೆ ಜನರಿಗೆ ಭಾಷಣ ಮಾಡುವವರು ಏನು ಮಾಡುತ್ತಿದ್ದಾರೆ ಗಮನಿಸಿ ನೋಡಿ. ಅಮಾನುಷವಾದ ಘಟನೆಗಳು ವರದಿಯಾಗುತ್ತಲೇ ಹೋರಾಟಗಾರರು ಸೆಲೆಕ್ಟಿವ್ ಆಗುತ್ತಾರೆ. ನಾವು ಹೋರಾಟ ಮಾಡಿದರೆ ಯಾರಿಗೆ ಸಮಸ್ಯೆಯಾಗುತ್ತೆ ಎಂಬುದನ್ನು ಗಮನಿಸುತ್ತಾರೆ. ಒಂದು ವೇಳೆ, ಹೋರಾಟ ಬಿಜೆಪಿಯನ್ನೋ, ಕೋಮುವಾದಿಗಳನ್ನೋ ಗುರಿಯಾಗಿಸುತ್ತೆ ಎಂದರೆ ಬೀದಿಗೆ ಬರುತ್ತಾರೆ. ಅದೇ ಜಾಗದಲ್ಲಿ ಕಾಂಗ್ರೆಸ್ ಸರಕಾರ ಬಂದಾಗ ಮೌನವಾಗುತ್ತಾರೆ. ಇಲ್ಲವೇ ಹೋರಾಟವನ್ನು ದಿಕ್ಕು ತಪ್ಪಿಸುವ ಪ್ರಯತ್ನ ಮಾಡುತ್ತಾರೆ. ಇವರಲ್ಲಿ ಕೆಲವರು ಸಿದ್ದರಾಮಯ್ಯ ಹೆಸರಿನಲ್ಲಿ ಕಾಂಗ್ರೆಸ್ ಸರಕಾರದ ಪರ ಕಳೆದ ಚುನಾವಣೆಯಲ್ಲಿ ಪ್ರಚಾರ ಮಾಡಿದವರು. ಕೆಲವರು ಈಗ ಅವರು ಸರಕಾರದಲ್ಲಿ ಪಾಲುದಾರರು. ಸದ್ಯ ನಡೆಯುತ್ತಿರುವ ದಲಿತರ ಮೇಲಿನ ದೌರ್ಜನ್ಯಗಳಿಗೆ ಅವರೂ ನೈತಿಕವಾಗಿ ಹೊಣೆಗಾರರು ಎಂಬುದನ್ನು ಮರೆಯಬಾರದು,” ಎನ್ನುತ್ತಾರೆ ಹೋರಾಟಗಾರ, ಬರಹಗಾರ ಎಸ್. ಸಿ. ದಿನೇಶ್ ಕುಮಾರ್.

ದಲಿತ- ದಮನಿತರ ಸ್ವಾಭಿಮಾನಿ ಹೋರಾಟ ಸಮಿತಿಯನ್ನು ಸಂಘಟಿಸುತ್ತಿರುವ ಅವರು, “ಅಮಾನವೀಯ, ಅಮಾನುಷ ಘಟನೆಗಳಾದಾಗಲೂ ಸುಮ್ಮನೆ ಕೂರುವ, ಬಾಯನ್ನೂ ಬಿಡದ ಇಂತಹ ಬುದ್ದಿಜೀವಿ, ಸಾಹಿತಿ ಮತ್ತು ಹೋರಾಟಗಾರರನ್ನು ಜನ ನಂಬುವುದಿಲ್ಲ,” ಎಂದು ಎಚ್ಚರಿಸುತ್ತಾರೆ.

ದಲಿತ ಮೇಲಿನ ದೌರ್ಜನ್ಯ ಪ್ರಕರಣಗಳು ನಡೆದಾಗ ಸ್ಥಳೀಯಮಟ್ಟದಲ್ಲಿಯೇ ಹೋರಾಟಗಳು ನಡೆಯುತ್ತವೆ. ಸ್ವಯಂ ರಕ್ಷಣೆ ಎಲ್ಲಾ ಕಡೆಗಳಲ್ಲೂ ಕಾಣಿಸುತ್ತಿದೆ. ಹೋರಾಟಗಳು ನಡೆಯುತ್ತಲೇ ಇಲ್ಲ ಅಂತಲ್ಲ. ಇದು ಸಂವೇದನೆಗಳು ಕಳೆದು ಹೋಗಿರುವ ಕಾಲಘಟ್ಟ. ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ನಿಭಾಯಿಸಬೇಕಿದೆ. ಸಮಾಜದಲ್ಲಿ ಆತ್ಮಾವಲೋಕನ ಮೂಡುವಂತೆ ಮಾಡಬೇಕಿದೆ.ದೇವನೂರು ಮಹದೇವ