Home samachara ದಾನದ ಆಚೆಗೂ ಬಿಲ್ ಗೇಟ್ಸ್ ‘ಮೊದಲ ಟ್ರಿಲೇನಿಯರ್’: ಸಾಧ್ಯತೆಯನ್ನು ಮುಂದಿಟ್ಟ ಅಧ್ಯಯನ

ದಾನದ ಆಚೆಗೂ ಬಿಲ್ ಗೇಟ್ಸ್ ‘ಮೊದಲ ಟ್ರಿಲೇನಿಯರ್’: ಸಾಧ್ಯತೆಯನ್ನು ಮುಂದಿಟ್ಟ ಅಧ್ಯಯನ

SHARE

ಜಗತ್ತಿನ

ಮೊದಲ ಟ್ರಿಲೇನಿಯರ್ ಮೈಲಿಗಲ್ಲನ್ನು ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ ಮುಂದಿನ 25 ವರ್ಷಗಳಲ್ಲಿ ಮುಟ್ಟಲಿದ್ದಾರೆ ಎಂದು ಹೊಸ ಅಧ್ಯಯನ ಹೇಳಿದೆ. ಒಂದು ಟ್ರಿಲಿಯನ್ ಎಂದರೆ ಒಂದು ಲಕ್ಷ ಕೋಟಿ.

ಆಕ್ಸ್ಫಾಮ್ ಇಂಟರ್ನ್ಯಾಷನಲ್ ಅಧ್ಯಯನದ ಪ್ರಕಾರ, ಸದ್ಯ ವರ್ಷಕ್ಕೆ ಶೇ. 11ರಷ್ಟು ಆರ್ಥಿಕ ಬೆಳವಣಿಗೆಯನ್ನು ಕಾಣುತ್ತಿರುವ ಬಿಲ್ ಗೇಟ್ಸ್ ಮೊದಲ ಲಕ್ಷ ಕೋಟ್ಯಾಧಿಪತಿಯಾಗಲಿದ್ದಾರೆ ಎಂದು ಅಂದಾಜಿಸಿದೆ. 2006ರಲ್ಲಿ ಬಿಲ್ ಗೇಟ್ಸ್ ಸ್ಥಾಪಿಸಿದ್ದ ಮೈಕ್ರೋಸಾಫ್ಟ್ ಸಂಸ್ಥೆ 5 ಸಾವಿರ ಕೋಟಿ ಡಾಲರ್ ಮಾರುಕಟ್ಟೆ ಮೌಲ್ಯವನ್ನು ಹೊಂದಿತ್ತು. ನಂತರ ದಿನಗಳಲ್ಲಿ ಅದು ಬೆಳವಣಿಗೆಯನ್ನು ಕಾಣುವ ಮೂಲಕ ಮೌಲ್ಯವನ್ನು ಹೆಚ್ಚಿಸಿಕೊಂಡಿತ್ತು.

ತಮ್ಮ ಆದಾಯದಲ್ಲಿ ಬಹುಪಾಲನ್ನು ದೇಣಿಗೆ ನೀಡಿದ ನಂತರವೂ, ಬಿಲ್ ಗೇಟ್ಸ್ ಆಸ್ತಿಯೇ 7. 5 ಸಾವಿರ ಕೋಟಿ ಡಾಲರ್ ತೂಗುತ್ತಿದೆ ಎಂದು ಆಕ್ಸ್ಫಾಮ್ ಇಂಟರ್ನಾಷನಲ್ ವರದಿ ಹೇಳುತ್ತಿದೆ.

ಬಿಲ್ ಗೇಟ್ಸ್ ತಾವು ನೀಡಿದ ದಾನದ ಹಣದ ವಿನಿಯೋಗದ ಮೇಲ್ವಿಚಾರಣೆ ನೋಡಿಕೊಳ್ಳಲು ಪತ್ನಿ ಹಾಗೂ ತಮ್ಮ ಹೆಸರಿನಲ್ಲಿ ‘ಮಿಲಿಂಡಾ- ಗೇಟ್ ಫೌಂಡೇಶನ್’ ಸ್ಥಾಪಿಸಿದ್ದಾರೆ. ಜತೆಗೆ, ತಮ್ಮ ಆದಾಯದಲ್ಲಿ ಅರ್ಧದಷ್ಟನ್ನು ದಾನವಾಗಿ ನೀಡುವ ಘೋಷಣೆಯೊಂದಿಗೆ ಹುಟ್ಟಿಕೊಂಡ ಶ್ರೀಮಂತರ ಒಕ್ಕೂಟ ಎಂದೇ ಗುರುತಿಸಿಕೊಂಡುವ ‘ದಿ ಗಿವಿಂಗ್ ಪ್ಲೆಡ್ಜ್’ ಸಂಸ್ಥೆಯಲ್ಲಿಯೂ ಇದ್ದಾರೆ.

ಇತ್ತೀಚಿಗೆ ಬಿಡುಗಡೆಗೊಂಡ ಫೋರ್ಬ್ಸ್ ಶ್ರೀಮಂತರ ಪಟ್ಟಿಯಲ್ಲಿ ಬಿಲ್ ಗೇಟ್ಸ್ ಒಂದು ಆಸ್ತಿಯ ಪ್ರಮಾನ 8. 4 ಸಾವಿರ ಕೋಟಿ ಡಾಲರ್ ಎಂದು ಹೇಳಿತ್ತು. 2009ರಿಂದ ಈಚೆಗೆ ಬಿಲ್ ಗೇಟ್ಸ್ ಆಸ್ತಿಯಲ್ಲಿ ಪ್ರತಿ ವರ್ಷ ಶೇ. 11ರಷ್ಟು ಹೆಚ್ಚಾಗುತ್ತ ಬಂದಿದೆ.

ಆಕ್ಸ್ಫಾಮ್ ಹೊರತಂದ ಮತ್ತೊಂದು ವರದಿಯ ಪ್ರಕಾರ, ಬಿಲ್ ಗೇಟ್ಸ್ ಸೇರಿದಂತೆ ಜಗತ್ತಿನ 8 ಮಂದಿ ಶ್ರೀಮಂತರ ಒಟ್ಟು ಆಸ್ತಿಯ ಮೌಲ್ಯವು, ಜಗತ್ತಿನ 3. 6 ಸಾವಿರ ಕೋಟಿ ಬಡವರ ಒಟ್ಟು ಆದಾಯಕ್ಕೆ ಸಮನಾಗಿದೆ ಎಂದು ಹೇಳಿದೆ.

ಅಮೆರಿಕಾದ ಶ್ರೀಮಂತ:

ದಾನ ಧರ್ಮಗಳ ಆಚೆಗೂ ಬಿಲ್ ಗೇಟ್ಸ್ ಇವತ್ತಿಗೂ ಅಮೆರಿಕಾದ ನಂ. 1 ಶ್ರೀಮಂತ ಎಂದೇ ಗುರುತಿಸಿಕೊಳ್ಳುತ್ತಾರೆ. ವಾಷಿಂಗ್ಟನ್ನಲ್ಲಿರುವ ಇವರ ಐಶಾರಾಮಿ ಮನೆಯ ಸುತ್ತ ಹಲವು ಕತೆಗಳಿವೆ. ಕಾದಂಬರಿಯೊಂದರಲ್ಲಿ ಒಂದು ಕಾಲ್ಪನಿಕ ಮನೆಯನ್ನು ಆಧಾರವಾಗಿಟ್ಟುಕೊಂಡು ಸುಮಾರು 12 ಕೋಟಿ ಡಾಲರ್ನಲ್ಲಿ ನಿರ್ಮಿಸಿರುವ ಮನೆಯ ಸುತ್ತ ವಿಶಾಲವಾದ ಹಸಿರು ಹಾಸುಗಳು ಮತ್ತು ಮರಗಿಡಗಳಿವೆ. ಮನೆಯ ಗೋಡೆಗೆ ಅವಳಡಿಸಿರುವ ಎಲ್ಇಡಿಗಳ ಮೂಲಕ ವಿನ್ಯಾಸವನ್ನು ಬದಲಿಸುವ ವ್ಯವಸ್ಥೆ ಇದೆ.

ಮನೆಯಲ್ಲಿ 200 ಅತಿಥಿಗಳಿಗೆ ಆತಿಥ್ಯ ನೀಡುವ ವ್ಯವಸ್ಥೆ ಇದೆ. ಪ್ರತಿಯೊಬ್ಬರು ಒಳಬರುತ್ತಲೇ ಅವರ ದೇಹದ ತಾಪಮಾನಕ್ಕೆ ತಕ್ಕಂತೆ ಮನೆಯ ಹವಾಮಾನ ಬದಲಾಗುತ್ತದೆ. ಜತೆಗೆ, ಸ್ವಿಮ್ಮಂಗ್ ಪೂಲಿನಲ್ಲಿಯೂ ನೀರಿನ ಒಳಗೂ ಸಂಗೀತದ ವ್ಯವಸ್ಥೆ ಇದೆ. ಮನೆಯ ಒಳಗೇ ಸುಮಾರು 2 ಸಾವಿರ ಚದರ ಅಡಿಯ ಗ್ರಂಥಾಲಯವಿದೆ. ಇದರಲ್ಲಿ ಅಪರೂಪದ ಪುಸ್ತಕ ಹಾಗೂ ಹಸ್ತಪ್ರತಿಗಳ ಸಂಗ್ರಹವಿದೆ. ಇದಕ್ಕಾಗಿಯೇ ಕೋಟ್ಯಾಂತರ ರೂಪಾಯಿಗಳನ್ನು ವಿನಿಯೋಗಿಸಲಾಗಿದೆ.

ಮನೆಯ ಸುತ್ತ ಇರುವ ಮರ ಗಿಡಗಳ ಆರೋಗ್ಯವನ್ನು ಗಮನಿಸಲು ಎಲೆಕ್ಟ್ರಾನಿಕ್ ವ್ಯವಸ್ಥೆ ಇದೆ. ಯಾವುದಾದರೂ ಗಿಡಕ್ಕೆ ನೀರು ಕಡಿಮೆಯಾಗಿದೆ ಎಂದರೆ ಸ್ವಯಂಚಾಲಿತವಾಗಿ ಆರೈಕೆ ಶುರುವಾಗುತ್ತದೆ. ಪ್ರತಿ ವರ್ಷ ಹೆಚ್ಚು ಹಣ ನೀಡಿದ ಮೈಕ್ರೋಸಾಫ್ಟ್ ಸಿಬ್ಬಂದಿಗೆ ಮನೆಯನ್ನು ನೋಡುವ ಅವಕಾಶ ಇರುತ್ತದೆ. ಆ ಹಣವನ್ನು ಬಿಲ್ ಗೇಟ್ಸ್ ತಮ್ಮ ಫೌಂರ್ಡಶನ್ ಕೆಲಸಗಳಿಗೆ ವಿನಿಯೋಗಿಸುತ್ತಾರೆ.

ಬಿಲ್ ಗೇಟ್ಸ್ ಸುಮಾರು 2. 8 ಸಾವಿರ ಕೋಟಿಗಳನ್ನು ತಮ್ಮದೇ ಚಾರಿಟಿ ಸಂಸ್ಥೆಗೆ ದಾನವಾಗಿ ನೀಡಿದ್ದಾರೆ. ಜತೆಗೆ, ಪತ್ನಿ ಮಿಲಿಂಡಾ ಗೇಟ್ಸ್ ತಮ್ಮ ಆಸ್ತಿಯಲ್ಲಿ ಶೇ. 95ರಷ್ಟನ್ನು ದಾನವಾಗಿ ನೀಡುವುದಾಗಿ ತಿಳಿಸಿದ್ದಾರೆ. ಹೀಗಾಗಿ, ಇವರ ಚಾರಿಟಿ ಫೌಂಡೇಶನ್ ಜಗತ್ತಿನ ಶ್ರೀಮಂತರ ಚಾರಿಟಿ ಎನ್ನಿಸಿಕೊಂಡಿದೆ.

ದಾನ ಧರ್ಮಗಳ ಆಚೆಗೂ ಜಗತ್ತಿನ ಅತ್ಯಂತ ಹೆಚ್ಚು ಶ್ರೀಮಂತನ ಆಸ್ತಿ ಕಡಿಮೆಯಾಗಿಲ್ಲ ಮತ್ತು ಅದು ಇನ್ನಷ್ಟು ಹೆಚ್ಚಲಿದೆ ಎಂದು ಅಧ್ಯಯನ ಹೇಳುತ್ತಿದೆ. ಸದ್ಯದ ಬೆಳವಣಿಗೆ ಪ್ರಕಾರ, ಮುಂದಿನ 25 ವರ್ಷಗಳಲ್ಲಿ ಗೇಟ್ಸ್ ಆಸ್ತಿ ಒಂದು ಲಕ್ಷ ಕೋಟಿಯನ್ನು ದಾಟುವ ಮೂಲಕ ಹೊಸ ದಾಖಲೆಯನ್ನು ಬರೆಯಲಿದೆ. ಈ ಮೂಲಕ ಜಗತ್ತಿನ ಶ್ರೀಮಂತರನ್ನು ಅಳೆಯಲು ಹೊಸ ಮೈಲುಗಲ್ಲೊಂದನ್ನು ನಿರ್ಮಿಸಲಿದೆ.