Home news-for-4-1-display ಡ್ರೀಮ್ಸ್ ಜಿಕೆ EXPOSE: "ನಂದು ವಂಚನೆಯಾದರೆ; ಅವರು (ಸುವರ್ಣ ನ್ಯೂಸ್) ವಂಚನೆಯ ಪಾಲುದಾರರು"!

ಡ್ರೀಮ್ಸ್ ಜಿಕೆ EXPOSE: "ನಂದು ವಂಚನೆಯಾದರೆ; ಅವರು (ಸುವರ್ಣ ನ್ಯೂಸ್) ವಂಚನೆಯ ಪಾಲುದಾರರು"!

SHARE

ಸಂಸದ,

ಕೇರಳ ಮೂಲದ ಉದ್ಯಮಿ ರಾಜೀವ್ ಚಂದ್ರಶೇಖರ್ ಒಡೆತನದ ಕನ್ನಡ ಸುದ್ದಿ ವಾಹಿನಿ ‘ಸುವರ್ಣ ನ್ಯೂಸ್’ಗೆ, ವಂಚನೆ ಆರೋಪ ಎದುರಿಸುತ್ತಿರುವ ರಿಯಲ್ಟರ್ ಸಚಿನ್ ನಾಯಕ್ ಬಹಿರಂಗ ಅಹ್ವಾನ ನೀಡಿ ಸೋಮವಾರಕ್ಕೆ ಮೂರು ದಿನ.

ಬೆಂಗಳೂರಿನಾದ್ಯಂತ ಕಡಿಮೆ ಬೆಲೆಯಲ್ಲಿ ಮನೆ ನಿರ್ಮಿಸಿ ಕೊಡುವುದಾಗಿ ಜನರಿಂದ ಹಣ ಪಡೆದು ವಂಚಿಸಿದ ಆರೋಪದ ಮೇಲೆ ಟಿಜಿಎಸ್, ಡ್ರೀಮ್ಸ್ ಜಿಕೆ ಕಂಪನಿಗಳು ಹಾಗೂ ಅವುಗಳನ್ನು ಪೋಷಿಸುತ್ತಿರುವ ಸಚಿನ್ ನಾಯಕ್ ವಿರುದ್ಧ ದೂರುಗಳು ದಾಖಲಾಗುತ್ತಲೇ ಇವೆ. ಜತೆಗೆ, ಹಣವನ್ನು ವಾಪಾಸ್ ನೀಡಿ ಎಂದು ಜನ ದುಂಬಾಲು ಬಿದ್ದಿದ್ದಾರೆ.

ಕಳೆದ ವಾರ ಸುವರ್ಣ ವಾಹಿನಿ ಸಚಿನ್ ನಾಯಕ್ ವಂಚನೆ ಪ್ರಕರಣದ ಸುದ್ದಿಯನ್ನು ನಿರಂತರ ಪ್ರಸಾರ ಮಾಡುವುದಾಗಿ ಹೇಳಿಕೊಂಡಿತ್ತು. ಇದಾದ ಬೆನ್ನಿಗೇ, ಸಚಿನ್ ನಾಯಕ್ ಕಡೆಯಿಂದ ಸುವರ್ಣ ವಾಹಿನಿಗೆ ಜಾಹೀರಾತು ರೂಪದಲ್ಲಿ ಮತ್ತು ಅದರ ಆಡಳಿತ ಮಂಡಳಿಯ ಸಿಬ್ಬಂದಿಗಳಿಗೆ ‘ಲಂಚದ ರೂಪ’ದಲ್ಲಿ ಸುಮಾರು 18. 5 ಕೋಟಿ ರೂಪಾಯಿ ನೀಡಿದ್ದಾಗಿ ದಾಖಲೆಗಳು ಬಹಿರಂಗಗೊಂಡಿದ್ದವು. ಜತೆಗೆ ಸಾಮಾಜಿಕ ಜಾಲತಾಣದಲ್ಲಿ ವಾಹಿನಿಗೆ ಬಹಿರಂಗ ಚರ್ಚೆಗೆ ಬರುವಂತೆ ಅಹ್ವಾನವನ್ನೂ ನೀಡಲಾಗಿತ್ತು.

KEY EXPOSES:

*ಸಿಇಓ ಶಾಮ್ ಸುಂದರ್ ಕಡೆಯಿಂದ ಬ್ಲ್ಯಾಕ್ ಮೇಲ್

*ಶಾಮ್ ಸುಂದರ್ ಕಂಪನಿಯಲ್ಲಿ ಹಣ ಹೂಡಿಕೆ

* ಸುವರ್ಣ ‘ಪರ್ಫೆಕ್ಟ್ ಹೂಮ್ಸ್’ ಮೇಳಕ್ಕೆ ನಂದೇ ದುಡ್ಡು!

*ಹಣ ಜಾಹೀರಾತಿಗಾಗಿ ಮಾತ್ರವೇ ನೀಡಿದ್ದಲ್ಲ

‘ಸಮಾಚಾರ’ ಜತೆ ಮಾತನಾಡಿದ ಸಚಿನ್ ನಾಯಕ್, “ನಾನು ವಂಚನೆ ಮಾಡಿದ್ದೇನೆ ಎಂದು ಅವರು (ಸುವರ್ಣ ವಾಹಿನಿ) ಹೇಳುವುದಾದರೆ, ಅವರೂ ಕೂಡ ವಂಚನೆಯ ಪಾಲುದಾರರು,” ಎಂದು ಗಂಭೀರ ಆರೋಪವನ್ನು ಮಾಡಿದ್ದಾರೆ. ಸುಮಾರು 45 ನಿಮಿಷಗಳ ದೂರವಾಣಿ ಮಾತುಕತೆಯಲ್ಲಿ ಸಚಿನ್ ನಾಯಕ್ ತಮ್ಮ ಉದ್ಯಮ, ವಂಚನೆ ಪ್ರಕರಣಗಳ ಆರೋಪಗಳು, ಮಾಧ್ಯಮದ ಹೆಸರು ಹೇಳಿಕೊಂಡು ಬ್ಲ್ಯಾಕ್ ಮೇಲ್, ಸುವರ್ಣ ಟಿವಿಯ ಹಿಂದಿನ ಸಿಇಓ ಚಿಂತಾ ಶ್ಯಾಮಸುಂದರ್ ಅವರ ಕಂಪನಿಯಲ್ಲಿ ಹೂಡಿರುವ ಹಣ ಹಾಗೂ ಮಾಧ್ಯಮಗಳಲ್ಲಿನ ಜಾಹೀರಾತುಗಳ ಕುರಿತು ಮಾತನಾಡಿದ್ದಾರೆ. ಇದಕ್ಕೂ ಮೊದಲು ‘ಫ್ರಂಟ್ ಲೈನ್ ಬಿಲ್ಡರ್ಸ್’ ಹೆಸರಿನಲ್ಲಿ ನಡೆಸಿದ ರಿಯಲ್ ಎಸ್ಟೇಟ್ ವಿಚಾರಗಳ ಬಗ್ಗೆ ಮಾತನಾಡಲು ನಿರಾಕರಿಸಿದರು.

ಸಚಿನ್ ನಾಯಕ್ ಮತ್ತು ಆತನ ಕಂಪನಿಗಳಿಂದ ಮೋಸ ಹೋಗಿದ್ದೇವೆ ಎಂದು ಹೇಳುತ್ತಿರುವ ಜನರ ಮಾಹಿತಿಗಾಗಿ ಈ ಫಾಲೋಅಪ್ ವರದಿ.

ಅವರೂ ಪಾಲುದಾರರು:

“ನಾನು ಆಂಧ್ರದಿಂದ ವಾಪಾಸ್ ಬರುತ್ತಿದ್ದೇನೆ. ನನ್ನ ಒಟ್ಟಾರೆ ಉದ್ಯಮದ ಮೌಲ್ಯ 450 ಕೋಟಿ. ಇದರಲ್ಲಿ ಶೇ. 60ರಷ್ಟು ಈಗ ಹೂಡಿಕೆ ರೂಪದಲ್ಲಿ ಖರ್ಚಾಗಿದೆ. ಹಾಗಂತ ನಾನು ಮುಳುಗಿ ಹೋಗಿಲ್ಲ. ಕಡಿಮೆ ಬೆಲೆಯಲ್ಲಿ ಮನೆ ಕಟ್ಟಿಸಿ ಕೊಡುವ ಕನಸು ಇಟ್ಟುಕೊಂಡು ಈ ಉದ್ಯಮಕ್ಕೆ ಕಾಲಿಟ್ಟವನು ನಾನು. ಆದರೆ ಸಮಯ ಕೈ ಕೊಟ್ಟಿತು. ಒಟ್ಟಾರೆ ರಿಯಲ್ ಎಸ್ಟೇಟ್ ಉದ್ಯಮವೇ ಈಗ ಹೊಡೆತ ತಿನ್ನುತ್ತಿದೆ. ಈ ಎಲ್ಲಾ ಸಮಸ್ಯೆಗಳಿಂದ ಹೊರಬರಲು ದಾರಿ ಹುಡುಕುತ್ತಿದ್ದೇನೆ. ಹೀಗಾಗಿ ನಾನು ಹೂಡಿಕೆ ವಿಚಾರದಲ್ಲಿ ಮಾತುಕತೆ ನಡೆಸಲು ಆಂಧ್ರಕ್ಕೂ ಹೋಗಿದ್ದೆ,” ಎಂದು ಮಾತು ಶುರುಮಾಡಿದರು ಸಚಿನ್ ನಾಯಕ್.

ಹೀಗೆ, ಫಾರ್ಮಲ್ ಆಗಿರುವ ಮಾಹಿತಿ ಜತೆ ಮಾತು ಶುರುಮಾಡಿದ ಸಚಿನ್ ನಾಯಕ್, ಸುವರ್ಣ ಸಂಸ್ಥೆಯ ಹಿಂದಿನ ಸಿಇಓ ಶ್ಯಾಮ್ ಸುಂದರ್ ಮತ್ತು ಕ್ರೈಂ ಬ್ಯುರೋದ ಶಂಕರ್ ಸೇರಿಕೊಂಡು ತನ್ನನ್ನು ಬ್ಲ್ಯಾಕ್ ಮೇಲ್ ಮಾಡಿದ್ದಾಗಿ ಹೇಳಿಕೊಂಡರು. ಜತೆಗೆ, ಅವರ ಕಂಪನಿಯಲ್ಲಿ ಸುಮಾರು 4 ರಿಂದ 6 ಕೋಟಿ ಹೂಡಿಕೆ ಮಾಡಿರುವುದಾಗಿ ಮಾಹಿತಿ ನೀಡಿದರು. ಈ ವೇಳೆ, ಸಚಿನ್ ನಾಯಕ್ ಹೆಸರಿಸಿದ ಎನ್’ಜೆ ಅಸೋಸಿಯೇಟ್ಸ್ ಎಂಬ ಕಂಪನಿಯ ಕುರಿತು ‘ಸಮಾಚಾರ’ ಪರಿಶೀಲಿಸಿತಾದರೂ ಅಗತ್ಯ ಪುರಾವೆಗಳು ಸಿಗಲಿಲ್ಲ.

“ನಾನು ಸುವರ್ಣ ವಾಹಿನಿಯೊಂದಕ್ಕೆ ಸುಮಾರು 18. 5 ಕೋಟಿ ಹಣ ನೀಡಿದ್ದೇನೆ. ಇದಿಷ್ಟು ಜಾಹೀರಾತಿಗಾಗಿ ಮಾತ್ರವೇ ನೀಡಿದ ಹಣ ಅಲ್ಲ. ಮೊದಲು ಅವರು ಬ್ಲ್ಯಾಕ್ ಮೇಲ್ ಮಾಡಿದ್ದರಿಂದ ಅನಿವಾರ್ಯವಾಗಿ ಹಣ ನೀಡಿದೆ. ನಂತರ ನಮ್ಮ ನಡುವಿನ ಸಂಬಂಧ ಸರಿ ಹೋಯಿತು. ಕೊನೆಗೆ, ಅವರು ವಾಹಿನಿ ಕಡೆಯಿಂದ ರಿಯಲ್ ಎಸ್ಟೇಟ್ ಎಕ್ಸ್ಪೋ (ಪರ್ಫೆಕ್ಟ್ ಹೋಮ್ಸ್) ನಡೆಸಿದರು. ಅದರಲ್ಲಿ ಹಲವು ರಿಯಲ್ ಎಸ್ಟೇಟ್ ಕಂಪನಿಗಳು ಸ್ಟಾಲ್ ಹಾಕಿಕೊಂಡಿದ್ದವು. ಆದರೆ, ಅಷ್ಟೂ ದುಡ್ಡನ್ನು ಕೊಟ್ಟಿದ್ದು ನಾನು. ಈಗ ಅವರು ನಾನು ವಂಚನೆ ಮಾಡುತ್ತಿದ್ದೇನೆ ಎಂದು ಸುದ್ದಿ ಪ್ರಸಾರ ಮಾಡುತ್ತಿದ್ದಾರೆ. ನಾನು ವಂಚನೆ ಮಾಡಿದ್ದೇನೆ ಎನ್ನುವುದಾದರೆ, ಅವರೂ ಕೂಡ ವಂಚನೆಯ ಪಾಲುದಾರರು. ಈಗ ನನ್ನ ನಂಬಿ ಹಣ ಹಾಕಿದ ಜನ ದುಡ್ಡು ವಾಪಾಸ್ ಕೊಡುವಂತೆ ಕೇಳುತ್ತಿದ್ದಾರೆ. ಸುವರ್ಣ ವಾಹಿನಿ ಕೂಡ ದುಡ್ಡು ವಾಪಾಸ್ ಕೊಡಲಿ. ಅವರಿಗೆ ನೈತಿಕತೆ ಇಲ್ಲವೇ?.” ಎಂಬ ಗಂಭೀರ ಮಾಹಿತಿಯನ್ನು ಸಚಿನ್ ನಾಯಕ್ ಹೊರಗೆಡುವುತ್ತಾರೆ. ಜತೆಗೆ, ತಮ್ಮ ಬಳಿ ಆಡಿಯೋ ರೆಕಾರ್ಡಿಂಗ್ ಸಾಕ್ಷಿಗಳಿವೆ ಎಂದು ತಿಳಿಸಿದರಾದರೂ, ಅದನ್ನು ಸಾರ್ವಜನಿಕವಾಗಿ ಇಡಲು ಮುಂದಾಗಲಿಲ್ಲ.

ಪ್ರತಿಕ್ರಿಯೆಗೆ ಅಲಭ್ಯ:

ಹೀಗೆ ವಂಚನೆ ಆರೋಪವನ್ನು ಎದುರಿಸುತ್ತಿರುವ ಉದ್ಯಮಿ ನೇರವಾದ ಆರೋಪ ಮಾಡಿದ ಕುರಿತು ಪ್ರತಿಕ್ರಿಯೆಗಾಗಿ ಕಳೆದ ಮೂರು ದಿನಗಳಿಂದ ಸುವರ್ಣ ವಾಹಿನಿಯ ಹಿಂದಿನ ಸಿಇಓ ಚಿಂತಾ ಶ್ಯಾಮಸುಂದರ್ ಅವರನ್ನು ‘ಸಮಾಚಾರ’ ಸಂಪರ್ಕಿಸುವ ಪ್ರಯತ್ನ ಮಾಡಿತಾದರೂ, ಲಭ್ಯರಾಗಲಿಲ್ಲ. ಕಳುಹಿಸಿದ ಎಸ್ಎಂಎಸ್ಗೂ ಈವರೆಗೆ ಪ್ರತಿಕ್ರಿಯೆ ಬರಲಿಲ್ಲ.

“ಸಚಿನ್ ನಾಯಕ್ ಆರೋಪ ಮಾಡುತ್ತಿರುವ ನಮ್ಮ ಸಂಸ್ಥೆಯ ಉದ್ಯೋಗಿಗಳು ಈಗ ಬೇರೆ ವಾಹಿನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ನಾವು ಏನನ್ನೂ ಹೇಳಲು ಸಾಧ್ಯವಿಲ್ಲ,” ಎಂದು ಸುವರ್ಣದ ಸಂಪಾದಕೀಯ ವಿಭಾಗದ ಮೂಲಗಳು ಹೇಳುತ್ತವೆ. ಜತೆಗೆ, ಸಚಿನ್ ನಾಯಕ್ ಕುರಿತು ಸುದ್ದಿ ಪ್ರಸಾರ ಮಾಡುವ ಕುರಿತು ವಾಹಿನಿಯ ಒಳಗೇ ಗೊಂದಲ ಮೂಡಿದೆ, ಅಂತೆ.

ವಂಚನೆಯ ವಿಷಚಕ್ರ: 

ಬೆಂಗಳೂರಿನಾದ್ಯಂತ ಡ್ರೀಮ್ಸ್ ಜಿಕೆ ಮತ್ತು ಟಿಜಿಎಸ್ ಕನ್ಸ್ಸ್ಟ್ರಕ್ಷನ್ ಕಂಪನಿಗಳಿಂದ ವಂಚನೆ ಒಳಗಾದ ಸಾವಿರಾರು ಜನ ದೂರು ದಾಖಲಿಸುತ್ತಿದ್ದಾರೆ. ತಾವು ಕಷ್ಟ ಪಟ್ಟು ದುಡಿದ ಹಣ ಇವತ್ತಲ್ಲ ನಾಳೆ ವಾಪಾಸ್ ಬರುತ್ತೆ ಎಂಬ ನಂಬಿಕೆಯಲ್ಲಿದ್ದಾರೆ. ಹೀಗಿರುವಾಗಲೇ ವಂಚನೆ ಆರೋಪದ ಮೇಲೆ ಜೈಲು ಪಾಲಾಗಿ ವಾಪಾಸ್ ಬಂದಿರುವ ಸಚಿನ್ ನಾಯಕ್ ವಂಚನೆ ಪಾಲುದಾರರ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ. ಹಾಗೆಯೇ ನೈತಿಕತೆ ಹೊಣೆಗಾರಿಕೆಯನ್ನು ಮಾಧ್ಯಮ ಸಂಸ್ಥೆಗೂ ವರ್ಗಾಯಿಸಿದ್ದಾರೆ. ವಿಷಚಕ್ರದಂತಹ ಈ ವಂಚನೆ ಪ್ರಕರಣಕ್ಕೆ ತಾರ್ಕಿಕ ಅಂತ್ಯವನ್ನು ನೀಡಬೇಕಾದ ಸರಕಾರ ಮಾತ್ರ ಜಾಣಮೌನ ವಹಿಸಿದೆ.