Home Media 2-0 ‘ರಾಜ್ ಲೀಲಾ ವಿನೋದ’: ಶಿವರಾಜ್ ಕುಮಾರ್ ಮುಂದೆ ಪತ್ರಕರ್ತೆ ಪ್ರಶ್ನೆ ಮುಂದಿಟ್ಟಾಗ…

‘ರಾಜ್ ಲೀಲಾ ವಿನೋದ’: ಶಿವರಾಜ್ ಕುಮಾರ್ ಮುಂದೆ ಪತ್ರಕರ್ತೆ ಪ್ರಶ್ನೆ ಮುಂದಿಟ್ಟಾಗ…

SHARE

ಇತ್ತೀಚೆಗೆ

ಬಿಡುಗಡೆಗೊಂಡ ನಟ ರಾಜ್ ಕುಮಾರ್ ಹಾಗೂ ನಟಿ ಲೀಲಾವತಿ ಅವರ ವೈಯಕ್ತಿಕ ಸಂಬಂಧದ ಮಾಹಿತಿಗಳನ್ನೊಳಗೊಂಡ ಪುಸ್ತಕದ ಕುರಿತು ನಟ ಶಿವರಾಜ್ ಕುಮಾರ್ ಅವರಿಗೆ ಪತ್ರಕರ್ತೆಯೊಬ್ಬರು ಪ್ರಶ್ನೆ ಕೇಳಿದ್ದು ಚರ್ಚೆಗೆ ಗ್ರಾಸವಾಗಿದೆ.

ಸೋಮವಾರ ಸಂಜೆ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಶಿವರಾಜ್ ಕುಮಾರ್ ಅಭಿನಯದ ‘ಶ್ರೀಕಂಠ’ ಸಿನೆಮಾದ ಪತ್ರಿಕಾಗೋಷ್ಠಿ ಕರೆಯಲಾಗಿತ್ತು. ಗೋಷ್ಠಿಯ ನಂತರ ‘ಸಿನಿ ಅಡ್ಡ’ ವೆಬ್ ತಾಣದ ಪತ್ರಕರ್ತೆ ಬಿ. ಸಿ. ಭಾನುಮತಿ, ಶಿವರಾಜ್ ಕುಮಾರ್ ಸಂದರ್ಶನ ನಡೆಸಿದ್ದಾರೆ. ಈ ಸಮಯದಲ್ಲಿ ಪತ್ರಕರ್ತೆ ನಟ ಶಿವರಾಜ್ ಕುಮಾರ್ ಮುಂದೆ, ರವಿ ಬೆಳೆಗೆರೆ ಹೊರತಂದ ‘ರಾಜ್ ಲೀಲಾ ವಿನೋದ’ ಪುಸ್ತಕದ ಕುರಿತು ಪ್ರಶ್ನೆ ಮುಂದಿಟ್ಟಿದ್ದಾರೆ. ಅದು, ಗಾಂಧಿನಗರದ ಸಿನೆಮಾ ಮಂದಿಯ ಕೆಂಗಣ್ಣಿಗೆ ಗುರಿಯಾಗಿದೆ. ಸಾರ್ವಜನಿಕವಾಗಿ ಹಿರಿಯ ನಟನಿಗೆ ವೈಯಕ್ತಿಕ ಪ್ರಶ್ನೆ ಕೇಳಿದ್ದೇ ತಪ್ಪು ಎಂದು ದೂರುತ್ತಿದ್ದಾರೆ.

ಮೇಲ್ನೋಟಕ್ಕೆ ಇದೊಂದು ಸಾಮಾನ್ಯ ಘಟನೆಯಂತೆ ಕಂಡು ಬಂದರೂ, ಆಳದಲ್ಲಿ ಇವತ್ತು ಕರ್ನಾಟಕದ ಸಿನೆಮಾ ಪತ್ರಿಕೋದ್ಯಮದೊಳಗಿನ ವೈರುಧ್ಯಗಳನ್ನು ಸಾರಿ ಹೇಳುತ್ತಿದೆ. ಈ ಹಿಂದೆ ‘ಸಮಾಚಾರ’ ಸಿನೆಮಾಗಳ ಪಬ್ಲಿಸಿಟಿಗಾಗಿ ಟೈಮ್ಸ್ ಗ್ರೂಪ್ ತರಹದ ಕಾರ್ಪೊರೇಟ್ ಮೀಡಿಯಾಗಳು ಸೃಷ್ಟಿಸಿಕೊಂಡಿರುವ ‘ಪ್ಯಾಕೇಜ್’ ಸಂಸ್ಕೃತಿಯ ಬಗ್ಗೆ ಬರೆದಿತ್ತು. ಇದು ಅದರ ಮುಂದುವರಿದ ಭಾಗ.

ನಡೆದಿದ್ದೇನು?:

ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಪತ್ರಿಕಾಗೋಷ್ಠಿ ಮುಗಿಸಿ ಹೊರಬಂದ ಶಿವರಾಜ್ ಕುಮಾರ್ ಅವರನ್ನು ಪತ್ರಕರ್ತೆ ಭಾನುಮತಿ ಮಾತುಕತೆಗೆ ನಿಲ್ಲಿಸಿಕೊಂಡಿದ್ದಾರೆ. ಸಿನೆಮಾ ಕುರಿತು ಪ್ರಶ್ನೆಗಳು ಮುಗಿದ ನಂತರ, “ರಾಜ್ ಕುಮಾರ್ ಸಿನೆಮಾ ನೋಡಿಕೊಂಡು ಬೆಳೆದವಳು ನಾನು. ವಿತ್ ಆಲ್ ರೆಸ್ಪೆಕ್ಟ್, ಇತ್ತೀಚೆಗೆ ಬಂದ ರಾಜ್ ಲೀಲಾ ವಿನೋದ ಪುಸ್ತಕದ ಕುರಿತು ಏನು ಹೇಳುತ್ತೀರಿ?” ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಅಷ್ಟೆ ಸಹಜವಾಗಿ, “ಐ ಡೋಂಟ್ ನೋ. ಅದರ ಬಗ್ಗೆ ಗೊತ್ತಿದ್ರೆ ಮಾತನಾಡಬಹುದು. ಗೊತ್ತಿಲ್ಲದೆ ಮಾತನಾಡಬಾರದು,” ಎಂದು ಶಿವರಾಜ್ ಕುಮಾರ್ ಪ್ರತಿಕ್ರಿಯಿಸಿದ್ದಾರೆ. ಈ ಸಮಯದಲ್ಲಿ ಸ್ಥಳದಲ್ಲಿದ್ದವರು, “ಮೇಡಂ, ಇಂತಹ ಪ್ರಶ್ನೆ ಕೇಳಬೇಡಿ,” ಎಂದು ತಡೆಯಲು ಮುಂದಾಗಿದ್ದಾರೆ. ಆಗ ಮಧ್ಯ ಪ್ರವೇಶ ಮಾಡಿದ ಶಿವರಾಜ್ ಕುಮಾರ್, ಪ್ರಶ್ನೆ ಕೇಳಲಿ, ನಾನು ಡೈರೆಕ್ಟ್ ಆಗಿ ಆನ್ಸರ್ ಮಾಡುತ್ತೀನಿ ಎಂಬರ್ಥದಲ್ಲಿ ಮಾತು ಮುಗಿಸಿ ಹೊರಟು ಹೋಗಿದ್ದಾರೆ.

ಆ ವಿಡಿಯೋವನ್ನು ಭಾನುಮತಿ ಫೇಸ್ಬುಕ್ನಲ್ಲಿ ಹಂಚಿಕೊಂಡಿದ್ದಾರೆ

.

ಅಸಂಪ್ರದಾಯಿಕ:

ಪತ್ರಕರ್ತರು ಇಂತಹ ಪ್ರಶ್ನೆಗಳನ್ನು ಕೇಳುವುದು ಅಸಾಂಪ್ರದಾಯಿಕ ಎಂದು ಗಾಂಧಿನಗರದ ಸಿನೆಮಾ ಮಂದಿ ಹಾಗೂ ಸಾರ್ವಜನಿಕ ಸಂಪರ್ಕಾಧಿಕಾರಿಗಳು ತೀರ್ಮಾನಿಸಿದಂತಿದೆ. ಹೀಗಾಗಿ, ನಂತರ ಪತ್ರಕರ್ತೆಗೆ ಕರೆ ಮಾಡಿದ ಸಿನೆಮಾ ನಿರ್ದೇಶಕ ಮಂಜು ಸ್ವರಾಜ್, “ನೀವು ಕರೆಯದೇ ಪ್ರೆಸ್ ಮೀಟ್ಗೆ ಬಂದಿದ್ದೀರಿ. ನನ್ನ ಹೆಸರನ್ನು ದುರುಪಯೋಗ ಪಡಿಸಿಕೊಂಡಿದ್ದೀರಿ,” ಎಂದು ದಬಾಯಿಸಿದ್ದಾರೆ.

“ನಾನು ಹಿಂದಿನ ದಿನ ನಿರ್ದೇಶಕ ಮಂಜುಗೆ ಕರೆ ಮಾಡಿದ್ದೆ. ಅವರು ಪತ್ರಿಕಾಗೋಷ್ಠಿ ಇದೆ, ಬನ್ನಿ ಎಂದಿದ್ದರು. ನಾನು ಹೋದಾಗ ಒಂದಷ್ಟು ಪತ್ರಕರ್ತರು ಇದ್ದರು. ಒಬ್ಬರು ಎಂ. ಜಿ. ರಸ್ತೆಯಲ್ಲಿ ಹೊಸವರ್ಷಾಚರಣೆ ವೇಳೆ ನಡೆದ ಘಟನೆ ಬಗ್ಗೆ ಶಿವರಾಜ್ ಕುಮಾರ್ ಅವರನ್ನು ಪ್ರಶ್ನಿಸಿದರು. ನಂತರ ಗೋಷ್ಠಿ ಮುಗಿದ ಮೇಲೆ ನಾನು ಈ ಪ್ರಶ್ನೆ ಕೇಳಿದೆ. ಅದಕ್ಕೆ ಶಿವರಾಜ್ ಕುಮಾರ್ ನೇರವಾಗಿಯೇ ಉತ್ತರ ನೀಡಿದರು. ಆದರೆ ಅವರು ಹೋದ ನಂತರ ಸಿನೆಮಾ ನಿರ್ಮಾಪಕ ಮನುಗೌಡ, ಶಿವಣ್ಣನ ಪವರ್ ಏನು ಅಂತ ನಿಮಗೆ ಗೊತ್ತಿಲ್ಲ. ಇಲ್ಲಿಂದ ಬೇಗ ಜಾಗ ಖಾಲಿ ಮಾಡಿ ಎಂದರು,” ಎಂದು ಭಾನುಮತಿ ನಡೆದ ಘಟನೆಯ ಹಿನ್ನೆಲೆಯನ್ನು ವಿವರಿಸಿದರು.

ಈ ಕುರಿತು ಸಿನೆಮಾ ನಿರ್ದೇಶಕ ಮಂಜು ಅವರನ್ನು ‘ಸಮಾಚಾರ’ ಸಂಪರ್ಕಿಸಿದಾಗ, “ಪತ್ರಕರ್ತರು ಇಂತದ್ದೇ ಪ್ರಶ್ನೆ ಕೇಳಬೇಕು ಎಂದು ನಾವು ಕರಾರು ವಿಧಿಸುತ್ತಿಲ್ಲ. ಆದರೆ ನಮ್ಮ ಕಾರ್ಯಕ್ರಮಕ್ಕೆ ಬಂದು ವೈಯುಕ್ತಿಕ ವಿಚಾರ ಕೇಳಿದ್ದು ಸರಿಯಲ್ಲ. ಜತೆಗೆ ನನ್ನ ಹೆಸರನ್ನು ಉಪಯೋಗಿಸಿಕೊಂಡ ಬಗ್ಗೆ ನನಗೆ ತಕರಾರು ಇತ್ತು. ಅದನ್ನು ಅವರ ಗಮನಕ್ಕೆ ತಂದೆ ಅಷ್ಟೆ,” ಎಂದರು.

“ಪ್ರಶ್ನೆ ಕೇಳುವುದು ಪತ್ರಕರ್ತರ ಹಕ್ಕು. ಅವರು ಕೇಳಿದ್ದಾರೆ. ಶಿವಣ್ಣ ಉತ್ತರ ನೀಡಿದ್ದಾರೆ. ಯಾರೋ ಸ್ಥಳದಲ್ಲಿದ್ದ ಅಭಿಮಾನಿಗಳು ವ್ಯತಿರಿಕ್ತವಾಗಿ ಪ್ರಶ್ನೆ ಮಾಡಿದ್ದಾರೆ. ಅದನ್ನು ದೊಡ್ಡದು ಮಾಡಬಾರದು. ಸಾರ್ವಜನಿಕ ಕಾರ್ಯಕ್ರಮದಲ್ಲಿ ವೈಯುಕ್ತಿಕ ಪ್ರಶ್ನೆಯನ್ನು ಕೇಳಿದ್ದು ಸರಿಯಲ್ಲ ಎಂಬುದು ನಮ್ಮ ಭಾವನೆ,” ಎನ್ನುತ್ತಾರೆ ಶ್ರೀಕಂಠ ಸಿನೆಮಾಗೆ ಪ್ರಚಾರ ಕೊಡಿಸುತ್ತಿರುವ ಪಿಆರ್ಒ ನಾಗೇಂದ್ರ.

ಸಮಸ್ಯೆ ಏನು?:

ಗಾಂಧಿನಗರದಲ್ಲಿ ಪ್ರತಿ ಸಿನೆಮಾ ಬಿಡುಗಡೆಗೂ ಮುನ್ನ ಪ್ರಚಾರ ಕಾರ್ಯಕ್ಕಾಗಿ ಪಿಆರ್ಓಗಳನ್ನು ನೇಮಿಸಿಕೊಳ್ಳಲಾಗುತ್ತದೆ. ಅವರೇ ಮಾಧ್ಯಮ ಪ್ರತಿನಿಧಿಗಳಿಗೆ ಆಡಿಯೋ ಬಿಡುಗಡೆಯಿಂದ ಹಿಡಿದು ಸಿನೆಮಾ ವಿಜಯೋತ್ಸವದವರೆಗೆ ಅಹ್ವಾನ ಕಳಿಸುತ್ತಾರೆ. ಅವರು ಕಳಿಸಿದವರು ಮಾತ್ರವೇ ಬರಬೇಕು ಎಂಬ ನಿಯಮವನ್ನೂ ಅವರೇ ಮಾಡಿಕೊಂಡಿದ್ದಾರೆ. “ಇದು ಇವತ್ತಿನ ಅನಿವಾರ್ಯ. ಬಹುತೇಕ ಸಿನೆಮಾ ಪತ್ರಕರ್ತರಿಗೆ ಜ್ಞಾನವೇ ಇಲ್ಲ. ಬಾಯಿಗೆ ಬಂದಂಗೆ ಪ್ರಶ್ನೆಗಳನ್ನು ಕೇಳಿ ಬಿಡುತ್ತಾರೆ. ಇದರಿಂದಾಗಿ ಇಂತವರೇ ಬರಬೇಕು ಎಂದು ನಿಯಮ ಹಾಕಿದ್ದೇವೆ,” ಎನ್ನುತ್ತಾರೆ ಹಿರಿಯ ಸಿನೆಮಾ ಪಿಆರ್ಒ ವಿಜಯ ಕುಮಾರ್.

“ಸಿನೆಮಾ ಪಿಆರ್ಒಗಳು ಕೂಡ ಸಮಸ್ಯೆಯಲ್ಲಿದ್ದಾರೆ. ಅವರಿಗೆ ಸಿನೆಮಾ ಮಂದಿಯೇ ನಿಯಮ ಹಾಕಿಕೊಡುತ್ತಾರೆ. ಒಂದು ವೇಳೆ ಪತ್ರಿಕಾಗೋಷ್ಠಿಯಲ್ಲಿ ಏನಾದರೂ ಗೊಂದಲವಾದರೆ ಮುಂದಿನ ಸಿನೆಮಾವನ್ನು ಬೇರೆಯವರಿಗೆ ವಹಿಸುತ್ತಾರೆ. ಹೀಗಾಗಿ ಅವರು ಮುನ್ನೆಚ್ಚರಿಕೆ ತೆಗೆದುಕೊಳ್ಳುತ್ತಾರೆ. ಸಮಸ್ಯೆ ಇರುವುದು, ಬರೆಯುವ ಪತ್ರಕರ್ತರು ಪ್ರಶ್ನೆ ಕೇಳುವುದಿಲ್ಲ. ಪ್ರಶ್ನೆ ಕೇಳುವವವರು ಬರೆಯುವುದಿಲ್ಲ. ಹೀಗಾಗಿ ಸಿನೆಮಾ ಪತ್ರಕರ್ತರ ಬಗ್ಗೆ ಗೌರವವೇ ಇಲ್ಲ,” ಎನ್ನುತ್ತಾರೆ ಸಿನೆಮಾ ವೆಬ್ ಪೋರ್ಟಲ್ ಸಂಪಾದಕರೊಬ್ಬರು.

ಈ ಗೊಂದಲಗಳು ಏನೇ ಇರಲಿ, ನಟ ಶಿವರಾಜ್ ಕುಮಾರ್ ಬದುಕಿನಲ್ಲಿ ನಡೆದ ಇತ್ತೀಚಿನ ಮಹತ್ವದ ಬೆಳವಣಿಗೆಗಳ ಪೈಕಿ ‘ರಾಜ್ ಲೀಲಾ ವಿನೋದ’ ಪುಸ್ತಕ ಬಿಡುಗಡೆಯೂ ಒಂದು. ಅದರ ಬಗ್ಗೆ ಈವರೆಗೆ ಎಲ್ಲಯೂ ರಾಜ್ ಕುಟುಂಬದ ಕಡೆಯಿಂದ ಅಧಿಕೃತ ಹೇಳಿಕೆಗಳು ಹೊರಬಂದಿರಲಿಲ್ಲ. ಇದೀಗ ಪತ್ರಿಕಾಗೋ‍ಷ್ಠಿ ನೆಪದಲ್ಲಾದರೂ ಸಿನೆಮಾ ಪತ್ರಕರ್ತೆಯೊಬ್ಬರು ಪ್ರಶ್ನೆ ಕೇಳಿ ಉತ್ತರವನ್ನು ಸಾರ್ವಜನಿಕರಿಗೆ ತಲುಪಿಸಿದ್ದಾರೆ.