Home news-for-4-1-display ಉರಿ ದಾಳಿ ಬೆನ್ನಲ್ಲೇ ಪ್ರತೀಕಾರದ ಮಾತು: ಯುದ್ಧದಾಹಿ ಸನ್ನಿವೇಶ ಸೃಷ್ಟಿಗೆ ಕೆಲವೇ ಹೆಜ್ಜೆಗಳು ಬಾಕಿ!

ಉರಿ ದಾಳಿ ಬೆನ್ನಲ್ಲೇ ಪ್ರತೀಕಾರದ ಮಾತು: ಯುದ್ಧದಾಹಿ ಸನ್ನಿವೇಶ ಸೃಷ್ಟಿಗೆ ಕೆಲವೇ ಹೆಜ್ಜೆಗಳು ಬಾಕಿ!

SHARE

ಕಾಶ್ಮೀರ

ಕಣಿವೆ ರಾಜ್ಯದಲ್ಲಿ ಭಾನುವಾರ ಭಾರತೀಯ ಸೇನೆ ಮೇಲೆ ನಡೆದ ದಾಳಿ ಈಗ ಎರಡು ನೆರೆಯ ರಾಷ್ಟ್ರಗಳ ಸಂಬಂಧದ ನಡುವೆ ಬಿಕ್ಕಟ್ಟನ್ನು ಸೃಷ್ಟಿಸಿದೆ.

ಸೋಮವಾರ ಬೆಳಗ್ಗೆಯಿಂದಲೇ ಪ್ರಧಾನಿ ಮೋದಿ ಸಹಿತ ಸರಕಾರ ಹಿರಿಯ ಸಚಿವರು ಹಾಗೂ ಸೇನೆಯ ಹಿರಿಯ ಅಧಿಕಾರಗಳ ಮಟ್ಟದಲ್ಲಿ ಸಭೆಗಳು ನಡೆಯುತ್ತಿವೆ. ಈಗಾಗಲೇ, ‘ದಾಳಿಗೆ ಪಾಕಿಸ್ತಾನ ಕಾರಣ’ ಎಂಬ ನಂಬಿಕೆಯ ಆಧಾರದ ಮೇಲೆ ಭಾರತದ ಮುಂದಿನ ನಡೆ ಏನಿರಬೇಕು ಎಂಬ ಬಗ್ಗೆ ಚರ್ಚೆಗಳು ಆರಂಭವಾಗಿವೆ. ಕರ್ನಾಟಕವನ್ನು ಹೊರತುಪಡಿಸಿದರೆ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಗಮನ ಈಗ ಕಾಶ್ಮೀರದತ್ತ ನೆಟ್ಟಿದೆ.

ಉರಿಯಲ್ಲಿ ನಡೆದ ದಾಳಿ ಕಳೆದ 2 ದಶಕಗಳ ಅಂತರದಲ್ಲಿ ಸೇನೆಯ ಮೇಲೆ ನಡೆದ ಭಯಾನಕ ದಾಳಿಯಾಗಿದೆ. ಈ ಹಿನ್ನೆಲೆಯಲ್ಲಿ ಅಂದು ನಡೆದ ಘಟನಾವಳಿಗಳ ಪುನರಾವರ್ತನೆಯೊಂದು ಇಲ್ಲಿಯೂ ಢಾಳಾಗಿ ಕಾಣಿಸುತ್ತಿದೆ.

ಅವತ್ತೊಂದು ದಾಳಿ:

ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧದ ವಾತಾವರಣ ಸೃಷ್ಟಿಯಾಗುತ್ತಿರುವುದು ಇದು ಮೊದಲೇನೂ ಅಲ್ಲ. 1998ರಲ್ಲಿ ಎರಡೂ ದೇಶಗಳು ತಮ್ಮಲ್ಲಿರುವ ಅಣು ಬಾಂಬ್ ಪರೀಕ್ಷೆ ನಡೆಸಿ ಜಗತ್ತಿನ ಗಮನ ಸೆಳೆದಿದ್ದವು. ಇದಾದ ಮಾರನೇ ವರ್ಷವೇ, 1999ರಂದು ಕಾರ್ಗಿಲ್ ಯುದ್ಧ ನಡೆದು ಎರಡೂ ಕಡೆಯ ಯೋಧರ ಹೆಣ ಬಿದ್ದಿತ್ತು.

ಅದಾಗಿ, ಮೂರು ವರ್ಷಗಳ ನಂತರ 2001- 02ರಲ್ಲಿಯೂ ಅಂತಹುದ್ದೇ ವಾತಾವರಣ ನಿರ್ಮಾಣವಾಗಿತ್ತು.  ಅವತ್ತೂ ಭಾರತ ಮತ್ತು ಪಾಕಿಸ್ತಾನದ ನಡುವೆ ಬಿಕ್ಕಟ್ಟು ಸೃಷ್ಟಿಯಾಗಿತ್ತು. ಎರಡೂ ದೇಶಗಳ ತಮ್ಮ ಕಾಶ್ಮೀರ ಗಡಿ ಪ್ರದೇಶದಲ್ಲಿ ಸೇನೆಯನ್ನು ಜಮಾವಣೆ ಮಾಡಿದ್ದವು. ಈ ಸಮಯದಲ್ಲಿಯೇ 2001ರ ಡಿ. 13ರಂದು ದೇಶದ ಪಾರ್ಲಿಮೆಂಟ್ ಭವನದ ಮೇಲೆ ದಾಳಿ ನಡೆದಿತ್ತು. ಐವರು ದಾಳಿಕೋರರ ಜತೆಗೆ ಒಟ್ಟು 13 ಯೋಧರು ಸಾವನ್ನಪ್ಪಿದ್ದರು. ದಾಳಿಯ ಹಿಂದೆ ಪಾಕಿಸ್ತಾನದ ಕೈವಾಡ ಇದೆ ಎಂಬುದು ಭಾರತದ ಆಪಾದನೆಯಾಗಿತ್ತು. ಆದರೆ, ಪಾಕಿಸ್ತಾನ ಈ ಆಪಾದನೆಯನ್ನು ಎಲ್ಲಾ ಅಂತರಾಷ್ಟ್ರೀಯ ವೇದಿಕೆಗಳಲ್ಲಿ ಇವತ್ತಿಗೂ ವಿರೋಧಿಸಿಕೊಂಡೇ ಬರುತ್ತಿದೆ. ಯುದ್ಧದ ಸನ್ನಿವೇಶ ನಿರ್ಮಾಣವಾಗಿ ಮರೆಯಾಗಿತ್ತು.

ಇವತ್ತು, 2016ರಲ್ಲಿ ಕಾಶ್ಮೀರದಲ್ಲಿ ಜನ ಮತ್ತು ಸೇನೆ ವಿರುದ್ಧ ಸಂಘರ್ಷ ಜಾರಿಯಲ್ಲಿದ್ದಾಗಲೇ, ಉತ್ತರ ಕಾಶ್ಮೀರದ ಉರಿ ಪ್ರದೇಶದಲ್ಲಿದ್ದ ಸೇನಾ ನೆಲೆಯ ಮೇಲೆ ದಾಳಿ ನಡೆದಿದೆ. ಇದು ಸಹಜವಾಗಿಯೇ ಭಾರತೀಯ ಸೇನೆಯ ಕೋಪಕ್ಕೆ ಕಾರಣವಾಗಿದೆ. ದಾಳಿ ನಡೆದ ಕೆಲವೇ ಗಂಟೆಗಳ ಅಂತರದಲ್ಲಿ ಪ್ರಧಾನಿ ಮೋದಿ ಪಾಕಿಸ್ತಾನದ ಹೆಸರು ಉಲ್ಲೇಖಿಸದೇ ನೀಡಿದ ಪ್ರತೀಕಾರ ಹೇಳಿಕೆಯನ್ನು ‘ಬಿಬಿಸಿ’ ವಿಶ್ಲೇಷಣೆಗೆ ಒಳಪಡಿಸಿದೆ. ‘ಭಾರತ ಸೇನೆಗೆ ಪಾಕಿಸ್ತಾನ ಸೇನೆ ವಿರುದ್ಧ ದಾಳಿ ನಡೆಸಲು ಇದು (ಉರಿ ದಾಳಿ) ಪೂರಕ ವಾತಾವರಣ ಸೃಷ್ಟಿಸಿದೆ’ ಎಂದು ವರದಿ ಅಭಿಪ್ರಾಯಪಟ್ಟಿದೆ.

ಪ್ರತಿಕ್ರಿಯೆ ತಣ್ಣಗಿರಲಿ:

ಇದಕ್ಕೆ ವ್ಯತಿರಿಕ್ತವಾಗಿ, ಸೇನೆಯ ಮೇಲೆ ನಡೆದ ದಾಳಿಗೆ ಭಾರತದ ಪ್ರತಿಕ್ರಿಯೆ ಏನಾಗಿರಬೇಕು ಎಂಬ ಬಗ್ಗೆ ಚರ್ಚೆಗಳು ಶುರುವಾಗಿವೆ. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಹಿನ್ನೆಲೆಯಲ್ಲಿ ಇದೊಂದು ವ್ಯವಸ್ಥಿತ ದಾಳಿ ನಡೆದಿದೆ. ಹೀಗಾಗಿ, ‘ಅಂತರಾಷ್ಟ್ರೀಯ ವೇದಿಕೆಯಲ್ಲಿ ಭಾರತ ಎಲ್ಲರೂ ಒಪ್ಪುವಂತಹ ನಿಲುವು ತೆಗೆದುಕೊಳ್ಳುವುದು ಸೂಕ್ತ’ ಎಂದು ‘ದಿ ಕ್ವಿಂಟ್’ಗೆ ಬರದ ಲೇಖನದಲ್ಲಿ ವಿವೇಕ್ ಖಟ್ಜು ಅಭಿಪ್ರಾಯಪಟ್ಟಿದ್ದಾರೆ. ಭಾರತ ಮೂಲದ ‘ದಿ ವೈರ್’ ಮತ್ತು ಪಾಕಿಸ್ತಾನದ ಡಾನ್ ಪತ್ರಿಕಾ ಸಮೂಹದ ‘ಹೆರಾಲ್ಡ್’ ಪೂರ್ಟಲ್ಗಳು ‘ನಾಟ್ ವಾರ್- ನಾಟ್ ಪೀಸ್?’ ಎಂಬ ಪುಸ್ತಕದಿಂದ ಟಿಪ್ಪಣಿಯೊಂದನ್ನು ಜಂಟಿಯಾಗಿ ಪ್ರಕಟಿಸಿವೆ.

ಈ ಬಳವಣಿಗೆಗಳ ನಡುವೆ ಭಾರತದ ವಿದೇಶಾಂಗ ಸಚಿವಾಲಯದಿಂದ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. ಆದರೆ, ಸೆ. 14ರಂದು ಇಲಾಖೆ ನೀಡಿದ ಮಾಧ್ಯಮ ಹೇಳಿಕೆಯಲ್ಲಿ ‘ಕಾಶ್ಮೀರ ಸಮಸ್ಯೆಗೆ ಪಾಕಿಸ್ತಾನದ ಗಡಿಆಚೆಗಿನ ಭಯೋತ್ಪಾದನೆಯೇ ಕಾರಣ’ ಎಂದು ಒತ್ತಿ ಹೇಳಿದೆ. ಈಗಾಗಲೇ ಗೃಹ ಇಲಾಖೆ, ರಕ್ಷಣಾ ಇಲಾಖೆ, ಸೇನೆಯ ಹಿರಿಯ ಅಧಿಕಾರಿಗಳು ಮತ್ತು ಖುದ್ದಾಗಿ ಪ್ರಧಾನಿ ನರೇಂದ್ರ ಮೋದಿ, ಉರಿ ದಾಳಿಗೆ ಪಾಕಿಸ್ತಾನ ಕಾರಣ ಎಂಬುದನ್ನು ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಹೇಳುತ್ತಿದ್ದಾರೆ. ಈಗಾಗಲೇ, ಪಾಕ್ ಆಡಳಿತ ನಡೆಸುತ್ತಿರುವ ಕಾಶ್ಮೀರ ಭಾಗದ ಮೇಲೆ ದಾಳಿಯ ಮಾತುಗಳೂ ಕೇಳಿಬರುತ್ತಿವೆ. ಸಂಜೆ ವೇಳೆಗೆ ದಿಲ್ಲಿ ಮಟ್ಟದಲ್ಲಿ ತೆಗೆದುಕೊಳ್ಳುವ ತೀರ್ಮಾನಗಳು ಉಬಯ ದೇಶಗಳ ಗಡಿಯ ಪರಿಸ್ಥಿತಿಯ ಮುಂದಿನ ದಿನಗಳನ್ನು ನಿರ್ಧರಿಸಲಿವೆ.