Home news-for-4-1-display ಫಿಲಿಪ್ಪೀನ್ ಮಾದಕ ಲೋಕದಲ್ಲಿ ಮರಣ ಮೃದಂಗ: ಅಧ್ಯಕ್ಷ ದುತಾರ್ತೆಯ ‘ಒಂದು ಮುತ್ತಿನ ಸಂಗ’!

ಫಿಲಿಪ್ಪೀನ್ ಮಾದಕ ಲೋಕದಲ್ಲಿ ಮರಣ ಮೃದಂಗ: ಅಧ್ಯಕ್ಷ ದುತಾರ್ತೆಯ ‘ಒಂದು ಮುತ್ತಿನ ಸಂಗ’!

SHARE

ಫಿಲಿಪ್ಪೀನ್ಸ್ ಅಧ್ಯಕ್ಷರಾಗಿ ರೋಡ್ರಿಗೋ ದುತಾರ್ತೆ ಆಯ್ಕೆಯಾಗಿ ಏಳು ವಾರಗಳು ಕಳೆಯುವ ಹೊತ್ತಿಗೆ, ಖಾತೆಗೆ 1900 ಕೊಲೆಗಳು ಜಮಾವಣೆಗೊಂಡಿವೆ.

ಡ್ರಗ್ಸ್ ಜಾಲ ಮಟ್ಟಹಾಕುವ ನೆಪದಲ್ಲಿ ಶುರುವಾದ ಮಾರಣಹೋಮವೀಗ ಜಗತ್ತನ್ನು ಬೆಚ್ಚಿ ಬೀಳಿಸಿದೆ. ವಿಶ್ವಸಂಸ್ಥೆ ಸೇರಿದಂತೆ ಹಲವು ರಾಷ್ಟ್ರಗಳು ಫಿಲಿಪ್ಪೀನ್ಸ್ನಲ್ಲಿ ನಡೆಯುತ್ತಿರುವ ಮಾನವ ಹಕ್ಕುಗಳ ದಮನದ ಕುರಿತು ಆತಂಕವನ್ನು ವ್ಯಕ್ತಪಡಿಸಿವೆ.

ಏಳೇ ಏಳು ವಾರದ ಕೆಳಗೆ ರೊಡ್ರಿಗೋ ಪೂರ್ವ ಏಷ್ಯಾದ ದ್ವೀಪ ರಾಷ್ಟ್ರ ಫಿಲಿಪ್ಪೀನ್ಸ್ ಅಧ್ಯಕ್ಷರಾದರು. ಅಧಿಕಾರ ವಹಿಸಿಕೊಂಡವರೇ ಮಾಧಕ ದ್ರವ್ಯ ಜಾಲದ ಮೇಲೆ ಯುದ್ಧ ಸಾರಿದರು. ಈ ಯುದ್ಧ ಹೇಗಿರಬಹುದು ಎಂಬ ಕಲ್ಪನೆ ಫಿಲಿಪ್ಪೀನ್ಸ್ ಮತ್ತು ದುತಾರ್ತೆಯನ್ನು ಬಲ್ಲವರಿಗೆ ಇತ್ತು ಕೂಡ. 

ಇಲ್ಲಿನ ರಾಷ್ಟ್ರೀಯ ಪೊಲೀಸ್ ಮುಖ್ಯಸ್ಥ ರೊನಾಲ್ಡ್ ಡೆಲಾ ರೋಸ ನೀಡಿದ ಹೇಳಿಕೆ ಪ್ರಕಾರ, ಜೂನ್ 1ರಿಂದ ಇಲ್ಲೀವರೆಗೆ 750 ಡ್ರಗ್ ಕಳ್ಳ ಸಾಗಣಿಕೆದಾರರು ಮತ್ತು ಬಳಕೆದಾರರನ್ನು ಪೊಲೀಸ್ ಕಾರ್ಯಾಚರಣೆಯಲ್ಲಿ ಕೊಲ್ಲಲಾಗಿದೆ.

ಇದಲ್ಲದೇ ಡ್ರಗ್ ವಿಚಾರಕ್ಕೆ ಸಂಬಂಧಿಸಿ ಕೊಲೆಯಾದ 1100 ಇತರ ಪ್ರಕರಣಗಳ ವಿಚಾರಣೆಯನ್ನೂ ಪೊಲೀಸರು ಕೈಗೆತ್ತಿಕೊಂಡಿದ್ದಾರೆ. ವಿಚಿತ್ರ ಅಂದರೆ ದೇಶದಲ್ಲಿ ಡ್ರಗ್ ಬಳಸುವವರನ್ನು ಕೊಲ್ಲಬೇಕು ಎಂಬ ಕಾನೂನೇ ಇಲ್ಲ. ಇಷ್ಟೆಲ್ಲಾ ನಡೆದೂ ಅಲ್ಲಿನ ಪೊಲೀಸ್ ಮುಖ್ಯಸ್ಥ ತಮ್ಮನ್ನು ತಾವು ‘ಕೊಲೆಗಡುಕರಲ್ಲ’ ಎಂದು ಘೋಷಿಸಿಕೊಂಡಿದ್ದಾನೆ.

ಸದ್ಯ ಈ ಸರಣಿ ಹತ್ಯೆಗಳು ಅಂತರಾಷ್ಟ್ರೀಯ ಸುದ್ದಿ ಕೇಂದ್ರಕ್ಕೆ ಬಂದಿದ್ದು ವಿಶ್ವಸಂಸ್ಥೆ ಸೇರಿದಂತೆ ಪಿಲಿಪ್ಪೀನ್ಸ್ ಮಿತ್ರ ರಾಷ್ಟ್ರ ಅಮೆರಿಕಾ ಆತಂಕ ವ್ಯಕ್ತಪಡಿಸಿವೆ.

ದುತಾರ್ತೆ ಕಾನೂನು ಪಾಲನೆಯಲ್ಲಿ ಮಾನವ ಹಕ್ಕುಗಳನ್ನು ಗೌರವಿಸಬೇಕು ಎಂದು ಅವು ಒತ್ತಾಯಿಸಿವೆ.

ಆದರೆ ಅವು ಯಾವುದಕ್ಕೂ ದುತಾರ್ತೆ ಸೊಪ್ಪು ಹಾಕುತ್ತಿಲ್ಲ. ತಿಂಗಳ ಆರಂಭದಲ್ಲಿ ಟಿವಿ ಸಂದೇಶದಲ್ಲಿ “ನಾನು ಯಾವುದೇ ಮಾನವ ಹಕ್ಕುಗಳಿಗೆ ಸೊಪ್ಪು ಹಾಕುವುದಿಲ್ಲ. ನನ್ನನ್ನು ನಂಬಿ” ಎಂದು ಘೋಷಣೆ ಮಾಡಿಕೊಂಡಿದ್ದಾರೆ. ಅಷ್ಟೇ ಅಲ್ಲ ಸಂದೇಶದಲ್ಲಿ ಡ್ರಗ್ಸ್ ವ್ಯವಹಾರದ ಜೊತೆ ಸಂಬಂಧ ಹೊಂದಿದ ಆರೋಪಿ ಅಧಿಕಾರಿಗಳ ಹೆಸರೆತ್ತಿ ಅವಮಾನಿಸಿದ್ದಾರೆ. ತಮ್ಮ ಈ ಅಭಿವೃದ್ಧಿ ಆಂದೋಲನಕ್ಕೆ ಅಡ್ಡ ಬರದಂತೆ ಅಲ್ಲಿನ ಸಂಸದರಿಗೂ ಕರೆ ನೀಡಿದ್ದಾರೆ. ಒಂದೊಮ್ಮೆ ಅಡ್ಡ ಬಂದರೆ ನಿಮ್ಮನ್ನೂ ಕೊಲೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಫಿಲಿಪ್ಪೀನ್ನಲ್ಲಾಗುತ್ತಿರುವ ಈ ಮಾನವ ಹಕ್ಕುಗಳ ದಮನದ ಬಗ್ಗೆ ವಿಶ್ವಸಂಸ್ಥೆ ಆತಂಕ ವ್ಯಕ್ತಪಡಿಸಿದ್ದಕ್ಕೂ, ದುತಾರ್ತೆ ಗರಂ ಆಗಿದ್ದಾರೆ. ಭಾನುವಾರ ರಾತ್ರಿ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, “ಫಿಲಿಪ್ಪೀನ್ಸ್ ವಿಶ್ವಸಂಸ್ಥೆ ತೊರೆಯಬಹುದು. ಚೀನಾ ಸೇರಿದಂತೆ ಇತರ ರಾಷ್ಟ್ರಗಳನ್ನು ಹೊಸ ಜಾಗತಿಕ ಸಂಸ್ಥೆ ರಚಿಸಲು ಆಹ್ವಾನಿಸಲಿದೆ,” ಎಂದು ಹೇಳಿದ್ದಾರೆ. ಅಲ್ಲದೇ ವಿಶ್ವಸಂಸ್ಥೆ ತನ್ನ ಭರವಸೆಗಳನ್ನು ಈಡೇರಿಸುವಲ್ಲಿ ಸೋತಿದೆ ಎಂದೂ ಕಿಡಿಕಾರಿದ್ದಾರೆ.

ಫಿಲಿಪ್ಪೀನ್ಸ್ ಅಧ್ಯಕ್ಷರ ಈ ಎಲ್ಲಾ ನಡೆಗಳೂ ಆಂತಕ ಹುಟ್ಟು ಹಾಕಿದ್ದು, ಮತ್ತೊಬ್ಬ ಕ್ರೂರ ಸರ್ವಾಧಿಕಾರಿ ಹುಟ್ಟಿಕೊಳ್ಳುವ ಮುನ್ಸೂಚನೆಯಂತೆ ಭಾಸವಾಗುತ್ತಿದೆ.

ಯಾರು ಈ ‘ರೊಡ್ರಿಗೋ ದುತಾರ್ತೆ’?

ದುತಾರ್ತೆ ಅಧ್ಯಕ್ಷರಾಗುವ ಮೊದಲು ಡವಾವೋ ಎಂಬ ಹುಟ್ಟಾ ಕ್ರಿಮಿನಲ್ಗಳ ನಗರದ ಮೇಯರ್ ಆಗಿದ್ದವರು. ಹೊರಗಿನವರು ಕಾಲಿಡಲೂ ಹೆದರುತ್ತಿದ್ದ ಹಿಂಸೆಯಿಂದ ನಲುಗಿದ ನಗರದಲ್ಲಿ ಮೇಯರ್ ಹುದ್ದೆಗೇರಿದ ದುತಾರ್ತೆ ಮೋಡಿ ಮಾಡಿ ಬಿಟ್ಟರು. ರಾತ್ರಿ ಕಳೆದು ಬೆಳಗಾಗುವದರೊಳಗೆ ಅಪಾಯಕಾರಿ ನಗರ ವಿಶ್ವದ ನಾಲ್ಕನೇ ಸುರಕ್ಷಿತ ನಗರವಾಗಿ ಬದಲಾಗಿತ್ತು. ಆದರೆ ಈ ಹಾದಿಯಲ್ಲಿ ಬಿದ್ದ ಹೆಣಗಳಿಗೆ ಲೆಕ್ಕವೇ ಇರಲಿಲ್ಲ. ಇನ್ನೂ ಎಳೆ ತರುಣರು, ಅಪರಾಧ ಲೋಕಕ್ಕೆ ಸಂಬಂಧವೇ ಇಲ್ಲದವರು ಬೀದಿ ಹೆಣವಾದರು. ಹಿಂಸಾತ್ಮಕ ದಾರಿಯಲ್ಲಿ ಡಟಾರ್ಟೆ ನಗರದ ಮೇಲೆ ನಿಯಂತ್ರಣ ಸಾಧಿಸಿದ್ದರು.

ಕ್ರಿಮಿನಲ್ಗಳನ್ನು ಪೊಲೀಸರಲ್ಲದೆ ಕೊಲೆ ಮಾಡಲೆಂದೇ ಅನಧಿಕೃತ ಪಡೆಗಳನ್ನು ಹುಟ್ಟು ಹಾಕಿದ್ದರು. ‘ಬೌಂಟಿ ಹಂಟರ್ಸ್’ ಎನ್ನುವ ಈ ಪಡೆ ವಾಂಟಡ್ ಕ್ರಿಮಿನಲ್ಗಳನ್ನು ಕೊಂದು ಬಹುಮಾನ ಪಡೆಯುತ್ತಿತ್ತು. ದುತಾರ್ತೆ ಭ್ರಷ್ಟಾಚಾರಿಗಳು, ಕ್ರಿಮಿನಲ್ಗಳು ಮುಖ್ಯವಾಗಿ ಮಾದಕ ಪದಾರ್ಥದ ವ್ಯಾಪಾರಿಗಳ ಪಾಲಿಗೆ ಸಿಂಹ ಸ್ವಪ್ನವಾಗಿದ್ದರು. ವಿಚಾರಣೆಗಳ ಹಂಗಿಲ್ಲದೆ ಸಾವಿನ ಮನೆ ತೋರಿಸುತ್ತಿದ್ದರು. ತೀರಾ ಸರಳ ಖಾಸಗಿ ಜೀವನ ಹೊಂದಿದ್ದ ಅವರೇ ಸ್ವತಃ ಗನ್ ತೆಗೆದುಕೊಂಡು 3 ಜನರನ್ನು ಕೊಂದಿದ್ದರು. ಆದರೆ ಅದಕ್ಕಿಂತೂ ಹೆಚ್ಚು ಜನರನ್ನು ಕೊಂದ ಆರೋಪ ಅವರ ಮೇಲಿತ್ತು. ಅವರ ಮನೆ ತುಂಬ ಬಂಧೂಕುಗಳ ಪ್ರದರ್ಶನವೇ ಕಾಣಸಿಗುತ್ತಿತ್ತು.

ಹೀಗೆಲ್ಲಾ ಮಾಡಿ ನಗರದಲ್ಲಿ ಶಾಂತಿ ಸ್ಥಾಪಿಸಿದರು. ದುತಾರ್ತೆ ಅಮಾಯಕರ ಕೊಲೆ ಮಾಡಿದ್ದಾರೆ. ಪೊಲೀಸ್ (ಮಿಲಿಟರಿ) ಆಳ್ವಿಕೆ ನಡೆಸುತ್ತಿದ್ದಾರೆ ಎಂದು ವಿರೋಧ ಪಕ್ಷಗಳು ಝಾಡಿಸಿದವು. ಆದರೆ ಅದಾಗಲೇ ದುತಾರ್ತೆ ವಿಪರೀತ ಜನಪ್ರಿಯತೆ ಪಡೆದಾಗಿತ್ತು. ಅಭಿವೃದ್ಧಿ ಮಂತ್ರದ ಮೋಡಿಗೆ ಜನರ ಕಣ್ಣಲ್ಲಿ ದುತಾರ್ತೆ ಉತ್ತಮ ಮೇಯರ್ ಎನಿಸಿಕೊಂಡರು. ಹೀರೋ ಇಮೇಜ್ ಬೆಳೆಯಿತು. ಅದಕ್ಕವರ ವಿಚಿತ್ರ ಖಯಾಲಿಗಳೂ ಕಾರಣವಾಗಿದ್ದವು. ದುಬಾರಿ ಬೈಕ್ ಹತ್ತಿ ಹೀರೋ ಪೋಷಾಕಿನಲ್ಲಿ ಬೀದಿಯಲ್ಲಿ ಸುತ್ತಾಡುತ್ತಿದ್ದರು. ರಸ್ತೆಗೆ ಬಂದರೆ ಯುವತಿಯರು ಮುತ್ತಿಕುತ್ತಿದ್ದರು. ಸಾರ್ವಜನಿಕವಾಗಿಯೇ ಬೀಡು ಬೀಸಾಗಿ ‘ಲಿಪ್ ಲಾಕ್’ ಮಾಡುತ್ತಿದ್ದರು. ವೇದಿಕೆ ಏರಿದರೆ ಆತ ಅಲ್ಲಿನ ಜನರ ಪಾಲಿಗೆ ‘ರಾಕ್ ಸ್ಟಾರ್’. ಶಿಳ್ಳೆ ಹೊಡೆಯುವುದೇನು, ಸೆಲ್ಫಿ ತೆಗೆಯುವುದೇನು, ಮುತ್ತಿಕ್ಕುವುದೇನು; ಯಾರಿಗೂ ಸಿಗದ ಜನಪ್ರಿಯತೆ ಅವರಿಗೆ ಸಿಕ್ಕಿತ್ತು.

ಅಭಿವೃದ್ಧಿ ಹೆಸರಿ

ನಲ್ಲಿ ಅವರು ಗುರುತಿಸಿಕೊಂಡರು. ಡವಾವೋ ನಗರದ ಮೂಲೆ ಮೂಲೆಗೆ 8 ನಿಮಿಷದಲ್ಲಿ ಆ್ಯಂಬುಲೆನ್ಸ್ ತಲುಪುತ್ತಿತ್ತು; ಸಾರ್ವಜನಿಕರೆಲ್ಲರಿಗೂ ಉಚಿತ ಚಿಕಿತ್ಸೆ ಬೇರೆ. ಟ್ರಾಫಿಕ್ ಸಿಗ್ನಲ್ಗಳಲ್ಲಿ ಹೈ ಕ್ವಾಲಿಟಿ ಕ್ಯಾಮೆರಾ ಹಾಕಿ ಶಿಸ್ತು ಜಾರಿಗೆ ತಂದರು. ಅಧ್ಯಕ್ಷನಾದರೆ ಮೂರೇ ತಿಂಗಳಿಗೆ ಎಲ್ಲಾ ಕ್ರಿಮಿನಲ್ ಚಟುವಟಿಕೆ ಮಟ್ಟ ಹಾಕುತ್ತೇನೆ ಎಂದು ಘೋಷಿಸಿದರು. ಅವರ ಮೇಲೆ ಅಲ್ಲಿನ ಧಾರ್ಮಿಕ ನಾಯಕರಿಗೂ ನಂಬಿಕೆ ಹುಟ್ಟಿತು. ಸಾರ್ವಜನಿಕರಿಂದಲೇ ಹಣ ಸಂಗ್ರಹಿಸಿ ಚುನಾವಣೆಗೆ ನಿಂತು ಫಿಲಿಪ್ಪೀನ್ಸ್ ಅಧ್ಯಕ್ಷ ಗಾದಿ ಮೇಲೆ ಕುಳಿತರು ದುತಾರ್ತೆ.

ಆದರೆ ಅಧ್ಯಕ್ಷರಾದವರು, ಎರಡು ತಿಂಗಳು ಕಳೆಯುವ ಹೊತ್ತಿಗೆ 1900 ಬಲಿ ತೆಗೆದುಕೊಂಡಿದ್ದಾರೆ. ತಾನು ಮಾಡುವುದೆಲ್ಲಾ ಒಳ್ಳೆಯದು; ದೇಶವನ್ನು ತಾನು ಶಾಂತಿಯ ಹಾದಿಯಲ್ಲಿ ತರುತ್ತಿದ್ದೇನೆ ಅಂತ ಮಾತ್ರ ಹೇಳುತ್ತಲೇ ಇದ್ದಾರೆ. ಏಷ್ಯಾದಲ್ಲಿ ಅತ್ಯಂತ ಹೆಚ್ಚು ಕ್ರಿಮಿನಲ್ ಚಟುವಟಿಕೆ ನಡೆಯುತ್ತಿರುವ ಫಿಲಿಪ್ಪೀನ್ಸ್ ದೇಶದ ಜನ ಅವರ ಮೇಲೆ ಇನ್ನೂ ಭರವಸೆ ಇಟ್ಟಿದ್ದಾರೆ. ಶಾಂತಿ ಸ್ಥಾಪನೆಗೆ ಹಿಂಸೆಯ ಮಾರ್ಗವನ್ನು ಹಿಡಿದ ಅಧಿಕಾರ ಕೇಂದ್ರಗಳ ಇತಿಹಾಸವನ್ನು ನೋಡಿರುವ ಜಗತ್ತು ಮಾತ್ರ ಅನುಮಾನದಿಂದಲೇ ನೋಡುತ್ತಿದೆ.