Home news-for-4-1-display ‘ಅಯ್ಯೋ ರಾಮ…!’: ಒಂದು ರೂಪಾಯಿಗೆ 60 ಲೀಟರ್ ಪೆಟ್ರೊಲ್ ಕೊಡಬೇಕು ಎಂಬ ಬೇಡಿಕೆ ಇಟ್ಟವ ಹತನಾಗಿ...

‘ಅಯ್ಯೋ ರಾಮ…!’: ಒಂದು ರೂಪಾಯಿಗೆ 60 ಲೀಟರ್ ಪೆಟ್ರೊಲ್ ಕೊಡಬೇಕು ಎಂಬ ಬೇಡಿಕೆ ಇಟ್ಟವ ಹತನಾಗಿ ಹೋದ!

SHARE

ಮಥುರಾದಲ್ಲಿ

ನಡೆದ ಖಾಕಿ- ಕಾವಿ ನಡುವಿನ ಸಂಘರ್ಷದ ಬೆನ್ನಲ್ಲೇ ವಿವಾದಿತ ಧಾರ್ಮಿಕ ಸಂಘದ ಸುತ್ತ ಕುತೂಹಲಕಾರಿ ವಿಚಾರಗಳು ಒಂದೊಂದಾಗಿ ಹೊರಬೀಳುತ್ತಿವೆ. 24 ಜನರ ಸಾವಿಗೆ ಕಾರಣವಾದ ಮಥುರಾ ಘಟನೆಯ ರೂವಾರಿ ರಾಮ್ ವೃಕ್ಷ ಯಾದವ್ ಯಾರು? ವಿಚಿತ್ರ ಸಿದ್ಧಾಂತಗಳನ್ನು ಮುಂದಿಡುತ್ತಿರುವ ಈತನ ಗುರಿ ಏನಾಗಿತ್ತು? ಅದನ್ನು ನಿಮ್ಮ ಮುಂದೆ ಇಡಲಿದೆ ಈ ವರದಿ.

ಯಾರು

ರಾಮ್

ವೃಕ್ಷ್

ಯಾದವ್

?

ಎಲ್ಲರಿಗೂ ಒಂದು ದಿಕ್ಕಾದರೆ ಈತನಿಗೇ ಇನ್ನೊಂದು ದಿಕ್ಕು. ತನ್ನದೇ ಪ್ರಪಂಚದಲ್ಲಿ ಬದುಕುತ್ತಿರುವವ, ಇಂದಿಗೂ ನೇತಾಜಿ ಸುಭಾಷ್ ಚಂದ್ರ ಬೋಸ್, ಜೈ ಗುರುದೇವ್ ಬದುಕಿದ್ದಾರೆ ಎಂದು ನಂಬಿದ್ದ ಈತ. ಇದಕ್ಕಾಗಿ ಈತನ ಬಳಿ ಸ್ವಯಂ ಸಿದ್ಧಾಂತಗಳೂ ತಯಾರಾಗಿದ್ದವು.

ಉತ್ತರ ಪ್ರದೇಶದ ಗಾಜಿಪುರ್ ಜಿಲ್ಲೆಯ ರಾಂಪುರ್-ಬಾಗ್ಪುರ್ ಗ್ರಾಮದ ಸಣ್ಣ ಕುಟುಂಬವೊಂದರಲ್ಲಿ ಜನಿಸಿದವನೇ ರಾಮ್ ವೃಕ್ಷ್. ಪದವಿವರೆಗಿನ ಓದು ಈತನದು. ಗ್ರಾಮದಲ್ಲಿ ಈತನಿಗೆ ಎರಡು ಎಕರೆ ಜಮೀನಿದ್ರೂ ಅಲ್ಲಿ ಆತ ಕೃಷಿ ಮಾಡಿದ್ದನ್ನು ಯಾರೂ ಕಂಡಿಲ್ಲ.

ಮುಂದೆ 1975ರಲ್ಲಿ ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಣೆಯಾದಾಗ, ಹೋರಾಟದ ಜೊತೆ ಸೇರಿಕೊಂಡು ಜೈಲು ಸೇರಿದ. ಜೈಲಿನಿಂದ ಹೊರ ಬಂದವ ಬಾಬಾ ಜೈ ಗುರುದೇವ್ ನಿಕಟ ವಲಯದಲ್ಲಿ ಗುರುತಿಸಿಕೊಂಡ. ಬಾಬಾ ‘ದೂರದರ್ಶಿ ಪಕ್ಷ’ ಸ್ಥಾಪಿಸಿದಾಗ 1984ರಲ್ಲಿ ಝಹೂರಾದ್ನಿಂದ ವಿದಾನಸಭೆಗೂ, 1991ರಲ್ಲಿ ಗಾಜೀಪುರದಿಂದ ಲೋಕಸಭೆ ಚುನಾವಣೆಗೂ ನಿಂತು ನೆಲಕಚ್ಚಿದ.

ಕೊನೆಗೊಂದು ದಿನ ‘ವೈದಿಕ್ ಸತ್ಯಾಗ್ರಹ’ ಪುಸ್ತಕ ಬರೆಯಲು ಕುಳಿತುಕೊಂಡ. ಇದರಲ್ಲಿ ‘ಆರ್ಥಿಕ ಸ್ವಾತಂತ್ರ್ಯ ಹೋರಾಟ’ ಎಂಬ ಪದ ಬಳಕೆಗೆ ತಂದ. ಇಡೀ ಪುಸ್ತಕದಲ್ಲಿ ಈತನ ವಿಚಿತ್ರ ಸಿದ್ಧಾಂತಗಳಿದ್ದವು. ಭಾರತೀಯ ಕರೆನ್ಸಿ ಬ್ಯಾನ್ ಮಾಡುವುದು, ಪ್ರಧಾನ ಮಂತ್ರಿ ಮತ್ತು ರಾಷ್ಟ್ರಪತಿಗಳ ಚುನಾವಣೆಗೆ ಸಂಬಂಧಿಸಿದ ಸಂವಿಧಾನದ ಭಾಗಗಳ ಬದಲಾವಣೆ ಹೀಗೆ ವಿಚಿತ್ರ ಬೇಡಿಕೆಗಳು ಈತನದ್ದು. ವಾಸ್ತವದಿಂದ ದೂರವೇ ಉಳಿದಿದ್ದ ಈ ಥಿಯರಿಗಳೆಲ್ಲಾ ಅಮೆರಿಕಾದ ಕಾನೂನು ಸಂಶೋಧಕ ನಥನ್ ರೋಶ್ಚೆ ಪೌಂಡ್ನ ಪುಸ್ತಕಗಳಿಂದ ಕಡ ತಂದವಾಗಿದ್ದವು. ಇದೆಲ್ಲಾ ಬಹಿರಂಗವಾದಾಗ ತನ್ನ ಪುಸ್ತಕದ ಪ್ರಕಟಣೆ ಕೈ ಬಿಟ್ಟ.

ಕೊನೆಯ ದಿನಗಳಲ್ಲಿ ಹೆಂಡತಿ ಬಿಟ್ಟು ಹೋಗಿದ್ದಳು. ಎರಡು ಗಂಡು, ಎರಡು ಹೆಣ್ಣು ಮಕ್ಕಳಲ್ಲಿ, ಇಬ್ಬರು ಮಾತ್ರ ಜೊತೆಗಿದ್ದರು. 2012 ರಲ್ಲಿ ಅಖಿಲೇಶ್ ಯಾದವ್ ಸರ್ಕಾರ ಉತ್ತರ ಪ್ರದೇಶದಲ್ಲಿ ಅಧಿಕಾರಕ್ಕೆ ಬರುತ್ತಿದ್ದಂತೆ ಆಗ್ರಾಕ್ಕೆ ತೆರಳಿ ಅಲ್ಲಿಂದ ಮಧ್ಯ ಪ್ರದೇಶಕ್ಕೆ ಹೊರಟು ಹೋಗಿದ್ದ.

ಬೇಡಿಕೆ, ಧರಣಿ, ಸಂಘಟನೆ..

ಈ ಮಧ್ಯೆ ಸ್ವಾಧೀನ್ ಭಾರತ್ ವೈದಿಕ್ ಸತ್ಯಾಗ್ರಹ (ಎಸ್ ಬಿವಿಎಸ್) ಸಂಘಟನೆ ಹುಟ್ಟು ಹಾಕಿ ಹೋರಾಟಗಳನ್ನು ಆರಂಭಿಸಿದ. ಆತನ ಬೇಡಿಕೆಗಳು ಸ್ಪಷ್ಟವಾಗಿದ್ದವು. ಆದರೆ ಅದನ್ನು ಭಾರತೀಯರು ಕನಸಿನಲ್ಲಿಯೂ ಎಣಿಸಲು ಸಾಧ್ಯವಿರಲಿಲ್ಲ. ಒಂದು ರೂಪಾಯಿಗೆ 60 ಲೀಟರ್ ಡೀಸೆಲ್, 40 ಲೀಟರ್ ಪೆಟ್ರೋಲ್, 12 ತೊಲೆ (140ಗ್ರಾಂ)ಚಿನ್ನವನ್ನು ಮಾರಬೇಕು ಎಂಬ ಬೇಡಿಕೆ ಇಟ್ಟಿದ್ದ. ಭಾರತದ ಕರೆನ್ಸಿಯನ್ನು ರೂಪಾಯಿ ಬದಲಿಗೆ ‘ಅಝಾದ್ ಹಿಂದ್ ಫೌಜ್’ ಎಂದು ಬದಲಾಯಿಸಬೇಕು, ನಾಣ್ಯದಲ್ಲಿ ನೇತಾಜಿ ಚಿತ್ರ ಠಂಕಿಸಬೇಕು ಎಂಬುದು ಈತನ ಬೇಡಿಕೆಗಳಾಗಿದ್ದವು.

ಹೀಗಿದ್ದವ 2012ರಲ್ಲಿ ಅದೊಂದು ಬೆಳಿಗ್ಗೆ ಬ್ಯಾನರ್ ಹಿಡಿದುಕೊಂಡು ಇದೇ ಮಥುರಾದ ಜವಹರ್ ಬಾಗ್ ಪಾರ್ಕ್ ಮುಂದೆ ಧರಣಿ ಕುಳಿತುಕೊಂಡ. ಪ್ರಧಾನಿ ಮತ್ತು ರಾಷ್ಟ್ರಪತಿ ಸ್ಥಾನಕ್ಕೆ ನಡೆಯುವ ಚುನಾವಣೆಯನ್ನು ಬ್ಯಾನ್ ಮಾಡಬೇಕು, ಈಗಿರುವ ಕರೆನ್ಸಿ ಬದಲಿಗೆ ನೇತಾಜಿಯ ‘ಅಝಾದ್ ಹಿಂದ್ ಫೌಜ್’ ಜಾರಿಗೆ ತರಬೇಕು ಎನ್ನುವ ಬೇಡಿಕೆಗಳನ್ನು ಮುಂದಿಟ್ಟ.

ಧರಣಿ ಮುಗಿಯಿತು; ಆದರೆ ಆತ 280 ಎಕರೆಯ ಪಾರ್ಕ್’ನಲ್ಲೇ ನೆಲೆ ನಿಂತ. ನಿಧಾನವಾಗಿ ಆತನ ಒಂದೊಂದೇ ಹಿಂಬಾಲಕರು ಪಾರ್ಕ್ ಅತಿಕ್ರಮಣ ಮಾಡಲಾರಂಭಿಸಿದರು. ಸ್ಥಳೀಯ ಅಧಿಕಾರಿಗಳು ಮತ್ತು ಮಂತ್ರಿಯೊಬ್ಬರ ಸಹಕಾರದಿಂದ ಅಲ್ಲಿ ಮಿನಿ ಬಡಾವಣೆಯೇ ನಿರ್ಮಾಣವಾಯ್ತು.

ಈತನ ಮೇಲೆ ನೂರಾರು ಕೇಸುಗಳಿವೆ. ಸಾರ್ವಜನಿಕವಾಗಿ ಜಿಲ್ಲಾ ಅಧಿಕಾರಿಗಳು ಮತ್ತು ಪೊಲೀಸರೊಂದಿಗೆ ಅನುಚಿತ ವರ್ತನೆ ತೋರುತ್ತಿದ್ದ. ಆದರೆ ರಾಜಕೀಯ ಬಲದಿಂದ ಈತನ ತಂಟೆಗೆ ಯಾರೂ ಬರುತ್ತಿರಲಿಲ್ಲ. ಜವಹರ್ ಬಾಗ್ ಪಾರ್ಕ್’ನಲ್ಲಿ ಯಾರೇ ಬಂದು ನೆಲೆ ನಿಂತರೂ ಅವರಿಗೆ ಮೂರೂ ಹೊತ್ತು ಊಟ ಕೊಡಲಾಗುತಿತ್ತು. ಹೀಗೆ ಪಾರ್ಕ್’ನಲ್ಲಿ ನೆಲೆ ನಿಂತವರಿಗೆ ಎರಡು ವರ್ಷ ಊಟ ಕೊಟ್ಟಿದ್ದ. ಹೊರಗೆ 35 ಇದ್ದ ಸಕ್ಕರೆ ಬೆಲೆ ಇಲ್ಲಿ 25 ರೂಪಾಯಿಗೆ ಸಿಗುತ್ತಿತ್ತು. 60 ರೂಪಾಯಿಯ ದ್ರಾಕ್ಷಿ 20 ರೂ.ಗೆ. ಹೀಗೆ ಕೆಲವೇ ಕೆಲವು ದಿನದಲ್ಲಿ ಜವಹರ್ ಬಾಗ್ನ ಜನಸಂಖ್ಯೆ ಮೂರು ಸಾವಿರಕ್ಕೆ ಏರಿಕೆಯಾಯ್ತು. ದೊಡ್ಡ ಸಂಖ್ಯೆಯ ಯುವಕರ ಬೆಂಬಲ ಸಿಗುತ್ತಿದ್ದಂತೆ ರೈಫಲ್ಸ್ ಹಿಡಿದ ಬಾಡಿಗಾರ್ಡ್’ಗಳೊಂದಿಗೆ ಮಥುರಾದಲ್ಲೆಲ್ಲಾ ಸುತ್ತಾಡುತ್ತಿದ್ದ.

ಇದಕ್ಕೆಲ್ಲಾ

ಹಣ

ನೀಡಿದವರಾರು

?

ರಾಮ್ ವೃಕ್ಷ ಯಾದವ್ ಮತ್ತವನ ಬೆಂಬಲಿಗರ ಹಣದ ಮೂಲ ಮಿಸ್ಟರಿಯಾಗಿಯೇ ಉಳಿದಿದೆ. ಜೈ ಗುರುದೇವ್ ಸಾಮ್ರಾಜ್ಯವನ್ನು ಉಳಿಸುವ ಪಣ ತೊಟ್ಟಿದ್ದ ರಾಮ್ ವೃಕ್ಷ್ ಮಥುರಾದಲ್ಲಿ ಆಶ್ರಮಕ್ಕಿದ್ದ ಕೋಟೆಯನ್ನು ವಶಕ್ಕೆ ಪಡೆಯಲು ಸಂಚು ಹೂಡಿದ್ದ. ಅದಕ್ಕೆ ಬೇಕಾದ ಕಾಲಾಳುಗಳನ್ನು ಪಾರ್ಕ್’ನಲ್ಲಿ ತಯಾರು ಮಾಡಿಸುತ್ತಿದ್ದ. ಈಗ ಸ್ಮಶಾನದಂತಾಗಿರುವ ಜವಹರ್ ಬಾಗ್ ಪಾರ್ಕ್’ನಿಂದ ಕೋಟೆಗಿರುವ ದೂರ ಎರಡೂವರೆ ಕಿಲೋಮೀಟರ್ ಮಾತ್ರ.

ಇದಕ್ಕೊಂದು ಸಣ್ಣ ಹಿನ್ನಲೆ ಇದೆ. 18 ಮೇ 2012ರಲ್ಲಿ ಬಾಬಾ ಗುರುದೇವ್ ಇಹಲೋಕ ತ್ಯಜಿಸಿದಾಗ ತನ್ನ 12 ಸಾವಿರ ಕೋಟಿಯ ಆಧ್ಯಾತ್ಮಿಕ ಸಾಮ್ರಾಜ್ಯವನ್ನು ಕಾರು ಚಾಲಕನ ಕೈಗೆ ಇಟ್ಟು ಹೋಗಿದ್ದರು. ಇದರಲ್ಲಿ 100 ಕೋಟಿ ಬ್ಯಾಂಕ್ ಡೆಪಾಸಿಟ್, 150 ಕೋಟಿಗೂ ಅಧಿಕ ಮೌಲ್ಯದ ಐಷಾರಾಮಿ ಕಾರುಗಳೆಲ್ಲಾ ಸೇರಿತ್ತು. ಇದರಲ್ಲೇ ಸ್ವಲ್ಪ ಭಾಗ ಕಬಳಿಸುವುದು ರಾಮ್ ವೃಕ್ಷ್ ಯೋಜನೆಯಾಗಿತ್ತು.

ಮಥುರಾ ಬಾರ್ ಅಸೋಸಿಯೇಷನ್ ಮಾಜಿ ಅಧ್ಯಕ್ಷ ವಿಜಯ ಪಾಲ್ ಸಿಂಗ್ ತೋಮರ್ ಹೈಕೋರ್ಟ್’ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸುವುದರೊಂದಿಗೆ ಇದೆಲ್ಲಾ ಹೊರ ಬಂದಿತ್ತು. ಮುಂದೆ ನಡೆದಿದ್ದೆಲ್ಲಾ ಗೊತ್ತೇ ಇದೆ.

ಸದ್ಯ ಇದೇ ರಾಮ್ ವೃಕ್ಷ್ ಯಾದವ್ ಮೊನ್ನೆಯ ಗುಂಡಿನ ಚಕಮಕಿಯಲ್ಲಿ ಸಾವನ್ನಪ್ಪಿದ್ದಾನೆಂದು ರಾಷ್ಟ್ರೀಯ ಮಾಧ್ಯಮಗಳ ವರದಿಗಳು ಹೇಳುತ್ತಿವೆ.

ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ ಆಧ್ಯಾತ್ಮಿಕ ವ್ಯಾಪಾರ ಹೆಚ್ಚಾಗುತ್ತಿದೆ. ಒಂದಲ್ಲ ಒಂದು ಧರ್ಮಗಳಲ್ಲಿ ಇಂಥ ಬೆಳವಣಿಗೆಗಳು ಕಾಣಿಸಿಕೊಳ್ಳುತ್ತಿವೆ. ಇಂತಹ ಸಂಘಟನೆಗಳು ಬಲುಬೇಗ ಪ್ರವರ್ಧಮಾನಕ್ಕೆ ಬಂದು ದೊಡ್ಡ ಸಂಖ್ಯೆಯ ಹಿಂಬಾಲಕರನ್ನು ಪಡೆದುಕೊಳ್ಳುತ್ತಿವೆ. ನಂತರ ‘ವೋಟ್ ಬ್ಯಾಂಕ್’ ಮೂಲಕ ರಾಜಕೀಯ ಪಕ್ಷಗಳನ್ನು ಹಿಡಿತದಲ್ಲಿ ತಂದುಕೊಂಡು ನಿಧಾನಕ್ಕೆ ತೋಳ್ಬಲ ವೃದ್ಧಿಸಿಕೊಳ್ಳುತ್ತವೆ. ಕೊನೆಗೊಂದು ತಾರ್ಕಿಕತೆಗಳಿಲ್ಲದೆ ವ್ಯವಸ್ಥೆ ವಿರುದ್ಧ ನಿಂತು ಹೆಣವಾಗಿ ಹೋಗುತ್ತಾರೆ.