Home News Update ‘ELECTION-2016’ UPDATE: ಅಸ್ಸಾಂನಲ್ಲಿ ಕೇಸರಿ ಪಕ್ಷ; ಕೇರಳದಲ್ಲಿ ಕೆಂಬಾವುಟ; ಪುದುಚೆರಿ ಅತಂತ್ರ; ‘ದೀದಿ’, ‘ಅಮ್ಮ’ ಗಾದಿಗಿಲ್ಲ...

‘ELECTION-2016’ UPDATE: ಅಸ್ಸಾಂನಲ್ಲಿ ಕೇಸರಿ ಪಕ್ಷ; ಕೇರಳದಲ್ಲಿ ಕೆಂಬಾವುಟ; ಪುದುಚೆರಿ ಅತಂತ್ರ; ‘ದೀದಿ’, ‘ಅಮ್ಮ’ ಗಾದಿಗಿಲ್ಲ ಅಡ್ಡಿ

SHARE

1.10: ನಿರೀಕ್ಷೆಗೂ ಮೀರಿ ಪುದುಚೆರಿಯಲ್ಲಿ ಅತಂತ್ರ ವಿಧಾನಸಭೆ ಸೃಷ್ಟಿಯಾಗುವ ಸಾಧ್ಯತೆಗಳಿವೆ. ಕಾಂಗ್ರೆಸ್ ಮೈತ್ರಿಕೂಟ 13 ಸ್ಥಾನಗಳಲ್ಲಿ ಮತ್ತು ಸ್ಥಳೀಯ ಪಕ್ಷ ಎನ್ಆರ್’ಸಿ 12 ಸ್ತಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದು ಸರ್ಕಾರ ರಚಿಸಲು ಎಐಎಡಿಎಂಕೆ ಸೇರಿದಂತೆ ಇತರರ ಬೆಂಬಲ ಅನಿವಾರ್ಯವಾಗಿದೆ.

1.00: ಮೊದಲ ಬಾರಿಗೆ ಈಶಾನ್ಯ ರಾಜ್ಯಗಳ ಬಾಗಿಲು ಬಿಜೆಪಿಗೆ ತೆರೆದಿದೆ. ಅಸ್ಸಾಂನಲ್ಲಿ ಬಿಜೆಪಿ ನಿಚ್ಛಳ ಬಹುಮತ ಪಡೆಯುವ ಸೂಚನೆಗಳು ಕಾಣಿಸುತ್ತಿವೆ. ಈ ಮೂಲಕ ಬಿಜೆಪಿಯಿಂದ ಸರ್ಬಾನಂದ ಸೋನಾವಾಲ್ ಮುಖ್ಯಮಂತ್ರಿಯಾಗಲಿದ್ದಾರೆ. ಒಟ್ಟು 126 ಸದಸ್ಯ ಬಲದ ಅಸ್ಸಾಂನಲ್ಲಿ ಬಿಜೆಪಿ 83 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದರೆ, ಕಾಂಗ್ರೆಸ್ ಕೇವಲ 25 ಮತ್ತು ಎಯುಡಿಎಫ್ 11 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ.

12.08: 60 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಬಿಜೆಪಿ ಕೇರಳದಲ್ಲಿ ಖಾತೆ ತೆರೆದಿದೆ. ಕೇರಳ ಬಿಜೆಪಿ ಹಿರಿಯ ನಾಯಕ ಓ.ರಾಜಗೋಪಾಲ್ ನೆಮೊಮ್ ಕ್ಷೇತ್ರದಿಂದ ಗೆದ್ದಿದ್ದು, ಸತತ ಸೋಲಿನ ನಂತರ ಬಿಜೆಪಿ ಪಾಲಿಗೆ ಕೇರಳದಲ್ಲಿ ಏಕೈಕ ಸೀಟನ್ನು ಗೆದ್ದು ಕೊಟ್ಟಿದ್ದಾರೆ. ಈ ಮೂಲಕ ಬಿಜೆಪಿ ಪಾಲಿಗೆ ಮರೀಚಿಕೆಯೇ ಆಗಿದ್ದ ಸುಶಿಕ್ಷಿತರ ರಾಜ್ಯ ಕೇರಳ ಕೊನೆಗೂ ಕೇಸರಿ ಪಕ್ಷಕ್ಕೆ ಒಲಿದಿದೆ.

11.48: ಗೆಲುವಿನತ್ತ ಎಐಎಡಿಎಂಕೆ ಪಕ್ಷ ಮುಖ ಮಾಡುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ ಜಯಲಿಲತಾರಿಗೆ ಕರೆ ಮಾಡಿ ಅಭಿನಂದನೆ ತಿಳಿಸಿದ್ದಾರೆ.

11.08: ಕರ್ನಾಟಕದ ಗಡಿ ಭಾಗ ಕಾಸರಗೋಡ್’ನಲ್ಲಿ ಮುಸ್ಲಿಂ ಲೀಗ್ ಗೆಲುವು ಸಾಧಿಸಿದ್ದು ಗೆಲುವಿನ ನಿರೀಕ್ಷೆ ಹುಟ್ಟಿಸಿದ್ದ ಬಿಜೆಪಿಯ ರವೀಶ್ ತಂತ್ರಿ ಸೋಲೊಪ್ಪಿಕೊಂಡಿದ್ದಾರೆ. ಭಾರೀ ಪ್ರಚಾರಕ್ಕೆ ಮೊರೆ ಹೋಗಿದ್ದ ಅವರು ಹಿರಿಯ ನಾಯಕ ಎನ್.ಎ ನೆಲ್ಲಿಕುನ್ನು ವಿರುದ್ಧ 8 ಸಾವಿ ಮತಗಳಿಂದ ಸೋಲೊಪ್ಪಿಕೊಂಡಿದ್ದಾರೆ.

10.59: ಕೇರಳದಲ್ಲಿ ಬಹುಮತದತ್ತ LDF ದಾಪುಗಾಲು ಹಾಕಿದ್ದು 89 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. UDF ಕೇವಲ 49 ಕ್ಷೇತ್ರಗಳಲ್ಲಿ ಮತ್ತು ಬಿಜೆಪಿ ಮತ್ತು ಇತರರು ತಲಾ ಒಂದು ಕ್ಷೇತ್ರದಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾರೆ. LDF ಬಹುಮತ ಪಡೆಯುವ ಲಕ್ಷಣಗಳು ಕಾಣಿಸುತ್ತಿದ್ದಂತೆ ಕೇರಳದಲ್ಲಿ ಕಮ್ಯೂನಿಸ್ಟ್ ಪಕ್ಷಗಳ ಸಂಭ್ರಮಾಚರಣೆ ಭಾರೀ ಮಳೆಯ ಮಧ್ಯೆಯೂ ಕಳೆಗಟ್ಟಿದೆ.

  • ಚಿತ್ರ ಕೃಪೆ: ದಿ ಹಿಂದೂ

10.35: ತಮಿಳುನಾಡಿನಲ್ಲಿ ‘ಸಮಾಚಾರ’ದ ಊಹೆ ನಿಜವಾಗುವ ಘಳಿಗೆ ಸಮೀಪಿಸುತ್ತಿದೆ. ಮತ್ತೆ ಅಮ್ಮ ತಮಿಳುನಾಡಿನಲ್ಲಿ ಮುಖ್ಯಮಂತ್ರಿಯಾಗಲಿದ್ದು ಎಂ.ಜಿ.ರಾಮಚಂದ್ರನ್ ನಂತರ ಸತತ ಎರಡನೇ ಅವಧಿಗೆ ಮುಖ್ಯಮಂತ್ರಿ ಹುದ್ದೆಗೆ ಏರಲಿರುವ ಮೊದಲಿಗರಾಗಲಿದ್ದಾರೆ.

10.22: ನೀರೀಕ್ಷೆಯಂತೆ ಕೇರಳದಲ್ಲಿ ಹಿರಿಯ ರಾಜಕಾರಣಿಗಳು ಮುನ್ನಡೆ ಸಾಧಿಸಿದ್ದು ಗೆಲುವಿನತ್ತ ಮುಖ ಮಾಡಿದ್ದಾರೆ. ಹಾಲಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ, ಗೃಹ ಸಚಿವ ರಮೇಶ್ ಚೆನ್ನಿತ್ತಿಲ, LDF ಮುಖ್ಯಮಂತ್ರಿ ಅಭ್ಯರ್ಥಿ ವಿ.ಎಸ್.ಅಚ್ಚತಾನಂದನ್ ಭಾರೀ ಮುನ್ನಡೆ ಸಾಧಿಸಿದ್ದು ಗೆಲುವಿನತ್ತ ದಾಪುಗಾಲು ಹಾಕಿದ್ದಾರೆ. ಬಿಜೆಪಿಯ ಹಿರಿಯ ನಾಯಕ ಒ . ರಾಜಗೋಪಾಲ್ ಗೆಲುವಿನ ಸನಿಹದಲ್ಲಿದ್ದರೆ, ಬಿಜೆಪಿಗೆ ಬಂದು ಚುನಾವಣೆ ಎದುರಿಸಿರುವ ಎಸ್. ಶ್ರೀಶಾಂತ್ ಹಿನ್ನಡೆ ಅನುಭವಿಸಿದ್ದು ಸೋಲಿನತ್ತ ಮುಖ ಮಾಡಿದ್ದಾರೆ.

10.00: ಮತ ಎಣಿಕೆ ಶುರುವಾಗಿ ಎರಡು ಗಂಟೆ ಕಳೆಯುವ ವೇಳೆಗೆ, ತಮಿಳುನಾಡಿನಾಡಿನಲ್ಲಿ ಜಯಲಲಿತಾ ನೇತೃತ್ವದ ಎಐಎಡಿಎಂಕೆ 131 ಸ್ಥಾನಗಳಲ್ಲಿ ಮುಂದಿದ್ದರೆ, ಪಶ್ಚಿಮ ಬಂಗಾಳದಲ್ಲಿ 200ಕ್ಕೂ ಹೆಚ್ಚು ಸ್ಥಾನಗಳಲ್ಲಿ ಟಿಎಂಸಿ ಮುಂದಿದೆ. ಅಸ್ಸಾಂನಲ್ಲಿ ಬಿಜೆಪಿ 63 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಕೇರಳದಲ್ಲಿ ಎಲ್ ಡಿಎಫ್ 85 ಸ್ಥಾನಗಳಲ್ಲಿ ಮುಂದಿದೆ.

9. 30: ಮತ ಎಣಿಕೆ ಪ್ರಕ್ರಿಯೆ ಆರಂಭವಾಗಿ ಒಂದೂವರೆ ಗಂಟೆಗಳ ಅಂಕಿ ಅಂಶಗಳನ್ನು ಗಮನಿಸಿದರೆ, ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಮತ್ತೆ ಮುಖ್ಯಮಂತ್ರಿಯಾಗುವುದು ಖಾತ್ರಿಯಾಗಿದೆ. ಟಿಎಂಸಿ ಈಗಾಗಲೇ 200ಕ್ಕೂ ಹೆಚ್ಚು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. 2006ರಲ್ಲಿ ಬುದ್ದದೇವ್ ಭಟ್ಟಾಚಾರ್ಯ ನೇತೃತ್ವದಲ್ಲಿ ಸಿಪಿಎಂ ಪಕ್ಷ ಪಡೆದುಕೊಂಡಿದ್ದ ಭರ್ಜರಿ ಜಯದ ಮಾದರಿಯಲ್ಲಿಯೇ ಈ ಬಾರಿ ಮಮತಾ ಅಧಿಕಾರಕ್ಕೇರುವುದು ಬಹುತೇಕ ಸ್ಪಷ್ಟವಾಗಿದೆ.

9. 20: ತಮಿಳುನಾಡಿನಲ್ಲಿ ಮತ ಎಣಿಕೆಯ ಈವರೆಗಿನ ಮುನ್ಸೂಚನೆ ಎಐಎಡಿಎಂಕೆ ಹಾಗೂ ಡಿಎಂಕೆ ನಡುವೆ ತೀವ್ರ ಪೈಪೋಟಿಯನ್ನು ತೋರಿಸುತ್ತಿದೆ. ಡಿಎಂಕೆ ಬೆಂಬಲಿತ ‘ಸನ್ ಟಿವಿ’ ನ್ಯೂಸ್ ಡಿಎಂಕೆಗೆ 87, ಎಐಎಡಿಎಂಕೆ 49 ಮುನ್ನಡೆ ತೋರಿಸುತ್ತಿದ್ದರೆ , ಜಯಾ ಟಿವಿಯಲ್ಲಿ ಜಯಲಲಿತಾ ಪಕ್ಷ ಎಐಎಡಿಎಂಕೆ 94 ಹಾಗೂ ಡಿಎಂಕೆಗೆ 43 ಸ್ಥಾನಗಳ ಮುನ್ನಡೆಯನ್ನು ತೋರಿಸಲಾಗುತ್ತಿದೆ!

9. 12: 140 ಸದಸ್ಯ ಬಲದ ಕೇರಳದಲ್ಲಿ ಸದ್ಯದ ಮುನ್ನಡೆಗಳು ಹೀಗಿವೆ. LDF ಬಹುಮತಕ್ಕೆ ಬೇಕಾದ 71 ಸೀಟುಗಳನ್ನು ದಾಟಿ ಮುನ್ನುಗುತ್ತಿದೆ.

8. 50: ಬೆಂಗಾಳದಲ್ಲಿ ಸದ್ಯದ ಮತ ಎಣಿಕೆಗಳು ಮಮತಾ ನೇತೃತ್ವದ ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ ಭಾರಿ ಮುನ್ನಡೆ ನೀಡಿವೆ. ಒಟ್ಟು 294 ಸ್ಥಾನಗಳ ಪೈಕಿ 120 ಸ್ಥಾನಗಳ ಮತ ಎಣಿಕೆಯಲ್ಲಿ 80 ಸ್ಥಾನಗಳಲ್ಲಿ ಟಿಎಂಸಿ ಮುನ್ನಡೆ ಸಾಧಿಸಿದೆ.

8. 45: ಕೇರಳದಲ್ಲಿ ಯುಡಿಎಫ್ ಹಾಗೂ ಎಲ್ ಡಿಎಫ್ ನಡುವೆ ತೀವ್ರ ಪೈಪೋಟಿ ಇರುವುದನ್ನು ಆರಂಭಿಕ ಲೀಡ್ಗಳು ಮುಂದಿಡುತ್ತಿವೆ. ಒಟ್ಟು 140 ಸ್ಥಾನಗಳ ಪೈಕಿ ಎರಡೂ ಮೈತ್ರಿಕೂಟಗಳು ತಲಾ 47 ಸ್ಥಾನಗಳಲ್ಲಿ ಮುಂದಿವೆ. ಕೇರಳದ ಕೇಂದ್ರ ಪ್ರದೇಶಗಳಾದ ಯುಡಿಎಫ್ ಮುಂದಿದ್ದರೆ, ಮಲಬಾರ್ ಹಾಗೂ ಕೊಚ್ಚಿನ್ ಪ್ರದೇಶಗಳಲ್ಲಿ ಎಲ್ ಡಿಎಫ್ ಮುಂದಿದೆ.

8. 35: ಅಸ್ಸಾಂನಿಂದ ಮೊದಲ ಲೀಡ್ ಲಭ್ಯವಾಗಿದ್ದು, ಕಾಂಗ್ರೆಸ್ ಮುಂದಿದೆ. ಇಲ್ಲಿನ ಚುನಾವಣಾ ಸಮೀಕ್ಷೆಗಳು ಬಿಜೆಪಿಗೆ ಬಹುಮತ ಮುಂದಿಟ್ಟಿವೆ. ಮೊದಲ ಲೀಡ್ ಇದಾಗಿರುವುದರಿಂದ ಹೆಚ್ಚಿನ ಮಹತ್ವ ನೀಡುವ ಅಗತ್ಯವಿಲ್ಲ.

8. 20: ನಿರೀಕ್ಷೆಯಂತೆಯೇ ಪ. ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಮುನ್ನಡೆ. 9 ಕ್ಷೇತ್ರಗಳಲ್ಲಿ ಸದ್ಯ ಮುನ್ನಡೆ ಸಾಧಿಸಿದೆ. ಎಡಪಕ್ಷಗಳು 3 ಸ್ಥಾನಗಳಲ್ಲಿ ಹಾಗೂ ಬಿಜೆಪಿ 1 ಸ್ಥಾನಗಳಲ್ಲಿ ಮುನ್ನಡೆ ಕಾಣಿಸಿಕೊಂಡಿವೆ.

ಕೇರಳದಲ್ಲಿ ಎಲ್ಡಿಎಫ್ 36, ಯುಡಿಎಫ್ 27, ಬಿಜೆಪಿ+ 1 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿವೆ.

8.10: ಕೇರಳದಲ್ಲಿ ಅಂಚೆ ಮತಗಳ ಎಣಿಕೆ ಕಾರ್ಯ ಆರಂಭವಾಗಿದೆ. LDF:  28, UDF-: 21, BJP+: 1 ಸ್ಥಾನಗಳಲ್ಲಿ ಮುಂದಿವೆ.

ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ, ಅಸ್ಸಾಂ ಹಾಗೂ ಪುದುಚೇರಿ… 

ನಾಲ್ಕು ರಾಜ್ಯಗಳು ಹಾಗೂ ಒಂದು ಕೇಂದ್ರಾಡಳಿತ ಪ್ರದೇಶದ ಪಾಲಿಗೆ ಗುರುವಾರ ‘ಬಿಗ್ ಡೇ’. ಸಂಜೆ ವೇಳೆಗೆ ಇಲ್ಲಿನ ಮತದಾರರು ಚುನಾಯಿಸಿದ ಹೊಸ ಸರಕಾರಗಳು ಸ್ಥಳೀಯ ಆಡಳಿತದ ಗದ್ದುಗೆ ಹಿಡಿಯಲಿವೆ.

ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಕಾರ್ಯ ಶುರುವಾಗಲಿದೆ. ಮಧ್ಯಾಹ್ನದ ವೇಳೆಗೆ ಒಂದು ಸ್ಪಷ್ಟ ಚಿತ್ರಣ ಲಭ್ಯವಾಗಲಿದೆ. ಈಗಾಗಲೇ ಮತದಾನೋತ್ತರ ಸಮೀಕ್ಷೆಗಳು ಹೊರಬಿದ್ದಿದ್ದು, ತಮಿಳುನಾಡು ಭಾರಿ ಕುತೂಹಲವನ್ನು ಕೆರಳಿಸಿದೆ. ಕೆಲವು ಸಮೀಕ್ಷೆಗಳು ಜಯಲಲಿತಾ ನೇತೃತ್ವದ ಎಐಎಡಿಎಂಕೆ ಮರಳಿ ಅಧಿಕಾರಕ್ಕೇರಲಿದೆ ಎಂದು ಹೇಳಿವೆ. ಇನ್ನು ಕೆಲವು ಸಮೀಕ್ಷೆಗಳು ಕರುಣಾನಿಧಿ ಮುಂದಾಳತ್ವದ ಡಿಎಂಕೆಗೆ ಮಣೆ ಹಾಕಿವೆ. ಹೀಗಾಗಿ, ಇಲ್ಲಿ ಯಾರೇ ಗೆದ್ದರೂ, ಸಮೀಕ್ಷೆಗಳು ಸೋಲುವುದು ಗ್ಯಾರೆಂಟಿ ಎಂಬ ಸ್ಥಿತಿ ನಿರ್ಮಾಣವಾಗಿದೆ.

ಇನ್ನು, ಕೇರಳದಲ್ಲಿ ಸಿಪಿಐ (ಎಂ) ನೇತೃತ್ವದ ಎಡರಂಗ ಸರಕಾರ ಅಧಿಕಾರಕ್ಕೆ ಏರಲಿದೆ ಎಂದು ಸಮೀಕ್ಷೆಗಳು ಹೇಳಿವೆ. ಕೇರಳ ಚುನಾವಣೆ ವಿಶ್ಲೇಷಣೆಗಳ ಪ್ರಕಾರ ಇಲ್ಲಿ ಶೇ. 1ರಷ್ಟು ಮತದಾನದಲ್ಲಿ ಸ್ಥಿತ್ಯಂತರವಾದರೂ, ಯುಡಿಎಫ್ ಹಾಗೂ ಎಲ್ ಡಿಎಫ್ ನಡುವೆ ಸೀಟು ಗಳಿಕೆಯಲ್ಲಿ ಭಾರಿ ಅಂತರವೇ ಏರ್ಪಡುವ ಸಾಧ್ಯತೆ ಇದೆ. ಈ ಕಾರಣಕ್ಕೆ ಕೇರಳದ ಫಲಿತಾಂಶದ ಬಗ್ಗೆಯೂ ಕುತೂಹಲ ಮೂಡಿದೆ.

ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡುತ್ತಿದ್ದ ಮಮತಾ ಬ್ಯಾನರ್ಜಿ, “ನಾವು ಗೆಲ್ಲವುದು ಗ್ಯಾರೆಂಟಿಯಾಗಿದೆ. ಆದರೆ, ಎಷ್ಟು ಅಂತರಗಳಲ್ಲಿ ಎಂಬುದನ್ನು ನೋಡಬೇಕಿದೆ,” ಎಂದಿದ್ದರು. ಇಲ್ಲಿ ಹೊರಬಿದ್ದಿರುವ ಮತದಾನೋತ್ತರ ಸಮೀಕ್ಷೆಗಳು ಕೂಡ ಇದನ್ನೇ ಹೇಳುತ್ತಿವೆ. ಸದ್ಯ ‘ಅಗ್ನಿ ದೇವತೆ’ ಎಂದು ಬಂಗಾಳಿಗರಿಂದ ಕರೆಸಿಕೊಳ್ಳುತ್ತಿರುವ ದೀದಿ, ಎಷ್ಟು ಸ್ಥಾನಗಳ ಅಂತರಗಳಿಂದ ತಮ್ಮ ಪಕ್ಷವನ್ನು ಗೆಲ್ಲಿಸಿಕೊಂಡು ಬರಲಿದ್ದಾರೆ ಎಂಬುದನ್ನು ನೋಡಬೇಕಿದೆ.

ಅಸ್ಸಾಂ ಸಮೀಕ್ಷಕರ ಪಾಲಿಗೆ ಎರಡು ಭಿನ್ನ ಫಲಿತಾಂಶ ನೀಡಿದ ರಾಜ್ಯ. ಮತದಾನ ಪೂರ್ವ ಸಮೀಕ್ಷೆಯಲ್ಲಿ ಅತಂತ್ರ ವಿಧಾನಸಭೆಯ ಸಾಧ್ಯತೆಯನ್ನು ಇಲ್ಲಿನ ಜನ ನೀಡಿದ್ದರು. ಆದರೆ ಮತದಾನೋತ್ತರ ಸಮೀಕ್ಷೆಗಳಲ್ಲಿ ಬಿಜೆಪಿಗೆ ಅವಕಾಶ ಇರುವುದನ್ನು ಸಮೀಕ್ಷೆಗಳು ಮುಂದೆ ಮಾಡಿವೆ. ಈ ಕಾರಣಕ್ಕೆ ಅಸ್ಸಾಂ ಕುತೂಹಲ ಮೂಡಿಸಿದೆ. ಒಂದು ವೇಳೆಗೆ ಕೇಸರಿ ಪಾಳಯಕ್ಕೆ ಜಯ ಲಭಿಸಿದರೆ, ಈಶಾನ್ಯ ರಾಜ್ಯಗಳಲ್ಲಿ ಮೊದಲ ಬಾರಿಗೆ ಮೊದಲ ಅಧಿಕಾರ ಗ್ರಹಣದ ಇತಿಹಾಸ ನಿರ್ಮಾಣವಾಗಲಿದೆ.

ಪುದುಚೇರಿಯಲ್ಲಿ ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟಕ್ಕೆ ಮತದಾನೋತ್ತರ ಸಮೀಕ್ಷೆಗಳು 30 ಸ್ಥಾನಗಳಲ್ಲಿ 17 ಸ್ಥಾನಗಳಲ್ಲಿ ಜಯವನ್ನು ನೀಡಿವೆ.