An unconventional News Portal.

ಯೋಗಿ ಆಡಳಿತದಲ್ಲಿ ಮತ್ತೊಂದು ರೇಪ್: ದಿನಕ್ಕೆರಡು ಎನ್‌ಕೌಂಟರ್ ನಡೆದರೂ ಹೆಚ್ಚುತ್ತಿದೆ ಕ್ರೈಂ ರೇಟ್‌!

ಯೋಗಿ ಆಡಳಿತದಲ್ಲಿ ಮತ್ತೊಂದು ರೇಪ್: ದಿನಕ್ಕೆರಡು ಎನ್‌ಕೌಂಟರ್ ನಡೆದರೂ ಹೆಚ್ಚುತ್ತಿದೆ ಕ್ರೈಂ ರೇಟ್‌!

 

‘ನಾನೀಗ ಮಂತ್ರಿಯಾಗಿದ್ದೇನೆ; ಕ್ರಿಮಿನಲ್‌ಗಳೆಲ್ಲ ರಾಜ್ಯ ಖಾಲಿ ಮಾಡಿ…’

ಹೀಗಂದವರು ಯೋಗಿ ಆದಿತ್ಯನಾಥ್. ಆದರೆ ಕ್ರಿಮಿನಲ್‌ಗಳು ರಾಜ್ಯವನ್ನು ಬಿಟ್ಟು ಓಡಿ ಹೋಗಿಲ್ಲ ಎಂಬುದಕ್ಕೆ ಶನಿವಾರ ಉತ್ತರ ಪ್ರದೇಶದಲ್ಲಿ ನಡೆದ ಪೈಶಾಚಿಕ ಕೃತ್ಯವೊಂದು ಸಾಕ್ಷಿಯಾಗಿದೆ. ಲಕ್ನೋ ಸಮೀಪದ ಸರೋಜಿನಿ ನಗರದದಲ್ಲಿ 16 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ ಎಂಬ ಸುದ್ದಿ ಹೊರಬಿದ್ದಿದೆ.

ಅತ್ಯಾಚಾರಕ್ಕೆ ಒಳಗಾದ ಬಾಲಕಿ ಕ್ಯಾನ್ಸರ್‌ ಪೀಡಿತೆ ಎಂದು ವೈದ್ಯರು ಇದೀಗ ಹೇಳುತ್ತಿದ್ದಾರೆ. ಮೊದಲು ಹೆದ್ದಾರಿ ಬಳಿ ಗುಂಪೊಂದು ಆಕೆಯ ಮೇಲೆ ಅತ್ಯಾಚಾರ ಎಸಗಿತ್ತು. ಆಕೆಯನ್ನು ನೆರಹೊರೆಯವರು ಹುಡುತ್ತಿದ್ದ ಹೊತ್ತಿಗೆ, ಅಪರಿಚಿತನೊಬ್ಬ ನಿತ್ರಾಣಳಾಗಿ ಬಿದ್ದಿದ್ದ ಆಕೆಯ ಮೇಲೆ ಮತ್ತೊಮ್ಮೆ ಅತ್ಯಾಚಾರ ಎಸಗಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಹೀನ ಮನಸ್ಸುಗಳು ಹೇಗೆ ಕಾರ್ಯಾಚರಣೆ ನಡೆಸುತ್ತಿವೆ ಎಂಬುದು ಜಾಹೀರಾಗಿದೆ.

ಏನಿದು ಘಟನೆ?: 

16 ವರ್ಷದ ಬಾಲಕಿ ತನಗೆ ಪರಿಚಿತ ಯುವಕ ಶುಭಮ್‌ ಎಂಬ ಯುವಕನ್ನು ಭೇಟಿಯಾಗಲು ಹೋದಾಗ ಈ ಘಟನೆ ಜರುಗಿದೆ. ಆಕೆ ಭೇಟಿ ಮುಗಿಸಿ ವಾಪಾಸ್ ಮನೆಗೆ ಬರುವಾಗ, ಮನೆ ತನಕ ಕಳಿಸಿಕೊಡುತ್ತೇನೆ ಎಂದು ಬೈಕ್ ಮೇಲೆ ಕೂರಿಸಿಕೊಂಡ ಶುಭಮ್, ಅವಳನ್ನು ಏಕಾಂತ ಸ್ಥಳಕ್ಕೆ ಕರೆದೊಯ್ದಿದ್ದಾನೆ. ಆತನ ಸ್ನೇಹಿತ ಸುಮಿತ್ ಹಾಗೂ ಶುಭಮ್‌ ಇಬ್ಬರೂ ಒಟ್ಟಿಗೆ ಸೇರಿ ಮಧ್ಯರಾತ್ರಿಯ ತನಕ  ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಪ್ರಾಥಮಿಕ ವರದಿಗಳು ಹೇಳುತ್ತಿವೆ.

ಪೈಶಾಚಿಕ ಕೃತ್ಯದ ನಂತರ ಇಬ್ಬರೂ ಆಕೆಯನ್ನು ರಸ್ತೆ ಬದಿ ಬಿಟ್ಟು ಹೋಗಿದ್ದಾರೆ. ನೋವಿನಲ್ಲಿದ್ದ ಆಕೆ ಸಹಾಯಕ್ಕೆ ಯಾಚಿಸುತ್ತಿದ್ದಾಗ, ಸ್ಥಳೀಯ ವ್ಯಕ್ತಿಯೊಬ್ಬ ದ್ವಿಚಕ್ರ ವಾಹನದಲ್ಲಿ ಬರುವುದು ಕಾಣಿಸಿದೆ. ಆತನನ್ನು ನಿಲ್ಲಿಸಿ ತನಗಾದ ಪರಿಸ್ಥಿತಿ ಬಗ್ಗೆ ಬಾಲಕಿಯು ಹೇಳಿಕೊಂಡು ಸಹಾಯ ಕೋರಿದ್ದಾಳೆ. ಈ ಸಮಯದಲ್ಲಿ ಸಹಾಯ ನೀಡುವ ಬದಲು ಆತ ಕೂಡ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ.

ಹೀಗೆ, ಎರಡೆರಡು ಬಾರಿ ಅತ್ಯಾಚಾರಕ್ಕೆ ಒಳಗಾಗಿ ರಸ್ತೆಯಲ್ಲಿ ಬಿದ್ದಿದ್ದ ಬಾಲಕಿಯನ್ನು ಸ್ಥಳೀಯರು ನೋಡಿದ್ದಾರೆ. ತಕ್ಷಣ ಪೊಲೀಸರಿಗೆ ಕರೆ ಮಾಡಿ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಮದ್ಯ ರಾತ್ರಿ 2 ಗಂಟೆ ಹೊತ್ತಿಗೆ ಬಾಲಕಿಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಎರಡನೇ ಬಾರಿ ಅತ್ಯಾಚಾರ ಎಸಗಿದವನ್ನು ವಿರೇಂದ್ರ ಯಾದವ್ ಎಂದು ಗುರುತಿಸಲಾಗಿದ್ದು, ಆತ ಸ್ಥಳೀಯ ಗುತ್ತಿಗೆದಾರ ಎಂದು ತಿಳಿದು ಬಂದಿದೆ. ಬಾಲಕಿಯು ಲಕ್ನೋದಲ್ಲಿನ ಒಂದು ಆಸ್ಪತ್ರೆಯಲ್ಲಿ ಕಳೆದ 5 ವರ್ಷಗಳಿಂದ ‘ಬ್ಲಡ್ ಕ್ಯಾನ್ಸರ್’ಗಾಗಿ ಚಿಕಿತ್ಸೆ ಪಡೆಯುತ್ತಿದ್ದಳು.

ಸುಮಿತ್ ಮತ್ತು ವಿರೇಂದ್ರ ಯಾದವ್ ಅವರನ್ನು ಬಂಧಿಸಲಾಗಿದೆ. ಪ್ರಮುಖ ಆರೋಪಿ ಶುಭಮ್‌ಗೆ ಪೊಲೀಸರು ಶೋಧ ನಡೆಸುತ್ತಿದ್ದಾರೆ.

ಅಪಾಯಕಾರಿ ರಾಜ್ಯ ಯುಪಿ:

ಮಾರ್ಚ್‌ 2017ರಲ್ಲಿ ಯೋಗಿ ಆದಿತ್ಯನಾಥ್ ಮುಖ್ಯಮಂತ್ರಿಯಾಗಿ ಅಧಿಕಾರವಹಿಸಿಕೊಂಡರು. ಸದ್ಯ, ಉತ್ತರ ಪ್ರದೇಶವು ಭಾರತದ ಅತ್ಯಂತ ‘ಅಪಾಯಕಾರಿ ರಾಜ್ಯ’ ಎಂದು ರಾಷ್ಟ್ರೀಯ ಅಪರಾಧ ದಾಖಲೆ ಮಂಡಳಿ(NCRB) ಎಂದು ಹೇಳಿದೆ. NCRB ದಾಖಲೆಗಳ ಪ್ರಕಾರ, 2016ರಲ್ಲಿ ಉತ್ತರ ಪ್ರದೇಶದಲ್ಲಿ ಕೊಲೆ ಹಾಗೂ ಮಹಿಳೆಯರ ಮೇಲೆ ದೌರ್ಜನ್ಯ ಸೇರಿದಂತೆ ಅತಿ ಹೆಚ್ಚು ಘೋರ ಅಪರಾಧಗಳು ನಡೆದಿವೆ ಎಂದು ವರದಿಗಳು ಹೇಳುತ್ತವೆ. ಅಂದರೆ, ಯೋಗಿ ಅಧಿಕಾರಕ್ಕೆ ಬರುವ ಮೊದಲೂ ಹಾಗೂ ನಂತರವೂ ಇಲ್ಲಿ ಕ್ರಿಮಿನಲ್ ಕೃತ್ಯಗಳು ಜರುಗುತ್ತಲೇ ಇವೆ.

ದೇಶದ ಅತಿ ದೊಡ್ಡ ರಾಜ್ಯವಾಗಿರುವ ಉತ್ತರ ಪ್ರದೇಶದಲ್ಲಿ 2016ರಲ್ಲಿ ಒಟ್ಟು 4,889 ಕೊಲೆ ಪ್ರಕರಣಗಳು ದಾಖಲಾಗಿದ್ದವು. ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ಸಂಬಂಧಿಸಿದಂತೆ 49,262 ಪ್ರಕರಣಗಳು ದಾಖಲಾಗಿವೆ. ಇಲ್ಲಿ ನಡೆಯುವ ಅಪರಾಧ ಕೃತ್ಯಗಳ ಪೈಕಿ ಶೇ. 14.5ರಷ್ಟು ಮಹಿಳೆಯರನ್ನೇ ಗುರಿಯಾಗಿಸಿಕೊಂಡು ನಡೆಯುತ್ತಿರುವ ಕೃತ್ಯಗಳಾಗಿವೆ ಎನ್ನುತ್ತವೆ ಅಂಕಿ ಅಂಶಗಳು.

ಯೋಗಿ ಅಧಿಕಾರಕ್ಕೆ ಬರುತ್ತಿದ್ದಂತೆ ಅಪರಾಧಿಗಳು ಜಾಗ ಖಾಲಿ ಮಾಡಿ ಅಂತ ಅಬ್ಬರಿಸಿದರು ಕೂಡ. ಯೋಗಿ ಅಧಿಕಾರಕ್ಕೆ ಬಂದ ನಂತರ ಇಲ್ಲಿ 430 ಪೊಲೀಸ್‌ ಎನ್‌ಕೌಂಟರ್‌ಗಳು ನಡೆದಿವೆ. ಹೆಚ್ಚು ಕಡಿಮೆ ಪ್ರತಿ 12 ಗಂಟೆಗೆ ಒಂದು ಎನ್‌ಕೌಂಟರ್‌ ನಡೆದಿದೆ. ಇವುಗಳಲ್ಲಿ ಒಟ್ಟು 17 ಜನ ಕ್ರಿಮಿನಲ್‌ಗಳು ಬಲಿಯಾಗಿದ್ದರೆ, 1106 ಮಂದಿ ಬಂಧನಕ್ಕೆ ಒಳಗಾಗಿದ್ದಾರೆ. 69 ಕ್ರಿಮಿನಲ್‌ ಹಿನ್ನೆಲೆಯ ವ್ಯಕ್ತಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ ಎಂದು ‘ಔಟ್‌ ಲುಕ್‌’ ವರದಿಯೊಂದು ಪಟ್ಟಿ ಮಾಡಿದೆ.

ಆದರೆ, ಇದು ಮೋಲ್ನೋಟಕ್ಕೆ ನಡೆಯುತ್ತಿರುವ ಕಾರ್ಯಚರಣೆ ಎಂಬ ಆರೋಪಗಳೂ ಇವೆ. ಯಾಕೆಂದರೆ, “ಯೋಗಿ ಅಧಿಕಾರಕ್ಕೇರಿದ ಎಂದ ಮೊದಲ 60 ದಿನಗಳ ಒಳಗಾಗಿ ಇಲ್ಲಿ 803 ಅತ್ಯಾಚಾರ ಪ್ರಕರಣಗಳು, 729 ಕೊಲೆ ಪ್ರಕರಣಗಳು ದಾಖಲಾಗಿವೆ. ಇವುಗಳ ಜತೆಗೆ ಅಪರಹರಣ, ಡಕಾಯಿತಿ ಪ್ರಕರಣಗಳೂ ಕೂಡ ಹೆಚ್ಚಾಗುತ್ತಿವೆ,” ಮನೋರಮಾ ಆನ್‌ಲೈನ್‌ ವರದಿ ಮಾಡಿದೆ.

ಮಕ್ಕಳ ಸಾವುಗಳು: 

ಅಪಾಯಕಾರಿ ರಾಜ್ಯ ಉತ್ತರ ಪ್ರದೇಶದಲ್ಲಿ ಅಪರಾಧ ಕೃತ್ಯಗಳಿಗೆ ಕಡಿವಾಣ ಬಿದ್ದಿಲ್ಲ; ಅದು ಒಂದು ಭಾಗ. ಇನ್ನೊಂದು ಭಾಗದಲ್ಲಿ ಸರಕಾರಿ ಆಸ್ಪತ್ರೆಗಳೇ ಮಕ್ಕಳ ಪಾಲಿಗೆ ವಧಾಕೇಂದ್ರಗಳಾಗಿ ಬದಲಾಗಿ ಹೋಗಿವೆ. ಇಲ್ಲಿನ ಆರೋಗ್ಯ ಕ್ಷೇತ್ರ ಎಷ್ಟರ ಮಟ್ಟಿಗೆ ಹದಗೆಟ್ಟು ಹೋಗಿದೆ ಎಂಬುದಕ್ಕೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸ್ವಕ್ಷೇತ್ರ ಗೋರಖ್ಪುರದಲ್ಲಿ ಆಗಸ್ಟ್‌ ಎರಡನೇ ವಾರದಲ್ಲಿ ನಡೆದ ಘಟನೆ ಇವತ್ತಿಗೂ ಸಾಕ್ಷಿಯಾಗಿದೆ. ಇಲ್ಲಿನ ಬಾಬಾ ರಾಘವ್ ದಾಸ್ ಮೆಡಿಕಲ್ ಕಾಲೇಜ್ ಆಸ್ಪತ್ರೆಯಲ್ಲಿ ಈವರೆಗೆ ಸುಮಾರು 60ಕ್ಕೂ ಹೆಚ್ಚು ಮಕ್ಕಳು ಸಾವನ್ನಪ್ಪಿದ್ದಾರೆ. ಕಳೆದ 48 ಗಂಟೆಗಳಲ್ಲಿಯೇ 30 ಮಕ್ಕಳು ಮೃತಪಡುವ ಮೂಲಕ ದೇಶದ ಗಮನ ಸೆಳೆದಿತ್ತು.

ಮಕ್ಕಳ ಸರಣಿ ಸಾವುಗಳು ಮುಂದುವರಿದಿವೆ. ಜತೆಗೆ, ಇಲ್ಲಿನ ಆರೋಗ್ಯ ಕ್ಷೇತ್ರ ಸುಧಾರಣೆ ಆಗದ ಮಟ್ಟಿಗೆ ಹದಗೆಟ್ಟು ಹೋಗಿದೆ ಎಂದು ವರದಿಗಳು ಹೇಳುತ್ತಿವೆ. ಆಸ್ಪತ್ರೆಗಳ ನಿರ್ವಹಣೆ, ಸಿಬ್ಬಂದಿಗಳ ಕೊರತೆ, ಸಕಾಲದಲ್ಲಿ ಚಿಕಿತ್ಸೆ ಸಿಗದ ಸರಕಾರಿ ಸೇವಾ ಕೇಂದ್ರಗಳ ಘೋರ ಕತೆಗಳು ಇಲ್ಲಿ ಕಾಣಸಿಗುತ್ತಿವೆ.

ಯೋಗಿ ಅಧಿಕಾರಕ್ಕೆ ಬರುತ್ತಿದ್ದಂತೆ ಇಲ್ಲಿನ ಜನರ ನಿರೀಕ್ಷೆಗಳು ಗರಿಗೆದರಿದ್ದವು. ಕ್ರಿಮಿನಲ್ ಚಟುವಟಿಕೆಗಳ ಕಡಿವಾಣಕ್ಕೆ ಆದಿತ್ಯನಾಥ್‌ ಮುಂದಾಗುತ್ತಾರೆ. ಹಾಗೆಯೇ, ಇಲ್ಲಿನ ಸಾರ್ವಜನಿಕ ಆರೋಗ್ಯ ಸೇವೆಯನ್ನು ಸುಧಾರಿಸುತ್ತಾರೆ ಎಂಬ ನಂಬಿಕೆ ಬಲವಾಗಿತ್ತು. ಆದರೆ, ಸರಣಿ ದುರಂತಗಳು ನಡೆದರೂ ಕೂಡ ಸರಕಾರ ಸಕಾಲಿಕ ಕ್ರಮಕ್ಕೆ ಮುಂದಾಗಿಲ್ಲ. ಬದಲಿಗೆ, ಯೋಗಿ, ಮಕ್ಕಳು ಸಾಯುತ್ತಿದ್ದ ಹೊತ್ತಿಗೇ, ಅಧಿಕೃತ ರಜೆಯನ್ನು ತೆಗೆದುಕೊಂಡು ದಸರಾ ಆಚರಣೆಗೆ ಮುಂದಾಗುವ ಮೂಲಕ ಜನಪರವಾದ ಆಡಳಿತ ಭರವಸೆಗೆ ತಣ್ಣೀರು ಎರಚಿದರು.

ಸ್ವತಃ ಕಟಕಟೆಯಲ್ಲಿ:

ಅಧಿಕಾರಕ್ಕೆ ಏರುವ ಮುನ್ನ ಚುನಾವಣಾ ಪ್ರಚಾರ ಸಮಯದಲ್ಲಿ ಸ್ವತಃ ಯೋಗಿ ಆದಿತ್ಯನಾಥ್ ಜೈಲು ಪಾಲಾಗಿದ್ದರು. ಗೋರಖ್ಪುರದಲ್ಲಿ ಕೋಮು ದಂಗೆಗೆ ಪ್ರಚೋದನೆ ನೀಡಿದ್ದ ಆರೋಪ ಅವರ ಮೇಲಿತ್ತು. ಈ ಕಾರಣಕ್ಕಾಗಿ 15 ದಿನಗಳ ಕಾಲ ಜೈಲುವಾಸವನ್ನು ಅನುಭವಿಸಿದ್ದರು. ಈ ಕುರಿತು ಆದಿತ್ಯನಾಥ್ ಇವತ್ತಿಗೂ ವಿಚಾರಣೆ ಎದುರಿಸುತ್ತಿದ್ದಾರೆ. ಇವುಗಳ ಜತೆಗೆ, ರಾಜ್ಯದ ನಾನಾ ಕಡೆಗಳಲ್ಲಿ ಕೋಮು ಸಾಮರಸ್ಯ ಕದಡಿದ ಆರೋಪಗಳೂ ಯೋಗಿ ಮೇಲಿವೆ.

ಕೋಮು ಸಂಘರ್ಷ, ಧಾರ್ಮಿಕ ನೆಲೆಯ ರಾಜಕಾರಣದ ಆಚೆಗೆ ಯೋಗಿ ಆಡಳಿತದ ಮೇಲೆ ಭರವಸೆಗಳು ಮೂಡಿದ್ದವು. ಆದರೆ, ಇಲ್ಲಿ ಹೆಚ್ಚುತ್ತಿರುವ ಕ್ರಿಮಿನಲ್ ಚಟುವಟಿಕೆಗಳು, ಆಡಳಿತಕ್ಕೆ ಕಾಣದ ಸುಧಾರಣೆಗಳು ನಿರಾಸೆ ಮೂಡಿಸುತ್ತಿವೆ. ಇದೀಗ, ಕ್ಯಾನ್ಸರ್‌ ರೋಗಿಯಾಗಿದ್ದ ಬಾಲಕಿಯೊಬ್ಬಳು ಇಲ್ಲಿನ ಸಾಮಾಜಿಕ ಮನಸ್ಥಿತಿಗೆ ಗುರಿಯಾಗಿದ್ದಾಳೆ. ಸಾಮೂಹಿಕ ಅತ್ಯಾಚಾರಕ್ಕೆ ಈಡಾಗಿದ್ದಾಳೆ. ಯೋಗಿ ಆದಿತ್ಯನಾಥ್‌ ಕಾವಿ ಬಟ್ಟೆಯಲ್ಲಿ ಆಕೆ ಕಣ್ಣೀರು ಒರೆಸಿಕೊಳ್ಳುತ್ತಿದ್ದಾಳೆ.

Leave a comment

Top