An unconventional News Portal.

‘ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ’; ಯಡಿಯೂರಪ್ಪ ಕಣ್ಣೀರು ಹಾಕುವುದು ಮರೆಯಲಿಲ್ಲ!

‘ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ’; ಯಡಿಯೂರಪ್ಪ ಕಣ್ಣೀರು ಹಾಕುವುದು ಮರೆಯಲಿಲ್ಲ!

ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಮತ್ತೆ ಕಣ್ಣೀರು ಹಾಕಿದ್ದಾರೆ.

ಈ ಬಾರಿ ಅವರು ಕಣ್ಣೀರು ಹಾಕಲು ಆಯ್ಕೆ ಮಾಡಿಕೊಂಡ ಸ್ಥಳ, ಬೆಂಗಳೂರಿನ ಮೈಸೂರು ಬ್ಯಾಂಕ್ ವೃತ್ತದ ಬಳಿ ಇರುವ ಸಿಬಿಐ ವಿಶೇಷ ನ್ಯಾಯಾಲಯ.

ಸೋಮವಾರ ಹಳೆಯ ಪ್ರಕರಣರವೊಂದಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗಿದ್ದ ಅವರು, ವಿಶೇಷ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶ ಬಿ. ಕೆ. ನಾಯಕ್ ಅವರ ಮುಂದೆಯೇ ದುಃಖತಪ್ತರಾಗಿದ್ದಾರೆ. ಮೂಲಗಳ ಪ್ರಕಾರ, ನ್ಯಾಯಾಧೀಶರು ವಿಚಾರಣೆಯ ಭಾಗವಾಗಿ ಸಿದ್ಧಪಡಿಸಲಾಗಿದ್ದ ಸುಮಾರು 473 ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ. ಇವೆಲ್ಲವಕ್ಕೂ ಒಂದೊಂದಾಗಿ, ತಾಳ್ಮೆಯಿಂದಲೇ ಉತ್ತರಿಸುತ್ತ ಹೋದ ಯಡಿಯೂರಪ್ಪ, ಒಂದು ಹಂತದಲ್ಲಿ ಉತ್ತರಿಸುತ್ತಲೇ ಕಣ್ಣೀರು ಹಾಕಿದ್ದಾರೆ.

ಅದೊಂದು ಕಾಲವಿತ್ತು: 

ಬೆಂಗಳೂರಿನ ಸಿಟಿ ಸಿವಿಲ್ ನ್ಯಾಯಾಯಲದ ಮೂರನೇ ಮಹಡಿಯಲ್ಲಿರುವ ಸಿಬಿಐ ವಿಶೇಷ ನ್ಯಾಯಾಲಯ ಒಂದು ಕಾಲಕ್ಕೆ ವರದಿಗಾರರು, ಕುತೂಹಲಿಗಳಿಂದ ತುಂಬಿ ತುಳುಕುತ್ತಿರುತ್ತಿತ್ತು. ಬೇಲಿಕೇರಿ ಬಂದರಿನ ಮೂಲಕ ಅಕ್ರಮವಾಗಿ ಅದಿರು ಸಾಗಣೆಗೆ ಸಂಬಂಧಪಟ್ಟಿದ್ದ ಪ್ರಕರಣಗಳ ವಿಚಾರಣೆಗಾಗಿ ಶಾಸಕರು, ಮಂತ್ರಿಗಳನ್ನು, ಹಿರಿಯ ಅಧಿಕಾರಿಗಳನ್ನು ಇಲ್ಲಿನ ಕಟಕಟೆಯಲ್ಲಿ ತಂದು ನಿಲ್ಲಿಸಲಾಗುತ್ತಿತ್ತು.

2013ರ ಕೊನೆಯ ವೇಳೆಗೆ, ಸಿಬಿಐ ವಿಶೇಷ ನ್ಯಾಯಾಲಯದಲ್ಲಿ ನಡೆಯುತ್ತಿದ್ದ ಚಟುವಟಿಕೆಗಳ ಬಿರುಸು ಕೊಂಚ ಕಡಿಮೆಯಾಯಿತು. 2014ರ ಸುಮಾರಿಗೆ ಇಲ್ಲಿನ ಕಲಾಪಗಳು ಪ್ರತಿದಿನದ ಸುದ್ದಿಯಾಗುವುದು ನಿಂತೇ ಹೋದವು ಎಂಬಂತಾಯಿತು.

ಸೂಕ್ಷ್ಮ ಪ್ರಕರಣ:

ಸಿಬಿಐ ವಿಶೇಷ ನ್ಯಾಯಾಲಯದಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ವಿರುದ್ಧ ಇದ್ದ ಏಕೈಕ ಪ್ರಕರಣ ವಿಚಾರಣೆಗೆ ಮುನ್ನವೇ ಎಲ್ಲರ ಕುತೂಹಲವನ್ನೂ ಕೆರಳಿಸಿತ್ತು.

2012ರ ಅಕ್ಟೋಬರ್ ತಿಂಗಳಿನಲ್ಲಿಯೇ ಸಿಬಿಐ, ಅವರ ಮೇಲಿದ್ದ ಪ್ರಕರಣದಲ್ಲಿ ಅಂತಿಮ ದೋಷಾರೋಪ ಪಟ್ಟಿಯನ್ನೂ ಸಲ್ಲಿಸಿತ್ತು. ಪಟ್ಟಿಯಲ್ಲಿ, ಯಡಿಯೂರಪ್ಪ, ಪುತ್ರರಾದ ಬಿ. ವೈ. ರಾಘವೇಂದ್ರ, ಬಿ. ವೈ. ವಿಜಯೇಂದ್ರ, ಅಳಿಯ ಸೋಹನ್ ಕುಮಾರ್, ಪ್ರೇರಣಾ ಎಜುಕೇಶನ್ ಅಂಡ್ ಸೂಶಿಯಲ್ ಟ್ರಸ್ಟ್, ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿ, ಸೌತ್ ವೆಸ್ಟ್ ಮೈನಿಂಗ್ ಲಿ., ಜೆಎಸ್ಡಬ್ಲ್ಯೂ ಸ್ಟೀಲ್ಸ್ ಲಿ. ಹಾಗೂ ಅದರ ಸಿಇಓ ವಿನೋದ್ ನೋವಲ್, ಹಿರಿಯ ಉಪಾಧ್ಯಕ್ಷ ವಿಕಾಶ್ ಶರ್ಮಾ ಹಾಗೂ ಶ್ರೀಕಾಂತ್ ಶೆಟ್ಟಿ ನಿರ್ದೇಶಕರಾಗಿದ್ದ ರಿಯಲ್ ಟೆಕ್ನಿಕಲ್ ಸಲ್ಯೂಷನ್ ಪ್ರೈ ಲಿ., ಮುರಳೀಧರ್ ದಾಸ್ ನಿರ್ದೇಶಕರಾಗಿದ್ದ ಜೈ ಭಾರತ್ ಟೆಕ್ನಿಕಲ್ ಪ್ರೈ ಲಿ., ವಿವೇಕಾನಂದ ಕುಲಕರ್ಣಿ ನಿರ್ದೇಶಕರಾಗಿದ್ದ ಇಂಡಸ್ಟ್ರಿಯಲ್ ಮ್ಯಾನ್ ಪವರ್ ಸಪ್ಲೈ ಅಂಡ್ ಸರ್ವಿಸಸ್ ಪ್ರೈ ಲಿ., ಕಂಪನಿಗಳನ್ನು ಆರೋಪಿಗಳು ಎಂದು ಹೇಳಲಾಗಿತ್ತು. ಜತೆಗೆ, ಕೆಲವು ಅನಾಮಧೇಯ ಅಧಿಕಾರಿಗಳು ಮತ್ತಿತರರ ಬಗ್ಗೆಯೂ ಉಲ್ಲೇಖಿಸಲಾಗಿತ್ತು.

‘ರಾಚೇನಹಳ್ಳಿಯಲ್ಲಿ ಭೂಮಿಯನ್ನು ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಡಿ-ನೋಟಿಫೈ ಮಾಡಿದ್ದರು. ಇದನ್ನು ಅವರ ಪುತ್ರರು ಹಾಗೂ ಅಳಿಯ ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿ ಅವರಿಂದ ಅಕ್ರಮವಾಗಿ ಖರೀದಿ ಮಾಡಿದ್ದರು. ನಂತರ ಅದನ್ನು ಸೌತ್ ವೆಸ್ಟ್ ಮೈನಿಂಗ್ ಕಂಪನಿಗೆ ಮಾರುಕಟ್ಟೆ ದರಕ್ಕಿಂತ ದುಬಾರಿ ಬೆಲೆಗೆ ಮಾರಿದ್ದರು. ಹಣವನ್ನು ತಮ್ಮ ಸ್ವಾಮ್ಯದ ವಿದ್ಯಾಸಂಸ್ಥೆಗೆ ಚೆಕ್ ಮೂಲಕ ಪಡೆದಿದ್ದರು’ ಎಂಬುದು ದೋಷಾರೋಪ ಪಟ್ಟಿಯಲ್ಲಿರುವ ಆರೋಪಗಳ ಸಾರಾಂಶ.

ಪ್ರಕರಣದಲ್ಲಿ ಒಟ್ಟು 168 ಜನರನ್ನು ಸಾಕ್ಷಿಗಳು ಎಂದು ಸಿಬಿಐ ಹೆಸರಿಸಿತ್ತು.

ಇತ್ತೀಚೆನ ಬೆಳವಣಿಗೆಗಳು:

”ಕಳೆದ 8-9 ತಿಂಗಳುಗಳಿಂದ ಈಚೆಗೆ ಈ ಪ್ರಕರಣದ ವಿಚಾರಣೆಯ ವೇಗದಲ್ಲಿ ಗಣನೀಯ ಬದಲಾವಣೆಗಳಾಗಿತ್ತು,” ಎಂದು ನ್ಯಾಯಾಲಯದ ಮೂಲಗಳು ತಿಳಿಸುತ್ತವೆ. “ಬಹುತೇಕ ಸಾಕ್ಷಿಗಳು ವಿಚಾರಣೆಗೆ ಹಾಜರಾಗದೆ ತಲೆ ಮರೆಸಿಕೊಂಡರು. ಜತೆಗೆ, ವಿಚಾರಣೆಯೂ ತ್ವರಿತ ಗತಿಯಲ್ಲಿ ನಡೆಯತೊಡಗಿತು. ಯಡಿಯೂರಪ್ಪ ಬಿಜೆಪಿ ರಾಜ್ಯಾಧ್ಯಕ್ಷರಾಗುವ ಮುನ್ನವೇ ಪ್ರಕರಣದ ವಿಚಾರಣೆ ಮುಗಿದು ತೀರ್ಪು ಬರಬಹುದು ಎಂದು ಊಹಿಸಲಾಗಿತ್ತು,” ಎಂದು ಸಿಬಿಐ ಮೂಲಗಳು ಈಗ ಮಾಹಿತಿ ಹಂಚಿಕೊಳ್ಳುತ್ತವೆ.

ಆದರೆ, ಕಳೆದ ವಾರ ಹೈಕೋರ್ಟ್ ಹೊರಡಿಸಿರುವ ನ್ಯಾಯಾಧೀಶರ ವರ್ಗಾವಣೆ ಪಟ್ಟಿಯುಲ್ಲಿ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಬಿ. ಕೆ. ನಾಯಕ್ ಅವರ ಹೆಸರು ಇದೆ ಎನ್ನಲಾಗುತ್ತಿದೆ. ಹೈಕೋರ್ಟ್ ಈಗಾಗಲೇ ವರ್ಗಾವಣೆ ಪಟ್ಟಿಯನ್ನು ವೆಬ್ ಸೈಟ್ನನಲ್ಲಿ ಪ್ರಕಟಿಸಿದೆಯಾರೂ, ಕೊನೆಯ ಕ್ಷಣದ ಬದಲಾವಣೆಗಳ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ, ಸ್ಪಷ್ಟಪಡಿಸುವುದು ಕಷ್ಟ.

ಬಹುಶಃ ಹಾಗೇನಾದರೂ ಆದರೆ, ಯಡಿಯೂರಪ್ಪ ಹಾಗೂ ಇನ್ನಿತರರ ವಿರುದ್ಧ ನಡೆಯುತ್ತಿರುವ ಪ್ರಕರಣದಲ್ಲಿ ತೀರ್ಪು ಹೊರಬೀಳುವುದು ಇನ್ನಷ್ಟು ದಿನ ತಡವಾಗಬಹುದು. “ಇದೂ ಕೂಡ ಮಾಜಿ ಮುಖ್ಯಮಂತ್ರಿಗಳ ದುಃಖಕ್ಕೆ ಕಾರಣ ಇರಬಹುದು,” ಎನ್ನುತ್ತಾರೆ ನ್ಯಾಯಾಲಯದ ಕಲಾಪವನ್ನು ಗಮನಿಸುತ್ತಿರುವ ವಕೀಲರೊಬ್ಬರು.

ನ್ಯಾಯಾಂಗ ವ್ಯವಸ್ಥೆಯ ಇಂತಹ ತಾಂತ್ರಿಕ ಅಡಚಣೆಯಿಂದಾಗಿ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ‘ಕೈಗೆ ಬಂದ ತುತ್ತು, ಬಾಯಿಗೆ ಬರಲಿಲ್ಲ’ ಎಂಬಂತಾಗಿದೆ ಎಂದು ನ್ಯಾಯಾಲಯದ ಆವರಣದಲ್ಲಿ ಮಾತುಗಳು ಕೇಳಿಬರುತ್ತಿವೆ.

(ಸಾಂದರ್ಭಿಕ ಚಿತ್ರ: ಚುರುಮುರಿ)

 

Leave a comment

Top