An unconventional News Portal.

ಬರ ಎಂದರೆ ಎಲ್ಲರಿಗೂ ಇಷ್ಟ: ಯಡಿಯೂರಪ್ಪ ಸಲ್ಲಿಸಿದ ವರದಿಯಲ್ಲಿ ಕಾಳಜಿ ಹುಡುಕುವುದು ಕಷ್ಟ!

ಬರ ಎಂದರೆ ಎಲ್ಲರಿಗೂ ಇಷ್ಟ: ಯಡಿಯೂರಪ್ಪ ಸಲ್ಲಿಸಿದ ವರದಿಯಲ್ಲಿ ಕಾಳಜಿ ಹುಡುಕುವುದು ಕಷ್ಟ!

ಬಿಜೆಪಿ ರಾಜ್ಯಾಧ್ಯಕ್ಷ ಬಿ. ಎಸ್. ಯಡಿಯೂರಪ್ಪ ಮಂಗಳವಾರ ರಾಜ್ಯಪಾಲರಿಗೆ ಸಲ್ಲಿಸಿರುವ 6 ಪುಟಗಳ ‘ಬರ ಅದ್ಯಯನ ವರದಿ’ ಹಲವು ಕಾರಣಗಳಿಗಾಗಿ ಕುತೂಹಲ ಮೂಡಿಸಿದೆ.

ವರದಿಯಲ್ಲಿ ಬಳಸಿರುವ ಭಾಷೆ, ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಹೊರಹಾಕಿರುವ ಆಕ್ರೋಶ, ಬರದ ಕುರಿತು ಮೇಲ್ಮಟ್ಟದ ಚಿತ್ರಣ ಹಾಗೂ ಅಂಕಿ ಅಂಶಗಳಿಲ್ಲದಿರುವುದೇ ವರದಿಯ ಮುಖ್ಯಾಂಶಗಳು. ಇಡೀ ವರದಿಯಲ್ಲಿ ಕೆಲವು ಕಡೆಗಳಲ್ಲಿ ಬರದಿಂದ ನಲುಗಿ ಹೋಗಿರುವ ಜನರ ಕುರಿತು ಕಾಳಜಿ ವ್ಯಕ್ತಪಡಿಸಿರುವುದು ಕಂಡು ಬಂದರೂ, ಮರು ಕ್ಷಣವೇ ಅದು ರಾಜ್ಯ ಸರಕಾರದ ವಿರುದ್ಧ ರಾಜಕೀಯ ಭಿನ್ನಾಭಿಪ್ರಾಯಕ್ಕೆ ಒತ್ತು ನೀಡಿರುವುದು ಕಂಡು ಬರುತ್ತಿದೆ.

ವರದಿ ಏನಿದೆ?:

bjp-001ವರದಿ ಆರಂಭವಾಗುವುದೇ, “ಘನತೆವೆತ್ತ ರಾಜ್ಯಪಾಲರೇ, ನಿಮಗೆ ಬರದ ಪರಿಸ್ಥಿತಿಯ ಕುರಿತು ಅರಿವಿದೆ,” ಎಂದು. ಹೀಗೆ ಶುರುವಾಗುವ ವರದಿಯು, ಬರದ ಹಿನ್ನಲೆಯನ್ನು ನಿರೂಪಿಸುತ್ತ, ಇಡೀ ರಾಜ್ಯ ‘ಜ್ವಾಲಾಮುಖಿ’ಯ ಮೇಲೆ ಕುಳಿತ ಸ್ಥಿತಿ ಇದೆ ಎನ್ನುತ್ತದೆ. ನಂತರ 8 ಜಿಲ್ಲೆಗಳಲ್ಲಿ ಬರ ಅಧ್ಯಯನವನ್ನು ಮಾಡಲಾಗಿದೆ. ಬಿಜೆಪಿಯ ಒಟ್ಟು 12 ತಂಡಗಳಿಂದಲೂ ಬರವನ್ನು ಅವಲೋಕಿಸಲಾಗಿದೆ. ರಾಜ್ಯದ 150 ತಾಲೂಕುಗಳಲ್ಲಿ ಬರದ ಚಿತ್ರಣ ಕಂಡು ಬಂದಿದೆ ಎಂದು ವರದಿ ಹೇಳುತ್ತದೆ. ಇದು ಕಳೆದ ನಾಲ್ಕು ದಶಕಗಳಲ್ಲಿ ಕಾಣಿಸಿಕೊಂಡ ಅತೀ ಭೀಕರ ಬರ ಎಂದು ನಮೋದಿಸಲಾಗಿದೆ.

ಅಲ್ಲಿಂದ ಮುಂದಕ್ಕೆ ವರದಿಯಲ್ಲಿ ಹೆಚ್ಚಿನ ಗಮನವನ್ನು ರಾಜ್ಯ ಸರಕಾರದ ಅಸೂಕ್ಷ್ಮತೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಉಡಾಫೆಯ ನಡವಳಿಕೆಗಳನ್ನು ರಾಜ್ಯಪಾಲರ ಗಮನಕ್ಕೆ ತರಲು ಮೀಸಲಿಡಲಾಗಿದೆ. ಜತೆಗೆ, ಕೇಂದ್ರ ಸರಕಾರದ ನೆರವನ್ನು ಪಡೆದುಕೊಳ್ಳುವಲ್ಲಿ ರಾಜ್ಯ ಸರಕಾರ ರಾಜಕೀಯ ನಡೆಸಿದೆ ಎಂದು ಆರೋಪಿಸಲಾಗಿದೆ.

ಕುತೂಹಲದ ಸಂಗತಿ ಏನೆಂದರೆ, ‘ನಂಬಿಕಾರ್ಹ ಮೂಲ’ಗಳನ್ನು ಉಲ್ಲೇಖಿಸಿರುವ ವರದಿ, ಕೇಂದ್ರ ಸರಕಾರ ನೀಡಿದ 2575 ಕೋಟಿ ಹಣದಲ್ಲಿ ಕಾಲು ಭಾಗವನ್ನೂ ವಿನಿಯೋಗಿಸಿಲ್ಲ ಎಂದು ಆರೋಪಿಸಿರುವುದು. ಆದರೆ ಈ ಬಗ್ಗೆ ಹೆಚ್ಚಿನ ಮಾಹಿತಿ ವರದಿಯಲ್ಲಿ ಸಿಗುವುದಿಲ್ಲ.

ಇದ್ದಿದ್ದರಲ್ಲಿ ಅಧ್ಯಯನ ಕಂಡು ಬರುವುದು ಹೈದ್ರಾಬಾದ್ ಕರ್ನಾಟಕ ಅಭಿವೃದ್ಧಿ ಮಂಡಳಿಗೆ 2014-15 ಹಾಗೂ 2015-16ನೇ ಸಾಲಿನಲ್ಲಿ ಮೀಸಲಿಟ್ಟ ಹಾಗೂ ಬಿಡುಗಡೆ ಮಾಡಿದ ಹಣ ಹಾಗೂ ಅದರ ವಿನಿಯೋಗದ ವಿಚಾರಗಳಲ್ಲಿ ಬರೆದ ಒಂದು ಪ್ಯಾರದಲ್ಲಿ. ಆದರೆ, ಇದರ ಬಗ್ಗೆಯೂ ವರದಿ ಹೆಚ್ಚಿನ ಗಮನ ನೀಡದೆ ಮುಂದಕ್ಕೆ ಸಾಗುತ್ತದೆ.

ಉಳಿದಂತೆ, ರಾಜ್ಯ ಸಚಿವರು ಯಾವುದೋ ಸಂದರ್ಭದಲ್ಲಿ ನೀಡಿದ ಅಸೂಕ್ಷ್ಮ ಹೇಳಿಕೆಗಳನ್ನು ವರದಿ ಎಳೆದು ತಂದಿದೆ. ಹೈದ್ರಾಬಾದ್ ಕರ್ನಾಟಕದ 6 ಜಿಲ್ಲೆಗಳ ಬಗ್ಗೆ ‘ಸಚಿತ್ರ’ ವರದಿ ನೀಡುತ್ತೀವಿ ಎಂದರೂ, ಎಲ್ಲಿಯೂ ಅಂಕಿ ಅಂಶಗಳು ಸಿಗುವುದಿಲ್ಲ. ಕೊನೆಯಲ್ಲಿ, ಸಾಮಾನ್ಯ ಎನ್ನಿಸುವಂತಹ ಬೇಡಿಕೆಗಳನ್ನು ಮುಂದಿಡುತ್ತದೆ ಮತ್ತು ರಾಜ್ಯಪಾಲರ ಮಧ್ಯಪ್ರವೇಶಕ್ಕೆ ಆಗ್ರಹಿಸುತ್ತದೆ.

ಮಾದರಿ ಇಲ್ಲಿದೆ:

ಸೋಮವಾರವಷ್ಟೆ, ಮಧ್ಯಪ್ರದೇಶ ಹಾಗೂ ಉತ್ತರ ಪ್ರದೇಶಗಳಲ್ಲಿನ ಬರದ ಕುರಿತು ವಿಸ್ತೃತ ವರದಿಯೊಂದನ್ನು ‘ಸ್ವರಾಜ್ ಅಭಿಯಾನ’ ಸಂಘಟನೆ ಬಿಡುಗಡೆ ಮಾಡಿದೆ. ಅದು ನೀಡಿದ ವರದಿಯ ಪ್ರಮುಖ ಅಂಶಗಳು ಹೀಗಿವೆ,

  • ಬುಂದೇಲಖಂಡದಲ್ಲಿ ಕಳೆದ ಮೂರು ತಿಂಗಳಲ್ಲಿ ಹಳ್ಳಿಗಳು ಕುಡಿಯುವ ನೀರಿದ ಸಮಸ್ಯೆ ಎದುರಿಸುತ್ತಿವೆ. ಇದರಲ್ಲಿ ಶೇ. 75ರಷ್ಟು ಹಳ್ಳಿಗಳಿಗೆ ಸರಕಾರದ ಕಡೆಯಿಂದ ಯಾವುದೇ ರೀತಿಯ ನೆರವು ಸಿಕ್ಕಿಲ್ಲ.
  • ಉತ್ತರ ಪ್ರದೇಶದ ಶೇ. 59 ಹಳ್ಳಿಗಳಲ್ಲಿ ಹಾಗೂ ಮಧ್ಯಪ್ರದೇಶದ ಶೇ. 35ರಷ್ಟು ಹಳ್ಳಿಗಳಲ್ಲಿ ಕನಿಷ್ಟ ಹತ್ತು ಹಳ್ಳಿಗಳಿಗೆ ದಿನಕ್ಕೆ ಎರಡು ಹೊತ್ತಿನ ಊಟವೂ ಸಿಗುತ್ತಿಲ್ಲ.
  • ಮಧ್ಯಪ್ರದೇಶದ ಶೇ. 5ರಷ್ಟು ಹಳ್ಳಿಗಳಲ್ಲಿ ನರೇಗಾ ಯೋಜನೆ ಮೂಲಕ ಗ್ರಾಮಸ್ಥರಿಗೆ ಕೆಲಸ ಸಿಗುತ್ತಿದೆ. ಉತ್ತರ ಪ್ರದೇಶದ ಶೇ. 29ರಷ್ಟು ಹಳ್ಳಿಗಳಷ್ಟೆ ಕೇಂದ್ರದ ಈ ಯೋಜನೆ ಅಡಿಯಲ್ಲಿ ಜನರಿಗೆ ನೆರವಾಗುತ್ತಿವೆ.
  • ಮಧ್ಯಪ್ರದೇಶದ ಶೇ. 40ರಷ್ಟು ಹಳ್ಳಿಗಳಲ್ಲಿ ಒಂದು ಅಥವಾ ಎರಡು ಬೋರ್ವೆಲ್ಗಳಿವೆ. ಉತ್ತರ ಪ್ರದೇಶದ ಶೇ. 14 ಹಳ್ಳಿಗಳಲ್ಲಿ ಮಾತ್ರವೇ ಒಂದೆರಡು ಕೈ ಪಂಪ್ಗಳಿದ್ದು, ಇವೇ ಕುಡಿಯುವ ನೀರಿನ ಪ್ರಾಥಮಿಕ ಮೂಲಗಳಾಗಿವೆ.
  • ಉತ್ತರ ಪ್ರದೇಶದ ಬುಂದೇಲಖಂಡದಲ್ಲಿ ಶೇ. 41ರಷ್ಟುಹಳ್ಳಿಗಳಲ್ಲಿ, ಮಧ್ಯಪ್ರದೇಶದ ಶೇ. 21ರಷ್ಟು ಹಳ್ಳಿಗಳಲ್ಲಿ ಹಸಿವಿನಿಂದ ಜಾನುವಾರುಗಳು ಸತ್ತ ವರದಿಯಾಗಿದೆ.

ಇದು ಬರದ ಕುರಿತು ಸ್ವತಂತ್ರ ಸಂಘಟನೆಯೊಂದು ನೀಡಿದ ವರದಿ. ಇದಕ್ಕೆ ಹೋಲಿಸಿದರೆ, ರಾಜ್ಯ ಬಿಜೆಪಿ ಅಧ್ಯಕ್ಷರು ಸಲ್ಲಿಸಿರುವ ವರದಿಯಲ್ಲಿ ಇಡೀ ಕರ್ನಾಟಕದ ಬರದ ಚಿತ್ರಣ ಲಭ್ಯವಾಗುವುದಿಲ್ಲ. ಬದಲಿಗೆ ಬರದಲ್ಲೂ ರಾಜಕಾರಣ ಮಾಡಲು ಹೊರಟಿದ್ದು ಢಾಳಾಗಿ ಕಾಣಿಸುತ್ತಿದೆ.

ಮಳೆ ಬಿದ್ದು ರಾಜ್ಯ ತಂಪಾಗಿರುವ ಕಾಲದಲ್ಲಿ ಬಿಜೆಪಿಯಂತ ಪ್ರಮುಖ ಪಕ್ಷವೊಂದು ಇಡೀ ರಾಜ್ಯದ ಬರದ ಕುರಿತು ಸಲ್ಲಿಸುವ ವರದಿ ಸಹಜ ನಿರೀಕ್ಷೆಗಳನ್ನು ಮೂಡಿಸಿತ್ತು. ಬರದ ವಿಚಾರದಲ್ಲಿ ರಾಜ್ಯ ಸರಕಾರದ ಹೊಣೆಗೇಡಿತನಗಳನ್ನು ಜನರ ಮುಂದೆ ನಿರೂಪಿಸಲು ಇದ್ದ ಅವಕಾಶವೊಂದನ್ನು ಬಿಜೆಪಿ ಕಳೆದುಕೊಂಡಿತು.

 

ENTER YOUR E-MAIL

Name
Email *
March 2017
M T W T F S S
« Feb    
 12345
6789101112
13141516171819
20212223242526
2728293031  

Top