An unconventional News Portal.

ಭಾರತದ ಜಾತಿ ವ್ಯವಸ್ಥೆ ವಿರುದ್ಧ 140 ಪದಗಳ ‘ಹೊಸ ಯುದ್ಧ’!

ಭಾರತದ ಜಾತಿ ವ್ಯವಸ್ಥೆ ವಿರುದ್ಧ 140 ಪದಗಳ ‘ಹೊಸ ಯುದ್ಧ’!

ಎರಡು ತಿಂಗಳ ಹಿಂದೆ ಕೋಲ್ಕತ್ತಾದಲ್ಲಿ ಮೇಲ್ಸೇತುವೆ ಕುಸಿದು ಹಲವರು ಸಾವನ್ನಪ್ಪಿದ ಘಟನೆ ನಡೆದ ಬೆನ್ನಲ್ಲೇ ನಿರ್ಮಾಣ ಕಂಪನಿಯ ಕಳಪೆ ಕಾಮಗಾರಿಯ ಕುರಿತು ಆಕ್ರೋಶ ವ್ಯಕ್ತವಾಗಿತ್ತು.

ಶ್ರೀಮಂತ ಉದ್ಯಮಿ, ಮೋತಿಲಾಲ್ ಓಸ್ವಾಲ್, ಕಳಪೆ ಕಾಮಗಾರಿಗೆ ದೇಶದ ತಾಂತ್ರಿಕ ವರ್ಗದಲ್ಲಿರುವ ಕೆಳಜಾತಿಯವರನ್ನು ದೂಷಿಸುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ವಿವಾದವನ್ನು ಹುಟ್ಟು ಹಾಕಿದ್ದರು. ‘ದೇಶದಲ್ಲಿ ನೈಪುಣ್ಯತೆಯ ಆಧಾರದ ಮೇಲೆ ಪದವಿ ನೀಡುವ ಬದಲು ಮೀಸಲಾತಿ ಮೂಲಕ ಅವಕಾಶ ನೀಡುತ್ತಿರುವುದು ಇಂತಹ ದುರಂತಗಳು ನಡೆಯಲು ಕಾರಣ’ ಎಂದು ಟ್ವೀಟ್ ಮಾಡಿದ್ದರು. ಇದಕ್ಕೆ ಟ್ವಿಟರ್ನಲ್ಲಿಯೇ ಭಾರಿ ವಿರೋಧ ವ್ಯಕ್ತವಾಗಿತ್ತು. ಕೊನೆಗೆ, ಮೋತಿಲಾಲ್ ತಮ್ಮ ಟ್ವೀಟ್ ಅಳಿಸಿ ಹಾಕಿ, ಕ್ಷಮಾಪಣೆ ಕೋರಿದ್ದರು.

ಅಮೆರಿಕಾದಲ್ಲಿ ನಡೆಯುತ್ತಿರುವ ‘ಬ್ಲಾಕ್ ಟ್ವಿಟರ್’ ಚಳವಳಿಯ ಮಾದರಿಯಲ್ಲಿಯೇ ಭಾರತದ ದಲಿತ ವರ್ಗದಿಂದ ಬಂದ ಯುವಕ ಯುವತಿಯರು ಟ್ವಿಟರ್ ಮೂಲಕ ಆಗಾಗ್ಗೆ ತಮ್ಮ ನಿಲುವುಗಳನ್ನು ಹೊರ ಹಾಕುತ್ತಿರುತ್ತಾರೆ. ಈ ಮೂಲಕ ಭಾರತದಲ್ಲಿ ನಡೆಯುವ ಜಾತೀಯತೆ, ದೌರ್ಜನ್ಯ ಹಾಗೂ ಮುಖ್ಯವಾಹಿನಿ ಮಾಧ್ಯಮಗಳು ದೂರ ಇಟ್ಟಿರುವ ಜಾತಿ ವಿಚಾರಗಳನ್ನು ಮುನ್ನಲೆಗೆ ತರುವ ಪ್ರಯತ್ನ ಮಾಡುತ್ತಿದ್ದಾರೆ.

ಮೋತಿಲಾಲ್ ಓಸ್ವಾಲ್ ವಿರುದ್ಧ ಟ್ವಿಟರ್ನಲ್ಲಿ ದಲಿತರು #BoycottMotilalOswal ಎಂಬ ಹ್ಯಾಶ್ ಟ್ಯಾಗ್ ಮೂಲಕ ಆಕ್ರೋಶ ಭರಿತ ಪ್ರತಿರೋಧ ಒಡ್ಡಿದರು. ಜತೆಗೆ ತಮ್ಮವರಿಗೆ ಓಸ್ವಾಲ್ ವಿರುದ್ದ ಜಾತಿ ನಿಂದನೆ ಪ್ರಕರಣ ದಾಖಲಿಸುವಂತೆ ಕರೆ ನೀಡಿದರು. ಮೇಲ್ಸೇತುವೆ ಕಟ್ಟಿದ ಕಂಪನಿಯು ಕೆಳಜಾತಿಗಳಿಗೆ ಮೀಸಲಾತಿ ಮೂಲಕ ಉದ್ಯೋಗ ನೀಡಿರಲಿಲ್ಲ ಎಂಬುದನ್ನು ಎತ್ತಿ ತೋರಿಸಿದರು.

“ಭಾರತದ ಜಾತಿ ವ್ಯವಸ್ಥೆ ವಿರುದ್ಧ ದಲಿತರು ನಡೆಸುತ್ತಿರುವ ಚಳವಳಿಗೆ ಟ್ವಿಟರ್ ಹೊಸ ಪರಿಭಾಷೆಯನ್ನು ನೀಡಿದೆ,” ಎಂದು ‘ಅಂಬೇಡ್ಕರ್ ಕ್ಯಾರವಾನ್’ ಎಂಬ ಟ್ವಿಟರ್ ಅಕೌಂಟ್ ನಡೆಸುತ್ತಿರುವ ಪ್ರದೀಪ್ ತಿಳಿಸಿದರು. ಅವರು ತಮ್ಮ ಹೆಸರನ್ನು ಮಾತ್ರವೇ ಹೇಳಿದರು, ಯಾಕೆಂದರೆ ಭಾರತದಲ್ಲಿ ಸರ್ ನೇಮ್ ಕೂಡ ಜಾತಿಯನ್ನು ಸೂಚಿಸುತ್ತವೆ.

dalith-india-1

ಶತಮಾನಗಳಿಂದ ಭಾರತದಲ್ಲಿ ಕೆಳ ಜಾತಿ ಸಮುದಾಯಗಳನ್ನು ದೂರ ಇಡಲಾಗಿದೆ. ಬಹುತೇಕ ದಲಿತರು ಇವತ್ತಿಗೂ ಭೂರಹಿತ ಕಾರ್ಮಿಕರಾಗಿದ್ದಾರೆ, ಸಮುದಾಯ ನೀರಿನ ಮೂಲಗಳಿಂದ ಬಹಿಷ್ಕೃತಗೊಂಡಿದ್ದಾರೆ, ಮಲಹೊರುವ ಕೆಲಸ ಮಾಡಿಕೊಂಡು ಊರಿನಿಂದ ಹೊರಗೆ ವಾಸಿಸುತ್ತಿದ್ದಾರೆ. ಮೇಲ್ಜಾತಿಯವರ ಜತೆ ದಲಿತರ ಮದುವೆಯಾಗುವುದು ಇವತ್ತಿಗೂ ಹುಬ್ಬೇರಿಸುವಂತೆ ಮಾಡುತ್ತದೆ, ಕೆಲವು ಹಳ್ಳಿಗಳಲ್ಲಿ ಈ ಕಾರಣಕ್ಕೆ ದುರಂತಗಳು ನಡೆದು ಹೋಗುತ್ತವೆ. ಹಲವು ದಲಿತರು ಸ್ಮಾರ್ಟ್ ಫೋನ್ ಹಾಗೂ ಇಂಟರ್ನೆಂಟ್ ಹೊಂದಲು ಆಗದಷ್ಟು ಬಡತನದಲ್ಲಿದ್ದಾರೆ.

ಕಳೆದ 60 ವರ್ಷಗಳಲ್ಲಿ ತಂದ ಕೆಲವು ಕಾಯ್ದೆಗಳಿಂದಾಗಿ ದಲಿತರಲ್ಲಿ ಚಿಕ್ಕ ಸಂಖ್ಯೆಯ ಮಧ್ಯಮ ವರ್ಗ ನಿರ್ಮಾಣವಾಗಿದೆ. ಇದರಲ್ಲಿ ಅಧಿಕಾರಿಗಳು, ವೈದ್ಯರು, ರಾಜಕಾರಣಿಗಳು ಹಾಗೂ ಎಂಜಿನಿಯರ್ಗಳಿದ್ದಾರೆ.

“ಮೇಲ್ವರ್ಗದ ಜನರಿಗೆ ಟ್ವಿಟರ್ ಎಂಬುದು ಮತ್ತೊಂದು ಹೊಸ ಅನ್ವೇಷಣೆ. ಆದರೆ ದಲಿತರಿಗೆ ಇದು ಕ್ರಾಂತಿಯನ್ನು ಹುಟ್ಟುಹಾಕುವ ಸಾಧನ,” ಎಂದು ದಲಿತ ಬರಹಗಾರ ಚಂದ್ರಭಾನ್ ಪ್ರಸಾದ್ ಹೇಳುತ್ತಾರೆ. “ಇಲ್ಲಿ ದಲಿತರಿಗೆ ಮುಕ್ತ ಪ್ರವೇಶ ಇದೆ. ಇಲ್ಲಿ ಯಾರೂ ನೀವು ಬಳಸುವ ಪದಗಳ ಮೇಲೆ ನಿಯಂತ್ರಣ ಹೊಂದಿಲ್ಲ, ನಿಮಗೆ ಅನ್ನಿಸಿದ್ದನ್ನು ಬರೆದರೆ ಹೆಬ್ಬೆರಳು ತುಂಡರಿಸುವವರು ಇಲ್ಲ,” ಎನ್ನುತ್ತಾರೆ ಅವರು.

ಆರಂಭದಲ್ಲಿ ದಲಿತರು ಫೇಸ್ ಬುಕ್ ಬಳಸುತ್ತಿದ್ದರು. ಇತ್ತೀಚೆಗೆ ಟ್ವಿಟರ್ 6 ಸ್ಥಳೀಯ ಭಾಷೆಗಳಲ್ಲಿ ಹ್ಯಾಶ್ ಟ್ಯಾಗ್ ಬಳಕೆ ಮಾಡಲು ಅವಕಾಶ ನೀಡಿದ ನಂತರ ಅವರ ಗಮನ ಟ್ವಿಟರ್ ಕಡೆಗೆ ಸೆಳೆದಿದೆ.

twitter trend

ಹೆಚ್ಚು ಕಡಿಮೆ ಸುಮಾರು 2. 20 ಕೋಟಿ ಭಾರತೀಯರು ಟ್ವಿಟರ್ ಬಳಕೆ ಮಾಡುತ್ತಿದ್ದಾರೆ ಎಂದು 2014ರ ಒಂದು ವರದಿ ಹೇಳುತ್ತದೆ. ಇದು ಸಾರ್ವಜನಿಕ ಚರ್ಚೆಗಳನ್ನು ರೂಪಿಸುತ್ತಿದೆ ಎಂದು ಹಲವರು ಹೇಳುತ್ತಾರೆ. ಹಲವು ರಾಜಕಾರಣಿಗಳು, ಪ್ರಧಾನಿ ನರೇಂದ್ರ ಮೋದಿ ಆದಿಯಾಗಿ ನಿಯಮಿತವಾಗಿ ಟ್ವಿಟರ್ ಬಳಕೆ ಮಾಡುತ್ತಾರೆ. ರಾಜಕೀಯ ಪಕ್ಷಗಳು ತಮ್ಮದೇ ಆದ ಟ್ವಿಟರ್ ಸೇನೆಯನ್ನು ಹೊಂದಿವೆ. ಮುಖ್ಯವಾಹಿನಿ ಮಾಧ್ಯಮಗಳನ್ನು ಟೀಕಿಸಲು ಅಥವಾ ಅವುಗಳ ಮೇಲೆ ಪ್ರಭಾವ ಬೀರಲು ಸಮುದಾಯಗಳೂ ಟ್ವಿಟರ್ ಬಳಕೆ ಮಾಡುತ್ತಿವೆ.

“ರಾಷ್ಟ್ರೀಯ ಮಾಧ್ಯಮಗಳಿಗೆ ದಲಿತರ ವಿಚಾರಗಳನ್ನು ನಿಯಮಿತವಾಗಿ ಸುದ್ದಿ ಮಾಡುವ ಮನಸ್ಸು ಇಲ್ಲ,” ಎನ್ನುತ್ತಾರೆ ‘ದಲಿತ್ ಕ್ಯಾಮೆರಾ’ ಟ್ವಿಟರ್ ಅಕೌಂಟ್ ಹೊಂದಿರುವ ಧರ್ಮತೇಜ.

ಇತ್ತೀಚೆಗೆ ಹೈದ್ರಾಬಾದ್ ವಿಶ್ವವಿದ್ಯಾನಿಲಯಗಳಲ್ಲಿ ಆಡಳಿತ ಮಂಡಳಿ ವಿರುದ್ಧ ದಲಿತ ವಿದ್ಯಾರ್ಥಿಗಳು ನಡೆಸಿದ ಹೋರಾಟದಲ್ಲಿ ಟ್ವಿಟರ್ ಮೂಲಕ ವಿದ್ಯಾರ್ಥಿಗಳು ಕ್ರೀಯಾಶೀಲವಾಗಿ ವಿಡಿಯೋ, ಫೊಟೋ ಹಾಗೂ ಅಭಿಪ್ರಾಯಗಳನ್ನು ಹಂಚಿಕೊಳ್ಳತೊಡಗಿದರು. ದಿಲ್ಲಿಯ ಕೆಲವು ಪತ್ರಕರ್ತರು, ಈ ಸಮಯದಲ್ಲಿ ಮಾಹಿತಿಗಾಗಿ ಟ್ವಿಟರ್ ನೋಡುತ್ತಿದ್ದುದ್ದಾಗಿ ಹೇಳಿದ್ದಾರೆ.

ಟ್ವಿಟರ್ ಬಳಕೆ ಮಾಡುತ್ತಿರುವ ದಲಿತ ಯುವಕ ಯುವತಿಯರು ತಾವು ಆಗಾಗ್ಗೆ ಹೀಯಾಳಿಕೆಗೆ, ಕಾಲೆಳೆಯುವಿಕೆಗೆ ಗುರಿಯಾಗುತ್ತಿರುವುದಾಗಿ ಹೇಳುತ್ತಾರೆ. “ಇದು ನಮ್ಮ ಉದ್ದೇಶ ಕೆಲಸ ಮಾಡುತ್ತಿದೆ ಎಂಬುದನ್ನು ತೋರಿಸುತ್ತದೆ,” ಎನ್ನುತ್ತಾರೆ ಸುಂದರರಾಜನ್. “ದಲಿತ್ ಟ್ವಿಟರ್ ಬೆಳೆಯುತ್ತಿರುವ ಬಗ್ಗೆ ಭಯವಾಗಿದೆ,” ಎನ್ನುತ್ತಾರೆ ಅವರು.

(ವಾಷಿಂಗ್ಟನ್ ಪೋಸ್ಟ್ ಪ್ರಕಟಿಸಿದ ವರದಿಯ ಆಯ್ದ ಭಾಗ ಇದು)

ENTER YOUR E-MAIL

Name
Email *
March 2017
M T W T F S S
« Feb    
 12345
6789101112
13141516171819
20212223242526
2728293031  

Top