An unconventional News Portal.

ಅಖಂಡತೆಯ ಅಳಿವು: ಕ್ಯಾಟಲೋನಿಯ ಜನರ ಪ್ರತ್ಯೇಕ ರಾಷ್ಟ್ರದ ಬೇಡಿಕೆಗೆ ಅಸ್ತು ಎಂದ ಜನಾಭಿಪ್ರಾಯ

ಅಖಂಡತೆಯ ಅಳಿವು: ಕ್ಯಾಟಲೋನಿಯ ಜನರ ಪ್ರತ್ಯೇಕ ರಾಷ್ಟ್ರದ ಬೇಡಿಕೆಗೆ ಅಸ್ತು ಎಂದ ಜನಾಭಿಪ್ರಾಯ

ಗೊಂದಲ, ಘರ್ಷಣೆಗಳ ನಡುವೆ ನಡೆದ ಜನಾಭಿಪ್ರಾಯ ಸಂಗ್ರಹದಲ್ಲಿ ಕೊನೆಗೂ ‘ಕ್ಯಾಟಲೋನಿಯ’ ಪ್ರತ್ಯೇಕ ರಾಷ್ಟ್ರದ ಬೇಡಿಕೆಗೆ ಜನ ಒಪ್ಪಿಗೆ ಸೂಚಿಸಿದ್ದಾರೆ. ಈ ಮೂಲಕ ಸ್ಪೇನ್‌ ದೇಶದ ಸುಮಾರು 75 ಲಕ್ಷ ಜನಸಂಖ್ಯೆ ಇರುವ ಕ್ಯಾಟಲೋನಿಯ ಸಮುದಾಯ ಪ್ರತ್ಯೇಕ ದೇಶವೊಂದನ್ನು ಹೊಂದಲು ಪ್ರಕ್ರಿಯೆಗಳು ಆರಂಭವಾಗಿವೆ.

ಯುರೋಪ್‌ ಖಂಡದ ಪುಟ್ಟ ದೇಶ ಸ್ಪೇನ್‌ನ ಈಶಾನ್ಯ ಭಾಗದ ಸಣ್ಣ ಪ್ರದೇಶವೇ ಕ್ಯಾಟಲೋನಿಯ. ನಮ್ಮ ದೇಶದಲ್ಲಿ ‘ಸಪ್ತ ಸಹೋದರಿಯರು’ ಎಂದು ಕರೆಯುವ ಈಶಾನ್ಯ ಭಾರತದ ಪುಟ್ಟ ರಾಜ್ಯಗಳಂತೆ ಇಲ್ಲಿನ ಜನ ತಮ್ಮದೇ ಆದ ಅಸ್ಮಿತೆಗಳಿಗಾಗಿ ಹೋರಾಟ ಮಾಡಿಕೊಂಡು ಬಂದವರು. ಪ್ರತ್ಯೇಕ ಭಾಷೆ, ಸಂಸ್ಕೃತಿಯನ್ನು ಹೊಂದಿರುವ ಅವರು ಸ್ಪೇನ್‌ ದೇಶದಿಂದ ಪ್ರತ್ಯೇಕವಾಗುವ ಕೂಗನ್ನು ಹಲವು ವರ್ಷಗಳ ಕಾಲ ಜೀವಂತವಾಗಿಟ್ಟುಕೊಂಡು ಬಂದಿದ್ದರು.

ಕ್ಯಾಟಲೋನಿಯ ಜನರ ಸಂಖ್ಯೆ ಸುಮಾರು 75 ಲಕ್ಷ. ಸ್ಪೇನ್‌ ದೇಶದ ಒಟ್ಟಾರೆ ಆರ್ಥಿಕತೆಯಲ್ಲಿ ಇವರ ಪಾಲು ಶೇ. 20ರಷ್ಟಿತ್ತು. ಸ್ಪೇನ್‌ನ ಕೆಲವು ಭೂಭಾಗಗಳು ಹಾಗೂ ಫ್ರಾನ್ಸ್‌ ದೇಶದ ಗಡಿಭಾಗಗಳಲ್ಲಿ ಹೆಚ್ಚಾಗಿ ಕ್ಯಾಟಲೋನಿಯ ಜನರು ವಾಸ ಮಾಡುತ್ತಿದ್ದಾರೆ. ಕ್ಯಾಟಲೋನಿಯ ಭೂಭಾಗ ಎಂಬುದನ್ನು ಮೊದಲು ಗುರುತಿಸಿದ್ದು 12ನೇ ಶತಮಾನದಲ್ಲಿ. ಸ್ಪೇನ್‌ ಸಂಯುಕ್ತ ಸ್ವತಂತ್ರ ದೇಶವಾಗುವ ಮೊದಲೇ ಕ್ಯಾಟಲೋನಿಯ ಜನರ ಪ್ರತ್ಯೇಕ ಆಡಳಿತ ಜಾರಿಯಲ್ಲಿತ್ತು ಎನ್ನುತ್ತದೆ ಇತಿಹಾಸ. 1716ರಲ್ಲಿಯೇ ಮ್ಯಾಡ್ರಿಡ್‌ನಲ್ಲಿ ಆಡಳಿತದ ಕೆಳಗೆ ಬಂದಿದ್ದ ಕ್ಯಾಟಲೋನಿಯ ಇತಿಹಾಸದ ಉದ್ದಕ್ಕೂ ಸ್ವಾಯತ್ತ ರಾಷ್ಟ್ರವಾಗಿಯೇ ಉಳಿದುಕೊಂಡಿತ್ತು.

ಆದರೆ, 1931ರಲ್ಲಿ ಸ್ಪೇನ್‌ ಸ್ವತಂತ್ರ ರಾಷ್ಟ್ರವಾಗಿ ರೂಪುಗೊಂಡಿತು. ಈ ಸಮಯದಲ್ಲಿ ನಡೆದ ಆಂತರಿಕ ನಾಗರಿಕ ಯುದ್ಧದ ನಂತರ ಫ್ರಾನ್ಸಿಸ್ಕೋ ಫ್ರಾಂಕೋ ನೇತೃತ್ವದಲ್ಲಿ ಮಿಲಿಟರಿ ಆಡಳಿತ ಘೋಷಣೆಗೊಂಡಿತು. 1939-1975ರ ನಡುವಿನ ಈ ಮಿಲಿಟರಿ ಆಡಳಿತದ ಸಮಯದಲ್ಲಿ ಕ್ಯಾಟಲೋನಿಯ ಜನರ ಮೇಲಿನ ದಬ್ಬಾಳಿಕೆ ಮಿತಿ ಮೀರಿತು. ಎಷ್ಟರ ಮಟ್ಟಿಗೆ ಎಂದರೆ, ಕ್ಯಾಟಲೋನಿಯ ಜನರು ಸ್ಪೇನ್‌ ವಾಸಿಗಳು ಬಳಸುವ ಹೆಸರುಗಳನ್ನು ತಮ್ಮ ಮಕ್ಕಳಿಗೆ ಇಡುವುದನ್ನು ಫ್ರಾಂಕೋ ಆಡಳಿತ ಕಡ್ಡಾಯಗೊಳಿಸಿತ್ತು. ಕ್ಯಾಟಲೋನಿಯ ಜನರ ಭಿನ್ನ ಭಾಷೆ, ಸಂಸ್ಕೃತಿ ಹಾಗೂ ಇತಿಹಾಸವನ್ನು ಅಳಿಸಿ ಹಾಕುವ ಪ್ರಯತ್ನ ದೊಡ್ಡ ಮಟ್ಟದಲ್ಲಿ ನಡೆಯಿತು. ಕ್ಯಾಟಲಾನ್‌ ಎಂದು ಕರೆಯುವ ಭಾಷೆಯನ್ನು ಸಾರ್ವಜನಿಕವಾಗಿ ಬಳಸಲು ನಿಷೇಧ ಹೇರಲಾಗಿತ್ತು.

ಕೃಪೆ: ಆಲ್‌ಜಝೀರಾ.

ಕೃಪೆ: ಆಲ್‌ಜಝೀರಾ.

ಫ್ರಾಂಕೋ ಮಿಲಿಟರಿ ಆಡಳಿತ ಮುಗಿದ ನಂತರ, ಸ್ಪೇನ್‌ನಲ್ಲಿ ಪ್ರಜಾಪ್ರಭುತ್ವವಾದಿ ಸರಕಾರ ಅಸ್ವಿತ್ವಕ್ಕೆ ಬಂತು. 1979ರಲ್ಲಿ ನಡೆದ ಚುನಾವಣೆಯಲ್ಲಿ ಕ್ಯಾಟಲೋನಿಯ ಪಾರ್ಲಿಮೆಂಟಿಗೆ 135 ಜನ ಪ್ರತಿನಿಧಿಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆ ನಡೆಯಿತು. ಕ್ಯಾಟಲೋನಿಯ ಜನರೂ ಸೇರಿದಂತೆ ಸ್ಪೇನ್‌ ದೇಶವೊಂದರಲ್ಲಿಯೇ ಇಂತಹ ಸುಮಾರು 17 ಸ್ವಾಯತ್ತ ನಾಗರಿಕತೆಗಳು ತಮ್ಮದೇ ಆಡಳಿತ ನಡೆಸುತ್ತಿವೆ. ಪ್ರತ್ಯೇಕ ಪೊಲೀಸ್‌ ವ್ಯವಸ್ಥೆ, ತಮ್ಮ ಜನರ ಶಿಕ್ಷಣ ಹಾಗೂ ಆರೋಗ್ಯದ ಮೇಲ್ವಿಚಾರಣೆಯನ್ನು ಕ್ಯಾಟಲೋನಿಯ ಜನರ ಸ್ವಾಯತ್ತ ಸರಕಾರ ಕೈಗೆತ್ತಿಕೊಂಡಿತು. ಹಲವು ವಿಶ್ವವಿದ್ಯಾನಿಲಯಗಳಲ್ಲಿ ಕ್ಯಾಟಲೋನಿಯ ಸಂಸ್ಕೃತಿ ಅಧ್ಯಯನಕ್ಕೆ ಪ್ರತ್ಯೇಕ ಪೀಠಗಳನ್ನು ಸ್ಥಾಪಿಸಲಾಯಿತು. ಮಿಲಿಟರಿ ಆಡಳಿತದ ಕಾಲದಲ್ಲಿ ನಡೆದ ದಬ್ಬಾಳಿಕೆಯ ನಂತರ ಮತ್ತೆ ತಮ್ಮ ಅಸ್ಮಿತೆಗಳನ್ನು ಹುಡುಕುವ ಕೆಲಸ ಮತ್ತೆ ಶುರುವಾಯಿತು.

ಮುಂದೆ, 2008ರ ಹೊತ್ತಿಗೆ ಸ್ಪೇನ್‌ ಆರ್ಥಿಕತೆ ಮಕಾಡೆ ಮಲಗಿತು. ದೇಶ ಸಾಲದ ಸುಳಿಯಲ್ಲಿ ಸಿಲುಕಿತು. ಈ ಸಮಯದಲ್ಲಿ ಕ್ಯಾಟಲೋನಿಯ ಜನ ಪ್ರತ್ಯೇಕ ರಾಷ್ಟ್ರದ ಬೇಡಿಕೆ ಮುಂದಿಟ್ಟರು. ಸ್ಪೇನ್‌ನಿಂದ ಹೊರಹೋಗಿ ಪ್ರತ್ಯೇಕ ಪ್ರಜಾಸತ್ತಾತ್ಮಕ ದೇಶವನ್ನು ನಿರ್ಮಿಸಿಕೊಳ್ಳಲು ಹೋರಾಟ ಆರಂಭಿಸಿದರು.

 

ಮೂರು ವರ್ಷಗಳ ಹಿಂದೆ, ಕ್ಯಾಟಲೋನಿಯ ಪ್ರತ್ಯೇಕ ರಾಷ್ಟ್ರದ ಅಗತ್ಯದ ಕುರಿತು ಜನಾಭಿಪ್ರಾಯ ಸಂಗ್ರಹಕ್ಕೆ ಸ್ಪೇನ್‌ ಅನುವು ಮಾಡಿಕೊಟ್ಟಿತು. ಆದರೆ ಆಳದಲ್ಲಿ ಪ್ರವಾಸೋದ್ಯಮದ ತಾಣಗಳಿರುವ, ಆರ್ಥಿಕತೆಯಲ್ಲಿ ಸದೃಢವಾಗಿರುವ ಕ್ಯಾಟಲೋನಿಯ ಭೂಭಾಗವನ್ನು ಬಿಟ್ಟುಕೊಡಲು ಸ್ಪೇನ್‌ ಒಪ್ಪಲಿಲ್ಲ. ಆಗ ನಡೆದ ಜನಾಭಿಪ್ರಾಯದಲ್ಲಿ ಶೇ. 91ರಷ್ಟು ಜನ ಪ್ರತ್ಯೇಕ ರಾಷ್ಟ್ರದ ತೀರ್ಮಾನಕ್ಕೆ ಒಪ್ಪಿಗೆ ಸೂಚಿಸಿದರೂ, ಸ್ಪೇನ್‌ ಆಡಳಿತ ಅದನ್ನು ಧಿಕ್ಕರಿಸಿತು. ಪ್ರತ್ಯೇಕ ರಾಷ್ಟ್ರದ ಹೋರಾಟಗಳು ಮುಂದುವರಿದಿದ್ದವು.

ಇದೀಗ, ಭಾನುವಾರ ಮತ್ತೊಮ್ಮೆ ಕ್ಯಾಟಲೋನಿಯಾ ಪ್ರತ್ಯೇಕ ರಾಷ್ಟ್ರ ಬೇಕೇ, ಬೇಡವೇ ಎಂಬ ಒಂದು ವಾಕ್ಯದ ಪ್ರಶ್ನೆಯನ್ನು ಇಟ್ಟುಕೊಂಡು ಜನಾಭಿಪ್ರಾಯ ಸಂಗ್ರಹಕ್ಕೆ ಸ್ಪೇನ್‌ ಮುಂದಾಯಿತು. ಈ ಸಮಯದಲ್ಲಿ ಪ್ರತ್ಯೇಕ ರಾಷ್ಟ್ರದ ಬೇಡಿಕೆ ಮುಂದಿಟ್ಟ ರಾಜಕೀಯ ಪಕ್ಷಗಳು ಜನಾಭಿಪ್ರಾಯ ಸಂಗ್ರಹವನ್ನು ಧಿಕ್ಕರಿಸಲು ಕರೆ ನೀಡಿದವು. ಕೆಲವು ಕ್ಯಾಟಲೋನಿಯ ಸಂಘಟನೆಗಳು ಜನಾಭಿಪ್ರಾಯದಲ್ಲಿ ಪಾಲ್ಗೊಂಡವು. ಈ ಸಮಯದಲ್ಲಿ ಕ್ಯಾಟಲೋನಿಯ ಜನ ಮತ್ತು ಪೊಲೀಸರ ನಡುವೆ ನಡೆದ ಘರ್ಷಣೆಯಲ್ಲಿ ನೂರಾರು ಜನ ಗಾಯಗೊಂಡರು. ಭಾನುವಾರ ಇಡೀ ದಿನ ಸ್ಪೇನ್‌ ದೇಶ ಪ್ರಕ್ಷುಬ್ಧವಾಗಿತ್ತು. ಅಂತಿಮವಾಗಿ ಜನಾಭಿಪ್ರಾಯ ಹೊರಬಿದ್ದಾಗ, ಶೇ. 46ರಷ್ಟು ಜನ ಪಾಲ್ಗೊಂಡ ಜನಾಭಿಪ್ರಾಯದ ಶೇ. 90ರಷ್ಟು ಪ್ರತ್ಯೇಕ ಕ್ಯಾಟಲೋನಿಯ ದೇಶದ ಪರವಾಗಿತ್ತು.

catalan-freedom-protest

 

ಆಧುನಿಕ ಕಾಲಘಟ್ಟದಲ್ಲಿ ಪ್ರತ್ಯೇಕ ಅಸ್ಮಿತೆಗಳ ಹುಡುಕಾಟದ ಪರಿ ಹಾಗೂ ಅವು ಈಡೇರುವ ಸಾಧ್ಯತೆಗಳು ಹೇಗೆಲ್ಲಾ ಇರುತ್ತವೆ ಎಂಬುದಕ್ಕೆ ಸ್ಪೇನ್‌ ಈಗ ಸಾಕ್ಷಿಯಾಗಿ ನಿಂತಿದೆ. ಎಲ್ಲವೂ ಸುಸೂತ್ರವಾಗಿ ನಡೆದಿದ್ದೇ ಆದರೆ, ಪ್ರಪಂಚದಲ್ಲಿ ಕ್ಯಾಟಲೋನಿಯ ಎಂಬ ಪ್ರತ್ಯೇಕ ರಾಷ್ಟ್ರವೊಂದು ತಲೆ ಎತ್ತಲು ಬಹಳ ಸಮಯ ಏನೂ ಬೇಕಾಗಿಲ್ಲ.

Top